ಮದುವೆಮನೆ ಅನ್ನೋ ಫೇಸ್ ಬುಕ್!!

ಹಳಬರ ಸೋಷಿಯಲ್ ಸೈಟುಗಳು

neeta s rao

ನೀತಾ ರಾವ್

ಈಗೇನು, ಫೇಸಬುಕ್ಕು, ವಾಟ್ಸಾಪು, ಟ್ವಿಟರು ಅಂತ ಹೊಸಾ ಹುಡುಗೋರು ಭಾಳ ಗದ್ಲಾ ಹಾಕಲಿಕತ್ತಾರ. ಹಳೆ ಮಂದಿಗೆ ಏನೇನೂ ಗೊತ್ತಿಲ್ಲ, ಮೊಬೈಲು, ಕಂಪ್ಯುಟರು ಆಪರೇಟ್ ಮಾಡಲಿಕ್ಕೆ ಬಂದ್ರಲಾ ಇವೆಲ್ಲಾ ಅವರಿಗೆ ಗೊತ್ತಾಗೋದು ಅಂತ ಅವರ ಅಂಬೋಣ. ಇರ್ಲಿ, ನಾ ಏನು ಹೇಳಲಿಕ್ಕೆ ಹೊಂಟೇನಪಾ ಅಂದ್ರ, ನೀವೆಲ್ಲಾ ಹೊಸಾ ಹುಡುಗರು ಭಾಳ ಶ್ಯಾಣ್ಯಾ ಇದ್ದೀರಿ, ಆದರ ಹಳೆ ಮಂದಿನೂ ಅಷ್ಟೇನ ಧಡ್ಡರಿಲ್ಲ. ಅವರ ಕಾಲದಾಗ ಅವರ ಕಾಲಕ್ಕ ಒಪ್ಪುವಂಥಾ ಸೋಷಿಯಲ್ ಸೈಟುಗೋಳು ಅವರಿಗೂ ಇದ್ವು. ಅದೂ ನಿಮಗಿರೂವಂಥಾ ವರ್ಚ್ಯೂವಲ್ ಸೈಟ ಅಲ್ಲ, ಖರೆ ಖರೆ ಫಿಸಿಕಲ್ ಸೈಟುಗೋಳು, ಹ್ಯಾಂಗಂತೀರೇನು, ಕೇಳ್ರಿ.

ಮದವಿ ಮನಿ ಅಂತ ಹೋಗತಿದ್ರಲಾ ಆಗಿನ ಮಂದಿ, ಈಗಿನ್ಹಂಗ ಉದ್ದಕ ಕ್ಯೂನ್ಯಾಗ ನಿಂತು ಎಡಗಡೆಯಿಂದ ಸ್ಟೇಜ ಏರಿ, ಮದಮಕ್ಕಳ ಕೈಯಾಗ ಒಂದು ಬುಕೆನೋ, ಗಿಫ್ಟೋ ತುರುಕಿ, ಫೋಟೋಕ್ಕ ಪೋಸ ಕೊಟ್ಟು, ವಿಡಿಯೋ ಇದ್ರ ಅದಕ್ಕೂ ಒಂದಿಷ್ಟು facebook doorಸ್ಮೈಲ್ ಕೊಟ್ಟು ಆ ಕಡೆ ಬಲಗಡೆಯಿಂದ ಇಳದು ಡೈರೆಕ್ಟ್ ಡೈನಿಂಗ್ ಹಾಲಿಗೆ ಎಂಟ್ರಿ ಹೊಡದು ಊಟಾ ಮಾಡಿ, ಹಂಗಿಂಧಂಗ ವಾಪಸ ಹೋಗತಿದ್ದಿದ್ದಿಲ್ಲಾ. ಒಂದಿನ ಮುಂಚೆನ ಹೋಗಿರತಿದ್ರು. ರಾತ್ರಿ ವರಪೂಜಾ, ರುಕ್ಕೋತಾ ಅಂತೆಲ್ಲಾ ಇರತಾವಲಾ. ವಧು-ವರನ ಹತ್ರದ ಸಂಬಂಧಿಕರಂತೂ ಅವೆಲ್ಲಾ ಗದ್ದಲದಾಗ ಇದ್ದರ ಉಳದಾವ್ರದು ಬ್ಯಾರೆ ಬ್ಯಾರೆ ಕೆಲಸ ಇರತಿದ್ವು.

ಶೈಲಾಗ ತನ್ನ ಖಾಸ ಗೆಳತಿ ಸುಧಾ ಸಿಕ್ಕಿರತಿದ್ಲು. ಅತ್ತಿ ಮನಿ ಛಾಡಾ ಎಲ್ಲಾ ಅಕಿ ಮುಂದ ಹೇಳಿದ್ರನ ಸಮಾಧಾನ ಇಕಿಗೆ. ‘ನಮ್ಮ ಅತ್ತಿ ಅಂದ್ರ ಏನಂತಿಳದೀ, ಗೋಮುಖ ವ್ಯಾಘ್ರ, ನಮ್ಮ ಅಪ್ಪಾ-ಅಮ್ಮನ ಮುಂದ ಎಷ್ಟ ಛಂದ ಕಿಸಿ-ಕಿಸಿ ನಕ್ಕೋತ ಮಾತಾಡತಾಳಂದೀ, ನಾಟಕದಾಗ ಪಾತ್ರಾ ಹಾಕಾವ್ರು ನಾಚಬೇಕು ನೋಡು, ಹಂಗ acting  ಮಾಡ್ತಾಳ. ಅವ್ರು ಆ ಕಡೆ ಹೋಗೂದ ತಡಾ ತನ್ನ ಮುಖವಾಡಾ ತಗದು ಖರೆ ಖರೆ ಪಾತ್ರಕ್ಕ ಬರತಾಳ ನೋಡು. ಸಾಕಾಗಿ ಹೋಗೇದವಾ ಸುಧಿ’ ಅಂತ ಶುರು ಮಾಡಿದ್ರ ಅದೇನ ಮೂರು ತಾಸಾದ್ರೂ ಮುಗಿಯೂ ಪುರಾಣ ಅಲ್ಲ ಬಿಡ್ರಿ. ಫೇಸಬುಕ್ಕಿನ್ಯಾಗ ಇಷ್ಟೆಲ್ಲಾ ಬರೀಲಿಕ್ಕಾಗತದ? ನೀವ ಹೇಳ್ರಿ.

ಇನ್ನ ಆ ಕಡೆ ವರಪೂಜಾ ನಡದಿರ್ತದ, ಅಲ್ಲಿ ನಮದೇನು ಕೆಲಸಂತ ಇಸ್ಪೀಟು ಬಡಿಯೋ ಗಂಡಸರಿಗೇನೂ ಬರಾ ಇರಲಿಲ್ಲ. ಹೆಂಗೂ ರಾತ್ರಿ ನಿಶಾಚರರ ಹಂಗ ಒಂದೆರೆಡು ಘಂಟೆಕ್ಕ ಊಟಕ್ಕ ಹಾಕತಾರ, ಯಾಕಂದ್ರ ಫರಾಳನ ರಾತ್ರಿ ಹತ್ತ ಘಂಟೆಕ್ಕ ಹಾಕಿರ್ತಾರ ಅಂಥೇಳಿ ಆರಾಮಾಗಿ ಒಂದ ಪಾಯಿಂಟಿಗೆ ಐದ ಪೈಸಾನೋ ಹತ್ತ ಪೈಸಾನೋ ರೊಕ್ಕಾ ಇಟ್ಟು ದುಡ್ಡು ಹಚ್ಚಿ ಆಡಾವ್ರು ಭಾಳ ಜನಾ ಇರ್ತಿದ್ರು. ಹೋದ್ರೂ ಬಂದ್ರೂ ಹತ್ತ ರುಪಾಯಿಗಿಂತಾ ಜಾಸ್ತಿ ಲುಕ್ಸಾನ ಆಗಿರ್ಬಾರ್ದು, ಆಟಾ ಆಡೋ ಚಟಾನೂ ತೀರಿರ್ಬೇಕು, ಹಂಗ ಆಡಾವ್ರು.

ಇನ್ನ ಮದವಿ ದಿನಾ ಹೊಸಾ ಹುಡಿಗ್ಯಾರೆಲ್ಲಾ ಖುಶಿಖುಶಿಯಾಗಿ, ಸೀರಿಪಾರಿ ಉಟಗೊಂಡು ಸರಭರಾ ಅಂತ ಸುಮ್ಮಸುಮ್ಮನ ಓಡ್ಯಾಡಲಿಕತ್ತಿದ್ದರಂದ್ರ, ಅವರ್ನ ನೋಡ್ಕೋತ ಹರೇದ ಹುಡುಗೋರು ಅವ್ರ ಹಿಂದಹಿಂದ ತಿರಗ್ಯಾಡಲಿಕತ್ತಿದ್ದರಂದ್ರ, ಅಲ್ಲೇ ಕುರ್ಚಿ ಮ್ಯಾಲೆ ಕೂತು ಬಂದಾವ್ರು ಹೋದಾವ್ರನ್ನೆಲ್ಲಾ ತಮ್ಮ ಚಾಳಿಸಿನ್ಯಾಗಿಂದನ ಒಂದ ನಮೂನಿ ಅಳತಿ ಮಾಡೋ ನರಸಿಂಹರಾಯರಿಗೆ ಯಾವದರೇ ಒಂದು ವಳ್ಳೆ ಕನ್ಯಾ ಕಣ್ಣಿಗೆ ಬಿದ್ದಿರತದ.

ಪಟಕ್ಕಂತ ಅವ್ರು ಕಾರ್ಯತತ್ಪರ ಆಗೇಬಿಡ್ತಾರ. ಆಜುಬಾಜು ಯಾರರೇ ಕೂತಾರೇನು ನೋಡಿ, ‘ಅಲ್ಲಾ ಅಲ್ಲೆ ಹಸುರು ಸೀರಿ ಉಟ್ಕೊಂಡು ಓದ್ಯಾಡಲಿಕತ್ತದಲ್ಲಾ ಹುಡುಗಿ, ಯಾರ ಮಗಳದು, ನಿಮಗೇನರೆ ಗೊತ್ತದಯೇನು?’ ಅಂತ ಕೇಳೇ ಬಿಡ್ತಾರ. ಅವ್ರೂ social media tiger‘ಹೌದ್ರೀ ರಾಯರ, ನಮ್ಮ ಭೀಮಾಚಾರ ಮಮ್ಮಗಳಕಿ. ಅಂದ್ರ ಹುಬ್ಬಳ್ಯಾಗ ಅವ್ರ ಹಿರೇ ಮಗಳು ಇದ್ದಾಳಲಾ, ಅಕಿ ಮಗಳಿಕಿ, ಎಂ. ಎ. ಮಾಡಲಿಕತ್ತಾಳಂತ, ಛೊಲೊ ವರಾ ಬಂದ್ರ ಮದವಿ ಮಾಡೋ ತಯಾರಿ ಒಳಗ ಇದ್ದಾರ ಅವ್ರೂ” ಅಂದ್ರೂ ಅಂತ ಇಟ್ಕೋರಿ, ಆಗ ನರಸಿಂಹರಾಯರ ಉತ್ಸಾಹ ಅಟ್ಟಕ್ಕೇರತದ.’

ನಮ್ಮ ಅಕ್ಕನ ಮಮ್ಮಗ ವರಾ ಇದ್ದಾನ್ರೀ, ಸರಕಾರಿ ಬ್ಯಾಂಕಿನ್ಯಾಗ ಭಾಳ ಛೊಲೋ ಕೆಲಸದ. (ಆವಾಗೆಲ್ಲಾ ಸರಕಾರಿ ಬ್ಯಾಂಕಿನ್ಯಾಗಿನ ಕೆಲಸಂದ್ರ ರಾಷ್ಟ್ರಪತಿ ಕೆಲಸ ಇದ್ಧಂಗಾಗಿತ್ತು) ಹುಡುಗನೂ ಒಳ್ಳೆಯಂವಾ, ಜಾತಕಾ ತರಿಸಿ ಕೊಟ್ರ ನೋಡಭೌದು ನೋಡ್ರಿ ಅಂತ ಇನ್ನೊಂದು ಮದವಿ ತಯಾರಿಗೆ ಪೀಠಿಕೆ ಹಾಕತಿದ್ದರು. ಈಗ ಫೇಸಬುಕ್ಕಿನ್ಯಾಗ ಪರಿಚಯ ಆಗಿ, ದೋಸ್ತಿ ಆಗಿ ಕೊನಿಗೆ ಮದವ್ಯಾದ್ರು ಅಂತೀರಲಾ, ಹಾಂಗ ಹುಡುಗಾ-ಹುಡುಗಿ ಮದವಿ ಮನ್ಯಾಗ ಒಬ್ಬರನೊಬ್ಬರು ನೋಡಿ ಪರಸ್ಪರ ಮೆಚ್ಚಿ ಮದಿವ್ಯಾಗೋ ಕೇಸಗಳಿಗೇನೂ ಕಡಿಮಿ ಇರಲಿಲ್ಲ.

ನಾವೂ ತೀರಾ ಅಷ್ಟೇನೂ ಹಳಬರಲ್ಲದಿದ್ರೂ ಈಗಿನ ಕಾಲದ ಹೈ-ಫೈ (ಅಥವಾ ವೈ-ಫೈ) ಹುಡುಗರ ಮುಂದ ಓಲ್ಡ್ ಪೀಪಲ್ ಆಗೇವಿ. ಆದ್ರ ನಮ್ಮ ಜಮಾನಾದಾಗ ನಾವೂ ಭಾಳ ಮಜಾ ಮಾಡ್ಕೋತನ ಇರ್ತಿದ್ವಿ ಅನ್ನೋ ಸಮಾಚಾರ ಮುದ್ದಾಂ ಇವರ ಮುಂದ ಹೇಳಿರಂಗಿಲ್ಲ. ಇಪ್ಪತೈದು ವರ್ಷದ ಹಿಂದ ಗುಡಿ-ಗುಂಡಾರಗೋಳಂದ್ರ ಯಂಥಾ ಆಕರ್ಷಣೆ ಇರೂವಂಥಾ ಸೋಷಿಯಲ್ ಸೈಟ್  ಆಗಿದ್ದೂವಂತ ಪಾಪ ಇವ್ರಿಗೆ ಹೆಂಗ ಗೊತ್ತಾಗಬೇಕು? ರಾಘವೇಂದ್ರ ಸ್ವಾಮಿ ಮಠ, ಹಣಮಪ್ಪನ ಗುಡಿ, ಗಣೇಶ ಮಂದಿರ, ಹಿಂಗ ಎಲ್ಲಾ ಬ್ರಹ್ಮಚಾರಿ ದೇವರ ಗುಡಿ ಮುಂದ ಕಾಲೇಜು ಹುಡುಗರ ದಂಡ ನೆರದಿರತಿತ್ತು.

ಸೋಮವಾರ ಕಪಿಲೇಶ್ವರ ದೇವಸ್ಥಾನ, ಮಂಗಳವಾರ ಗಣಪತಿ ಗುಡಿ, ಗುರುವಾರ ರಾಯರ ಮಠ, ಶನಿವಾರ ಹಣಮಪ್ಪನ ಗುಡಿ, ಆವಾಗಿವಾಗೊಮ್ಮೆ ಬ್ಯಾಸರಾ ಕಳಿಲಿಕ್ಕೆ ಮಿಲಿಟ್ರಿ ಮಹಾದೇವನ ಮಂದಿರ, ಹಿಂಗ ಬರೋಬ್ಬರಿ ವಾರಾ-ದಿವಸಾ ನೋಡಕೊಂಡು ಆಯಾ ದೇವರನ್ನ ಭೆಟ್ಟಿ ಮಾಡಿ, ನಮ್ಮ ಬೇಡಿಕಿ ಪಟ್ಟಿ ಇಡೋದು. ಸುಮ್ಮಸುಮ್ಮನ ಐದು, ಏಳು, ಛೊಲೋ ಹುಡುಗೋರು ಬಂದಿದ್ರ ಹನ್ನೊಂದು ಪ್ರದಕ್ಷಣಿ ಹಾಕಿ, ಪೂಜಾರಿಗೊಂದು ನಾಲ್ಕಾಣೆ ದಕ್ಷಣಿ ಹಾಕಿ, ತೀರ್ಥಾ ತೊಗೊಂಡು, ಹಗೂರಾಗಿ ಕಡೆಗಣ್ಣಲೇ ಮತ್ತ ಯ್ಯಾರ್ಯಾರು ಬಂದಾರ ಅಂತ ನೋಡೋದು.

ನಮ್ಮ ಗೆಳತ್ಯಾರು ಸಿಕ್ಕಬಿಟ್ಟರಂತೂ ಕೆಲಸಕ್ಕ ಬಾರದೇ ಇರೋ ಮಾತೆಲ್ಲಾ ಮಾತಡಕೋತ ಸುಮ್ಮಸುಮ್ಮನ ನಕ್ಕೋತ ಟೈಮ್ ಪಾಸ್ ಮಾಡೋದು. ಉಳದಾವ್ರೂ ಹಿಂಗ ಟೈಮ್ ಪಾಸ್ ಮಾಡಾವ್ರು. ಕಳ್ಳನ ಮನಸ್ಸು ಕಳ್ಳಗ ಗೊತ್ತು. ಬೇಕಾಗಿರೋ ಹುಡುಗಿ/ಹುಡುಗ ಬಂದ್ರೋ ದೇವ್ರ ಪ್ರಸಾದ ಸಿಕ್ಕಂಘ ಆತು, ಖುಶಿಲೇ ಮನಿಗೆ ಹೋಗತಿದ್ರು. ಈಗ ನೀವ ಹೇಳ್ರಿ ಇಂಥಾ ಸೈಟು ನಿಮ್ಮ ವೆಬ್ ಸೈಟಿಗಿಂತಾ ಹೆಚ್ಚು ಖುಶಿ ಕೊಡ್ತಾವೋ ಇಲ್ಲೋ?

ಇಂಥಾ ಸಾಮಾಜಿಕ ತಾಣಗೋಳು ಇನ್ನೂ ಭಾಳ ಇದ್ವು. ಈಗಿನಾವ್ರದೆಲ್ಲಾ ವ್ಯಕ್ತ ಭಾವನೆಗಳಾದ್ರ, ನಮ್ಮ ಕಾಲದವ್ರದೆಲ್ಲಾ ಅವ್ಯಕ್ತದಾಗ ಮುಗುದ ಹೋಗತಿತ್ತು. ಏನೇನೂ ಪರಿಚಯ ಇಲ್ಲದವ್ರ ಜೋಡಿಯೆಲ್ಲಾ ಈಗ ನೀವ ಹೆಂಗ ಫೇಸಬುಕ್ ಫ್ರೆಂಡ್ ಆಗ್ತೀರೋ ಹಂಗ ಗುರ್ತು, ಪರಿಚಯ ಹೆಸರು, ಪತ್ತೆ ಇಲ್ಲದ ಹುಡುಗೋರು ಹುಡಿಗ್ಯಾರನ ನೋಡಿ ಆವಾಗೂ ಆನಂದ ಪಟಗೋತಿದ್ರು. ಅವ್ರ ಗುರ್ತು ಹಿಡಿಲಿಕ್ಕೆ ಒಂದು ನಿಕ್ ನೇಮ್ ಇಲ್ಲಾ ಕೋಡ್ ವರ್ಡ್ ಕೊಟಗೊಂಡಿರ್ತಿದ್ರು. ‘ಏ 608 ಹೋದ ನೋಡಲೇ ವೀಣಿ’ ಅಂತಂದ್ರ 608 ನಂಬರ ಇರೋ ಸ್ಕೂಟರ ಮ್ಯಾಲೆ ಅವರ ಮೆಚ್ಚಿನ ಹುಡುಗ ಹೋದ ಅಂತ ಅರ್ಥ. ‘ಮುಟ್ಟಿದ್ರ faceಮುನಿ ಬಂದ ನೋಡು’ ಅಂದ್ರ ನಾಚಿಕಿ ಸ್ವಭಾವದ ಹುಡುಗ ಬಂದಾನ ಅಂತ. ಅವ್ರ ಹೆಸ್ರು, ಪಸ್ರು ತಿಳಕೊಳ್ಳೊ ಉಸಾಬರಿಗೆ ಹುಡುಗ್ಯಾರು ಹೋಗತಿದ್ದಿಲ್ಲ. ಅಷ್ಟೆಲ್ಲಾ ಡೀಪ ಇಂಟರೆಸ್ಟೂ ಇರತಿದ್ದಿಲ್ಲ. ಸುಮ್ನ ಟೈಂ ಪಾಸ್! ಅವ್ರೂ ಹಿಂಗ ಏನೇನು ಹೆಸರಿಡತಿದ್ರೋ ಏನೋ ಆ ದೇವ್ರ ಬಲ್ಲ.

ಹಿಂಗೆಲ್ಲಾ ಸಾಮಾಜಿಕ ತಾಣಗಳನ್ನ ಸಶಕ್ತವಾಗಿ ಬಳಸಿಕೊಂಡು, ಈಗ ಸಧ್ಯಾ ಸಂಸಾರದಾಗ ಮುಳಿಗೇಳೋ ನಮ್ಮನ್ನ ನೋಡಿ ಇವ್ರಿಗೇನೂ ಗೊತ್ತಿಲ್ಲ ಅಂತಂದ್ರ ನಮಘೆಂಗ ಅನಿಸಬ್ಯಾಡಾ? ಇನ್ನೊಂದು ಗುಟ್ಟು ಹೇಳ್ತೇನಿ ಕೇಳ್ರಿ, ಇಷ್ಟೆಲ್ಲಾ ಹಳೆದರ ಬಗ್ಗೆ ಕೊರದ್ರೂ, ಹೊಸಾದು ನಮಗೇನೂ ಗೊತ್ತಿಲ್ಲ ಅನಕೋಬ್ಯಾಡ್ರಿ. ಈ ಫೇಸಬುಕ್ಕು, ವಾಟ್ಸ್ಯಾಪ ಮ್ಯಾಲೂ ನಾವ ಭಾಳ active ಇದ್ದೇವಿ.

ಹಳೆ ಫ್ರೆಂಡ್ಸೂ ಹೊಸದಾಗಿ ಮತ್ತೊಮ್ಮೆ ಸಿಕ್ಕಾರ, ಇನ್ನೂ ಸಿಗಲಿಕತ್ತಾರ, ಅದರೊಳಗೂ ನಾವ ವಿಜ್ರಂಭಿಸೋ ಕಾಲ ಇದು, ಯಾಕಂತೀರಿ? ಈಗಿನ ಕಾಲದ ಹುಡುಗರಿಗೆ ಪಾಪ ಸಾಲಿ-ಕಾಲೇಜಿನ ಪುಸ್ತಕ ಓದೋದಂದ್ರನ ಕೆಟ್ಟ ಬೋರು, ಬರೆಯೋದಂತೂ ಮರತಬಿಡ್ರಿ. ಅಂಥಾದ್ರಾಗ ಅವರೇನು ಬರದಾರು, ಯಾರೇನು ಓದ್ಯಾರು? ಒಂದಿಷ್ಟು ಫೋಟೋ ಅಪ್ಲೋಡ ಮಾಡಿ, ಎಷ್ಟ ಮಂದಿ ಲೈಕ ಕುಟ್ಯಾರಂತ ನೋಡಕೋತ ಇದ್ದಬಿಡಾವ್ರು ಅವ್ರು.

ಈಗೀಗ ವಾಟ್ಸ್ಯಾಪ ಮ್ಯಾಲೆ ಧೊಡ್ಡು ಧೊಡ್ಡು ಮೆಸ್ಸೇಜ ಬರತಿರತಾವ. ಅವನ್ನರೇ ಓದ್ತಾರೋ ಇಲ್ಲೋ? ಅಂತೂ ಓದೇವಿ ಅಂತ ಹೇಳಲಿಕ್ಕೆ ಒಂದು ಕೈ ಚಿತ್ರಾನೋ, ಸ್ಮೈಲೀನೋ ಅಂಟಿಸಿ ಕೈ ಝಾಡಿಸಿಕೊಂಡು ಬಿಡ್ತಾರ. ಆದ್ರ ನಾವು, ಅಂದ್ರ ನಲವತ್ತು ದಾಟಿದಾವ್ರು ಬರೀತೇವಿ, ಓದ್ತೇವಿ. ಮತ್ತ ಅದಕ್ಕಂತ ಹಿಂಗ ಸ್ವಲ್ಪ ಜಾಸ್ತಿನs ಜಂಬಾ ತೋರಿಸ್ಕೋತ ಅಡ್ಯಾಡತೇವಿ, ಏನಂತೀರಿ?

 

‍ಲೇಖಕರು Admin

November 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sarojini Padasalagi

    ನೀತಾ ಅವರೇ ನೀವು ಹೇಳೋದು ಭಾಳ ಬರೋಬ್ಬರಿ ಅದ ನೋಡ್ರಿ. ನಮ್ಮ ಸಾಮಾಜಿಕ .ತಾಣಗಳ ಮಜಾ ,ಆನಂದ ,ವೈಶಿಷ್ಟ್ಯತೆ ಈಗೀನವ್ರಿಗೇನ ಗೊತ್ತ ಹೇಳ್ರಿ. ಮುಖಾ ಮೂತಿ ನೋಡಿರಾಂಗಿಲ್ಲ ,ಫೇಸ್ಬುಕ್ ಫ್ರೆಂಡ್ ಶಿಪ್ ಅಂತ .ಈಗಿನ ಸಾಮಾಜಿಕ ತಾಣಗಳಲ್ಲಿ ಸಿಗೋ ವರ ಕನ್ಯಾ ಮಾಹಿತಿಕಿಂತ ನಮ್ಮ ಮದುವೆ ಮನಿ ಒಳಗ , ಹಬ್ಬಾ ಹುಣ್ಣಿಮೆ ಅರಿಶಿನ ಕುಂಕುಮ. ಸಮಾರಂಭದಾಗ ಸಿಗೋ ಮಾಹಿತಿನ ಕ್ಲಿಯರ ಇರತಿದ್ದು . ತಾಸಗಟ್ಲೆ ವಾಟ್ಸಾಪ್ ಮೇಲೆ ದಿನಾಲೂ ಮಾತಾಡಿ ತಿಂಗಳಾದ ಮೇಲೆ ನಂದು ನಿಂದು ಪಟಾಸಾಂಗಿಲ್ಲ ಬಿಡು ಅನೋ ಹುಡಗ್ರ ಇವರು.ನಮ್ಮನ್ನೇನ ತೀರಾ ಏನೂ ಗೊತ್ತಿಲ್ಲದವರು ಅನ್ಕೊಂಡಾರ . ನಮ್ಮ ಮಜಾದ ರೀತಿನ ಬ್ಯಾರೆ .ಅವು ಹುಟ್ಟ ಹಾಕೋ ಕನಸಿನ ಆನಂದನ ಬ್ಯಾರೆ.ಹಂಗಂತ ನಾವೇನ ಯಾತರಾಗೂ ಹಿಂದೆ ಬಿದ್ದಿಲ್ಲ ಅಲ್ಲ .ಭಾಳ ಛಲೋ ಬರದೀರಿ ಆನಂದ ಆತ ನೋಡ್ರಿ.

    ಪ್ರತಿಕ್ರಿಯೆ
  2. ಆರತಿ ಘಟಿಕಾರ್

    ಭಾಳ್ ಚೊಲೊ ಅದ ಲೇಖನ..
    ಇನ್ನು ಇಂತ social sites ಒಳಗ ಮಸ್ತ ಮಜಾ ಇರ್ತದಾ ಅಂಬೊದು ನಮಗು ಅನುಭವ ಅದರಿ

    ಪ್ರತಿಕ್ರಿಯೆ
  3. Neeta Rao

    ಆರತಿ. ಘಟಿಕಾರ ಮೇಡಮ್ ಮತ್ತು ಸರೋಜನಿ ಪಡಸಲಗಿ ಮೇಡಮ್ ಇಬ್ಬರಿಗೂ ಥ್ಯಾಂಕ್ಸ್. ಒಂದು ಕಾಲಘಟ್ಟದ ಅನುಭವಗಳು ಹೆಚ್ಚುಕಡಿಮೆ ಒಂದೇ ಆಗಿರುತ್ತವೆ, ಮತ್ತು ನೆನಪಿಸಿಕೊಳ್ಳಲು ಖುಷಿಯಾಗುತ್ತದೆ ಅಲ್ವಾ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: