ಮನಸುಗಳನ್ನು ಬೆಸೆಯುವ ‘ಕಥಾ ಓದು’

ಸುಧಾ ಆಡುಕಳ

ಅಷ್ಟೇ, ಇಷ್ಟೇ ಎಂಬ ಲೆಕ್ಕಾಚಾರವಿಲ್ಲ. ಈ ಸಲ ಬಂದವರು ಮುಂದಿನ ಸಲವೂ ಬಂದೇ ಬರುತ್ತಾರೆಂಬ ಖಾತ್ರಿಯಿಲ್ಲ. ಹಾಗೆಂದು ಕೆಲವು ಹೊಸಮುಖಗಳು ಮುಖಾಮುಖಿಯಾಗುವುದಿಲ್ಲ ಎನ್ನಲಾಗುವುದಿಲ್ಲ. ವಿಶೇಷ ಪರದೆ, ಸಭಾವಿನ್ಯಾಸ ಮೊದಲಾದ ಯಾವುದೇ ಆಡಂಬರವಿಲ್ಲ. ಸುಮಾರು ಮೂರು ವರ್ಷಗಳಿಂದ ‘ಸಮುದಾಯ ಕುಂದಾಪುರ’ ಪ್ರತಿ ತಿಂಗಳ ಒಂದು ಭಾನುವಾರ ಮುಂಜಾನೆ ೧೦ಕ್ಕೆ ಸರಿಯಾಗಿ ‘ಕಥಾ ಓದು’ ಎಂಬ ವಿಶಿಷ್ಟವಾದ ಕಾರ್ಯಕ್ರಮವನ್ನು ತಪ್ಪದೇ ನಡೆಸಿಕೊಂಡು ಬರುತ್ತಿದೆ.

ಕಥೆಯನ್ನು ಮನೆಯ ಹಜಾರದಲ್ಲಿ ಕುಳಿತು ಅವರಷ್ಟಕ್ಕೆ ಅವರೇ ಓದಿಕೊಳ್ಳಬಹುದು. ಆದರೆ ಪರಸ್ಪರ ಸಂವಹನವೇ ಶೂನ್ಯವಾಗುತ್ತಿರುವ ಈ ಕಾಲದಲ್ಲಿ, ಅಂತರ್ಜಾಲದ ಮೂಲಕ ದೂರದ ವ್ಯಕ್ತಿಗಳು ಹತ್ತಿರವಾಗುತ್ತಿರುವಂತೆಯೇ ನೆರೆಹೊರೆಯವರೇ ಅಪರಿಚಿತರಾಗುತ್ತಿರುವ ಸಂದಿಗ್ದ ಗಳಿಗೆಯಲ್ಲಿ, ಎದುರು ಸಿಕ್ಕಿದರೂ ಮಾತನಾಡಲು ವಿಷಯಕ್ಕಾಗಿ ತಡಕಾಡುತ್ತಿರುವ ಬರದ ಛಾಯೆಯಲ್ಲಿ, ಮಾತುಕತೆಯೆಂದರೆ ಅದೊಂದು ಅಬ್ಬರದ ಚರ್ಚೆ ಎಂದು ಮಾಧ್ಯಮಗಳು ಬೊಬ್ಬಿರಿಯುತ್ತಿರುವ ಕಾಲಘಟ್ಟದಲ್ಲಿ ಒಟ್ಟಿಗೆ ಕುಳಿತು ಮಾತನಾಡಲು ಈ ಕಥಾ ಓದು ಒಂದು ನೆಪವಷ್ಟೆ ಎನ್ನುತ್ತಾರೆ ಸಮುದಾಯದ ಗೆಳೆಯರು.

ತೇಜಸ್ವಿ, ಚಿತ್ತಾಲ, ವೈದ್ಯ, ಅನಂತಮೂರ್ತಿ, ಲಂಕೇಶ, ನಾಗವೇಣಿ, ಟಿ. ಎಸ್. ಗೊರವರ್, ದೇವನೂರು ಮಹಾದೇವ, ಜಯಂತ ಕಾಯ್ಕಿಣಿ, ವಿನ್ಸನ್ ಕಟೀಲು, ವಿವೇಕ ಶ್ಯಾನುಭಾಗ್.. ಹೀಗೆ ಕನ್ನಡದ ಅನೇಕ ಬರಹಗಾರರ ಕಥೆಯನ್ನು ಈ ವೇದಿಕೆಯಲ್ಲಿ ಓದಲಾಗಿದೆ. ಬೇರೆ ಭಾಷೆಗಳಿಂದ ತರ್ಜುಮೆಗೊಂಡ ಕಥೆಗಳೂ ಇಲ್ಲಿ ವಾಚಿಸಲ್ಪಟ್ಟಿವೆ. ಜೊತೆಯಲ್ಲಿ ರಂಗದಿನಾಚರಣೆ, ಅಂಬೇಡ್ಕರ್ ಜಯಂತಿ, ಗಾಂಧಿ ಜಯಂತಿ ಮೊದಲಾದ ವಿಶೇಷ ದಿನಗಳಂದು ಅವರ ಬರಹಗಳಿಗೆ ಸಂಬಂಧಿಸಿದ ರಂಗ ಓದನ್ನು ಕೂಡ ಹಮ್ಮಿಕೊಳ್ಳಲಾಗಿದೆ.

ಕತೆಗಾರ್ತಿ ಸುನಂದಾ ಕಡಮೆಯವರೊಂದಿಗೆ ಕುಳಿತು ಅವರ ‘ಪತ್ರೊಡೆ’ ಕಥೆಯನ್ನು ವಾಸು ಗಂಗೇರ ಅವರ ನಿರ್ದೇಶನದಲ್ಲಿ ಯಕ್ಷಗಾನೀಯ ಶೈಲಿಯಲ್ಲಿ ಪ್ರಸ್ತುಪಡಿಸಿದ್ದು ನೆನಪಿನಲ್ಲುಳಿಯುವ ಕಾರ್ಯಕ್ರಮ. ಗಾಂಧೀಜಿಯವರ ಸತ್ಯಾನ್ವೇಷಣೆಯ ತುಣುಕುಗಳನ್ನು ರಶ್ಮಿ ಕುಂದಾಪುರ ಅವರು ಚಿತ್ರಕಥೆಯಾಗಿಸಿ ಓದಿದ್ದು ಕಥಾ ಓದಿನ ವಿಭಿನ್ನ ಆಯಾಮ.

ನಾಗತಿಹಳ್ಳಿಯವರೊಂದಿಗೆ ಕುಳಿತು ಸಂಸ್ಕಾರದ ಮರು ಓದನ್ನು ನಡೆಸಿದ್ದು ಆಸಕ್ತಿದಾಯಕವಾಗಿತ್ತು. ಕೆಲವೊಮ್ಮೆ ಕಥೆಯನ್ನು ರಂಗಕರ್ಮಿಯೊಬ್ಬರು ಪ್ರಸ್ತುತಪಡಿಸಿದ್ದರೆ, ಇನ್ನೂ ಕೆಲವೊಮ್ಮೆ ಸಮುದಾಯದ ಯುವಕ ಯುವತಿಯರು ಕಥೆಯನ್ನು ಒಟ್ಟಾಗಿ ಓದುವುದೂ ಇದೆ. ಕಾರ್ಯಕ್ರಮದ ಮೊದಲು ಸಮುದಾಯದ ಸಂಗಾತಿಗಳು ಚೆಂದದ ರಂಗಗೀತೆಯೊಂದನ್ನು ಹಾಡುವುದು ವಾಡಿಕೆ. ಹಾಗೆ ಯಾರೂ ಹಾಡದಿದ್ದರೆ ವಾಸು ಅವರು ತಮ್ಮ ಖಂಜರದೊಂದಿಗೆ ಸದಾ ಸಿದ್ಧರಾಗಿರುತ್ತಾರೆ.

ಓದು ಮುಗಿಯುತ್ತಿದ್ದಂತೆಯೇ ಬಿಸಿಬಿಸಿಯಾದ ಚಹಾ ಸರಬರಾಜು. ಜೊತೆಗೆ ಕಥೆಯ ಬಗೆಗೊಂದಿಷ್ಟು ಅನಿಸಿಕೆಗಳ ವಿನಿಮಯ. ಎಲ್ಲರ ಎಲ್ಲ ರೀತಿಯ ಅನಿಸಿಕೆಗಳಿಗೂ ಮುಕ್ತ ಅವಕಾಶ. ಕೆಲವೊಮ್ಮೆ ಪುಟ್ಟ ಕಿರುಚಿತ್ರಗಳ ಪ್ರದರ್ಶನ ಮತ್ತೆ ಅದರ ಬಗೆಗೊಂದಿಷ್ಟು ಮಾತು. ಹೀಗೆ ಪ್ರಾರಂಭಗೊಳ್ಳುವ ಮಾತುಕತೆ ಅಲ್ಲಿಂದ ಹೊರಟು ಹೊರಬರುವವರೆಗೂ, ಕೆಲವೊಮ್ಮೆ ಮನೆಗೆ ಬಂದಮೇಲೂ ಮನಸ್ಸೊಳಗೆ ಮಾತಾಗುತ್ತಿರುತ್ತದೆ. ಹಾಗಾಗಬೇಕೆಂಬುದು ನಮ್ಮ ಆಸೆ ಎನ್ನುತ್ತಾರೆ ಸಮುದಾಯದ ಅಧ್ಯಕ್ಷರಾದ ಉದಯ ಗಾಂವಕಾರ ಅವರು.

ಕಥೆಯೊಂದು ಅಕ್ಷರವಾಗಿ ಹಾಳೆಯ ಮೇಲೆ ಮೂಡಿದ ನಂತರ ಅದು ಕಥೆಗಾರನ ಸೊತ್ತಲ್ಲ. ಅವನ ಅನುಭವವನ್ನದು ಓದುಗನಿಗೆ ನೀಡಬೇಕೆಂದೇನಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಓದು ಕೂಡ ಕಥೆಗೆ ವಿಭಿನ್ನ ನೆಲೆಯನ್ನು ನೀಡಬಲ್ಲುದು. ಅಂತೆಯೇ ಕಥೆಯೊಂದನ್ನು ನಾವೇ ಓದಿಕೊಂಡಾಗ ಹುಟ್ಟುವ ಅರ್ಥಕ್ಕೂ, ಬೇರೆಯವರು ಓದಿದ್ದನ್ನು ಹಲವರೊಂದಿಗೆ ಕುಳಿತು ಕೇಳುವಾಗ ಹೊಳೆಯುವ ಅರ್ಥಕ್ಕೂ ಬೇರೆಯೇ ನೆಲೆಗಳಿರಬಹುದು. ಹಾಗಾಗಿ ಸಮುದಾಯದ ಕಥಾ ಓದಿಗ ಮತ್ತೆ ಮತ್ತೆ ಹೊಸ ಕೇಳುಗರು ಸೇರ್ಪಡೆಯಾಗುತ್ತಲೇ ಇರುತ್ತಾರೆ.

ಹೊಸ ವಿಷಯಗಳೆಲ್ಲವೂ ಹೊಳೆಯುವುದು ಜನರು ಸಣ್ಣ ಗುಂಪುಗಳಲ್ಲಿ ನಡೆಸುವ ಮಾತುಕತೆಗಳಿಂದಲೇ ಎಂಬ ನಂಬಿಕೆಯಿಂದ ಸಮುದಾಯ ತನ್ನ ಕಥಾ ಓದನ್ನು ನಿರಂತರವಾಗಿಮುಂದುವರೆಸಿಕೊಂಡು ಬರುತ್ತಿದೆ.

ನಾಳೆ ಭಾನುವಾರ ಸ್ಥಳೀಯರಾದ ರಮೇಶ ಗುಲ್ವಾಡಿ ಮತ್ತು ಅನುಪಮಾ ಎಚ್. ಎಸ್. ಅವರ ಕಥೆಗಳ ವಾಚನ ನಡೆಯಲಿದೆ. ಆಸಕ್ತರು ಭಾಗವಹಿಸಿ, ಕಥಾಲೋಕದಲ್ಲಿ ಕಳೆದುಹೋಗಬಹುದು. ಎಚ್ಚರಗೊಳಿಸಲು ಬಿಸಿ ಚಹಾ ಮತ್ತು ಚಟ್ಟಂಬೊಡೆಯಂತೂ ಇದೆ. ಜೊತೆಯಲ್ಲಿ ಒಂದಿಷ್ಟು ಮಾತುಕತೆಗಳೂ ನಡೆಯಲಿವೆ.

‍ಲೇಖಕರು avadhi

June 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸರಯೂ

    “ಪರಸ್ಪರ ಸಂವಹನವೇ ಶೂನ್ಯವಾಗುತ್ತಿರುವ ಈ ಕಾಲದಲ್ಲಿ, ಅಂತರ್ಜಾಲದ ಮೂಲಕ ದೂರದ ವ್ಯಕ್ತಿಗಳು ಹತ್ತಿರವಾಗುತ್ತಿರುವಂತೆಯೇ ನೆರೆಹೊರೆಯವರೇ ಅಪರಿಚಿತರಾಗುತ್ತಿರುವ ಸಂದಿಗ್ದ ಗಳಿಗೆಯಲ್ಲಿ, ಎದುರು ಸಿಕ್ಕಿದರೂ ಮಾತನಾಡಲು ವಿಷಯಕ್ಕಾಗಿ ತಡಕಾಡುತ್ತಿರುವ ಬರದ ಛಾಯೆಯಲ್ಲಿ, ಮಾತುಕತೆಯೆಂದರೆ ಅದೊಂದು ಅಬ್ಬರದ ಚರ್ಚೆ ಎಂದು ಮಾಧ್ಯಮಗಳು ಬೊಬ್ಬಿರಿಯುತ್ತಿರುವ ಕಾಲಘಟ್ಟದಲ್ಲಿ ಒಟ್ಟಿಗೆ ಕುಳಿತು ಮಾತನಾಡಲು ಈ ಕಥಾ ಓದು ಒಂದು ನೆಪ—ಕಥೆಯೊಂದನ್ನು ನಾವೇ ಓದಿಕೊಂಡಾಗ ಹುಟ್ಟುವ ಅರ್ಥಕ್ಕೂ, ಬೇರೆಯವರು ಓದಿದ್ದನ್ನು ಹಲವರೊಂದಿಗೆ ಕುಳಿತು ಕೇಳುವಾಗ ಹೊಳೆಯುವ ಅರ್ಥಕ್ಕೂ ಬೇರೆಯೇ ನೆಲೆಗಳಿರಬಹುದು. ”

    ನಿಜ ಸುಧಾ, ನಿಮ್ಮ ಈ ಅನಿಸಿಕೆಗಳನ್ನು ನಾನು ಖಂಡಿತಾ ಅನುಮೋದಿಸುತ್ತೇನೇ. ಕಥಾ ಓದು ಒಂದು ಒಳ್ಳೆಯ ಕಾರ್ಯಕ್ರಮ ಇದು ಇನ್ನೂ ಅಭಿವೃದ್ದಿ ಹೊಂದಲಿ ಎಂದು ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ವಿಶೇಷವಾಗಿ ಸಮುದಾಯದ ಅಧ್ಯಕ್ಷರಾದ ಉದಯ ಗಾಂವಕಾರ ಅವರಿಗೆ ಇದನ್ನು ಬಿಡದೆ ಹೀಗೆಯೇ ಮುಂದುವರೆಸಿಕೊಂಡು ಹೋಗುತ್ತಾ ಸಾಹಿತ್ಯಾಭಿಮಾನ ಹಾಗೂ ಕಲಾಭಿಮಾನವನ್ನು ಜನರಲ್ಲಿ ಇನ್ನಷ್ಟು ಮತ್ತಷ್ಟು ಮೂಡಿಸಿರಿ ಎಂದು ಹಾರೈಸುತ್ತಾ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: