ಮತ್ತೆ ತೆರೆಯಿತು ಶಾಲೆ ..

ರಾಘವೇಂದ್ರ ರಾವ್ .ಕೆ 

‘ಬೇಗ ಎದ್ದೇಳು, ಸ್ನಾನ ಮಾಡಿ ರೆಡಿ ಆಗು. ಸ್ಕೂಲ್ ಬಸ್ ಬರುತ್ತೆ’ ಎಂಬ ಈ ಮಕ್ಕಳೆಂಬ ದೇವರನ್ನು ಎಬ್ಬಿಸುವ ಸುಪ್ರಭಾತದ ನುಡಿಗಳಿವು ಇನ್ನು ಎಲ್ಲ ಮನೆಗಳಲ್ಲಿಯೂ ಆರಂಭ. ಪರೀಕ್ಷೆಗಳನ್ನು ಮುಗಿಸಿ, ರಜೆಯ ಸವಿಯಲ್ಲಿದ್ದ ಮಕ್ಕಳಿಗೆ ಶಾಲೆಯ ಮರು ಆರಂಭದ ಸಮಯ. ಗೆಳೆಯರೊಟ್ಟುಗೂಡಿ ಆಟವಾಡುತ್ತಲೋ, ಊರು-ಕೇರಿ, ಬಯಲು-ಬೆಟ್ಟಗಳನ್ನು ತಿರುಗಿಯೋ,ಇಲ್ಲಾ ಅಜ್ಜಿಯ ಗೂಡ ಸೇರಿ, ಅಜ್ಜಮ್ಮ ನೀಡುವ ತಿಂಡಿ-ತಿನಿಸುಗಳ ತಿನ್ನುತ್ತಾ, ಸಮಯವೂ ಮೇಣದಂತೆ ಕರಗಿ, ಮರಳಿ ಶಾಲೆಗೆ ಸಿದ್ಧಗೊಳ್ಳಬೇಕಾದ ಮನಸ್ಥಿತಿ ಮುದ್ದು ಮಕ್ಕಳಿಗೆ.

ಇನ್ನೂ ಪೋಷಕರಾದಿಯಾಗಿ ಮನೆಮಂದಿಯೆಲ್ಲರೂ, ಮಕ್ಕಳ ಮೊದಲ ದಿನದ ಶಾಲೆಗೆ ಹೋಗುವ ಹಬ್ಬಕ್ಕೆ ಸಿದ್ಧತೆ ಜೋರಾಗಿಯೇ ನಡೆಸಿರುತ್ತಾರೆ. ಮಕ್ಕಳ ಶಾಲಾ ದಾಖಾಲಾತಿಯಿಂದ, ಪೆನ್ನು, ಪೆನ್ಸಿಲ್ಲು, ಪುಸ್ತಕಗಳ ಕೊಳ್ಳುವಿಕೆ, ಮಕ್ಕಳ ಸಮವಸ್ತ್ರಗಳ ಅಣಿಗಳೆಲ್ಲವೂ ಸಾಗಿರುತ್ತವೆ. ಮೇಲೆಲ್ಲೋ ಎಸೆದ ಬ್ಯಾಗುಗಳ ಹುಡುಕಿ, ಹಳೆಯ ಹೊತ್ತಿಗೆಗಳ ತೆಗೆದು, ಹೊಸ ಪುಸ್ತಕಗಳ ತುಂಬುವ ಕೆಲಸ ಇತ್ಯಾದಿ.

ರಜೆಯ ಗುಂಗಿನಲ್ಲಿದ್ದ ಮಕ್ಕಳಿಗೆ ಇನ್ನೂ ಶಾಲೆಗೂ, ಮನೆಗೂ ಓಟದ ಕಸರತ್ತು.

                                 ಹೊಸತು ಬಟ್ಟೆ, ಹೊಸತು ಪಠ್ಯ

ಹೊಸತು ಈ ತಿಳುವು, ಹೊಸತು ಅರಿವು

ಸರಳದಿಂದ ಸಂಕೀರ್ಣತೆಯೆಡೆ

ವಿಚಾರಗಳ ಅನಾವರಣ

ಶುರು ಇನ್ನಾ ಶಾಲೆಯೆಡೆಗೆ

ನಮ್ಮ-ನಿಮ್ಮ ಪಯಣ

ಎಂಬಂತೆ ಮೇಲ್ದರ್ಜೆಯ ತರಗತಿಗೆ ಭರ್ತಿಪಡೆದು, ಪಾಠ-ಪದಗಳ ಮನನಾಭ್ಯಾಸಗಳು ಹಲವರಿಗಾದರೆ, ಅದೇ ತರಗತಿಯ ಪಠ್ಯವನ್ನು ಹೊಸನೋಟದಿಂ ಕಾಣುವ ಭಾಗ್ಯ ಕೆಲವು ಮಕ್ಕಳಿಗೆ. ಇನ್ನೂ ಕೆಲವು ಮಕ್ಕಳಿಗೆ ಆಡುವ ವಯೋಮಿತಿಯಿಂದ ಪಾಠದೆಡೆಗೆ ಅಡಿಯಿಡುವ ಅಕ್ಷರಾರಂಭದ ಪರ್ವಕಾಲ. ಇವರ ಕಥೆ ಒಂದೆಡೆಯಾದರೆ, ಶಿಕ್ಷಕರು ಸಹ ತರಗತಿಗಳಿಗೆ ಒಂದು ತೆರೆನಾದ ಸಿದ್ದತೆಯಲ್ಲಿ ಮುಳುಗುತ್ತಾರೆ. ಪಠ್ಯದ ಬಗೆಗೆ, ಪಾಠದ ಬಗೆಗೆ ಅವರುಗಳ ಸಿದ್ದತೆಗಳು ಇನ್ನೊಂದೆಡೆಯಾಗಿರುತ್ತದೆ.

ಶಾಲೆಯೊಂದು ದೇಗುಲದಂತೆ. ಯಾವ ಭಾವಗಳ ತಾರತಮ್ಯಗಳಿಲ್ಲದ ಜ್ಞಾನಾರ್ಜನೆಯ ಕೇಂದ್ರಬಿಂದು. ಕಲಿಕೆಯ ಮುಖಾಂತರ, ಪ್ರಗತಿಯ ಪಥದಲಿ ಮುನ್ನಡೆಸುವ, ಸದ್ವ್ಯಕ್ತಿಗಳನು -ಸದ್ವ್ಯಕ್ತಿತ್ವವನು ರೂಪಿಸುವ ರೂಪಾಂತರದ ಸ್ಥಾನವಿದು. ಈಗಿನ ಕಾಲದಲ್ಲಿ, ರಜೆಯಲ್ಲೂ ತೆರೆದಿರುವ ಶಾಲೆಗಳು ಅಲ್ಲಲ್ಲಿ ಕಾಣಬರುತ್ತವೆ. ಶಾಲಾರಂಭಕೂ ಮೊದಲೇ ಕೆಲವು ಮನೆಪಾಠಗಳ ಬಾಗಿಲುಗಳು ಸಹ ತೆರೆದಿರುತ್ತವೆ. ಬಹುತೇಕ ವ್ಯಾಪಾರೀಕರಣದ ಮನೋಭಾವ ನಮ್ಮ ಶಾಲಾವ್ಯವಸ್ಥೆಗಳ ಒಳಹೊಕ್ಕು ಕಾಡುತಿದೆ.

ಇನ್ನೂ ಶಾಲೆಯ ಮೊದಲ ದಿನವಂತೂ, ಬಹುತೇಕ ಮನೆಗಳಲ್ಲಿನ ತಯಾರಿಯ ಪ್ರಸಂಗವಂತೂ ಸರ್ವೇ ಸಾಮಾನ್ಯ. ಮಕ್ಕಳನ್ನು ಸ್ನಾನ ಮಾಡಿಸಿ, ಉಡುಗೆ-ತೊಡುಗೆಗಳಿಂದಲಂಕರಿಸಿ , ತಿಂಡಿ-ತೀರ್ಥವನ್ನು ತಿನ್ನಿಸಿ, ಡಬ್ಬಿಯಲ್ಲಿರಿಸಿ, ಪುಸ್ತಕಗಳನ್ನೆಲ್ಲ ಬ್ಯಾಗಿಗಿಳಿಸಿ, ಮಕ್ಕಳನ್ನು ಅಣಿಗೊಳಿಸಿ, ಬಸ್ಸು-ವ್ಯಾನುಗಳಿಗೆ ಕಾಯುತ್ತಾ, ಅವು ಬಂದೊಡನೆ ಮಕ್ಕಳನ್ನು ಅದರೊಳಗೆ ಕುಳ್ಳಿರಿಸಿ, ಶಾಲೆಗೆ ಕಳುಹಿಸುವ ನಿತ್ಯಕೈಂಕರ್ಯಗಳು ಇನ್ನು ಹತ್ತು ತಿಂಗಳುಗಳ ಕಾಲ ಜಾರಿ ಇರುತ್ತದೆ.

ಮಕ್ಕಳಿಗಂತೂ ಗೆಳೆಯರೆಲ್ಲರನೂ ಕೂಡಿ ಆಡುವ ಸಂತಸವೊಂದೆಡೆಯಾದರೆ, ವಿಧವಿಧದ ವಿಷಯಗಳ ಕಲಿಕೆಯ ಸಂಭ್ರಮ ಇನ್ನೊಂದೆಡೆ. ಕನ್ನಡ, ಆಂಗ್ಲ, ಸಂಸೃತ, ಹಿಂದಿ ಸೇರಿದಂತೆ ಭಾಷಾ ವಿಷಯಗಳು, ವಿಜ್ಞಾನ, ಸಮಾಜಶಾಸ್ತ್ರ, ಗಣಿತ ಇತ್ಯಾದಿ ವಿಷಯಗಳ ಅಭ್ಯಾಸ, ಮನನಗಳ ವಿದ್ಯಮಾನಗಳು ಶುರುವಾಗಿರುತ್ತವೆ. ಖರೀದಿಸಿದ ಹೊತ್ತಿಗೆಗಳಲಿ ಬರೆಯುತ್ತಾ, ಬರೆಯುತ್ತಾ, ಹೊಸವಿಷಯಗಳನು ಅರಿಯುವ ಅಭಿಯಾನಗಳು ಗೊತ್ತಾಗದಂತೆಯೇ ನಡೆದಿರುತ್ತವೆ. ಇದಕ್ಕೊಂದು ಸಣ್ಣ ವಿರಾಮದಂತೆ ಬರುವುದು ದಸರೆಯ ರಜೆ. ಮತ್ತೆ ಮುಂದಿನ ಮಾರ್ಚ್ ನ ಪರೀಕ್ಷೆಗಳು ಮುಗಿಯುವವರೆವಿಗೂ ಈ  ಎಲ್ಲಾ ಪ್ರಕ್ರಿಯೆಗಳು ಎಗ್ಗಿಲ್ಲದೆ ಸಾಗಿರುತ್ತವೆ. ಇದೊಂದು ಪ್ರಕೃತಿಯ ಋತುಚಕ್ರಗಳು ಸರಿದಂತೆ, ಕಾಲಕಾಲಗಳಿಂದಲೂ ನಡೆಯುತ್ತಾ ಬರುತ್ತಿದೆ.

ಮೂರ್ನಾಕು ವರ್ಷಗಳಾದಾಗ ಒಂದನೇ ತರಗತಿಗೆ ನೇರವಾಗಿ ಬಂದ ಕಾಲಘಟ್ಟದವನು ನಾನು. ಇನ್ನೂ ಕೆಲವರ ಕಥೆ ಕೊಂಚ ಭಿನ್ನ. ನೇರವಾಗಿ ಮೂರಕ್ಕೂ ಇಲ್ಲಾ ಐದನೇ ತರಗತಿಗೂ ಬಂದವರ ಕತೆಗಳನ್ನು ಕೇಳಿದ್ದೇವೆ. ಈಗಂತೂ ಎರಡು-ಎರಡೂವರೆ  ವರ್ಷಗಳಾಗುತ್ತಲೇ ಮಕ್ಕಳನ್ನು ಪ್ಲೇಹೊಮ್ ಗೆ ಕಳುಹಿಸುವ ಪದ್ದತಿ ಇತ್ತೀಚಿನ ಕೆಲವು ವರ್ಷಗಳಿಂದ ರೂಢಿಯಲ್ಲಿದೆ.ಗುರುಕುಲದ  ಬಗೆಗೂ, ಈಗಲೂ ಅಲ್ಲಲ್ಲಿ ಕೆಲವೊಂದು ಗುರುಕುಲಗಳನ್ನು ಕಂಡಿದ್ದೇವೆ. ಆಗಿನ ಶೈಕ್ಷಣಿಕ ಗುಣಮಟ್ಟ, ಬೋಧನೆಯ ಕ್ರಮ, ಆಸಕ್ತಿ, ಮನೋಭಾವಗಳೆಲ್ಲವುಗಳಲಿ ವ್ಯತ್ಯಾಸಗಳಿವೆ. ಕಾಲದಿಂದ ಕಾಲಕೆ ಎಲ್ಲವೂ ತಮ್ಮ ಚೌಕಟ್ಟಿನೊಳಗೆ ಹಲವಾರು ಮಾರ್ಪಟುಗಳನ್ನು ಕಂಡಿದೆ. ಪಠ್ಯೇತ್ತರ ಚಟುವಟಿಕೆಗಳು ಸಿಲೆಬಸ್ ನ ಪರಿಧಿಯೊಳಕ್ಕು ಮಕ್ಕಳ ಮನೋವಿಕಸನಕ್ಕೆ ಪೂರಕಗಳಾಗಿವೆ.

ಹಳೆಬೇರು ಹೊಸಚಿಗುರು ಎಂಬ ನುಡಿಯಂತೆ, ಜ್ಞಾನಾರ್ಜನೆಯ ವ್ಯವಸ್ಥೆಯಲ್ಲಿ, ಬೋಧನೆಗಳು, ಪಠ್ಯ-ಪಠ್ಯೇತ್ತರ  ಕ್ರಮಗಳು ಮಕ್ಕಳ ವ್ಯಕ್ತಿ-ವ್ಯಕ್ತಿತ್ವಗಳನ್ನು ಉತ್ತಮವಾಗಿ ರೂಪಿಸಲೆಂದು ಆಶಿಶೋಣ.

‍ಲೇಖಕರು avadhi

May 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: