ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಕ್ಕಳ ಲೋಕದಲ್ಲಿನ ಪ್ರಯಾಣ..

-ರಂಗಮ್ಮ ಹೊದೇಕಲ್
ಪೆನ್ಸಿಲ್ ಎಂಬ ಮಕ್ಕಳ ಲೋಕ…

ಮಕ್ಕಳಿಗಿಷ್ಟು ಅಕ್ಷರ ಕಲಿಸಲೇ ಹೈರಾಣಾಗುವ ಈ ಹೊತ್ತಲ್ಲಿ ಅದರಾಚೆಗೆ ಏನಾದರೂ ಮಾಡುವ ಶಿಕ್ಷಕರು ಇತರರ ಕಣ್ಣಲ್ಲಿ ಹುಚ್ಚರು, ವಿಚಿತ್ರ, ಏನೂ ಜವಾಬ್ದಾರಿ ಇಲ್ಲದವ್ರು… ಹೀಗೆಲ್ಲಾ ಅನ್ನಿಸಿಕೊಳ್ಳಬಹುದು! ಅಂತಹ ‘ಹುಚ್ಚುತನ’ದವರು ಕಂಡರೆ ಕೆಲವರಾದರೂ ಏ, ನಮ್ಮಂತೋರು ಇವ್ರುನೂ ಅಂತ ಬೀಗಬಹುದು! ಅಂತಹ ವಿಶೇಷ ಹುಚ್ಚುಗಳ ಕೆಲ ಮೇಷ್ಟ್ರು, ಮೇಡಮ್ ಗಳು ನನ್ನ ಸ್ನೇಹಿತರ ಪಟ್ಟಿಯಲ್ಲಿ ರುವುದು ನನಗಂತೂ ಹೆಮ್ಮೆ ಮತ್ತು ಖುಷಿ.

‘ಮಕ್ಕಳ ಮಟ್ಟಕ್ಕಿಳಿದು ಇಳಿದು ಅಲ್ಲ ತಾಯೀ ಮಕ್ಕಳ ಮಟ್ಟಕ್ಕೇರಿ….’ ಅಂತ ನನ್ನನ್ನ ನೋಟವನ್ನು ಹಿಗ್ಗಿಸಿದವರು ರಘುನಾಥ ಮೇಷ್ಟ್ರು! ಆ ನೋಟವನ್ನು ಮತ್ತೂ ವಿಸ್ತರಿಸುವಲ್ಲಿ ಒಂದಿಷ್ಟು ಟೀಚರ್ಸ್ ಅಪ್ರತ್ಯಕ್ಷವಾಗಿಯೂ ಕಾರಣರು. ಆ ಪಟ್ಟಿಯಲ್ಲಿ ಪೆನ್ಸಿಲ್ ಪತ್ರಿಕೆಯ ಕೊಟ್ರೇಶ್ ಕೂಡ ಒಬ್ಬರು.

ಮಕ್ಕಳನ್ನೇ ಸಂಪಾದಕರು, ವರದಿಗಾರರನ್ನಾಗಿಸಿ ಹನ್ನೊಂದು ವರ್ಷಗಳಿಂದ ಈ ಮೇಷ್ಟ್ರು ಪೆನ್ಸಿಲ್ ಪತ್ರಿಕೆಯನ್ನು ಹೊರತರುತ್ತಿರುವ ಸಂಗತಿ ಈ ಹೊತ್ತಿನಲ್ಲಿ ಸಾಧಾರಣವಾದುದಲ್ಲ! ದ್ವೈ ಮಾಸಿಕವಾದ ಪತ್ರಿಕೆಯಲ್ಲಿ ಮಕ್ಕಳೇ ಬರೆದ ಕತೆಗಳು, ಶಾಲೆಯಲ್ಲಿ ನಡೆದ ಕಾರ್ಯಕ್ರಮಗಳ ವರದಿಗಳು, ಮಕ್ಕಳು ಓದಿದ ಪುಸ್ತಕಗಳ ಪರಿಚಯಗಳು, ಸಾಧಕರ ಸಂದರ್ಶನಗಳು… ಇತ್ಯಾದಿಗಳೆಲ್ಲ ಇರುತ್ತವೆ. ಅಚ್ಚರಿ ಎಂದರೆ ಅದು ಶಾಲೆಯೊಂದರ ಪತ್ರಿಕೆಯಾಗಿ ಉಳಿಯದೆ, ಊರಿನ ಪತ್ರಿಕೆಯಾಗಿ, ತಾಲೂಕಿನ, ಜಿಲ್ಲೆಯ ಶಾಲೆಗಳಿಗೂ ತಲುಪುವುದು ಅಭಿನಂದನಾರ್ಹವೇ ಆಗಿದೆ.

ಪ್ರತಿ ಮಗುವೂ ತನ್ನೊಳಗೆ ಏನನ್ನೋ ಹೊತ್ತುಕೊಂಡೇ ಇರುತ್ತದೆ! ಅದನ್ನು ಪ್ರಕಾಶಿಸುವ ಕೆಲಸ ಸಣ್ಣದ್ದಲ್ಲ.. ಕೊಟ್ರೇಶ್ ಸರ್ ಮಕ್ಕಳ ಜೊತೆ ಮಗುವೇ ಆಗಿ ಪೆನ್ಸಿಲ್ ನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಮತ್ತು ಪ್ರತಿ ತಿಂಗಳೂ ಆ ಪತ್ರಿಕೆಗೆ ನೆರವಾಗುವ ದಾನಿಗಳು ಕನ್ನಡ ಮತ್ತು ಮಕ್ಕಳನ್ನು ಹೊಳೆಯಿಸುವ ಸಾರ್ಥಕ ಕೆಲಸ ಮಾಡುತ್ತಿದ್ದಾರೆ. ಪೆನ್ಸಿಲ್… ಹೆಸರೇ ಎಷ್ಟು ಅರ್ಥಪೂರ್ಣ! ತಪ್ಪಾದುದನ್ನು ಅಳಿಸಿ ಬರೆಯುವಂತದ್ದು! ಆದರೆ ಪೆನ್ಸಿಲ್ ನೊಳಗಿನ ಈ ಮಕ್ಕಳು ಅಳಿಸುವಂತದ್ದನ್ನು ಬರೆಯದೆ ಉಳಿಯುವಂತದ್ದನ್ನು ದಾಖಲಿಸುತ್ತಿದ್ದಾರೆ.

ಮಕ್ಕಳ ಲೋಕದಲ್ಲಿನ ಪ್ರಯಾಣವೇ ಈ ಬದುಕಿನ ದೊಡ್ಡ ಖುಷಿ ಎನ್ನುವ ಕೊಟ್ರೇಶ್ ಸಧ್ಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆ ಯ ಸ.ಪ್ರೌ.ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತ್ತು ಪೆನ್ಸಿಲ್ ನ್ನು ಇಂಗ್ಲೀಷ್ ಆವೃತ್ತಿ ಯಲ್ಲಿಯೂ ತರುತ್ತಿದ್ದಾರೆ! ಓದೋಕೆ ಎಷ್ಟು ಖುಷಿ, ಅಚ್ಚರಿ ಅನ್ಸತ್ತಲ್ವ…!

ಮಕ್ಕಳಿಗಾಗಿ ಇಂತಹ ಸೃಜನಾತ್ಮಕ ಕ್ರಿಯೆಯಲ್ಲಿ ನಿರತರಾದ ಶಿಕ್ಷಕರಿಗೆ ಒಂದು ಮೆಚ್ಚುಗೆಯ ಮಾತು, ಒಂದಿಷ್ಟು ಸಲಹೆ ಮತ್ತಷ್ಟು ಶಕ್ತಿ ತರಬಲ್ಲದು. 8310020942 ಈ ಸಂಖ್ಯೆಯಲ್ಲಿ ಕೊಟ್ರೇಶ್ ಸರ್ ಸಿಗುತ್ತಾರೆ.. ಗುಡ್ ಅಂತಲೋ, ಕೀಪಿಟಪ್ ಅಂತಲೋ ಒಂದು ಮಾತು ಹೇಳಿಬಿಡಿ..ಪೆನ್ಸಿಲ್ ಮತ್ತಷ್ಟು ಸಮೃದ್ಧವಾಗಬಹುದು!

ಕೊಟ್ರೇಶ್ ಸರ್ ಅವರ ಈ ಸೃಜನಶೀಲತೆ ಯನ್ನು ಪೋಷಿಸುವ ಅಲ್ಲಿನ ಎಲ್ಲ ಸಹೃದಯರಿಗೆ ಗೌರವದ ನಮಸ್ಕಾರಗಳು.

‍ಲೇಖಕರು Admin

2 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading