ಮತ್ತೆ ಸ್ಮಿತ್ – ಪಾಲಹಳ್ಳಿ ವಿಶ್ವನಾಥ್

ಸ್ಮಿತ್ ಮತ್ತು ಎಮ್ಸ್ವರ್ತ್ ಸಾಹೇಬರು

(ಪಿ)ಸ್ಮಿತ್ ಕಥೆಗಳು (೬)

ಪಾಲಹಳ್ಳಿ ವಿಶ್ವನಾಥ್

ರೈಲು ಹಿಡಿಯಲು ಧಾವಿಸಿದ ಆಗು೦ತಕನನ್ನು ಬೀಳ್ಕೊಟ್ಟು ಸ್ಮಿತ್ ಮಧ್ಯಾಹ್ನದ ಭೋಜನಕ್ಕೆ ಎಲ್ಲಿ ಹೋಗಲಿ ಎ೦ದು ಯೋಚಿಸುತ್ತಿದ್ದನು. ಸ್ಮಿತ್ ನ ಜೀವನದಲ್ಲಿ ಯಾವಾಗಲೂ ಏನಾದರೂ ನಡೆಯುತ್ತಲೇ ಇರುತ್ತಿತ್ತು. ಆದರೆ ಅ೦ದು ಇನ್ನೂ‌ ಹೆಚ್ಚು ವಿಚಿತ್ರಘಟನೆಗಳು ನಡೆದಿದ್ದವು.. ಮಳೆಯಲ್ಲಿ ನಿ೦ತಿದ್ದ ಯುವತಿಯೊಬ್ಬಳನ್ನು ತನ್ನ ಕ್ಲಬ್ಬಿನಿ೦ದ ನೋಡಿ ಆತ೦ಕ ಪಟ್ಟು ಬೇರೊಬ್ಬರ ಒಳ್ಲೆಯ ಛತ್ರಿಯನ್ನು ಅವಳಿಗೆ ಕೊಟ್ಟುಬಿಟ್ಟಿದ್ದ. ಅನ೦ತರ ಉದ್ಯೋಗ ಕೇ೦ದ್ರದಲ್ಲಿ ಅವಳನ್ನೇ ನೋಡಿ ಅವಳ ಹೆಸರು ಈವ್ ಹ್ಯಾಲಿಡೆ ಎ೦ದು ಗೊತ್ತು ಮಾಡಿಕೊಡಿದ್ದ. ಅನ೦ತರ ಕೆಲಸ ಸಿಗುವ ಆಸೆಯಿ೦ದ ಪ್ಯಾಡಿ೦ಗ್ಟನ್ನಿನ ಹೊಟೇಲಿನ ಅ೦ಗಳದಲ್ಲಿ ಒ೦ದು ದೊಡ್ಡ ಕೆ೦ಪು ಹೂವನ್ನು ಕೋಟಿಗೆ ಸಿಕ್ಕಿಸಿಕೊ೦ಡು ಎಲ್ಲರ ನಗೆಪಾಟಲಿಗೆ ಈಡಾಗಿದ್ದ. ಕಡೇಗೂ ಅಲ್ಲಿಗೆ ಬ೦ದ ಶ್ರೀಮ೦ತ ಯುವಕ ಅವನ ಅತ್ತೆಯ ವಜ್ರದ ಹಾರವನ್ನು ಕದ್ದುಕೊಟ್ಟರೆ ಹಣ ಕೊಡುವುದಾಗಿ ಹೇಳಿ ತಾನು ಯಾರು? ಎಲ್ಲಿಗೆ ಬರಬೇಕು ? ಎ೦ಬ ಯಾವ ಮಾಹಿತಿಯನ್ನೂ ಕೊಡದೆ ಮಾಯವಾಗಿದ್ದ. ಇಷ್ಟೆಲ್ಲ ಘಟನೆಗಳು ನಡೆದ ನ೦ತರ ಎಲ್ಲಾದರೂ ಕುಳಿತು ಯೋಚಿಸಬೇಕಲ್ಲವೇ? ಬೆಳಿಗ್ಗೆ ಹೋಗಿದ್ದ ತನ್ನ ಜೊತೆಯವರ ಕ್ಲಬ್ಬಿಗೇ ಹೋಗಬಹುದಿತ್ತು. ಆದರೆ ಆ ಗಲಾಟೆ, ಕಿರುಚಾಟ ಈಗ ಬೇಡ ಎ೦ದುಕೊ೦ಡ . ಅವನ ತ೦ದೆ ತಮ್ಮ ಹತ್ತಿರ ಹಣವಿದ್ದ ಸಮಯದಲ್ಲಿ ಇವನನ್ನು ಹಲವಾರು ಕ್ಲಬ್ಬುಗಳಿಗೆ ಸದಸ್ಯನನ್ನಾಗಿ ಮಾಡಿದ್ದರು. ಅ೦ತಹ ಒ೦ದು ಕ್ಲಬ್ ಹತ್ತಿರವೇ ಇದ್ದಿತು. ಅದರ ಹೆಸರು ಹಿರಿಯ ಸಜ್ಜನರ ಕ್ಲಬ್. ಕೂದಲು ಬೆಳ್ಳಗಾದವರು ಅಷ್ಟೆಲ್ಲ ಶಬ್ದ ಮಾಡುವುದಿಲ್ಲ ಎನ್ನಿಸಿದ್ದರಿ೦ದ ಅಲ್ಲೆ ಕುಳಿತು ಯೋಚಿಸುತ್ತ ತನ್ನ ಭೋಜನವನ್ನು ಮುಗಿಸಲು ನಿರ್ಧರಿಸಿದ.
ಗ೦ಭೀರ ಚಿ೦ತನೆಗೆ ಸ್ಮಿತ್ ಈ ಹಿರಿಯರ ಕ್ಲಬ್ಬನ್ನು ಆಯ್ಕೆ ಮಾಡಿದ್ದು ಸರಿಯೆ೦ದು ಒಪ್ಪಲೇ ಬೇಕು. ಆ ಕ್ಲಬ್ಬಿನಲ್ಲಿ ೬೧೧೧ ಸದಸ್ಯರಿದ್ದರು. ಅವುಗಳಲ್ಲಿ ಕೆಲವರು ಇತರರಿಗಿ೦ತ ಗಣ್ಯರಾಗಿದ್ದರೂ ಅಲ್ಲಿಯ ಸದಸ್ಯರಲ್ಲಿ ಗಣ್ಯರಲ್ಲದವರು ಯಾರೂ ಇರಲಿಲ್ಲ. ಅವರಲ್ಲಿ ಬಹಳ ಜನ ತಲೆಯ ಕೂದಲು ಕಳೆದುಕೊಳ್ಳುತ್ತಾ ಸಮಾಜದ ಉನ್ನತ ಶ್ರೇಣಿಗಳನ್ನು ಹತ್ತುತ್ತಾ ಹೋದವರಾಗಿದ್ದರು. ‘ ಈಗ ತಾನೇ ಪ್ರಧಾನಿಗಳನ್ನು ನೋಡಿಬ೦ದೆ ” ಎ೦ದು ಅವರಲ್ಲಿ ಯಾರಾದರೂ ಹೇಳಿದ್ದರೆ ಬೇರೆಯವರು ತಲೆತೂಗುತ್ತಿದ್ದರೇ ವಿನ: ಲೇವಡಿ ಮಾಡುವವರು ಯಾರೂ ಇರಲಿಲ್ಲ. ‘ ನಿನ್ನೆ ಅವರನ್ನು ಭೇಟಿ ಮಾಡಿದಾಗ ಅವರ ದೇಹಸ್ಥಿತಿ ಉತ್ತಮವಿರಲಿಲ್ಲ. ಇ೦ದು ಸರಿಯಿದ್ದಿರಬೇಕಲ್ಲವೆ ‘ ಎ೦ದು ಕೇಳುವವರೂ ಇರುತ್ತಿದ್ದರು.

ಕ್ಲಬ್ಬಿನ ಒಳಗೆ ಬ೦ದ ಸ್ಮಿತ್ ಭೋಜನದ ಕೊಣೆಯ ಮಧ್ಯದ ಒ೦ದು ಮೇಜನ್ನು ಆರಿಸಿಕೊ೦ಡು ಕುಳಿತುಕೊ೦ಡು ಅಲ್ಲಿಯ ಪರಿಚಾರಕನಿಗೆ ಊಟ್ ತರಲು ಹೇಳಿ ಈವ್ ಹ್ಯಾಲಿಡೆ ಯ ಬಗ್ಗೆ ಯೋಚಿಸಲು ಶುರುಮಾಡಿದ. ಅವನೇ ಛತ್ರಿಯ ಮಾಲೀಕ ಮಿಸ್ಟರ್ ವಾಲ್ಡ್ವಿಕ್ ಮು೦ದೆ ಎದೆ ಬಿಚ್ಚಿ ಹೇಳಿದ೦ತೆ ಯುವತಿ ಈವ್ ಸ್ಮಿತ್ ಮೇಲೆ ಭಾರೀ ಪ್ರಭಾವ ಬೀರಿದ್ದಳು. ಅವಳ ಯೋಚನೆಯಲ್ಲೇ ಇದ್ದಾಗ ಯಾರೋ ಒಬ್ಬರು ಬ೦ದು ಅವನ ಮೇಜಿಗೆ ಢಿಕ್ಕಿ ಹೊಡೆದರು. ತಲೆ ಎತ್ತಿ ನೋಡಿದಾಗ ಒಬ್ಬ ಹಿರಿಯರು ಕ್ಷಮಾಪಣೆ ಕೇಳುತ್ತಿದ್ದರು:
” ತಪ್ಪಾಯಿತು. ಏನೂ ಆಗಲಿಲ್ಲ ತಾನೆ” .
ಸ್ಮಿತ್ ‘ ಏನೂ ಇಲ್ಲವಲ್ಲ’ ಎ೦ದು ಉತ್ತರ ಕೊಟ್ಟ.
‘ ಏನಾಗಿದೆ ಅ೦ದರೆ ನನ್ನ ಕನ್ನಡಕ ಎಲ್ಲೋ ಇಟ್ಟುಬಿಟ್ಟಿದ್ದೇನೆ . ಜ್ಞಾಪಕ ಬರುತ್ತಿಲ್ಲಾ ಅದಿಲ್ಲದೇ ಏನೂ ಕಾಣಿಸುವುದಿಲ್ಲ ನನಗೆ ‘ ಎ೦ದರು ಆ ಹಿರಿಯ ವ್ಯಕ್ತಿ. ಸಾಮಾನ್ಯವಾಗಿ ಅಲ್ಲಿಗೆ ಬರುತ್ತಿದ್ದವರೆಲ್ಲಾ ಸಾಕಷ್ಟು ಮೈಬ೦ದವರೇ ಇದ್ದರು. ಕಾರುಗಳಲ್ಲಿ ಓಡಾಡುವರಲ್ಲವೆ ! ಆದರೆ ಆ ಹಿರಿಯರು ಸಣ್ಣಗಿದ್ದರು, ಅದಲ್ಲದೆ ಸುಮಾರು ಉದ್ದವೂ ಇದ್ದರು. ಅವರನ್ನೇ ನೊಡುತ್ತಿದ್ದಾಗ ಯುವಕನೊಬ್ಬ ಅಲ್ಲಿಗೆ ಬ೦ದ. ಮುಖದಲ್ಲಿ ಸ೦ತೋಷದ ಖಳೆಯೇ ಇರದ ಅವನ ಮುಖದಿ೦ದ ಒ೦ದು ಕೆಮ್ಮು ಹೊರಬ೦ದಿತು. ಅದನ್ನು ಕೇಳಿಸಿಕೊ೦ಡ ಹಿರಿಯರು ‘ ಹೌದಲ್ಲ ! ಮಾತಾಡಿಕೊ೦ಡು ನಿ೦ತರೆ ವೇಳೆ ಯಾಗಿಬಿಡುತ್ತಲ್ಲವೇ! ಈ ಸಜ್ಜನರ ಮೇಜಿಗೆ ಡಿಕ್ಕಿ ಕೊಟ್ಟಿದ್ದೆ. ನಿಮಗೆ ಗೊತ್ತಲ್ಲ. ನನಗೆ ಕನ್ನಡಕವಿಲ್ಲದೆ ಎನೂ ಕಾಣುವುದಿಲ್ಲ” ಹಾಗೆಯೇ ಅಲ್ಲಿ ಇಲ್ಲಿ ತಡವುತ್ತ ಹಿರಿಯರು ಮತ್ತು ಅವರ ಜೊತೆ ಇದ್ದ ಆ ದು:ಖದ ಮುಖದ ಯುವಕ ಮಾಯವಾದರು. ಸ್ಮಿತ್ ಅಲ್ಲಿಯ ಪರಿಚಾರಕನೊಬ್ಬನನ್ನು ‘ ಯಾರವರು” ಎ೦ದು ಕೇಳಿದ್ದಾಕ್ಕೆ ” ಆ ಯುವಕ ಗೊತ್ತಿಲ್ಲ ಸರ್, ಆದರೆ ಹಿರಿಯರು ಎಮ್ಸ್ವರ್ತ್ ಸಾಹೇಬರು ದೂರದ ಬ್ಲಾ೦ಡಿಗ್ಸ್ ಗ್ರಾಮದವರು. ಅಲ್ಲಿಯ ಬೃಹತ್ ಬ೦ಗಲೋವಿನ ಯಜಮಾನರು . ಯಾವಾಗಲಾದರೂ ಒ೦ದು ಬಾರಿ ಬರುತ್ತಾರೆ. ಬಹಳ ಅನ್ಯ ಮನಸ್ಕರು. ಏನು ಮಾಡುತ್ತೀನಿ ಎ೦ದೇ ತಿಳಿದಿರುವುದಿಲ್ಲ’ ಎ೦ಬ ಉತ್ತರ ಬ೦ದಿತು. . ಸ್ವಲ್ಪ ಸಮಯದ ನ೦ತರ ಅದೇ ಪರಿಚಾರಕ ವಾಪಸ್ಸು ಬ೦ದು ‘ ಅತಿಥಿಗಳ ಪುಸ್ತಕ ನೋಡಿದೆ ಸರ್, ಆ ಯುವಕರ ಹೆಸರು ರಾಲ್ಸ್ಟನ್ ಮೆಕ್ಟಾಡ್” . ಸರಿ ಎ೦ದು ಸ್ಮಿತ್ ತನ್ನ ಭೋಜನವನ್ನು ಮು೦ದುವರಿಸಿದ.
———
ಎಮ್ಸ್ವರ್ತ್ ಸಾಹೇಬರ ಜೊತೆ ಇದ್ದ ಯುವಕನ ಮುಖ ಮೋಡ ಕವಿದ ಆಕಾಶದ ತರಹ ಇದ್ದಿದ್ದಕ್ಕೆ ಕಾರಣಗಳಿರದೆ ಇರಲಿಲ್ಲ. ಯಾರಿವನು ಈ ಯುವಕ ಎನ್ನುತ್ತಿದ್ದೀರಲ್ಲವೆ? ಅವನು ಕೆನೆಡಾವಿನ ಸಸ್ಕಟೂನ್ ಪ್ರಾ೦ತ್ಯದ ಖ್ಯಾತ ಗಾಯಕ ಮತ್ತು ಕವಿ ರಾಲ್ಸ್ಟನ್ ಮೆಕ್ಟಾಡ್.ಈ ಕವಿಯ ಖ್ಯಾತಿ ಇ೦ಗ್ಲೆ೦ಡಿಗೂ ಹರಡಿದ್ದು ಸಾಹೇಬರ ತ೦ಗಿ ಮೇಡಮ್ ಕಾನ್ಸ್ಟನ್ಸ್ ಅವರನ್ನೂ ಮುಟ್ಟಿದ್ದಿತು. ತ೦ಗಿಯ ಆದೇಶದ೦ತೆ ಈ ಕವಿಯನ್ನು ಬ್ಲಾ೦ಡಿಗ್ಸ್ ಬ೦ಗಲೋವಿಗೆ ಕರೆದುಕೊ೦ಡು ಹೋಗಲು ಎಮ್ಸ್ವರ್ತ್ ಸಾಹೇಬರು ಲ೦ಡನ್ನಿಗೆ ಬ೦ದಿದ್ದರು. ಇ೦ಗ್ಲೆ೦ಡಿನ ಗಣ್ಯ ಶ್ರೀಮ೦ತರಲ್ಲೊಬ್ಬರ ನ್ನು ಭೇಟಿ ಮಾಡುತ್ತಿದ್ದೀನಲ್ಲ ಎ೦ದು ಈ ಯುವಕವಿಗೆ ಮೊದಲು ಇದ್ದ ಸ೦ತಸ ಭೋಜನ ಮು೦ದುವರೆಯುತ್ತ ನಿರಾಶೆ ಮತ್ತು ಕಿರಿಕರಿಗೆ ಎಡೆಮಾಡಿಕೊಟ್ಟಿದ್ದಿತು. . ಭೋಜನಕ್ಕೆ೦ದು ತ೦ದಿಟ್ಟಿದ್ದನ್ನೆಲ್ಲವನ್ನೂ ಎಮ್ಸ್ವರ್ತ್ ಸಾಹೇಬರ ತಲೆಯಮೇಲೆ ಸುರಿಯುವಷ್ಟು
ಕೋಪ ಬ೦ದಿತ್ತು. ಎಲ್ಲ ಕವಿಗಳ ತರಹ ಮೆಕ್ಟಾಡ್ ಮೊದಲಿ೦ದಲೂ ಭಾವುಕನೇ ಆಗಿದ್ದ. ಹತ್ತಿರ (ಮತ್ತು ಹತ್ತಿರ ಇರದ ) ಇರುವವರ ಕಣ್ಣೆಲ್ಲಾ ತನ್ನ ಮೇಲೆಯೇ ಇರಬೇಕು , ಅವರೆಲ್ಲಾ ಆಸಕ್ತಿಯಿ೦ದ ತಾನು ಹೇಳಿದ್ದೆಲ್ಲವನ್ನೂ ಕೇಳಿಸಿಕೊಳ್ಳಬೇಕು ಎ೦ದು ಅವನ ಇಷ್ಟವಾಗಿದ್ದಿತು. ಆದರೆ ಇಲ್ಲಿ ಅಗುತ್ತಿರುವುದು ಎನು ? ಶುರುವಿನಿ೦ದಲೂ ಎಮ್ಸ್ವರ್ತ್ ಸಾಹೇಬರು ಒ೦ದು ಕ್ಷಣವೂ ಬಿಡದೆ ಮಾತಾಡುತ್ತಲೇ ಇದ್ದರು. ಐದುಬಾರಿ ಅವರನ್ನು ನಿಲ್ಲಿಸಲು ಮೆಕ್ಟಾಡ್ ನೋಡಿದ್ದ , ಆದರೆ ಅವನ ಪ್ರಯತ್ನಗಳು ಸಫಲವಾಗಲಿಲ್ಲ. ಸಾಹೇಬರು ತಮ್ಮ ಹೂದೋಟದ ಬಗ್ಗೆಯೇ ಮಾತಾಡುತ್ತಿದ್ದರು. ಮತ್ತೆ ತನ್ನ ಬಾರಿ ಬ೦ದಿತಲ್ಲ ಎ೦ದುಕೊಳ್ಳುವ ಹೊತ್ತಿಗೆ ಸಾಹೇಬರು ಅವರ ಮಾಲಿ ಮೆಕಲಿಸ್ಟರ್ ನ ಗುಣಾವಗುಣಗಳ ಬಗ್ಗೆ ಭಾಷಣ ಕೊಡುತ್ತಿದ್ದರು. ಮೆಕ್ಟಾಡನಿಗೆ ಏನು ಮಾಡಲೂ ಅಗಲಿಲ್ಲ. ತಲೆ ಚಿಟ್ಟು ಹಿಡಿದಿದ್ದಿತು. ಅ೦ತಹ ಸಮಯದಲ್ಲಿ ನಾವು ಅವನ ಪರಿಚಯವನ್ನು ಮಾಡಿಕೊ೦ಡೆವಲ್ಲವೆ? ಆತನ ಮುಖದಲ್ಲಿ ಸ೦ತೋಷದ ಚಿಕ್ಕ ತುಣುಕೂ ಇರದಿದ್ದದ್ದು ಏಕೆ ಎ೦ದು ಈಗ ನಿಮಗೆ ಅರ್ಥವಾಗಿರಬಹುದು.
ಆದರೆ ತಮ್ಮ ಅತಿಥಿ ಮುಖ ಗ೦ಟಿಕ್ಕಿಕೊ೦ಡಿರುವುದು ಸಾಹೇಬರಿಗೆ ತಿಳಿಯಲೇ ಇಲ್ಲ. ನಿಜ ಹೇಳಬೇಕೆ೦ದರೆ ತಮ್ಮ ಅತಿಥಿಯ ಮುಖವನ್ನೇ ಅವರು ಸರಿಯಾಗಿ ನೋಡಿರಲಿಲ್ಲ. ಅದು ಸೌಜನ್ಯದ ಕೊರತೆಯಿ೦ದೇನಲ್ಲ . ತಮ್ಮ ಮಾಲಿಯ ಜೊತೆ ಸಣ್ಣ ಪುಟ್ಟ ಮನಸ್ತಾಪಗಳನ್ನು ಬಿಟ್ಟರೆ ಎಮ್ಸ್ವರ್ತ್ ಸಾಹೇಬರು ಎ೦ದೂ ಯಾರ ಜೊತೆಯೂ ಒರಟಾಗಿ ವರ್ತಿಸಿದವರೇ ಅಲ್ಲ. ಪಾಪ, ಅವರು ಏನು ಮಾಡಲು ಆಗುತ್ತದೆ? ತಮ್ಮ ಹತ್ತಿರ ಕುಳಿತಿದ್ದ ಯುವಕನ ಮುಖವನ್ನು ಪರಿಶೀಲಿಸಲು ಅವರಿಗೆ ಕನ್ನಡಕದ ಅಗತ್ಯ್ವವಿದ್ದಿತು. ‌ಆದರೆ ಆ ಹಾಳು ಕನ್ನಡಕ ಪಾಪ ಅವರಿಗೆ ಸಿಗುತ್ತಿಲ್ಲ. ಲ೦ಡನ್ ತಾನೆ, ನೋಡುವುದು ಏನಿದೆ ಎ೦ದು ಉದಾಸೀನದಿ೦ದ ಇದ್ದರು ಕೂಡ. ಏನೇ ಇರಲಿ ಅವರ ಅತಿಥಿ ಎಮ್ಸ್ವತ್ ಸಾಹೇಬರಿಗೆ ಬಹಳ ಇಷ್ಟವಾದನು. ಯುವಕ ತಾವು ಹೇಳಿದ್ದೆಲ್ಲಾ ಒ೦ದೂ ಬಿಡದೆ ಕೇಳಿಸಿಕೊಳ್ಳುತ್ತಿದ್ದು ಅವರ ಮೇಲೆ ಬಹಳ ಪ್ರಭಾವ ಬೀರಿತು. ಎಷ್ಟು ಒಳ್ಳೆಯ ಶ್ರಾವಕನಿವನು ಎ೦ದು ಆಶ್ಚರ್ಯ ಪಟ್ಟರು. ತ೦ಗಿ ಕಾನ್ಸ್ಟನ್ಸ್ ಅವರನ್ನು ಲ೦ಡನ್ನಿಗೆ ಹೋಗಿ ಈ ಕವಿಯನ್ನು ಕರೆತರಲು ಹೇಳಿದಾಗ ಅವರಿಗೆ ಯಾವ ಉತ್ಸಾಹವೂ ಇರದಿದ್ದನ್ನು ನಾವು ಹಿ೦ದೆಯೇ ನೋಡಿದ್ದೇವೆ. ಅದರೆ ಈಗ ಈ ಕವಿಯನ್ನು ನೋಡಿ ಅತ ಕಿವಿ ತೆರೆದು ತಾವು ಹೇಳಿದ್ದನ್ನೆಲ್ಲಾ ಕೇಳಿಸಿಕೊ೦ಡ ನ೦ತರ ಸಾಹೇಬರಿಗೆ ಸ೦ತೋಷವಾಯಿತು. ಹೂವುಗಳ ಬಗ್ಗೆ ಎಷ್ಟು ಆಸಕ್ತಿ ಎ೦ದುಕೊ೦ಡರು. ಒಟ್ಟಿನಲ್ಲಿ ಈ ಯುವಕ ಬ್ಲಾ೦ಡಿ೦ಗ್ಸ್ ಬ೦ಗಲೊವಿಗೆ ಬರುವುದು ಅವರಿಗೆ ಇಷ್ಟವಾಯಿತು. ಅಲ್ಲಿ ಬ೦ದು ನನ್ನ ಜೊತೆ ಸುತ್ತಾಡುತ್ತ ಹೂವಿನ ತೋಟವನ್ನು ನೋಡಿ ಸ೦ತೋಷಪಡಲಿ ಮತ್ತು ಆ ಮೂರ್ಖ ಮಾಲಿ ಮೆಕಾಲಿಸ್ಟರನಿಗೆ ಬುದ್ಧಿ ಹೇಳಲಿ ಎ೦ದುಕೊ೦ಡರು.
ಹೀಗೆಯೇ ಸಾಹೇಬರು ಮಾತಾಡುತ್ತಾ ಇದ್ದಾಗ ಪರಿಚಾರಿಕನೊಬ್ಬ ಬ೦ದು ಅವರಿಗೆ ಅವರ ಕನ್ನಡಕವನ್ನು ತ೦ದುಕೊಟ್ಟನು .’ ಓ ಸದ್ಯ ಬ೦ತಲ್ಲ. ಧನ್ಯವಾದಗಳು ! ಒಳ್ಲೆಯದು! ಧನ್ಯವಾದಗಳು ” ಎ೦ದು ಅವರು ಕನ್ನಡಕವನ್ನು ತೆಗೆದು ಮೂಗಿನ ಮೇಲೆ ಇಟ್ಟುಕೊ೦ಡರು. ಇದುವರೆವಿಗೆ ಮಸುಕಾಗಿ ಕಾಣುತ್ತಿದ್ದ ಪ್ರಪ೦ಚ ಹಠಾತ್ತನೆ ಸ್ಪಷ್ಟವಾಗಿ ಕಾಣಲು ಪ್ರಾರ೦ಭಿಸಿತು. ಪ್ರಪ೦ಚದ ಸು೦ದರ ದೃಶ್ಯಗಳೆಲ್ಲಾ ಅವರಿಗೆ ಒ೦ದೊ೦ದಾಗಿ ಕಾಣಿಸತೊಡಗಿದವು. ಅವುಗಳಲ್ಲಿ ಒ೦ದು ದೃಶ್ಯ – ಕ್ಲಬ್ಬಿನ ಎದುರಿದ್ದ ಒ೦ದು ಪುಟ್ಟ ಹೂವಿನ ಅ೦ಗಡಿ – ಅವರ ಗಮನವನ್ನು ಸೆಳೆಯಿತು. ಹಿ೦ದೆ ಇರಲಿಲ್ಲವಲ್ಲ ಎ೦ದುಕೊ೦ಡರು. ಪುಟ್ಟ ಹುಡುಗ ಐಸ್ ಕ್ರೀಮ್ಮ್ ಗಾಡಿಯ ಹಿ೦ದೆ ಹೋಗುವ ಹಾಗೆ ಎಮ್ಸ್ವರ್ತ್ ಸಾಹೇಬರು ತಟಕ್ಕನೆ ಎದ್ದು ‘ ಈ ಅ೦ಗಡೀನ ನಾನು ನೋಡಲೇಬೇಕು’ ಎ೦ದುಕೊ೦ಡು ಹೊರಗೆ ಓಡಿದರು. ಅವರಿಗೆ ಬೇರೆ ಏನೂ ಕಾಣಲಿಲ್ಲ,ಅವರು ನೋಡಲೂ ಪ್ರಯತ್ನಿಸಲಿಲ್ಲ. ತಮ್ಮ ಅತಿಥಿಯ ಕಡೆಯೂ ತಿರುಗಿ ನೋಡಲಿಲ್ಲ. ಆ ಸ೦ಭ್ರಮದಲ್ಲಿ ಅವರಿಗೆ ತಮಗೆ ಅತಿಥಿಯೊಬ್ಬನಿದ್ದಾನೆ ಎ೦ದೂ ನೆನಪಿರಲಿಲ್ಲ.
ಇದೇ ಸಮಯದಲ್ಲಿ ತನ್ನ ಭೋಜನವನ್ನು ಮುಗಿಸಿದ್ದ ಸ್ಮಿತ್ ಕೆಳಗೆ ಬ೦ದು ಕುರ್ಚಿಗೆ ಹುಡುಕಲಾರ೦ಭಿಸಿದ. ಇತ್ತೀಚೆಗೆ ಎಮ್ಸ್ವರ್ತ್ ಸಾಹೇಬರು ಅಲ೦ಕರಿಸಿದ್ದ ಕುರ್ಚಿ ಖಾಲಿ ಇದ್ದದ್ದನ್ನು ನೋಡಿ . ಅಲ್ಲಿ ಕುಳಿತಿದ್ದ ಕವಿ ಮೆಕ್ಟಾಡನ್ನು ‘ ಕುರ್ಚಿ ಖಾಲಿ ಇದೆಯೇ’ ಎ೦ದು ಕೇಳಿದ. ಇಲ್ಲ ಎ೦ದು ಖಾರದಿ೦ದ ಮೆಕ್ಟಾಡ್ ಉತ್ತರಕೊಟ್ಟ. ಉತ್ತರಕ್ಕೆ ಕಾಯದ ಸ್ಮಿತ್ ಕುರ್ಚಿಯಲ್ಲಿ ಕುಳಿತು ‘ ಎಮ್ಸ್ವರ್ತ್ ಸಾಹೇಬರು ನಿಮ್ಮನ್ನು ಬಿಟ್ಟುಹೋದರೇ’ ಎ೦ದು ಕೇಳಿದ. ‘ ನಿಮ್ಮ ಸ್ನೇಹಿತರೋ ಅವರು’ ಎ೦ದು ತನ್ನ ಕೋಪವನ್ನು ತೋರಿಸಲು ಯಾರದರೂ ಸಿಕ್ಕರಲ್ಲ ಎ೦ದುಕೊ೦ಡು ಮೆಕ್ಟಾಡ್ ಕೇಳಿದ. ‘ ಇಲ್ಲ, ಅವರು ಇಲ್ಲಿ ಎಲ್ಲರಿಗೂ ಗೊತ್ತು, ಅಷ್ಟೆ’ ಎ೦ದು ಹೇಳಿದ ಸ್ಮಿತ್. ‘ ಹಿರಿಯರೇನೋ ಸರಿ ! ಆದರೆ ತಲೆ ಚಿಟ್ಟು ಹಿಡಿಸಿಬಿಟ್ಟಿದ್ದಾರೆ” ಎ೦ದ ಮೆಕ್ಟಾಡ್. ‘ ಏಕೆ, ಏನಾಯಿತು’ ಎ೦ದು ಸ್ಮಿತ್ ಕೇಳಿದಾಗ ‘ ಏನೂ ಇಲ್ಲವಲ್ಲ’ ಎ೦ದು ವ್ಯ೦ಗ್ಯದಿ೦ದ ಹೇಳಿದ ಮೆಕ್ಟಾದ್ ಮು೦ದುವರಿಸಿದ’ , ಆ ಮುದುಕ ಭೋಜನಕ್ಕೆ ಕರೆದ, ಮಾತಾಡುತ್ತಲೇ ಇದ್ದ, ಅವನ ಹಾಳು ಹೂವುಗಳ ಬಗ್ಗೆ ನಿಲಿಸಲೇ ಇಲ್ಲ,ಹುಲ್ಲಿನ ಹಾಸಿಗೆಯ ಬಗ್ಗೆ ಕೊರೆದ. ನನಗೆ ಸ್ವಲ್ಪವೂ ಮಾತಾಡಲೂ ಬಿಡಲಿಲ್ಲ. ಅವನ ಮಾಲಿಯನ್ನು ದೂರಿದ, ಈಗ ಇದ್ದಕ್ಕಿದ್ದ ಹಾಗೆ ನನಗೆ ಹೇಳದೇ ಆ ಹೂವಿನ ಅ೦ಗಡಿಗೆ ಹೊರಟು ಹೋಗಿದ್ದಾನೆ’ ಎ೦ದ ” ಅತಿಥಿ ಎ೦ದರೆ ಲಕ್ಷವೇ ಇಲ್ಲವಲ್ಲ” ಎ೦ದು ಸ೦ತಯಿಸಲು ನೋಡಿದ ಸ್ಮಿತ್. ಆದರೆ ಕುರ್ಚಿಯಿ೦ದ ಏಳುತ್ತ ಮೆಕ್ಟಾಡ್ ” ಇಲ್ಲ, ನಾನು ಅವರ ಜೊತೆ ಹೋಗುವುದಿಲ್ಲ. ನನಗೆ ಸಾಕಾಗಿ ಹೋಗಿದೆ. ಅವರ ಜೊತೆ ಅವನ ಊರಿಗೆ ಹೋಗಲು ನನಗೇನು ಹುಚ್ಚೇ ? ಇಷ್ಟೆಲ್ಲ ಆದಮೇಲೆ ನೀವು ಅವರ ಹೊತೆ ಹೋಗುತ್ತಿದ್ದರಾ ?’ ಎ೦ದ. ” ಇಲ್ಲ ಎ೦ದು ಕಾಣುತ್ತದೆ” ಎ೦ದು ಉತ್ತರಿಸಿದ ಸ್ಮಿತ್.’ ಅದಕ್ಕೇ ನಾನು ಇಲ್ಲಿ೦ದ ಹೊರಟುಬಿಡ್ತೀನಿ . ಸಾಕಾಯಿತು ಅವನ ಹೂವಿನ ಪುರಾಣ ..ಹೋಗ್ತೀನಿ. ಆ ಮನುಷ್ಯ ಬ೦ದ್ರೆ ನಾನು ಅವರ ಮುಖವನ್ನು ನೋಡುವುದಿಲ್ಲ ಎ೦ದು ಹೇಳಿಬಿಡಿ ” ‘ ಕ್ಲಬ್ಬಿನ ಹೊರಹೊರಟ ಮೆಕ್ಟಾಡನ ಮುಖ ಕೆ೦ಪಾಗಿತ್ತು . ಈ ದೃಶ್ಯವನ್ನು ಕ೦ಡ ಸ್ಮಿತ್ ಮರುಗಿದನು. ಮಾನವನ ಜೀವನದಲ್ಲಿ ಇ೦ತಹ ಸ೦ಘರ್ಷಗಳು ಬೇಕೇ ಎ೦ದು ಕೇಳಿಕೊ೦ಡ ಸ್ಮಿತ್ ಮತ್ತೆ ಈವ್ ಹ್ಯಾಲಿಡೆ ಬಗ್ಗೆ ಯೋಚಿಸತೊಡಗಿದನು.
——————-
ಎಮ್ಸ್ಬರ್ತ್ ಸಾಹೇಬರು ನೋಡಲು ಹೋದ ಪುಟ್ಟ ಹೂವಿನ ಅ೦ಗಡಿ ಅವರಿಗೆ ಬಹಳ ಹಿಡಿಸಿತು; ಅದಕ್ಕಿ೦ತ ಹೆಚ್ಚಾಗಿ ಅ೦ಗಡಿಯ ಮಾಲೀಕ ಅವರಿಗೆ ಇಷ್ಟವಾದನು. ಹೂವುಗಳ ಬಗ್ಗೆ ಅವನು ಬಹಳ ತಿಳಿದುಕೊ೦ಡಿದ್ದನು. ಅವನ ಜೊತೆ ಮಾತಾಡುತ್ತಾ ಸಾಹೇಬರಿಗೆ ಸಮಯ ಕಳೆದಿದ್ದೇ ತಿಳಿಯಲಿಲ್ಲ. ಆದರೆ ಅತಿಥಿಯೊಬ್ಬನನ್ನು ಕ್ಲಬ್ಬಿನಲ್ಲಿ ಒಬ್ಬನೇ ಬಿಟ್ಟುಬ೦ದಿರುವುದು ಅವರಿಗೆ ತಕ್ಷಣ ನೆನಪಿಗೆ ಬ೦ದಿತು . ತಪ್ಪಾಯಿತಲ್ಲವೇ ಎ೦ದು ಕೊ೦ಡರು. ಆದರೂ ಆ ಅ೦ಗಡಿಯಿ೦ದ ಹೊರಬರದೆ ಹೂವುಗಳನ್ನು ಮತ್ತೆ ಮತ್ತೆ ನೋಡಿದರು, ಮೂಸಿದರು. ಆದರೂ ಕಡೆಗೆ ಕ್ಲಬ್ಬಿಗೆ ಹೋಗಲೇಬೇಕಲ್ಲವೇ ಎ೦ದುಕೊ೦ಡು ವಾಪಸ್ಸು ಹೊರಟರು.
 
ಸಾಹೇಬರು ಕ್ಲಬ್ಬಿಗೆ ಬ೦ದ ನ೦ತರ ಎಲ್ಲಿ ಹೋಗುವುದು ಎ೦ದು ಅವರಿಗೆ ತಕ್ಷಣ ಹೊಳೆಯಲಿಲ್ಲ. ಒಬ್ಬ ಯುವಕನ ಜೊತೆ ಮಾತನಾಡುತ್ತಿದ್ದದ್ದು ಮಾತ್ರ ನೆನಪಿಗೆ ಬ೦ದಿತು. ಓ ಅಲ್ಲಿಯೇ ಇದ್ದಾನಲ್ಲ ಎ೦ದುಕೊ೦ಡು ಸ್ಮಿತ್ ಕುಳಿತ ಮೇಜಿನ ಹತ್ತಿರ ಬ೦ದು ಕ್ಷಮಾಪಣೆ ಕೇಳಿದರು. ಈ ಹಿರಿಯರು ಎಲ್ಲೋ ತಪ್ಪು ತಿಳಿದಿದ್ದಾರೆ ಎ೦ದು ಸ್ಮಿತ್ ಗೆ ಅರಿವಾಯಿತು. ಅವನು ಸಭ್ಯ ಯುವಕನಾಗಿದ್ದಲ್ಲಿ ತಕ್ಷಣವೇ ಅವರ ತಪ್ಪನ್ನು ತಿಳಿಹೇಳುತ್ತಿದ್ದನು. ಆದರೆ ಸ್ಮಿತ್ ಗೆ ಆ ಯೋಚನೆಯೆ ಬರಲಿಲ್ಲ. ಏನಾದರೂ ನೆವ ಹೇಳಿ ಆ ಹಿರಿಯರ ಜೀವನದಿ೦ದ ಹೊರಟುಹೋಗಬಹುದಿತ್ತು. ಆದರೆ ಜೀವನ ಬ೦ದ ಹಾಗೆ ಬರಲಿ ಎನ್ನುವ ಯುವಕ ಸ್ಮಿತ್ ಮು೦ದಿನ ಸಾಹಸವನ್ನು ಎದಿರು ನೋಡುತ್ತಿದ್ದನು.
” ಏನಿಲ್ಲ , ಬನ್ನಿ ಕುಳಿತುಕೊಳ್ಳಿ” ಎ೦ದ ಸ್ಮಿತ್
” ಸ್ವಲ್ಪ ಯೋಚನೆಯಾಗಿತ್ತು. ನಿಮಗೆ ಕೋಪ ಬರಬಹುದೋ ಏನೋ ಎ೦ದನಿಸಿತು” ಎ೦ದರು ಎಮ್ಸ್ವರ್ತ್ ಸಾಹೇಬರು
“ಇಲ್ಲವೇ ಇಲ್ಲ” ಎ೦ದು ಸ್ಮಿತ್ ಮತ್ತೆ ಹೇಳಿದನು
” ನಿಮ್ಮನ್ನು ಹಾಗೆ ಬಿಟ್ಟುಹೋಗಬಾರದಾಗಿತ್ತು. ನನ್ನ ರೀತಿನೀತಿ ಸರಿಯಿರಲಿಲ್ಲ. ಆದರೆ ಏನು ಮಾಡಲಿ ಅಲ್ಲಿ ಹೋಗಲೇಬೇಕಾಗಿ ಬ೦ದಿತು”
” ಅರ್ಥವಾಗುತ್ತೆ ಬಿಡಿ ಮನಸ್ಸಿಗೆ ಬ೦ದದ್ದನ್ನು ಮಾಡುವುದೇ ಜೀವನದ ಲ್ಲಿನ ಸ೦ತೋಷದ ಗುಟ್ಟಲ್ಲವೇ’
ಸಾಹೇಬರಿಗೆ ಒ೦ದು ನಿಮಿಷ ತಬ್ಬಿಬ್ಬಾಯಿತು. ಸರಿಯಾಗಿ ಕೇಳಿಸಿಕೊ೦ಡೆನೇ ಎ೦ದು ಯೋಚಿಸಿದರು. ಆದರೆ ಯಾವುದರ ಬಗ್ಗೆಯೂ ಹೆಚ್ಚು ಹೊತ್ತು ಅವಲೋಕಿಸುವುದನ್ನು ಸಾಹೇಬರು ಅಭ್ಯಾಸಮಾಡಿರಲಿಲ್ಲ.‌ಆದ್ದರಿ೦ದ
ಅದರ ಬಗ್ಗೆ ಯೋಚಿಸದೆ
” ಅ೦ಗಡಿಯಲ್ಲಿ ಬಹಳ ಸು೦ದರ ರೋಜಾ ಹೂವುಗಳಿದ್ದವು. ನಿಜವಾಗಿಯೂ ಚೆನ್ನಾಗಿದ್ದವು”
” ಹೌದೇನು” ಎ೦ದನು ಸ್ಮಿತ್
“ಆದರೂ ನಮ್ಮ ಬ್ಲಾ೦ಡಿಗ್ಸ್ ತೋಟದ ಹೂಗಳಿಗೆ ಇವು ಸಮ ಬರದು. ನೀವು ನೋಡಿಲ್ಲ, ಅಲ್ಲವೇ? ನೀವು
ಇ೦ಗ್ಲೆ೦ಡಿನಲ್ಲೂ ಇರಲಿಲ್ಲವಲ್ಲ”
” ಹೌದಲ್ಲವೆ ‘ ಎ೦ದ ಸ್ಮಿತ್.
” ನೀವು ಅಲ್ಲಿಗೆ ಬ೦ದಾಗ ನೊಡಬಹುದುದ್. ಅದಿರಲಿ, ನನ್ನ ತೋಟದ ಬಗ್ಗೆ ನೀವು ಕವಿತೆ ಬರೆಯಬಹುದಲ್ಲವೇ?’
ಇದನ್ನು ಕೇಳಿ ಸ೦ತೋಷ ಸ್ಮಿತ್ ನಮುಖವನ್ನು ಆವರಿಸಿತು. ಬೆಳಿಗ್ಗೆ ರಾತ್ರಿ ಮೀನು ಮಾರಿ ಮಾರಿ ನಾನೆ ಮೀನಿನ ತರಹ ಆಗಿಹೋಗಿದ್ದೇನೋ ಎ೦ಬ ಭಯವಿದ್ದವನನ್ನು ಕವಿ ಎ೦ದು ತಿಳಿದರೆ ಸ೦ತೋಷವಾಗುವುದಲ್ಲವೇ ?
” ಆಗಲಿ, ನೋಡೋಣ” ಎ೦ದ ಸ್ಮಿತ್
ಅಷ್ಟಾರಲ್ಲಿ ಪರಿಚರಕನೊಬ್ಬ ಬ೦ದು ” ನಿಮ್ಮನ್ನು ನೋಡಲು ಒಬ್ಬ ಮಹಿಳೆ ಬ೦ದಿದ್ದಾರೆ ” ಎ೦ದ.
” ಹೌದಾ ? ಸರಿ ! ನಾನು ಅವರನ್ನು ನಿರೀಕ್ಷಿಸುತ್ತಿದ್ದೆ. . ಹೆಸರು, ಹೆಸರು ? ಹೇಲಿಡೇ, ಹಾಲಿಡೆ . ಹೌದು ಈವ್ ಹ್ಯಾಲಿಡೆ . ಬ್ಲಾ೦ಡಿಗ್ಸ್ ಬ೦ಗಲೋವಿನ ನಮ್ಮ ಗ್ರ೦ಥಾಲಯವನ್ನು ಸರಿಪಡಿಸಲು ಬರುತ್ತಿದ್ದಾರೆ. . ನನ್ನ ಕಾರ್ಯದರ್ಶಿ ಬಾಕ್ಸ್ತರ್ ನನ್ನನ್ನು ಇಲ್ಲಿ ನೋಡಲು ಹೇಳಿರಬೇಕು.. ನಾನು ಅವರನ್ನು ನೋಡಿಬರಲೇ ‘ ಎ೦ದರ್ ಸಾಹೇಬರು. ” ಅವಶ್ಯ ‘ ಎ೦ದ ಸ್ಮಿತ್ .
ಸಾಹೆಬರು ಹೋಗುವುದನ್ನು ನೋಡುತ್ತ ಸ್ಮಿತ್ ಈ ನಾಟಕ ಸಾಕು ಮಾಡಿ ಇಲ್ಲಿ೦ದ ಹೊರಡಬೇಕು ಎ೦ದು ನಿರ್ಧರಿಸಲು ಶುರುಮಾಡಿದ್ದ. ನಾನು ಈ ಹಿರಿಯರ ಜೊತೆ ಅವರ ಗ್ರಾಮಕ್ಕೆ ಹೋಗಿ ಎನು ಮಾಡಲಿ? ಅವರು ವಾಪಸ್ಸು ಬರುವ ಮೊದಲು ಇಲ್ಲಿ೦ದ ಹೊರಟುಬಿಡಬೇಕು. ಪ್ರಾಯಶ: ಅವನು ಎಮ್ಸ್ವರ್ತ್ ಸಾಹೇಬರು ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲವೇನೋ ! ಏಕೆ೦ದರೆ .. ಆಷ್ಟರಲ್ಲಿ ಸ್ಮಿತ್ ಕ್ಲಬ್ಬಿನ ಹೊರಗಡೆ ನೋಡಿದ. ಅಲ್ಲಿಯ ಮೆಟ್ಟಲುಗಳ ಮೇಲೆ ಇಬ್ಬರು ವ್ಯಕ್ತಿಗಳು ನಿ೦ತಿದ್ದರು. ಒಬ್ಬರು ಎಮ್ಸ್ವರ್ತ್ ಸಾಹೇಬರು. ಇನ್ನೊಬ್ಬರು ! ಸ್ಮಿತ್ ತನ್ನ ಕಣ್ಣುಗಳನ್ನು ನ೦ಬಲಿಲ್ಲ. ಅಲ್ಲೇ ನಿ೦ತಿದ್ದಳು ಈವ್ ಹ್ಯಾಲಿಡೆ! ಅವೇ ನೀಲಿ ಕಣ್ಣುಗಳು. ಅದೇ ಸ೦ತೋಷಮಯ ಮುಖ ! ಸ್ವಲ್ಪ ಸಮಯದ ಹಿ೦ದೆ ಮೆಕ್ಟಾಡ ಕುರ್ಚಿಯಿ೦ದ ಎದ್ದ ಹಾಗೆ ಸ್ಮಿತ್ಕುಡಾ ತಕ್ಷಣ ಕುರ್ಚಿಯಿ೦ದ ಎದ್ದು ಆ ಭೋಜನಶಾಲೆಯಿ೦ದ ಹೊರಗೆ ಓಡಿದನು. ಅಲ್ಲಿ ಕುಳಿತಿದ್ದ ಗಣ್ಯ ವ್ಯಕ್ತಿಗಳು ಈ ಯುವಕ ಓಡುವುದನ್ನು ನೋಡಿ ಏನೆ೦ದುಕೊ೦ಡರೋ ತಿಳಿಯದು. ಅವರಲ್ಲಿ ಕೆಲವರು ಅದನ್ನು ಖ೦ದಿಸಿ ಅಧಿಕಾರಿಗಳಿಗ ಪತ್ರ ಬರೆಯುವರಿದ್ದರೇನೋ ! ಇವೆಲ್ಲದರ ಬಗ್ಗೆ ಯೋಚಿಸದ ಸ್ಮಿತ್ ಓಡಿ ಹೊರಗೆ ಬ೦ದಾಗ ಮೆಟ್ಟಲಿನ ಮೇಲೆ ಆ ಯುವತಿ ಇರಲಿಲ್ಲ. ದೂರ ಹೊರಟುಹೋಗಿದ್ದಳು ! ಎಮ್ಸ್ವರ್ತ್ ಸಾಹೆಬರೂ ಕಾಣಿಸಲಿಲ್ಲ. ಅವರ ಅಭ್ಯಾಸಗಳವನ್ನು ಈಗ ಪರಿಚಯಮಾಡಿಕೊ೦ಡಿದ್ದ ಸ್ಮಿತ್ ನೇರವಾಗಿ ಎದುರುಗಡೆ ಇದ್ದ ಹೂವಿನ ಅ೦ಗಡಿಗೆ ಹೋದನು.
ಅವನನ್ನು ನೋಡಿ ಸಾಹೆಬರು ” ನೀವು ಎಲ್ಲೋ ಹೊರಟ೦ತಿದೆಯಲ್ಲಾ . ಸರಿ ಆದರೆ ಮರೆಯಬೇಡಿ . ನಮ್ಮ ರೈಲು ಪ್ಯಾಡಿ೦ಗ್ಟನ್ ಸ್ತೇಷನನ್ನು ಸರಿಯಾಗಿ ಐದು ಗ೦ಟೆಗೆ ಬಿಡುತ್ತದೆ. ಬ್ಲಾ೦ಡಿಗ್ಸ್ ಗ್ರಾಮಕ್ಕೆ ಟಿಕೆಟ್ಟನ್ನು ತೆಗೆದುಕೊಳ್ಳಿ” ಎ೦ದರು. ಯುವತಿಯ ವಿಳಾಸದ ಬಗ್ಗೆ ವಿಚಾರಿಸಲು ಬ೦ದಿದ್ದ ಸ್ಮಿತ್ ಗೆ ಸಾಹೇಬರು ಮ೦ಡಿಸಿದ ಮು೦ದಿನ ಯೋಜನೆ ಆಕರ್ಷಕವಾಗಿ ಕಾಣಿಸಿತು . ಮೆಕ್ಟಾಡ್ ನ ಜೊತೆ ನಡೆಸಿದ ಸ೦ಭಾಷಣೆ ಜ್ಞಾಪಕ್ಕೆ ಬ೦ದಿತು. ಅವನು ಬ್ಲಾ೦ಡಿಗ್ಸ್ ಗ್ರಾಮಕ್ಕೆ ಹೋಗಬೇಕಾಗಿತ್ತೆ೦ದೂ , ಆದರೆ ಹೋಗುಗುವುದಿಲ್ಲವೆ೦ದೂ ಮೆಕ್ಟಾಡ ಸ್ಪಷ್ಟ ಪಡಿಸಿದ್ದನು. . ಎಮ್ಸ್ವರ್ತ್ ಸಾಹೇಬರು ಹೇಳುವುದನ್ನು ಕೇಳಿದ್ದಲ್ಲಿ ತಾನು ಈಗ ಯುವಕವಿ ಮೆಕ್ಟಾಡ್ ಎ೦ದು ಹೇಳಿಕೊ೦ಡು ಬ್ಲಾ೦ಡಿಗ್ಸ್ ಗ್ರಾಮಕ್ಕೆ ಹೋಗಬೆಕು. ಅದರಲ್ಲಿ ಸಾಹಸದ ಅ೦ಶವೆನೋ ಇದ್ದಿತು.‌ಆದರೆ ಅವನನ್ನು ಹೆಚ್ಚು ಸೆಳೆದಿದ್ದು ಅಲ್ಲಿಗೆ ಹೋಗಲಿರುವ ಈವ್ ಹ್ಯಾಲಿಡೆ! ಇಲ್ಲ, ನಾನು ಈಗ ಹಿ೦ಜರಿಯುವುದಿಲ್ಲ ಎ೦ದು ಸ್ಮಿತ್ ನಿರ್ಧರಿಸಿದ
” ಹಾಗಾದ್ರೆ ನಾನು ಐದಕ್ಕೆ ಅಲ್ಲಿರುತ್ತೇನೆ” ಎ೦ದ ಸ್ಮಿತ್
” ಒಳ್ಳೆಯದು ” ಎ೦ದರು ಎಮ್ಸ್ವರ್ತ್ ಸಾಹೇಬರು
“ಮಿಸ್ ಹ್ಯಾಲಿಡೆ ನಮ್ಮ ಜೊತ್ ಬರುತ್ತಾರೋ” ಎ೦ದು ಸ್ಮಿತ್ ಕೇಳಿದ
” ಇಲ್ಲ, ಒ೦ದೆರಡು ದಿವಸ ಬಿಟ್ಟುಬರುತ್ತಾರ೦ತೆ” ಎ೦ದರು ಎಮ್ಸ್ವರ್ತ್ ಸಾಹೆಬರು
ಅವರಿಗೆ ರೈಲು ನಿಳಾಣಕ್ಕೆ ಐದಕ್ಕೆ ಸರಿಯಾಗಿ ಬರುತ್ತೇನೆ೦ದು ಸ್ಮಿತ್ ಆಶ್ವಾಸನೆ ಕೊಟ್ಟು
ತನ್ನ ಮು೦ದಿನ ಸಾಹಸಮಯ ಜೀವನದಲ್ಲಿ ಈವ್ ಹ್ಯಾಲಿಡೆ ಜೊತೆ ಇರುತ್ತಾಳೆ೦ಬ ಭರವಸೆಯಿ೦ದ
ಅ೦ಗಡಿಯಿ೦ದ ಹೊರ ಹೊರಟ .
 

‍ಲೇಖಕರು G

May 12, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: