ಮಡಕೆಯೊಳಗೆ ಮಗು

ಕೆ ಎನ್ ಗಣೇಶಯ್ಯ
ಈ ಕಾದಂಬರಿಯ ಬೀಜ ನನ್ನ ಎದೆಯಲ್ಲಿ ಬಿತ್ತನೆಯಾದದ್ದು 1984ರ ಒಂದು ಬೇಸಿಗೆಯ ರಾತ್ರಿ. ಕೋಲಾರ ಮತ್ತು ಟೇಕಲ್ ಬಳಿಯ ಬನಹಳ್ಳಿಯ ಬಯಲಿನಲ್ಲಿ ನಾನು, ವೀಣಾ ಮತ್ತು ಉಮಾಶಂಕರ್ ತಂಗಿದ್ದ ಒಂದು ಕ್ಯಾನ್ವಾಸ್ ಟೆಂಟಿನಲ್ಲಿ. ಆದರೆ ಹಾಗೆ ಬಿತ್ತನೆಯಾದ ಸಮಯದಲ್ಲಿ, ನಾನು ಕನ್ನಡದಲ್ಲಿ ಏನನ್ನಾದರೂ ಬರೆಯುತ್ತೇನೆ ಎಂಬ ಸೂಚನೆಯೂ ನನಗಿರಲಿಲ್ಲ.
ಬನಹಳ್ಳಿಯಲ್ಲಿ Archeological Survey of India ನಡೆಸುತ್ತಿದ್ದ ಉತ್ಖನನದ ಯೋಜನೆಯ ಮುಖ್ಯಸ್ಥರೂ, ಪ್ರಾಚ್ಯಶಾಸ್ತ್ರದಲ್ಲಿ ಪ್ರಸಿದ್ಧ ವಿಜ್ಞಾನಿಯೂ ಆಗಿದ್ದ ಕೃಷ್ಣಮೂರ್ತಿಯವರು, ನನ್ನ ಸ್ನೇಹಿತ, ಉಮಾಶಂಕರ್ ಮತ್ತು ವೀಣಾ ಚರಿತ್ರೆಯ ಬಗ್ಗೆ ತೋರಿದ ಕುತೂಹಲ ಕಂಡು, ಅವರಿಬ್ಬರನ್ನೂ ಅಲ್ಲಿಗೆ ಆಹ್ವಾನಿಸಿದ್ದರು. ಅವರು ಹೊರಟಾಗ, ನಾನೂ ಅವರ ಜೊತೆಯಾಗಿದ್ದೆ.
ಅಲ್ಲಿನ ಉತ್ಖನನದ ಕುಳಿಗಳಲ್ಲಿ ಒಂದೊಂದು ಹೆಜ್ಜೆ ಆಳಕ್ಕೆ ಇಳಿದಂತೆ ನಾವು ಶತಮಾನಗಳಷ್ಟು ಹಿಂದಕ್ಕೆ ಹೋಗುತ್ತಿದ್ದೇವೆ ಎಂಬ ಅರಿವಿನ ಉತ್ಕಟ ಭಾವಕ್ಕೆ ಸಿಲುಕಿ ಮೂವರೂ ಕೆಳಗಿಳಿಯುತ್ತಿದ್ದಂತೆ, ನಮ್ಮ ಕಣ್ಣಿಗೆ ದುತ್ತನೆ ಕಂಡದ್ದು ಒಂದು ಕುಳಿಯ ಗೋಡೆಯ ಮಧ್ಯದಲ್ಲಿ ಇನ್ನೂ ಅದಕ್ಕೆ ಅಂಟಿಕೊಂಡಿದ್ದ, ಶಿಥಿಲಗೊಂಡಿದ್ದರೂ ತನ್ನ ಆಕಾರವನ್ನು ಇನ್ನೂ ಸಂಪೂರ್ಣವಾಗಿ ಉಳಿಸಿಕೊಂಡಿದ್ದ ಒಂದು ಮಣ್ಣಿನ ಮಡಕೆ. ಸುಮಾರು 3000 ವರ್ಷಗಳಷ್ಟು ಹಿಂದಿನ ಕಾಲಘಟ್ಟದ ಭೂಪದರದಲ್ಲಿದ್ದ ಆ ಮಡಕೆ ಯಲ್ಲಿ ಒಂದು ಮಗುವಿನ ಶವ ಇಟ್ಟು ಸಂಸ್ಕಾರ ಮಾಡಲಾಗಿದೆ ಎಂದು ಕೃಷ್ಣಮೂರ್ತಿ ವಿವರಿಸಿದಾಗ ನನ್ನ ಹೃದಯದ ಬಡಿತ ನನಗೇ ಕೇಳಿಸುತ್ತಿತ್ತು.

ಅಲ್ಲಿ ನಾವು ಕಂಡದ್ದು, ತಿಳಿದದ್ದು ಬಹಳಷ್ಟು: ಅಂದಿನ ಮಾನವನ ಗೃಹ ರಚನೆಯ ಕ್ರಮ, ಅಡುಗೆಯ ಪರಿಕರಗಳು, ಅವರು ರಕ್ಷಣೆಗೆ ಮತ್ತು ಬೇಟೆಗೆ ಉಪಯೋಗಿಸುತ್ತಿದ್ದ ಶಿಲಾಗುಂಡುಗಳು, ಕಲ್ಲಿನ ಕೊಡಲಿಗಳು, ಬೇಟೆಯಾಡಿದ ಪ್ರಾಣಿಗಳ ಚರ್ಮ ಬಿಡಿಸಲು ಉಪಯೋಗಿಸುತ್ತಿದ್ದ ಸೂಕ್ಷ್ಮವಾದ ಶಿಲಾ-ಕತ್ತಿಗಳು, ಅವರು ಅನುಸರಿಸುತ್ತಿದ್ದ ಶವಸಂಸ್ಕಾರದ ಪದ್ಧತಿಗಳು, ಹೀಗೆ ಹತ್ತು ಹಲವು ವಿವರಗಳು.






0 Comments