ಮನಸ್ಸೆಂಬ ಹುತ್ತದಲ್ಲಿಯೇ ಹಾವಿನ ಠಾವು…

ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ


ಡಾ. ಬಾಳಾಸಾಹೇಬ ಲೋಕಾಪುರ ಅವರ ಹುತ್ತ ಕಾದಂಬರಿ ಓದಿ ಮುಗಿಸಿದೆ. ಮನಸು ಹುತ್ತದ ಒಳಹೊಕ್ಕು ಬೆವೆತು ಹೊರಬಂದಂತಹ ಅನುಭವವಾಯ್ತು.

ಕುತೂಹಲದ ಕಣ್ಣಿನಿಂದ ಓದಿದಾಗ ಕುತೂಹಲಕಾರಿಯಾಗಿಯೂ, ಸಾಮಾಜಿಕ ನೆಲೆಯಲ್ಲಿ ಓದಿದಾಗ ಸಾಮಾಜಿಕವಾಗಿಯೂ, ಧಾರ್ಮಿಕ ನೆಲೆಗಟ್ಟಿನಲ್ಲಿ ಓದಿದಾಗ ಧಾರ್ಮಿಕವಾಗಿಯೂ ಮತ್ತು ವಾಸ್ತವದ ಹಾದಿಯಲಿ ನಿಂತು ನೋಡಿದಾಗ ಸ್ವಲ್ಪ ಗಂಭೀರವಾಗಿಯೂ, ಸ್ವಾತಂತ್ರ್ಯದ ಸಂಧರ್ಭದ ಕಾಲಘಟ್ಟದಲ್ಲಿ ನಿಂತು ನೋಡಿದಾಗ ಹೋರಾಟಮಯವೂ, ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ನಿಂತು ನೋಡಿದಾಗ ದಯನಿಯವಾಗಿಯೂ ಕಾದಂಬರಿ ಎಲ್ಲರೀತಿಯಲ್ಲಿಯೂ ನಮಗೆ ದಕ್ಕುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಎಲ್ಲ ಪಾತ್ರಗಳೂ ಇಲ್ಲಿ ಜೀವಪಡೆದುಕೊಂಡಿವೆ. ಎಲ್ಲ ಪರಿಚಯದ ಊರುಗಳಾದ ನಂದಗಾಂವ ಶಿರಿಹಾಡಿ (ಶಿರಹಟ್ಟಿ), ಕೊಕಟನೂರು, ಅಥಣಿ, ಬೆಳಗಾಂವಿ, ತೇರದಾಳ ಈ ಊರುಗಳೆಲ್ಲ ಇಲ್ಲಿ ಕಣ್ಮುಂದೆ ಬಂದುಹೋದವು. ಮತ್ತೆ ಇದು ನನ್ನದೇ ಊರಿನಲ್ಲಿ ನಡೆಯುತ್ತಿರುವ ಕಥಾಹಂದರ ಎಂಬಂತೆ ಭಾಸವಾಗುತ್ತಿತ್ತು.

ಹಾವಿನ ಹುತ್ತ ಒಂದು ಕಡೆಯಾದರೆ ಮನುಷ್ಯನ ಮನಸ್ಸೆಂಬ ಹುತ್ತದಲ್ಲಿ ಅದೇನೆನೆಲ್ಲ ಅಡಗಿದೆಯೋ ಅದೆಂತೆಂಥ ವಿಚಾರಗಳು (ಧನಾತ್ಮಕ ಮತ್ತು ಋಣಾತ್ಮಕ) ಓಡಾಡುತ್ತಿರುತ್ತವೆಯೋ ಇದನ್ನು ಯಾರೂ ಅಳೆದು ತೂಗಿ ನೋಡಲು ಸಾಧ್ಯವಿಲ್ಲ ಎನ್ನುವ ವಿಷದಷ್ಟೇ ಸತ್ಯದ ಎಳೆಯಲ್ಲಿ ಕಾದಂಬರಿ ಇಷ್ಟವಾಗುತ್ತದೆ.

ಕಾದಂಬರಿಯಲ್ಲಿ ಬರುವ ಒಂದೊಂದು ಪಾತ್ರವೂ ನಮ್ಮ ಬದುಕಿನ ಭಾಗವೇ ಹೌದು. ಧಾರ್ಮಿಕ ನೆಲೆಯಲ್ಲೇ ಹೆಚ್ಚು ವಿಸ್ತಾರಗೊಳ್ಳುವ ಕಾದಂಬರಿ ಜೈನ ಧರ್ಮದ ಆಚಾರ ವಿಚಾರಗಳನ್ನು ದಾಖಲಿಸುತ್ತಲೇ ಮಾರ್ಗದರ್ಶನ ಮಾಡುತ್ತ ಸಾಗುತ್ತದೆ. ಒಮ್ಮೆ ಆಚರಣೆ ಮುಖ್ಯವಾದರೆ ಮತ್ತೊಮ್ಮೆ ಆಚರಣೆ ಬೇಡವಾಗುವ ಎರಡೂ ಮುಖಗಳ ಪರಿಚಯವನ್ನು ಡಾ.ಬಾಳಾಸಾಹೇಬ ಲೋಕಾಪೂರ ಅವರು ಇದರಲ್ಲಿ ಆಳವಾಗಿ ಮತ್ತು ತುಂಬ ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ.

ಆಗಾಗ ಬಂದು ಹೋಗುವ ತೀರ್ಥಂಕರರ ಪರಿಚಯ, ಪದ್ಮಾವತಿಯ ಪರಿಚಯ, ಶಾಂತಲಾದೇವಿಯ ಪರಿಚಯ ಮತ್ತವರ ಸಂದೇಶಗಳು ಸಾಂಧರ್ಭಿಕವಾಗಿ ಕಾದಂಬರಿಯ ಶ್ರೇಷ್ಟತೆಯನ್ನು ಹೆಚ್ಚುಸುತ್ತವೆ. ಕಾದಂಬರಿಕಾರರು ಇದನ್ನು ಬಳಸಿಕೊಳ್ಳುವಲ್ಲಿ ವಿಶೇಷವಾದ ಚಾಣಾಕ್ಷತೆಯನ್ನು ಮೆರೆದಿದ್ದಾರೆ. ಶಿರಿಹಾಡಿಯ ಸಾಂಪ್ರದಾಯಿಕ, ಧಾರ್ಮಿಕ , ಸಾಮಾಜಿಕ ಚೌಕಟ್ಟುಗಳನ್ನು ಎಳೆಎಳೆಯಾಗಿ ವಿವರಿಸುತ್ತ ಓದುಗರೆದೆಯಲ್ಲಿ ಒಂದು ಹುತ್ತವನ್ನೇ ನಿರ್ಮಿಸಿ ಹಾವಾಗಿ ಹರಿದಾಡಿ ಬಿಡುತ್ತಾರೆ.

ಅಹಿಂಸೆಯ ಹಿಂದೆ ಮತ್ತು ಹಿಂಸೆ-ಅಹಿಂಸೆಗಳು ಎದುರು ಬದುರಾದರೆ ಎಷ್ಟೊಂದು ಹಿಂಸೆಗಳು ನಡೆದು ಹೋಗುತ್ತವೆ. ಜೈನ ಧರ್ಮದ “ಅಂಹಿಂಸಾ ಪರಮೋ ಧರ್ಮ” ಎಂಬ ಧ್ಯೇಯವಾಕ್ಯವನ್ನು ಧಾರ್ಮಿಕವಾಗಿ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರೂ ಚೌಕಟ್ಟಿನಾಚೆ ನಿಂತು ನೋಡಿದಾಗ ಅಹಿಂಸೆಯ ಪ್ರತಿಪಾದಕರಾದ ಗಾಂಧಿ ಹಿಂಸೆಯಿಂದಲೇ ಕೊನೆಯಾದದ್ದನ್ನು ಇಲ್ಲಿ ಸಮೀಕರಿಸಿ ತುಂಬಾ ವಿಭಿನ್ನವಾಗಿ ಕಾದಂಬರಿಯುದ್ದಕ್ಕು ಹೇಳುತ್ತ ಸಾಗುತ್ತಾರೆ.

ಊರು-ಕೇರಿ ಎರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕೇರಿಯ ಜನರ ಮೇಲಿದ್ದ ಅಪವಾದಗಳನ್ನು, ಕೇರಿ ಜನರು ಅನುಸರಿಸಬೇಕಾದ ನೀತಿ ನಿಯಮಗಳನ್ನು ಹೇರುವಿಕೆ ಮತ್ತು ವಿರೋಧಿಸುವಿಕೆಯ ಎಳೆಗಳನ್ನು ಮತ್ತು ಮೇಲ್ವರ್ಗದವರು ಸಂಶಯಾಸ್ಪವಾದ ಕಣ್ಣಿನಿಂದ ಕೇರಿಯವರನ್ನು (ಕೆಳವರ್ಗದವರನ್ನು) ಕಾಣುವ ರೀತಿಯನ್ನು ಕೂಡಾ ಕಾದಂಬರಿಯಲ್ಲಿ ಅಷ್ಟೇ ಮುಕ್ತವಾಗಿ ಕಟ್ಟಿಕೊಡುತ್ತಾರೆ.

ಕಾದಂಬರಿಕಾರರು ಊರಿನ ಜೈನ ಸಮುದಾಯದ ಹಿರಿಯ ಭೀಮುಕಾಕನ ಪಾತ್ರವನ್ನು, ಮತ್ತವನ ಬದುಕಿನ ರೀತಿಯನ್ನು ಓದುಗನ ಕಣ್ಣಮುಂದಿರಿಸಿಬಿಡುತ್ತಾರೆ. ಇನ್ನು ಕೇರಿಯ ಶಿವರುದ್ರ ಕಾದಂಬರಿಯ ವಿಲನ್ ಪಾತ್ರಧಾರಿಯಾಗಿ ಓದುಗನನ್ನು ಅಲುಗಾಡದಂತೆ ಕೊನೆಯವರೆಗೂ ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ.

ಅವನು ಜೈನ ಧರ್ಮದ ಆಚಾರಗಳ ವಿರೋಧಿಯಂತು ಅಲ್ಲ ಬದಲಾಗಿ ದರ್ಪದಿಂದ ಮೆರೆಯುವವರ ವಿರೋಧಿ. ತನ್ನ ತಂಗಿಯ ನಡೆಯನ್ನೇ ಸಹಿಸದೆ ಸ್ವತಃ ತಾನೆ ಕೊಲೆ ಮಾಡಿಸುವುದರ ಮೂಲಕ ತನ್ನತನವನ್ನು, ತನ್ನ ಧಾರ್ಮಿಕತೆಯನ್ನು ಕೂಡಾ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿ ವ್ಯಕ್ತಿಧರ್ಮದ ನಾಯಕನಾಗಿ ಕಾಣುತ್ತಾನೆ.

ಹೊಡೆದಾಟ, ಕಲ್ಲುತೂರಾಟ, ಹಗೆತನ, ದ್ವೇಷ, ಅಸಹನೆ, ಇವೆಲ್ಲದರ ನಡುವೆ ಮನಸ್ಸಿಗಂಟಿದ ಕತ್ತಲು ಮತ್ತು ಭಯಹುಟ್ಟಿಸುವ ಕತ್ತಲು (ಹುತ್ತದಂತೆಯೇ) ಕೃಷ್ಣೆಯಂತೆಯೇ ಮೌನವಾಗಿ ಹರಿದಾಡುವ ಪರಿ ಕಾದಂಬರಿಯ ಮೂಲವಸ್ತುವಾಗಿ ಗೋಚರಿಸುತ್ತದೆ.

ಸಾಂಸಾರಿಕ ನೆಲೆಯಲ್ಲಿ ಜೈನ ಸಂಪ್ರದಾಯದ ವ್ರತಗಳನ್ನು ದಾಖಲಿಸುತ್ತಲೇ ಧಾರ್ಮಿಕವಾಗಿ ಮನುಷ್ಯ ಮೊದಲು ಮನುಷ್ಯ ಧರ್ಮದ ಮೂಲದವನಾಗಿರಬೇಕು ನಂತರವೇ ಎಲ್ಲ ಎಂಬುದನ್ನು ಸೂಕ್ಷ್ಮವಾಗಿ ಹೇಳುತ್ತಲೇ ಜೈನಧರ್ಮದ ಸಾರವನ್ನು ಕಾದಂಬರಿಯ ಮೂಲಕ ತಿಳಿಹೇಳುತ್ತ ಜಿನ ತತ್ವವನ್ನು ಎತ್ತಿಹಿಡಿಯುತ್ತ ಸಾಗುವ ಕಾದಂಬರಿ ಕೆಲವೊಂದು ಕಡೆ ಇದರ ಅವಶ್ಯಕತೆ ಇಲ್ಲವೆನಿಸಿದರೂ ಅದನ್ನು ವಿವರಣಾತ್ಮಕವಾಗಿ ತಿಳಿಯುವಂತೆ ಮಾಡಲು ಅದರ ಪ್ರಯೋಗವನ್ನು ಮಾಡಿದ್ದಾರೆ ಎನಿಸುತ್ತದೆ.

ಆದರೂ ಒಳ್ಳೆಯದನ್ನು ಒಳ್ಳೆತನವನ್ನು ಬಿತ್ತರಿಸುತ್ತಲೇ ಕಾದಂಬರಿಯನ್ನು ವಿಸ್ತಾರಗೊಳಿಸುತ್ತಾರೆ. ರಾವಸಾಬ, ಜಿನ್ನಪ್ಪ, ಚಂಪವ್ವ, ಬುದ್ದವ್ವ, ನಿರ್ಮಲಾ, ಈ ಎಲ್ಲ ಪಾತ್ರಗಳ ಮೂಲಕ ಸಮಾಜದ ಯಾವುದೇ ಸಮುದಾಯಕ್ಕೆ ಸೇರಿದವರಾದರೂ ಸಾಮಾನ್ಯವಾಗಿ ಯೋಚಿಸುವ ಮತ್ತು ಸಾಮಾನ್ಯವಾಗಿ ಬದುಕುವ ರೀತಿಯನ್ನು ಇಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ.

ಜಿನ್ನಪ್ಪನ ಹೆಂಡತಿ ಪದ್ಮಾವತಿಯ ಎರಡನೇ ಹೆರಿಗೆಯ ಸನ್ನಿವೇಶವನ್ನಂತೂ ಓದುತ್ತಲಿದ್ದರೆ ಮೈ ರೋಮಗಳೆದ್ದು ನಿಲ್ಲುತ್ತವೆ. ತಾಯಿಯನ್ನು ಉಳಿಸುವ ಗದ್ದಲದಲ್ಲಿ ಹಸುಗೂಸನ್ನು ಮರೆತು ಸಂಭವಿಸಿದ ಆ ಅನಾಹುತವಿದೆಯಲ್ಲ ಅದನ್ನು ವಿವರಿಸಲೂ ಕೂಡಾ ಧೈರ್ಯ ಸಾಲದು ಎಂಬಂತೆ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಮನುಷ್ಯನಿಂದಲೇ ತಪ್ಪುಗಳಾದಾಗ ಹೇಗೊ ಸಹಿಸಿಕೊಳ್ಳುವ ಮನುಷ್ಯ ತಪ್ಪು ಮಾಡಿದ್ದಕ್ಕೆ ಪಶ್ಚಾತಾಪ ಪಟ್ಟು ಮರೆತುಬಿಡುತ್ತಾನೆ. ಅದೇ ದೇವರು ಮಾಡಿದ ಪಾಪವೇನಾದರೂ ಇದ್ದರೆ ಅದನ್ನು ಸಾಯುವವರೆಗೂ ಶಪಿಸುತ್ತಲೇ ಬದುಕುವ ಮನುಷ್ಯನ ಮನಸ್ಸಿನ ಕನ್ನಡಿಯನ್ನು ಇಲ್ಲಿ ತೆರೆದಿಡುತ್ತಾರೆ.

ಸಿದ್ದು ಮಾಸ್ತರನ ಪಾತ್ರವು ಒಂದು ಅಂತ್ಯವಾಗದ ಕಥೆಯಾಗಿ ಉಳಿಯುತ್ತದೆ. ಆದರೂ ಮಾಸ್ತರನಿಗೆ ಕೊಡುವ ಗೌರವ “ಮೊದಮೊದಲಿಗೆ ಚೆನ್ನಾಗಿಯೆ ಇತ್ತು ಮತ್ತು ಅವರ ಕಲಿಕೆಯಿಂದ ಬದಲಾವಣೆನೂ ಆಗಿತ್ತು.. ಅನ್ನ ರೊಟ್ಟಿ ಹಾಕಿದಮ್ಯಾಲ ಮಡಿಚಟ್ಟು ಮೈಲಿಗೆಯ ಬಗ್ಗೆ ಹೆಂಗಸರು ಮಾತನಾಡುವದು ಸ್ವಲ್ಪವೂ ಸರಿ ಎನಿಸದಿದ್ದರೂ.. ಧಾರ್ಮಿಕತೆಯ ನೆಲೆಯಲ್ಲಿ ಅವನದ್ದು ಮೇಲುಕೀಳು ಎನ್ನದೇ ಕಲಿಸುವ ಧರ್ಮ ಜನರದ್ದು ಕೇವಲ ಧರ್ಮ ಅಷ್ಟೇ.”

ದರ್ಪದ, ಪ್ರತಿಷ್ಠೆಯ ಸಂಕೇತಗಳಾಗಿರುವ ಕೊಡಲಿ, ಕುಡಗೋಲು, ಹತಾರು, ಬಂದೂಕುಗಳಂತೂ ಇಲ್ಲಿ ಕೇವಲ ಪ್ರದರ್ಶನದ ವಸ್ತುಗಳಾಗಿಯೇ ಕಂಡರೂ ಅಹಮಿಕೆಯ ಹುತ್ತದೊಳಗಿನ ಹಾವುಗಳಂತೆ ಹೆದರಿಕೆಯನ್ನಂತು ಉಂಟುಮಾಡುತ್ತಿದ್ದವು.

ಕಲ್ಲುಗಳು ಮಾತ್ರ ತನ್ನ ಶಕ್ತಿಪ್ರದರ್ಶನ ಮಾಡುತ್ತಿದ್ದವು. ತನ್ನ ತಂಗಿ ನಾಗಿ ಮತ್ತು ರಾವಸಾಬನ ಕೊಲೆಯಿಂದಲೇ ತನ್ನತನವನ್ನು ತನ್ನ ಇರುವಿಕೆಯನ್ನು ಸಾಬೀತುಪಡಿಸಿಕೊಂಡ ಶಿವರುದ್ರ ಜೈಲುವಾಸ ಅನುಭವಿಸಿ ಬರಲು ಬಂದೂಕುಗಳೆಲ್ಲ ವ್ಯರ್ಥವೆನ್ನುವಂತಹ ತೀರ್ಮಾನಕ್ಕೆ ಬಂದ.

ಊರಿನ ಯುವಕರೆದೆಯಲ್ಲಿ ಹೊಡೆದಾಟ ಬಡಿದಾಟಗಳೆಲ್ಲ ಸಲ್ಲೇಖನ ವ್ರತದ ಮಾದರಿ ಅನುಸರಿಸಿದವು. ಆಸೆಗಳಿಗೆ ಕಡಿವಾಣ ಹಾಕಿಕೊಂಡು ಬಿತ್ತಿದಷ್ಟೇ ಬೆಳೆ ಬರುವುದು ಎಂಬ ಸತ್ಯದೊಂದಿಗೆ ಬದುಕುವ ಪಾಠದ ಅರಿವಾಗುವ ಹೊತ್ತಿಗೆ ಬಸನಿಂಗನ ಹೊಲದಲ್ಲಿದ್ದ ಹುತ್ತದ ಹಾವುಗಳು ಊರತುಂಬೆಲ್ಲ ಹರಡಿ ಮತ್ತದೇ ಭಯದ ವಾತಾವರಣವನ್ನು ಹುಟ್ಟುಹಾಕಿ ಬದುಕಿನಲ್ಲಿ ಬದುಕುವ ಧೈರ್ಯ ಮತ್ತು ಬದುಕಿನ ಭಯ ಎರಡೂ ಇರಬೇಕೆಂಬುದನ್ನು ಹೇಳುವುದರ ಮೂಲಕ ಕಾದಂಬರಿ ಸಂಪನ್ನವಾಗುತ್ತದೆ.

‍ಲೇಖಕರು Avadhi

August 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: