ಯಾತ್ರೆ ಆರಂಭಕ್ಕೆಮುಂಚೆ
ಏನೆಂದು ಹೇಳುವುದು? ಬಹಳ ತ್ರಾಸದಾಯಕ ಅದು! ಬೇರೆ ಯಾರ ಬಗ್ಗೆಯಾಗಿದ್ದರು ಏನಾದರೂ ಹರಸಾಹಸ ಮಾಡಿ ‘ಈ ವ್ಯಕ್ತಿ ಹೀಗಿಗೆ, ಇಂತಿಂಥದನ್ನು ಮಾಡಿದ್ದಾರೆ, ಹೀಗಿಗೆ ಬದುಕಿದರು ಕಡೆಗೆ ಹೀಗಿಗೆ ಸತ್ತರು’ ಎಂದು ಸಾಧ್ಯವಾದಷ್ಟು ಮಟ್ಟಿಗೆ ಸ್ಪಷ್ಟವಾಗಿ ಹೇಳಬಹುದಿತ್ತೇನೋ. ಅದರೆ ಆ ವ್ಯಕ್ತಿತ್ವ ಇದೆಯಲ್ಲಾ ಅದನ್ನ ಸ್ಪಷ್ಟವಾಗಿ ‘ಹೀಗೆ, ಇಷ್ಟೇ’ ಎಂದು ಸಂಪೂರ್ಣವಾಗಿ ಗ್ರಹಿಸಿಬಿಡುತ್ತೇನೆ ಎಂದು ಹೊರಟಿದ್ದೇ ಅದರೆ ಅದಕ್ಕಿಂತಲೂ ದೊಡ್ಡ ಮುಠ್ಠಾಳತನ ಮತ್ತೊಂದು ಇರುವುದಕ್ಕೆ ಸಾದ್ಯವೇ ಇಲ್ಲ. ಏಕೆಂದರೆ ಆ ವ್ಯಕ್ತಿತ್ವವೇ ಅಂಥಾದ್ದು. ಎಷ್ಟೇ ತಿಣುಕಿದರೂ ಗ್ರಹಿಕೆಗೆ ಸಂಪೂರ್ಣ ನಿಲುಕದಂತಹದ್ದು. ಅದು ನನ್ನಂತಹ, ನಿಮ್ಮಂತಹ ಅಸಂಖ್ಯಾತ ಮನಸ್ಸುಗಳನ್ನು ಅರಳಿಸಿ ಸಂವೇದನಾಶೀಲರನ್ನಾಗಿರೂಪಿಸಿದ, ಮೌಢ್ಯಗಳನ್ನ ತೊಡೆದು ವೈಜ್ಞಾನಿಕ ಪಥದಲ್ಲಿ ಹೊಸದಿಕ್ಕಿನೆಡೆ, ಹೊಸ ದಿಗಂತದಕಡೆ ಅಲೋಚಿಸುವಂತೆ ಪ್ರೇರೇಪಿಸಿದ ವಿಶಿಷ್ಟ ವ್ಯಕ್ತಿತ್ವ. ಆ ವ್ಯಕ್ತಿತ್ವದ ಹೆಸರು ಪೂರ್ಣಚಂದ್ರ ತೇಜಸ್ವಿ. ಹೌದು ಒಂದಿಡೀ ಸಮುದಾಯಕ್ಕೆ, ತಲೆಮಾರಿಗೆ ಅದರ್ಶದಂತೆ ಬದುಕಿದವರು ತೇಜಸ್ವಿ.
ಮತ್ತೆ, ಮತ್ತೆ ಅನ್ವೇಷಣೆಗೆ, ಹುಡುಕಾಟಕ್ಕೆ ಹಚ್ಚುವ ಮತ್ತು ಆ ಗಮ್ಯದೆಡೆಗಿನ ಅನ್ವೇಷಣೆಯ ಹಾದಿಯ ಏಳು ಬೀಳುಗಳನ್ನು ಮತ್ತು ಅ ಪ್ರಯಾಣದ ಆನಂದವನ್ನು ಅಸ್ವಾಧಿಸುವ ಬಗೆಯನ್ನು ಹಾರುವ ಓತಿಕ್ಯಾತನ ರೂಪಕದ ಮೂಲಕ ನಮ್ಮೊಂದಿಗೆ ಹಂಚಿಕೊಂಡವರು ತೇಜಸ್ವಿ. ‘ಇನ್ನೇನು ಕೈಗೆ ಸಿಕ್ಕೇಬಿಟ್ಟಿತು, ಸೃಷ್ಟಿಯ ರಹಸ್ಯ ಗೊತ್ತಾಯಿತು’ ಎನ್ನುವಷ್ಟರಲ್ಲಿ ಹಾರಿ ಅನಂತತೆಯಲ್ಲಿ ಲೀನವಾಗಿ’ನೀನು ಇನಷ್ಟು, ಮತ್ತಷ್ಟು ಅನ್ವೇಷಣೆ ಮಾಡು’ ಎನ್ನುವ ರೂಪಕವಾದ ಕರ್ವಾಲೊ ಕಾದಂಬರಿಯ ಹಾರುವ ಓತಿಯಷ್ಟು ನಿಗೂಢ ತೇಜಸ್ವಿಯ ಬದುಕು(ಕರ್ವಾಲೋ ಕಾದಂಬರಿಯನ್ನು ನಾನು ಅರ್ಥಮಾಡಿಕೊಂಡಿದ್ದು ಹಾಗೆ).ತೇಜಸ್ವಿ ನಮ್ಮೆಲ್ಲರ ಪಾಲಿಗೆ ಯಾವತ್ತಿಗೂ ಒಂದುವಿಸ್ಮಯವೇ.ಮೊಗೆದಷ್ಟು ಅಕ್ಷಯ, ಅರ್ಥಮಾಡಿಕೊಂಡಷ್ಟು ನಿಗೂಢ. ಅಂತಹ ಒಬ್ಬ enigmatic ಮನುಷ್ಯನನ್ನು ಅತನ ಬದುಕನ್ನು ಸಂಪೂರ್ಣವಾಗಿ ತಿಳಿದುಬಿಡುತ್ತೇನೆ ಅರ್ಥಮಾಡಿಕೊಂಡುಬಿಡುತ್ತೇನೆ ಎನ್ನುವುದೆಲ್ಲಾ ತೀರ ಹಾಸ್ಯಸ್ಪದ ಎಂಬುದು ನನ್ನ ಭಾವನೆ. ‘ಎಲ್ಲವನ್ನು ಸಂಪೂರ್ಣವಾಗಿ ತಿಳಿದುಬಿಡುತ್ತೇನೆ ಎಂದು ಹೊರಡುವುದು ಮೂರ್ಖತನವೇ ಸರಿ’ ಎಂದು ತೇಜಸ್ವಿಯವರೇ ಹೇಳಿಲ್ಲವೇ?
ಇಷ್ಟೆಲ್ಲಾ ಗೊತ್ತಿದ್ದು ತೇಜಸ್ವಿ ಎಂಬ ನಿಗೂಢ ಮನುಷ್ಯನ ಬದುಕನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಕ್ಕೆ ನಾನು ಕೈ ಹಾಕಿದ್ದೆ. ಅದು ‘ಮತ್ತೆ, ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದ ಮೂಲಕ. ತೇಜಸ್ವಿಯ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಿ ಅದನ್ನು ನಿಮ್ಮೊಂದಿಗೆ ಹಂಚಿಕೊಂಡು ಸಂಭ್ರಮಿಸುವ ಇರಾದೆಗಿಂತಲೂ ಮುಖ್ಯವಾಗಿ, ನನ್ನನ್ನು ತೀವ್ರವಾಗಿ ಪ್ರಭಾವಿಸಿದವರಲ್ಲಿ ಒಬ್ಬರಾದ ಪೂರ್ಣಚಂದ್ರ ತೇಜಸ್ವಿಯವರ ಕಾಣದ ಮುಖಗಳನ್ನು ನನ್ನ ಸಾಮಥ್ರ್ಯ, ಯೋಗ್ಯತೆಗೆ ದಕ್ಕುವಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿ ರೂಪುಗೊಂಡಿದ್ದೆ’ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರ.ಇದಕ್ಕಾಗಿ 2012ರ ಇಡೀ ವರ್ಷ ಮೋಡಿಗೊಳಗಾದವರಂತೆ ನಾನು ನಮ್ಮ ತಂಡ ತೇಜಸ್ವಿಯ ಹೆಜ್ಜೆ ಗುರುತುಗಳು ಮೂಡಿದ ಜಾಗಗಳು, ಅವರ ಬದುಕಿನ ಭಾಗವೇ ಅಗಿದ್ದ ಸುತ್ತಲಿನ ಪರಿಸರ, ಪ್ರಕೃತಿಯನ್ನು ದೃಶ್ಯಮಾಧ್ಯಮದಲ್ಲಿ ಸೆರೆಹಿಡಿಯುವ ಹಾಗೂ ಅವರ ಬದುಕನ್ನು ಹತ್ತಿರದಿಂದ ಬಲ್ಲಒಡನಾಡಿಗಳನ್ನು ಮಾತನಾಡಿಸುವ ಮೂಲಕ ಮೂಡಿಗೆರೆಯ ಮೋಡಿಗಾರನ ಬದುಕನ್ನು ಅರ್ಥಮಾಡಿಕೊಳ್ಳಲು ನಾನು ನಮ್ಮ ತಂಡ ಪ್ರಯತ್ನಿಸಿದೆವು.

ಈ ಪ್ರಯತ್ನದಲ್ಲಿ ನಮ್ಮ ಗ್ರಹಿಕೆಗೆ ನಿಲುಕಿದ ತೇಜಸ್ವಿ’ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದ ರೂಪದಲ್ಲಿ ಅವರ ಓದುಗರ, ಅಭಿಮಾನಿಗಳ ಮನೆ, ಮನ ಸೇರಿದ್ದಾರೆ.ಎರಡೂವರೆ ಗಂಟೆಗಳ ಈ ಮೆಗಾ ಸಾಕ್ಷ್ಯಚಿತ್ರವನ್ನು ಕನ್ನಡದ ಬಹುತೇಕ ಮನಸ್ಸುಗಳು ಈಗಾಗಲೇ ದೃಶ್ಯರೂಪದಲ್ಲಿ ನೋಡಿ ಮೆಚ್ಚಿಕಡೆಯಲ್ಲಿ ‘ಅಯ್ಯೊ ಮುಗಿದು ಹೋಯಿತ? ಎಂದು ಪ್ರತಿಕ್ರಿಯಿಸಿ ನಮ್ಮನ್ನು ಅಶ್ಚರ್ಯಚಕಿತರನ್ನಾಗಿ ಮಾಡಿವೆ.ಅದರ ಎಲ್ಲಾ ಯಶಸ್ಸು ತೇಜಸ್ವಿ ಎಂಬ ಹೆಸರಿಗೆ ಸಲ್ಲಬೇಕು. ಅದರೆ ದೃಶ್ಯಮಾದ್ಯಮಕ್ಕೆ ಇರುವ ಇತಿಮಿತಿಗಳಿಂದಾಗಿ ಈಸಾಕ್ಷ್ಯಚಿತ್ರ.ದಲ್ಲಿ ಹೇಳಲಾಗದೆ ಉಳಿದ ವಿಷಯಗಳು ಹೇಳಿರುವುದಕ್ಕಿಂತಲೂ ಹೆಚ್ಚು. ಹಾಗಾಗಿ ಈ ಅಂಕಣ. ಈ ಮಾಲಿಕೆಯಲ್ಲಿ ‘ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರ ರೂಪಿಸುವಲ್ಲಿನ ಅನುಭವಗಳನ್ನು, ತೇಜಸ್ವಿಯವರ ಒಡನಾಡಿಗಳೊಂದಿಗಿನ ನಮ್ಮ ಮಾತುಕತೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಇಚ್ಚೆ ನನ್ನದು. ಅಷ್ಟೇ ಅಭಿಮಾನದಿಂದ ಸ್ವೀಕರಿಸುತ್ತೀರಿ ಎಂಬ ನಂಬಿಕೆಯೂ ನನ್ನದು.
‘ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರ ರೂಪಿಸುವ ಹಾದಿಯಲ್ಲಿ ಸತತ ಒಂದು ವರ್ಷ ನನ್ನೊಂದಿಗೆ ಹೆಣಗಿದ ನನ್ನ ತಂಡಕ್ಕೆ , ತೇಜಸ್ವಿಯ ಹೆಸರು ಕೇಳಿದ ಕೂಡಲೇ ಅಗತ್ಯವಿದ್ದ ಆರ್ಥಿಕ ನೆರವು ನೀಡಿ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಹೆಗಲು ಕೊಟ್ಟ ಶ್ರೀ. ಜರಗನಹಳ್ಳಿ ಕಾಂತರಾಜು, ಶ್ರೀ. ಗಂಗಾಧರ ಕರೀಕೆರೆ ಹಾಗೂ ಅವರ ಎಲ್ಲಾ ಗೆಳೆಯರಿಗೆ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ನನ್ನ ಎಲ್ಲಾ ಗೆಳೆಯ, ಗೆಳತಿಯರಿಗೆ ಹಾಗೂ ಸಾಕ್ಷ್ಯಚಿತ್ರದ ವಿವಿಧ ಹಂತಗಳಲ್ಲಿ ಮಾರ್ಗದರ್ಶನ ಮಾಡಿದ ನನ್ನೆಲ್ಲಾ ಗುರುಗಳಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ.’ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದ ಅನುಭವಗಳನ್ನು ಓದುಗರಾದ ನಿಮ್ಮೊಂದಿಗೆ ಹಂಚಿಕೊಳ್ಳಲು ಕಾರಣಕರ್ತರಾದ, ಪ್ರೀತಿಪೂರ್ವಕವಾಗಿ ಒತ್ತಾಯಿಸಿ ‘ಅವಧಿ’ಯಲ್ಲಿ ಅವಕಾಶ ಮಾಡಿಕೊಟ್ಟ ಹಿರಿಯರು ಹಾಗೂ ಹಿತೈಷಿಗಳಾದ ಶ್ರೀ. ಜಿ. ಎನ್ ಮೋಹನ್‌ರವರಿಗೆ ತುಂಬು ಹೃದಯದ ಧನ್ಯವಾದಗಳು.
ಇನ್ನು ನಿಮ್ಮಲ್ಲಿ ಹಲವರು ಈಗಾಗಲೇ ‘ಮತ್ತೆ ಮತ್ತೆ ತೇಜಸ್ವಿ ಸಾಕ್ಷ್ಯಚಿತ್ರವನ್ನು ನೋಡಿ ಮನಸ್ಸು ತುಂಬಿಕೊಂಡಿದ್ದೀರಿ. ನಿಮಗೆ ಅನಂತಾನಂತ ಧನ್ಯವಾದಗಳು. ಈ ಮಾಲಿಕೆಯನ್ನೂ ಅಷ್ಟೇ ಪ್ರೀತಿಯಿಂದ ಓದಿಕೊಳ್ಳಿ.ನಾಲ್ಕು ಸಾಲು ಅಭಿಪ್ರಾಯ ಬರೆದು ತಿಳಿಸಿದರೆನಿಮಗೆ ನಾನು ಋಣಿ.




ನಮಗೆ ತೇಜಸ್ವಿಯವರ ಅವರ ಬಗ್ಗೆ ತಿಳಿಯದಿರುವುದ ತಿಳಿದುಕೊಳ್ಳಲು ಒಂದು ಒಳ್ಳೆಯ ಅವಕಾಶ.
ತಿನ್ನುವ ಊಟ ಹೊಟ್ಟೆ ತುಂಬಿದ ಮೇಲೆ, ಮಾಡುವ ಕೆಲಸ ಮುಗಿದ ಮೇಲೆ, ಆಡುವ ಆಟ ಮುಗಿದ ಮೇಲೆ,…ಹೀಗೆ ಎಲ್ಲರದರಲ್ಲೂ ಕೊನೆಗೊಂದು ತೃಪ್ತಿಯಿರುತ್ತದೆ. ಆದ್ರೆ ನೀವು ಒಂದು ರಾಶಿ ಉರಿದ ಕಡ್ಲೆಕಾಯಿಯನ್ನು ತಿಂದು ಮುಗಿಸಿದ ಮೇಲೆ ತೃಪ್ತಿ ಸಮಾಧಾನವಾದ ಮೇಲೂ ಕಡ್ಲೆಕಾಯಿ ಬೀಜ ಇರಬಹುದು ಎಂದು ಸಿಪ್ಪೆಗಳ ನಡುವೆ ಹುಡುಕಾಡುವ ರೀತಿಯಲ್ಲಿಯೇ ಪೂರ್ಣಚಂದ್ರ ತೇಜಸ್ವಿಯವರ ಬದುಕು ಬರಹ, ಫಿಶಿಂಗ್,ಫೋಟೊಗ್ರಫಿ ಇತ್ಯಾದಿಗಳ ಮೇಲೆ ಇನ್ನಷ್ಟು ಹುಡುಕಾಟ, ಕುತೂಹಲ ನಮಗೆಲ್ಲಾ ಇದ್ದೇ ಇದೆ. “ಮತ್ತೆ ಮತ್ತೆ ತೇಜಸ್ವಿ ನಿಜಕ್ಕೂ” ನಿಜಕ್ಕೂ ಒಂದು ಅಪರೂಪದ ಪ್ರಯತ್ನ. ಚಿತ್ರದುದ್ದಕ್ಕೂ ನಿಮ್ಮ ಮತ್ತು ನಿಮ್ಮ ತಂಡದ ಒಂದು ವರ್ಷದ ಶ್ರಮ ಎದ್ದು ಕಾಣುತ್ತದೆ. ನಮಗೆಲ್ಲಾ ಮೊಗೆದಷ್ಟೂ ಮತ್ತಷ್ಟು ಇನ್ನಷ್ಟು ವಿಶ್ಮಯವಾಗಿರುವ ತೇಜಸ್ವಿಯವರನ್ನು ಎರಡೂವರೆಗಂಟೆಯ ಸಾಕ್ಷ್ಯಚಿತ್ರದಲ್ಲಿ ಕಟ್ಟಿಹಾಕುವುದು ಅಸಾಧ್ಯವೆನಿಸಿರುವುದು ನಿತ್ಯಸತ್ಯ. ಆದರೂ ಪ್ರಯತ್ನ ಖಂಡಿತ ಅಭಿನಂದನಾರ್ಹ.
Waiting for next week…
ಏಪ್ರಿಲ್ 16 2009 ರಂದು ‘ಮತ್ತೆ ಮತ್ತೆ ತೇಜಸ್ವಿ’ ಎಂಬ ಲೇಖನವೊಂದನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ಈಗ ಅದೇ ಹೆಸರಿನಲ್ಲಿ ಒಂದು ಸಾಕ್ಷ್ಯಚಿತ್ರವೇ ಬಂದಿರುವುದು ನನಗೆ ಖುಷಿಯಾಗಿದೆ. ಮತ್ತೆ ಮತ್ತೆ ನಮ್ಮನ್ನು ಕಾಡುತ್ತಿರುವ, ಎಚ್ಚರಿಸುತ್ತಿರುವ ತೇಜಸ್ವಿಯವರ ಬಗ್ಗೆ ಎಷ್ಟು ಓದಿದರೂ, ತಿಳಿದರೂ ಅದು ಕಡಿಮೆಯೆ. ಅಂತಹ ತೇಜಸ್ವಿಯವರನ್ನು ನೀವು ಹಿಡಿದಿಟ್ಟಿರುವ ರೀತಿ ತುಂಬಾ ಚೆನ್ನಾಗಿದೆ. ಶನಿವಾರ ತಂದ ಡಿ.ವಿ.ಡಿ.ಯನ್ನು ಅಂದೇ ನೋಡಿದೆ. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.
Innu Nodilla. Noduva tavakavide. Takshana Kondu Noduttene. Congrats Paramesh.
ಕುತೂಹಲ ಹೆಚ್ಚಾಗಿದೆ!! ಶುರು ಹಚ್ಚಿಕೊಳ್ಳಿ!! 🙂
ನಿಮ್ಮೆಲ್ಲ ಪ್ರತಿಕ್ರಿಯೆಗಳಿಗೆ ಧ್ಯನ್ಯವಾದಗಳು ಗೆಳೆಯರೆ…ತೇಜಸ್ವಿಯ ಅಂತಃಸತ್ವವನ್ನು ಹುಡುಕುತ್ತಾ ಹೊರಟ ನಮ್ಮ ಈ ಯಾತ್ರೆ ತೇಜಸ್ವಿಯ ಬದುಕಿನಷ್ಟೇ ರೋಚಕವಾಗಿದೆ. ವಾರಕೊಮ್ಮೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಪುಣ್ಯ ನನ್ನದಾಗಿಸಿದ ’ಅವಧಿ’ಗೆ ಸಾವಿರ ಧನ್ಯವಾದಗಳು. ನಿಮ್ಮ ಗೆಳೆಯರಿಗು ಓದಿಸುವುದನ್ನು ಮರೆಯಬೇಡಿ.
hai param…curious to know those moments whch u spent to shoot ;matthe matthe thejasvi…