ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನುಷ್ಯನಿಗೆ ಏನಾದರೂ ಒಂದು ಹುಚ್ಚು ಇರುವುದು ಒಳ್ಳೆಯದು..

ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’.

ಈ ನಾಟಕ ಪ್ರದರ್ಶನದ ಬಗ್ಗೆ ‘ಅವಧಿ’ ಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ.

ಈ ಚರ್ಚೆ ನಾಟಕವನ್ನು ಅರ್ಥ ಮಾಡಿಕೊಳ್ಳುವ ಬಗೆಯ ಬಗ್ಗೆ, ನಾಟಕ ವಿಮರ್ಶೆ ಹೇಗಿರಬೇಕು ಎನ್ನುವುದರ ಬಗ್ಗೆ ಬೆಳಕು ಚೆಲ್ಲುತ್ತಿದೆ.

-ನರೇಂದ್ರ ಪೈ

ಹರೀಶ ಕೇರ ಅವರ ಲೇಖನ ಓದಿದೆ. ಹಾಗೆಯೇ ಅಶೋಕ ವರ್ಧನರ ಕಿರು ಟಿಪ್ಪಣಿಯನ್ನು ಕೂಡ. ಮುಖ್ಯವಾಗಿ ನನಗೆ ಅನಿಸುತ್ತ ಹೋದದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಮೊದಲಿಗೆ, ಈ ನಾಟಕದ ಬಗ್ಗೆ ಅಸಹನೆ ತೋರಿಸಿದವರಿಗೆ ತೀರ ಹೊಸದಾದ, ತಮಗೆ ಅಭ್ಯಾಸವಿಲ್ಲದ, ಪ್ರಯೋಗಾತ್ಮಕವಾದ ಒಂದು ನಾಟಕದ ಪ್ರದರ್ಶನವನ್ನು ಸ್ವೀಕರಿಸುವ ಮನಸ್ಥಿತಿ ಇರಲಿಲ್ಲ ಮಾತ್ರವಲ್ಲ ಆ ನಂತರ ದೂರುವಾಗ ಕನಿಷ್ಠ ಅಂಥ ಪ್ರಯತ್ನವನ್ನು ಸಹಿಸುವ ಔದಾರ್ಯ ಕೂಡ ಇರಲಿಲ್ಲವೇನೊ ಅನಿಸಿತು. ಹಾಗೆ ಅನಿಸಲು ನನಗಿರುವ ಪರ್ಯಾಯ ಕಾರಣವೇನೆಂದರೆ ನಾವು ಇವತ್ತು ಎಂಥೆಂಥ ಶಬ್ದಮಾಲಿನ್ಯವನ್ನು, ಸಾಮಾಜಿಕ ಪ್ರಜ್ಞೆಯೇ ಇಲ್ಲದೆ ಜಗತ್ತಿನಲ್ಲಿ ತಾವೊಬ್ಬರೇ ಬದುಕುತ್ತಿದ್ದೇವೋ ಎಂಬಂತೆ ಬದುಕಿ ಇತರರಿಗೆ ಅನಗತ್ಯ ಕಿರಿಕಿರಿ ಕೊಡುತ್ತಿರುವವರನ್ನೆಲ್ಲ ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರು ಇಂಥ ಒಂದು ಪ್ರಯೋಗವನ್ನು ಯಾಕೆ ಸಹಿಸದವರಾಗುತ್ತೇವೊ ಎಂಬ ಹಿನ್ನೆಲೆಯಲ್ಲಷ್ಟೇ ನನ್ನ ಮಾತು.

ಎರಡನೆಯದಾಗಿ, ಒಂದು ಸೃಜನಶೀಲ ನಾಟಕ ಕೃತಿಯನ್ನಾಗಲೀ, ಅದರ ಪ್ರದರ್ಶನವನ್ನಾಗಲೀ ರಂಗಸಾಧ್ಯತೆಗಳ ಸಮರ್ಥ ಬಳಕೆ ಮತ್ತು ಅನ್ವೇಷಣೆಯ ಆಧಾರದ ಮೇಲೆ ನಾವು ನೋಡುತ್ತೇವೆ ಎಂದು ಭಾವಿಸಿದ್ದೇನೆ. ನಾಟಕಕಾರ ಮತ್ತು ನಿರ್ದೇಶಕನ ನಡುವಿನ ಒಂದು ಅನುಸಂಧಾನವಿದು. ಅಂಥ ಅವಕಾಶವನ್ನು ನಾಟಕಕಾರ ವಿಪುಲವಾಗಿ ಬಿಟ್ಟುಕೊಟ್ಟಿರುವುದರಿಂದಲೇ (ಅದಕ್ಕೆ ಮೌನ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ ಎನ್ನುವುದನ್ನು ಒಪ್ಪಿಕೊಂಡೂ) ಇದು ಒಂದು ಉತ್ತಮ ನಾಟಕ ಕೃತಿ ಎನಿಸುವುದು. ಇನ್ನು ನಿರ್ದೇಶಕ ರಂಗಸಾಧ್ಯತೆಗಳನ್ನು ಸಮರ್ಥವಾಗಿಯೇ ಬಳಸಿಕೊಂಡಿದ್ದಾರೆ ಎಂದು ಒಂದೂ ಮುಕ್ಕಾಲುಗಂಟೆಯ ನಾಟಕ ಹಲವರಿಗೆ ಹಲವು ಬಗೆಯಲ್ಲಿ ತೆರೆದುಕೊಂಡಿರುವುದೂ, ತಟ್ಟಿರುವುದೂ ತೋರಿಸಿದೆ. ಒಟೊ ಶೋಗೋನ ಬಾಲ್ಯ, ವಲಸೆಯ ಅನುಭವಗಳು, ನಾಟಕಕಾರನಾಗಿ ಅವನ ಹಿನ್ನೆಲೆ ಇತ್ಯಾದಿಗಳ ಅರಿವಿದ್ದು ಅಥವಾ ಇಲ್ಲದೆಯೂ ನೋಡಿದವರಿಗೆ ನಾಟಕ ವಿಭಿನ್ನವಾಗಿ ತಲುಪಿದೆ. ಎಲ್ಲರೂ ಈ ಅತಿವಿಲಂಬಿತ ಲಯವನ್ನು, ನಿರಂತರತೆಯನ್ನು, ರಂಗದಲ್ಲಿನ ಪಾತ್ರ ಸಂಯೋಜನೆಯನ್ನು ದಕ್ಕಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಮತ್ತು ದಕ್ಕಿಸಿಕೊಂಡು ತಲೆಕೆಡಿಸಿಕೊಂಡಿದ್ದಾರೆ ಕೂಡ. ಹಾಗಿರುತ್ತ ಕೆಲವರಿಗೆ ಇದೊಂದು ಹುಚ್ಚರ ವ್ಯಾಪಾರವಾಗಿ ಕಾಣಿಸಿದ್ದರೆ ಅದೂ ಕೂಡ ಒಂದು ಬಗೆಯ ಸಾಧ್ಯತೆ ಎಂದೇ ತಿಳಿದುಕೊಳ್ಳಬಹುದು. ಯಾಕೆಂದರೆ, ನಮಗೆ ನಾವು, ಬದುಕು, ಮನುಷ್ಯ ಮತ್ತು ಮನಸ್ಸು ಸರಿಯಾಗಿ ಅರ್ಥವಾಗಿದೆ ಎನ್ನುವ ಧೈರ್ಯವುಳ್ಳವರು ಯಾರಾದರೂ ಇದ್ದಾರೆಯೇ ಎನ್ನುವುದು ಅನುಮಾನವಾಗಿರುತ್ತ ಅನೇಕ ಬಾರಿ ನಮಗೆ ನಮ್ಮ ಹಾಗೂ ಬೇರೆಯವರ ವರ್ತನೆ `ಎಂಥ ಹುಚ್ಚು!’ ಎಂಬ ಉದ್ಗಾರಕ್ಕೆ ಕಾರಣವಾಗುತ್ತಲು ಇರುವಾಗ ಇಂಥ ಪ್ರತಿಕ್ರಿಯೆ ಕೂಡಾ ವಿಶೇಷವಲ್ಲ. ಹೇಳುವುದಾದರೆ ಮನುಷ್ಯನಿಗೆ ಏನಾದರೂ ಒಂದು ಹುಚ್ಚು ಇರುವುದು ಒಳ್ಳೆಯದು ಎನ್ನುತ್ತಾರೆ!

ಮೂರನೆಯ ಮತ್ತು ಕೊನೆಯ ಮಾತಾಗಿ ಹೇಳಬಹುದಾದರೆ, ಬರವಣಿಗೆ ಒಂದು ಸಹಜವಾದ ಕ್ರಿಯೆ ಎಂದು ತಿಳಿಯಬೇಕಿಲ್ಲವೇನೊ. ಸಹಜ ಎಂದು ನಾವು ಹೇಳುವುದು ಎಲ್ಲರೂ ಇರುವ ಹಾಗೆ ನಾವೂ ಇರುವುದನ್ನು – ಅಲ್ಲವೆ! ಎಲ್ಲರೂ ಬರೆಯುವುದಿಲ್ಲವಲ್ಲ! ಮತ್ತೆ ಪ್ರಖ್ಯಾತ ಬರಹಗಾರರಲ್ಲಿ (ಪಾಶ್ಚಾತ್ಯ ಲೇಖಕರು ಎಂದಿರಲಿ) ಅನೇಕರು ಹುಚ್ಚಾಸ್ಪತ್ರೆಗೆ ಭೇಟಿ ನೀಡಿದ, ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಕೂಡ ಸಾಕಷ್ಟಿವೆಯಲ್ಲ! ಹುಚ್ಚು ಮತ್ತು ಸಹಜಗಳ ನಡುವೆ ಇರುವ ಒಂದು ತೆಳ್ಳನೆಯ ಗೆರೆ-ಯನ್ನು ಯಾರು ಯಾವಾಗ ಎಲ್ಲಿ ಎಳೆಯುತ್ತಾರೆ ಎಂದು ಹೇಳುವುದು ಕಷ್ಟ. ಹಾಗಾಗಿ ನಾಟಕಕಾರ, ನಾಟಕ ಆಡಿದವರು, ನಿರ್ದೇಶಕ ಎಲ್ಲರನ್ನೂ ಸಾಲಾಗಿ ನಿಮ್ಹಾನ್ಸ್‌ನ ಚೆಕಪ್‌ಗೆ ಕಳಿಸುವುದೊಳ್ಳೆಯದು ಎನ್ನುವಾಗ ಈ ನಾಟಕಕ್ಕೆ ಕರೆದುಕೊಂಡು ಹೋದ ನೀವು, ನೋಡಿ ಖುಶಿಪಟ್ಟ ನಾವು, ಇರುವ ಇಲ್ಲದ ಅರ್ಥವನ್ನೆಲ್ಲ ಹುಡುಕಿ ಹುಡುಕಿ ಜಾಣರಾಗುವ ಉಮೇದು ತೋರಿಸುವುದರಲ್ಲಿದ್ದ ನನ್ನಂಥವರು ನಮ್ಮ ಮೆಚ್ಚುಗೆಯನ್ನು ಕೂಡ ಮರು ವಿಮರ್ಶಿಸಿಕೊಳ್ಳುವಂತಾಗಿದ್ದು ನಿಜವೇ ಅಲ್ಲವೆ! ಮತ್ತೆ ಅಂಥ ಮರುವಿಮರ್ಶೆಯ ನಂತರವೂ ನಾಟಕದ ಬಗ್ಗೆ ನನಗೆ ಮೆಚ್ಚುಗೆಯೇ ಉಳಿಯಿತು

 

‍ಲೇಖಕರು G

18 May, 2011

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. prasadraxidi

    modamodalige hindustaani sngeetha keluvaaga nnanage, haaduvavanige enu kayileppa yaake heege aluttane annisthitthu…!!!
    water-station natkavoo ashte..adondu Dyhaanadanthaha sthiti…
    nododnna nidhaanavaagi abhyasa maadbeku…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading