-ಎ ಆರ್ ಮಣಿಕಾಂತ್
ಕೇಳಿಸದೆ ಕಲ್ಲು ಕಲ್ಲಿನಲಿ…
ಚಿತ್ರ: ಬೆಳ್ಳಿ ಕಾಲುಂಗುರ ಗೀತರಚನೆ; ದೊಡ್ಡರಂಗೇಗೌಡ
ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಿ-ಚಿತ್ರಾ
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ,
ಪ್ರೀತಿಸುವ ಹೃದಯ ಬೇಡಿದೆ, ಕೇಳು ನೀನು ||ಪ||
ಭೂರಮೆಯೆ ಆಧಾರ ಈ ಕಲೆಯೇ ಸಿಂಗಾರ
ಬಂಗಾರ ತೇರೇರಿ ಮೂಡಣವೇ ಸಿಂಧೂರ
ದಿನದಿನದಿನ ಹೊಸತಾಗಿದೆ
ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ
ಸ್ವರಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ
ಕಣಕಣಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು ||೧||
ಗಾಳಿಯೇ ಆದೇಶ ಮೇಘವೆ ಸಂದೇಶ
ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ
ಋತು ಋತುಗಳು ನಿನ್ನ ಕಾದಿವೆ
ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ
ನವರಸವು ಮೈ ತಾಳಿ ಜೀವನದ ಜೋಕಾಲಿ
ಯುಗಯುಗದಲ್ಲೂ ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು ||೨||
ಕೆಲವೊಂದು ಸಿನಿಮಾಗಳಲ್ಲಿ ನಾಯಕ, ನಾಯಕಿ ಅಥವಾ ಪೋಷಕ ನಟರು ಕನ್ನಡ ನಾಡಿನ ಹಿರಿಮೆಯನ್ನು ವರ್ಣಿಸುವಂಥ ಸಂದರ್ಭ ಬರುತ್ತದೆ. ಇಂಥ ಸಂದರ್ಭಗಳಲ್ಲೆಲ್ಲ ನಿರ್ದೇಶಕರು ಹೆಚ್ಚಾಗಿ ಹಾಡುಗಳನ್ನು ಅಳವಡಿಸಿಬಿಡುತ್ತಾರೆ. ನೂರು ಮಾತುಗಳಲ್ಲಿ ಹೇಳುವುದಕ್ಕಿಂತ ಒಂದು ಹಾಡಿನಲ್ಲಿ ಕನ್ನಡ ನಾಡಿನ ಮಹತ್ವ ಸಾರಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಸ್ವಾರಸ್ಯವೆಂದರೆ, ಬಹುಪಾಲು ಎಲ್ಲ ಚಿತ್ರಗಳಲ್ಲೂ ಕನ್ನಡ ನಾಡಿನ ವೈಭವ ಸಾರುವ ಹಾಡುಗಳು ಎಲ್ಲರ ನಿರೀಕ್ಷೆ ಮೀರಿ ಯಶಸ್ವಿಯಾಗಿವೆ.
ಈ ಮಾತಿಗೆ ಸಾಕ್ಷಿ ಎಂಬಂತೆ ನಾಗರಹಾವು ಚಿತ್ರದ ಓಬವ್ವನ ಹಾಡು, ಚಲಿಸುವ ಮೋಡಗಳು ಚಿತ್ರದ ‘ಜೇನಿನ ಮಳೆಯೊ ಹಾಲಿನ ಹೊಳೆಯೊ’, ತಾಯಿಯ ಮಡಿಲಲ್ಲಿ ಚಿತ್ರದ ‘ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ’, ‘ವಿಜಯನಗರದ ವೀರಪುತ್ರ’ ಚಿತ್ರದ ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು, ‘ನಾನು ನನ್ನ ಹೆಂಡ್ತಿ’ ಸಿನಿಮಾದ ‘ಕರುನಾಡ ತಾಯಿ ಸದಾ ಚಿನ್ಮಯಿ’, ‘ಆಕಸ್ಮಿಕ’ದ ‘ಹುಟ್ಟಿದರೆ ಕನ್ನಡದ ನಾಡಲ್ಲಿ ಹುಟ್ಟಬೇಕು’, ‘ಗಂಧದ ಗುಡಿ’ಯ ‘ನಾವಾಡುವ ನುಡಿಯೇ ಕನ್ನಡ ನುಡಿ’ ಗೀತೆಗಳನ್ನು ಉದಾಹರಿಸಬಹುದು. ಈ ಸಾಲಿಗೆ ಸೇರುವ ಮತ್ತೊಂದು ಹಾಡಿದೆ. ಅದೇ ಬೆಳ್ಳಿ ಕಾಲುಂಗುರ ಚಿತ್ರದ -‘ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ…!
ನಾಡ ವೈಭವ ಸಾರುವ ಹಾಡುಗಳನ್ನು ಕೇಳಿದಾಗ ಒಂದು ಪ್ರಶ್ನೆ ಬಿಡದೆ ಕಾಡುತ್ತದೆ; ಏನೆಂದರೆ, ಹದಿನಾರೋ, ಇಪ್ಪತ್ತೆರಡೋ ಸಾಲಿನ ಹಾಡುಗಳಲ್ಲಿ ಕನ್ನಡ ನಾಡಿನ ಇತಿಹಾಸ, ಪ್ರಕೃತಿ ವೈಭವ, ರಾಜಮಹಾರಾಜರ ಚರಿತೆ, ದೇವಾಲಯಗಳ ಮಹತ್ವವನ್ನೆಲ್ಲ ಹೇಳಿಬಿಡುತ್ತಾರಲ್ಲ? ಈ ಮ್ಯಾಜಿಕ್ ಚಿತ್ರ ಸಾಹಿತಿಗಳಿಗೆ ಹೇಗೆ ಸಾಧ್ಯವಾಗಿಬಿಡುತ್ತದೆ? ಇಂಥ ಹಾಡು ಬರೆಯುವ ಮುನ್ನ ಅವರು ಆಯ್ದ ಸ್ಥಳಗಳಿಗೆ (ಅಂದರೆ, ಹಾಡಿನಲ್ಲಿ ತಾವು ಬರೆಯಬೇಕೆಂದಿರುವ ಸ್ಥಳಗಳಿಗೆ) ಟೂರ್ ಹೋಗಿ ಬರುತ್ತಾರಾ? ನಂತರ ತಾವು ಕಂಡದ್ದನ್ನೆಲ್ಲ ಅಕ್ಷರಗಳಲ್ಲಿ ಹಿಡಿದಿಡುತ್ತಾರಾ?
‘ಬೆಳ್ಳಿ ಕಾಲುಂಗುರ’ದ ಹಾಡು ಕೇಳಿದ ನಂತರ ಇಂಥದೊಂದು ಅನುಮಾನ ಮತ್ತೆ ಮತ್ತೆ ಕಾಡಿತು. ಅದನ್ನೇ ಕವಿ ದೊಡ್ಡರಂಗೇಗೌಡರಿಗೆ ದಾಟಿಸಿ, ಈ ಹಾಡು ಹುಟ್ಟಿದ ಕಥೆ ಹೇಳ್ತೀರಾ ಸಾರ್ ಅಂದರೆ-ಗೌಡರು ಶುರುಮಾಡಿಯೇ ಬಿಟ್ಟರು. ಆ ಕಥೆಯನ್ನು ಗೌಡರ ಮಾತುಗಳಲ್ಲೇ ಕೇಳೋಣ ಬನ್ನಿ.
***
‘ಅದು ೧೯೬೦ರ ಮಾತು. ನಾನಾಗ ಕಾಲೇಜು ವಿದ್ಯಾರ್ಥಿ. ಕಾಲೇಜಿಗೆ ಚಕ್ಕರ್ ಹೊಡೆದಾದ್ರೂ ಸರಿ, ರಾಜ್‌ಕುಮಾರ್ ಚಿತ್ರಗಳನ್ನು ಬಿಡುಗಡೆಯಾದ ದಿನವೇ, ಅದೂ ಏನು? ಮೊದಲ ಶೋನಲ್ಲಿ ನೋಡಿದ್ರೇ ನನಗೆ ಸಮಾಧಾನ ಆಗ್ತಿತ್ತು. ಸಾ.ರಾ. ಗೋವಿಂದು ಹಾಗೂ ಗೋವಿಂದನಹಳ್ಳಿ ದೇವೇಗೌಡರು ಆಗ ಕನ್ನಡ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರಿಬ್ಬರೂ ಆಗಲೂ-ಈಗಲೂ ಡಾ. ರಾಜ್ ಅಭಿಮಾನಿಗಳು. ರಾಜ್ ಸಿನಿಮಾಗಳನ್ನು ಮೊದಲ ಪ್ರದರ್ಶನದಲ್ಲಿಯೇ ನೋಡಬೇಕು ಎಂಬ ಹಂಬಲ ಅವರಿಗೂ ಇತ್ತು. ನಾವು ಮೂವರೂ ಆ ದಿನಗಳಿಂದಲೂ ಫ್ರೆಂಡ್ಸ್. ಸಿನಿಮಾ, ಹೋರಾಟ, ತಿರುಗಾಟ, ಕಾಫಿ… ಇಂಥ ಸಂದರ್ಭಗಳಲ್ಲಿ ನಾವು ಜತೆಗೇ ಇರ್ತಿದ್ವಿ. ಮುಂದೆ ನಾನು ಉಪನ್ಯಾಸಕನಾದೆ. ಈ ವೇಳೆಗೆ ಸಾ.ರಾ. ಗೋವಿಂದು ಅವರಿಗೆ ಗಾಂನಗರದ ಹಾಗೂ ಚಿತ್ರರಂಗದ ಪರಿಚಯ ಚೆನ್ನಾಗಿತ್ತು. ಅವರು ಅವಾಗವಾಗ ನನ್ನೊಂದಿಗೆ ಮಾತಾಡುತ್ತಾ-‘ಮೇಷ್ಟ್ರೆ, ಮುಂದೊಂದು ದಿನ ನಾನು ಸಿನಿಮಾ ಮಾಡಿದ್ರೆ ಅದಕ್ಕೆ ಕನ್ನಡದ ಹಾಡನ್ನು ನೀವೇ ಬರೀಬೇಕು’ ಅಂತಿದ್ರು.
ಮುಂದೆ ಅಂಥ ಕಾಲವೂ ಬಂತು. ೧೯೯೨ರಲ್ಲಿ ಬೆಳ್ಳಿ ಕಾಲುಂಗುರ ಎಂಬ ಸಿನಿಮಾ ನಿರ್ಮಿಸಲು ಮುಂದಾದ ಸಾ.ರಾ. ಗೋವಿಂದು, ಸಂಗೀತ ನಿರ್ದೇಶನಕ್ಕೆ ಹಂಸಲೇಖಾ ಅವರನ್ನು ಆಯ್ಕೆ ಮಾಡಿಕೊಂಡರು. ಅದೊಂದು ದಿನ ಹಂಸಲೇಖಾ ಬಳಿ ಬಂದು ಹೀಗೆಂದರು ‘ಸಾರ್, ನಮ್ಮ ಸಿನಿಮಾಕ್ಕೆ ಒಂದು ಕನ್ನಡದ ಹಾಡುಬೇಕು. ಅದನ್ನು ಮಾತ್ರ ದೊಡ್ಡರಂಗೇಗೌಡ್ರು ಬರೀತಾರೆ. ಉಳಿದವನ್ನು ನೀವು ಬರೀರಿ…’
ಈ ವೇಳೆಗೆ ನಾನು ಪ್ರೇಮಗೀತೆ ಬರೆದಿದ್ದೆ. ವಿಷಾದ ಗೀತೆಗೂ ಕೈ ಆಡಿಸಿದ್ದೆ. ಪ್ರಕೃತಿ ವರ್ಣನೆಯ ಹಾಡನ್ನೂ ಹೆಣೆದು ಗೆದ್ದಿದ್ದೆ. ಆದೆ ಕನ್ನಡ ಪರವಾದ ಹಾಡು ಬರೆದಿರಲಿಲ್ಲ. ಹಾಗಾಗಿ ಮೊದಲ ಪ್ರಯತ್ನದಲ್ಲಿ ಒಳ್ಳೆಯ ಹಾಡನ್ನೇ ಬರೆಯಬೇಕು ಎಂದು ನಿರ್ಧರಿಸಿದೆ.
ಹಾಡು, ಸಂಭಾಷಣೆ, ಚಿತ್ರಕಥೆಗೆ ಸಂಬಂಸಿದಂತೆ ಕೆಲಸ ನಡೆಯಬೇಕಲ್ಲ? ಅದಕ್ಕೆಂದೇ ಸಾ.ರಾ. ಗೋವಿಂದು ಅವರು ಗಾಂನಗರದ ಸಂಗೀತಾ ಹೋಟೆಲಿನಲ್ಲಿ ರೂಂ ಬುಕ್ ಮಾಡಿದ್ರು. ‘ಬೆಳ್ಳಿ ಕಾಲುಂಗುರ’ಕ್ಕೆ ಕೆ.ವಿ. ರಾಜು ನಿರ್ದೇಶಕರು. ದಿನವೂ ಸಂಜೆ ೪ ರಿಂದ ರಾತ್ರಿ ೯.೩೦ರ ತನಕ ಯಾವ ದೃಶ್ಯ ಹೇಗಿರಬೇಕು ಎಂಬ ಬಗ್ಗೆ ಅಲ್ಲಿ ಚರ್ಚೆ ನಡೀತಿತ್ತು. ‘ಸಾರ್, ಕಥಾನಾಯಕ ಹಂಪಿಗೆ ಬಂದಿರ್‍ತಾನೆ. ಆಗ ತಂಗಾಳಿಯಲ್ಲಿ ಸಂಗೀತದ ನಿನಾದ ಕೇಳಿಬರುತ್ತೆ. ಅದೇನು ಎಂದು ಕುತೂಹಲಗೊಂಡಿದ್ದಾಗಲೇ ಹಾಡು ಶುರುವಾಗುತ್ತೆ. ಅದು ನಾಯಕ-ನಾಯಕಿ ಇಬ್ಬರೂ ಹಾಡುವ ಹಾಡು. ಮತ್ತು ಇದು ನೀವು ಬರೆಯಬೇಕಿರುವ ಹಾಡು’ ಎಂದರು ಕೆ.ವಿ. ರಾಜು. ಈ ವೇಳೆಗೆ ಹಂಸಲೇಖ ಟ್ಯೂನ್ ನೀಡಿದ್ದರು.
‘ಹಂಪಿಯಲ್ಲಿ ಹಾಡು’ ಎಂದರಲ್ಲ? ಆ ಮಾತೇ ನನಗೆ ಮುಖ್ಯವಾಯಿತು. ತಕ್ಷಣವೇ ನಾನು -‘ಸಾರ್, ಹಂಪಿಯಲ್ಲಿ ಪ್ರತಿ ಕಲ್ಲೂ ಕತೆ ಹೇಳುತ್ತೆ’ ಅಂದೆ. ರಾಜು-‘ ಹಾಗಿದ್ದ ಮೇಲೆ ತಡವೇಕೆ ಸಾರ್? ಮುಂದುವರಿಸಿ’ ಎಂದರು. ಈ ಸಂದರ್ಭದಲ್ಲಿ ನನಗೆ ‘ಎಚ್ಚಮನಾಯಕ’ ನಾಟಕ ನೆನಪಾಯಿತು. ೧೯೬೧ರಲ್ಲಿ ಬಿಹಾರದಲ್ಲಿ ಪ್ರವಾಹ ಬಂದಿತ್ತು. ಸಾವಿರಾರು ಮಂದಿ ಮನೆಮಠ ಕಳೆದುಕೊಂಡಿದ್ರು. ಆಗ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನಿ ಸಂಗ್ರಹಕ್ಕೆ ಸಹಕಲಾವಿದರ ನೇತೃತ್ವದಲ್ಲಿ ಡಾ. ರಾಜ್ ಪಾದಯಾತ್ರೆ ಮಾಡಿದ್ದರು.
ಆ ಸಂದರ್ಭದಲ್ಲಿ ಅವರು ‘ಎಚ್ಚಮನಾಯಕ’ ನಾಟಕದ ಸಂಭಾಷಣೆಯನ್ನು ಸತತ ಮೂವತ್ತು ನಿಮಿಷ ಹೇಳ್ತಿದ್ರು. ಅವರ ಮಾತು, ಹಾವ-ಭಾವ, ಧ್ವನಿಯ ಏರಿಳಿತದಲ್ಲಿ ನವರಸ ಅಂತೀವಲ್ಲ? ಅದಿತ್ತು. ಅವರ ಮಾತಿಗೆ ಅಪರೂಪದ ಸಮ್ಮೋಹಕ ಶಕ್ತಿ ಇತ್ತು. ವೀರಾವೇಶದ ಅವರ ಮಾತು ಕೇಳ್ತಿದ್ರೆ- ನಮ್ಮೆದುರು ನಿಂತು ಮಾತಾಡ್ತಾ ಇರೋದು ರಾಜ್‌ಕುಮಾರ್ ಅಲ್ಲ, ಸಾಕ್ಷಾತ್ ಎಚ್ಚೆಮನಾಯಕ ಅನ್ನಿಸಿಬಿಡ್ತಿತ್ತು. ಹಂಪಿಯ ಹಳೆಯ ವೈಭವವೆಲ್ಲ ಕಣ್ಮುಂದೆ ಬಂದು ನಿಂತಂತೆ ಆಗ್ತಿತ್ತು. ‘ಬೆಳ್ಳಿ ಕಾಲುಂಗುರ’ಕ್ಕೆ ಹಾಡು ಬರೆಯಬೇಕಾದ ಸಂದರ್ಭದಲ್ಲಿ ಇದನ್ನೆಲ್ಲ ನೆನಪು ಮಾಡಿಕೊಂಡೆ. ಇತಿಹಾಸ ಮತ್ತು ಕನ್ನಡ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದೆನಲ್ಲ? ಅದೆಲ್ಲ ಈ ಹಾಡು ಬರೆಯುವ ಸಂದರ್ಭದಲ್ಲಿ ನೆರವಿಗೆ ಬಂತು.
ಕೃಷ್ಣದೇವರಾಯನ ಕಾಲದಲ್ಲಿ ಹಂಪಿಯಲ್ಲಿ ಬೀದಿಬೀದಿಯಲ್ಲಿ ಕೊಳಗಗಳಲ್ಲಿ ಚಿನ್ನ ಮಾರುತ್ತಿದ್ದರಂತೆ ಎಂಬ ಮಾತುಗಳನ್ನು ನಾನೂ ಕೇಳಿದವನೇ. ಅಲ್ಲಿನ ವಿಜಯ ವಿಠ್ಠಲ ದೇವಾಲಯದಲ್ಲಿರುವ ಕಂಬಗಳಿಂದ ‘ಸರಿಗಮಪದನಿಸ’ ಕೇಳಿಸುತ್ತದೆ ಎಂಬುದು ಇಂದಿಗೂ ಸತ್ಯ ತಾನೆ? ಈ ಹಾಡು ಬರೆಯುವಾಗ ಅದೆಲ್ಲ ನೆನಪಾಯಿತು. ಒಂದು ವೇಳೆ, ಕಂಬಗಳಿಂದ ಹೊರಟ ನಿನಾದದಂತೆಯೇ ತುಂಗಭದ್ರೆಯ ಹರಿವೂ ಸದ್ದು ಮಾಡಿದರೆ ಹೇಗಿರಬಹುದು ಅನ್ನಿಸಿತು. ಇದೇ ಸಂದರ್ಭಕ್ಕೆ ಹಂಪಿಯ ಪ್ರತಿಯೊಂದು ಕಲ್ಲೂ ಒಂದು ಕಥೆ ಹೇಳುತ್ತದೆ. ಒಂದೊಂದು ಕಲ್ಲೂ ಕನ್ನಡಿಗರನ್ನು ಕೈ ಬೀಸಿ ಕರೆಯುತ್ತದೆ’ ಅನ್ನಿಸಿತು. ಅದನ್ನೇ ಕಣ ಕಣ ಕಣ ಕರೆ ನೀಡಿದೆ’ ಎಂದು ಬದಲಿಸಿಕೊಂಡೆ. ಇಲ್ಲಿ ‘ಕಣ ಕಣ’ ರಕ್ತದ ಕಣವಲ್ಲ. ಅಥವಾ ಆವೇಶ ಎಂದು ಅರ್ಥವಲ್ಲ, ಹಂಪಿಯಲ್ಲಿ ಬಿದ್ದಿರುವ ಕಲ್ಲಿನ ತುಣುಕುಗಳು ಎಂದು ಅರ್ಥ.
ಎರಡನೇ ಚರಣ ಬರೆಯುವಾಗ ‘ಯುಗ ಯುಗದಲ್ಲೂ ನಿನ್ನ ಕಾಯುವೆ’ ಎಂಬ ಸಾಲಿದೆ. ಅದರಲ್ಲಿ ಎರಡು ಅರ್ಥ. ಒಂದು ಪ್ರೀತಿಯ ವೈಭ ವೀಕರಣ. ಇನ್ನೊಂದು ಹಂಪಿಯನ್ನು, ಕನ್ನಡದ ಅಭಿಮಾನವನ್ನು ಯುಗ ಯುಗವೂ ಕಾಯುವೆ’ ಎಂಬ ಕನ್ನಡದ ಕಂದನ ಕಳಕಳಿ. ಹೀಗೆ, ಒಂದೇ ಸಾಲಿನಲ್ಲಿ ಎರಡು ಅರ್ಥ ಬಂದಾಗ, ಹಾಡು ಹೆಚ್ಚು ಜನರನ್ನು ತಲುಪುತ್ತೆ ಅನ್ನಿಸಿತು. ಹಾಗೆಯೇ ಮೊದಲ ಹಾಗೂ ಎರಡನೇ ಚರಣದ ಕಡೆಯ ಸಾಲುಗಳು- ಈ ಹಾಡು ಬರೆವ ಸಂದರ್ಭದಲ್ಲಿ ನನಗೇ ಅನಿಸಿದ್ದು ಇಷ್ಟು; ಒಬ್ಬ ಹುಡುಗಿ ಅಂದುಕೊಳ್ಳಿ. ಅವಳ ಪ್ರೀತಿಯ ಹುಡುಗ ಸಂಭ್ರಮದಿಂದ ಹಾಡಿದರೆ ಅವಳಿಗೆ ತುಂಬ ಖುಷಿಯಾಗುತ್ತದೆ ಅಷ್ಟೆ. ಹುಡುಗಿಯರ ಲೋಕದ ಲೆಕ್ಕಾಚಾರಗಳು ಅದರಿಂದಾಚೆಗೆ ಹೋಗುವುದಿಲ್ಲ. ಆದರೆ ಹುಡುಗರ ವಿಷಯದಲ್ಲಿ ಹಾಗಲ್ಲ: ಅವಳು ಬಂದರೆ ಆ ಸಂಭ್ರಮಕ್ಕೆ ಅವನ ಜಗತ್ತೇ ಬೆಳಗುತ್ತದೆ. ಅವನ ಬದುಕಲ್ಲಿ ಬೆಳಕಾಗುತ್ತದೆ ಅನ್ನಿಸಿತು…
ಹಾಡುಬರೆಯಲು ಕೂತಾಗ ಇದನ್ನೆಲ್ಲ ಲೆಕ್ಕಾಚಾರ ಮಾಡಿಕೊಂಡೆ. ಈ ಹಾಡು ಬರೆವ ಸಂದರ್ಭದಲ್ಲಿ ನನ್ನ ಮನದ ತುಂಬಾ ಹಂಪಿಯ ವೈಭವ, ಆ ಸೀಮೆಯ ಸೊಬಗು, ರಾಜ್‌ಕುಮಾರ್ ಹೇಳುತ್ತಿದ್ದ ಎಚ್ಚಮನಾಯಕನ ಸಂಭಾಷಣೆ, ಕುವೆಂಪು ಅವರ ಕನ್ನಡ ಪ್ರೇಮದ ಮಾತುಗಳೇ ತುಂಬಿಕೊಂಡಿದ್ದವು. ಮುಂದೆ, ಇವೆಲ್ಲಾ ಒಂದೊಂದೇ ಚೆಂದದ ಸಾಲುಗಳಾದಾಗ, ಹಾಡು ಸಿದ್ಧವಾಗಿ ಹೋಯಿತು. ನಿಜ ಹೇಳಬೇಕೆಂದರೆ ಆ ಹಾಡು ಬರೆಸಿದವಳು ಕನ್ನಡಾಂಬೆ. ನಾನು ನಿಮಿತ್ತ ಮಾತ್ರ…’
ಇಷ್ಟು ಹೇಳಿ ಮೌನವಾದರು ದೊಡ್ಡರಂಗೇಗೌಡ.]]>
ಮಣಿಕಾಂತ್ ಬರೆಯುತ್ತಾರೆ: ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ
ನಿಮಗೆ ಇವೂ ಇಷ್ಟವಾಗಬಹುದು…



0 Comments