ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನರಂಜಿಸಿದ `ಗುಳ್ಳೇನರಿ' ಹಾಸ್ಯ ನಾಟಕ

ವೈ ಕೆ ಸಂಧ್ಯಾಶರ್ಮ


ಇತ್ತೀಚೆಗೆ ಬೆಂಗಳೂರಿನ ಕೆ.ಹೆಚ್. ಕಲಾಸೌಧದಲ್ಲಿ ಪ್ರದರ್ಶನ ಕಲಾ ಸಂಸ್ಥೆಯು ಅರ್ಪಿಸಿದ `ಗುಳ್ಳೇನರಿ’ ನಾಟಕ, ಎರಡು ಗಂಟೆಗಳ ಕಾಲ ಹಾಸ್ಯ ರಸಾನುಭವದಲ್ಲಿ ತೇಲಿಸಿ ಮನಸ್ಸನ್ನು ಹಗುರಗೊಳಿಸಿತು. ಮನರಂಜನೆ ಬಯಸಿ ಬಂದ ಪ್ರೇಕ್ಷಕನನ್ನು ನಾಟಕ ನಿರಾಸೆಗೊಳಿಸಲಿಲ್ಲ. ಬೆನ್ ಜಾನ್ಸನ್ 1606 ರಲ್ಲಿ ರಚಿಸಿದ `ವೋಲ್ಬೋನೆ’ ನಾಟಕ ಕೃತಿಯನ್ನು ಆಧರಿಸಿ ಕನ್ನಡಕ್ಕೆ ತಂದವರು ಶ್ರೀನಿವಾಸ ಪ್ರಭು. ನಾಟಕದ ನಿರ್ದೇಶನ ಪಿ.ಡಿ. ಸತೀಶ್ ಚಂದ್ರ. ನಾಟಕದ ಕೇಂದ್ರ ಪಾತ್ರ ನರಿಯಣ್ಣ ಹೆಸರಿಗೆ ತಕ್ಕಂತೆ ಗುಳ್ಳೇನರಿ ಸ್ವಭಾವದವನು, ಜಿಪುಣಾಗ್ರೇಸರ, ಅವಿವಾಹಿತ. ಅವನ ಆಸ್ತಿಯ ಮೇಲೆ ಕಣ್ಣಿಟ್ಟು ಅಲ್ಲಿಗೆ ಆಗಾಗ ಬರುತ್ತಿದ್ದ ಹದ್ದಪ್ಪ, ಕಾಕರಾಯ ಮತ್ತು ಗಿಡುಗಯ್ಯ ಅವನನ್ನು ಮೆಚ್ಚಿಸಲು ದುಬಾರಿ ಕಾಣಿಕೆಗಳನ್ನು ತರುತ್ತ ಅವನ ಕೃಪೆಗೆ ಪಾತ್ರರಾಗಲು ಶತಾಯ ಗತಾಯ ಪ್ರಯತ್ನಿಸುತ್ತಿರುವವರು. ಇವರನ್ನೆಲ್ಲ ಸೂತ್ರಧಾರನಂತೆ ನಿಯಂತ್ರಿಸುತ್ತಿರುವವನು ನರಿಯಣ್ಣನ ಆಪ್ತಭಂಟ ಪತಂಗಿ. ಅವನದೇ ಎಲ್ಲಾ ಕರಾಮತ್ತು ಇಲ್ಲಿ. ಆದರೆ ಕಡೆಯಲ್ಲಿ ಎಲ್ಲಾ ಉಲ್ಟಾ ಹೊಡೆದು ನರಿಯಣ್ಣನ ಆಸ್ತಿಯೆಲ್ಲ ಪತಂಗಿಯ ಹೆಸರಿಗೆ ಉಯಿಲಾಗಿ, ಉಳಿದವರಿರಲಿ, ಸ್ವತಃ ನರಿಯಣ್ಣನೇ ಕಕ್ಕಾಬಿಕ್ಕಿ ಯಾಗುವ ಪ್ರಸಂಗ. ಮಾಡಿದ್ದುಣ್ಣೋ ಮಹರಾಯನ ಪಾಠ ನರಿಯಣ್ಣನಿಗೆ. ಈ ಮಧ್ಯೆ ಅವನನ್ನು ಓಲೈಸಲು ಬಂದ ಮಹಾಶಯರು ತಮ್ಮ ಉಳಿವಿಗಾಗಿ ತಮ್ಮ ಮನೆಯ ಯುವಕ ಚಂದ್ರ ಹಾಗೂ ಯುವತಿ ಹರಿಣಿಯರನ್ನು ಬಲಿಪಶುವನ್ನಾಗಿ ಮಾಡಿ ಸೆರೆಮನೆ ಸೇರುವಂತೆ ಮಾಡುತ್ತಾರೆ. ಕಡೆಯಲ್ಲಿ ನರಿಯಣ್ಣ ಸತ್ತ ಸುಳ್ಳು ವರ್ತಮಾನ ಕೇಳಿ ಅವರೆಲ್ಲ `ನ್ಯಾಯದ ಕಟ್ಟೆ’ಯಲ್ಲಿ ತಪ್ಪೊಪ್ಪಿಗೆ ನೀಡಿದ ಫಲ ಜೈಲಿನಲ್ಲಿದ್ದ ಜೋಡಿ ಬಿಡುಗಡೆ ಪಡೆಯುವುದಷ್ಟೇ ಅಲ್ಲ ಮದುವೆಯ ನಿರ್ಧಾರವೂ ಕೈಗೊಂಡಾಗ ಎಲ್ಲರೂ ಕೈಕೈ ಹಿಸುಕಿಕೊಳ್ಳುತ್ತಾರೆ. ಎಲ್ಲರನ್ನೂ ಬೇಸ್ತು ಬೀಳಿಸಲು ಯತ್ನಿಸುವ ನರಿಯಣ್ಣನೇ ಕಡೆಗೆ ಬೇಸ್ತು ಬೀಳುವುದು ನಾಟಕದ ಸ್ವಾರಸ್ಯ. ಅಥವಾ ಇದನ್ನೇ ನಾಟಕದ ಸಂದೇಶ ಎಂದಿಟ್ಟುಕೊಳ್ಳಬಹುದೇನೋ.

ತಾಕಿರ್ಕವಾಗಿ ಯೋಚಿಸಿದರೆ ಈ ಕಥಾ ಹೆಣಿಗೆ ನಮ್ಮ ಭಾರತೀಯ ಪರಿಸರಕ್ಕೆ ಅಷ್ಟಾಗಿ ಹೊಂದಿಕೆಯಾಗದು. ಬೇರೊಬ್ಬನ ಆಸ್ತಿಯನ್ನು ಬಯಸಿಬಂದವರು ತಾವೇ ಚಿನ್ನದ ತಟ್ಟೆ, ಅಮೂಲ್ಯ ರತ್ನ,ಹರಳುಗಳು ಮತ್ತು ತಮ್ಮ ಇಡೀ ಆಸ್ತಿಯನ್ನು ಅವನಿಗೆ ಬರೆದು ದಾನ ಕೊಡುವುದು ಎಷ್ಟರಮಟ್ಟಿಗೆ ಸಹಜ? ಹಾಗೆಯೇ ಅವನು ತನ್ನ ಆಸ್ತಿಯನ್ನೆಲ್ಲ ಅವರಿಗೆ ಉಯಿಲು ಮಾಡುವ ಅಗತ್ಯತೆಯೇನಿತ್ತು ಎಂಬುದಕ್ಕೂ ನಾಟಕದಲ್ಲಿ ಉತ್ತರವಿಲ್ಲ. ಜೊತೆಗೆ ಅವನ ಮತ್ತು ಇವರ ನಡುವಿನ ಸಂಬಂಧ ಎಂಥದು ಎಂಬುದೂ ಸ್ಪಷ್ಟವಾಗಿಲ್ಲ. ಈ ಎಲ್ಲ ಅಂಶಗಳು ತಾಕರ್ಿಕವಾಗಿಯೂ ನಿರೂಪಿತವಾಗಿಲ್ಲದಿರುವುದು ಕಥಾ ತಂತುವನ್ನು ದುರ್ಬಲಗೊಳಿಸುವುದು. ಪರಸ್ತ್ರೀಗೆ ಆಸೆಪಡುವ ನರಿಯಣ್ಣ ಏಕೆ ಅವಿವಾಹಿತನಾಗಿ ಉಳಿದ ಎಂಬುದಕ್ಕೂ ಇಲ್ಲಿ ಕಾರಣ ಕಾಣಿಸದು. ಆದರೂ ಈ ತರ್ಕಗಳನ್ನೆಲ್ಲ ಪಕ್ಕಕ್ಕಿಟ್ಟು ನಾಟಕವನ್ನು ನೋಡಿ ಆನಂದಿಸಲು ಅಡ್ಡಿಯಿಲ್ಲ. ನಾಟಕ ಪ್ರಸ್ತುತಿ ಇಲ್ಲಿ ಮುಖ್ಯವಾಗುತ್ತದೆ.
ಸಂಭಾಷಣೆಗಳು ಮೊದಮೊದಲು ತುಂಬಾ ಗ್ರಾಂಥಿಕವೆನಿಸಿ ವೃತ್ತಿ ರಂಗಭೂಮಿಯ ಛಾಯೆ ಆವರಿಸಿದಂತೆನಿಸಿದರೂ ಕ್ರಮೇಣ ಅದು ಆಡುಭಾಷೆಗೆ ಇಳಿಯುತ್ತದೆ. ಕಥಾ ಸನ್ನಿವೇಶಗಳು ಹಾಸ್ಯ ಸಂಭಾಷಣೆಗಳಿಂದ ರಂಜಿಸುತ್ತ ಮಧ್ಯೆ ಮಧ್ಯೆ ಹಿತವಾದ ಸಂಗೀತ-ಹಾಡುಗಳಿಂದ ಆಸಕ್ತಿ ಹುಟ್ಟಿಸುತ್ತ ನೋಡುಗನನ್ನು ಕೂರಿಸಿಕೊಳ್ಳುತ್ತದೆ. ನಾಟಕದ ಪ್ರಾರಂಭದಲ್ಲೇ ಕಥೆಯ ನಡಿಗೆ ತಿಳಿದುಹೋದರೂ ಪಾತ್ರಗಳ ಲವಲವಿಕೆಯ ಅಭಿನಯದಿಂದ ವೀಕ್ಷಣೆಗೆ ಲಾಯಕ್ಕಾಗಿದೆ. ನರಿಯಣ್ಣ ( ಸಂತೋಷ್ ಕಕರ್ಿ ) ಪಳಗಿದ ನಟರಾಗಿ ಅತ್ಯುತ್ತಮ ಅಭಿನಯವನ್ನು ನೀಡಿದರೆ, ಪತಂಗಿ ( ಕುಲದೀಪಕ್ ನಾರಾಯಣ್ ) ಕೂಡ ತಮ್ಮ ವಿಶಿಷ್ಟ ಶೈಲಿಯ ಅಭಿನಯ, ಭಾವ-ಭಂಗಿಗಳಿಂದ ಮನಸೆಳೆದು ತಾವೊಬ್ಬ ಉತ್ತಮ ನಟರೆಂಬುದನ್ನು ನಿರೂಪಿಸುತ್ತಾರೆ. ಗಿಡುಗಯ್ಯ (ಗಗನ್ ಗೋಡ್ಗಲ್) ತಮ್ಮ ಕಂಚಿನ ಕಂಠದಿಂದ ಹಾಗೂ ವಿಭಿನ್ನ ಆಂಗಿಕ ಅಭಿನಯಗಳಿಂದ ಗಮನ ಸೆಳೆಯುತ್ತಾರೆ. ಕಾಕರಾಯನಾಗಿ ಪಿ.ಡಿ. ಸತೀಶ್ ಚಂದ್ರ ತಮ್ಮ ಪ್ರತಿ ನಡೆ-ನುಡಿಯಲ್ಲೂ ನಗೆಯುಕ್ಕಿಸುತ್ತ, ಸೂಕ್ಷ್ಮ ಹಾಸ್ಯದಿಂದ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ಹರಿಣಿ ಮತ್ತು ನರಿಯಣ್ಣನ ಪ್ರಣಯದ ಕಾಲ್ಪನಿಕ ದೃಶ್ಯದಲ್ಲಿನ ನೃತ್ಯ ನೋಡುಗರಿಗೆ ಖುಷಿ ನೀಡಿ ಕರತಾಡನ,ಶಿಳ್ಳೆಗಳನ್ನು ಪಡೆಯಿತು. ಸಣ್ಣ ಸಣ್ಣ ಪಾತ್ರಗಳ ಬಗ್ಗೆಯೂ ನಿದೇರ್ಶಕರು ಸಮಾನ ಗಮನ ಹರಿಸಿ ಅವರಿಂದಲೂ ಸ್ಮರಣೀಯ ನಟನೆ ತೆಗೆಯಬಹುದಿತ್ತು. ನಾಟಕದಲ್ಲಿನ ಪ್ರತಿಯೊಂದು ಪಾತ್ರಗಳೂ ಮುಖ್ಯ. ಹಾಗಿದ್ದಾಗ ಮಾತ್ರ ನಾಟಕ ಪರಿಪೂರ್ಣ. ರಂಗಪರಿಕರಗಳು ಅಂಥ ಗಮನಾರ್ಹವಾಗಿರದೆ ಕೊರತೆಯ ಅನುಭವವಾಯಿತು. ಉಪಾಸನಾ ಮೋಹನ್ ಅವರ ಹಾಡುಗಳು ಚೆನ್ನಾಗಿದ್ದವು. ಆದರೆ ಅಲ್ಲಲ್ಲಿ ನಟರ ತಾಲೀಮಿನ ಕೊರತೆಯೂ ಕಂಡುಬಂದಿತು. ಇವೆಲ್ಲ ಅಂಶಗಳತ್ತ ಗಮನ ಕೊಟ್ಟರೆ ನಾಟಕ ಮುಂದಿನ ಪ್ರದರ್ಶನಗಳಲ್ಲಿ ಗಟ್ಟಿಯಾದೀತು.
 

‍ಲೇಖಕರು G

2 August, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading