
ಡಾ ಎನ್ ಲಕ್ಷ್ಮೀ
ಡಾ. ಎನ್ ಲಕ್ಷ್ಮೀ ಕೊಪ್ಪಳ ಜಿಲ್ಲೆಯವರು. ಪ್ರಸ್ತುತ ಅಂಡಮಾನಿನ ಮಹಾತ್ಮ ಗಾಂಧಿ ರಾಜಕೀಯ ಮಹಾವಿದ್ಯಾಲಯದ ಹಿಂದಿ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಿಂದ ಹಿಂದಿಗೆ ಹಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ. ಯಾಯಾವರ್ ಪಂಛೀ ಕಾ ಗೀತ್ (ಕಾದಂಬರಿ), ಶೂನ್ಯ ಸೇ ಲೌಟಾ ಹೂಂ (ಕವನ ಸಂಕಲನ), ಗೋಪಿಕೋನ್ಮಾದ (ಕವನ ಸಂಕಲನ), ಕರುಣ್ ಪುಕಾರ್ ತಥಾ ಅನ್ಯ ಕಹಾನಿಯಾಂ (ಕಥಾ ಸಂಕಲನ) ಮೊದಲಾದ ಅನುವಾದಿತ ಕೃತಿಗಳು ಪ್ರಕಟವಾಗಿವೆ. ಸೂರ್ಯಾ ಅಂತರ್ಭಾರತಿ ಭಾಷಾ ಸನ್ಮಾನ, ಸಾಹಿತ್ಯ ಸಮ್ಮೇಳನ ಶತಾಬ್ದಿ ಸನ್ಮಾನ, ರೂಪಾ ಭವಾನಿ ಸಾಹಿತ್ಯ ಶ್ರೀ ಸನ್ಮಾನ ಮೊದಲಾದ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ.
ಈ ಸಂಚಿಕೆಗಾಗಿ ಗೀತಾಂಜಲಿ ಶ್ರೀ ಅವರ ಹಿಂದಿ ಕಾದಂಬರಿ ‘ರೇತ್ ಸಮಾಧಿ’ಯ ಆಯ್ದ ಭಾಗಗಳನ್ನು ಹಿಂದಿಯಿಂದ ಅನುವಾದಿಸಿದ್ದಾರೆ.

ಗೀತಾಂಜಲಿ ಶ್ರೀ ಅವರು ಹಿಂದಿಯ ಪ್ರಸಿದ್ಧ ಲೇಖಕಿ. ಇವರು ಮೂಲತಃ ದೆಹಲಿಯ ನಿವಾಸಿ. ಅವರನ್ನು ಗೀತಾಂಜಲಿ ಪಾಂಡೇ ಎನ್ನುವ ಹೆಸರಿನಿಂದಲೂ ಗುರುತಿಸುತ್ತಾರೆ. ೧೨ ಜೂನ್ ೧೯೫೭ರಲ್ಲಿ ಉತ್ತರ ಪ್ರದೇಶದ ಮೈನಪುರಿ ಎಂಬ ಊರಿನಲ್ಲಿ ಹುಟ್ಟಿದರು. ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದಾರೆ. ಇವರ ಹಲವು ಕಥೆಗಳು ಇಂಗ್ಲೀಷಿಗೆ ಅನುವಾದಗೊಂಡಿವೆ.
೨೦೧೮ರಲ್ಲಿ ಬರೆದ ‘ರೇತ್ ಸಮಾಧಿ’ ಕಾದಂಬರಿಯು ಇಂಗ್ಲಿಷಿಗೆ ಅನುವಾದಗೊಂಡಿದ್ದು ೨೦೨೨ರ ಬೂಕರ್ ಪ್ರಶಸ್ತಿಯನ್ನು ಪಡೆದಿದೆ. ಈ ಕಾದಂಬರಿಯನ್ನು ಡೈಸಿ ರಾಕ್ವೆಲ್ ಅವರು Tomb of sand ಎನ್ನುವ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ.
ಮರಳು ಸಮಾಧಿ
ಒಂದು ಕಥೆ, ತನ್ನ ಬಗ್ಗೆ ತಾನೇ ಹೇಳಿಕೊಳ್ಳುವಂತಹ ಕಥೆ. ಎಲ್ಲ ಕಥೆಗಳಂತೆಯೇ ಈ ಕಥೆಯೂ ಕೂಡಾ, ಸಂಪೂರ್ಣವಾದರೂ, ಅಪೂರ್ಣವಾದ ಕಥೆ. ಆಸಕ್ತಿಯಿಂದ ತುಂಬಿದ ಕಥೆ. ಅದರಲ್ಲಿರುವುದು ಗಡಿ ಮತ್ತು ಆಗಾಗ್ಗೆ ಬಂದು-ಹೋಗುವ ಹೆಂಗಸರು. ಹೆಣ್ಣು ಮತ್ತು ಗಡಿಯಿದ್ದರೆ ಸಾಕು, ಕಥೆ ತಾನಾಗೇ ಹುಟ್ಟಿಕೊಳ್ಳುತ್ತದೆ. ಹೆಣ್ಣು ಮಾತ್ರವೇ ಕಥೆಯಾಗುವಳು. ಸುಗಂಧದಿಂದ ತುಂಬಿದವಳು. ಹೀಗೆ ಗಾಳಿ ಬೀಸಿದಾಗೆಲ್ಲಾ ತೇಲಿ ಹೋಗುವುದೊಂದು ಕಥೆ. ಹುಲ್ಲಾಗಲೀ, ದೇಹಕ್ಕೆ ಹಿತ ನೀಡುವ ತಂಪಾದ ಗಾಳಿಯಾಗಲೀ, ಮುಳುಗುವ ಸೂರ್ಯನಾಗಲಿ ಇಂತಹ ಎಷ್ಟೊ ಕಥೆಗಳ ಕಂದೀಲು ಬೆಳಗಿಸುತ್ತ ಮೋಡಗಳ ನಡುವೆ ನೇತಾಡಿಸುತ್ತಾನೆ. ಇವೆಲ್ಲ ಕಥೆಗಳ ರೂಪ ತಾಳಿ ಕಥೆಯೊಂದಿಗೆ ಬೆರೆತು ಹೋಗುತ್ತದೆ. ಮುಂದಿನ ದಾರಿ ಹೀಗೆ ಸಾಗುತ್ತದೆ, ಕೆಲವೊಮ್ಮೆ ಬಲಕ್ಕೆ ಕೆಲವೊಮ್ಮೆ ಎಡಕ್ಕೆ, ಎತ್ತ ತಿರುಗುವುದು, ಎತ್ತ ಹೋಗುವುದು ಎಂಬ ಅರಿವಿಲ್ಲದಿರುವಂತೆಯೇ ಜನರಿಂದ ಕಥೆಗಳು ಹೇಗಂದರೆ ಹಾಗೇ ಹೊರ ಹೊಮ್ಮುತ್ತದೆ. ಒಳಗಿಂದ ಹೊರಚಿಮ್ಮುವ ಜ್ವಾಲಾಮುಖಿಯಂತೆ, ಉಕ್ಕಿ-ಉಕ್ಕಿ ಹೊರಬರುವ ಬೆಂಕಿಯ ಉಗಿಯಂತೆ ತುಂಬಿರುವ ಕಳೆದು ಹೋದ ಈ ದಿನಗಳು.
ಈ ಕಥೆಯಲ್ಲಿ ಇಬ್ಬರು ಹೆಂಗಸರಿದ್ದರು. ಕೆಲವರು ಆಗಾಗ್ಗೆ ಬಂದು ಹೋಗುತ್ತಿದ್ದರೆ ಕೆಲವರು ಬಂದು ಉಳಿದು ಬಿಡುತ್ತಿದ್ದರು. ಕೆಲವರು ಉಳಿದು ಹೋದರೂ ಸಹ ಅದು ಅಷ್ಟೇನೂ ಮಹತ್ವದ ವಿಷಯವಲ್ಲ, ಇದರಲ್ಲಿ ಹೆಂಗಸರೇ ಅಲ್ಲದ ಕೆಲವರ ಮಾತಿನ ಅಗತ್ಯವಾದರೂ ಯಾಕೆ ಬೇಕು. ಇದರಲ್ಲಿ ಇಬ್ಬರು ಹೆಂಗಸರು ಮುಖ್ಯವಾಗಿದ್ದರು, ಒಬ್ಬಳು ಚಿಕ್ಕವಳಾಗುತ್ತಿದ್ದರೆ ಮತ್ತೊಬ್ಬಳು ದೊಡ್ಡವಳಾಗುತ್ತಿದ್ದಳು.
ಇಬ್ಬರು ಹೆಂಗಸರು ಮತ್ತೊಂದು ಸಾವು.
ಎಂತಹ ಅಪೂರ್ವದ ಮಾತಿದು, ಇಬ್ಬರು ಹೆಂಗಸರು ಮತ್ತೊಂದು ಸಾವು, ನಾವು ಮತ್ತು ಅವರು.

ಇಬ್ಬರು ಹೆಂಗಸರು, ಒಬ್ಬಳು ತಾಯಿ, ಒಬ್ಬಳು ಮಗಳು, ಒಬ್ಬಳು ಚಿಕ್ಕವಳಾಗುತ್ತಿದ್ದರೆ ಒಬ್ಬಳು ದೊಡ್ಡವಳಾಗುತ್ತಿದ್ದಳು. ನಾನು ಪ್ರತಿದಿನ ಚಿಕ್ಕವಳಾಗುತ್ತಿರುವೆ ಅಂತ ಒಬ್ಬಳು ನಗುತ್ತಾ ಹೇಳಿದರೆ ಮತ್ತೊಬ್ಬಳು ತಾನು ದಿನೇ-ದಿನೇ ಮುದುಕಿಯಾಗುತ್ತಿರುವೆ ಎಂಬ ಮಾತನ್ನು ಹೇಳದೇನೇ ಕೊರಗುತ್ತಿದ್ದಳು. ಸೀರೆಯ ಹೆಚ್ಚಿನ ಭಾಗವನ್ನು ಪೆಟೀಕೊಟ್ನೊಳಗೆ ಸಿಗಿಸ್ಕೋಬೇಕು ಅನ್ನೋ ಸಲುವಾಗಿ ಅಮ್ಮ ಸೀರೆ ಉಡೋದನ್ನೇ ಬಿಟ್ಟಿದ್ದಳು. ಇದರಲ್ಲಿ ಪೆಟೀಕೊಟ್ ಬೇರೆ ಆಗಾಗ್ಗೆ ಸಣ್ಣದು ಮಾಡಬೇಕಿತ್ತು. ಚಿಕ್ಕದಾದ ಮಾತ್ರಕ್ಕೆ ಬೆಕ್ಕಿನಂತೆ ಸಣ್ಣದೊಂದು ಸಂದಿಯಲ್ಲಿ ಹೊಕ್ಕುಬಿಡಲು ಆಗುವುದೇ? ಗಡಿಯನ್ನು ತೂತು ಮಾಡಿ ಅದರಲ್ಲಿ ಜಾರಿ ಹೋಗಲು ಸಾಧ್ಯವೇ? ಅದೃಶ್ಯ ಆಗೋಷ್ಟಾದ್ರೂ ಸಾಮರ್ಥ್ಯ ಇದೆಯೇ ಅನ್ನೋದನ್ನಾದರೂ ತೋರಿಸಬಾರದೇ?
ತಾಯಿ ಗಡಿ ದಾಟಿ ಹೋಗೋಕೆ ಸಿದ್ಧಳಾಗೋದು ಒಂದು ವೇಳೆ ಇದೇ ಕಾರಣದಿಂದಲೋ ಏನೋ, ಸಿಕ್ಕಿಹಾಕಿಕೊಂಡ್ರೇ ಅನ್ನೋ ಭಯದಲ್ಲೇ ಮುದುಕಿಯಾಗ್ತಿರೋ ಮಗಳು. ತಾನು ಯಾವ ತಪ್ಪೂ ಮಾಡಿಲ್ಲ, ತಾನೊಬ್ಬ ನಿರ್ದೋಷಿ, ಕಳ್ಳತನ ಆಗ್ಲಿ, ಕಾನೂನಿನ ಅನುಮತಿ ಪಡೆಯುವ ಮಾತಾಗಲೀ ತಪ್ಪೇನೂ ಮಾಡ್ದೇನೆ ತಾನು ತಪ್ಪನ್ನು ಯಾಕೆ ಒಪ್ಕೋಬೇಕೊ ಅಂತ ಹೇಳೋ ಚಿಕ್ಕವ್ಳು.
ಅವಳ ಮಾತಿನ ಅರ್ಥ ತಿಳೀದವ್ರು ಅವಳನ್ನು ಹುಚ್ಚಿ ಅಂತಾನೋ ಅಥವಾ ಬುದ್ಧಿವಂತೆ ಅಂತಾನೋ ಅಂದುಕೊಳ್ತಿದ್ರು. ಎಲ್ಲಾ ಗೊತ್ತಿದ್ರೂ ಬೇಕ್-ಬೇಕಂತಾ ಮಾಡ್ತಿದ್ದಾಳೋ ಅವ್ಳು ಅಂತಿದ್ರು.
ಕಣ್ ಬಿಟ್ಕೊಂಡ್ ನೋಡಿದ್ರೆ ಗಡಿಯಲ್ಲಿರೋ ಕಾವಲುಗಾರರಿಗೆ ಹೇಗ್ ಅರ್ಥವಾದೀತು. ಇವಳು ಈ ಕಡೆ ಅವ್ರು ಆ ಕಡೆ. ಗಡಿಪಾರು ಮಾಡಿಸ್ರೋ… ಜೋರಾಗಿ ನಗುತ್ತಾ ಅವ್ಳು ಹೇಳ್ದಾಗ ಅವ್ರು ಏನೂ ಮಾಡ್ದೇನೇ ಸುಮ್ನೆ ಇದ್ರು.
ಅಗಲ್ಲಾ… ಅವ್ರು ಕೂಗಿ ಹೇಳಿದ್ರು. ಈ ವಿಷಯ ಗೊತ್ತಿಲ್ದೇ ಇರೋಷ್ಟು ತಿಳಿವಳಿಕೆ ಇಲ್ದೇ ಇರೋವ್ರು ಯಾರೂ ಇರ್ಲಿಕ್ಕೆ ಸಾಧ್ಯಾನೇ ಇಲ್ಲಾ. ಮೇಕೆ ದನಗಳಿಗೂ ಸಹ ಗೊತ್ತಿರ್ತದೆ, ಒಂದ್ ವೇಳೆ ನಿನ್ನ ಚಾಳೀಸ್ ನಂಬರ್ ಏನಾದ್ರೂ ಹೆಚ್ಚೈತೋ ಏನೋ ಸರಿಯಾಗ್ ಕಾಣ್ತಿಲ್ವೋ… ಸುಮ್ನೇ ಕೇಳ್ಬೇಡಾ…
***
ಪ್ರೀತಿಯ ಬಗ್ಗೆ ನಾವು ಯಾವಾಗ ಬೇಕಾದರೂ ಮಾತಾಡಬಹುದು. ಏಕೆಂದರೆ ಪ್ರೀತಿ ಎಂಬುದು ಪ್ರೀತಿಯಿಂದ ತುಂಬಿರುವುದು. ಪ್ರೀತಿ ನೈಸರ್ಗಿಕವಾದುದು. ಚಂಡಮಾರುತ ಉಂಟುಮಾಡುವಂತದು. ಬಲವಾದ ಪ್ರೀತಿ ಸ್ವರ್ಗವನ್ನು ಧರೆಗಿಳಿಸುತ್ತದೆ. ಸತ್ಯದೊಂದಿಗೆ ಸಾಕ್ಷಾತ್ಕಾರವಾಗುತ್ತದೆ.
***
ಸರಿ. ಹಿಂತಿರುಗೋಣ.
ಇಷ್ಟಾದ್ರೂ ಕಥೆಗೆ ಯಾವುದೇ ರೀತಿಯ ವಿವರಣೆಯ ಅಗತ್ಯವಿಲ್ಲ. ಅದು ಹೇಗೆ ಬೇಕಾದರೂ, ಯಾವ ರೀತಿಯಲ್ಲಾದರೂ ಓಡಬಹುದು, ಹಳ್ಳ-ಕೊಳ್ಳ, ನದಿ ಎಲ್ಲೆಡೆ ಹರಿಯಬಹುದು. ಆದರೆ ದಾರಿ ತಪ್ಪದಿರುವುದು ಅಗತ್ಯ, ದಾರಿ ತಪ್ಪಿದರೂ ತಪ್ಪಬಹುದು. ಸರಿ, ನಾವು ಮತ್ತೆ ಇಬ್ಬರು ಹೆಂಗಸರಿಂದ ತೊಡಗಿದ್ದ ನಮ್ಮ ಅದೇ ಕಥೆಗೆ ಹಿಂತಿರುಗೋಣ.
***

ಪರಿವಾರ ಅಂತ ಹೇಳ್ಬೇಕು, ಆದರೆ, ಮಹಾಭಾರತ ಅಂತ ಹೇಳ್ತಾರೆ. ಈ ಲೋಕದಲ್ಲಿರೋದೆಲ್ಲ ಅದರಲ್ಲಿದೆ. ಅದರಲ್ಲಿ ಇರದೆ ಇರೋದು ಬೇರೆ ಎಲ್ಲೂ ಇಲ್ಲ. ಕವಿಯ ಕಲ್ಪನೆಯಲ್ಲೂ ಇಲ್ಲ. ಕೆಲವೊಮ್ಮೆ ದಾರಿ ತಪ್ಪಿದ ಭಯೋತ್ಪಾದಕರಾಗಿ, ಭ್ರಮೆ-ಚಕಿತಗೊಳಿಸುವ ಸಾಮೂಹಿಕವಾದಿಯಾಗಿ, ಸ್ತ್ರೀವಾದ ಮತ್ತು ಸ್ತ್ರೀಯಾಗಿ, ಪ್ರತಿಯೊಂದು ವಾದ-ಪ್ರತಿವಾದವಾಗಿ, ಸೋಲು-ಗೆಲುವು ಹೀಗೆ ಎಲ್ಲವೂ ಈ ಪರಿವಾರದಲ್ಲೇ ಅಡಗಿರುತ್ತದೆ. ಮಹಾಭಾರತದಲ್ಲೂ ಸಹ ಇವೆಲ್ಲಾ ಅಡಗಿದೆ. ಯಾರಿಗೆ ಯಾವುದು ಇಷ್ಟವೋ ಅದಕ್ಕೆ ತಕ್ಕಂತೆ.
ಮಹಾಭಾರತದಲ್ಲಿ ಈ ಜಗತ್ತು, ಜಗತ್ತಿನಲ್ಲಿ ಪರಿವಾರ, ಅದರಿಂದಲೇ ಪರಿವಾರದಲ್ಲಿ ಮಹಾಭಾರತ. ಪ್ರತಿದಿನದ ಕಚ್ಚಾಟ ಪರದಾಟ ಎಲ್ಲಾ ಮಹಾಭಾರತವೇ.
ಅದರಿಂದಲೇ, ಪರಿವಾರದಲ್ಲಿರೋ ಪ್ರತಿಯೊಬ್ಬರೂ ಅಂದುಕೊಳ್ಳೋದು, ನನಗೆ ಗೊತ್ತಿರೋದು ಯಾರಿಗೂ ಗೊತ್ತಿಲ್ಲ ನನಗೆ ಗೊತ್ತಿಲ್ದೇ ಇರೋದು ಇರೋಕೆ ಸಾಧ್ಯಾನೇ ಇಲ್ಲ ಅಂತ.
ಮತ್ತೆ ನನ್ನ ಹತ್ರ ಮೆದುಳಿದೆ, ಬೇರೆ ಯಾರ ಹತ್ರಾನೂ ಇಲ್ಲ.
ಮತ್ತೆ ಇದುವರೆಗೂ ಎಲ್ರೂ ನನ್ನನ್ನು ಉಪಯೋಗಿಸಿಕೊಂಡ್ರು, ಆದ್ರೆ ಇನ್ಮೇಲೆ ಬೇರೆ ಯಾರಾದ್ರೂ ಆಗ್ಲಿ.
ಮತ್ತೆ ನಾವು ದೂರ ಇದ್ರೂನೂ ದಯೆಯಿಂದ ತುಂಬಿರುವೆವು ಆದ್ರೆ ನೀವು ಹತ್ರದಲ್ಲಿದ್ರೂ ದಯೆಯಿಲ್ದೇ ಇರುವಿರಿ.
ಮತ್ತೆ ಯಾವಾಗ್ಲೂ ನಾವೇ ಕೊಡ್ತೀವಿ, ನೀವು ಯಾವಾಗ್ಲೂ ಪಡೀತೀರಿ.
ಮತ್ತೆ ಹೌದ್ರಪ್ಪಾ, ನೀವು ಯಾವಾಗ್ಲೂ ಎಲ್ರೊಂದಿಗೂ ಬೆರೀತೀರಿ, ಆದ್ರೆ ನಾವು ಯಾವಾಗ್ಲೂ ನಮ್ಮಲ್ಲೇ ಮುಳುಗಿರ್ತೀವಿ.
ಮತ್ತೆ ನೀವು ಸುಮ್ನಿದ್ರೇ ವಿನಯಶೀಲರು, ಆದ್ರೆ ನಾವು ಸುಮ್ನಿದ್ರೆ ಗರ್ವಿಗಳು
ಮತ್ತೆ ನೀವು ಮಾಡಿದ್ರೆ ಶಿಷ್ಟತೆ, ನಾವು ಮಾಡಿದ್ರೆ ಅಭ್ರದತೆ.
ಮತ್ತೆ ನೀವು ಹೇಳೋದೆಲ್ಲಾ ಸರಿಯಾದ ಮಾತು ನಾವು ಹೇಳಿದ್ರೆ ಅಹಂಕಾರದ ನುಡಿಗಳು.
ನಾವು ಕೇಳಿದ್ರೆ ಅದು ಅಶ್ಲೀಲತೆ, ಕುತೂಹಲ, ಆದ್ರೆ ನೀವು ಕೇಳಿದ್ರೆ ಸಹಾನುಭೂತಿ
ನಾವು ಮಾಡಿದ್ರೆ ನಮ್ಮ ಅನುಕೂಲ, ನೀವು ಮಾಡಿದ್ರೆ ಅದು ನಿಮ್ಮ ಕೃಪೆ
ನಾವು ಮಾಡಿದ್ರೆ ಅದು ಜಿಪುಣತನ ನೀವು ಮಾಡಿದ್ರೆ ಉಳಿತಾಯ
ನಾವು ಸುಮ್ನಿದ್ರೆ ಅಹಂಕಾರಿ ನೀವು ಸುಮ್ನಿದ್ರೆ ಸಂಕೋಚಪಡೋವ್ರು
ನಾವು ಬಹಳ ಸೀಕ್ರೆಟಿವ್, ನೀವು ತುಂಬಾ ರಿಸರ್ವ್ಡ್
ಮತ್ತೆ ನಮ್ಮ ಉಡುಪು ಫ್ಯಾಶನಬಲ್ ನಕಲೀ ನಿಮ್ಮದು ಕಾಲಕ್ಕೆ ತಕ್ಕದ್ದು
ಮತ್ತೆ ನಮ್ದೇನಾದ್ರೂ ಕಳ್ದೋದ್ರೇ ಯಾಕೆ ಸುಮ್ನೇ ಒದ್ದಾಡ್ತೀ ನಿಮ್ದೇನಾದ್ರೂ ಕಳ್ದೋದ್ರೆ ಅಯ್ಯೋ ಎಲ್ಲಾ ಹೋಯ್ತು.
***
ಆ ಮುಗುಳುನಗೆಗೆ ಏನು ಕಾರಣ ಅಂತ ಯಾರಾದ್ರೂ ಹೇಳಬಲ್ಲರೇ? ಇಲ್ಲಾ. ಯಾರಿಂದಲೂ ಸಾಧ್ಯವಿಲ್ಲಾ. ನನ್ನಿಂದಲೂ ಸಾಧ್ಯವಿಲ್ಲಾ.
ನನ್ನ ಹತ್ರ ಯಾರಾದ್ರೂ ಕೇಳಿದ್ರೆ, ಅದು ಸಾಧ್ಯಾನೇ ಇಲ್ಲಾ ಯಾಕೆಂದ್ರೆ ನಾನು ನನ್ನ ಸೀನ್ ಮುಗಿಸಿ ಬಿಟ್ಟೀದ್ದೀನಿ
ಆದ್ರೆ ಮುಗುಳುನಗು ಮಾತ್ರಾ ಹಾಗೇ ಇದೆ.
ಆಮೇಲೆ ನಡೆದದ್ದೆಲ್ಲಾ ಸುಮ್ನೇ ಹಾಗೇ ಊಹೆಯಿಂದಲೇ. ಗೋಡೆ ಮೇಲೆ ಎರಡು ತೂತುಗಳಿದ್ದವು ಒಂದು ಒಳಗಡೆ ಮತ್ತೊಂದು ಹೊರ ಭಾಗದಲ್ಲಿ. ದಾರದ ಎಳೆಯಂತೆ ಶ್ವಾಸವನ್ನು ಹೊರಗೆ ಒಳಗೆ ಮಾಡುವುದು ಸಾಧ್ಯವಾಗಿತ್ತು. ಮತ್ತೆ ಶಟ್ ಶಟ್ ಶಟ್ ಎಂತ ಒಂದು ಕೋಲಿನಿಂದ ಚುಚ್ಚುತ್ತಾ ಬಾಗಿಲಿನಿಂದ ಹೊರಗೆ ಎಳೆಯಲೂ ಬಹುದು, ಹೀಗೆಯೂ ಆಗಬಹುದಲ್ವೇ?
ಅಮ್ಮನ ಆಸೆ ಹೀಗಿತ್ತು ಅಂತ ಒಮ್ಮೆ ರೋಜಿ ಅತ್ತೆಯ ಮಾತಿನಿಂದ ತಿಳಿದಿತ್ತು. ಮತ್ತೆ ಕೆಲವೊಮ್ಮೆ ನಮಗೂ ಸಂದೇಹ ಆಗ್ತಿತ್ತು. ಅದನ್ನ ತೀರಿಸಿ ಅಮ್ಮ ತಿರುಗುವಾಗ ಆಗಿತ್ತು ಗಲಿಬಿಲಿ. ಗೇಟ್ ನಂಬರ್ ಐವತ್ತೆರಡಕ್ಕಿಂತ ಮುಂದೆ ಸಾಗಿದ್ದರು. ನಡೀತಾ-ನಡೀತಾ ಮುಂದೆ ಹೋದಾಗೆಲ್ಲಾ ಒಂದೊಂದು ಗೇಟ್ ಅವರ ಹಿಂದಾಗುತ್ತಿತ್ತು.
ಬಹಳ ಆಯಾಸಗೊಂಡ ಓರ್ವ ಹೆಣ್ಣು. ಹಲವಾರು ವರ್ಷಗಳಿಂದ ಬೇರೆಯವರ ಆರೈಕೆಯಲ್ಲಿ, ಸುಮಾರು ವರ್ಷಗಳಿಂದ ಬೆಡ್ ಮೇಲೆ ಮಲಗಿರುವ, ಚೆಲ್ಲಾಪಿಲ್ಲಿಯಾಗಿದ್ದ ಕೂದಲು, ತನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲವೆಂಬ ಮುದ್ರೆಯಲ್ಲಿ ಬೆನ್ನು ತೋರಿಸಿ ಕುಳಿತರೂ ಸಹ ಸ್ವಲ್ಪ-ಸ್ವಲ್ಪ ಕಂಡು ಹಿಡಿಯಲು ಸಾಧ್ಯವಾಗಿದೆ, ಎಲ್ರೀಗೂ ಬೆನ್ನು ತೋರಿಸಿದ್ರೂನೂ ಅವಳನ್ನ ಕಂಡು ಹಿಡೀಬಹುದು ಅಲ್ವೇ.
ನಾನೇಕೆ ಅನುವಾದ ಮಾಡಿದೆ..
ಗೀತಾಂಜಲಿ ಶ್ರೀಯವರ ಕಾದಂಬರಿಯ ಕೆಲವು ಆಯ್ದ ಭಾಗಗಳನ್ನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವೆ. ಗೀತಾಂಜಲಿ ಶ್ರೀಯವರ ಈ ಕಾದಂಬರಿ ಉಳಿದ ಕಾದಂಬರಿಗಳಿಗಿಂತ ಒಂದು ಭಿನ್ನ ಶೈಲಿಯಲ್ಲಿ ರೂಪುಗೊಂಡಿದೆ. ಈ ಕಾದಂಬರಿಯ ೮೦ ವಯಸ್ಸಿನ ಓರ್ವ ಮುದುಕಿ ತನ್ನ ಗಂಡ ತೀರಿಕೊಂಡ ನಂತರ ಮಾನಸಿಕವಾಗಿ ನೊಂದು ಪಾಕಿಸ್ತಾನಕ್ಕೆ ಹೋಗಬೇಕು ಎನ್ನುವಾಗ ದೇಶ ವಿಭಜನೆಯ ತ್ರಾಸು ಮತ್ತು ಬೇನೆಯ ಕಥೆಯನ್ನೊಳಗೊಂಡಿದೆ. ಈ ಕಾದಂಬರಿಯ ವಿಧಾನ, ಭಾಷೆಯ ಪ್ರಯೋಗ ಎಲ್ಲವೂ ಇತರ ಕಾದಂಬರಿಗಳಿಗಿಂತ ಭಿನ್ನವಾಗಿದೆ. ಕೆಲವರು ಇದನ್ನು ಹೊಗಳಿದರೂ ಬೋರಿಂಗ್ ಅಂತಾನೂ ಹೇಳ್ತಾರೆ. ಏನೇ ಆಗ್ಲಿ, ಈ ಪುಸ್ತಕಕ್ಕೆ ಬುಕರ್ ಪ್ರಶಸ್ತಿ ಸಿಕ್ಕಿರುವುದು ನಮ್ಮೆಲರಿಗೂ ಹೆಮ್ಮೆಯ ವಿಷಯ.
ಭಾರತದ ಓರ್ವ ಸಾಹಿತಿಗೆ ಬುಕರ್ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲ ಬಾರಿ. ಆದ್ದರಿಂದಲೇ ಈ ಕಾದಂಬರಿಯಿಂದ ಕೆಲವು ಅಂಶಗಳನ್ನು ಅನುವಾದದ ಮೂಲಕ ಕನ್ನಡಕ್ಕೆ ಪರಿಚಯಿಸುವ ಒಂದು ಕಿರು ಪ್ರಯತ್ನವನ್ನು ನಾನು ಮಾಡಿರುವೆ. ಅನುವಾದ ಮಾಡುವಾಗ ಇದರ ಶೈಲಿ ಮತ್ತು ಭಾಷೆಯ ಭಿನ್ನತೆಯ ಕಾರಣವಾಗಿ ಕನ್ನಡಕ್ಕೆ ಅನುವಾದ ಮಾಡುವುದು ನನಗೆ ಸ್ವಲ್ಪ ಕಷ್ಟದ ಕೆಲಸವೇ ಆಗಿತ್ತು. ಇದರ ಆಂಗ್ಲ ಭಾಷೆಯಲ್ಲಿ ಅನುವಾದ ಮಾಡಿರುವ ಡೇಜೀ ರಾಕ್ ವೇಲ್ ಅವರನ್ನು ಈ ಗಳಿಗೆಯಲ್ಲಿ ಹೊಗಳಲೇಬೇಕು. ಅವರು ಮಾಡಿರುವುದು ನಿಜಕ್ಕೂ ಸಾಧನೆ ಅಂತ ನನಗೆ ಅನ್ನಿಸುತ್ತಿದೆ. ಇವರಿಬ್ಬರಿಗೂ ನನ್ನ ಪರವಾಗಿ ಅಭಿನಂದನೆಗಳು.






Very happy to see this online magazine Avadhi, that too specially dedicated to translation edition, and very happy to be a part of it. I thank Hema ji and the whole team for this opportunity.
My best wishes to Avadhi team