ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಧುಸೂಧನ್ ಹಾಗೂ ಯಶಸ್ವಿನಿಗೆ ‘ಈ ಹೊತ್ತಿಗೆ’ ಪ್ರಶಸ್ತಿ

 ಕಥಾ ಪ್ರಶಸ್ತಿ

ಮಧುಸೂದನ ವೈ. ಎನ್ ಅವರ ಅಪ್ರಕಟಿತ ಕಥಾ ಸಂಕಲನ ‘ಕಾರೇಹಣ್ಣು’, ೨೦೧೯ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಗೆ ಆಯ್ಕೆಯಾಗಿದೆ.

ಈ ಹೊತ್ತಿಗೆ ಕಥಾ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ  ಯಶಸ್ವಿನಿ ಅವರ ಬರೆದ ಕಥೆ ‘ಜಲಜಗಂಧಿನಿ’ ಪ್ರಥಮ ಬಹುಮಾನ ಪಡೆದಿದೆ ಎಂದು ಈ ಹೊತ್ತಿಗೆಯ ಮ್ಯಾನೇಜಿಂಗ್ ಟ್ರಸ್ಟಿ ಜಯಲಕ್ಷ್ಮಿ ಪಾಟೀಲ್ ತಿಳಿಸಿದ್ದಾರೆ.

ಅಪ್ರಕಟಿತ ಕಥಾ ಸಂಕಲನ ಪ್ರಶಸ್ತಿ ೧೦ ಸಾವಿರ ರೂ ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿದೆ.  ಮಾರ್ಚ್ ೧೦ರಂದು, ಬೆಂಗಳೂರಿನ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ನಡೆಯಲಿರುವ ‘ಈ ಹೊತ್ತಿಗೆ’ಯ ‘ಹೊನಲು’ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಹಾಗು ಬಹುಮಾನ ಪ್ರದಾನ ಮಾಡಲಾಗುವುದು.

ಈ ಹೊತ್ತಿಗೆ ಕಥಾ ಸ್ಪರ್ಧೆಗಳ ಫಲಿತಾಂಶ

ಕಾಲೇಜು ವಿದ್ಯಾರ್ಥಿಗಳ ವಿಭಾಗದಲ್ಲಿ

ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿಯಲ್ಲಿ, ಸಂಖ್ಯಾಶಾಸ್ತ್ರ ವಿಭಾಗದಲ್ಲಿ ದ್ವಿತೀಯ ವರ್ಷದ ಎಮ್.ಎಸ್.ಸಿ ಓದುತ್ತಿರುವ, ಯಶಸ್ವಿನಿ ಅವರು ಬರೆದ ಕಥೆ ‘ಜಲಜಗಂಧಿನಿ’ ಪ್ರಥಮ (ರೂ. ೫೦೦೦ ನಗದು ಹಾಗು ಪ್ರಮಾಣ ಪತ್ರ)

ಶಿವಮೊಗ್ಗದ ಪಿ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‍ಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನಲ್ಲಿ ನಾಲ್ಕನೇ ವರ್ಷದ ಬಿ.ಇ ಓದುತ್ತಿರುವ, ಪ್ರಸನ್ನ ವೆಂಕಟರಮಣ ಭಟ್ ಅವರ ಕಥೆ ‘ಕಲ್ಕಿ’ ದ್ವಿತೀಯ (ರೂ. ೩೦೦೦ ನಗದು ಹಾಗು ಪ್ರಮಾಣ ಪತ್ರ),

ಹರಿಯಾಣ ರಾಜ್ಯದ ಅಶೋಕಾ ಯೂನಿವರ್ಸಿಟಿಯಲ್ಲಿ, ಇಂಗ್ಲಿಷ್ ಸಾಹಿತ್ಯ ವಿಭಾಗದಲ್ಲಿ ದ್ವಿತೀಯ ವರ್ಷದ ಬಿ.ಎ ಓದುತ್ತಿರುವ ವಿಘ್ನೇಶ್ ಹಂಪಾಪುರ ಅವರ ಕಥೆ ‘ತವರಿನ ನ್ಯಾಯ’  ತೃತೀಯ (ರೂ. ೨೦೦೦ ನಗದು ಹಾಗು ಪ್ರಮಾಣ ಪತ್ರ) ಬಹುಮಾನಗಳನ್ನು ಪಡೆದುಕೊಂಡಿದ್ದು,

ಬೆಂಗಳೂರಿನ ಪದ್ಮಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ & ಸೈನ್ಸಸ್ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ವರ್ಷದ M.Voc ಓದುತ್ತಿರುವ ವಿದ್ಯಾರ್ಥಿಯಾದ ವಿನಾಯಕ ಹೆಗಡೆ ಅವರ ‘ಹೊಸಾವತಾರ’ ಮೆಚ್ಚುಗೆ ಪಡೆದ ಕಥೆಯಾಗಿದೆ ಎಂದು ಈ ಹೊತ್ತಿಗೆಯ ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ತಿಳಿಸಿರುತ್ತಾರೆ..

ಪ್ರಶಸ್ತಿಗಾಗಿ ಒಟ್ಟು ೨೬ ಕಥಾ ಸಂಕಲನ ಹಸ್ತಪ್ರತಿಗಳು ಬಂದಿದ್ದವು. ಖ್ಯಾತ ಸಾಹಿತಿ, ಅಮರೇಶ ನುಗಡೋಣಿಯವರು ಈ ವಿಭಾಗದ ತೀರ್ಪುಗಾರರಾಗಿದ್ದರು. ನಾಡಿನ ಹೆಸರಾಂತ ಕತೆಗಾರರಾದ ಸುನಂದಾ ಕಡಮೆ ಹಾಗು ಕರ್ಕಿ ಕೃಷ್ಣಮೂರ್ತಿಯವರು ಕಾಲೇಜು ವಿದ್ಯಾರ್ಥಿಗಳ ವಿಭಾಗ ತೀರ್ಪುಗಾರರಾಗಿದ್ದರು.

‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಜೇತ ಕಥಾ ಸಂಕಲನ

‘ಕಾರೇಹಣ್ಣು’ ಕುರಿತು

ತೀರ್ಪುಗಾರರಾದ ಅಮರೇಶ ನುಗಡೋಣಿಯವರ ಟಿಪ್ಪಣಿ.

‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಸ್ಪರ್ಧೆಗಾಗಿ ಬಂದ ಕಥಾ ಸಂಕಲನಗಳ ಪೈಕಿ ನನಗೆ ಓದಲು 9 ಕಥಾ ಸಂಕಲನಗಳನ್ನು ಕೊಡಲಾಗಿತ್ತು.ಅವುಗಳನ್ನು ಓದಿ ‘ಕಾರೇಹಣ್ಣು’ ಕಥಾ ಸಂಕಲನವು ಪ್ರಶಸ್ತಿಗೆ ಅರ್ಹವಾಗಿದೆ- ಎಂದು ಭಾವಿಸಿದ್ದೇನೆ.

ಯಾವುದೇ ಪ್ರಶಸ್ತಿಗೆ ತೀರ್ಪುಗಾರರಾಗುವುದು ಮುಜುಗರದ ಸಂಗತಿ. ಒಂದು ತೋಟದಲ್ಲಿ ಅರಳಿ ನಿಂತ ಹೂಗಳಲ್ಲಿ ಒಂದು ಚೆಂದದ ಹೂವು – ಎಂದು ಎತ್ತಿಕೊಳ್ಳುವುದು ಕಷ್ಟದ ಸಂಗತಿ. ಎಲ್ಲವುಗಳಿಗೆ ಅವುಗಳದ್ದೇ ಚೆಲುವು ಇದ್ದೇ ಇರುತ್ತದೆ. ಚೆಲುವನ್ನು ಅಳೆಯುವುದು ಸರಳವಾದುದ್ದಲ್ಲ.

9 ಸಂಕಲನಗಳು ಹಾಗೆ ನೋಡಿದರೆ ಪ್ರಕಟಣೆಗೆ ಅರ್ಹವಾಗಿವೆ. ಪ್ರಶಸ್ತಿಗಾಗಿ ಆಯ್ಕೆ ಮಾಡುವಾಗ ಕೂದಲೆಳೆಯ ಅಂತರವನ್ನು ಗುರುತಿಸಿ ಒಂದನ್ನುಎತ್ತಿಕೊಳ್ಳುವುದು ಕಷ್ಟ. ಮನಸ್ಸು ಅಳುಕುತ್ತದೆ. ಆದರೂ ಸ್ಪರ್ಧೆಯಲ್ಲಿ ಆಯ್ಕೆ ಎನ್ನುವುದು ಇರುತ್ತದೆ. ಅದನ್ನು ಮಾಡಿದ್ದೇನೆ.

‘ಕಾರೇಹಣ್ಣು’ ಕಥಾ ಸಂಕಲನದ ಕತೆಗಳು ಓದುಗನನ್ನು ಆಕರ್ಷಿಸುತ್ತವೆ. ಕಥಾವಸ್ತುಗಳಲ್ಲಿ ಭಿನ್ನತೆಯಿದೆ. ಕತೆಗಳ ನಿರೂಪಣೆಯಲ್ಲಿ ದೃಶ್ಯಗಳು ಕಣ್ಣಿಗೆ ಒತ್ತಿ ನಿಲ್ಲುತ್ತವೆ. ನುಡಿ ಬಳಕೆಯಲ್ಲಿ ನಾಜೂಕುತನವಿದೆ. ಕತೆಯ ಒಡಲಿನಿಂದಲೇ ನುಡಿ ಮೂಡಿ ಬಂದಿದೆ. ಕಥೆಯನ್ನು ತೋರಿಸುವುಕೆ ಇದೆ.- ಕಥೆ ಹೇಳುವಿಕೆ ಇಲ್ಲ. ಅನಗತ್ಯ ಎನ್ನುವುದು ಅತಿ ಕಡಿಮೆಯಿದೆ. ಕತೆಗಳ ರಚನೆಯಲ್ಲಿ ಇಂತಹ ಹೊಸತನವಿದೆ. ಅದರಿಂದಲೇ ‘ಕಾರೇಹಣ್ಣು’ ಕಥಾ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ.

ಈ 9 ಕಥಾ ಸಂಕಲನಗಳನ್ನು ಪ್ರಕಟಣೆಗೆ ಮುನ್ನ ಓದಿದ ಖುಷಿ ನನ್ನದು. ಇದಕ್ಕೆ ಅನುವು ಮಾಡಿಕೊಟ್ತ ಎಲ್ಲರಿಗೆ ವಂದನೆಗಳು.

‍ಲೇಖಕರು avadhi

31 January, 2019

1 Comment

  1. Kotresh

    ಅಭಿನಂದನೆಗಳು ಮಧು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading