ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವಕುಮಾರ ಮಾವಲಿ ಕಥೆ: ಮತದಾರ…

ಮೂಲ : ಅಚಿಬೆ

ಭಾವಾನುವಾದ : ಶಿವಕುಮಾರ ಮಾವಲಿ

ಮೂರು ವರ್ಷಗಳ ಹಿಂದೆ ಹಳ್ಳಿ ಬಿಟ್ಟು ಪ್ಯಾಟೆಗೆ ಹೋಗಿ ಗಾರೆ ಕೆಲಸಗಾರರ ತಂಡವೊಂದನ್ನು ಕಟ್ಟಿಕೊಂಡಿದ್ದ ಪುಂಡಲೀಕ ಮತ್ತೆ ಹಳ್ಳಿಗೆ ವಾಪಸ್ಸಾಗಿದ್ದರ ಹಿಂದಿನ ಕಾರಣ ಚುನಾವಣೆ ಎಂಬುದು ಹಳ್ಳಿಯ ಎಲ್ಲರಿಗೂ ಗೊತ್ತಿತ್ತು.ಅವನು ಬರಲಿಚ್ಛಿಸಿದ್ದನೋ ಇಲ್ಲವೋ ಆದರೆ ಚುನಾವಣೆಯಂಥ ಕಷ್ಟದ ದಿನಗಳಲ್ಲಿ ಸ್ಥಳೀಯ ಹಾಲಿ ಮಂತ್ರಿಯೊಬ್ಬನ ಆಣತಿಯಂತೆಯೇ ಅವನನ್ನು ಊರಿಗೆ ಕರೆತರಲಾಗಿತ್ತು. ಪಂಚಾಯ್ತಿಯಿಂದ ಹಿಡಿದು ಲೋಕಸಭೆವರೆಗಿನ ಯಾವುದೇ ಚುನಾವಣೆಯ ಪ್ರಚಾರ ತಂತ್ರಗಳಲ್ಲಿ ಪುಂಡಲೀಕ ಪರಿಣಿತಿ ಹೊಂದಿದ್ದರಿಂದಲೇ ಅವನನ್ನು ಕರೆಸಿಕೊಳ್ಳಲಾಗಿತ್ತು‌. ಪ್ರಸ್ತುತ ಸರ್ಕಾರದಲ್ಲಿ ಸಂಸ್ಕೃತಿ ಮಂತ್ರಿಯಾಗಿದ್ದ ‘ಬೋರೇಗೌಡ’ನಿಗೆ ಮುಂಬರುವ ಚುನಾವಣೆಯಲ್ಲಿ ತಾನೇ ಗೆಲ್ಲುವುದರ ಬಗ್ಗೆ ಆತ್ಮವಿಶ್ವಾಸವಿದ್ದರೂ ಪುಂಡಲೀಕ ಕೊಟ್ಟ ಸಲಹೆ ವಿರೋಧ ಪಕ್ಷದವರ ಬಗ್ಗೆ ಎಚ್ಚರಿಕೆಯಿಂದಿರುವಂತೆ ಮಾಡಿತ್ತು.

ಚುನಾವಣೆಗಳು ಪ್ರಾರಂಭವಾದಾಗಿನಿಂದಲೂ ಇಡೀ ಕ್ಷೇತ್ರವೇ ‘ಜನಹಿತ ಮೈತ್ರಿ ಪಕ್ಷ’ಕ್ಕೆ ಸೇರಿದ್ದು, ಬೋರೇಗೌಡನೇ ಅದರ ಅಧ್ಯಕ್ಷನೂ ಆಗಿದ್ದನು. ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಆತ ಈ ಬಾರಿ ಆಸ್ತಿ ಘೋಷಣೆ ಮಾಡಿದಾಗ ಅತೀ ಶ್ರೀಮಂತ ಉಮೇದುವಾರನಾಗಿದ್ದ. ಈ ಬಗ್ಗೆ ಕ್ಷೇತ್ರದ ಜನರೆಲ್ಲ ಹೆಮ್ಮೆ ಪಟ್ಟರು. ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ, ನೀರು ಸರಬರಾಜು ವ್ಯವಸ್ಥೆ ಇರಲಿಲ್ಲ ಅವನಿಗೊಂದು ಗೌರವ ಡಾಕ್ಟರೇಟ್ ಬಂದಿತ್ತೇ ಹೊರತು‌ ಅಷ್ಟು ವರ್ಷಗಳಲ್ಲಿ ಯಾವೊಬ್ಬ ಡಾಕ್ಟರನೂ ಆ ಹಳ್ಳಿಗರನ್ನು ಶುಶ್ರೂಷೆ ಮಾಡಲು ಬಂದಿರಲಿಲ್ಲ. ಆದರೆ ತನ್ನ ಹಳ್ಳಿಯಲ್ಲೇ ಬಂಗಲೆ ಕಟ್ಟಿಕೊಂಡಿದ್ದ ಬೋರೇಗೌಡನ ಮನೆಗೆ ಮಾತ್ರ ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ ಎಲ್ಲ ಇತ್ತು. ‘ನಮ್ ಮಿನಿಸ್ಟ್ರಿ ಗೆ ಸ್ವಲ್ಪಾನೂ ಸೊಕ್ಕಿಲ್ಲ, ಅರಾಮಾಗಿ ಸಿಟಿಲ್ಲಿರೋದು ಬಿಟ್ಟು ನಮ್ ಊರಲ್ಲೇ ಇದಾರೆ. ನಿಜವಾದ ಮಣ್ಣಿನ ಮಗ’ ಅಂತೆಲ್ಲ ಜನ ಮಾತಾಡಿಕೊಳ್ಳುತ್ತಿದ್ದರು‌.

ಇಂತಿಪ್ಪ ಬೋರೇಗೌಡನ ಚುನಾವಣಾ ಪ್ರಚಾರದ ರೂವಾರಿಯಾಗಿದ್ದವನೇ ಪುಂಡಲೀಕ. ಹಿಂದಿನ ಚುನಾವಣೆಯಲ್ಲಿ ಇಡೀ ಕ್ಷೇತ್ರದಲ್ಲಿ ‘ಜನಹಿತ ಮೈತ್ರಿ ಪಕ್ಷದ’ ಪ್ರಾಬಲ್ಯವಿದ್ದರಿಂದ ಯಾರಿಗೂ ಹಣ, ಹೆಂಡ ಹಂಚದೇ ಬೋರೇಗೌಡ ದಿಗ್ವಿಜಯಿಯಾಗಿದ್ದ. ಆದರೆ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಜನರ ಆಲೋಚನೆಯಲ್ಲಿ ಸಾಕಷ್ಟು ಬದಲಾವಣೆ ಬಂದಿದ್ದು ಈ ಬಾರಿ ಉಚಿತವಾಗಿ ಯಾಕೆ ಮತ ಚಲಾಯಿಸಬೇಕು ಎಂಬಂತಿದ್ದರು. ಇದನ್ನು ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟ ಪುಂಡಲೀಕ, ತಲಾ ನೂರು ರೂಪಾಯಿಗಳನ್ನು ಕೊಡಲು ಶಿಫಾರಸ್ಸು ಮಾಡಿದ್ದ. ಅಂತೆಯೇ ಮಂತ್ರಿಗಳು ಒಪ್ಪಲಾಗಿ ಇವನು ತಂಡ ಕಟ್ಟಿಕೊಂಡು ರಾತ್ರಿಗಳಲ್ಲಿ ಮನೆಮೆನಗೆ ತೆರಳಿ ಹಣ ಹಂಚಿ ಬರುತ್ತಿದ್ದ.ಹಗಲು, ಬೋರೇಗೌಡ ಅಲ್ಲಲ್ಲಿ ಸಭೆಗಳನ್ನು ಮಾಡಿ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದ‌. ಎಲ್ಲ ಕ್ಯಾಂಪೇನರ್ ಗಳಿಗೆ ಲೀಡರ್ ಆಗಿದ್ದ ಪುಂಡಲೀಕನ ಬಗ್ಗೆ ಮಂತ್ರಿಗಳಿಗೆ ಎಲ್ಲಿಲ್ಲದ ಪ್ರೀತಿ. ಉದಾಹರಣೆಗೆ ಕಳೆದ ಭಾನುವಾರ ಮಂತ್ರಿಗಳ ಮನೆಯ ಫ್ರಿಟ್ಜ್ ನಿಂದ ಪುಂಡಲೀಕ ತೆಗೆದುಕೊಂಡ ಐದನೆಯ ಬೀರ್ ಬಾಟಲ್ ಗೆ ಅವನ ಹೆಂಡತಿ (ಈಕೆ ಯಾರೆಂದರೆ ಬೋರೇಗೌಡ ಮೊದಲು ಶಾಲಾ ಶಿಕ್ಷಕನಾಗಿದ್ದಾಗ ಅವನ ಸಹೋದ್ಯೋಗಿಯಾಗಿದ್ದು, ಇವನ ಮೇಲೆ ಲೈಂಗಿಕ ಶೋಷಣೆಯ ಆರೋಪ ಹೊರಿಸಿದ್ದವಳು. ಇದರಿಂದ ಹೆದರಿ ಅವನು ಉದ್ಯೋಗ ಬಿಟ್ಟಿದ್ದ. ಅದೇ ಸಮಯಕ್ಕೆ ಚುನಾವಣೆ ಬಂತು. ರಾಜಕೀಯ ಪ್ರವೇಶ ಪಡೆದಿದ್ದ) ಆಕ್ಷೇಪ ವ್ಯಕ್ತಪಡಿಸಿದಾಗ ಎಲ್ಲರ ಮುಂದೆಯೇ ಮಂತ್ರಿ, ಹೆಂಡತಿಗೆ ಬೈದು ಪುಂಡಲೀಕನ ಪರವಹಿಸಿದ್ದ. ತನ್ನ ಓವರ್ ಕೋಟ್ ಒಂದನ್ನು ಅವನಿಗೆ ಕೊಟ್ಟಿದ್ದ, ಒಂದು ಸೈಟ್ ಕೊಡಿಸುವ ಭರವಸೆಯನ್ನಿತ್ತಿದ್ದ. ಪುಂಡಲೀಕನು ಅಷ್ಟೇ ಪ್ರಾಮಾಣಿಕವಾಗಿ ಕ್ಯಾನ್ವಾಸ್ ಕಾರ್ಯದಲ್ಲಿ ತೊಡಗಿದ್ದ. ಒಮ್ಮೆ ಊರಿನ ಹಿರಿಯರೊಬ್ಬರ ಮನೆಯಲ್ಲಿ‌ ರಹಸ್ಯಸಭೆ ಸೇರಿದಾಗ ಮುದುಕನೊಬ್ಬ ‘ನೂರು ರೂಪಾಯಿ ತುಂಬಾ ಕಡಿಮೆಯಾಯಿತು ಬೋರೇಗೌಡನೇನೂ ಹಿಂದಿನಂತೆ ಬಡವನೇ? ಅವನೊಬ್ಬ ಸ್ಕೂಲ್ ಟೀಚರ್ ಆಗಿದ್ದಾಗ ಅವನ ಬಳಿ ಹಣ ಇರಲಿಲ್ಲ. ಆದರೆ ಈಗ ಅವನ ಬಳಿ ಇರೋ ಕಾರು ನಮ್ಮ ಜಿಲ್ಲೆನಾಗೇ ಯಾರ ಬಳಿಯೂ ಇಲ್ಲ. ಅವನು ಬಡವ ಆಗಿದ್ದರೆ ನಾನೇ ನಿಂತು ಎಲ್ರ ಹತ್ರ ಫ್ರೀ ಓಟ್ ಕೇಳ್ತಿದ್ದೆ. ನೆನಪಿರಲಿ ನಮ್ಮ ಜೊತೆ ನಮ್ಮ ಹೆಂಗಸರದ್ದೂ ಓಟ್ ಗಳಿದಾವೆ. ನೂರು ರೂಪಾಯಿ ತುಂಬಾ ಕಡಿಮೆ ಆಯ್ತು’ ಎಂದು ಹೇಳಿದಾಗ ಪುಂಡಲೀಕ ಅವರೆಲ್ಲರ ಕೈಗೆ ಮತ್ತೆ ನೂರು ರೂಪಾಯಿ ಇಟ್ಟು “ಇಷ್ಟೇ, ಇದ್ರಮೇಲೆ ಬೇಕಾದರೆ ಶತ್ರುಗಳಿಗೆ ಓಟ್ ಹಾಕ್ಕೋಳ್ರಿ” ಎಂದು ಎದ್ದು ಹೋಗಿದ್ದ.

ಹಾಗೆ ಅವನು ಪ್ರಸ್ತಾಪಿಸಿದ್ದ ಶತ್ರು ಬೇರೆ ಯಾರೂ ಅಲ್ಲದೆ ಹೊಸದಾಗಿ‌ ಶೋಷಿತ ಸಮುದಾಯಗಳವರೆಲ್ಲರೂ ಸೇರಿ ತಮ್ಮ ಮೇಲಿನ ರಾಜಕೀಯ,ಸಾಂಸ್ಕೃತಿಕ, ಧಾರ್ಮಿಕ ಮತ್ತು ಆರ್ಥಿಕ ಶೋಷಣೆಯನ್ನು ಕೊನೆಗಾಣಿಸುವ ಉದ್ದೇಶದಿಂದ ಕಟ್ಟಿಕೊಂಡ ‘ಪ್ರಗತಿಪರ ಪ್ರಜಾ ಪಕ್ಷ’ ದ ಅಭ್ಯರ್ಥಿಯಾಗಿದ್ದ ‘ಯೋಗಪ್ಪ’. ಈ ಪಕ್ಷ ಕೂಡ ಇಡೀ ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಹರಿಸಿತ್ತು. ಕಾರ್ ಗಳಿಗೆ ಡೆಕೋರೇಟ್ ಮಾಡಿ, ಮೈಕ್ ಕಟ್ಟಿಕೊಂಡು, ಜನಪ್ರಿಯ ಚಿತ್ರಗೀತೆಗಳನ್ನೆಲ್ಲ ಯೋಗಪ್ಪನಿಗೆ ಆರೋಪಿಸಿ ಹಾಡಿಸಿ ಪ್ರಚಾರ ಮಾಡುತ್ತಿತ್ತು. ಆದರೂ ಪುಂಡಲೀಕನಿಗೆ ತನ್ನ ಯಜಮಾನ ಬೋರೇಗೌಡ ಜಯಗಳಿಸುವುದರ ಬಗ್ಗೆ ಯಾವುದೇ ಕಿಂಚಿತ್ ಶಂಕೆಯೂ ಇರಲಿಲ್ಲ. ಅಲ್ಲದೆ ಈ ಬಾರಿ ‘ಜನಹಿತ ಮೈತ್ರಿ ಪಕ್ಷ’ ತಾನು ಮತ್ತೆ ಅಧಿಕಾರಕ್ಕೆ ಬಂದರೆ ಮನೆಮನೆ ಬಾಗಿಲಿಗೂ ಪೈಪುಗಳ ಮೂಲಕ ನೀರು ಪೂರೈಸುವ ವ್ಯವಸ್ಥೆಯನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಐದು ವರ್ಷಗಳಲ್ಲಿ ಮಾಡದ್ದನ್ನು ಮತ್ತೆ ಅಧಿಕಾರಕ್ಕೆ ಬಂದರೆ ಮಾಡುತ್ತೇವೆಂಬ ಭರವಸೆಯನ್ನೂ ಮುಗ್ದ ಜನ ನಂಬಿದ್ದರು.ಬೋರೇಗೌಡ ಹಗಲು ಸಾವಿರಾರು ಜನ ಸೇರಿದಲ್ಲಿ ಆಕರ್ಷಣೀಯ ಭಾಷಣ ಮಾಡುತ್ತಿದ್ದರೆ, ಪುಂಡಲೀಕ ರಾತ್ರಿಯ ‘ರಹಸ್ಯ ಕಾರ್ಯಾಚರಣೆ’ಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದ.

ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದ ಹೊತ್ತಲ್ಲಿ ಒಂದು ತಡರಾತ್ರಿ ಪುಂಡಲೀಕನ ಮನೆಗೆ ಶತ್ರು ಪಕ್ಷದ ಕ್ಯಾಂಪೇನಿಂಗ್ ಲೀಡರ್ ಬಂದ. ಪುಂಡಲೀಕನನ್ನು ಕುರಿತು, ‘ ನಮಗೆ ನಿಮ್ಮ ಮತ ಬೇಕು ‘ ಎಂದು ಹೇಳುತ್ತಲೇ ನೋಟಿನ ಕಂತೆಗಳಿದ್ದ ಬ್ಯಾಗ್ ಒಂದನ್ನು ಅವನೆದುರಿಗೆ ಇಟ್ಟ. ತನಗೆ ಸ್ನೇಹತನೇ ಆಗಿದ್ದರೂ ಅಪರಿಚಿತನಂತೆ ಕಂಡ ಆತನ ಈ ವರ್ತನೆ ಪುಂಡಲೀಕನನ್ನು ಬೆಚ್ಚಿ ಬೀಳಿಸಿತ್ತು.ಆತ ತಕ್ಷಣ ಎದ್ದು ಹೋಗಿ ಬಾಗಿಲು ಮುಚ್ಚಿಬಂದು ಹಣದ ಮೊತ್ತವನ್ನು ಅಂದಾಜಿಸಿದ. ‘ನಾನು ಬೋರೇಗೌಡ ರಿಗಾಗಿ ಪ್ರಚಾರ ಮಾಡ್ತಿರೋದು ನಿನಗೆ ತಿಳಿದಿಲ್ಲವೇ? ಹಾಗಿದ್ದೂ ನೀವು…’ ಎಂದು ಏನೋ ಹೇಳುವಷ್ಟರಲ್ಲಿ, ಬಂದಿದ್ದವ ತೀರ ವ್ಯವಹಾರಸ್ಥನಂತೆ ‘ನೋಡಿ, ನಮಗೆ ಈ ರಾತ್ರಿ ಸಾಕಷ್ಟು ಕೆಲಸವಿದೆ. ನೀವು ಇದನ್ನು ತಗೋತೀರೋ ಇಲ್ವೋ ಅಷ್ಟು ಹೇಳಿ’ ಎಂದ.

‘ಈ ವಿಷ್ಯ…ಬೇರೆ ಯಾರಿಗೂ…ಗೊತ್ತಾಗೋದಿಲ್ಲ ತಾನೆ…?’ ಆಸೆ ಮತ್ತು ಆತಂಕ ಮಿಶ್ರಿತ ಧ್ವನಿಯಲ್ಲಿ ಕೇಳಿದ್ದ ಪುಂಡಲೀಕ.
‘ನಮಗೆ ಬೇಕಿರೋದು ಮತಗಳು ಮಾತ್ರ. ಗಾಸಿಪ್ ಹರಡೋದಲ್ಲ‌. ಅದೂ ಅಲ್ಲದೆ ಓಟು ಹಾಕೋವಾಗ ನೀನೊಬ್ಬನೇ ಇರ್ತೀಯಾ ತಾನೆ?’ ನಿರ್ಭಾವುಕನಾಗಿ ನುಡಿದ ಬಂದಿದ್ದವ ತನ್ನ ಜೊತೆ ಬಂದಿದ್ದವನನ್ನು ತಿವಿದು ಹೊರಗೆ ನಿಂತಿದ್ದ ಕಾರಿನಿಂದ ಏನೋ ತರುವಂತೆ ಸೂಚಿಸಿದ. ಅವನ ಸಹಾಯಕ ಹೋಗಿ ತರುವಷ್ಟರಲ್ಲಿ ಪುಂಡಲೀಕ ನೋಟಿನ ಮೇಲಿದ್ದ ಗಾಂಧಿಯ ಚಿತ್ರವನ್ನು ಮತ್ತೆ ಮತ್ತೆ ನೋಡಿದ.
ನಂತರ ಸಹಾಯಕ ತಂದಿದ್ದ ‘ಕಲ್ಲಿನ ಮೂರ್ತಿ’ ಯೊಂದನ್ನು ಅವನೆದರು ಇಟ್ಟು, ‘ನೀನು ನಮಗೆ ಓಟು ಹಾಕೋದಾದರೆ ಈ ಹಣ ತಗೊಂಡು ಈ ದೇವರ ಮೇಲೆ ಪ್ರಮಾಣ ಮಾಡ್ಬೇಕು. ಇಲ್ಲವಾದರೆ ದುಡ್ಡು ವಾಪಾಸ್ ತಗೋಂಡ್ ಹೋಗ್ತೀವಿ’ ಅಂದ.

ಪುಂಡಲೀಕ ಹಿಂದುಮುಂದೆ ನೋಡದೆ ಆ ದೇವರ ಮೂರ್ತಿಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ.ಪ್ರಗತಿಪರ ಪಕ್ಷದ ಕ್ಯಾಂಪೇನಿಂಗ್ ಲೀಡರ್ ತನ್ನ ಸಹಾಯಕನಿಗೆ ಆ ದೇವರ ಮೂರ್ತಿಯನ್ನು ವಾಪಾಸ್ ಒಯ್ಯುವಂತೆ ಸೂಚಿಸಿದ.ಕುಂಕುಮ , ನಿಂಬೆಹಣ್ಣು, ಮೆಣಸಿನಕಾಯಿ ಮತ್ತು ಕೋಳಿ ಪುಕ್ಕಗಳು ಅಂಟಿಕೊಂಡಿದ್ದ ಆ ಮೂರ್ತಿಯ ಮಂತ್ರಶಕ್ತಿ ಏನಿರಬಹುದೆಂದು ಪುಂಡಲೀಕನಿಗೆ ಜ್ಞಾನೋದಯವಾಯಿತು.ಅಷ್ಟರಲ್ಲಿ ಬಂದಿದ್ದವ ಬಾಗಿಲ ಬಳಿ ಹೊರಟು ನಿಂತಿದ್ದ. ಕೊನೆಯ ಪ್ರಶ್ನೆ ಎಂಬಂತೆ ಪುಂಡಲೀಕ ಅವನಿಗೆ ಕೇಳಿದ;
‘ ಬೋರೇಗೌಡನ ವಿರುದ್ಧ ಯೋಗಪ್ಪ ಜಯಗಳಿಸುವ ಯಾವ ಅವಕಾಶವೂ ಇಲ್ಲ ಎಂಬುದು ನಿಮಗೂ ಗೊತ್ತಲ್ಲವೆ? ಮತ್ಯಾಕೆ ಇಷ್ಟು ಹಣ ಹಂಚುತ್ತಿದ್ದೀರಿ ?’
ಅದಕ್ಕಾತ ಬಾಗಿಲು ದಾಟುತ್ತಲೇ ಹೇಳಿದ; ನಮಗದು ಗೊತ್ತು . ಆದರೆ ಈ ಬಾರಿ ಚುನಾವಣೆಯಲ್ಲಿ ಪ್ರಗತಿಪರ ಪ್ರಜಾ ಪಕ್ಷ ಸಾವಿರಗಳಲ್ಲಿ ಹಣ ಕೊಡುತ್ತಿದೆ ಎಂಬುದು ಜನರಿಗೆ ತಿಳಿದರೆ ಸಾಕು. ನಮ್ಮ ಗುರಿ ಈ ಚುನಾವಣೆ ಅಲ್ಲವೇ ಅಲ್ಲ…

ಅವನು ಹೋದದ್ದನ್ನು ಖಾತರಿಪಡಿಸಿಕೊಂಡ ಪುಂಡಲೀಕ ನೋಟಿನ ಕಂತೆಯನ್ನು ಗುಪ್ತವಾಗಿ ತೆಗೆದಿಟ್ಟ. ಪ್ರಾಯಶಃ ತಾನು ಕ್ಯಾಂಪೇನಿಂಗ್ ಲೀಡರ್ ಆದದ್ದಕ್ಕೆ ಸಾವಿರಾರು ರೂಪಾಯಿಗಳ ಕಂತೆ ಕೊಟ್ಟಿರಬೇಕು. ಉಳಿದವರಿಗೆಲ್ಲ ಒಂದೋ ಎರಡೋ ಸಾವಿರ ಮಾತ್ರ ಕೊಟ್ಟಿರಬಹುದು ಎಂದು ಅಂದಾಜಿಸಿಕೊಂಡು ಹೆಮ್ಮೆ ಪಟ್ಟ.

ಮತದಾನದ ದಿನ ಬಂತು. ಜನರು ತಮ್ಮ ಅಧಿಕಾರ ಚಲಾಯಿಸುವ ಐದು ವರ್ಷದ ಏಕೈಕ ದಿನ ಅದು. ಬೋರೇಗೌಡನು ತನ್ನ ಪಾಷ್ ಕಾರನ್ನು ಸರಿಯಾಗಿ ೨೦೦ ಮೀಟರ್ ವ್ಯಾಪ್ತಿಯಿಂದ ಹೊರಗೆ ನಿಲ್ಲಿಸಿಕೊಂಡು ಓನರ್ ಸೀಟಿನಲ್ಲಿ ಗತ್ತಿನಿಂದ ಕೂತು, ಬರುತ್ತಿದ್ದ ಮತದಾರರೆಡೆಗೆ ಕೈ ಬೀಸುತ್ತಿದ್ದ. ಅದಕ್ಕೆ ಕೊಂಚ ದೂರದಲ್ಲೇ ರಾಜ್ಯದಲ್ಲಿಯೇ ಫೇಮಸ್ ಆದ ಭದ್ರಾವತಿಯಿಂದ ಆರ್ಕೆಸ್ಟ್ರಾ ತಂಡ ಹಾಗೂ ಒಬ್ಬ ನೃತ್ಯಗಾರ್ತಿಯನ್ನೂ ಕರೆಸಲಾಗಿತ್ತು. ಪುಂಡಲೀಕ ಮತ್ತವನ ತಂಡ ಬಂದವರೆಲ್ಲ ಈ ಮನೋರಂಜನೆಯನ್ನು ಕಡ್ಡಾಯವಾಗಿ ಪಡೆಯುವಂತೆ ನೋಡಿಕೊಳ್ಳುತ್ತಿತ್ತು.

ಪುಂಡಲೀಕನು ತನ್ನಲ್ಲಿ ಯಾವುದೇ ಬದಲಾವಣೆ ತೋರ್ಪಡಿಸದೆ ಬರುವ ಮತದಾರರೆಲ್ಲರಿಗೂ ಕೊನೆ ನಿಮಿಷದ ಟಿಪ್ಸ್ ಕೊಡುತ್ತಿದ್ದ. ಆಗಾಗ ಬೋರೇಗೌಡನ ಕಡೆ ತಿರುಗಿ ‘ಅದೇ,ಅವರು ಕೂತಿದ್ದಾರಲ್ಲ ,ಅಂತದೇ ಕಾರಿನ ಚಿತ್ರಕ್ಕೆ ನೀವು ಓಟ್ ಹಾಕಬೇಕು. ಮತ್ತೊಂದು ಮನುಷ್ಯನ ತಲೆ ಇರೋ ಚಿತ್ರ ಇರುತ್ತೆ. ಅದನ್ನು ನೋಡಲಿಕ್ಕೆ ಹೋಗ್ಬೇಡಿ. ಅದು ತಲೆ ಇಲ್ಲದವರಿಗೆ ಮಾತ್ರ’ ಎನ್ನುತ್ತಿದ್ದ. ಇದು ಎಲ್ಲರಲ್ಲಿಯೂ ನಗೆ ಉಕ್ಕಿಸುತ್ತಿತ್ತು. ಮತದಾನ ಮಾಡಿ ಬಂದವರಿಗೆಲ್ಲ ಜ್ಯೂಸ್ , ಬೋಂಡ, ಬಿರಿಯಾನಿ,ಪಲಾವ್, ಎಳನೀರು ಅಥವಾ ಮಜ್ಜಿಗೆ ಅವರವರ ಆಯ್ಕೆಗನುಗುಣವಾಗಿ ವಿತರಿಸಿ ಸಂತುಷ್ಟರನ್ನಾಗಿ ಕಳುಹಿಸಲಾಗುತ್ತಿತ್ತು. ಇದೆಲ್ಲ ಚಾಚೂ ತಪ್ಪದೆ ನಡೆಯುವಂತೆ ಪುಂಡಲೀಕ ವ್ಯವಸ್ಥೆ ಮಾಡಿದ್ದನ್ನು ಕಂಡು ಬೋರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದ.

ತಾನು ಖಂಡಿತಾ ಗೆಲ್ಲುತ್ತೇನೆ ಎಂದು ತಿಳಿದಿದ್ದರೂ ದಿನಪತ್ರಿಕೆಗಳು ಬಣ್ಣಿಸುವಂಥ “Landslide Victory” ಅಂದರೆ ‘ದಾಖಲೆ ಗೆಲವು’ ಅವನಿಗೆ ಬೇಕಾಗಿತ್ತು. ಹಾಗಾಗಿ ಯಾವೊಂದೂ ಮತ ಜಾರಿಹೋಗದಂತೆ ನೋಡಿಕೊಳ್ಳಲು ತನ್ನ ಕ್ಯಾಂಪೇನಿಂಗ್ ಹುಡುಗರು ಮತ ಚಲಾಯಿಸುವುದು ಅಗತ್ಯ ಎಂದು ಅರಿತು, ಪುಂಡಲೀಕನನ್ನು ಕರೆದು,” ನೀನು ಹೋಗಿ ಮೊದಲ ಓಟ್ ಹಾಕಿ ಬಾ. ನಂತರ ಅವರನ್ನೆಲ್ಲ ಕಳಿಸು” ಎಂದು ಸೂಚಿಸಿದ.

ಬೆಳಗ್ಗೆಯಿಂದ ಮುಖವಾಡ ಧರಿಸಿದಂತಿದ್ದ ಪುಂಡಲೀಕನಿಗೆ ಚುನಾವಣಾ ಕೊಠಡಿಯೊಳಗೆ ಹೋಗುವಾಗ ಮೈ ಬೆವರಿತು. ಏನನ್ನೂ ತೋರದಂತೆ ಬೂತ್ ಬಳಿ ಹೋದ. ಹೊರಗಿದ್ದ ಪೋಲೀಸ್ ಆಫೀಸರ್ ಯಾವುದಾದರೂ ಕಾನೂನುಬಾಹಿರ ಬ್ಯಾಲೆಟ್ ಪೇಪರ್ ಇವನ ಬಳಿಯೇನಾದರೂ ಇದೆಯಾ ಎಂದು ಪರೀಕ್ಷಿಸಿ ಒಳಗೆ ಕಳುಹಿಸಿದ. ಚುನಾವಣಾ ಅಧಿಕಾರಿ ಮತದಾನದ ಬಗ್ಗೆ ಎಲ್ಲವನ್ನೂ ವಿವರಿಸಿದ. ಮತ್ತೊಬ್ಬ ಅವನ ಮರು ಪ್ರವೇಶವನ್ನು ನಿಷೇಧಿಸುವ ಸಲುವಾಗಿ ಅಳಿಸದ ಇಂಕ್ ನ್ನು ಬೆರಳಿಗೆ ಹಚ್ಚಿದ. ನಂತರ ಬ್ಯಾಲೆಟ್ ಪೇಪರ್ ಹಾಕುವ ಬಾಕ್ಸ್ ಬಳಿ ಬಂದು ನಿಂತ ಪುಂಡಲೀಕನಿಗೆ “ಕಾರು” ಮತ್ತು ” ಮನುಷ್ಯನ ತಲೆ” ಎರಡರ ಮಧ್ಯೆ ಗೊಂದಲ ಶುರುವಾಯಿತು. ತನ್ನನ್ನು ಮುಗ್ಧವಾಗಿ ನಂಬಿರುವ, ಸಾಕಷ್ಟು ಸವಲತ್ತು ಮಾಡಿಕೊಟ್ಟಿರುವ ಬೋರೇಗೌಡರಿಗೆ ರಹಸ್ಯದಲ್ಲಾದರೂ ಮೋಸ ಮಾಡುವುದು ಸರಿಯೆ? ಎಂಬ ಯೋಚನೆ ಬಂದು ನೊಂದುಕೊಂಡ‌. ತನಗೆ ಆ ದುಡ್ಡಿನ ಸಹವಾಸವೇ ಬೇಡ.ಈಗಲೇ ಹೋಗಿ ಶತ್ರು ಪಕ್ಷದವ ನೀಡಿದ್ದ ದುಡ್ಡನ್ನು ವಾಪಸ್ಸು ಕೊಟ್ಟು ಬಿಡುತ್ತೇನೆಯೇ ಹೊರತು ಬೋರೇಗೌಡನಿಗೆ ಮೋಸ ಮಾಡಲಾರೆ ಎಂದುಕೊಂಡ. ಆದರೆ ತಕ್ಷಣ ತಾನು ಪ್ರಮಾಣ ಮಾಡಿದ ದೇವರ ಮೂರ್ತಿ,ನಿಂಬೆಹಣ್ಣು ಗಳೊಂದಿಗೆ ಅವನ ಕಣ್ ಮುಂದೆ ಬಂತು. ಅದೂ ಅಲ್ಲದೆ ಆ ನೋಟುಗಳ ಮೇಲಿದ್ದ ಗಾಂಧಿ ಯ ಚಿತ್ರವೂ ಅವನನ್ನು ಆಕರ್ಷಿಸುತ್ತಲೇ ಹೋಯಿತು. ಏನು ಮಾಡಬೇಕೆಂದು ತಿಳಿಯದೇ ಅಲ್ಲೇ ನಿಂತ. ಅಷ್ಟೊತ್ತಾದರೂ ಅವನು ಹೊರಗೆ ಬಾರದ್ದನ್ನು ಗಮನಿಸಿದ ಪೋಲೀಸ್, “ಯಾರ್ರೀ ಅವನು? ಒಂದು ಬ್ಯಾಲೆಟ್ ಪೇಪರ್ ನ ಬಾಕ್ಸ್ ಗೆ ಹಾಕೋಕೆ ಎರಡು ತಾಸು ಬೇಕೇನ್ರಿ ಅವನಿಗೆ?” ಎಂದ.
ಪುಂಡಲೀಕನಿಗೆ ಏನೋ ಹೊಳೆದಂತಾಯಿತು. ತನ್ನ ಕೈ ಯಲ್ಲಿದ್ದ ಬ್ಯಾಲೆಟ್ ಪೇಪರನ್ನು ಸರಿಯಾಗಿ ಎರಡು ತುಂಡಾಗಿಸಿದ. ಎರಡೂ ಬಾಕ್ಸ್ ಗಳಲ್ಲೂ ತಲಾ ಒಂದೊಂದು ಕಾಗದದ ಚೂರು ಹಾಕಿದ. ಅದರಲ್ಲೂ ಮೊದಲನೆಯದನ್ನು ಮನುಷ್ಯನ ತಲೆಯ ಚಿತ್ರವಿದ್ದ ಬಾಕ್ಸ್ ಗೆ ಹಾಕಿ,’ನಾನು ಯೋಗಪ್ಪನಿಗೆ ಓಟ್ ಹಾಕಿದೆ’ ಎಂದು ಹೇಳಿಕೊಂಡ. ಆ ದೇವರಿಗೆ ಕೇಳಿಸಲಿ ಎಂದಿರಬೇಕು. ನಂತರ ಮಾಮೂಲಿನಂತೆ ಹೊರಬಂದು ತನ್ನ ಕೆಲಸದಲ್ಲಿ ತೊಡಗಿದ.

‘ಎಲ್ಲಾ ಸರಿಯಾಗಿ ನಡೀತಿದ್ಯಾ ಒಳಗಡೆ ?’ ಬೋರೇ ಗೌಡರು ಕೇಳಿದರು‌
‘ಹೌದು. ಎಲ್ಲ ಸರಿಯಾಗಿಯೇ ನಡೀತಿದೆ’ ಎಂದು ಉತ್ತರಿಸಿದ ಪುಂಡಲೀಕನು ಆ ದಿನ ಮತದಾನ ಮಾಡುತ್ತಿರುವವರಲ್ಲಿ ತನ್ನಂಥ ‘ಪುಂಡಲೀಕರು’ ಎಷ್ಟು ಜನರಲ್ಲಿ ಸೇರಿಕೊಂಡಿರಬಹುದೆಂದು ಯೋಚಿಸತೊಡಗಿದ…

‍ಲೇಖಕರು avadhi

2 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading