ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಣಿಕಾಂತ್, ನಾಗೇಶ್ ಹೆಗಡೆ ಮತ್ತು ಮದ್ದೂರು ವಡೆ

ಎ ಆರ್ ಮಣಿಕಾಂತ್

ಇದು ೧೯೯೨ ರ ಮಾತು. ನಾನಾಗ ಇಂಜಿನಿಯರಿಂಗ್ ನಲ್ಲಿ ಡುಮ್ಕಿ ಹೊಡೆದಿದ್ದೆ. ಫೇಲ್ ಆದರೆ ಆ ವರ್ಷ ಪೂರ್ತಿ ನಯಾ ಪೈಸೆ ಕೊಡುವುದಿಲ್ಲ ಎಂಬುದು ಅಪ್ಪ ಹಾಕಿದ್ದ ಕರಾರು. ಆದರೆ ಮೇಷ್ಟ್ರು ಮಾಡುವ ಪಾಠವೇ ಕೇಳಿಸದೆ ಇರುವಾಗ ನಾನು ಚೆನ್ನಾಗಿ ಓದುವುದು ಹೇಗೆ? ಅಪ್ಪನಿಗೆ ನನ್ನ ಸಂಕಟ ಅರ್ಥವಾಗಲಿಲ್ಲ . ಅವರು ಕೈ ಚೆಲ್ಲಿ ಬಿಟ್ಟರು .
ಈ ಸಂದರ್ಭದಲ್ಲಿ ಗೆಳೆಯರು ರೂಮ್ನಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟರು. ಆದರೆ ಊಟ ತಿಂಡಿಗೆ ದುಡ್ಡು ಬೇಡವೆ? ಊಟದ ಸಮಸ್ಯೆ ಹೇಗೋ ಬಗೆ ಹರಿಯುತ್ತಿತ್ತು . ಆದರೆ ತಿಂಡಿ ಮತ್ತು ಇತರೆ ಖರ್ಚುಗಳನ್ನು ನಿಭಾಯಿಸಲು ನನ್ನಲ್ಲಿ ಕಾಸೇ ಇರುತ್ತಿರಲಿಲ್ಲ .
ಸಂದರ್ಭ ಹೀಗಿದ್ದಾಗಲೇ ಗೆಳೆಯ ಜಿ. ಕೃಷ್ಣ ಪ್ರಸಾದ್ -‘ಕನ್ನಡದ ಎಲ್ಲ ಪತ್ರಿಕೆಗಳಿಗೆ ಲೇಖನ ಬರೆ. ಲೇಖನಕ್ಕೆ ಅಗತ್ಯವಿರುವ ಚಿತ್ರಗಳನ್ನು ನಾನು ತೆಗೆದುಕೊಡ್ತೇನೆ . ನನಗೆ ಹಣದ ಅಗತ್ಯ ಇಲ್ಲ . ಹಾಗಾಗಿ ಬರುವ ಎಲ್ಲಾ ಸಂಭಾವನೆಯನ್ನೂ ನೀನೇ ಇಟ್ಕೋ ‘ ಅಂದ . ಬದುಕಿಗೆ ಒಂದು ದಾರಿ ಕಾಣಿಸಿದ ಹಾಗಾಯಿತು . ಅವತ್ತಿನ ಪರಿಸ್ಥಿತಿ ಎಷ್ಟು ಕೆಟ್ಟದಿತ್ತು ಅಂದರೆ , ಲೇಖನ ಬರೆಯಲು ಅಗತ್ಯವಿದ್ದ ಬಿಳಿ ಹಾಳೆಗೂ ಗತಿ ಇರಲಿಲ್ಲ . ನಮ್ಮ ಕಾಲೇಜ್ ನ ಆಡಳಿತ ವಿಭಾಗದ ಕ್ಲರ್ಕ್ ಬಳಿ ಕಾಡಿ ಬೇಡಿ ೧೪-೧೫ ಹಾಳೆ ತಗೊಂಡು ಬಂದು ಒಂದೇ ಬಾರಿಗೆ ೪-೫ ಪತ್ರಿಕೆಗಳಿಗೆ ಲೇಖನ ಬರೆಯುವುದು , ಅವುಗಳ ಪ್ರಕಟಣೆಗೆ ಕಾಯುವುದು ನಂತರದ ದಿನಗಳಲ್ಲಿ ಅಭ್ಯಾಸವಾಯಿತು.
ಹೀಗಿದ್ದಾಗಲೇ – ಮದ್ದೂರ್ ನ ರೈಲು ನಿಲ್ದಾಣದ ಬಳಿಯ ಹೋಟೆಲ್ ನಲ್ಲಿ ತಯಾರಾಗುವ ಮದ್ದೂರ್ ವಡೆ ಗೆ ೯೯ ವರ್ಷದ ಇತಿಹಾಸ ಇದೆ ಎಂದೂ , ಆ ಬಗ್ಗೆ ಲೇಖನ ಬರೆಯಬಹುದು ಎಂದೂ ಗೆಳೆಯರೊಬ್ಬರು ತಿಳಿಸಿದರು . ಕೃಷ್ಣ ಪ್ರಸಾದ್ ಗೆ ಈ ವಿಷಯ ತಿಳಿಸಿದೆ. “ಮಣೀ , ಈ ಸುದ್ದಿನ ಪ್ರಜಾವಾಣಿ ಯ ಕರ್ನಾಟಕ ದರ್ಶನ ವಿಭಾಗಕ್ಕೆ ಕಳಿಸೋಣ . ಯಾಕೆ ಗೊತ್ತಾ?ಆ ಸೆಕ್ಷನ್ ನಲ್ಲಿ ಇಂಥ ಬರಹಗಳಿಗೆ ಸಂಬಂಧಿಸಿದ ೪-೫ ಫೋಟೋ ಖಂಡಿತ ಹಾಕ್ತಾರೆ . ಒಂದು ಫೋಟೋ ಗೆ ೧೦೦ ರುಪಾಯಿ ರಾಯಲ್ಟಿ . ೫ ಫೋಟೋ ಬಂದ್ರೆ ೫೦೦ ರುಪಾಯಿ ಫೋಟೋ ಗೆ, ಪ್ಲಸ್ ೧೫೦ ರುಪಾಯಿ ಬರಹಕ್ಕೆ . ಅಷ್ಟು ದುಡ್ಡು ಬಂದ್ರೆ ನೀನು ೨ ತಿಂಗಳು ಆರಾಮ್ ಇರಬಹುದು ಕಣೋ “ಅಂದ .
ಅವತ್ತಿನ ಸಂದರ್ಭದಲ್ಲಿ ನಮ್ಮ ಕಾಲೇಜ್ ನ ಸುತ್ತ ಮುತ್ತ ಇದ್ದ ಹೋಟೆಲ್ ಗಳಲ್ಲಿ ಒಂದು ರೈಸ್ ಬಾತ್ ನ ಬೆಲೆ ೫ ರುಪಾಯಿ ಇತ್ತು. ಕಾಫಿ ಗೆ ೩ ರುಪಾಯಿ . ಕಾಫಿ ಕುಡಿದರೆ ದುಡ್ಡು ಖರ್ಚಾಗುತ್ತೆ ಅಂತ ನಾವು ಕಾಫಿಯ ಸಹವಾಸಕ್ಕೇ ಹೋಗುತ್ತಿರಲಿಲ್ಲ . ಸಂದರ್ಭ ಹೀಗಿದ್ದಾಗ ಒಂದೇ ಬರಹದಿಂದ ೨ ತಿಂಗಳು ೨ ಹೊತ್ತೂ ತಿಂಡಿ ತಿನ್ನುವಷ್ಟು ಕಾಸು ಒಂದೇ ಲೇಖನದಿಂದ ಬರ್ತದೆ ಅಂದರೆ ಖುಷಿ ಆಗದೆ ಇರ್ತದಾ?
೪ ದಿನಗಳ ನಂತರ ಮದ್ದೂರಿಗೆ ಹೋಗಿ ಮಾಹಿತಿ ಕಲೆ ಹಾಕಿದ್ದಾಯ್ತು. ಪ್ರಸಾದ್ ಫೋಟೋ ತೆಗೆದು ಕೊಟ್ಟ.(ಬಸ್ ಚಾರ್ಜ್ ಗೂ ಅವನದೇ ಕಾಸು ) ೨ ದಿನಗಳ ಕಾಲ ಲೇಖನವನ್ನು ತಿದ್ದಿ ತೀಡಿ ” ಮದ್ದೂರ್ ವಡೆ ಗೆ ೯೯ ರ ಸಂಭ್ರಮ ” ಎಂದು ಹೆಡ್ಡಿಂಗ್ ಹಾಕಿ ಪ್ರಜಾವಾಣಿ ಗೆ ಕಳಿಸಿದ್ದಾಯ್ತು .
ಹೀಗೇ ತಿಂಗಳು ಕಳೆಯಿತು .ಲೇಖನ ಪ್ರಕಟವಾಗಲಿಲ್ಲ. ಬದಲಿಗೆ ಒಂದು ಪೋಸ್ಟ್ ಕಾರ್ಡ್ ಬಂತು. ಅದರಲ್ಲಿ-“ನೀವು ಕಳಿಸಿರುವ ಮದ್ದೂರ್ ವಡೆ ಲೇಖನ ಪ್ರಕಟಣೆಗೆ ಸ್ವೀಕೃತವಾಗಿದೆ . ಆದರೆ ಲೇಖನ ಕ್ಕೆ ಮಾಹಿತಿಯ ಕೊರತೆ ಇದೆ . ಮದ್ದೂರ್ ವಡೆ ಗೆ ಹೆಚ್ಚಾಗಿ ಈರುಳ್ಳಿ ಹಾಕಲಾಗುತ್ತದೆ . ಒಂದು ದಿನಕ್ಕೆ ಕಮ್ಮಿ ಅಂದರೂ ೬೦೦೦ ಮದ್ದೂರ್ ವಡೆ ಗಳು ಮಾರಾಟ ಆಗುತ್ತವೆ ಅಂತ ಬರೆದಿದ್ದೀರಿ. ಇಷ್ಟೆಲ್ಲಾ ವಡೆ ಗೆ ಅಗತ್ಯ ಇರುವ ಈರುಳ್ಳಿ ಎಲ್ಲಿಂದ ಬರುತ್ತೆ?ವಡೆಯ ನೆಪದಲ್ಲಿ ಮಂಡ್ಯದ ರೈತರು ಈರುಳ್ಳಿ ಬೆಳೆಯುತ್ತಾರಾ? ಅದರಿಂದ ಅವರಿಗೆ ಲಾಭ ಆಗಿದೆಯಾ ಎಂದು ವಿವರ ಸಂಗ್ರಹಿಸಿ ಬರೆಯಿರಿ … ” ಎಂದು ಬರೆಯಲಾಗಿತ್ತು .
ಮರುದಿನವೇ ಮತ್ತೆ ಮದ್ದೂರ್ ಗೆ ಹೋಗಿ ಬಂದೆ . ಅಗತ್ಯ ಇರುವ ಈರುಳ್ಳಿಯನ್ನು ಯಶವಂತಪುರದ ಮಾರುಕಟ್ಟೆಯಿಂದ ತರಲಾಗುವುದು. ಮಂಡ್ಯದ ಜನ ಮದ್ದೂರ್ ವಡೆ ಯ ಕಾರಣಕ್ಕೆ ಈರುಳ್ಳಿ ಬೆಳೆಯೋದಿಲ್ಲ’ ಎಂಬುದು ನನಗೆ ಸಿಕ್ಕಿದ ಮಾಹಿತಿ. ಅದನ್ನು ಅವತ್ತೇ ಪೋಸ್ಟ್ ಮಾಡಿ ಸುಮ್ಮನಾದೆ . ಒಂದು ವಾರ ಕಳೆದಿಲ್ಲ . ಆಗಲೇ ಇನ್ನೊಂದು ಕಾರ್ಡ್ ಬಂತು.” ವಡೆ ತಯಾರಿಸಲು ರವೆ, ಗಸಗಸೆ,ಮೈದಾಹಿಟ್ಟು ಮತ್ತು ಅತಿ ಮುಖ್ಯವಾಗಿ ರಿಫೈನ್ಡ್ ಆಯಿಲ್ ಬಳಸಲಾಗುತ್ತದೆ . ಅದನ್ನು ವಡೆ ಮಾಡುವ ಜನ ಎಲ್ಲಿಂದ ತರುತ್ತಾರೆ? ವಡೆಯ ನೆಪದಲ್ಲಿ ಮಂಡ್ಯ ಹಾಗು ಮದ್ದೂರಿನ ಸುತ್ತ ಪುಟ್ಟ ಈ ಉತ್ಪನ್ನಗಳನ್ನು ತಯಾರಿಸುವ ಪುಟ್ಟ ಕಾರ್ಖಾನೆಗಳು ಇವೆಯೇ ಎಂದು ಪರಿಶೀಲಿಸಿ ಮಾಹಿತಿ ಕಳಿಸಿ. ಆ ನಂತರ ಲೇಖನ ಪ್ರಕಟಿಸೋಣ ” ಎಂದು ಆ ಪತ್ರದಲ್ಲಿ ಬರೆಯಲಾಗಿತ್ತು.

ಮೊದಲೇ ವಿವರಿಸಿದ ಹಾಗೆ ಆ ಲೇಖನ ಪ್ರಕಟವಾಗಿ ಬಿಟ್ಟರೆ ಎರಡು ತಿಂಗಳ ಖರ್ಚಿಗೆ ಆಗುವಷ್ಟು ದುಡ್ಡು ಸಿಗುತ್ತದೆ ಎಂಬ ದೊಡ್ಡ ನಂಬಿಕೆ ಇತ್ತು . ಹಾಗಾಗಿ ಮಂಡ್ಯ ಹಾಗೂ ಮದ್ದೂರ್ ನ ಸುತ್ತ ಮುತ್ತ ಮತ್ತೆ ಎರಡು ಸುತ್ತು ಹಾಕಿ ಮಾಹಿತಿ ಸಂಗ್ರಹಿಸಿದ್ದಾಯಿತು . ರವೆ, ಗಸಗಸೆ,ಎಣ್ಣೆ ಅಥವಾ ಮೈದಾಹಿಟ್ಟು ತಯಾರಿಸುವ ಫ್ಯಾಕ್ಟರಿಗಳು ಅಲ್ಲಿ ಇರಲಿಲ್ಲ. ಎಲ್ಲ ವಸ್ತುಗಳ ಖರೀದಿಗೂ ಬೆಂಗಳೂರಿಗೇ ಹೋಗಿ ಬರುವುದು ವಡೆ ತಯಾರಿಸುವ ಜನಕ್ಕೆ ಅಭ್ಯಾಸವಾಗಿತ್ತು.
ಇಷ್ಟು ಮಾಹಿತಿಯನ್ನು ಬರೆದು ನಾನು ಮತ್ತೆ ಪೋಸ್ಟ್ ಮಾಡಿದೆ . ಉಹುಂ,ಮುಂದಿನ ೧೦ ದಿನ ಕಳೆದರೂ ಲೇಖನ ಪ್ರಕಟ ಆಗಲಿಲ್ಲ . ಬದಲಾಗಿ ಮತ್ತೊಂದು ಪತ್ರ ಬಂತು! ” ಪ್ರಿಯರೆ, ನೀವು ಎರಡನೇ ಬಾರಿ ಕಳಿಸಿದ ಮಾಹಿತಿ ಕೂಡ ತಲುಪಿದೆ . ಮತ್ತೊಂದು ಸೂಕ್ಷ್ಮ ವಿಚಾರವನ್ನು ನೀವು ಗಮನಿಸಿಲ್ಲ . ಮದ್ದೂರ್ ನಲ್ಲಿ ನಕಲಿ ಮದ್ದೂರ್ ವಡೆಗಳ ತಯಾರಕರು ಕೂಡ ಇರಬೇಕು , ಅಲ್ಲವಾ? ಅವರಿಂದ ಅಸಲಿ ಮದ್ದೂರ್ ವಡೆ ತಯಾರಕರಿಗೆ ವ್ಯವಹಾರದ ದೃಷ್ಟಿಯಿಂದ ತೊಂದರೆ ಆಗಿಲ್ಲವಾ? ಈ ಮಾಹಿತಿಯನ್ನೂ ಸಂಗ್ರಹಿಸಿ ಕಳಿಸಿಕೊಡಿ . ನಂತರ ಲೇಖನ ಪ್ರಕಟಿಸೋಣ… ” ಎಂಬ ಮಾಹಿತಿ ಅಲ್ಲಿತ್ತು.
ಮೊದಲೇ ಹೇಳಿದೆನಲ್ಲ … ಆ ಲೇಖನ ಪ್ರಕಟವಾದರೆ ೫೦೦ ರುಪಾಯಿಗಳಂತೂ ಸಿಗುತ್ತದೆ ಎಂಬುದು ಗ್ಯಾರಂಟಿ ಆಗಿತ್ತು . ಹಾಗಾಗಿ ನಾನು ಮತ್ತೆ ಮದ್ದೂರ್ ಗೆ ಯಾತ್ರೆ ಹೊರಟೆ . ಹೀಗೆ ಒಂದು ಲೇಖನದ ಸಲುವಾಗಿ ಬರೋಬ್ಬರಿ ೫ ಬಾರಿ ಅಲೆದು ಬಂದಿದ್ದಾಯಿತು . ಹೊಸದಾಗಿ ಸಂಗ್ರಹಿಸಿದ ಮಾಹಿತಿಯನ್ನು ಕಳಿಸಿ ಸುಮ್ಮನಾದೆ . ೧೫ ದಿನಗಳ ನಂತರ ಪ್ರಜಾವಾಣಿಯ ಕರ್ನಾಟಕ ದರ್ಶನ ವಿಭಾಗದಲ್ಲಿ ಮುಖಪುಟದಲ್ಲೇ ಮದ್ದೂರ್ ವಡೆಯ ಲೇಖನ ಪ್ರಕಟವಾಗಿತ್ತು.
ಲೇಖನ ಪ್ರಕಟ ಆಗಿದ್ದನ್ನು ಮೊದಲು ಗಮನಿಸಿದ ಕೃಷ್ಣ ಪ್ರಸಾದ್ – ಮಣೀ, ಎಷ್ಟೊಂದು ಚೆನ್ನಾಗಿ ಬರ್ದಿದ್ದೀಯಲ್ಲೋ ಅಂದ . “ನಿಜವಾಗಿ ಇಷ್ಟೆಲ್ಲಾ ಮಾಹಿತಿ ನನಗೂ ಗೊತ್ತಿರಲಿಲ್ಲ ಕಿಟ್ಟಿ . ಅದ್ಯಾರೋ ಒಬ್ರು ಪ್ರತಿ ವಾರ ಕಾಗದ ಬರೆದು ಮಾಹಿತಿ ಕೇಳಿದ್ರು . ಅದನ್ನೆಲ್ಲಾ ಸಂಗ್ರಹಿಸಿ ಕಳಿಸಿದೆ ಅಷ್ಟೇ ಅಂದೆ. ನಂತರ ಅದುವರೆಗೂ ಬಂದಿದ್ದ ೪ ಕಾರ್ಡ್ ಗಳನ್ನೂ ಅವನಿಗೆ ತೋರಿಸಿದೆ. ಪ್ರಸಾದ್ ಆ ಪತ್ರವನ್ನು ನೋಡುತ್ತಿದ್ದಂತೆಯೇ ಉದ್ಗರಿಸಿದ …” ಅಯ್ಯೋ ,ಈ ಕಾರ್ಡ್ ಬರ್ದಿರೋದು ನಾಗೇಶ್ ಹೆಗಡೆಯವರು ಕಣೋ …ಯಾವುದೇ ಬರಹದ ಬಗ್ಗೆ ಅವರ ಕೈಲಿ ಒಮ್ಮೆ ಗುಡ್ ಅನ್ನಿಸಿಕೊಂಡರೆ ಒಂದು ಅವಾರ್ಡ್ ತಗೊಂಡ ಹಾಗೆ!!! ”

***

ತಮಾಷೆ ಕೇಳಿ : ಅದೇನು ಕಾರಣವೋ ಕಾಣೆ : ಆ ಬರಹಕ್ಕೆ ರಾಯಲ್ಟಿ ಬರಲಿಲ್ಲ. ಆದರೆ ಒಂದು ಲೇಖನ ಬರೆಯುವಾಗ ಹೇಗೆಲ್ಲ ವಿಷಯ ಸಂಗ್ರಹಿಸಬೇಕು ಎಂಬ ಗುಟ್ಟು ನನಗೆ ಅರ್ಥವಾಗಿಹೋಯಿತು. ಇವತ್ತು ಯಾವುದೇ ಲೇಖನ ಬರೆಯಲು ಕೂತರೂ ಕಮ್ಮಿ ಅಂದರೂ ೧೦ ಕಡೆಯಿಂದ ಮಾಹಿತಿ ಸಂಗ್ರಹಿಸುತ್ತೇನೆ . ಅದನ್ನು ಕಂಡ ಹಲವರು ಒಂದು ಬರಹದ ವಿಷಯವಾಗಿ ಇಷ್ಟೆಲ್ಲಾ ರಿಸ್ಕ್ ಅಗತ್ಯವಾ ಎಂದು ಕೇಳುವುದುಂಟು . ಆದರೆ ಎಲ್ಲ ಕಡೆಯಿಂದ ಮಾಹಿತಿ ಸಂಗ್ರಹಿಸಿ ಬರೆಯಲು ಕೂತಾಗಲೂ ಒಮ್ಮೆ ಕೈ ನಡುಗುತ್ತದೆ . ನಾಗೇಶ ಹೆಗಡೆಯವರು ಅಲ್ಲೆಲ್ಲೋ ನಿಂತು ಈ ಬರಹಕ್ಕೆ ಇನ್ನೂ ಸ್ವಲ್ಪ ತಯಾರಿ ಅಗತ್ಯವಿತ್ತು ಎಂದು ಎಚ್ಚರಿಸಿದ ಹಾಗೆ, ಒಂದು ಬರಹವನ್ನು ಮುಗಿಸಿದ ನಂತರ ಗುಡ್ ಎಂದು ಬೆನ್ನು ತಟ್ಟಿದ ಹಾಗೆ ಭಾಸವಾಗುತ್ತದೆ . ಅದೇ ವೇಳೆಗೆ ನಾನು ನಾಗೇಶ ಹೆಗಡೆಯವರ ಅಸಂಖ್ಯಾತ ಶಿಷ್ಯರಲ್ಲಿ ಒಬ್ಬ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಆಸೆಯೂ ಆಗುತ್ತದೆ .

***

ಮೊನ್ನೆ ಸೆಪ್ಟೆಂಬರ್ ೫ ರ ಶಿಕ್ಷಕರ ದಿನಾಚರಣೆಯಂದು – ‘ಸರ್,ನಿಮ್ಮಿಂದ ನಾನು ಕಲಿತ ಪಾಠ ಈಗ ಹಲವು ಸಂದರ್ಭಗಳಲ್ಲಿ ನನ್ನನ್ನು ಕೈ ಹಿಡಿದು ನಡೆಸುತ್ತಿದೆ . ನಿಮ್ಮಂಥ ಹಿರಿಯರ ಹಾರೈಕೆ ನನ್ನನ್ನು ಸದಾ ಕಾಯುತ್ತಿದೆ, ಕಾಯುತ್ತದೆ ‘ ಎಂದು ನಾಗೇಶ ಹೆಗಡೆ ಅವರಿಗೆ ಎಸ್ ಎಂ ಎಸ್ ಕಳಿಸಿದ್ದೆ. ಅವರು ತಕ್ಷಣವೇ-” ನಿಮ್ಮದು ದೊಡ್ಡ ಮಾತು ಮಣಿಕಾಂತ್. ಆದರೆ ನನಗೆ ನಿಮ್ಮಂಥ ಶಿಷ್ಯ ಸಿಕ್ಕಲಿಲ್ಲ” ಅಂತ ಉತ್ತರ ಕೊಟ್ಟರು .

***

ನಾಗೇಶ ಹೆಗಡೆ ಅವರನ್ನು ನಾನು ಪ್ರತ್ಯಕ್ಷ ಕಂಡದ್ದು ೨೦೦೫ರಲ್ಲಿ. ಸಂಕೋಚ, ಹಿಂಜರಿಕೆ ಮತ್ತು ಒಂದು ತೆರನಾದ ಭಯದಿಂದ ಮದ್ದೂರ್ ವಡೆ ಕುರಿತ ಪ್ರಸಂಗವನ್ನು ಅವರೊಂದಿಗೆ ನಾನು ಹೇಳಲೇ ಇಲ್ಲ . ಈಗಲೂ ಒಂದು ಹಿಡಿ ಸಂಕೋಚದೊಂದಿಗೆ ಹಳೆಯದನ್ನೆಲ್ಲ ಹೇಳಿಕೊಂಡಿದ್ದೇನೆ.

‍ಲೇಖಕರು G

28 February, 2014

4 Comments

  1. jagadishkoppa

    ಮಣಿ. ನಾಗೇಶ್ ಹೆಗ್ಡೆಯವರ ವ್ಯಕ್ತಿತ್ವವೇ ಅಂತಹದ್ದು. 1998 ರಲ್ಲಿ ವಿಜ್ಞಾನದ ಎ.ಬಿ.ಸಿ.ಡಿ. ಗೊತ್ತಿಲ್ಲದ ನಾನು ” ಅಣುವೆಂಬ ಸಾವಿಲ್ಲದ ಸದ್ದು ಕುರಿತು” ಎಂಬ ಪುಸ್ತಕಕ್ಕೆ ಕೈ ಹಾಕಿದ್ದೆ. ಪ್ರತಿವಾರ ಹೋಗಿ ಅವರಿಗೆ ಪ್ರತಿ ಅಧ್ಯಾಯ ತೋರಿಸಿ ನಂತರ ಮುಂದುವರೆಯುತ್ತಿದ್ದೆ. ಆವಾಗ ಸುಧಾ ಸಂಪಾದಕರಾಗಿದ್ದರು. ಅದು ನನ್ನ ಮೊದಲ ಗದ್ಯ ಕೃತಿ ಕೂಡ ಹೌದು. ಇವೊತ್ತಿಗೂ ನನ್ನನ್ನು ಕೆಲ ಓದುಗರು ಆ ಕೃತಿಯ ಮೂಲಕ ಗುರುತಿಸುತ್ತಾರೆ.

  2. bharathi

    Thidduva guru sikre baduku eshtu chenda ! Chanda ide nimma nenapu

  3. amardeep.ps

    chennagide sir…….nimma anubhava….mattu baravanige aarambha…..

  4. Sushrutha

    nice.. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading