ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೋಲ್ಲಾಸ ನೀಡಿದ ’ಮರಿಯಂಳ ಮೂರನೇ ಮದುವೆ' – ವೈ ಕೆ ಸಂಧ್ಯಾಶರ್ಮ

ವೈ ಕೆ ಸಂಧ್ಯಾಶರ್ಮ

ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕು ಶಿಳ್ಳೆ- ಚಪ್ಪಾಳೆಗಳಿಂದ ಸ್ವಾಗತಿಸಿ ಆಸ್ವಾದಿಸಿದ ನಾಟಕ `ಮರಿಯಂಳ ಮೂರನೇ ಮದುವೆ’ ನಿನ್ನೆ ನಗರದ ಕೆ.ಹೆಚ್. ಕಲಾಸೌಧದಲ್ಲಿ `ವಾಸ್ಪ್’ ಯುವ ರಂಗತಂಡದಿಂದ ಪ್ರದರ್ಶಿತವಾಯಿತು. ನಾಟಕದ ನಿರ್ದೇಶನ, ರಚನೆ ರಾಜೇಂದ್ರ ಕಾರಂತ್ ಅವರದು. ಪ್ರತಿ ಹೆಜ್ಜೆಯಲ್ಲೂ ಕುತೂಹಲ ಮೂಡಿಸಿದ ಸನ್ನಿವೇಶಗಳು, ಅಲ್ಲಲ್ಲಿ ಪ್ರಸಕ್ತ ರಾಜಕೀಯ ಸಂದರ್ಭಗಳ ಏಳುಬೀಳುಗಳ ಕೆಲವು ವ್ಯಂಗ್ಯದ ಮೊನಚುಗಳನ್ನೊಳಗೊಂಡ, ನಗೆಗಡಲಲ್ಲಿ ಅದ್ದಿ ಮುಳುಗಿಸುವ ಚುರುಕು ಸಂಭಾಷಣೆಗಳಿಂದ ಸ್ವಾರಸ್ಯಕರವಾಗಿ ಸಾಗಿದ ನಾಟಕ ಮುಗಿದ್ದದ್ದೇ ಅರಿವಿಗೆ ಬಾರಲಿಲ್ಲ. ನಾಟಕ ಶುದ್ಧ ಮನರಂಜನೆ ನೀಡಿತೆಂದರೆ ಅತಿಶಯೋಕ್ತಿಯಲ್ಲ. ಈಚೆಗೆ ಮೂಡಿಬರುತ್ತಿರುವ ಹಲವು ನಗೆ ನಾಟಕಗಳನ್ನು ನೋಡಲು ಜನ ಕಿಕ್ಕಿರಿಯುವುದಕ್ಕೆ ಕಾರಣವಿದೆ. ಹಾಡಿದ್ದೇ ಹಾಡೋ ಕಿಸಬಾಯಿ ದಾಸ ಎನ್ನುವಂತಿರುವ ಹಸಿ ಹಸಿ ಪ್ರೀತಿ, ಕೃತಕ ಸನ್ನಿವೇಶಗಳು, ಅರ್ಥವಿರದ ಸಂಭಾಷಣೆಗಳು, ಹೊಡೆದಾಟ,ಹಿಂಸೆಗಳ ತಿರುಗಣಿಯಲ್ಲಿ ಸುತ್ತುವ ಸಂದೇಶರಾಹಿತ್ಯ ಕೆಲವು ಚಲನಚಿತ್ರಗಳನ್ನು ನೋಡಿ ತಲೆಚಿಟ್ಟು ಹಿಡಿದಿರುವ ಈ ದಿನಗಳಲ್ಲಿ ಜನ ನಾಟಕಗಳನ್ನು ನೋಡಲು ಏಕೆ ಮುಗಿಬೀಳುತ್ತಾರೆಂಬುದು ಸುಸ್ಪಷ್ಟ. ನಾಟಕ ಈಗ ಮತ್ತೆ ಬೇಡಿಕೆ ಪಡೆದುಕೊಂಡಿದೆ. ಇದು ಶುಭ ಸೂಚನೆ. ಜನ ಪುಸ್ತಕ, ನಾಟಕಗಳ ಸಂಸ್ಕೃತಿಯತ್ತ ಒಲಿಯುವ ಅನಿವಾರ್ಯ ಒತ್ತಡ ನಿರ್ಮಾಣಗೊಳ್ಳಬೇಕಿದೆ.

ಮರಿಯಂ ಎಂಬ ಆಗರ್ಭ ಶ್ರೀಮಂತೆ ತನ್ನ ವಿಲಾಸ ಜೀವನದ ಮಧ್ಯೆ ಆಗಾಗ ಒಂಟಿತನದ ನೋವು ಅನುಭವಿಸುತ್ತ, ಸುಖ-ನೆಮ್ಮದಿಗಳನ್ನು ಹುಡುಕಾಡುತ್ತ, ದೇಶ-ವಿದೇಶಗಳನ್ನು ಸುತ್ತಾಡುವ, ಪ್ರಾಚ್ಯವಸ್ತುಗಳು, ಸುಂದರ ಶೈಲಿಯ ಪಾರಂಪರಿಕ ಕಟ್ಟಡಗಳನ್ನು ಖರೀದಿಸುವತ್ತ ಒಲವುಳ್ಳವಳು. ಒಟ್ಟಿನಲ್ಲಿ ಜೀವನ ಪ್ರೀತಿಯುಳ್ಳ ರೊಮ್ಯಾಂಟಿಕ್ ಸ್ವಭಾವದ ಹೆಣ್ಣು. ಒಂದು ಕಾಲದ ರಾಜಮನೆತನದ ಹುಡುಗ ರಾಜಾ ಮಹೇಂದ್ರವರ್ಮ ಈಗ ಬರಿಗೈ ದಾಸ, ತನ್ನ ಕಷ್ಟ ನಿವಾರಣೆಗೆ ಹೆಣೆದುಕೊಂಡ ಸುಳ್ಳಿನ ಬಲೆಯಲ್ಲಿ ಸಿಲುಕಿ ಫಜೀತಿಪಡುವಾಗ ಅವನಿಗೆ ನೆರವಾಗುವವನು ಅವನ ಅಡುಗೆಯಭಟ್ಟ. ಮಹೇಂದ್ರವರ್ಮನಿಂದ ರೇಸ್ ಕೋರ್ಸ್ನಲ್ಲಿ ಮೋಸ ಹೋದ ಕ್ಯಾಪ್ಟನ್ ದೊಡ್ಡಣ್ಣ, ರಾಜನನ್ನು ಬೆನ್ನಟ್ಟಿಕೊಂಡು ಅವನರಮನೆಗೆ ಬಂದಾಗ, ದೊಡ್ಡಣ್ಣನ ಹಳೇ ಪರಿಚಯದ ಗೆಳತಿ ಮರಿಯಂಳನ್ನು ಭೇಟಿಯಾಗುವ ಸನ್ನಿವೇಶದಲ್ಲಿ , ಅವಳಿಗೆ ಅರಮನೆ ಮಾರಿ ಕಮೀಷನ್ ಪಡೆಯುವ ಆಸೆಯಿಂದ ಅಲ್ಲಿಗೆ ಬಂದಿದ್ದ ರಾಜನ ಅಕ್ಕ ಮೀನಾ ಹಾಗೂ ಅವಳ ಗಂಡ ಜಯರಾವ್ ಮತ್ತು ರಾಜನಿಗೆ ಮದುವೆಗೆ ನಿಶ್ಚಯವಾಗಿರುವ ಯುವತಿ ರೀನಾ ಎಲ್ಲರೂ ಸೇರಿದಾಗ ನಡೆಯುವ ಗೊಂದಲಗಳು, ಸುಳ್ಳಿನ ಸಂತೆಯಲ್ಲಿ ಬಿಚ್ಚಿಕೊಳ್ಳುವ ತಮಾಷೆ ಪ್ರಸಂಗಗಳು, ಒಬ್ಬರನ್ನೊಬ್ಬರು ಯಾಮಾರಿಸುವ ನಾಟಕಗಳು ಕುತೂಹಲಕರವಾಗಿ ಸಾಗುತ್ತವೆ. ಸಂದರ್ಭಗಳಿಂದ ಹಾಸ್ಯ ಸೃಷ್ಟಿಯಾಗುವಲ್ಲಿ ರಾಜೇಂದ್ರಕಾರಂತರ ಮೊನಚು ಸಂಭಾಷಣೆಗಳ ಪಾತ್ರ ಹಿರಿದು.
ಸಂಭಾಷಣೆಗಳೇ ಜೀವಾಳವಾಗಿರುವ ಜೊತೆಗೆ ಪ್ರತಿಯೊಂದು ಪಾತ್ರಗಳ ನಟರೂ ಅತ್ಯುತ್ತಮವಾಗಿ ನಟಿಸಿ ನಾಟಕಕ್ಕೆ ಜೀವತುಂಬುವಲ್ಲಿ ಯಶಸ್ವಿಯಾಗಿದ್ದಾರೆನ್ನಬಹುದು. ಮರಿಯಂ(ಸಂಗೀತಾ ಭಟ್)ಳ ಧ್ವನಿಯ ಏರಿಳಿತ,ಹಾವಭಾವಗಳು, ಪಾತ್ರವೇ ತಾನಾಗಿ ನಟಿಸಿದ ಬಗೆ ನಾಟಕವನ್ನು ಪರಿಣಾಮಕಾರಿಯಾಗಿಸಿದರೆ,ಕ್ಯಾಪ್ಟನ್ (ಸುನೀಲ್ ಕುಮಾರ್) ಅವರ ಸ್ಪಷ್ಟ ಮಾತಿನ ಸಂಭಾಷಣಾ ವೈಖರಿ, ಚಟುವಟಿಕೆಯ ಚಲನೆಗಳು, ಅಕ್ಕನ ಗಂಡ ಜಯರಾವ್(ಶ್ರೀನಾಥ್) ಅವರ ಆಂಗಿಕ ಅತ್ಯುತ್ತಮ ಅಭಿನಯ,ಗಮನಾರ್ಹ ಮ್ಯಾನರಿಸಂ ನಗೆ ಹೊನಲಿಗೆ ಕೊಡುಗೆ ನೀಡಿದವು. ಮಹೇಂದವರ್ಮ (ಗಣೇಶ್ ಶಂಕರ್)ನ ಮುಖಚರ್ಯೆ,ಚೂಟಿತನ, ಅಕ್ಕ ಮೀನಾ(ರಾಜೇಶ್ವರಿ)ಳ ಸಮರ್ಥ ಅಭಿನಯ, ರೀನಾ(ನಿಶಿತಾ)ಮುಂತಾದವರ ಸೂಕ್ತ ನಟನೆ ನಾಟಕಾಸಕ್ತರ ಗಮನ ಸೆಳೆದವು. ಅಡುಗೆಭಟ್ಟನ ಪಾತ್ರಧಾರಿ ರಾಜೇಂದ್ರ ಕಾರಂತ್ ಅವರ ಕಂಚುಕಂಠದ ಮಾತುಗಳು, ಲೀಲಾಜಾಲದ ಲವಲವಿಕೆಯ ಅಭಿನಯ ಅಮೋಘವಾಗಿತ್ತು, ನಾಟಕದ ಅನೇಕ ಉತ್ತಮಾಂಶಗಳೊಂದಿಗೆ ಮಧ್ಯೆ ಮಧ್ಯೆ ಇಣುಕುತ್ತಿದ್ದ ನಗೆ ಧಾಟಿಯ ಗೀತೆಗಳು, ಚಲನಚಿತ್ರಗೀತೆಗಳ ರಾಗದ ಚಾಟುಕವಿತೆಗಳು, ಪರಿಣಾಮವನ್ನು ಇನ್ನಷ್ಟು ತೀವ್ರಗೊಳಿಸುವಲ್ಲಿ ಸೇರ್ಪಡೆಯಾಗಿದ್ದವು.

ಇಡೀ ನಾಟಕದ ಯಶಸ್ಸು ನಿರ್ದೇಶಕ ರಾಜೇಂದ್ರಕಾರಂತರಿಗೆ ಸಲ್ಲಬೇಕು. ಬರೀ ಕಾಮಿಡಿ ಉದ್ದೇಶದ ನಾಟಕದ ಕಥಾವಸ್ತುವಾದರೂ, ಲವಲವಿಕೆಯ ಸಂಭಾಷಣೆಗಳನ್ನು ಹೆಣೆಯುವುದರೊಂದಿಗೆ, ಎಲ್ಲ ನಟ-ನಟಿಯರಿಂದಲೂ ಉತ್ತಮ ಅಭಿನಯವನ್ನು ದುಡಿಸಿಕೊಂಡಿರುವ, ಚೆಂದದ ಪದ್ಯಗಳನ್ನು ಬರೆದು ಸರಿಯಾದೆಡೆ ಸೇರಿಸಿ ನೋಡುಗರನ್ನು ಎರಡು ಗಂಟೆಗಳ ಕಾಲ ಹಿಡಿದಿಟ್ಟುಕೊಂಡು ನಿಭಾಯಿಸಿರುವ ಶ್ರೇಯಸ್ಸು ನಿರ್ದೇಶಕರಿಗೇ ಸೇರಬೇಕು. ನೇಪಥ್ಯದಲ್ಲಿ ಕೆಲಸ ಮಾಡಿದ ಬೆಳಕು-ಧ್ವನಿ ನಿರ್ವಾಹಕರು ಮತ್ತು ತಂಡದ ನೇತೃತ್ವ ವಹಿಸಿದ ವಿನಯ್ ಶಾಸ್ತ್ರಿಯವರ ಶ್ರದ್ಧೆ ಶ್ಲಾಘನೀಯ.
 

‍ಲೇಖಕರು avadhi

28 April, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading