ಚನ್ನಮಲ್ಲಿಕಾರ್ಜುನನೆಂಬ ಬೆಳಕು ಕಾಯವೆಂಬ ನೆಳಲು.

ಗಿರಿಜಾಶಾಸ್ತ್ರಿ
ಮುಂಬೆಳಕು ಕನ್ನಡ ಬಳಗವು ಆಯೋಜಿಸಿದ ಸದಾನಂದ ಸುವರ್ಣ ದತ್ತಿ ಉಪನ್ಯಾಸವನ್ನು(2016) ಎಂ. ಕೆ. ಶಂಕರ್ ಅವರ ‘ನಾಟಕ ಮತ್ತು ಅವಕಾಶ’ ಎನ್ನುವ ವಿಷಯದ ಕುರಿತು ತಮ್ಮ ಮಾತು/ ಪ್ರಾತ್ಯಕ್ಷಿಕೆಯ ಮೂಲಕ ವಿಶಿಷ್ಟವಾಗಿ ನಡೆಸಿಕೊಟ್ಟರು.
ಅದನ್ನು ನೋಡಿದಾಕ್ಷಣ ನನ್ನ ಕಣ್ಣಮುಂದೆ ಸುಳಿದದ್ದು ಅಕ್ಕಮಹಾದೇವಿಯ ‘ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ’ ಎನ್ನುವ ವಚನ.
ಶಂಕರ್ ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಅಕ್ಕ ಇನ್ನೂ ಹೆಚ್ಚು ಸ್ಪಷ್ಟವಾಗತೊಡಗಿದಳು. ಅಕ್ಕನ ಈ ವಚನವನ್ನು ಎಷ್ಟು ಸಲ ಕೇಳಿಲ್ಲ? ಆದರೆ ಆಗೆಲ್ಲಾ ಹೊಳೆಯದ ವಿಷಯಗಳು ಈಗೇಕೆ ಮುನ್ನೆಲೆಗೆ ಬರುತ್ತಿವೆ ಎಂಬ ಅಚ್ಚರಿಯಲ್ಲಿಯೇ ಈ ಮಾತುಗಳನ್ನು ಬರೆಯುತ್ತಿದ್ದೇನೆ.

ಕಾಯದ ನೆಳಲು ಎನ್ನುತ್ತಾಳೆ ಅಕ್ಕ . ಈ ನೆಳಲು ಕಾಯದ ಬೆನ್ನಟ್ಟಿ ಬರುವ ಕೇವಲ ಭೂತದ ನೆಳಲು ಮಾತ್ರ್ರವಲ್ಲ. ನಮ್ಮ ಮುಂದೆ ಧುತ್ತನೇ ಬಂದೆರಗುವ ಭವಿಷ್ಯದ ಭಯವೂ ಕೂಡ. ಚನ್ನಮಲ್ಲಿಕಾರ್ಜುನನೆಂಬ ಬೆಳಕಿನ ಮುಂದೆ ನಮ್ಮ ಕಾಯದ ಚಲನೆಯನ್ನು ಬದಲಾಯಿಸಿದಂತೆಲ್ಲಾ ನೆಳಲಿನ ಸ್ವರೂಪವೂ, ಅದು ಹಾಯುವ ದಿಕ್ಕೂ ಬದಲಾಗುತ್ತದೆ. ಈ ನೆಳಲು ಬೆಳಕಿನ ಆಟವೆಂಬುದು ಚನ್ನಮಲ್ಲಿಕಾರ್ಜುನ ನಮ್ಮ ಮುಂದೆ ಒಡ್ಡಿದ ಮಾಯೆ ಎನ್ನುತ್ತಾಳೆ ಅಕ್ಕ. ಆದುದರಿಂದ ಈ ‘ಮಾಯೆಯನಾರೂ ಗೆಲಬಾರದು’ -ಗೆಲ್ಲಲುಬಾರದು . ಗೆಲ್ಲಲು ಸಾಧ್ಯವಿಲ್ಲ. ಅಕ್ಕನ ಪ್ರಕಾರ ಇದು, ಪ್ರಾಣಕ್ಕೆ ಮನಸ್ಸು, ಮನಸ್ಸಿಗೆ ನೆನಪು, ನೆನಪಿಗೆ ಅರಿವು, ಅರಿವಿಗೆ ಮರೆವು ಹೂಡಿದ ಮಾಯೆ.
ನಮ್ಮ ವಚನ ಸಾಹಿತ್ಯದಲ್ಲಿಯೇ ಏಕೆ, ಇಡೀ ಕನ್ನಡ ಸಾಹಿತ್ಯದಲ್ಲಿಯೇ ಅಕ್ಕನ ಹಾಗೆ ಬಹುಶಃ ಕಾಯದ ಬಗ್ಗೆ ಇಷ್ಟು ತೀವ್ರವಾಗಿ ಮಾತಾಡಿದವರಿಲ್ಲ.
ಈ ಕಾಯಕ್ಕೆ ಒಂದು ದೇಶ, ಕಾಲ, ಮತ್ತು ಕ್ರಿಯೆಗಳ ಮಿತಿ ಇದೆ. ಅದಕ್ಕೆ ಕಾಲುಗಳಂತೆಯೇ ಕಾಲದ ಹಂಗಿದೆ. ಅದರ ಚಲನೆಗೆ ಮಿತಿ ಇರುವಂತೆ ಅದರ ಕ್ರಿಯೆಗಳಿಗೂ ಮಿತಿ ಇದೆ. ಕಾಲ ಸ್ಥಳ ಮತ್ತು ಕ್ರಿಯೆಗಳು ಒಂದು ಸೀಮಿತ ಪರಿಧಿಯಲ್ಲಿ ಕಾಯದೊಳಗೆ ಐಕ್ಯಗೊಳ್ಳುತ್ತವೆ. ಆದರೆ ಕಾಯದ ಗೂಡೊಳಗೇ ಇರುವ ಮನಸ್ಸಿಗೆ ಕಾಲದ ಹಂಗಿಲ್ಲ. ಚಲಿಸಲು ಕಾಲುಗಳೇಕೆ ರೆಕ್ಕೆಗಳ ಹಂಗೂ ಇಲ್ಲ.
ಏಕಕಾಲಕ್ಕೆ ಅನೇಕ ಕ್ರಿಯೆಗಳಲ್ಲಿ ತೊಡಗಿಕೊಳ್ಳುವ ಅನೇಕ ದೇಶ ಕಾಲಗಳಲ್ಲಿ ಚಲಿಸುವ ಅದರದು ಕಬಂಧಬಾಹು. ಆಕಾಶವೇ ಅದರ ಮಿತಿಯಲ್ಲ ಅದರಾಚೆಗೂ ಅದು ವಿಸ್ತರಿಸಬಲ್ಲುದು. ಕಾಯ ಕಟ್ಟಿಕೊಂಡ ಸಾಮಾಜಿಕ ಸಂರಚನೆಗಳಿಗೆ ಅದು ಸೊಪ್ಪುಹಾಕುವುದಿಲ್ಲ. ಕಾಯ ಬಯಲಿಗೆ ಬೇಲಿಯನ್ನು ಕಟ್ಟಲು ಪ್ರಯತ್ನಿಸಿದರೆ ಮನಸ್ಸು ಅದನ್ನು ಸದಾ ಹಾರಲು ಪ್ರಯತ್ನಿಸುತ್ತದೆ. ಹೀಗಾಗಿ ಕಾಯದ ಅವಕಾಶ ಮತ್ತು ಮನಸ್ಸಿನ ಅವಕಾಶಗಳು ಬೇರೆ ಬೇರೆಯೇ ಆದರೂ ಅವು ಒಂದರೊಳಗೊಂದು ಇವೆ. (ಮನಸ್ಸಿನ ಅವಕಾಶದೊಳಗೇ ಕಾಯದ ಅವಕಾಶ, ಕಾಯದೊಳಗೆ ಮನಸ್ಸಿನ ಅವಕಾಶ!)
ಹೀಗೆ ಒಂದು ಜ್ಯಾಮಿತಿಗೆ ಸೀಮಿತವಾದ ಕಾಯ ತನ್ನ ವಿರುದ್ಧ ದಿಕಿನಲ್ಲಿ ಓಡುವ ಸೀಮಾತೀತವಾದ ಮನಸ್ಸನ್ನು ನಿಭಾಯಿಸಬೇಕಾಗಿದೆ. ಹೀಗೆ ಮಾಡುವಾಗ ಉಂಟಾಗುವ ಸಂಘರ್ಷವೇ ನಾಟಕದ ಮೂಲ ಎನ್ನುತ್ತಾರೆ ಶಂಕರ್. ಅಕ್ಕನ ಪ್ರಕಾರ ಇದು ಚನ್ನಮಲ್ಲಿಕಾಜುನನೆಂಬ ಬೆಳಕು ಮತ್ತು ಕಾಯದ ನೆಳಲಿನ ಜೊತೆಗಿನ ಆಟ. ಈ ಸಂಘರ್ಷಕ್ಕೆ ಕಾರಣ ಅರಿವಿನ ಕೊರತೆ ಎನ್ನುತ್ತಾರೆ ನಮ್ಮ ವಚನಕಾರರು. ನೆನಪು ಮತ್ತು ಪ್ರಾಣದ ಸಹಕಾರದಿಂದ ಮನಸ್ಸು ಈ ಅರಿವಿಗೆ ವಿಸ್ಮೃತಿಯನ್ನು ಹೊದೆಸಿಬಿಟ್ಟಿದೆ. ಅದನ್ನು ಈ ವಿಸ್ಮೃತಿಯಿಂದ ಜಾಗೃತಗೊಳಿಸಬೇಕಾಗಿದೆ. ಹಾಗೆ ಜಾಗೃತಗೊಳಿಸಬೇಕೆಂದರೆ ಮನಸ್ಸಿನ ರೆಕ್ಕೆಗಳನ್ನು ಕತ್ತರಿಸಬೇಕಾಗಿದೆ. ಮನಸ್ಸಿನ ದೇಶಕಾಲ ಮತ್ತು ಕ್ರಿಯೆಗಳು, ಕಾಯದ ದೇಶಕಾಲ ಕ್ರಿಯಗಳ ಜೊತೆಗೆ ಸಮೀಕರಣಗೊಳ್ಳಬೇಕಾಗಿದೆ. ನಮ್ಮ ಧ್ಯಾನದ ಪರಿಕಲ್ಪನೆಯ ಮೂಲವೂ ಇಂತಹ ಒಂದು ಯೋಗರೂಪಿಯೇ ಆಗಿದೆ.
ಈ ಕಾಯ ತನ್ನ ಹುಟ್ಟಿನಲ್ಲಿ ಕೇವಲ ಎಲ್ಲವನ್ನೂ ಗಮನಿಸುವ ವಿಸ್ಮಯದ ಒಂದು ಘಟಕವಷ್ಟೇ. ಆದರೆ ಕಾಯದ ಹುತ್ತ ಬೆಳೆದಂತೆಲ್ಲಾ ಮನಸ್ಸೆಂಬ ಸರ್ಪಗಳು ಅದರೊಳಗೆ ಬಂದು ಮನೆಮಾಡಿಕೊಳ್ಳುತ್ತವೆ. ಸರ್ಪಗಳು ಎಂದಾಕ್ಷಣ ಅವು ಕ್ರೂರ ಎಂದಾಗಬೇಕಿಲ್ಲ. ಪ್ರಕೃತಿಯಲ್ಲಿ ಯಾವುದೂ ಕ್ರೂರವಲ್ಲ. ಕ್ರೌರ್ಯವೆನ್ನುವುದು ಮನುಷ್ಯ ಸ್ವಾರ್ಥ ಕಲ್ಪನೆಗೆ ದಕ್ಕಿದ ಒಂದು ಅಳತೆ ಅಷ್ಟೆ.
ಅಖಂಡ ಪ್ರಕೃತಿಯ ಭಾಗವೇ ಆದ ಅವುಗಳಿಗೆ ಶಿವಸನ್ನಿಧಿಯೂ ದೊರೆತಿದೆ, ನಾರಾಯಣ ಅದರ ಮೇಲೆ ಮಲಗುತ್ತಾನೆ. ಭೂಮಿ ಅದರ ಮೇಲೆ ನಿಂತಿದೆ ಎಂಬ ನಂಬಿಕೆಯನ್ನು ಇಲ್ಲಿ ಮರೆಯಬಾರದು. ಮನಸ್ಸೆಂಬ ಸರ್ಪ ಮನೆಯಲ್ಲಿ ಕಾಯವೆಂಬ ಆಡುವ ಮಗುವನ್ನು ಬಿಟ್ಟು ಲೋಕ ಸಂಚಾರಕ್ಕೆ ಹರಿದುಹೊರಟು ಹೋಗುತ್ತದೆ. ಅದರ ದೈತ್ಯ ರಿಂಗಣಗುಣಿತಕ್ಕೆ ಮನೆ, ಮಾಡು ಪರ್ವತಗಳೇ ಬಿದ್ದು ಹೋಗುವಾಗ, ಸಾಗರಗಳ ಢಕ್ಕಾಢಿಕ್ಕಿಯಲ್ಲಿ ಹೊಸ ಹೊಸ ಭೂ ಪ್ರದೇಶಗಳು ಉಕ್ಕಿ ಮೇಲ್ಮೈಗೆ ಬರುವಾಗ, ದೇಶದೇಶ ಕಾಲ ಜನಾಂಗಗಳು ನಿನರ್ಾಮಹೊಂದುವಾಗ, ಪಾಪದ ತಡಿಕೆ ಏನುಮಾಡೀತು? ಮನೆಯೊಳಗಿನ ‘ಮಗು’ ಕರೆಯದೇ ಮನಸ್ಸು ಮತ್ತೆ ಮನೆಗೆ ಹಿಂದಿರುಗಲಾರದು.
ಈ ಮನಸ್ಸು ಮತ್ತು ದೇಹದ ವ್ಯಾಪಾರಗಳನ್ನು ಕೇವಲ ಸಾಕ್ಷಿ ಪ್ರಜ್ಞೆಯಿಂದ ಗಮನಿಸುವ (ತಿನ್ನುವ ಹಕ್ಕಿಯನ್ನು, ಬರಿದೇ ನೋಡುವ ಹಕ್ಕಿ) ಒಂದು ಚೈತನ್ಯವಿದೆ ಎನ್ನುತ್ತದೆ ಭಾರತೀಯ ನಂಬಿಕೆ. ಮಗುತನಕ್ಕೆ ಮತ್ತೆ ಮಗುಚಿಕೊಳ್ಳುವುದರ ಮೂಲಕ ಮಾತ್ರ ಇಂತಹ ಚೈತನ್ಯವನ್ನು ಜಾಗೃತಗೊಳಿಸಬಹುದು ಎಂಬ ಗ್ರಹಿಕೆಯೂ ನಮ್ಮಲ್ಲಿದೆ.
ಹೀಗೆ ಕಾಯ ಮತ್ತು ಮನಸ್ಸು , ಚಿರವಾಸ್ತವ ಮತ್ತು ಚರವಾಸ್ತವಗಳ ನಡುವೆ ಲಾಳಿ ಹೊಡೆಯುತ್ತಲೇ ಇರುತ್ತದೆ. ಹಾಗೆ ನೋಡಿದರೆ ಕಾಯ ನಿಜವಾಗಿ ಚಿರವಾಸ್ತವವೇನಲ್ಲ. ಆದರೆ ಮನಸ್ಸಿನ ‘ಜಂಗಮ ಜಕ್ಕದ’ ವೇಗಕ್ಕೆ ಹೋಲಿಸಿದರೆ ಇದು ಸ್ಥಾವರ ಅಷ್ಟೇ? ಕಾಯದ ಈ ಸ್ಥಾವರಕ್ಕೂ ಕೂಡ ಜಂಗಮ ಸ್ವರೂಪವಿದೆ. ಇಲ್ಲದಿದ್ದರೆ ದೇಹ ಚಲಿಸದೇ ಸಾವಿನ ಕಡೆಗೆ ಸಾಗಬೇಕೆಂದರೆ ಹೇಗೆ ಸಾಧ್ಯ?
ಆದರೆ ಕಾಯದ ಜಂಗಮತ್ವಕ್ಕೂ ಮನಸ್ಸಿನ ಜಂಗಮತ್ವಕ್ಕೂ ಬಹಳ ಅಂತರವಿದೆ. ಇಂತಹ ಮನಸ್ಸು ಮತ್ತು ಕಾಯದ ಸ್ವರೂಪದ ನಡುವಿನ ಒಂದು ಅಗಾಧ ಅಂತರವೇ ನಮ್ಮ ಅನೇಕ ತಪ್ಪು ಗ್ರಹಿಕೆಗಳಿಗೆ, ಮಾನವ ಸಮಾಜದ ತಲ್ಲಣಗಳಿಗೆ, ಪ್ರಕ್ಷುಬ್ಧದತೆಗೆ ಕಾರಣವಾಗಿದೆ. ಆದರೆ ಈ ಪ್ರಕ್ಷುಬ್ಧತೆ ತಲ್ಲಣಗಳು ನಿಂತು ಹೋದಾಕ್ಷಣ ನಾಟಕವೂ ನಿಂತು ಹೋಗುತ್ತದೆ ಎನ್ನುವುದು ನಿಜ-ಹಾಗೆಯೇ ಸೃಜನಶೀಲತೆಯೂ! ನಾಟಕಕ್ಕಿಂತ ಜೀವನ ಮುಖ್ಯ ನಾಟಕ ಏಕೆ ಬೇಕು ಎನ್ನುತ್ತಾರೆ ಶಂಕರ್.
ಆದರೆ ನಾಗರೀಕತೆ ಇರುವವರೆಗೆ, ಕೊಳ್ಳುಬಾಕತನ ಇರುವವರೆಗೆ ಈ ಮನಸ್ಸು ಮತ್ತು ದೇಹದ ನಡುವಿನ ಸಂಘರ್ಷ ನಿಲ್ಲುವುದಿಲ್ಲ. ಆದ್ದರಿಂದ ನಾಟಕವೂ
ನಿಲ್ಲಲಾರದು ಎಂದು ಅವರೇ ಸಮಾಧಾನ ಪಡಿಸುತ್ತಾರೆ. ಈ ಸಂದರ್ಭದಲ್ಲಿ, ತಮ್ಮ ಸೃಜನಶೀಲತೆಯ ಅನಂತ ಸಾಧ್ಯತೆಗಳನ್ನೆಲ್ಲಾ ಗಂಟುಮೂಟೆ ಕಟ್ಟಿ ಅಟ್ಟದಮೇಲೆಸೆದು ‘what about my inner quest?’, ‘now i just have no thoughts about my stories’ ಎನ್ನುತ್ತಾ ಅಧ್ಯಾತ್ಮ ಹಾದಿಯಲ್ಲಿ ಉತ್ತರಕಾಶಿಗೆ ಮುಖಮಾಡಿ ನಡೆದುಬಿಟ್ಟ ನವ್ಯ ಕಾಲದ ಅದ್ಭುತ ಕತೆಗಾರ್ತಿ ರಾಜಲಕ್ಷ್ಮಿಯವರು ನೆನಪಾಗುತ್ತಾರೆ.
ಮನಸ್ಸು ಎಂದರೆ ಅಲ್ಲಮನ ‘ಗುಹೆ’ ಎನ್ನುತ್ತಾರೆ ಶಂಕರ್. ಈ ಗುಹೆ ಕಾರ್ಲ್ ಯ್ಯೂಂಗ್ ನ, ಗುಹೆಯೊಳಗಿನ ಅನೇಕ ಗುಹೆಗಳ ಒಂದು ಅನಂತ ಆದಿಮ ನಿಗೂಢ ಸುರಂಗವೂ ಆಗಬಹುದು (Collective consciousness). ಇಂತಹ ಆದಿಮ ಸುರಂಗದ ಉದ್ಭೂತ ಗುಳ್ಳೆಗಳು ಒಮ್ಮೊಮ್ಮೆ ಯಾವಕಾರಣಕ್ಕಾಗಿ ಕಾಯದ ವರ್ತಮಾನದಲ್ಲಿ ಪುಟಿದೆದ್ದು ಬರುತ್ತವೆ ಎಂಬುದು ವಿಸ್ಮಯಕಾರಿಯಾದುದು.
ಇಂತಹ ವಿಸ್ಮಯಗಳನ್ನು ಬಹುಶಃ ನಮಗೆ ನಿದ್ದೆಯಲ್ಲಿ ಬೀಳುವ ಕನಸುಗಳು ಸಂತೈಸುತ್ತವೇನೋ. ಅಕ್ಕನಿಗೆ ಚನ್ನಮಲ್ಲಿಕಾರ್ಜುನ ಕನಸಿನಲ್ಲಿ ಬಂದು ಸಂತೈಸುವಂತೆ (ಅಕ್ಕ ಕೇಳವ್ವಾ ನಾನೊಂದ ಕನಸ ಕಂಡೆ). ಪ್ರತಿಯೊಂದು ಕನಸೂ ವಿಶಿಷ್ಟ ಮತ್ತು ಸೃಜನಶೀಲವಾಗಿರುತ್ತದೆ. ಒಮ್ಮೆ ಬಿದ್ದ ಕನಸು ಮತ್ತೊಮ್ಮೆ ಬೀಳುವುದಿಲ್ಲ ಅಷ್ಟು ನೂತನವಾದದ್ದು ಅದು ಎನ್ನುತ್ತಾರೆ ಶಂಕರ್. ಕನಸು ಎಚ್ಚರಗಳ ನಡುವಿನ ಉಯ್ಯಾಲೆಯಲ್ಲಿ ಮನುಷ್ಯನ ಬದುಕು ಹೀಗೆ ಜೀಕುತ್ತಿದೆ. ಇಂತಹ ಜೀಕುವಿಕೆಯನ್ನು ನಾಟಕಗಳು ಸಮರ್ಥವಾಗಿ ಹೊರಗೆಡಹುತ್ತಿವೆ.
ಅಕ್ಕ ಮಹಾದೇವಿ ‘ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ’, ಎನ್ನುವಲ್ಲಿಯಾಗಲೀ, ‘ನೀನೊಲಿದವರು ಕಾಯಗೊಂಡಿದ್ದರೆನಬೇಡ’ ಎಂದು ಅಕ್ಕ, ‘ನೀನೊಮ್ಮೆ ಒಡಲುಗೊಂಡು ನೋಡಾ’ ಎಂದು ದೇವರದಾಸಿಮಯ್ಯ ಶಿವನಿಗೆ ಸವಾಲು ಹಾಕುವುದರಲ್ಲಾಗಲೀ ಮನಸ್ಸು ಮತ್ತು ಕಾಯದ ವ್ಯಾಪಾರಗಳ ಸಂಕೀರ್ಣತೆಯೇ ಬಯಲಾಗುತ್ತದೆ. ಇಂತಹ ಸಂಕೀರ್ಣತೆಯೇ ಸೃಜನಶೀಲತೆಗೆ ದಾರಿ ಮಾಡಿಕೊಡುತ್ತದೆ. ಕಾಯದ ಈ ಮಿತಿಯನ್ನು ತನ್ನ ಕಲ್ಪನೆಯ ಮೂಲಕ ಮೀರುವ ಸಾಧನವಾಗುತ್ತದೆ ನಾಟಕ.
ನಾಟಕ ನಿಲ್ಲಬಾರದು. ಜೀವನ ಎಷ್ಟು ದೊಡ್ಡದೋ ನಾಟಕವೂ ಅಷ್ಟೇ ದೊಡ್ಡದು. ಕಾಯ ನಶ್ವರವಾದರೆ ನಾಟಕ ಅಮರವಾದುದು. ನಾಟಕವನ್ನು ಆಡುವುದಕ್ಕೆ ಕಾಯವೇ ಬೇಕು, ಭಾವನೆಗಳು ಅಭಿವ್ಯಕ್ತಗೊಳ್ಳುವುದೇ ಆಂಗಿಕ ಚಲನೆಗಳ ಮೂಲಕವೆಂದಾಗ, ಅಂಗವೇ ಇಲ್ಲವೆಂದರೆ ಆಂಗಿಕ ಚಲನೆಯಾದರೂ ಎಲ್ಲಿಂದ ಬಂದೀತು? ಸಂಘರ್ಷ ಮುಂದುವರೆಯಲಿ – ಹಾಗೆ ನಾಟಕವೂ ತ್ರಿಯೈಕ್ಯವನ್ನು ಸಾಧಿಸಲಿ.



ಕಾಯ ಕ್ಕೂ, ಸ್ವಾರ್ಥಕ್ಕೂ ಅಕ್ಕ, ಜೇಡರದಾಸಿಮಯ್ಯ ವಚನಗಳೊಂದಿಗೆ ನೀಡಿದ ವ್ಯಾಖ್ಯಾನ ಹಾಗು ಅವುಗಳನ್ನು ಹಾಸಿಗೆ ಮಾಡಿಕೊಂಡು, ಹಾವಾದರು ಹಾರ ಧರಿಸಿ ನಿಂತ ದೈವದ ಸಂಕೇತ ಬಿಡಿಸುವಿಕೆ ಕ್ರಮ ಮತ್ತು ಮನುಷ್ಯನ ಸ್ವಾರ್ಥಿಗುಣ ಮನೆಯಲ್ಲಿನ ಮಗು ಅಂದರೆ ಮುಗ್ಧತೆ ನಿಯಂತ್ರಿಸುವ ಮತ್ತೆ ಮನುಜನ ಮಾಡುವ ಆಲೋಚನೆಯ ವಿಸ್ತರಣೆಯ ಸ್ವರೂಪ ಹಾಗು ನಾಟಕದ ಉಗಮ ಸಂಘರ್ಷದ ಲ್ಲಿ ಎಂಬ ವಿಚಾರದ ಮಂಡನೆ ನಿಜವಗಲೂ ಅಭೂತ ಪೂರ್ವವಾಗಿ ಬಂದಿದೆ….