
ಮನುಷ್ಯನ ಮೊದಲ ಮತ್ತು ಕೊನೆಯ ಮಾತು ಮಾತೃಭಾಷೆಯಾಗಿರುತ್ತದೆ ಎಂದು ಹೆಸರಾಂತ ಕವಿ ಮತ್ತು ವಿದ್ವಾಂಸರಾದ ಶ್ರೀ ಎಚ್. ಎಸ್. ವೆಂಕಟೇಶ ಮೂರ್ತಿ ಅವರು ಹೇಳಿದರು. ಅವರು ಎಸ್. ಕೆ. ಎಫ್. ಇಂಡಿಯಾ ನಿಯಮಿತ ಕಾರ್ಖಾನೆಯು ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪು. ತಿ. ನರಸಿಂಹಾಚಾರ್ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. `ಯಾವ ಭಾಷೆಯನ್ನು ಕೇಳಿದಾಗ ಮೈ ನವಿರೇಳೀಸುತ್ತದೆಯೋ ಅದು ಮಾತೃ ಭಾಷೆ. ನಾವು ಹುಟ್ಟಿದ ತಕ್ಷಣ ಅಳುವಿನ ರೂಪದ `ಅಮ್ಮಾ’ ಎಂಬ ಮಾತು ಮತ್ತು ಬಹುಶಃ ಕೊನೆಯ ಮಾತು ಸಹ ಮಾತೃಭಾಷೆಯಾಗಿರುತ್ತದೆ. ಹೀಗಾಗಿ ಭಾಷೆಯೆಂಬುದು ಕೇವಲ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಸಾಧನ ಮಾತ್ರವಲ್ಲ, ವ್ಯಾವಹಾರಿಕ ಜಗತ್ತಿನ ಭಾಗ ಮಾತ್ರವಲ್ಲ, ಅಕ್ಷರ ಮಾಲೆಯಂತೂ ಅಲ್ಲವೇ ಅಲ್ಲ.
ನಮ್ಮ ದಿನನಿತ್ಯದ ಜಗಳ, ಪ್ರೀತಿ, ಸಿಟ್ಟು, ವ್ಯವಹಾರ, ಎಲ್ಲವೂ ನಡೆಯುವುದು ಮಾತೃಭಾಷೆಯಲ್ಲಿಯೇ. ಮಾರುಕಟ್ಟೆ, ಕಾರ್ಖಾನೆ, ಕಛೇರಿ ಕೊನೆಗೆ ದೇವಸ್ಥಾನದಲ್ಲಿ ಬಳಸುವ ಭಾಷೆ ಕೂಡ ಮಾತೃಭಾಷೆಯೇ ಆಗಿರುತ್ತದೆ. ಏಕಾಂತದಲ್ಲಿರುವಾಗಲೂ ನಮ್ಮ ಮನಸ್ಸಿನಲ್ಲಿ ಮೂಡಬಹುದಾದ ಭಾವನೆಗಳು, ವಿಚಾರಗಳು, ಚಿಂತನೆಗಳು, ಕೊನೆಗೆ ಆಧ್ಯಾತ್ಮಿಕ ಸಾಧನೆಗಳನ್ನು ಸಾಧಿಸಲು ಕೂಡ ಮೆಟ್ಟಿಲಾಗುವುದು ಕೂಡಾ ಮಾತೃಭಾಷೆಯೆ. ಕವಿಗೆ ಇದೇ ಭಾಷೆ ಭಾವನೆಗಳನ್ನು ವ್ಯಕ್ತಪಡಿಸಬಲ್ಲ ಅಸ್ತ್ರ, ಒಬ್ಬ ವಿಜ್ಞಾನಿಗೆ ಅದು ವೈಚಾರಿಕತೆಯ ಹರಹನ್ನು ವಿಸ್ತರಿಸುವ ಸಾಧನೆ, ರಾಜಕಾರಿಣಿಗಳಿಗೆ ಇಚ್ಛಾಶಕ್ತಿಯ ನಿರೂಪಣೆಯಾಗುತ್ತದೆ. ಗಾಂಧೀಜಿಯವರ `ಜೈ ಹಿಂದ್’ ಎಂಬ ಒಂದೇ ಮಾತು ಮಂತ್ರವಾದದ್ದು ನಮಗೆಲ್ಲ ಗೊತ್ತಿದೆ. ಹೀಗಾಗಿ ನಮ್ಮ ಭಾಷೆಯನ್ನು ಶ್ರೀಮಂತಗೊಳಿಸಿದರೆ ನಮ್ಮ ನಾಡು, ನಮ್ಮ ದೇಶವನ್ನು ಶ್ರೀಮಂತಗೊಳಿಸಿದಂತೆ ಸಂಸ್ಕೃತಿಯನ್ನು ಉಳಿಸಿದಂತೆ’ ಎಂದು ಹೇಳಿದರು. ಕಾರ್ಖಾನೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ಮನು ಕಿಡವೆ, ಶೈಲೇಶ್ ಶರ್ಮ, ಅಂತರ ರಾಷ್ರ್ಟೀಯ ಖ್ಯಾತಿಯ ಕಾರ್ಮಿಕ ನಾಯಕರಾದ ಮಹಾದೇವನ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವರದಿ: ಶಾಂತರಾಜು
’ಮನುಷ್ಯನ ಮೊದಲ ಮತ್ತು ಕೊನೆಯ ಮಾತು ಮಾತೃಭಾಷೆ’ – ಎಚ್ಎಸ್ವಿ
ನಿಮಗೆ ಇವೂ ಇಷ್ಟವಾಗಬಹುದು…




0 Comments