ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಮತ್ತೆ ‘ದೇಶಕಾಲ’

‘ದೇಶ ಕಾಲ’ ವಿಶೇಷ ಸಂಚಿಕೆ ಬಗ್ಗೆ ಮಂಜುನಾಥ್ ಲತಾ ಹಾಗೂ ಚಂದ್ರಶೇಕರ್ ಐಜೂರು ಬರೆದ ಲೇಖನ ಪ್ರಕಟವಾಗಿತ್ತು. ಜುಗಾರಿ ಕ್ರಾಸ್ ನಲ್ಲಿ ಅದನ್ನು ಚರ್ಚೆಗೆ ಇಡಲಾಗಿತ್ತು. ಕವಿ ಡಿ ಎಸ್ ರಾಮಸ್ವಾಮಿ ಬರೆದ ಪ್ರತಿಕ್ರಿಯೆ ಇಲ್ಲಿದೆ.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಸಾಹಿತಿ ಎಸ್ ಜಿ ಸಿದ್ಧರಾಮಯ್ಯ ಅವರು ಮಂಡಿಸಿದ ಅಭಿಪ್ರಾಯ ಇಲ್ಲಿದೆ. ಮಂಗಳೂರಿನಿಂದ ಜಿ ಎನ್ ಅಶೋಕವರ್ಧನ ತಮ್ಮ ಅನುಭದ ಜೊತೆ ದೇಶಕಾಲದ ಕಥೆಯನ್ನು ಮೇಳೈಸಿದ್ದಾರೆ  ಅದು ಇಲ್ಲಿದೆ. ಸಂದೀಪ್ ಕಾಮತ್ ಬರಹದ ರುಚಿ ನಿಮಗೆಲ್ಲರಿಗೂ ಗೊತ್ತೇ ಇದೆ. ಇಲ್ಲಿ ಅವರು ಪತ್ರ ಬರೆದಿದ್ದಾರೆ. ಇನ್ನೂ ಸಾಕಷ್ಟು ಪತ್ರಗಳಿವೆ.

 

ಈಗ ಈ ಚರ್ಚೆ ಎಲ್ಲವನ್ನೂ ಒಟ್ಟು ಮಾಡಿ ಪುಸ್ತಕ ರೂಪದಲ್ಲಿ ತರಲಾಗುತ್ತಿದೆ. ಈ ಸಂದರ್ಭದಲ್ಲಿ ಡಿ ಎಸ್ ನಾಗಭೂಷಣ ಅವರು ಈ ಚರ್ಚೆಗಳತ್ತ, ‘ದೇಶಕಾಲ’ದತ್ತ ಮತ್ತೆ ಕಣ್ಣು ಹಾಯಿಸಿದ್ದಾರೆ.

ಎಂದಿನಂತೆ ಇದೂ ಜುಗಾರಿ ಕ್ರಾಸ್ ನಲ್ಲಿ ಪ್ರಕಟವಾಗುತ್ತಿದೆ. ನಿಮ್ಮ ಚರ್ಚೆಗೂ ಸ್ವಾಗತ..


ಇವು ಚಂದ್ರಶೇಖರ ಐಜೂರು ಮತ್ತು ಮಂಜುನಾಥ್ ಲತಾ ಅವರು ’ದೇಶ ಕಾಲ’ ಪತ್ರಿಕೆ ಹಾಗೂ ಅದರ ವಿಶೇಷಾಂಕದ ಬಗ್ಗೆ ’ಲಂಕೇಶ್’ನಲ್ಲಿ ಆರಂಭಿಸಿ ನಡೆಸಿದ ಚರ್ಚೆಯ ಉದ್ದೇಶಿತ ಪುಸ್ತಕ ರೂಪಕ್ಕೆ. ಬರೆದ ಪ್ರಸ್ತಾವನೆಯ ಮಾತುಗಳು. ಆದರೆ, ತರಾತುರಿಯಲ್ಲಿ ಮತ್ತು ಒತ್ತಾಯಪೂರ್ವಕವಾಗಿ ಹಾಗೂ ನನಗೆ ಓದು-ಬರಹ ಕಷ್ಟವಾಗಿದ್ದ ಅವಧಿಯಲ್ಲಿ ನನ್ನಿಂದ ಈ ಪ್ರಸ್ತಾವನೆಯನ್ನು ಬರೆಸಿದ ಇವರು, ಪುಸ್ತಕವನ್ನು ಮಾತ್ರ ಅದೂ ಇದೂ ಕಾರಣ ಹೇಳುತ್ತಾ, ತಿಂಗಳುಗಳು ಕಳೆದರೂ ಪ್ರಕಟಿಸದೇ ಹೋದರು!

ಕುತೂಹಲಗೊಂಡ ನಾನು ಈ ಬಗ್ಗೆ ನನ್ನ ಇತರ ಗೆಳೆಯರನ್ನು ವಿಚಾರಿಸಿದಾಗ, ನನ್ನ ಪ್ರಿಯ ಗೆಳೆಯರೇ ಆದ ಬಂಜಗೆರೆ ಜಯಪ್ರಕಾಶರಿಂದಲೂ ಇವರು ಇನ್ನೊಂದು ಪ್ರಸ್ತಾವನೆಯನ್ನು ಬರೆಸಿದ್ದಾರೆ ಮತ್ತು ನಾನು ಈಗಾಗಲೇ ಪ್ರಸ್ತಾವನೆಯೊಂದನ್ನು ಬರೆದಿರುವುದನ್ನು ಅವರಿಗೆ ತಿಳಿಸದೆ ಇದನ್ನು ಮಾಡಿದ್ದಾರೆ ಎಂಬ ಸಂಗತಿ ತಿಳಿದು ಬಂತು. ಇದರಿಂದಾಗಿ, ನನ್ನನ್ನು ಕುರಿತ ಅವರ ನಿರೀಕ್ಷೆಗಳೂ ಹುಸಿಯಾಗಿ ನನ್ನ ಪ್ರಸ್ತಾವನೆಯ ಮಾತುಗಳಿಂದ ಅವರಿಗೆ ಮುಜುಗರವುಂಟಾಗಿದೆ ಎಂಬುದು ನನಗೆ ಸ್ಪಷ್ಟವಾಯಿತು. ಹಾಗೇ, ಅವರ ಈ ನಿರ್ಧಾರದಿಂದ ಅವರನ್ನು ಕುರಿತ ನನ್ನ ನಿರೀಕ್ಷೆಗಳೂ ಹುಸಿಯಾದವು ಎಂಬುದನ್ನು ಇಲ್ಲಿ ಬೇರೆ ಹೇಳಬೇಕಿಲ್ಲ.

ಹಾಗಾಗಿ, ನಾನು ಐಜೂರರಿಗೆ ಅವರ ಉದ್ದೇಶಿತ ಪುಸ್ತಕದಲ್ಲಿ ನನ್ನ ಪ್ರಸ್ತಾವನೆಯನ್ನು ಪ್ರಕಟಿಸುವ ಅಗತ್ಯವಿಲ್ಲ ಮಾತ್ರವಿಲ್ಲ, ಅದನ್ನು ಯಾವುದೇ ಕಾರಣದಿಂದ ಇನ್ನೊಂದು ಪ್ರಸ್ತಾವನೆಯೊಂದಿಗೆ ಪ್ರಕಟಿಸಕೂಡದೆಂದು(ಇಬ್ಬರಿಗೂ ಮುಜುಗರವಾಗದಿರಲೆಂದು) ಹೇಳಿದ ಮೇಲೂ, ಯಾವ ದ್ವಂದ್ವಕ್ಕೆ ಸಿಕ್ಕಿಯೋ ಏನೋ;ಅಥವಾ ಮತ್ತಾವ ಕಾರಣದಿಂದಲೋ, ಅವರು ಪುಸ್ತಕವನ್ನು ಇನ್ನೂ ಪ್ರಕಟಿಸಿಲ್ಲ. ಹಾಗಾಗಿ, ಅವರು ಆದಷ್ಟು ಬೇಗ ಬಂಜಗೆರೆಯವರ ಪ್ರಸ್ತಾವನೆಯೊಂದಿಗೇ ಪುಸ್ತಕ ಪ್ರಕಟಿಸಲು ಅನುವಾಗುವಂತೆ ಮತ್ತು ಅನಗತ್ಯ ವಿಳಂಬದಿಂದಾಗಿ ಈ ಚರ್ಚೆ ಸಾಂದರ್ಭಿಕ ಪ್ರಸ್ತುತತೆಯನ್ನು ಕಳೆದುಕೊಳ್ಳಬಾರದೆಂಬ ದೃಷ್ಟಿಯಿಂದ ನನ್ನ ಆ ಪ್ರಸ್ತಾವನೆಯ ಮಾತುಗಳನ್ನು ಈಗ ಈ ಅಂತರ್ಜಾಲ ವೇದಿಕೆಯಲ್ಲಿ ಪ್ರಕಟಿಸುತ್ತಿರುವೆ. ಇದನ್ನು ಎಡಪಂಥೀಯ ವೈಚಾರಿಕ ಮಾಸಿಕವೊಂದು ಅತಿ ದೀರ್ಘವಾಯಿತೆಂದು ಹೇಳಿ ಮತ್ತು ಇನ್ನೊಂದು ಅತಿ ಹ:ಳೆಯ ಸಾಹಿತ್ಯಿಕ ದ್ವೈಮಾಸಿಕವೊಂದು ಸೈದ್ಧಾಂತಿಕ ಮುಜುಗರದ ಕಾರಣ ನೀಡಿ ಪ್ರಕಟಿಸಲು ನಿರಾಕರಿಸಿದವು ಎಂಬುದನ್ನೂ ಇಲ್ಲಿ ತಿಳಿಸಲಿಚ್ಛಿಸುವೆ.

’ಲಂಕೇಶ’ ಪತ್ರಿಕೆಯಲ್ಲಿ ಬಂದ ಚರ್ಚೆಯನ್ನು ವಿವರವಾಗಿ ಗಮನಿಸದ ಮತ್ತು ಗಮನಿಸದೇ ಹೋದವರೂ ಕೂಡಾ ಈ ಪ್ರಸ್ತಾವನೆಯನ್ನು ಸ್ಥೂಲವಾಗಿಯಾದರೂ ಗ್ರಹಿಸಬಹುದಾದಂತೆ ಇದನ್ನು ಆದಷ್ಟೂ ಕಡೆ ಹಿನ್ನೆಲೆ ನೀಡಿ, ವಿವರಗಳೊಂದಿಗೆ ಬರೆಯಲಾಗಿದೆ. ಗೆಳೆಯರ ಮುಕ್ತ ಮತ್ತು ಗಂಭೀರ ಅಭಿಪ್ರಾಯಗಳಿಗೆ ಸ್ವಾಗತವಿದೆ.

ಡಿ.ಎಸ್.ನಾಗಭೂಷಣ

 


ದೇಶಕಾಲವೆಂಬ ಕನ್ನಡ ತ್ರೈಮಾಸಿಕವೊಂದು ಐದು ವರ್ಷಗಳನ್ನು ಪೂರೈಸಿದ ನೆನಪಿಗಾಗಿ ವಿಶೇಷಾಂಕವೊಂದನ್ನು ಹೊರತಂದ ಸಂದರ್ಭದಲ್ಲಿ ನನ್ನ ಕಿರಿಯ ಗೆಳೆಯರಾದ ಮಂಜುನಾಥ ಲತಾ ಹಾಗೂ ಚಂದ್ರಶೇಖರ ಐಜೂರು ಅವರು ದೇಶವಿದೇನಹಾ! ಕಾಲವಿದೇನಹಾ? ಎಂಬ ಲೇಖನ ಬರೆದು, ಅದು ಸಾರ್ವಜನಿಕವಾಗಿ ಪ್ರಕಟವಾಗುವ ಮುನ್ನವೇ, ಅದರ ಪ್ರತಿಯೊಂದನ್ನು ಈ-ಮೇಲ್ ಮೂಲಕ ನನಗೆ ಕಳಿಸಿದ್ದರು. ಅದನ್ನು ಕಷ್ಟಪಟ್ಟು ಓದಿದ ನನಗೆ, ಅದಕ್ಕೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುವ ಮನಸ್ಸಾಗಲಿಲ್ಲ. ಈ ಗೆಳೆಯರು ತಪ್ಪು ಕಾರಣಗಳೆನ್ನೆತ್ತಿಕೊಂಡು-ಜಗತ್ತಿನ ಇಂದಿನ ಎಲ್ಲ ಅನಾಹುತಗಳಿಗೂ, ಕೆಟ್ಟ ಬೆಳವಣಿಗೆಗಳಿಗೂ ಈ ಪತ್ರಿಕೆಯೂ ಜವಾಬ್ದಾರವೆಂಬಂತೆ-ಸಂಚಿಕೆಯನ್ನು ತುಂಬಾ ರೂಕ್ಷವಾಗಿ ಟೀಕಿಸಿದ್ದಾರೆನಿಸಿತು. ಕೆಲ ದಿನಗಳ ನಂತರ ಐಜೂರ್ ದೂರವಾಣಿ ಕರೆ ಮಾಡಿ ನನ್ನ ಪ್ರತಿಕ್ರಿಯೆ ಕೇಳಿದಾಗ ನಾನು ಇದನ್ನೇ ಹೇಳಿದೆ. ಜೊತೆಗೆ ಕೆಲವು ಕಿವಿ ಮಾತುಗಳನ್ನೂ:

 

ಮುಖ್ಯವಾಗಿ, ಜಾತಿಯೊಂದನ್ನೇ ಮನಸ್ಸಿನಲ್ಲಿಟ್ಟುಕೊಂಡು ಟೀಕಿಸುವಾಗ, ಅದು ನಮಗೇ ಗೊತ್ತಿಲ್ಲದ ಹಾಗೆ-ಆದರೆ ಸುಮ್ಮನೆ ನೋಡುವವರಿಗೆ ಅಥವಾ ಓದುವವರಿಗೆ ಎದ್ದು ಕಾಣುವಂತೆ-ಅದು ಎರಡೂ ಕಡೆ ಕತ್ತರಿಸಿಕೊಂಡು ಹೋಗುತ್ತಾ ನಮ್ಮನ್ನೇ-ನಮ್ಮ ಸಣ್ಣತನಗಳನ್ನೇ-ಬಯಲು ಮಾಡಬಲ್ಲುದಾಗಿದೆ. ಹಾಗಾಗಿ ಜಾತಿ ಹಿಡಿದು ಮಾತಾಡುವಾಗ ನಾವು ಜಾತ್ಯತೀತರಾಗಿದ್ದರೆ ಮಾತ್ರ ನಮ್ಮ ಮಾತುಗಳು ವಿಶ್ವಾಸಾರ್ಹವೆನಿಸಿಕೊಳ್ಳುತ್ತವೆ ಎಂದು ಹೇಳಿದೆ. ಹಾಗೇ, ಇಂದು ಮೇಲ್ಜಾತಿವಾದ ಎಂಬುದಷ್ಟೇ ಜಾತಿವಾದವೆನ್ನಿಸಿಕೊಳ್ಳದೆ, ಇಂದಿನ ಸಂದರ್ಭದಲ್ಲಿ ಕೆಳಜಾತಿವಾದವೂ ಅಪಾಯಕಾರಿ ಜಾತಿವಾದವೆನ್ನಿಸಿಕೊಳ್ಳಬಹುದಾಗಿದೆ ಎಂದೂ ಸೂಚಿಸಿದೆ. ಇವರೆಡರ ನಡುವಣ ಸ್ಪರ್ಧೆಯೇ ಇಂದು ಬೇರೆ ಬೇರೆ ವೇಷ ತೊಟ್ಟು ಕನ್ನಡದಲ್ಲಿ ಹೇಗೆ ಸಂಸ್ಕೃತಿ ಚಿಂತನೆಯ ಹೆಸರಿನಲ್ಲಿ ವಾಗ್ವಾದಗಳನ್ನು ಸೃಷ್ಟಿಸಿ ನಮ್ಮೆಲ್ಲರನ್ನೂ ದಾರಿ ತಪ್ಪಿಸುತ್ತಿದೆ ಎಂದು ಅದಕ್ಕ್ಕೆ ಒಂದೆರಡು ಉದಾಹರಣೆಗಳನ್ನೂ ನೀಡಿದೆ. ಅಷ್ಟೇ ಅಲ್ಲ, ನಿಮ್ಮ ಲೇಖನವೂ ಜಾತಿಯೊಂದನ್ನೇ ಮುಂದಿಟ್ಟುಕೊಂಡು;ಆದರೆ ಅದಕ್ಕೆ ಸಾಮಾಜಿಕ-ರಾಜಕೀಯ ನ್ಯಾಯದ ಮುಸುಕು ಹಾಕಿ, ಆ ಮೂಲಕ ಸಂಸ್ಕೃತಿ ಚಿಂತನೆ ಮಾಡುವ ಸುತ್ತು ಬಳಸಾದ ಹತಾಶ ಪ್ರಯತ್ನದಂತೆ ನನಗೆ ಕಾಣುತ್ತಿದ್ದು, ಇದು ಇನ್ನೊಂದು ಹುಸಿ ವಾಗ್ವಾದದ ಸೃಷ್ಟಿಗೆ ಕಾರಣವಾಗಬಹುದಾದ್ದರಿಂದ ನಾನು ಪ್ರತಿಕ್ರಿಯಿಸಲಾರೆ ಎಂದು ಮಾತು ಮುಗಿಸಲು ಯತ್ನಿಸಿದೆ.

ಆದರೆ ಐಜೂರರು, ಮಾತು ಮುಂದುವರೆಸಲೋ ಏನೋ, ಶ್ರೀನಿವಾಸ ವೈದ್ಯರ ಹಳ್ಳ ಬಂತು ಹಳ್ಳಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದುದಕ್ಕೆ ಜಾತಿ ರಾಜಕಾರಣವೇ ಕಾರಣವಲ್ಲವೇ ಎಂದು ಕೇಳಿದಾಗ ನನಗೆ ರೇಗಿ ಹೋಯಿತು. ರೇಗುತ್ತಲೇ ನೀವು ಅದನ್ನು ಓದಿದ್ದೇರೇನ್ರಿ? ಎಂದು ಕೇಳಿದಾಗ ಅವರಿಂದ ಬಂದ ಇಲ್ಲ ಎಂಬ ಉತ್ತರ ನನ್ನನ್ನು ನಿಜವಾಗಿ ಅಪ್ಪಳಿಸಿತೆಂದೇ ಹೇಳಬೇಕು! ಎಲಾ ಈತನ ಧೈರ್ಯವೇ ಎಂದು ಒಂದು ಕ್ಷಣ ಅವಾಕ್ಕಾದೆನಾದರೂ, ಮರುಕ್ಷಣವೇ ಆ ಉತ್ತರದ ಹಿಂದಿದ್ದ ಮುಗ್ಧ ಸತ್ಯ ನಿಷ್ಠೆಯ ಮುಂದೆ ನನ್ನ ಕೋಪವೆಲ್ಲ ಕರಗಿ ಹೋಯಿತು. ಮನಸ್ಸು ಸ್ವಲ್ಪ ನಿಸೂರಾದಂತಾಗಿ, ಮೊದಲು ನೀವು ಆ ಕಾದಂಬರಿಯನ್ನು ಓದಿ. ಆನಂತರ ನಿಮ್ಮ ನೋಟ ಮತ್ತು ಭಾಷೆ ಕೊಂಚವಾದರೂ ಬದಲಾಗಬಹುದು ಎಂದು ಮಾತು ಮುಗಿಸಿದೆ.

ಈ ನಿರ್ದಿಷ್ಟ ಸಂದರ್ಭವನ್ನು ಏಕೆ ಹೇಳುತ್ತಿದ್ದೇನೆಂದರೆ, ಅದು ಐಜೂರು ಮತ್ತು ಅವರ ಮಿತ್ರರ ವಾದಗಳಲ್ಲಿ ಜನಪರತೆ ಎಂಬ ಕಲ್ಪನೆಯ ಅತಿ ಸರಳೀಕರಣ ಮತ್ತು ಅದರಿಂದ ಹುಟ್ಟಿದ ಹುಚ್ಚು ಆವೇಶ, ಭಂಡ ತರ್ಕಗಳು ಇರುವುವಾದರೂ, ಅಪ್ರಮಾಣಿಕತೆ ಇರಲಾರದು ಎಂದು ನನಗೆ ಹೊಳೆದ ಸಂದರ್ಭವದಾದ್ದರಿಂದ. ಇವರ ಲೇಖನ ಮುಂದೆ ಲಂಕೇಶ್ ಪತ್ರಿಕೆಯಲ್ಲಿ ಆರಂಭಿಸಿದ ಪತ್ರ ಸಮರ ರೂಪದ ಚರ್ಚೆಯ ಯಾವ ಹಂತದಲ್ಲೂ, ಅನೇಕರ ಒತ್ತಾಯದ ಹೊರತಾಗಿಯೂ ನಾನು ಭಾಗವಹಿಸಲಿಲ್ಲ. ಕಾರಣ, ದಿಕ್ಕಾಪಾಲಾಗಿ ಹರಿದು ಹೋಗುತ್ತಿದ್ದ ಅದರ ರಭಸಕ್ಕೆ ನಾನು ಬೆದರಿದ್ದೆ. ಆದರೆ ಇಂದು ನಾನು, ಈ ಚರ್ಚೆ ಪುಸ್ತಕ ರೂಪದಲ್ಲಿ ಬರುತ್ತಿರುವಾಗ ಅದಕ್ಕೊಂದು ಪ್ರಸ್ತಾವನೆ ಬರೆಯಲು ಮುಂದಾಗಿರುವುದಕ್ಕೆ ಇದೂ ಒಂದು ಕಾರಣ. ಅಂದರೆ; ಇವರೊಂದಿಗೆ ಎಷ್ಟೇ ಕಷ್ಟವಾದರೂ ಮಾತು ಮುಂದುವರೆಸಬಹುದು ಮತ್ತು ಮುಂದುವರಿಸಬೇಕು ಎಂಬುದು. ಇನ್ನೊಂದು, ಐಜೂರರು ನನ್ನ ಕಟು ಟೀಕೆಯ ಮಾತುಗಳ ಹೊರತಾಗಿಯೂ, ಅವನ್ನೆಲ್ಲ ವಿಧೇಯ ವಿದ್ಯಾರ್ಥಿಯಂತೆ ಕೇಳಿಸಿಕೊಂಡು, ನನ್ನ ಕಣ್ಣಿನ ಶಸ್ತ್ರಚಿಕಿತ್ಸೆಯಿಂದಾಗಿ ಅನಿರ್ದಿಷ್ಟ ಅವಧಿಯವರೆಗೆ ವಿಳಂಬವಾಗಲಿದೆ ಎಂದು ಹೇಳಿದರೂ, ಈ ಪ್ರಸ್ತಾವನೆ ಬರೆಯಲು ನನ್ನನ್ನು ಪ್ರೀತಿಪೂರ್ವಕವಾಗಿ ಒತ್ತಾಯಿಸಿರುವುದು. ಜೊತೆಗೆ ನಾನು ಮಂಜುನಾಥ್ ಲತಾ-ಐಜೂರು ಹಾಗೂ ಅವರ ಓರಿಗೆಯ ಕಿರಿಯ ಗೆಳೆಯರಿಗೆ ಅವರ ಕೆಲವು ಅನಗತ್ಯ ಆಟಾಟೋಪಗಳನ್ನು ನೋಡಿದಾಗ ಹೇಳಲೇಬೇಕೆಂದಿದ್ದ;ಆದರೆ ಸೂಕ್ತ ಸಂದರ್ಭ ಬಾರದೆ ಹೇಳಲಾಗದಿದ್ದ ಹಲವು ಮಾತುಗಳನ್ನೂ, ಸಂಗತಿಗಳನ್ನು ಹೇಳಲು ಈ ಸಂದರ್ಭ ಒಂದು ಸೂಕ್ತ ಪರಿಪ್ರೇಕ್ಷವನ್ನೂ ಒದಗಿಸಿರುವುದು ಮತ್ತೊಂದು ಕಾರಣವೆಂದೂ ಹೇಳಬಹುದು. ಹೀಗಾಗಿ ನನ್ನ ಈ ಬರಹ ನನ್ನ ಹಿರಿಯರಿಗೆ ಮತ್ತು ಓರಿಗೆಯವರಿಗೆ ಅತಿ ದೀರ್ಘವೆನಿಸಿದರೆ ಕ್ಷಮೆ ಇರಲಿ. ಹೇಗೂ ಐಜೂರರು ಎಷ್ಟಾದರೂ ಬರೆಯಿರಿ, ಏನಾದರೂ ಬರೆಯಿರಿ, ಅಂತೂ ಈ ಸಂದರ್ಭದಲ್ಲಿ ನೀವು ಬರೆಯಿರಿ ಎಂದು ಅಭಯ ನೀಡಿದ್ದಾರೆ!

-೨-

ನನ್ನ ಈ ಮೇಲಿನ ಮಾತುಗಳನ್ನು ಓದಿ, ನಾನು ಈ ಚರ್ಚೆಯಲ್ಲಿ ಭಾಗವಹಿಸದಿರಲು ದೇಶಕಾಲದ ಚರಿತ್ರೆಯ ಬಗೆಗೆ ಈತನಿಗೆ ನಿಜವಾಗಿ ಯಾವೊಂದು ನಿಲುವಾಗಲೀ, ಅಭಿಪ್ರಾಯವಾಗಲೀ ಇಲ್ಲದಿರುವುದೂ ಒಂದು ಕಾರಣವಿರಬಹುದು ಎಂದು ಯಾರಾದರೂ ಯೋಚಿಸಿದ್ದರೆ ಅದು ತಪ್ಪು. ಮಂಜುನಾಥ್ ಲತಾ ಹಾಗೂ ಐಜೂರರ ಲೇಖನ ಬರುವ ಮುನ್ನವೇ ನಾನು ಈ ಪತ್ರಿಕೆಯ ವಿಶೇಷಾಂಕದ ಬಿಡುಗಡೆಯು ಪ್ರಜಾವಾಣಿಯೂ ಸೇರಿದಂತೆ ನಮ್ಮ ಎಲ್ಲ ಮಾಧ್ಯಮಗಳಲ್ಲಿ ಪಡೆದ ಅಭೂತಪೂರ್ವ ಪ್ರಚಾರ ಕಂಡು, ಅದನ್ನು ಪ್ರಶ್ನಿಸಿ, ಟೀಕಿಸಿ ಪ್ರಜಾವಾಣಿಗೆ ಪುಟ್ಟ ಪತ್ರವೊಂದನ್ನು ಬರೆದಿದ್ದೆ. ಆದರೆ ಆ ಪತ್ರಿಕೆ ತನ್ನ ನಿಲುವನ್ನು ಪ್ರಶ್ನಿಸಿದ, ಟೀಕಿಸಿದ ಏನನ್ನೂ ಪ್ರಕಟಿಸದ ತನ್ನ ಎಂದಿನ ನೀತಿಗನುಗುಣವಾಗಿ ಪ್ರಕಟಿಸಲಿಲ್ಲ.(ಈ ಪತ್ರ ಇತ್ತೀಚಿನ ನನ್ನ ಇಲ್ಲಿ ಯಾರೂ ಅಮುಖ್ಯರಲ್ಲ ಪುಸ್ತಕದಲ್ಲಿ ಪ್ರಕಟವಾಗಿದೆ.)

ಹಾಗೆ ನೋಡಿದರೆ ನಾನು ದೇಶಕಾಲ ಪತ್ರಿಕೆ ಆರಂಭವಾದಾಗಿನಿಂದಲೂ ಅದರ ಚಂದಾದಾರನಾಗಿದ್ದವನು. ಅಷ್ಟೇ ಅಲ್ಲ, ಕೆ.ವಿ. ಅಕ್ಷರ ಅವರ ಕೋರಿಕೆಯ ಮೇರೆಗೆ ಒಂದು ಸಂಚಿಕೆಯ ಸಮಯ ಪರೀಕ್ಷೆ ವಿಭಾಗಕ್ಕಾಗಿ ಟೆಲಿವಿಷನ್ ಬಗ್ಗೆ ಒಂದು ಪುಟ್ಟ ಲೇಖನವನ್ನೂ ಬರೆದವನು. ಹಾಗೇ, ಈ ಪತ್ರಿಕೆಯ ಪುಸ್ತಕ ವಿಮರ್ಶೆ ವಿಭಾಗದ ಹೊಣೆ ಹೊತ್ತಿದ್ದ ಜಿ. ರಾಜಶೇಖರರು ಪತ್ರಿಕೆಗಾಗಿ ಪುಸ್ತಕ ವಿಮರ್ಶೆ ಮಾಡಲು ಕೋರಿದಾಗ, ಇವರು ಆಯ್ದು ಕೊಟ್ಟ ಪುಸ್ತಕಗಳನ್ನಷ್ಟೇ ವಿಮರ್ಶೆ ಮಾಡಬೇಕಾಗಿದ್ದುದರಿಂದ ಅದು ಒಪ್ಪಿಗೆಯಾಗದೆ ನಿರಾಕರಿಸಿದವನು. ಆದರೆ ಅದರ ಆರನೇ ಸಂಪುಟಕ್ಕೆ ಹಾಗೂ ವಿಶೇಷಾಂಕಕ್ಕೆ ಸಕಾಲದಲ್ಲಿ ಚಂದಾ ಕಳಿಸಲು ಮರೆತು ಚಂದಾದಾರತ್ವವನ್ನು ಕಳೆದುಕೊಂಡವನು! (ಹಾಗೆಂದು ನೆನಪು.) ಮಿತ್ರರನೇಕರು ವಿಶೇಷ ಸಂಚಿಕೆಯಲ್ಲಿನ ವಿಶೇಷಗಳ ಬಗ್ಗೆ ಮಾತನಾಡಲು ತೊಡಗಿದಾಗ, ನನಗೇಕೆ ಆರನೇ ಸಂಪುಟದ ಮೊದಲ ಸಂಚಿಕೆಯಾಗಲೀ, ವಿಶೇಷ ಸಂಚಿಕೆಯಾಗಲೀ ಬಂದಿಲ್ಲ ಎಂದು ಯೋಚಿಸಿದಾಗಲೇ ನನ್ನಿಂದಾಗಿದ್ದ ಪ್ರಮಾದ ಗೊತ್ತಾದದ್ದು! ಕನ್ನಡ ಸಾಹಿತ್ಯ ಪತ್ರಿಕೆಗಳ ಇತಿಹಾಸದಲ್ಲೇ ಬಹುಶಃ ಇಷ್ಟು ಕಟ್ಟುನಿಟ್ಟಾದ ಸದಸ್ಯತ್ವ ಕಾರ್ಯಕ್ರಮ ಎಂದೂ ನಡೆದಿರಲಾರದು! ಬಹುಶಃ ಇದು ಈ ಪತ್ರಿಕೆಯ ದೊಡ್ಡಸ್ಥಿಕೆಗಳಲ್ಲಿ ಒಂದಾಗಿರಬಹುದು! ನಾನೂ ನನ್ನ ಕೆಲವು ಗೆಳೆಯರೊಂದಿಗೆ ಹತ್ತು-ಹದಿನೈದು ವರ್ಷಗಳ ಕಾಲ (ಸಾಹಿತ್ಯ) ಸಂವಾದ ಎಂಬ ಒಂದು ಸಾಹಿತ್ಯ ಪತ್ರಿಕೆ ನಡೆಸಿದವನಾಗಿ, ಕನ್ನಡ ಸಾಹಿತ್ಯ ಪತ್ರಿಕೆಯೊಂದು ಇಂತಹ ದೊಡ್ಡಸ್ಥಿಕೆ ಸಂಪಾದಿಸಿರುವುದು ನನಗೆ ಹೆಮ್ಮೆಯ ಸಂಗತಿಯೇ ಎನಿಸಿ ಸುಮ್ಮನಾದೆ.

ಆದರೆ ಆರನೇ ಸಂಪುಟದ ಮೊದಲ ಸಂಚಿಕೆಯ ಬಗೆಗೆ ನನಗೆ ಕೂತೂಹಲವಿರಲಿಲ್ಲವಾದರೂ, ವಿಶೇಷ ಸಂಚಿಕೆ ಕುರಿತು, ಅದರ ಬಗ್ಗೆ ಈ ಹಿಂದಿನ ಸಂಚಿಕೆಯಲ್ಲಿ ನೀಡಿದ್ದ ಮಾಹಿತಿಯಿಂದಾಗಿ ಕುತೂಹಲವಿತ್ತು. ಆರನೇ ಸಂಪುಟದ ಬಗ್ಗೆ ಕುತೂಹಲವಿಲ್ಲದಿರಲು ಕಾರಣ, ಅದರ ಐದು ವರ್ಷಗಳ ಯಾವೊಂದು ಸಂಚಿಕೆಯೂ ನನ್ನಲ್ಲಿ ಅಂತಹ ವಿಶೇಷ ಕುತೂಹಲವನ್ನೇನೂ ಹುಟ್ಟಿಸದ್ದಿದುದು. ಒಳ್ಳೆಯ ಕಾಗದ, ಕನ್ನಡ ಸಾಹಿತ್ಯ ಪತ್ರಿಕೆಗಳಿಗೆ ನವೀನವೆನ್ನಿಸುವ ರಕ್ಷಾಪುಟ, ಪುಟ ವಿನ್ಯಾಸ, ರೇಖಾ ಚಿತ್ರಗಳು ಮತ್ತು ಅತ್ಯುತ್ತಮ ಮುದ್ರಣಗಳೊಂದಿಗೆ ಸಾಮಾನ್ಯ ಸಾಮಗ್ರಿಯನ್ನು ಅಸಾಮಾನ್ಯವೆಂಬಂತೆ ಪ್ರಸ್ತುತಗೊಳಿಸುವ ಹೊಸ ಕಾಲದ ವಾಣಿಜ್ಯ ಲೋಕದ ಪ್ಯಾಕೇಜ್ ತಂತ್ರ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಅದರ ಕರಾರುವಕ್ಕಾದ ಕ್ಲುಪ್ತತೆ ಮಾತ್ರ ಈ ಪತ್ರಿಕೆಯ ಹೆಚ್ಚುಗಾರಿಕೆಯಾಗಿ ನನಗೆ ಕಂಡಿತ್ತು.

ನಾವು ತರುತ್ತಿದ್ದ (ಸಾಹಿತ್ಯ) ಸಂವಾದ, ನ್ಯೂಸ್ ಪ್ರಿಂಟ್ ಕಾಗದದಲ್ಲಿ; ಮಲ್ಲಾಡಿಹಳ್ಳಿ, ಹೊಳಲ್ಕೆರೆ, ಹಾಸನ ಇತ್ಯಾದಿ ಸಣ್ಣಪುಟ್ಟ ಊರುಗಳ ಸಾಮಾನ್ಯ ಮುದ್ರಣಾಲಯಗಳಲ್ಲಿ ಅತಿ ಸಾಮಾನ್ಯ ರೀತಿಯಲ್ಲಿ ಮುದ್ರಣಗೊಳ್ಳುತ್ತಿದ್ದರೂ, ಅದರ ಸಂಚಿಕೆಗಳು ಈ ಪತ್ರಿಕೆಯ ಸಂಚಿಕೆಗಳಿಗಿಂತ ಹೆಚ್ಚು ಮೌಲಿಕವಾಗಿದ್ದುವೆಂದೇ ಈಗ ಕಾಲದೂರದಲ್ಲಿ ನಿಂತು ನೆನೆದಾಗಲೂ ನನಗೆ ಅನ್ನಿಸುತ್ತಿದೆ. ಹಾಗಾಗಿಯೇ ಅದರ ಚಂದಾದಾರರ ಸಂಖ್ಯೆ ಒಂದು ಕಾಲದಲ್ಲಿ ಒಂದು ಸಾವಿರದ ಹತ್ತಿರ ಹತ್ತಿರ ಮುಟ್ಟಿ, ನನಗೆ ತಿಳಿದಂತೆ ಸಣ್ಣ ಪತ್ರಿಕೆಗಳ ಇತಿಹಾಸದಲ್ಲಿ ಒಂದು ದಾಖಲೆಯನ್ನೇ ಸ್ಥಾಪಿಸಿತ್ತು. ಆದರೆ ಇಂದು ಆ ಪತ್ರಿಕೆಯ ಸಾಮಾನ್ಯ ಸಂಚಿಕೆಗಳ ಬಗೆಗಿರಲಿ, ಅದು ಹೊರತಂದ ಅಂದಿನ ಬಹು ಮುಖ್ಯ ಲೇಖಕರ ಬಹು ಮುಖ್ಯ ಲೇಖನಗಳನ್ನೊಳಗೊಂಡ ಆಲನಹಳ್ಳಿ ಕೃಷ್ಣ, ಮಾಸ್ತಿ, ಸತ್ಯಜಿತ್ ರೇ, ಎ.ಕೆ.ರಾಮಾನುಜನ್, ಮಹಿಳಾ ಸಾಹಿತ್ಯ ಸ್ಪಂದನ ಮುಂತಾದ ವಿಶೇಷಾಂಕಗಳ ಬಗೆಗೂ ಯಾರೂ ಸಾಂದರ್ಭಿಕವಾಗಿ ಕೂಡಾ ಪ್ರಸ್ತಾಪ ಮಾಡುತ್ತಿಲ್ಲ! ಏಕೆಂದರೆ ಅದು ಯಾವುದೇ (ಸಾಹಿತ್ಯ ಅಥವಾ ಸಾಹಿತ್ಯೇತರ)ಸ್ಥಾಪಿತ ಹಿತಾಸಕ್ತಿಗಳ ದಾಕ್ಷಿಣ್ಯಕ್ಕೆ ಅಥವಾ ಮರ್ಜಿಗೆ ಸಿಗದಂತೆ ಎಚ್ಚರಿಕೆ ವಹಿಸಿ ತನ್ನ ಪಾಡಿಗೆ ತನ್ನ ದಾರಿ ಸವೆಸಿತು. ಆ ದಾರಿ ಬಿಟ್ಟೊಡನೆ ಅದು ಸ್ಥಗಿತಗೊಂಡಿತು ಎಂಬುದು ಬೇರೆ ವಿಚಾರ.

ಆದರೆ ಇಂದು ದೇಶಕಾಲವನ್ನು ಕೆಲವರು ಅಡಿಗರ ಸಾಕ್ಷಿಗೆ ಹೋಲಿಸಿಕೊಂಡು, ಸಾಹಿತ್ಯೇತರ ಕಲ್ಮಶಗಳಿಂದ ಮಲಿನಗೊಂಡಿರುವ ಇಂದಿನ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಶ್ರೇಷ್ಠ ಸಾಹಿತ್ಯದ ದಿನಗಳು ಮರಳಿ ಬರಲು ಬೇಕಾದ ಬಾಗಿಲನ್ನು ತೆರೆಯಲಾಗಿದೆ ಎಂದು ಸಂಭ್ರಮಪಡುತ್ತಿದ್ದರೆ; ಇನ್ನು ಕೆಲವರು ಇದನ್ನು ಈಗ ಇದ್ದಕ್ಕಿದ್ದಂತೆ ಕೆಲವರಿಂದ ಆರಂಭವಾಗಿರುವ ಅಡಿಗ ಪುನರುತ್ಥಾನ ಕಾರ್ಯಕ್ರಮದ ಭಾಗವಾಗಿ ನೋಡುತ್ತಾ, ಶ್ರೇಷ್ಠ ಸಾಹಿತ್ಯ ಕಲ್ಪನೆಯ ಪುನರಾಗಮನವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ! ಇದು ನಮ್ಮ ಇಂದಿನ ಸಾಹಿತ್ಯ ಜಗತ್ತು ಕೇವಲ ತತ್ಕಾಲೀನ ಸಾಹಿತ್ಯ ರಾಜಕಾರಣದ ಹುದಲಿನಲ್ಲಿ ಸಿಕ್ಕಿಕೊಂಡು ತನ್ನ ಇತ್ತೀಚಿನ ಪರಂಪರೆಯ ಬಗೆಗೇ ಹೇಗೆ ಕಿವಿಗೆ ಬಿದ್ದ ಬರೀ ಅರ್ಧ ಸತ್ಯದ ಮಾತುಗಳ ಆಧಾರದ ಮೇಲೇ ಚರ್ಚೆಗಳನ್ನು ಕಟ್ಟಿಕೊಂಡು ದೊಡ್ಡ ದೊಡ್ಡ ತೀರ್ಮಾನಗಳಿಗೆ ಬರುವಂತಹ ದುಃಸ್ಥಿತಿಗೆ ಈಡಾಗಿದೆ ಎಂಬುದನ್ನು ಸೂಚಿಸುತ್ತದೆ. ಏಕೆಂದರೆ, ಇವರಿಬ್ಬರಿಗೂ, ಸಾಕ್ಷಿ ಏನಾಗಿತ್ತು ಹಾಗೂ ಇದನ್ನು ದೇಶಕಾಲದೊಂದಿಗೆ ಏಕೆ ಹೋಲಿಸಲಾಗದು ಮತ್ತು ಜಾಗೃತ ಸಾಹಿತ್ಯ ಸಮ್ಮೇಳನದ ಸಂದರ್ಭ ಎಂತಹುದು ಹಾಗೂ ಅಲ್ಲಿ ಶ್ರೇಷ್ಠ ಸಾಹಿತ್ಯದ ಕಲ್ಪನೆ ಮತ್ತು ಚರ್ಚೆ ಏಕೆ ಮತ್ತು ಹೇಗೆ ಮೂಡಿಬಂತು ಎಂಬುದರ ಪರಿವೆಯೇ ಇದ್ದಂತಿಲ್ಲ.

ಸಾಕ್ಷಿ ಒಳ್ಳೆಯದಕ್ಕೋ ಕೆಟ್ಟದಕ್ಕೋ(ಇದು ಸರಳ ತೀರ್ಮಾನಗಳಿಗೆ ಸಿಗದ ಬೇರೆಯೇ ಚರ್ಚೆ) ಕನ್ನಡ ಸಾಹಿತ್ಯ ಕಂಡ ಒಂದು ದೊಡ್ಡ ಪಲ್ಲಟದ ದಿಕ್ಕು-ದೆಸೆ ಹಾಗೂ ತಲ್ಲಣಗಳನ್ನು ದಾಖಲಿಸುವ ತುರ್ತಿನಲ್ಲಿ ಹುಟ್ಟಿದ ಪತ್ರಿಕೆ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅದಕ್ಕೊಂದು ಸ್ಥಾನವಿದೆ. ಆದರೆ ದೇಶಕಾಲದ ಹಿಂದೆ, ಸಮಯ ಪರೀಕ್ಷೆಯಂತಹ ಅದರ ಕೆಲವು ಬೌದ್ಧಿಕ ವಯ್ಯಾರಗಳನ್ನು ಗಮನಿಸಿದಾಗ ಅದರದೇ ಆದ ಕೆಲವು ಸಾಹಿತ್ಯಿಕ-ಸಾಂಸ್ಕೃತಿಕ ಆತಂಕಗಳು ಗೋಚರವಾಗುವುವಾದರೂ, ಅಂತಹ ಯಾವುದೇ ಚಾರಿತ್ರಿಕ ತುರ್ತೂ ಇದ್ದಂತಿಲ್ಲ. ಅದು ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ತನ್ನ ಸ್ಥಾನವನ್ನಿರಲಿ, ಅಸ್ತಿತ್ವವನ್ನೇ ಇನ್ನೂ ಸ್ಥಾಪಿಸಿಕೊಂಡಂತಿಲ್ಲ. ಹೀಗಿರುವಾಗ ಈ ಪತ್ರಿಕೆಯ ಸುತ್ತ ಇಷ್ಟು ದೊಡ್ಡದಾಗಿ, ದೊಡ್ಡ ದನಿಯಲ್ಲಿ ನಡೆದಿರುವ ಚರ್ಚೆ ಕನ್ನಡ ಸಾಹಿತ್ಯ ಜಗತ್ತಿನ ಚರ್ಚೆಗಳನ್ನು ಇಂದು ಈ ಜಗತ್ತಿನ ಹೊರಗಿನ ಶಕ್ತಿಗಳೇ ನಿಯಂತ್ರಿಸುತ್ತಿರುವ ದುರಂತವನ್ನು ಸೂಚಿಸುತ್ತದೆ ಎಂದು ಭಾವಿಸಿರುವೆ.

ಈ ಕಾರಣದಿಂದಾಗಿಯೇ, ಗೋಪಾಲಕೃಷ್ಣ ಅಡಿಗರು ಪ್ರತಿಪಾದಿಸಿದ್ದ ಶ್ರೇಷ್ಠ ಸಾಹಿತ್ಯದ(ಇದು, ಅದರ ಉದ್ದೇಶಿತ ಅರ್ಥದ ಸಮರ್ಪಕ ವರ್ಣನೆಯಲ್ಲವಾದರೂ!) ಕಲ್ಪನೆಯ ಐತಿಹಾಸಿಕತೆಯ ಬಗ್ಗೆ ಇಲ್ಲಿ ಒಂದಿಷ್ಟು ವಿಸ್ತಾರವಾಗಿಯೇ ಬರೆಯಬೇಕಾಗಿದೆ. ಇದು ಮೊದಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶಿವರಾಮ ಕಾರಂತರು ಕೇಳಿದ ಮಸಾಲೆ ದೋಸೆ ಪ್ರಶ್ನೆಯಂತೆಯೇ ಉದ್ದೇಶಪೂರ್ವಕ ಅಪವ್ಯಾಖ್ಯಾನಕ್ಕೆಳಗಾಗಿದೆ. ಆ ಮೂಲಕ ಅನೇಕ ಗೊಂದಲಗಳನ್ನೂ, ಅನಗತ್ಯ ಆತಂಕಗಳನ್ನು ಸೃಷ್ಟಿಸುತ್ತಾ, ಸಾಹಿತ್ಯಿಕ-ಸಾಂಸ್ಕೃತಿಕ ಚರ್ಚೆಗಳನ್ನು ಮಂಜುನಾಥ್ ಲತಾ-ಐಜೂರರ ಬರಹದಂತೆ ಸಲ್ಲದ ವಲಯಗಳಿಗೆ, ಹೋಲಿಕೆಗಳಿಗೆ, ಉದಾಹರಣೆಗಳಿಗೆ, ಭಾಷೆಗೆ ಎಳೆದೊಯ್ಯುವ ಪ್ರಯತ್ನಗಳಿಗೆ ದಾರಿ ಮಾಡಿಕೊಟ್ಟಿದೆ.

ಸಾಹಿತ್ಯ, ಅದೆಷ್ಟೇ ಸಾಮಾಜಿಕ-ರಾಜಕೀಯ ಸತ್ವವನ್ನು ಗಳಿಸಿಕೊಂಡರೂ, ಅದು ತನ್ನ ಮೂಲ ಲಕ್ಷಣಗಳನ್ನು ಕಳೆದುಕೊಳ್ಳದೆ ಸಾಹಿತ್ಯವಾಗಿ ಉಳಿಯಬೇಕು. ಅಂದರೆ ಅದು ಮನುಷ್ಯನನ್ನು ಒಳಗಿಂದ ಅಲ್ಲಾಡಿಸಬೇಕು. ಹೊರಗಿಂದ ಅಲ್ಲ. ಅದು ಹೊರಗಿಂದ ಅಲ್ಲಾಡಿಸ ಹೊರಟಷ್ಟೂ ಅದು ತನ್ನ ಸತ್ವವನ್ನು ಕಳೆದುಕೊಂಡು ಸಾಹಿತ್ಯವಾಗಿ ತನ್ನ ವಿಶ್ವಾಸಾರ್ಹತೆಯನ್ನೂ ಕಳೆದುಕೊಳ್ಳುತ್ತದೆ. ಇದು ನಮ್ಮ ಸಾಹಿತ್ಯ ಪರಂಪರೆಗೇ ಮಾಡುವ ಅನ್ಯಾಯ. ಅತ್ತ ನವ್ಯದ ಅತಿ ವಿಶಿಷ್ಟ ಸಾಹಿತ್ಯ ಮೀಮಾಂಸೆಯ ಮಡಿವಂತಿಕೆಯ ಕಾಟದಿಂದಾಗಿಯೂ, ಇತ್ತ ಅದರ ಸಾಂಸ್ಕೃತಿಕ ರಾಜಕಾರಣ ವಿರುದ್ಧ ಸೆಟೆದೆದ್ದ ಅಖಿಲ ಕರ್ನಾಟಕ ಲೇಖಕರ ಮತ್ತು ಕಲಾವಿದರ ಒಕ್ಕೂಟವು೧ ಸಾಹಿತ್ಯ ಗುಣದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ನಿರಾಕರಿಸಿದ ನಿಲುವಿನಿಂದಾಗಿಯೂ, ಎಲ್ಲೂ ಸಲ್ಲದ ಕೆಲವು ಸಾಹಿತಿ ವೇಷಧಾರಿಗಳು ಬಂಡಾಯ ಸಾಹಿತ್ಯ ಸಂಘಟನೆಯ ಹೆಸರಿನಲ್ಲಿ ನಡೆಸಲಾರಂಭಿಸಿದ ರಾಜಕೀಯ ಪುಢಾರಿತನದ ಮುಖವಾಣಿಯಾಗ ಹೊರಟ ಆಧುನಿಕ ಕನ್ನಡ ಸಾಹಿತ್ಯ, ತನ್ನ ಈ ದುರ್ಬಲ ಘಟ್ಟದಲ್ಲ್ಲಿ ಎದುರಿಸಿದ್ದು ಇಂತಹ ಅಪಾಯವನ್ನೇ. ಈ ಸಂದರ್ಭದಲ್ಲೇ ಜನ ಮತ್ತು ಜೀವಗಳ ಮೇಲೆ ಗುತ್ತೇದಾರಿಕೆಯನ್ನು ಸಾರಿಕೊಂಡ ಕನ್ನಡ ಸಾಹಿತ್ಯದ ನವ (ಮಾಂಸಾಹಾರಿ!)ಪುರೋಹಿತರು, ಸಾಹಿತ್ಯದ ಜನಪರ, ಜೀವಪರ, ಜನವಿರೋಧಿ, ಜೀವವಿರೋಧಿ ಇತ್ಯಾದಿ ಸುಲಭ ವರ್ಗೀಕರಣವನ್ನು ಆರಂಭಿಸಿದ್ದು.

ಇದರಿಂದ ಆತಂಕಿತಗೊಂಡ ಸಹಜ ಸಾಹಿತಿಯಾದ ಲಂಕೇಶ್-ಇವರು ಬಂಡಾಯವನ್ನು ಡಂಬಾಯ ಎಂದು ವ್ಯಂಗ್ಯವಾಡುತ್ತಿದ್ದರು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು-ಈ ಪ್ರವೃತ್ತಿಯ ವಿರುದ್ಧ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದೇ ಜಾಗೃತ ಸಾಹಿತ್ಯ ಸಮ್ಮೇಳನ. ಅವರು ಇದನ್ನು ಆಯೋಜಿಸಿದ್ದು, ತಮ್ಮ ಮೊದಲ ಅವತಾರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಸಂಸ್ಥಾಪಕರಾಗಿ ಅದಕ್ಕೆ ಖಡ್ಗ ದೀಕ್ಷೆ ನೀಡಿದ ಡಿ.ಆರ್.ನಾಗರಾಜರ ಸಂಚಾಲಕತ್ವದಲ್ಲಿ ಎಂಬುದನ್ನೂ ನಾವು ಗಮನಿಸಬೇಕು. ನಾಗರಾಜರು ತಮ್ಮ ಈ ಎರಡನೇ ಅವತಾರದಲ್ಲಿ ತಮ್ಮ ಮೊದಲ ಅವತಾರದಲ್ಲಿ ಮಾಡಿದ್ದ ಸಾಹಿತ್ಯ ಪಾಪವನ್ನು ತೊಳೆದುಕೊಳ್ಳಲು ಯತ್ನಿಸಿದರೂ, ಅವರು ಇಂದೂ ಕಾವ್ಯವನ್ನು ಖಡ್ಗ ಮಾಡುವ ಕಾವ್ಯ ಕಮ್ಮಾರಿಕೆಯಲ್ಲಿ ನಿರತರಾಗಿರುವ ಕೆಲವರ ಕಣ್ಮಣಿಯೂ ಆಗಿರುವುದಕ್ಕೆ, ಅವರ ಜಾತಿಮೂಲವಷ್ಟೇ ಕಾರಣವಾಗಿದ್ದರೆ ಆಶ್ಚರ್ಯವಿಲ್ಲ!

ಅದೇನೇ ಇರಲಿ, ಆ ಹೊತ್ತಿಗೆ ಅಡಿಗರು ತಮ್ಮ ಆವರೆಗಿನ ಪ್ರತಿಪಾದನೆಗಳಿಗೇ ಉಲ್ಟಾ ಹೊಡೆದಂತೆ(ಮರ್ಮಸ್ಥಾನಕ್ಕೇ ಬಿದ್ದ ಒಕ್ಕೂಟದವರ ಹೊಡೆತ ತಾಳಲಾರದೆ?) ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರಿಂದ(ಇದು ಆಗ ಕಸಾಪದ ಅಧ್ಯಕ್ಷರಾಗಿದ್ದ ಹಂಪನಾ ಮಾಡಿದ ಕ್ರಾಂತಿ!) ಆರಂಭವಾದಂತೆ ಸಾಕಷ್ಟು ಕಾಲ ತಮ್ಮ ವಿವಾದಾತ್ಮಕ ಸಾಂಸ್ಕೃತಿಕ ನಂಬಿಕೆಗಳು ಮತ್ತು ರಾಜಕೀಯ ನಿಲುವುಗಳಿಂದಾಗಿ ಸರ್ವ ದಿಕ್ಕುಗಳಿಂದಲೂ ಟೀಕೆ-ದೂಷಣೆಗಳನ್ನೇ ಎದುರಿಸಿ ಹಣ್ಣಾಗಿದ್ದರೂ, ಅವರು ಈ ಸಮ್ಮೇಳನದಲ್ಲ್ಲ್ಲಿ ಸಾಹಿತ್ಯದ ಸ್ವಾಯತ್ತತೆ ಕುರಿತಂತೆ, ಅದನ್ನು ತಮ್ಮ ಜೀವನ್ಮರಣದ ಪ್ರಶ್ನೆ ಎಂಬಂತೆ ಪರಿಗಣಿಸುವುದಾಗಿ ಹೇಳುತ್ತಾ ಆಡಿದ ಕೆಲವು ದಿಟ್ಟ ಮಾತುಗಳು ಆಧುನಿಕ ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ದಾಖಲರ್ಹವಾದವು. ಅವು, ಕನ್ನಡ ಸಾಹಿತ್ಯದ ಮೇಲೆ ಪಂಪ, ಅಲ್ಲಮ, ಹರಿಹರ, ಕುಮಾರವ್ಯಾಸ, ಬೇಂದ್ರೆ, ಕುವೆಂಪು ಅವರಿಗಿಂತ, ಹಾವನೂರು ಆಯೋಗದ ಪ್ರಭಾವವೇ ಹೆಚ್ಚಾಗಿ ಅದು ತನ್ನ ಮೂಲ ಅಸ್ಮಿತೆಯ ಬಿಕ್ಕಟ್ಟನ್ನು ಎದುರಿಸಿದ್ದಾಗ ಆಡಿದ ಮಾತುಗಳು;ಅದೂ, ತನ್ನನ್ನು ಒಬ್ಬ ಬ್ರಾಹ್ಮಣ ಎಂದು ಸಾಂಸ್ಕೃತಿಕವಾಗಿಯಾದರೂ ಗುರುತಿಸಿಕೊಳ್ಳುತ್ತಿದ್ದ ಲೇಖಕನೊಬ್ಬ ಅಂದಿನ ಕೂಗುಮಾರಿ ಸಾಹಿತ್ಯ ವಾತಾವರಣದ ಮಧ್ಯೆ ಎಂಬ ಕಾರಣಕ್ಕೂ; ಅವುಗಳ ದಿಟ್ಟತನ ಐತಿಹಾಸಿಕವಾಗಿ ಗಮನಾರ್ಹವೆನಿಸುತ್ತದೆ.

ಆದರೆ ಕೆ.ವಿ.ಸುಬ್ಬಣ್ಣನವರು ತಾವು ಆಗಾಗ್ಗೆ ಪ್ರದರ್ಶಿಸುವ ತಮ್ಮ ಬೌದ್ಧಿಕ ವಿಭಿನ್ನತೆಯನ್ನು ಸಾರುವ ಐಲುತನದ ಭಾಗವಾಗಿ(ಇಂತಹ ಐಲುತನದಿಂದಾಗಿಯೇ ಅವರು, ಕನ್ನಡ ರಂಗಭೂಮಿ ಇತಿಹಾಸದಲ್ಲೇ ಒಂದು ಅಪೂರ್ವ ಪ್ರಯೋಗವೆನಿಸಬಹುದಾಗಿದ್ದ ಸದಾರಮೆಯಂತಹ ಸಹಜ ಕಂಪನಿ ನಾಟಕವನ್ನು ಬಿ.ವಿ.ಕಾರಂತರಂತಹವರ ಕೈಗೆ ಕೊಟ್ಟೂ, ಅದು ಮಕಾಡೆ ಮಲಗುವಂತೆ ಮಾಡಿದ್ದು ನನಗೆ ನೆನಪಿದೆ.) ಅಂದಿನ ಕಾಲಕ್ಕೆ ತಕ್ಕ ರಾಜಕೀಯ ಸರಿತನದ ಭಾಷಣ ಮಾಡುವ ಪ್ರಯತ್ನ ಮಾಡಿ, ಶ್ರೇಷ್ಠ ಸಾಹಿತ್ಯ ಕಲ್ಪನೆ ಕುರಿತ ಚರ್ಚೆಯನ್ನೇ ದಾರಿ ತಪ್ಪಿಸಿದರು. ಬಹುಶಃ ತಾವು ನೀನಾಸಂ ಮೂಲಕ ತಮ್ಮದೇ ರೀತಿಯಲ್ಲಿ ತೊಡಗಿದ್ದ ಸಾಹಿತ್ಯ-ಸಂಸ್ಕೃತಿ ಶ್ರೇಷ್ಠತೆಯ ಆಂದೋಲನದ ಬಗೆಗಿನ ಅಪರಾಧ ಭಾವದಿಂದ ಹೊರಬರುವ ಸುಲಭ ಹೊರ ದಾರಿಯಾಗಿ ಅವರು ಈ ಸರಳ ಸಮಾಜಮುಖಿ ನಿಲುವನ್ನು ತಾಳಿರಬಹುದು. ಸುಬ್ಬಣ್ಣ ಆಗಾಗ್ಗೆ ತಮ್ಮನ್ನು ತಾವು ಸಮಾಜವಾದಿ ಎಂದು ಗುರುತಿಸಿಕೊಳ್ಳುತ್ತಿದ್ದವರು ತಾನೇ! ಅವರು ಈ ಭಾಷಣದಲ್ಲಿ ಶ್ರೇಷ್ಠ ಸಾಹಿತ್ಯದ ಕಲ್ಪನೆ ಹುಟ್ಟಿಸುವ ಅಮಲಿನ ಬಗ್ಗೆ ಆಡಿದ ಕೆಲವು ಎಚ್ಚರಿಕೆಯ ಮಾತುಗಳು ಗಮನಾರ್ಹವಾದುವಾದರೂ, ಒಟ್ಟಾರೆ ಅದರ ಗಮನ ಬೌದ್ಧಿಕವಾಗಿಯೂ ರೋಚಕವೆನಿಸುವ ಸುಲಭ ಜನಪರತೆಯ ಕಡೆಗೇ ಇತ್ತು ಎಂಬುದನ್ನು ನಾವು ಗಮನಿಸಬೇಕು. ಶ್ರೇಷ್ಠತೆ ಸಾಹಿತ್ಯದ ಕಸುಬಿನಲ್ಲಿ ಸಹಜವಾಗಿ ಮೂಡಿಬರುವುದು ಅಪೇಕ್ಷಣೀಯ. ಆದರೆ ಶ್ರೇಷ್ಠತೆ ಸಾಧಿಸಬೇಕು ಎನ್ನುವುದು ವ್ಯಸನವಾಗುವುದು ಅವಶ್ಯಕವೋ? ಎಂಬ ಅವರ ಗೊಂದಲಕಾರಿಯಾದ ಪ್ರಶ್ನೆ ಯಾರನ್ನು ಉದ್ದೇಶಿದ್ದು ಮತ್ತು ಏಕೆ ಎಂದು ಅರ್ಥವಾಗುವುದಿಲ್ಲ!

ಇದರಿಂದಾಗಿ, ಯಾರೂ ಲಂಕೇಶ್ ಮತ್ತು ಡಿ.ಆರ್. ನಾಗರಾಜರ ಉದ್ದೇಶಗಳ ಬಗ್ಗೆಯಾಗಲೀ ಅಡಿಗರ ಮಾತುಗಳ ಬಗ್ಗೆಯಾಗಲೀ ಚರ್ಚಿಸದೆ, ಸುಬ್ಬಣ್ಣನವರ ಭಾಷಣದ ಶೀರ್ಷಿಕೆಯಿಂದಲೇ ಮತ್ತೇರಿಸಿಕೊಂಡು ಈಗಲೂ ಜನಪರ ಸಾಹಿತ್ಯದ ಜೈಕಾರ ಕೂಗುತ್ತಲೇ ಇದ್ದಾರೆ. ಈ ಮತ್ತಿನಲ್ಲಿ, ಅಡಿಗರ ವಿರುದ್ಧ ಕಟುಮಾತುಗಳನ್ನಾಡಿ ದೂರವಾದ ಮೇಲೆ; ಅವರ ಮತ್ತು ಅವರ ಶಿಷ್ಯರ ವಿರುದ್ಧ ತಾವೇ ಟಂಕಿಸಿದ ಬ್ರೇಮಿನ್ ಗುಣವಾಚಕವನ್ನು ರೋಚಕ ಪರಿಣಾಮದೊಂದಿಗೆ ಚಲಾಯಿಸುತ್ತ್ತಾ ದೊಡ್ಡ ಪ್ರಚಾರಾಂದೋಲನವನ್ನೇ ನಡೆಸಿದ್ದ ಲಂಕೇಶ್‌ಗೆ, ಈ ಸಮ್ಮೇಳನಕ್ಕೆ ಅಡಿಗರನ್ನೇ ಕರೆಸುವ ಅನಿವಾರ್ಯತೆ ಏಕುಂಟಾಯಿತು ಎಂಬ ಬಗ್ಗೆಯೂ ಯಾರೂ ಯೋಚಿಸಿದಂತಿಲ್ಲ. ಹಾಗೇ ಅಡಿಗರು ಈ ಭಾಷಣ ಮಾಡುವ ಹೊತ್ತಿಗೆ ಎಷ್ಟು ದಾರಿ ಸವೆಸಿ, ಏನಾಗಿದ್ದರು ಎಂಬುದರ ಬಗ್ಗೆಯೂ ಯಾರೂ ಅಷ್ಟಾಗಿ ತಲೆ ಕಡೆಸಿಕೊಂಡಂತಿಲ್ಲ. ಈ ಸಂಬಂಧ ನನ್ನ ಒಂದು ಅನುಭವವನ್ನು ಇಲ್ಲಿ ದಾಖಲಿಸಿದರೆ ತಪ್ಪಾಗಲಾರದು.

ಅಡಿಗರ ಕಾವ್ಯವನ್ನು(ಅದು ನನಗೆ ಅಷ್ಟೇನೂ ಪರಿಚಯವಿಲ್ಲದ ವೈದಿಕ ಸಂಪ್ರದಾಯದ ಕಲ್ಪನೆಗಳು ಮತ್ತು ಪರಿಭಾಷೆಯ ನುಡಿಗಟ್ಟುಗಳಿಂದಾಗಿ ಸರಿಯಾಗಿ ಸಂವಹನವಾಗುತ್ತಿಲ್ಲ ಎಂಬ ಕಾರಣಕ್ಕೆ) ಅಷ್ಟಾಗಿ ಇಷ್ಟಪಡದಿದ್ದ ನಾನು ಅವರನ್ನು ಅವರ ಕೊನೆಯ ದಿನಗಳಲ್ಲೊಮ್ಮೆ(ಆಲನಹಳ್ಳಿ ಕೃಷ್ಣನ ಸಾವಿನ ಸಂದರ್ಭದಲ್ಲಿ ಆಕಾಶವಾಣಿಗಾಗಿ ನಾನು ರೂಪಿಸಿದ ಕಾರ್ಯಕ್ರಮವೊಂದಕ್ಕಾಗಿ ಅವರಿಂದ ಕೆಲವು ನೆನಪಿನ ಮಾತುಗಳನ್ನು ಧ್ವನಿಮುದ್ರಿಸಿಕೊಳ್ಳಲು) ಅವರ ಮನೆಯಲ್ಲೊಮ್ಮೆ ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಹೀಗೇ ಸಣ್ಣದಾಗಿ ಸಾಹಿತ್ಯ ಚರ್ಚೆ ಆರಂಭವಾಗಿ, ನಾನು ಮಾತುಗಳ ಮಧ್ಯೆ ನಿಮ್ಮ ಇತ್ತೀಚಿನ ಕವನಗಳು ನನಗೆ ತುಂಬಾ ಇಷ್ಟವಾಗುತ್ತವೆ ಎಂದೆ. ನಾನು ಅವರ ಚಿಂತಾಮಣಿಯಲ್ಲಿ ಕಂಡ ಮುಖದ ಕೆಲವು ಪದ್ಯಗಳನ್ನು ಉಲ್ಲೇಖಿಸಿದೆ. ತಕ್ಷಣ ಅವರ ಮುಖದಲ್ಲಿ ಕಿರುನಗೆ ಪುಟಿದೆದ್ದು, ಯಾಕೇಂದ್ರೆ ಅವುಗಳಲ್ಲಿ ನವ್ಯದ ವಾಸನೆ ಕಡಿಮೆಯಾಗಿದೆ ಕಣಯ್ಯ! ಎಂದು ನನ್ನನ್ನು ದಂಗು ಬಡಿಸಿದರು.(ಇದನ್ನು ನಾನು ಸಾಹಿತ್ಯ ಸಂವಾದಕ್ಕಾಗಿ ಮಾಡಿದ ಅವರ ಸುವರ್ಣ ಪುತ್ಥಳಿ ಕವನ ಸಂಕಲನದ ವಿಮರ್ಶೆಯಲ್ಲೂ ಉಲ್ಲೇಖಿಸಿದ್ದೇನೆ)೨ ನನ್ನ ಪ್ರಕಾರ ಆ ಹೊತ್ತಿಗೆ ಅಡಿಗರಿಗೇ ನವ್ಯದ ಮತ್ತು ಅದರ ಹೆಸರಿನಲ್ಲಿ ನಡೆದ ಚಳುವಳಿಯ ಮಿತಿಗಳು, ಅನಾಹುತಗಳು ಗೊತ್ತಾಗಿದ್ದವು.

ಅಡಿಗರೊಂದಿಗೆ ಅಂದು ಮಾತಾಡಿದ ನನಗೆ ಅನ್ನಿಸಿದ ಇನ್ನೊಂದು ಅಂಶವೆಂದರೆ, ಅವರು ಜನಸಂಘ ಮತ್ತು ಆನಂತರ ಭಾಜಪದ ಅಭ್ಯರ್ಥಿಯಾಗಿ ಚುನಾವಣೆಗಳಲ್ಲಿ ಭಾಗವಹಿಸಿದ್ದರ ಹಿಂದೆ ಹೆಚ್ಚು ಕಾಂಗ್ರೆಸ್ ವಿರೋಧಿ ಧೋರಣೆ ಇರಬಹುದೇ ಹೊರತು(ಅವರು ಆರಂಭದಲ್ಲಿ ಲೋಹಿಯಾ ಅಭಿಮಾನಿಯಾಗಿದ್ದರು ಎಂಬುದನ್ನು ಗಮನಿಸಬೇಕು.), ಹಿಂದುತ್ವವಲ್ಲ ಎಂಬುದು.೩ ಅವರ ಕಾಂಗ್ರೆಸ್ ವಿರೋಧಿ ಧೋರಣೆ ಕಾಲಕ್ರಮದಲ್ಲಿ ವಿಮರ್ಶಾತ್ಮಕವಾಗದೆ ಕುರುಡಾಗಿ, ಅವರನ್ನು ಹಿಂದುತ್ವದ ಕಡೆಗೆ ತಳ್ಳಿರಬಹುದು. ಈ ಮಧ್ಯೆ ಅವರು ಬರೆದ ಮತ್ತೆ ಮೊಳಗಲಿ ಪಾಂಚಜನ್ಯ, ನಾನು ಹಿಂದೂ, ನಾನು ಬ್ರಾಹ್ಮಣದಂತಹ ಅಗ್ಗದ ಪದ್ಯಗಳು, ಅವರು ಆಂತರ್ಯದಲ್ಲಿ ಎದುರಿಸುತ್ತಿದ್ದ ಈ ರಾಜಕೀಯ ಆಯ್ಕೆಯ ಬಿಕ್ಕಟ್ಟಿನಿಂದ(ನವ್ಯ ಕಾವ್ಯ ಕುರಿತ ನನ್ನ ಸೀಮಿತ ತಿಳುವಳಿಕೆ ಪ್ರಕಾರ, ಅವರ ಶಿಖರ ಕಾಲದ ಮುಖ್ಯ ರಚನೆಗಳು ಎಂದು ಹೇಳಲಾಗುವ ಸರಿ ಸುಮಾರು ಎಲ್ಲ ಕವನಗಳಲ್ಲೂ ಇದು ಕಾಣುವಂತಿದ್ದು, ಇದೇ ಅವುಗಳ ಶಿಲ್ಪ ಸೌಂದರ್ಯಕ್ಕೂ, ಅನುಮಾನಾಸ್ಪದ ತಾತ್ವಿಕತೆಗೂ ಕಾರಣವಾಗಿರುವಂತಿದೆ.) ಪಾರಾಗಲು ಆರಿಸಿಕೊಂಡ ಸುಲಭ ಮಾರ್ಗದ ಫಲಗಳಾಗಿ ಮಾತ್ರ ನನಗೆ ಕಾಣುತ್ತವೆ.೩ ಆ ಮಟ್ಟಿಗೆ ಅಡಿಗರು ರಾಜಕೀಯ ವ್ಯಕ್ತಿತ್ವವಾಗಿ ದುರ್ಬಲರೆಂದೇ ಹೇಳಬೇಕು. ವ್ಯಕ್ತಿತ್ವದ ಈ ಬಿರುಕು ನವ್ಯದ ಹೆಗ್ಗುರುತಾಗಿದ್ದು, ಇದು ಲಂಕೇಶರನ್ನೂ ಸೇರಿದಂತೆ ಈ ಚಳುವಳಿಯ ಸಂಪರ್ಕಕ್ಕೆ ಬಂದ ಯಾರನ್ನೂ ಕಾಡದೇ ಬಿಟ್ಟಿಲ್ಲ ಎಂಬುದನ್ನು ನಾವು ಗಮನಿಸಬೇಕು. ಲಂಕೇಶರ ಸಾಹಿತ್ಯದಲ್ಲಿ ಮಾತ್ರವಲ್ಲ, ಪತ್ರಿಕೋದ್ಯಮದ ಬದುಕಿನಲ್ಲೂ ಇಂತಹ ಹಲವಾರು ಬಿರುಕು-ದೌರ್ಬಲ್ಯಗಳನ್ನು(ಆದರೆ ಇವು ಮಂಜುನಾಥ್ ಲತಾ-ಐಜೂರರಿಗೆ ಮಾತ್ರ ತಮ್ಮ ಬರಹದ ಧಾಟಿಯನ್ನು ಸಮರ್ಥಿಸಿಕೊಳ್ಳಲು ಆಧಾರವಾಗಿರುವುದು, ಇವೊತ್ತಿನ ಸಾಹಿತ್ಯ-ಸಾಂಸ್ಕೃತಿಕ ಚರ್ಚೆಗಳು ಹಿಡಿದಿರುವ ಅಡ್ಡದಾರಿಯನ್ನು ಸೂಚಿಸುತ್ತದಷ್ಟೆ!) ನಾವು ಗಮನಿಸಬಹುದು.೪ ಇದು ಲಂಕೇಶರಿಗೇನೂ ಗೊತ್ತಿರಲಿಲ್ಲವೆಂದಲ್ಲ. ಹಾಗೇ ಅಡಿಗರ ದೌರ್ಬಲ್ಯಗಳೂ, ಶಕ್ತಿಗಳೂ.

ಇದನ್ನೆಲ್ಲ ಇಲ್ಲಿ ಏಕೆ ಹೇಳಬೇಕಾಯಿತೆಂದರೆ, ಶ್ರೇಷ್ಠ ಸಾಹಿತ್ಯ ಎಂಬುದು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅಂದು ಅಗತ್ಯವಾಗಿದ್ದ ಕಲ್ಪನೆಯಾಗಿತ್ತು ಮತ್ತು ಅದು ಕನ್ನಡ ಸಾಹಿತ್ಯದ ಏಳುಬೀಳುಗಳ ಮಧ್ಯೆ ನಮ್ಮ ಕಾಲದ ಇಬ್ಬರು ಗಂಭೀರ ಸಾಹಿತ್ಯ ಕುಶಲ ಕರ್ಮಿಗಳ ಸಾಕ್ಷ್ಯದಲ್ಲಿ ಕಮ್ಮಟಗೊಂಡು ಮೂಡಿದುದಾಗಿತ್ತು ಎಂಬುದನ್ನು ಸೂಚಿಸಲು. ಆದರೆ ಇಂದು ಅದನ್ನು ಹಾಗೆಯೇ-ಸಂದರ್ಭದಿಂದ ಕಿತ್ತು-ಎತ್ತಿಕೊಂಡು ಚರ್ಚಿಸ ಹೊರಟರೆ ದಾರಿ ತಪ್ಪುತ್ತೇವೆ. ದೇಶಕಾಲದ ಬಗ್ಗೆ ನಡೆದಿರುವ ಈ ಚರ್ಚೆಯ ಎರಡೂ ಬದಿಗಳ ಹಿಂದಿರುವ ಮುಖ್ಯ ತೊಂದರೆ ಇದೇ ಎನ್ನಿಸುತ್ತದೆ. ಏಕೆಂದರೆ, ಎರಡೂ ಕಡೆಯವರು ಅದನ್ನು ನೇರವಾಗಿ, ಸ್ಪಷ್ಟವಾಗಿ ಹೇಳಿಕೊಳ್ಳದಿದ್ದರೂ, ದೇಶಕಾಲವು ಶ್ರೇಷ್ಠ ಸಾಹಿತ್ಯದ ರಾಜಕಾರಣ ಮಾಡುತ್ತಾ ತನ್ನ ಪ್ರತಿಷ್ಠೆಯನ್ನು ಮೆರೆದಿದೆ ಎಂಬ ಆಕ್ರೋಶ ಮಂಜುನಾಥ್-ಐಜೂರು ಮತ್ತು ಅವರ ಬೆಂಬಲಿಗ ಗೆಳೆಯರ ಬರಹದ ಹಿಂದೆ ಕಂಡರೆ; ಕೆ. ಫಣಿರಾಜ್-ಜಿ. ರಾಜಶೇಖರ್‌ರ ಪ್ರತಿಕ್ರಿಯೆ ಅದೇ ಶ್ರೇಷ್ಠ ಸಾಹಿತ್ಯದ ಕಲ್ಪನೆಯನ್ನು, ಅದರ ತರ್ಕ ಮತ್ತು ಪರಿಭಾಷೆಯನ್ನು ನಂಬಿ, ಸಾಹಿತ್ಯ ಕುರಿತ ಎಲ್ಲ ಮಾತುಗಳೂ ವಿಮರ್ಶೆಯ ಭಾಷೆಯಲ್ಲಿರಬೇಕು ಎಂದು ನಿರೀಕ್ಷಿಸುತ್ತದೆ. ರಾಜಶೇಖರರ ಖಡಕ್ ವಾದವಂತೂ, ನವ್ಯದ ಗುಡಿಯ ಜೀರ್ಣೋದ್ಧಾರಕ್ಕಾಗಿ ಚಂದಾ ಎತ್ತಲು ಎಚ್ಚರಿಕೆ!ಯ ಕರಪತ್ರ ಬರೆದ ಹಾಗೆ ಪದೇ ಪದೇ ಅಡಿಗರ ಕಾವ್ಯ ಮತ್ತು ಮಾತುಗಳನ್ನು ಉಲ್ಲೇಖಿಸುತ್ತಾ ತನ್ನ ವಾದವನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿಯೇ ಈ ಚರ್ಚೆಯಲ್ಲಿ ಎರಡೂ ಕಡೆ ಪದೇ ಪದೇ ಅಡಿಗ-ಲಂಕೇಶ-ಸುಬ್ಬಣ್ಣರ ಕಾಲದ ಶ್ರೇಷ್ಠ ಸಾಹಿತ್ಯ ಕಲ್ಪನೆ ಕುರಿತ ಮೌಲಿಕ ಚರ್ಚೆಗಳ ಉಲ್ಲೇಖಗಳು ಬರುತ್ತದೆ.

ಇದು ನನ್ನ ಪ್ರಕಾರ ಅಸಂಗತ ಪ್ರಲಾಪ. ಏಕೆಂದರೆ ಇಂದು ಸಂದರ್ಭ ಬದಲಾಗಿದೆ. ಶ್ರೇಷ್ಠ ಸಾಹಿತ್ಯದ ಚರ್ಚೆಯನ್ನು ಮುನ್ನೆಲೆಗೆ ತಂದ ಬಂಡಾಯ ಮೊಂಡಾಗಿ, ವೈವಿಧ್ಯಮಯ ಹಿನ್ನೆಲೆಗಳುಳ್ಳ ಹೊಸ ತಲೆಮಾರಿನ ಅನೇಕ ಲೇಖಕ-ಲೇಖಕಿಯರು ಯಾರ ಮತ್ತು ಯಾವ ಮರ್ಜಿಗೂ ಸಿಗದೆ ವೈವಿಧ್ಯಮಯ ಬಣ್ಣ ಬೆಡಗುಗಳೊಂದಿಗೆ ತಮ್ಮಷ್ಟಕ್ಕೆ ತಾವು ಬರೆಯುತ್ತಾ, ವಿಮರ್ಶೆಯ ಹೊಸ ಪರಿಭಾಷೆಯನ್ನೇ ಒತ್ತಾಯಿಸುವಷ್ಟು ಸಾಹಿತ್ಯ ಸಂದರ್ಭ ಚಲನಶೀಲವಾಗಿದೆ.೫ ನನಗಂತೂ ಇದು ತೇಜಸ್ವಿ ತಮ್ಮ ಅಬಚೂರಿನ ಪೋಸ್ಟಾಫೀಸು ಕಥಾ ಸಂಗ್ರಹಕ್ಕೆ ಹೊಸ ದಿಗಂತೆಡೆಗೆ ಶೀರ್ಷಿಕೆಯಲ್ಲಿ ಬರೆದಿದ್ದ ಮುನ್ನುಡಿಯ ಮಾತುಗಳ ವಿಸ್ತರಣೆಯಾಗಿ ಮಾಯಾಲೋಕ-೧ರ ಲೇಖಕರ ಮಾತುಗಳಲ್ಲ್ಲಿ ಸೂಚಿಸಿದ ಹೊಸ ಕಾಲದ ಹೊಸ ನುಡಿಗಟ್ಟುಗಳ, ಉಕ್ತಿಭಂಗಿಗಳ ಹಾಗೂ ಅಭಿವ್ಯಕ್ತಿ ವಿಧಾನಗಳ ಅನ್ವೇಷಣೆಯ ತಹತಹದಂತೆಯೇ ಕಾಣುತ್ತದೆ. ಏಕೆಂದರೆ ನನಗೆ ತಿಳಿದಂತೆ ಕಳೆದ ಇಪ್ಪತ್ತೈದು-ಮುವ್ವತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯವನ್ನು ಜಾತಿ-ಮತ-ವರ್ಗ ಹಾಗೂ ಸಾಹಿತ್ಯ-ಸಾಹಿತ್ಯೇತರ ಹಿನ್ನೆಲೆಗಳ ಬೇಧವಿಲ್ಲದೆ;ಹಾಗಾಗಿ ಸಾಹಿತ್ಯ ಮೀಮಾಂಸೆಯ ಬೌದ್ಧಿಕ ಕಾಟವಿಲ್ಲದೆ ಯಾರಾದರೂ ಏಕಾಕಿಯಾಗಿ ಪ್ರಭಾವಿಸಿ ನಿರ್ದೇಶಿಸಿದ್ದರೆ, ಅವರು ತೇಜಸ್ವಿಯವರೇ. ತಮ್ಮ ವಿಫುಲವಾದ ಅ-ಶ್ರೇಷ್ಠ ಮತ್ತು ಅ-ಮೌಲಿಕ ಸಾಹಿತ್ಯದ ಮೂಲಕ. ಹಾಗಾಗಿಯೇ ಕೆಲ ಅಡಿಗ ಪುನರುತ್ಥಾನವಾದಿ ಸಾಹಿತ್ಯ ನಿಷ್ಠುರ ವಿಮರ್ಶಕರು ಅವರನ್ನು ಅನಂತಮೂರ್ತಿ-ಲಂಕೇಶರಿಗೆ ಹೋಲಿಸಿ, ಅವರು (ಶ್ರೇಷ್ಠ)ಸಾಹಿತಿಯೇ ಅಲ್ಲ ಎಂದು ತಮಗೆ (ವಿಶ್ವಾಸವಿದ್ದವರ ಬಳಿ ಕಿವಿಯಲ್ಲಿ)ಹೇಳುವುದುಂಟು. ಇರಲಿ, ಈ ವಿಷಯಕ್ಕೆ ಮತ್ತೆ ಬರೋಣ.

(ಇನ್ನಷ್ಟು ನಾಳೆಗೆ..)

‍ಲೇಖಕರು G

2 July, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading