ಮಂಜುಳಾ ಹುಲಿಕುಂಟೆ
ಒಂದು ಅದ್ಭುತ ಲೋಕವೇ ಕಣ್ಮುಂದೆ ತೆರೆದುಕೊಂಡಂತಿದ್ದ ವೇದಿಕೆ, ರಂಗಸಜ್ಜಿಕೆಗೆ ರಾಗಗಳ ವೈಭವ, ಬೆಳಕಿನ ಶೃಂಗಾರ.
ಯಾವ್ದೂ ಒಂದು ನಾಟಕ ಶುರುವಾಗುತ್ತೆ ಅಂತ ಪ್ರತಿಸಲ ನಾಟಕ ನೋಡೋವಾಗಿರೋ ಸಾಮಾನ್ಯವಾದ ಖುಷಿ ಇತ್ತು. ಆದರೆ ಆ ನಾಟಕದ ಆರಂಭ ಆಗಿದ್ದು ಸದಾ ನನ್ನ ಮನಸ್ಸಲ್ಲಿ ಹುಟ್ಟೋ ಅದೆಷ್ಟೋ ಅಸ್ವಷ್ಟ ಮಾತುಗಳಿಗೆ, ಮನಸ್ಸಲ್ಲೆ ಹೆಣೆಯೋ ಕನಸ್ಸಿನ ಲೋಕದ ಆ ಪಾತ್ರಗಳು ಆ ಪರಿಸರ ಎಲ್ಲಕ್ಕೂ ಅರ್ಥ ಒದಗಿಸೋ ತರ ಇತ್ತು. ಮೊದಲಿಗೆ ಆ ಬೇಟೆ, ಕಾಡು, ಅಲೆಮಾರಿ ಜನ, ಆ ಹೆಂಗಸಾಡೋ ಅದ್ಭುತ ಮಾತು ಗಿಡದೊಳಗೆ ಒಂದು ಗಿಡ, ಬೀಜದಲ್ಲಿ ಒಂದು ಬೀಜ ಬಿಟ್ಟಿದೆ ನೋಡಿ ಬನ್ರೋ’ ಅಂತ ಕರಿವಾಗ ಕಣ್ಮುಂದೆ ಬಂದದ್ದು ಸೀಮೋನ್-ದ-ಬೋವ ಅವರ ದ-ಸೆಕೆಂಡ್-ಸೆಕ್ಸ್ ಓದ್ಬೇಕಾದ್ರೆ ನನ್ನ ತಲೆಯಲ್ಲಿ ನಾನು ಕಟ್ಟುತ್ತಿದ್ದ / ಕಲ್ಪಿಸುತ್ತಿದ್ದ ಅದೇ ಚಿತ್ರ ಕಣ್ಮುಂದೆ ಬರುತ್ತಿದ್ದವು.
ಮನುಷ್ಯ ಭೂಮೀನ ತನ್ನದು ಅಂತ ಅಂದ್ಕೊಳ್ತಾ ಒಂದೆಡೆ ನೆಲೆನಿಂತದ್ದು, ಹೆಣ್ಣನ್ನ ಆಸ್ತಿಯಾಗಿ ನೋಡಿದ್ದು ಇದು ಮಾನವನ ಸಮಾಜದಲ್ಲಿ ಮೊದಲಿಗೆ ಆಸ್ತಿಯ ಪರಿಕಲ್ಪನೆಯ ಆರಂಭ ಮತ್ತು ಹೆಣ್ಣಿನ ಮೇಲೆ ಅಧಿಕಾರ ಸ್ಥಾಪಿಸುವ ಹೊಸ ಆಯಾಮ ಸೃಷ್ಠಿಯಾಗಿದ್ದನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದು. ಜಾತಿಯ ಉಗಮವಾಗಿ , ಎಲ್ಲೆಲ್ಲೂ ಅನ್ಯಾಯವಾಗುವುದನ್ನು ರಾಗಗಳ ಮೂಲಕ ಮನಮುಟ್ಟುವಂತೆ ಕಥೆ ಹೇಳುವ ಮುದುಕಿಯರ ಪಾತ್ರಧಾರಿಗಳು ಇಡೀ ಕಥೆಯನ್ನು ಹೇಳುತ್ತಾ ಸಾಗುತ್ತಾರೆ , ನೃತ್ಯರೂಪಕವಾಗಿಯೂ ನಾಟಕ ಹೊಸಾ ಆಯಾಮವನ್ನು ಕಂಡುಕೊಳ್ಳುತ್ತದೆ. ಎರಡನೆಯಾಗಿ ಆದಿ ಕಥೆಗಾರನಾದ ಚರ್ಮಗಾರಿಕೆ ವೃತ್ತಿಯ ಹೊಲೆಯನಾದ ಗುಣಾಡ್ಯಕವಿ ತನ್ನ ಕಥೆಯನ್ನು ರಾಜರಾಸ್ಥಾನಕ್ಕೆ ತಂದಾಗ ಅಲ್ಲಿನ ಬ್ರಾಹ್ಮಣರು, ಪಂಡಿತರು ಹೊಲೆಯನಿಗೆ ಶಾರದೆ ಒಲಿಯುವುದಿಲ್ಲ, ಸರಸ್ಪತಿಯನ್ನು ಮಲಿನ ಮಾಡಿದನೆಂದು ಅವನ ಕೈಗಳನ್ನು ಕತ್ತರಿಸಬೇಕೆಂದು ಹೇಳುತ್ತಾರೆ. ರಾಜ ಆ ಮಹಾಕವಿಯನ್ನು, ಜಗತ್ತಿನ ಹುಟ್ಟಿನ ನೋವಿನ ಕಥೆ ಬರೆದ ಆತನನ್ನು ಬಂಧಿಸಿ ಆತನ ಕೈಗಳನ್ನು ಕಟ್ಟಿ ಭಟರುಗಳ ಮೂಲಕ ಕ್ರೂರ ಮೃಗಗಳಿರುವ ಕಾಡಿಗೆ ಬಿಡಿಸುತ್ತಾನೆ . ಆ ಕವಿ ಕಾಡಲ್ಲೆ ತನ್ನ ಕಾವ್ಯ ಹಾಡುತ್ತಾ ಕಾಡಿಗೂ ಪ್ರಾಣಿ ಪಕ್ಷಿಗಳಿಗೂ ಕಾವ್ಯದ ಗಂಧ ಹಿಡಿಸುತ್ತಾನೆ. ಕ್ರೂರ ಮೃಗಗಳು ಕೂಡ ಅವನನ್ನು ತಿನ್ನದೇ ಗೌರವಿಸುತ್ತವೆ.
ಇದರ ಹಿಂದೆಯೇ ಬುದ್ಧದೇವನನ್ನು ತೋರಿ ಅವನ ಹಿಂದೆ ಆತನೇ ಚಾಂಡಾಲ ಮಾತಂಗನಾಗಿ ಅವತರಿಸಿ ತನ್ನ ಕಾರ್ಯ ನಿರ್ವಹಿಸುವಾಗ ಬ್ರಾಹ್ಮಣ ಕನ್ಯೆ ಸುಮಂಗಳಿಯು ತನ್ನ ದಾರಿಯಲ್ಲಿ ಒಬ್ಬ ಚಂಡಾಲನನ್ನು ನೋಡುವಂತಾಯಿತಲ್ಲಾ ಎಂದು ಆತನನ್ನು ಅವಮಾನಿಸಿ ಆತನನ್ನು ಕಂಡ ಕಣ್ಣು ಮಲೀನವಾದವೆಂದು ಸುಗಂಧ ದ್ರವ್ಯಗಳಿಂದ, ತೀರ್ಥಗಳಿಂದ ತನ್ನ ಕಣ್ಣುಗಳನ್ನು ತೊಳೆದುಕೊಳ್ಳಬೇಕೆಂದು ಹಿಯ್ಯಾಳಿಸುತ್ತಾಳೆ. ಅವಳ ಸುತ್ತಲಿದ್ದ ಪ್ರತಿಯೊಬ್ಬರು ಅವನನ್ನು ಚಂಡಾಲನೆಂದು ಜರಿದು, ಚೆನ್ನಾಗಿ ಹೊಡೆದು ಹೋಗುತ್ತಾರೆ. ಅದರಿಂದ ರೋಷಗೊಂಡ ಮಾತಂಗ ಸುಮಂಗಳಿಯ ಮನೆಮುಂದೆ ಉಪವಾಸಧರಣಿ ಕೂರುತ್ತಾನೆ, ಹಿನ್ನೆಲೆಯಲ್ಲಿ ಕಥೆಯನ್ನು ವಿವರಿಸುವವರು ಇದೇ ಗಾಂಧಿಯ ಉಪವಾಸ ಸತ್ಯಾಗ್ರಹಕ್ಕೆ ಪ್ರೇರಣೆಯಾದದ್ದೆಂದು ಸ್ಪಷ್ಟವಾಗಿ ವಿವರಿಸುತ್ತಾರೆ. ಹಾಗೆ ಧರಣಿಕುಳಿತ ಮಾತಂಗನನ್ನು ಕೊಲ್ಲುವುದು ಪಾಪವಾಗುತ್ತದೆಂದು ಅಲ್ಲಿಂದ ಹೊಡೆದೋಡಿಸಲು ಎಷ್ಟೇ ಪ್ರಯತ್ನ ಪಟ್ಟರು ಸಾದ್ಯವಾಗದೇ ಆಕೆಯ ತಂದೆಯೇ ಬಂದು ನಿನ್ನ ಬೇಡಿಕೆ ಏನೆಂದು ಕೇಳಿದಾಗ ಮಾತಂಗ ಕಾರಣವಿರದೆ ಜರಿದ ನಿಮ್ಮ ಮಗಳನ್ನು ನನಗೆ ನೀಡಿ ವಿವಾಹ ಮಾಡಿ ಎಂದು ಕೇಳುತ್ತಾನೆ, ಇದರಿಂದ ತಪ್ಪಿಸಿಕೊಳ್ಳಲು ತಮ್ಮ ಮಗಳು ಸತ್ತಳೆಂದು ತೀರ್ಮಾನಿಸಿ ಆ ಬಾಹ್ಮಣ ಕುಟುಂಬ ಆಕೆಯನ್ನು ಆತನೊಂದಿಗೆ ಕಳಿಸುತ್ತಾರೆ ಇದು ದಲಿತ ಹೋರಾಟದ ಮೊದಲ ದಿಗ್ವಿಜಯವೆಂದು ಹೇಳಬಹುದು.
ಕಥೆಯ ಉದ್ದಕ್ಕೂ ಮಧ್ಯ ಮಧ್ಯೆ ಕುವೆಂಪು, ಪಂಪ ತಮ್ಮ ಕಾವ್ಯಗಳ ಮೂಲಕವೇ ಪ್ರತಿಯೊಂದಕ್ಕೂ ಅರ್ಥ ಒದಗಿಸುತ್ತಾ ಸಾಗುತ್ತಾರೆ. ಪಂಪ ಭಾರತದ ಅದ್ಬುತ ಭಾಗವಾದ ಕರ್ಣರಸಾಯನವನ್ನು ಪಾಂಡವ ಕೌರವರ ವಿಧ್ಯಾಭ್ಯಾಸದ ಸಮಯದಲ್ಲಿ ಅರ್ಜುನನಿಗೆ ಸರಿಸಮನಾದ ಬಿಲ್ವಿಧ್ಯಗಾರ ಮತ್ತೊಬ್ಬನಿಲ್ಲಾ ಎಂದು ಕೊಚ್ಚಿಕೊಳ್ಳುವ ದ್ರೋಣರ ಸದ್ದಡಗಿಸುವಂತೆ ಕರ್ಣ ತನ್ನ ವಿದ್ಯೆ ಚಾತುರ್ಯ ತೋರುವಿಕೆಗಾಗಿ ಅವಕಾಶ ಕೇಳಿದಾಗ ದ್ರೋಣ ಜಾತಿಯನ್ನು ಅಡ್ಡವಿಟ್ಟು ಇದು ಕ್ಷತ್ರಿಯರಿಗೆ ಮಾತ್ರ ಅಭ್ಯಾಸ ಸ್ಥಳ ಇಲ್ಲಿ ನೀನು ಬರುವಂತ್ತಿಲ್ಲ ಎನ್ನುತ್ತಾನೆ. ಆಗ ಧುರ್ಯೋಧನ ಇಡೀ ಪಾಂಡವ ಕೌರವ ಹಾಗು ದ್ರೋಣರ ಹುಟ್ಟಿಗೆ ಕಾರಣರಾದ ಪಂಚಮ ಮತ್ತು ಶೂದ್ರರನ್ನು ಹೆಸರಿಸುತ್ತಾ ಇಡೀ ಪಾಂಡವ ಮತ್ತು ದ್ರೋಣರ ಜಾತಿ ಮಧವನ್ನು ಮರ್ಧಿಸುತ್ತಾನೆ. ಇದು ಅದ್ಭುತವಾದ ಸನ್ನಿವೇಶವೆನ್ನಬಹುದು.
ಹಾಗೆ ಶೂದ್ರ ಶಂಭೂಕ ವೇದ ಓದುವ ಹಕ್ಕಿಗಾಗಿ ಧ್ಯಾನಕ್ಕೆ ಕುಳಿತಾಗ ಬ್ರಾಹ್ಮಣರು ಶೂದ್ರ ವೇದ ಒಲಿಯಬೇಕೆಂದದಕ್ಕೆ ತನ್ನ ಮಗ ಅಕಾಲಮರಣಹೊಂದಿದನೆಂದು ಶ್ರೀರಾಮನಿಗೆ ತಿಳಿಸಿ ಬ್ರಾಹ್ಮಣ ಪರವಾಗಿ ಆಡಳಿತ ಮಾಡುತ್ತಾ ಬಂದ ರಾಮನ ಕೈಯಲ್ಲಿ ಶೂದ್ರ ಶಂಭೂಕನನ್ನು ಕೊಲ್ಲಿಸುತ್ತಾರೆ. ಇದು ರಾಮರಾಜ್ಯದ ಕಲ್ಪನೆ ಹೇಗಿತ್ತು ಎಂಬುದನ್ನು ವಿವರಿಸುತ್ತದೆ. ಇಡೀ ಜಾತಿ ವ್ಯವಸ್ತೆಯ ವಿರುದ್ದ ಹೋರಾಡಿದ ಮಹಾತ್ಮರು ಮತ್ತು ಅದನ್ನು ಧ್ವನಿಸಿದ ಮಾಹಾಕಾವ್ಯಗಳ ಪಾತ್ರಗಳು ನಮ್ಮ ಕಣ್ಮುಂದೆ ಬಂದು ಆಯಾ ಕಾಲಕ್ಕೆ ಈ ದರಿದ್ರ ವ್ಯವಸ್ಥೆಯನ್ನು ತೊಳೆಯಬೇಕೆಂಬ ಉದ್ದೇಶದಿಂದಾಗಿ ತಾವು ಅನುಭವಿಸಿದ ಅವಮಾನ ನೋವು ಯಾತನೆಯನ್ನು ಆ ವರ್ಣರಂಜಿತವಾದ ಕಲಾ ಮಂಟಪದಲ್ಲಿ ನೋಡುತ್ತಿದ್ದರೆ ಕ್ಷಣ ಕ್ಷಣಕ್ಕೂ ಮುಂದೆ ಬರುವ ಮಹಾತ್ಮರಾರು ಎಂಬ ಕುತ್ತೂಹಲವನ್ನು ಕೊನೆಯವರೆಗೂ ಕಾಯ್ದುಕೊಳ್ಳುವಂತೆ ಮಾಡುತ್ತದೆ. ಅದರಲ್ಲಿಯೂ ಸತ್ಯ ಹರಿಶ್ಚಂದ್ರ ಮತ್ತು ಹೊಲತಿಯರ ಸನ್ನಿವೇಶ ತುಂಬಾ ರೋಮಾಂಚನಕಾರಿಯಾಗಿ ಮೂಡಿಬಂದಿದೆ.
ವಿಶ್ವಾಮಿತ್ರನ ಪುತ್ರಿಯರಾದ ಹೊಲತಿಯರು ಹರಿಶ್ಚಂದ್ರನನ್ನು ಹಾಡಿ ರಂಜಿಸಿದಾಗ ನಿಮಗೇನು ಬೇಕು ಕೇಳಿರೆಂಬ ಹರಿಶ್ಚಂದ್ರನಿಗೆ ನಮ್ಮಿಬ್ಬರನ್ನು ಮದುವೆಯಾಗಬೇಕಾಗಿ ಕೇಳುವ ಚಲುವೆಯರಿಗೆ ಹರಿಶ್ಚಂದ್ರ ಜಾತಿ ಹೆಸರಲ್ಲಿ ನಿಂಧಿಸಿದಾಗ ಅವರು ನೀಡುವ ಉತ್ತರ ಇಡೀ ಜಾತಿ ವ್ಯವಸ್ಥೆಯ ವಿರುದ್ದದ ಪ್ರಬುದ್ದ ಧ್ವನಿಯಾಗಿ ಧ್ವನಿಸುತ್ತದೆ. ಕೇಳಿದ ಕಿವಿಗಳಿಗೆ ಹೊಲೆಯಿಲ್ಲಾ, ನೋಡಿ ಆನಂದಿಸಿದ ಕಣ್ಣಿಗೆ ಹೊಲೆಯಿಲ್ಲಾ ನಮ್ಮ ಮೈಗಂಧವನ್ನು ಹೀರಿದ ಮೂಗಿಗೆ ಹೊಲೆಯಿಲ್ಲಾ ರುಚಿಸಿದ ನಾಲಿಗೆಗೆ ಹೊಲೆಯಿಲ್ಲಾ ಆದರೆ ನಮ್ಮನ್ನು ಮುಟ್ಟಿಸಿಕೊಂಡರೆ ನಿನಗೆ ಹೊಲೆಯಾಗುತ್ತದೆಯೆ ರಾಜ ಪಂಚೇದ್ರೀಯಗಳಲ್ಲಿ ನಾಲ್ಕು ಇಂದ್ರೀಯಗಳಿಗೆ ಇಲ್ಲದ ಹೊಲೆತನ ಚರ್ಮಕ್ಕೆ ಬರುತ್ತದೆಯೇ ಎಂದು ಪ್ರಶ್ನಿಸಿ ಜಾತಿಯ ನಿಲುವನ್ನೆ ಬುಡಮೇಲು ಮಾಡುತ್ತದೆ.
ಇದು ನಮ್ಮ ಸತ್ಯಹರಿಶ್ಚಂದ್ರನ ಕಾಲದಲ್ಲಿ ಜಾತಿ ವ್ಯವಸ್ಥೆಯು ಹೇಗೆ ರಾಜನನ್ನು ಅಂಧನನ್ನಾಗಿಸಿತ್ತು ಎಂಬುದನ್ನು ವಿವರಿಸುತ್ತದೆ. ಹಾಗೆ ಅಣ್ಣಾ ಬಸವಣ್ಣ ಕಲ್ಯಾಣದಲ್ಲಿ ಅಂತರ್ ಜಾತಿ ವಿವಾಹ ಮಾಡಿಸುವುದು ಅದಕ್ಕೆ ವಿರೋಧವಾಗಿ ಮೇಲ್ಜಾತಿಯವರು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಕೊಲ್ಲುವ ಸಂಚು ರೂಪಿಸುವುದು, ಅದಕ್ಕಿಂತ ವಿಶೇಷವೆಂದರೆ ಕಲ್ಯಾಣದಲ್ಲಿ ದಾಸೋಹಕ್ಕಾಗೆ ಟೊಳ್ಳು ಭಕ್ತರು ಹೇಗೆ ಅಲ್ಲಿಯೂ ಬೇರೂರುತ್ತಿದ್ದರೆಂಬುದನ್ನು ಆ ಮುದುಕಿಯರು ಅರ್ಥಪೂರ್ಣವಾಗಿ ವಿವರಿಸುವಾಗ ನಾವಿನ್ನು ಬಸವಣ್ಣನ ಕಲ್ಯಾಣದಲ್ಲೇ ಜಾತಿಯ ಬೇರುಗಳಿದ್ದವೆಂಬುದನ್ನು ಅರ್ಥೈಸುಕೊಳ್ಳುತ್ತಿರುವಾಗಲೇ ಧರೆಗೆ ದೊಡ್ಡೋರ ಆಗಮನ ಕ್ಷಣ ಮೈನವಿರೇಳಿಸುವ ದೃಶ್ಯ ಮಂಟೇಸ್ವಾಮಿ ಕಲ್ಯಾಣಕ್ಕೆ ಬರುವುದು. ಆ ಅದ್ಭುತವನ್ನು ನೊಡುವುದೆಂದರೆ ಇಡೀ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ ತನ್ನ ಪವಾಡಗಳಿಂದಲೇ ಸಮಾಜವನ್ನು ಸರಿದಾರಿಗೆ ತರುವ ಮಂಟೇದಲಿಂಗಯ್ಯ ಬಸವಣ್ಣನವರ ದಾಸೋಹ ಮಂಟಪದಲ್ಲಿ ಜಾತಿಗರು ಸೇರಿ ಮಾಡುತ್ತಿದ್ದ ಕೆಟ್ಟ ನಡೆತೆಗಳನ್ನು ಸರಿ ಪಡಿಸಲು ಬೂದಿ ತಿಪ್ಪೆಯಿಂದೆದ್ದು ಭಂಗಿಸೇದುತ್ತಾ ಹೊಲೆಯನಾಗಿ ಅನುಭವ ಮಂಟಪಕ್ಕೆ ಬಂದಾಗ ಅಲ್ಲಿದ್ದ ಜಾತಿಗರೆಲ್ಲಾ ಬಸವಣ್ಣನನ್ನು ಶಪಿಸುತ್ತಾ ಬಸವಣ್ಣನಿಗೇ ದಿಕ್ಕಾರಕೂಗುತ್ತಾ ಹೊಲೆಯ ಒಳಗೆ ಬಂದನೆಂದು ಹೊರಹೋಗುತ್ತಾರೆ . ಇದರಿಂದ ನೊಂದ ಬಸವ ಯಾಕೆ ಗುರುದೇವಾ ಹೀಗೆ ಮಾಡಿಬಿಟ್ಟರಿ ಯಾಕೆ ಕಾಡಿದಿರಿ ಕಲ್ಯಾಣವನ್ನ ಎಂದಾಗ ಮಂಟೇದ ಲಿಂಗಯ್ಯ ಅಣ್ಣಾ ಬಸವಾ ನೀನು ಯಾವುದನ್ನು ತೊಡೆಯಲು ಈ ಕಾರ್ಯಮಾಡುತ್ತಿರುವೆಯೋ ಆ ಜಾತಿಯ ಬೇರುಗಳು ನಿನ್ನ ದಾಸೋಹವನ್ನು ಮುತ್ತಿಕೊಂಡಿವೆ ನಡಿ ನೀನು ಸ್ಥಾವರಕ್ಕಳಿವುಂಟು ಬಸವ ಜಂಗಮಕ್ಕೆ ಅಳಿವಿಲ್ಲ ಎಂದು ಬಸವಣ್ಣನಿಗೆ ಮನವರಿಕೆ ಮಾಡಿಸುತ್ತಾರೆ.
ನಂತರದಲ್ಲಿ ದಾಸ ಶ್ರೇಷ್ಟರಾದ ಕನಕದಾಸರ ಆಗಮನ ಉಡುಪಿಯಲ್ಲಿ ಕೃಷ್ಣದರ್ಶನಕ್ಕೆ ಬಂದ ಅವರು ಜಾತಿನಿಂದನೆಗೆ ಗುರಿಯಾಗಿ ದೇವಸ್ಥಾನದಿಂದ ಹೊರಗೆ ಹಾಕಿಸಿಕೋಳ್ಳುತ್ತಾರೆ. ತನ್ನ ಕೃಷ್ಣನನ್ನು ಕಾಣದೆ ಅಲ್ಲಿಂದ ಹೋಗುವುದಿಲ್ಲ ವೆಂದು ಕೀರ್ತನೆ ಹಾಡುತ್ತಾ ಕೂರುತ್ತಾರೆ. ಅವನಿಗೆ ದರ್ಶನವಾಗದಂತೆ ಬ್ರಾಹ್ಮಣ ಪುರೋಹಿತರು ಬಾಗಿಲು ಮುಚ್ಚಿ ಒಳಗೆ ಸೇರಿಕೊಳ್ಳುತ್ತಾರೆ. ಆಗ ಹಿಂದಿನ ಗೋಡೆಯನ್ನು ಹೊಡೆದು ಕೃಷ್ಣ ದರ್ಶನವಿಟ್ಟು ನನ್ನನ್ನು ಈ ಗುಡಿಯೊಳಗೆ ಯಾಕೆ ಹುಡುಕುತ್ತಿರುವೆಯೋ ಕನಕ ನೀನೇ ಹೇಳಿದಂತೆ ಬಯಲು ಆಲಯದೋಳಗೋ ಆಲಯವು ಬಯಲೊಳಗೊ….ನಿನ್ನೊಳಗೇ ನಾನಿರುವಾಗ ಇಲ್ಲಿ ಯಾಕೆ ಹುಡುಕಿದೆ ಎಂದಾಗ ಆ ಮುದುಕಿಯರು ಹಾಗಾದರೆ ದೇವಸ್ಥನದ ಒಳಗೆ ಇದ್ದದ್ದೇನು ಎಂದು ಪ್ರಶ್ನಿಸುತ್ತಾರೆ, ದೇವರು ಭಕ್ತರ ಹೃದಯದ ನಿವಾಸಿ ಗುಡಿಯೊಳಗಿಲ್ಲ ಎಂಬುದನ್ನು ಅರ್ಥೈಸುತ್ತಾರೆ. ತದನಂತರ ಪುರಂದರ ದಾಸರ ಆಗಮನ ಮತ್ತು ಶಿಶುನಾಳ ಷರೀಪನ ಜೊತೆಗೆ ಕೈವಾರ ತಾತಯ್ಯನವರ ಆಗಮನದೊಂದಿಗೆ ಅವರ ತತ್ವಪದಗಳಿಂದ ನಾಟಕ ಮುಂದುವರೆದು ನಂತರದಲ್ಲಿ ಆಫ್ರಿಕದಲ್ಲಿ ಗಾಂಧಿ ಅನುಭವಿಸಿದ ಅವಮಾನವನ್ನು ವರ್ಣಬೇದ ನೀತಿಯಿಂದ ರೈಲಿನಿಂದ ಗಾಂದಿಯನ್ನು ದೂಡಲ್ಪಡುವ ದೃಶ್ಯದಿಂದ ತನ್ನ ದೇಶದಲ್ಲೆ ಅಂಬೇಡ್ಕರ್ ಗೆ ಜಾತಿಯ ಹೆಸರಿನಲ್ಲಿ ಮಾಡಿದ ಅವಮಾನ ಕಣ್ಣಿಗೆ ಕಟ್ಟುವಂತೆ ತೋರಲಾಗಿದೆ ಅಲ್ಲಿಂದಲೇ ಗಾಂಧಿಯ ಹೋರಾಟ ಆರಂಭವಾಗುತ್ತದೆ.
ಈ ನಾಟಕದಲ್ಲಿ ನಾನು ಗಮನಿಸಿದ ಮತ್ತೊಂದು ವಿಶೇಷವೆಂದರೆ ಗಾಂಧಿ ಈ ಕಾಲದ ಜನರೊಂದಿಗೆ ಬದುಕಿದ್ದರೆ ಹೇಗಿರುತ್ತದೆಂಬ ಕಲ್ಪನೆಯೊಂದಿಗೆ ಕಟ್ಟಿಕೊಡುವ ಸನ್ನಿವೇಶ ‘ಗಾಂಧಿ ದಾರಿಯಲ್ಲಿ ಕಸಹೊಡೆಯುವ ಜಾಡಮಾಲಿಯಾಗಿ ಕಾಣಿಸಿಕೊಳ್ಳುತ್ತಾರೆ ಅಲ್ಲಿಗೆ ವ್ಯಾಯಮಕ್ಕೆ ಬರುವ ಈ ಕಾಲದ ಮಂದಿ ಸರಿಯಾಗಿ ಕಸ ಗುಡಿಸು ಎಂದಾಗ ಗಾಂಧಿ ಸರಿ ಎಂದು ಗುಡಿಸುತ್ತಾರೆ. ಆಗ ಆ ವ್ಯಕ್ತಿಯೊಬ್ಬ ಸ್ವಲ್ಪ ಗುಡಿಸಿ ಇನ್ನರ್ದ ಅಲ್ಲೇ ಬಿಟ್ಟು ಹೋದರೆ ನಿಮ್ಮಪ್ಪ ಬಂದು ಕಸ ಗುಡಿಸುತ್ತಾನ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಗಾಂಧಿ ಉತ್ತರಿಸುವುದು ಈ ಗುಡಿಸುವ ಕೆಲಸವನ್ನು ನಮ್ಮ ತಾತ,ಮುತ್ತಾತ, ತಂದೆಯವರ ಕಾಲದಿಂದಲೇ ಆರಂಭವಾಗಿದ್ದರೆ ಸರಿಯಾಗುತ್ತಿತ್ತು ಎಂದು ಹೇಳಿ ನಂತರ ಮುಂದಿನ ಜನ್ಮವಿದ್ದರೆ ಈ ಜಾಡಮಾಲಿ ಕೆಲಸಮಾಡಿ ಅವರ ಋಣ ತೀರಿಸುತ್ತೇನೆ ಎನ್ನುವಾಗ ಸ್ವತಂತ್ರ್ಯಪೂರ್ವದಲ್ಲೇ ಅಂಬೇಡ್ಕರ್ ಹೇಳಿದ ಈ ಸಮಾಜದಲ್ಲಿ ಅಸ್ವೃಶ್ಯತೆ ನಿವಾರಣೆ ಇಲ್ಲದೇ ಯಾವ ಸ್ವಾತಂತ್ರ್ಯವೂ ಭಾರತವನ್ನು ಉದ್ಧರಿಸುವುದಿಲ್ಲವೆಂಬ ವಾದವನ್ನು ತಿರಸ್ಕರಿಸಿದ ಗಾಂಧಿಗೆ ತಮ್ಮ ತಪ್ಪಿನ ಅರಿವಾಗಿ ಈ ರೀತಿ ಮಾತನಾಡುತ್ತಾರೇನೋ ಎಂದೆನಿಸುತ್ತದೆ.
ಆಗ ಅಂಬೇಡ್ಕರ್ ರವರ ಹೋರಾಟ ಆರಂಭವಾಗುತ್ತದೆ ದಲಿತರಿಗೆ ಸಾರ್ವಜನಿಕ ಕೆರೆ, ಬಾವಿಯಲ್ಲಿ ಕುಡಿಯುವ ನೀರಿಗಾಗಿ ಅವರ ಹೋರಾಟ ಸಾವಿರಾರು ಶತಮಾನಗಳಿಂದ ಕೆರೆ, ಬಾವಿ ಕಟ್ಟಿದ ದಲಿತರಿಗೆ ಅದನ್ನು ಕುಡಿವ ಹಕ್ಕಿಲ್ಲ, ಗುಡಿ ಗೋಪುರ ಕಟ್ಟಿದ ಅಸ್ಪೃಶ್ಯರಿಗೆ ಒಳಗೆ ಪ್ರವೇಶವಿಲ್ಲ ಎಂದು ಚೌದಾರ್ ಕೆರೆ ನೀರನ್ನು ಮುಟ್ಟುವ ಚಳುವಳಿ ಸಿದ್ದಲಿಂಗಯ್ಯನವರ ಸಾವಿರಾರು ನದಿಗಳು ಕವನದೊಂದಿಗೆ ಅದ್ಭುತವಾಗಿ ಮೂಡಿಬರುತ್ತದೆ ನೆನ್ನಾ ದಿನಾ..ನನ್ನ ಜನಾ..ಬೆಟ್ಟದಂತೆ ಬಂದರು ಹೀಗೆ ಅಂಬೇಡ್ಕರ್ ಹೋರಾಟ ಅದರ ಫಲವಾಗಿ ಮೀಸಲಾತಿ ಇದರಿಂದಾಗಿ ದಲಿತರಿಗೆ ಅಕ್ಷರ ದೊರೆತು ಹೆಣ್ಣು ಮಕ್ಕಳಿಗೆ, ದಲಿತರಿಗೆ ಶಿಕ್ಷಣಸಿಕ್ಕು ಅಧಿಕಾರದಲ್ಲಿ ಮುಂದೆಬರುವುದನ್ನು ಮುದುಕಿಯರು ಬಹಳ ಹೆಮ್ಮೆಯಿಂದ ವಿವರಿಸುತ್ತಾರೆ. ನಂತರ ದೇವನೂರರ ಕುಸುಮಬಾಲೆ ಕುಸುಮಿ ಜಾತಿಯ ವಿಷದಿಂದಾಗಿ ತನ್ನ ಗಂಡನನ್ನು ಕಳೆದುಕೊಂಡು ಹುಚ್ಚಿಯಂತೆ ಸ್ವತಂತ್ರ್ಯ ಬದುಕಿಗಾಗಿ ಗೋಳಿಡುತ್ತಾಳೆ ಆದರೆ ಅವಳಿಗೆ ದೆವ್ವ ಮೆಟ್ಟಿದೆ ಎಂದು ಊರಿನವರೆಲ್ಲಾ ಕೊಳ್ಳೆಗಾಲದ ಮಂತ್ರವಾದಿಗಳನ್ನು ಕರೆಸುತ್ತಾರೆ ಇವರಿಗಿಡಿದಿರುವ ಜಾತಿಯ ಭೂತವನ್ನು ಬಿಡಿಸಿಕೊಳ್ಳದೇ ಆಕೆಗೆ ದೆವ್ವ ಮೆಟ್ಟಿದೆ ಎಂದು ಹೇಳುವ ಇವರಿಗೆ ಯಾವಕಾಲಕ್ಕೆ ಬುದ್ಧಿ ಬರುತ್ತದೆಯೋ ಎಂಬುದು ಆ ಮುದುಕಿಯರ ಪ್ರಶ್ನೆ … ಹಾಗೆ ಕುದ್ಮಾಲ್ ರಂಗರಾವ್ ಎಂಬ ಬ್ರಾಹ್ಮಣ ವ್ಯಕ್ತಿ ತಮ್ಮ ಸಮುದಾಯದವರು ಮಾಡಿರುವ ತಪ್ಪಿನ ಅರಿವಾಗಿ ದಲಿತರಿಗೆ ಶಿಕ್ಷಣ ನೀಡುವ ಉದ್ದೇಶದಿಂದಾಗಿ ದಲಿತ ಕೇರಿಗಳಿಗೆ ಹೋಗಿ ಮಕ್ಕಳನ್ನು ಶಾಲೆಗೆ ಬಕಳಿಸಬೇಕಾಗಿ ಬೇಡಿಕೊಳ್ಳುತ್ತಾರೆ, ಆಗ ದಲಿತರು ನಾವು ದುಡಿಯಲೆಂದೇ ಹುಟ್ಟಿದವರು ಓದು ಬರಹ ನಮಗ್ಯಾಕೆ ಅದರಿಂದ ನಿಮಗೆ ತೊಂದರೆ ಎಂದಾಗ ಆತ ಅದು ಸುಳ್ಳು ಕಾಲಾಂತರಗಳಿಂದ ನಮ್ಮ ಹಿರಿಯರು ಮಾಡಿದ ಪಾಪದ ಪ್ರಾಯಶ್ಚಿತಕ್ಕಾಗಿ ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸಮಾಡಿಸಿ. ಅವರು ಅಧಿಕಾರಿಗಳಾಗಿ ಓಡಾಡಬೇಕಾದರೆ ಅವರ ಪಾದದ ದೂಳು ನನ್ನ ನೆತ್ತಿಗೆ ಮುಟ್ಟಿ ಈ ಪಾಪದಿಂದ ಮುಕ್ತನಾಗುತ್ತೇನೆ ಎಂದು ಹೇಳುತ್ತಾರೆ. ಆಗಿನಿಂದ ದಲಿತರು ಶಿಕ್ಷಣಕ್ಕೆ ಮುಂದಾಗುತ್ತಾರೆ. ಕಥೆಯನ್ನು ವಿವರಿಸುವ ಮುದುಕಿಯರು ಆ ವ್ಯಕ್ತಿಯನ್ನು ಗೌರವಿಸುತ್ತಾ ನೋಡು ಆತ ಬ್ರಾಹ್ಮಣನಾದರೂ ಮನುಷ್ಯನಂತೆ ವರ್ತಿಸುತ್ತಾನೆ ಎಂದಾಗ ಮತ್ತೊಬ್ಬ ಮುದುಕಿ ನಮ್ಮ ಅಂಬೇಡ್ಕರ್ ಅವರಿಗೆ ಶಿಕ್ಷಣ ನೀಡಿದ್ದು ಒಬ್ಬ ಬ್ರಾಹ್ಮಣ ಶಿಕ್ಷಕನೇ ಅಲ್ಲವೇ ಎಂದು ಪ್ರಜ್ಞಾವಂತರನ್ನು ಸ್ಮರಿಸುತ್ತಾರೆ.
ಇದಕ್ಕೂ ಮುನ್ನವೇ ಸಿದ್ದಲಿಂಗಯ್ಯನವರ ಏಕಲವ್ಯ, ದ್ರೋಣನ ಕುತಂತ್ರಕ್ಕೆ ಬಲಿಯಾಗುವ ಕಾಡಿನ ಮುಗ್ಧ ಏಕಲವ್ಯನ ದೃಶ್ಯ ಮನಕಲಕುವಂತದ್ದು. ದ್ರೋಣನನ್ನು ಮಾನಸ ಗುರುವಾಗಿ ಸ್ವಿಕರಿಸಿ ದೊಡ್ಡ ಬಿಲ್ವಿದ್ಯಾಪ್ರವೀಣನಾದ ಏಕಲವ್ಯ ಅರ್ಜುನನ ಅಸೂಹೆಗಾಗಿ ಗುರುದಕ್ಷಿಣೆಯಾಗಿ ತನ್ನ ಬಲಗೈ ಹೆಬ್ಬೆರಳನ್ನೇ ಬಲಿನೀಡುತ್ತಾನೆ ಇದು ದ್ರೋಣನ ಆತ್ಮವಂಚನೆಯನ್ನು ತೋರುತ್ತದೆ, ಮೀಸಲಾತಿ ಬೇಡ, ತಮ್ಮ ಪ್ರತಿಭೆಯಿಂದಲೇ ಬೆಳೆಯಲಿ ಚೆನ್ನಾಗಿ ಬದುಕಲಿ ಎಂದು ನುಡಿವವರಿಗೆ ಆ ಮುದುಕಿಯರು ಕೇಳುವ ಪ್ರಶ್ನೆ ತಮ್ಮ ಪ್ರತಿಭೆ ತೋರಿದ್ದಕ್ಕಾಗಿ ತಾನೇ ಇವರೆಲ್ಲರ ಬಲಿ ಇದು ಉತ್ತರವು ಹೌದು ಚಿಗುರಿನಲ್ಲೆ ದಲಿತರು ಮುಖ್ಯವಾಹಿನಿಗೆ ಬರದಂತೆ ನೋಡಿಕೊಳ್ಳುವ ಪಟ್ಟಭದ್ರ ಹಿತಾಸಕ್ತಿಗಳು ಹೇಗೆ ಪ್ರತಿಭಾವಂತ ದಲಿತರನ್ನ ಬಲಿತೆಗೆದು ಕೊಳ್ಳುತ್ತವೆ ಎಂಬ ನಿದರ್ಶನ ಈ ದೃಶ್ಯಕಾವ್ಯ. ಹಾಗೆ ಭಾರತದ ವಿಭಜನೆಯ ದೃಶ್ಯವನ್ನು ಅದ್ಭುತವಾಗಿ ಹೆಣೆಯಲಾಗಿದ್ದು ನಾಟಕದ ಮುಕ್ತಾಯವು ಅದೆಷ್ಟು ಅದ್ಭುತವಾಗಿತ್ತೆಂದರೆ ನೋಡುವಾಗಲೇ ಮೈ ಪುಳಕಿತಗೊಳ್ಳುವಂತೆ!
ಎಲ್ಲಾ ಮಹಾತ್ಮರು ಮೇಲೆನಿಂತು ಕೆಳಗಿನ ಭಾಗದಲ್ಲಿ ಒಂದುಕಡೆ ಬಾಬಾ ಸಾಹೇಬರು ಮತ್ತೊಂದು ಕಡೆ ಗಾಂಧಿ ಅವರ ಮಧ್ಯೆ ಭಾರತದ ತ್ರಿವರ್ಣ ಧ್ವಜ, ಆ ಧ್ವಜವನ್ನು ಕೇಸರಿಯನ್ನು ಒಂದು ಸಮುದಾಯ ಹಸಿರನ್ನು ಒಂದು ಸಮುದಾಯ ಕಿತ್ತುಕೊಂಡು ಹೋಗುವ ದೃಶ್ಯ ಆಗ ಪಂಪ ಮತ್ತು ಕುವೆಂಪು ‘ಮನುಜ ಕುಲಂ ತಾನೋಂದೆ ವಲಂ’ ಎಂಬ ಘೋಷದೊಂದಿಗೆ ಆ ಎರೆಡೂ ಸಮುದಾಯವನ್ನು ಕರೆತಂದು ಭಾರತದ ಬಾಹುಟವನ್ನು ಮತ್ತೆ ಸೇರಿಸುವ ದೃಶ್ಯ ವಿಶಿಷ್ಟವಾದರೂ ಅದು ಕನಸ್ಸೆಂಬಂತಿತ್ತು ,ಯಾರದೋ ಅಧಿಕಾರ ದಾಹಕ್ಕೆ , ರಕ್ತದಾಹಕ್ಕೆ, ಒಡೆದ ಭಾರತ ಪಾಕಿಸ್ತಾನ ಮತ್ತೆ ಸೇರುವುದೆಂದರೆ ಅಷ್ಟು ಸುಲಭವಲ್ಲ ಎನಿಸಿತು. ಆದರೂ ಒಂದು ಆಶಾಜ್ಯೋತಿಯನ್ನು ಹತ್ತಿಸಿಬಿಟ್ಟಿತು ಆ ಕಲ್ಪನೆ ಇದಕ್ಕಾಗಿಯೂ ಯಾರೋ ಒಬ್ಬ ಮಹಾತ್ಮರು ಜನ್ಮತಾಳೆಯುತ್ತಾರೆ ಈ ಕನಸ್ಸು ನನಸ್ಸಾಗುತ್ತದೆ ಎಂಬ ನಂಭಿಕೆಯಿಂದ ಮನ ನಿರಾಳವಾಯಿತು. ಅಲ್ಲಿಗೆ ಈ ನಾಟಕದ ಮುಕ್ತಾಯ ಹಿರಿಯ ಸಾಹಿತಿಗಳೂ ಪ್ರಜ್ಞಾವಂತರೂ ರೂಪಿಸಿದ್ದ ಈ ನಾಟಕ ಇನ್ನೂ ಸಾವಿರ ಪ್ರದರ್ಶನ ಕಂಡು ಸ್ವಲ್ಪ ಮನಸ್ಸುಗಳಾದರೂ ಬದಲಾಗಲಿ ಎಂಬುದು ನನ್ನ ಆಶಯ.











Tumba chanagide…
ಒಂದು ಆಶಾಜ್ಯೋತಿಯನ್ನು ಹತ್ತಿಸಿಬಿಟ್ಟಿತು ಆ ಕಲ್ಪನೆ ಇದಕ್ಕಾಗಿಯೂ ಯಾರೋ ಒಬ್ಬ ಮಹಾತ್ಮರು ಜನ್ಮತಾಳೆಯುತ್ತಾರೆ ಈ ಕನಸ್ಸು ನನಸ್ಸಾಗುತ್ತದೆ ಎಂಬ ನಂಭಿಕೆಯಿಂದ ಮನ ನಿರಾಳವಾಯಿತು. ಅಲ್ಲಿಗೆ ಈ ನಾಟಕದ ಮುಕ್ತಾಯ ಹಿರಿಯ ಸಾಹಿತಿಗಳೂ ಪ್ರಙವಂತರೂ ರೂಪಿಸಿದ್ದ ಈ ನಾಟಕ ಇನ್ನೂ ಸಾವಿರ ಪ್ರದರ್ಶನ ಕಂಡು ಸ್ವಲ್ಪ ಮನಸ್ಸುಗಳಾದರೂ ಬದಲಾಗಲಿ ಎಂಬುದು ನನ್ನ ಆಶಯ…very nice…
Nice one. chennagittu
“ ಮನುಷ್ಯ ಜಾತಿ ತಾನೊಂದೆ ವಲಂ “ ನಾಟಕದ ದೃಶ್ಯಗಳು ಕಣ್ ಮುಂದೆ ಬಂದಂತಿದೆ ಲೇಖನ.