ಸತೀಶ್ ಕುಲಕರ್ಣಿ, ಹಾವೇರಿ
ಆಗಷ್ಟ್ ೩೦, ೨೦೧೫ ಒಂದು ಕರಾಳ ದಿನ. ಡಾ. ಎಂ. ಎಂ. ಕಲಬುರ್ಗಿಯವರ ಪಾಲಿಗಂತೂ ಅನಾಸ್ಥೆ ಕೊನೆಯ ದಿನ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಒಂದು ಭಯಾನಕ ಸಂಚಲನ ಸೃಷ್ಟಿಸಿದ ದಿನ.
ಕಲಬುರ್ಗಿಯವರು ಈಗ ಇಲ್ಲ. ೪ ವರ್ಷಗಳು ಹರಿದು ಹೋಗಿವೆ. ಅವರ ಶಿಷ್ಯ ನಾನಲ್ಲದಿದ್ದರೂ ಒಂದು ರೀತಿಯಲ್ಲಿ ಅಪರೋಕ್ಷವಾಗಿ ಶಿಷ್ಯತ್ವವನ್ನು ಪಡೆದವನು. ಕಲಬುರ್ಗಿಯವರ ಹತ್ಯೆಯ ನಂತರ ಪ್ರತಿ ಆಗಸ್ಟ್ ೩೦ ರಂದು ನಾನು, ಡಾ. ಸರಜೂ ಕಾಟ್ಕರ್, ಡಾ. ರಾಮಕೃಷ್ಣ ಮರಾಠೆ, ಡಾ. ಎ.ಬಿ. ಘಾಟಗೆ ತಪ್ಪದೆ ಸತತ ೪ ವರ್ಷಗಳಿಂದ ಅಗಲಿದ ಗುರುಗಳ ಮನೆಗೆ ಹೋಗುವುದನ್ನು ಪರಿಪಾಠ ಮಾಡಿಕೊಂಡಿದ್ದೇವೆ. ನಮಗೆ ಸದಾ ಸಾಥ್ ಕೊಡುವ ಡಾ. ಶಶಿಧರ ತೋಡ್ಕರ್. ಪ್ರೊ. ವಿಭೂತಿ ಕೂಡ ಜೊತೆಗಿದ್ದರು.

ಈ ಬಾರಿಯೂ ಕೂಡ ಆಗಸ್ಟ್ ೩೦ ಶುಕ್ರವಾರ ನಾವೆಲ್ಲ ಹೋಗಿದ್ದೆವು. ಅದೇ ಮನೆ, ಅದೇ ಕರಾಳ ನೆನಪು, ಅದುವೇ ನಮ್ಮ ಪಾಲಿನ ಒಂದು ಕಾಲದ ಅನುಭವ ಮಂಟಪ. ಒಳಗೆ ಹೋದಾಗ ಗುರು ಪತ್ನಿ ಉಮಾದೇವಿ, ಮಗಳು ರೂಪಾದೇವಿ ಬರಮಾಡಿಕೊಂಡರು. ರಾಶಿ ಪುಸ್ತಕಗಳು, ಸಾಲು ಸಾಲು ಪ್ರಶಸ್ತಿ ಪತ್ರ, ಫಲಕಗಳ ನಡುವೆ ಅದೇ ತುಂಬು ನಗೆಯ ಕಲಬುರ್ಗಿಯವರ ವಿವಿಧ ಭಂಗಿಯ ಫೋಟೊಗಳಿದ್ದವು.
ಕಳೆದ ಬಾರಿಗಿಂತ ಹೆಚ್ಚು ಬಿಚ್ಚು ಮನಸ್ಸಿನಿಂದ ಮಾತನಾಡಿದ ಶ್ರೀಮತಿ ಉಮಾದೇವಿ ಕಲಬುರ್ಗಿಯವರು ಸಮಾಧಾನಿಯಾಗಿದ್ದರು. ಬಹುಶಃ ಕೊಲೆಗಾರರ ಪತ್ತೆ, ಕೋರ್ಟಿನಲ್ಲಿ ದಾಖಲಾದ ಕೇಸು ಕಾರಣಗಳಾಗಿರಬಹುದು. ಜೊತೆಗೆ ಕಲಬುರ್ಗಿಯವರ ಸಮಾಧಿ ನಿರ್ಮಾಣವಾದದ್ದು ಕಾರಣವಾಗಿರಲೂಬಹುದು.
ಹೊರಗೆ ಬಂದಾಗ ಸೆಕ್ಯೂರಿಟಿ ಸೆಲ್ಯುಟ್ ಹಾಕಿದ. ನಾವೆಲ್ಲ ಮನಸ್ಸಿನಲ್ಲಿಯೇ ದೊಡ್ಡದಾದ ಒಂದು ಸೆಲ್ಯುಟ್‌ನ್ನು ಅಗಲಿದ ಆ ಮಹಾಗುರುವಿಗೆ ಹಾಕಿ ಹೊರಗೆ ಬಂದೆವು.








ಸರ್, ನಮಸ್ಕಾರ. ನಿಜಕ್ಕೂ ಒಳ್ಳೆಯ ಪರಿಪಾಠ.