ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಗಾಂಧಿ ನೆನಪಾದರು….

ಸುಧಾ ಆಡುಕಳ

ಸತ್ಯವನ್ನೇ ತಮ್ಮ ಪ್ರಯೋಗದ ಸರಕಾಗಿಸಿಕೊಂಡ, ಜೀವನವನ್ನೇ ತೆರೆದ ಬಾಗಿಲಿನ ಪ್ರಯೋಗ ಶಾಲೆಯಾಗಿಸಿಕೊಂಡ ಗಾಂಧಿ ಎನ್ನುವ ವಿಸ್ಮಯ ಯಾರಿಗೂ ಪೂರ್ತಿಯಾಗಿ ಸೇರದ ಮತ್ತು ಯಾರಿಂದಲೂ ಪೂರ್ಣವಾಗಿ ಹೊರಗಿರದ ಚೈತನ್ಯವಾಗಿ ನಮ್ಮ ಸುತ್ತಲೂ ಪ್ರಕಟವಾಗುತ್ತಲೇ ಇರುತ್ತದೆ. ಒಂದು ಅಹಿಂಸಾತ್ಮಕವಾದ ಪ್ರತಿಭಟನೆಯಾಗಿ, ಪ್ರಾಮಾಣಿಕತೆಯ ನಿದರ್ಶನವಾಗಿ ಮತ್ತೆ, ಮತ್ತೆ ನಮ್ಮ ಸುತ್ತಲೂ ಕಾಣಸಿಗುತ್ತದೆ. ಆಗೆಲ್ಲ ಮನಸ್ಸು ಅಂಥದೊಂದು ಅದ್ಭುತ ಚೇತನಕ್ಕೆ ನಮಿಸುತ್ತದೆ.

ಕೊರೊನಾದ ಭಯವಿಲ್ಲದ ಕಳೆದ ವರ್ಷ ‘ಗಾಂಧಿ ಜಯಂತಿ’ ನಡೆಯುವಾಗ ನಾವೆಲ್ಲರೂ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ಶಿಬಿರದಲ್ಲಿ ಕಳೆದುಹೋಗಿದ್ದೆವು. ಶಿಬಿರದ ನಡುವೆ ಬರುವ ಗಾಂಧಿಜಯಂತಿಯನ್ನು ವಿಶಿಷ್ಟವಾಗಿ ಆಚರಿಸಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿತ್ತು. ಅದೇ ಸಮಯಕ್ಕೆ ರಂಗಕರ್ಮಿ ಹಾಗೂ ಗೆಳತಿ ಅಭಿಲಾಷಾ ಬರೆದ ‘ಸತ್ಯಾಗ್ರಹಿ, ವಿಜ್ಞಾನಿ ಗಾಂಧಿ’ ನಾಟಕ ಯುವನಿರ್ದೇಶಕ ರೋಹಿತ್ ಬೈಕಾಡಿಯವರ ನಿರ್ದೇಶನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು.

ನಾಟಕ ಪ್ರದರ್ಶನ ಮತ್ತು ಅಭಿಲಾಷಾ ಅವರ ಉಪನ್ಯಾಸಕ್ಕಿಂತ ಒಳ್ಳೆಯ ಕಾರ್ಯಕ್ರಮಗಳು ನಮಗೆ ಹೊಳೆಯಲಿಲ್ಲ. ಬೆಳಿಗ್ಗೆ ಇಡಿಯ ಕಾಲೇಜು ವಠಾರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿದ ವಿದ್ಯಾರ್ಥಿನಿಯರು ಊರ ತುಂಬೆಲ್ಲ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಜಾಥಾದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಸರ್ವಧರ್ಮ ಪ್ರಾರ್ಥನೆ ಮಾಡಿ, ಉಪನ್ಯಾಸವನ್ನು ಆಲಿಸಿ, ನಾಟಕ ನೋಡಿ, ಸಂಜೆ ಸಮುದ್ರದಂಚಿನಲ್ಲಿ ಕುಳಿತು ಸೂರ್ಯಾಸ್ತವನ್ನು ಕಣ್ತುಂಬಿಕೊಂಡು ಗಾಂಧಿಜಯಂತಿಯನ್ನು ಸ್ಮರಣೀಯವಾಗಿಸಿಕೊಂಡರು.

ಮರುದಿನ ಶಿಬಿರ ಮುಗಿಯುವ ಧಾವಂತ. ಸಮಾರೋಪದ ನಂತರ ಎಲ್ಲರೂ ಅವರವರ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳಬೇಕು, ತಾವು ವಾಸವಿದ್ದ ಕೊಠಡಿಗಳನ್ನೆಲ್ಲ ಮತ್ತೆ ಯಥಾಸ್ಥಿತಿಯಲ್ಲಿ ಸ್ವಚ್ಛಗೊಳಿಸಿ ಜೋಡಿಸಿಡಬೇಕು, ಕಾಲೇಜಿನಿಂದ ತಂದ ನೂರೊಂದು ವಸ್ತುಗಳನ್ನು ಜಾಗ್ರತೆಯಿಂದ ಮರಳಿಸಬೇಕು, ಕೊನೆಯ ದಿನವೆಂದು ಉಟ್ಟುಕೊಂಡ ಜರಿಸೀರೆಯಲ್ಲಿ ಇಷ್ಟವಿರುವ ಎಲ್ಲರೊಂದಿಗೂ ಭಾವಚಿತ್ರ ತೆಗೆಸಿಕೊಳ್ಳಬೇಕು…… ಒಂದೆ, ಎರಡೇ….. ಈ ಭರಾಟೆಯಲ್ಲಿ ತಮ್ಮ, ತಮ್ಮ ಕೆಲಸವನ್ನೇನಾದರೂ ಇವರು ಮರೆತರೆ ಎಂಬ ಚಿಂತೆಯಲ್ಲಿ ನಾನು, ಕೊನೆಯಲ್ಲೊಮ್ಮೆ ಎಲ್ಲವನ್ನೂ ನೋಡಿಬಿಡೋಣವೆಂದು ಮಕ್ಕಳ ಲಗೇಜುಗಳನ್ನಿಟ್ಟ ಕೋಣೆಯೊಳಗೆ ಇಣುಕಿದೆ.

ತಾನುಟ್ಟ ರೇಶಿಮೆ ಸೀರೆಯನ್ನು ಮೊಳಕಾಲಿನವರೆಗೆ ಸಿಕ್ಕಿಸಿಕೊಂಡ ನಮ್ಮ ವಿದ್ಯಾರ್ಥಿ ನಾಯಕಿ ಅಲ್ಲಿರುವ ಸಣ್ಣ ಧೂಳನ್ನೂ ಬಿಡದೇ ಎಲ್ಲವನ್ನೂ ಸ್ವಚ್ಛಗೊಳಿಸುತ್ತಿದ್ದಾಳೆ. ಶಬ್ದವಾಗದಂತೆ ಅಲ್ಲೇ ನಿಂತೆ. ಎಲ್ಲವನ್ನೂ ಮುಗಿಸಿದ ಅವಳು ಕೊಠಡಿಯ ಬೋರ್ಡನ್ನು ಸ್ವಚ್ಛಗೊಳಿಸಿ, ಅದರ ಮೇಲೆ ದೊಡ್ಡ ಅಕ್ಷರಗಳಲ್ಲಿ “ದಯವಿಟ್ಟು ನಿಮ್ಮ ತರಗತಿ ಕೋಣೆಯನ್ನು ಯಾವಾಗಲೂ ಇಷ್ಟೇ ಸ್ವಚ್ಛವಾಗಿಟ್ಟುಕೊಳ್ಳಿ” ಎಂದು ಬರೆದಳು.

ನಾನು ಸುಮ್ಮನಿರಲಾಗದೇ ‘ಶಹಬ್ಬಾಸ್!’ ಎಂದೆ. ಮತ್ತೆ ನೋಡೋಣವೆಂದು, “ನಾಳೆ ಇದನ್ನು ಓದಿದ ಕಾಲೇಜು ಹುಡುಗರು ನಿನಗೆ ಬೈತಾರೆ ನೋಡು” ಎಂದೆ. ಅದಕ್ಕವಳು, “ನಾವು ಬರುವಾಗ ಈ ಕೋಣೆ ಎಷ್ಟು ಹೊಲಸಾಗಿತ್ತು ಗೊತ್ತಾ? ಅವರಿಗೂ ಚೂರು ಅರ್ಥವಾಗಲಿ. ಇದೊಂದುಸಣ್ಣ ಪ್ರತಿಭಟನೆ, ಗಾಂಧೀಜಿವರಂತೆ” ಎಂದಳು. ಗಾಂಧಿ ನೆನಪಾದರು…..

ಅದಾದ ಎರಡನೇ ದಿನಕ್ಕೇ ಕಾಲೇಜಿನಲ್ಲಿ ಶಿಬಿರದ ಪುನರಾವಲೋಕನ ಕಾರ್ಯಕ್ರಮವಿತ್ತು. ಕಾಲೇಜಿನವರು ನೀಡಿದ ಶಿಬಿರಕ್ಕೆಂದು ಖರ್ಚುಮಾಡಿದ ಹಣ ತುಂಬಿದ ಪುಟ್ಟ ಪರ್ಸ್ ನನ್ನ ಕೈಯಲ್ಲೇ ಇತ್ತು. ಎಲ್ಲರ ಅಭಿಪ್ರಾಯ ಹಂಚಿಕೆಗಳೆಲ್ಲ ಮುಗಿದು, ಅದಲು ಬದಲಾದ ಸಾಮಾನುಗಳೆಲ್ಲ ಅವರವರ ಕೈಸೇರಿಸಿ , ರಾಷ್ಟ್ರಗೀತೆಯೊಂದಿಗೆ ಸಭೆಯೂ ಮುಗಿಯಿತು. ಐಸ್ಕ್ರೀಮು ತಿನ್ನುವ ಖುಶಿಯೂ ಅದರೊಂದಿಗೆ ಸೇರಿಕೊಂಡಿತು. ಮರುದಿನದಿಂದ ಮೂರು ವಾರಗಳ ದಸರಾ ರಜೆ ಪ್ರಾರಂಭಗೊಂಡಿತು.

ವಾರ ಕಳೆದು ಪೇಟೆಗೆ ಹೋಗಿ ಏನನ್ನೋ ಖರೀದಿಸಲೆಂದು ಪರ್ಸಗಾಗಿ ಕೈಹಾಕಿದರೆ ಪರ್ಸ್ ಮಾಯವಾಗಿತ್ತು! ಎರಡು ಸಾವಿರದ ಅನೇಕ ನೋಟುಗಳನ್ನು ಪುಟ್ಟ ಪರ್ಸಿನಲ್ಲಿ ಮಡಿಚಿಟ್ಟಿದ್ದು ನೆನಪಾಗುತ್ತದೆ,ಆದರೆ ಎಲ್ಲಿ ಬಿಟ್ಟೆ ಎಂದು ನೆನಪೇ ಆಗದು. ಆಪದ್ಬಾಂಧವರಾದ ಕಾಲೇಜಿನ ಸವಿತಕ್ಕನಿಗೆ ಫೋನ್ ಮಾಡಿದ್ದಾಯ್ತು. ತಕ್ಷಣವೇ ಕಾಲೇಜಿಗೆ ಧಾವಿಸಿ ಸ್ಟಾಪು, ಆಫೀಸು, ಮೀಟಿಂಗ್ ಹಾಲ್ ನಿಂದ ಹಿಡಿದು ಐಸ್ಕ್ರೀಮ್ ಕಪ್ ಬಿಸಾಡಿದ ಕಸದ ಬುಟ್ಟಿಯವರೆಗೆ ಎಲ್ಲವನ್ನೂ ತಡಕಾಡಿದರೂ ಪರ್ಸ್ ಮಾತ್ರ ನಾಪತ್ತೆ. ನಾನು ಬೇಡಬೇಡವೆಂದರೂ ಸವಿತಕ್ಕ ತಮ್ಮ ಮನೆಯ ಹತ್ತಿರದ ಗುತ್ತುದೇವರಿಗೆ ವೀಳ್ಯದ ಹರಕೆಯನ್ನೂ ಹೊತ್ತಾಯ್ತು. ಭಾರವಾದ ಹೆಜ್ಜೆಯಿಡುತ್ತಾ ಮನೆಗೆ ಬಂದೆ. ಒಂದೆರಡು ದಿನ ಯೋಚಿಸಿ ಅದನ್ನು ಮರೆತುಬಿಟ್ಟೆ.

ರಜೆ ಮುಗಿಯಲು ಎರಡು ದಿನಗಳಿರುವಾಗ ವಿದ್ಯಾರ್ಥಿನಿಯೊಬ್ಬಳು ನನಗೆ ಫೋನ್ ಮಾಡಿದಳು. “ನಮ್ಮ ಮೀಟಿಂಗ್ ಮುಗಿಸಿ, ಅಲ್ಲೆಲ್ಲ ಸ್ವಚ್ಛ ಮಾಡುತ್ತಿರುವಾಗ ಅಲ್ಲಿ ಯಾರಿಗೂ ಸೇರದ ವಸ್ತುಗಳ ಚೀಲ ಸಿಕ್ಕಿತು. ಮನೆಗೆ ತೆಗೆದುಕೊಂಡು ಹೋಗಿ ಎಸೆಯೋಣವೆಂದು ನೋಡಿದಾಗ ಅದರಲ್ಲೊಂದು ಪರ್ಸ್ ಇತ್ತು. ಎಲ್ಲರಿಗೂ ಫೋನ್ ಮಾಡಿದೆ. ಯಾರೂ ತಮ್ಮದಲ್ಲವೆಂದು ಹೇಳಿದರು. ತುಂಬಾ ಹಣವಿದೆ ಮೇಡಂ. ನನಗೆ ಭಯವಾಗುತ್ತಿದೆ.” ತನ್ನದಲ್ಲದ ಹಣವನ್ನು ನೋಡಿ ಭಯಗೊಳ್ಳುವ ಅವಳ ಪರಿಗೆ ನಾನು ಕರಗಿದ್ದೆ. ಪರ್ಸಿನಲ್ಲಿದ್ದ ಹಣವನ್ನು ಎಣಿಸಿಯೂ
ನೋಡದೇ ಹಾಗೆಯೇ ನನ್ನ ಕೈಯ್ಯಲ್ಲಿಟ್ಟು ನಿರಾಳವಾಗಿ ಉಸಿರು ಬಿಟ್ಟವಳನ್ನು ದಿಟ್ಟಿಸಿದೆ.

ಮತೆ ಗಾಂಧಿ ನೆನಪಾದರು..

                                                                                                     

‍ಲೇಖಕರು Avadhi

30 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading