ರಶ್ಮಿ ಎಸ್
ಶಾಮ್ ಸೆ ಆಂಖ್ ಮೆ ನಮಿ ಸಿ ಹೈಆಜ್ ಫಿರ್ ಆಪ್ ಕಿ ಕಮಿ ಸಿ ಹೈ…ಜಗಜಿತ್ ಸಿಂಗ್ ಕಿವಿಯೊಳಗೆ ಗುನುಗುತ್ತಿದ್ದರು. ತೀರ ನಿನಗಷ್ಟೆ ರಶ್ಮಿ ಈ ಹಾಡು ಎಂಬಂತೆ. ಅದೇ… ಅದೇ ತಪ್ಪಾಗಿದ್ದು… ನನ್ನೆದೆಯ ತಳಮಳ, ತಹತಹ ಎಲ್ಲವೂ ಜಗಜಿತ್ ಸಿಂಗ್‌ನ ನೋವು ತುಂಬಿದ ಮಾಧುರ್ಯದಲ್ಲಿ ಅರಗಿಸಿ, ಕರಗಿಸಿ ಕಿವಿಯೊಳಗೆ ಬಿಸಿ ಎರಕ ಹೊಯ್ದಂತೆ. ಕೇಳುಕೇಳುತ್ತಲೇ ಬಿಸಿಯುಸಿರು. ಸಂಜೆಯಿಂದೇಕೋ ಕಂಗಳಲ್ಲಿ ಪಸೆಯೊಂದಿದೆ, ಮತ್ತೆ ಇಂದೇಕೊ ನಿನ್ನ ಕೊರತೆ ಕಾಡುತಿದೆ ಎಂಬರ್ಥ ಬರುವ ಹಾಡದು. ಗುಲ್ಜಾರ್ ರಚಿತ ಗಜಲ್ ಅದು. ಮೊದಲ ಸಾಲು ಕಿವಿಯೊಳಗೆ ಬೀಳುತ್ತಲೇ ಎದೆ ಸಮುದ್ರದೊಳು ನೆನಪಿನಲೆಗಳ ದಾಳಿ. ಅದೆಷ್ಟು ಸದ್ದು, ಅದೆಷ್ಟು ಧಾವಂತ. ಬಂದು ಎದೆಗಪ್ಪಳಿಸಿದಂತೆಲ್ಲ, ನೀರ ಹನಿಗಳು ಕಂಗಳಿಂದಾಚೆ ಬರುವ ತವಕದಲ್ಲಿರುತ್ತವೆ. ಆದರೆ ಬಂದಷ್ಟೇ ವೇಗವಾಗಿ ಹಿನ್ನಡೆಯುವ ಶಿಸ್ತಿನ ಸಿಪಾಹಿಯಂತ ಅಲೆಗಳು… ಪಾಪ… ಆ ಕಂಬನಿಯನ್ನೂ ತಡೆ ಹಿಡಿಯುತ್ತವೆ.
ಹಟಮಾರಿ ಹನಿಯೊಂದು ಮಾತ್ರ ಮರಳ ಮೇಲೆ ಸಿಡಿದು ಹಿಂಗಿ ಹೋಗುವಂತೆ ಕೆನ್ನೆಗುಂಟ ಇಳಿಯುತ್ತಲೇ ಹೋಗುತ್ತದೆ. ಆಗಲೇ ಹಾಡಿನ ಎರಡನೆಯ ಸಾಲು, ‘ದಫನ್ ಕರ್ ದೊ ಹಮೆ, ಕಿ ಸಾಂಸ್ ಮಿಲೆ..ನಬ್ಜ್ ಕುಛ್ ದೇರ್ ಸೆ ಥಮಿ ಸಿ ಹೈ…’ಒಮ್ಮೆ ಹೂಳಿಬಿಡು ನನ್ನನ್ನು, ಚೂರು ಉಸಿರಾಡುವೆ.. ಎದೆಮಿಡಿತ ಸ್ವಲ್ಪ ಹೊತ್ತಿನಿಂದ ನಿಂತಂತಿದೆ… ಎನ್ನುವಾಗ ಎದೆಬಿರಿಯೆ ಅಳಬೇಕೆನ್ನುವ ಭಾವವೂ ಆ ಕಣ್ಣೀರಿನೊಂದಿಗೆ ಕೆನ್ನೆಯಿಂದ ತುಟಿಯಂಚಿಗೆ ಒಂದಷ್ಟು, ದಿಂಬಿನ ಮೇಲೆ ಹೊರಳುಮಗ್ಗುಲಾಗಿ ಅತ್ತಿದ್ದರೆ, ಮೂಗಿನ ತುದಿಯಿಂದ ತುಟಿಗೆ ಜಂಪ್ ಮಾಡುವ ಹನಿ.. ತೀರ ಆಗಲೇ ಜಂಪ್ ಮಾಡಲ ಕಲಿತ ಮಗು, ಸೋಫಾದಿಂದ ಕೆಳಗೆ ಕುಣಿಯುವಂತೆ ಧುಮುಕಿರುತ್ತದೆ. ಆ ದುಃಖದಲ್ಲೂ ಆ ಹನಿ ತುಟಿಗೆ ತಾಕಿದಾಗ, ಸಮುದ್ರದ ನೀರೂ ಉಪ್ಪು, ಮನದೊಳು ಅಲೆಯೆಬ್ಬಿಸುವ ನೀರೂ ಉಪ್ಪುಪ್ಪು ಅಂತ ಗೊತ್ತಾಗುವುದೇ ಆಗ.

ಅದ್ಹೆಂಗೊ, ಜಗಜಿತ್ ಸಿಂಗ್ ಧ್ವನಿಯ ನೋವು ಭರಿತ ಮಾಧುರ್ಯ, ಈ ಹೊತ್ತಿಗಾಗಲೇ ಒಂದು ಹದಕ್ಕೆ ತಂದಿರುತ್ತದೆ. ಮನ ಸ್ಥಿಮಿತಗೊಳಿಸುವ ಸಾಲುಗಳು ಮನಸನ್ನು ಸಮಾಧಾನಗೊಳಿಸುತ್ತವೆ. ‘ವಕ್ತ್ ರೆಹತಾ ನಹಿ ಹೈ ಟಿಕ್ ಕರ್‌ಇಸ್ಕಿ ಆದತ್ ಭಿ ಆದಮಿ ಸಾ ಹೈ’ಆಯ್ತಲ್ಲ.. ಅಲ್ಲಿಗೆ ಕಾಲ ಮತ್ತು ಪುರುಷ ಎರಡೂ ಒಂದೆಡೆ ಕಾಲೂರಲಾರರು. ಇದವರ ಆದತ್… ಅಭ್ಯಾಸ ಬಲ. ಇಂದಿಲ್ಲಿ.. ನಾಳೆ ಇನ್ನೆಲ್ಲಿಯೋ.. ಯಾವುದೂ ನಮಗಾಗಿ ಅಲ್ಲ, ನಮಗಾಗಿ ಇಲ್ಲ. ಸುದೀರ್ಘ ನಿಟ್ಟುಸಿರು ಒಂದಾಚೆ ಬಂದಿರುತ್ತದೆ. ಅದು ಸಮಾಧಾನದ್ದೋ, ಮನವೆಂಬ ಸಮುದ್ರ ತಹಬದಿಗೆ ಬಂದದ್ದೋ (ಬರುತ್ತದಾ?) ಒಟ್ನಲ್ಲಿ ಒಂದು ಹದಕ್ಕೆ ಬಂದಿರ್ತೀವಿ.
ಆಗ ಮುಂದಿನ ಸಾಲು ಸಮಾಧಾನಿಸುತ್ತದೆ. ಕೋಯಿ ರಿಶ್ತಾ ನಹಿ ರಹಾ ಫಿರ್‌ಭಿಏಕ್ ತಸ್ವೀರ್ ಲಾಜ್ಮಿ ಸಿ ಹೈ..ಯಾವ ಬಾಂಧವ್ಯಗಳೂ ಉಳಿಯಲಿಲ್ಲವಾದರೂ… ಚಿತ್ರವೊಂದನ್ನು ದಿಟ್ಟಿಸುವುದು, ಉಳಿಸಿಕೊಳ್ಳುವುದು ಲಾಜ್ಮಿ ಇದೆ…ಮತ್ತದೇ ಫೋಟೊ, ಅವೇ ಕಂಗಳು.. ಆ ಕಂಗಳಲ್ಲಿ ನಾನಿದ್ದೆನಾ? ನನ್ನ ಬಿಂಬ ಕಾಣುತ್ತದೆಯೇ? ಒಂದು ಕಾಲದಲ್ಲಿ, ಆ ಕಣ್ತುಂಬಾ ನನ್ನೊಲವಿತ್ತು. ನನಗಾಗಿಯೇ ಇತ್ತು… ಈಗಲೂ ಇದೆಯಾ..? ಇರಬಹುದೇನೋ.. ಆದರೆ…ಈ ಆದರೆ ಮುಗಿಯುವ ಮುನ್ನ ಇನ್ನೊಂದು ಹಾಡು, ಕಿವಿಯೊಳಗೆ ಅನುರಣಿಸುತ್ತಿರುತ್ತದೆ… ‘ಅಗರ್ ಹಮ್ ಕಹೆ… ಔರ್..‘






0 Comments