ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಈ ಮುಖವೂ ಇದೆ…

ಹೆತ್ತವರೇ ಹರಿದು ಮುಕ್ಕುವಂತಾದರೆ ಯಾರನ್ನು ದೂರುವುದು..?

ಡಾ.ಎಸ್.ಬಿ.ಜೋಗುರ

ಇಲ್ಲಿಯವರೆಗೆ ಹೆಣ್ಣು ಸಂತಾನ ಕೇವಲ ವರದಕ್ಷಿಣೆಯ ಹಿನ್ನೆಲೆಯಲ್ಲಿ ಹೆತ್ತವರ ಪಾಲಿಗೆ ಆತಂಕಾವೃತ ಲಿಂಗ ಎನ್ನುವಂತಿತ್ತು. ಆ ಭಯ ಮಹಿಳೆಯ ಲಿಂಗ ಪ್ರಮಾಣದಲ್ಲಿಯ ಕುಸಿತದ ಹಿನ್ನೆಲೆಯಲ್ಲಿ ವರದಕ್ಷಿಣೆಯ ಕಿರಿಕಿರಿ ಕಡಿಮೆಯಾಗಿ ಅಭಯವಾದಂತೆನಿಸುತ್ತಿರುವಾಗಲೇ ಮೂರು ವರ್ಷದಿಂದ ಹಿಡಿದು ನೂರು ವರ್ಷದ ಮುದುಕಿಯರನ್ನೂ ಬಿಡದಂತೆ ಕಾಮಾತುರದ ಅಪಾಯ ಅತ್ಯಾಚಾರದಲ್ಲಿ ತೀವ್ರವಾದಂತೆಲ್ಲಾ ಈಗ ಹೆಣ್ಣು ಸಂತಾನ ಹೆತ್ತವರ ಪಾಲಿಗೆ ಇಬ್ಬಗೆಯ ಭಯ ಮತ್ತು ದುಗುಡಗಳಿಗೆ ಕಾರಣವಾಗುವಂತಾಯಿತು. ಶತಶತಮಾನದ ಶೋಷಣೆಯ ಪೊರೆ ಕಳಚಿಕೊಂಡು ಹೊಸ ತಾಜಾತನದ ಮುಖವಾಡದೊಂದಿಗೆ ಬಯಲಾಗತೊಡಗಿತು. ತಾಯ ಮೊಲೆ ಹಾಲು ನಂಜಾಗುವ, ಬಿತ್ತಿದ್ದನ್ನು ಭೂಮಿಯೇ ನುಂಗುವ ದಿನಮಾನಗಳು ಎದುರಾದವು.

ಮೈಸೂರಲ್ಲಿ ತೀರ ಇತ್ತೀಚೆಗೆ ತಾಯಿಯೊಬ್ಬಳು ತನ್ನ ಮಗಳನ್ನು ಒಂದಷ್ಟು ಹಣದ ಆಸೆಗಾಗಿ ಬಿ.ಇ.ಒ. ಒಬ್ಬನ ಬಳಿ ಕಳುಹಿಸಿದ ಘಟನೆ ಇನ್ನೂ ಹಸಿಹಸಿಯಾಗಿಯೇ ಇದೆ ಎನ್ನುವಾಗಲೇ ದೆಹಲಿಯಲ್ಲಿ ಪಾಲಕರೊಬ್ಬರು ತಮ್ಮ 15 ವರ್ಷದ ಮಗಳನ್ನು ಕೇವಲ 80 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ. ರಾಜ್ಯದ ಗುಲಬರ್ಗಾ ಜಿಲ್ಲೆಯ ತೀರಾ ಬಡ ಗ್ರಾಮಗಳಲ್ಲಿ ಈ 80 ಸಾವಿರ ರೂಪಾಯಿಯೂ ತೀರಾ ದೊಡ್ಡ ಮೊತ್ತವಾಯಿತು. ಕೇವಲ 8-10 ಸಾವಿರ ರೂಪಾಯಿಗಳಿಗೆ ತಮ್ಮ ಎಳೆಯ ಕಂದಮ್ಮಗಳನ್ನು ಮಾರುವ ಅನಿವಾರ್ಯದ ದಾರಿದ್ರ್ಯತೆಯೂ ಅಲ್ಲಿದೆ.

ಈಗೀಗ ಹೆಣ್ಣಾಗಿ ಹುಟ್ಟಿದ್ದೇ ಆ ಮಗುವಿನ ದೈಹಿಕ ರಕ್ಷಣೆಯ ಹೊಣೆಗಾರಿಕೆ ಪಾಲಕರ ಪಾಲಿಗೆ ಒಂದು ಬಹುದೊಡ್ಡ ಸವಾಲಾಗುಗುತ್ತಿದೆ. ಕೋಳಿ ತನ್ನ ಮರಿಗಳನ್ನು ಮೇಲೆ ಹಾರುವ ಹದ್ದುಗಳನ್ನು ಕಂಡದ್ದೇ ರೆಕ್ಕೆ ಪುಕ್ಕದಡಿ ಬಚ್ಚಿಡುವಂತೆ ಗಂಡು ಸಂತಾನವೆನ್ನುವ ಹದ್ದುಗಳಿಂದ ರಕ್ಷಿಸುವಲ್ಲಿ ನಮ್ಮ ತಾಯಂದಿರಿಗೆ ಆ ಬಗೆಯ ರೆಕ್ಕೆಗಳೂ ಇಲ್ಲವೇ..? ಅದಕ್ಕಿಂತಲೂ ಮುಖ್ಯವಾಗಿ ಕಾಯುವವರೇ ಕೊಲುವವರಾದಂಥ ಅನೇಕ ಸ್ಥಿತಿಚಿತ್ರಣಗಳನ್ನು ನಾವು ಮಾಧ್ಯಮಗಳಲ್ಲಿ ಗಮನಿಸುವದಿದೆ. ಮಾತೃಪ್ರಾಧಾನ್ಯತೆ ಇರುವ ಕಡೆಗಳಲ್ಲಾದರೂ ಹೆಣ್ಣು ಸೇಫ್ ಆಗಿರುತ್ತಾಳೆ ಎಂದು ಹೇಳಲು ಧೈರ್ಯ ಸಾಲುತ್ತಿಲ್ಲ.

ಯಾಕೆಂದರೆ ಮೇಘಾಲಯದಂಥಾ ಪುಟ್ಟ ರಾಜ್ಯಗಳಲ್ಲಿ ಇದ್ದದ್ದು ಮಾತೃಪ್ರಧಾನ ಕುಟುಂಬವೇ.. ಅಲ್ಲಿ ಆಸ್ತಿ, ಅಧಿಕಾರ, ಸ್ಥಾನೀಯತೆ, ಹೆಸರು ಮುಂತಾದವುಗಳೆಲ್ಲವೂ ಮಾತೃಪ್ರಧಾನವೇ ಆಗಿದ್ದರೂ ಅಲ್ಲಿಯೂ ಈಗೀಗ ಅತ್ಯಾಚಾರದ ಹಾವಳಿ ತೀವ್ರವಾಗಿದ್ದದ್ದು ಒಂದು ದೊಡ್ದ ವಿಪರ್ಯಾಸ. ದೆಹಲಿಯಲ್ಲಿ ಕಳೆದ 12 ತಿಂಗಳಲ್ಲಿ ಒಟ್ತು 469 ಅತ್ಯಾಚಾರದ ಪ್ರಕರಣಗಳು ದಾಖಲಾಗಿದ್ದರೆ, ಮೇಘಾಲಯದಂಥ ಪುಟ್ಟ ರಾಜ್ಯದಲ್ಲಿ ಆ ಪ್ರಮಾಣ 179 ರಷ್ಟಿದೆ ಎನ್ನುವದು ಕಡಿಮೆಯಂತೂ ಅಲ್ಲ. ಕಲೆದ ಎಪ್ರಿಲ್ ತಿಂಗಳ ಕೊನೆಯಲ್ಲಿ ಅಲ್ಲಿ ಕೇವಲ 6 ವರ್ಷದ ಶಾಲಾ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಯಿತು. ದೆಹಲಿಯಲ್ಲಂತೂ ಹೀಗೆ ಮಕ್ಕಳ ಮೇಲೆ ಮತ್ತೆ ಮತ್ತೆ ಅತ್ಯಂತ ವಿಕೃತವಾದ ರೀತಿಯಲ್ಲಿ ಅತ್ಯಾಚಾರದ ಪ್ರಕರಣಗಳು ನಡೆಯುತ್ತಿವೆ.

ಅನೇಕ ಬಾರಿ ಹುಡುಗಿಯರು ತಮ್ಮನ್ನು ಚುಡಾಯಿಸುವವರ ಬಗ್ಗೆ ಪೋಲಿಸರ ಗಮನಕ್ಕೆ ತಂದ ಮೇಲೂ ಆ ಬಗ್ಗೆ ಗಂಭೀರವಾಗಿ ಯೋಚಿಸದ, ಕ್ರಮ ತೆಗೆದುಕೊಳ್ಳದೇ ಅತ್ಯಾಚಾರ ಜರುಗಿದ ಮೇಲೆ ಬನ್ನಿ ನೋಡೊಣ ಎನ್ನುವ ಮನ:ಸ್ಥಿತಿಯನ್ನು ಅನುಭವಿಸಿದ ಅನೇಕ ಯುವತಿಯರು ವ್ಯವಸ್ಥೆಯನ್ನು ದೂರಿದ್ದೂ ಇದೆ. ದೆಹಲಿಯಲ್ಲಿ ಆ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಸಂದರ್ಭದಲ್ಲಿ ಎರಡು ಸಾವಿರ ರೂಪಾಯಿಗಳನ್ನು ಆ ಬಾಲಕಿಯ ಪಾಲಕರಿಗೆ ಕೊಟ್ಟು ಅದನ್ನು ಮುಚ್ಚಿಹಾಕುವಲ್ಲಿ ತೋರಿದ ಆಸಕ್ತಿಯನ್ನು ಆ ದೂರ್ತರಿಗೆ ಶಿಕ್ಷೆ ವಿಧಿಸುವಲ್ಲಿ ತೋರಿದ್ದೇಯಾದರೆ ಅತ್ಯಾಚಾರದ ಬಗ್ಗೆ ಒಂದು ಬಗೆಯ ಭಯವಿರುತ್ತಿತ್ತು.

ಹೆಣ್ಣು ತನ್ನ ಜೈವಿಕ ಅಂಗಾಂಗಳನ್ನು ಪಡೆದು ಜನಿಸುವದೇ ತಪ್ಪು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಮನೆಯ ಹೊರಗಿನವರನ್ನು ಹೊರಗಿಟ್ಟೇ ಆಲೋಚಿಸಬಹುದು ಆದರೆ ಮನೆಯ ಒಳಗಿನವರೇ ಹಾಗೆ ಮಾಡಿದರೆ ಯಾರನ್ನು ದೂರುವುದು..? ಅನೇಕ ಸಂದರ್ಭಗಳಲ್ಲಿ ಹೆತ್ತವರೇ ತಮ್ಮ ಮಕ್ಕಳನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಾರೆ. ತಾಯಿಯಾದವಳು ಮೌನವಾಗಿ ಉಳಿಯುವ ಇಲ್ಲವೇ ಪ್ರತಿಭಟಿಸುವ ಒಂದು ಅಸಹಾಯಕ ಜೀವಿಯಾಗಿ ತೋರುತ್ತಾಳೆ. ಪಂಜಾಬಿನಲ್ಲಿ ತಂದೆಯೊಬ್ಬ ತನ್ನ ಮಗಳನ್ನು ನಿರಂತರವಾಗಿ ಲೈಂಗಿಕ ಶೋಷಣೆ ಮಾಡುವದನ್ನು ಸಹಿಸದೇ ತಾಯಿಯೇ ಪೋಲಿಸರ ಬಳಿ ದೂರು ನೀಡಿದ್ದಳು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ 2007 ರ ಸಂದರ್ಭದಲ್ಲಿ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯವನ್ನು ಕುರಿತು ಅಧ್ಯಯನ ಮಾಡಿ ನಮ್ಮ ದೇಶದಲ್ಲಿ ಸುಮಾರು 53 ಪ್ರತಿಶತ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿದ್ದು, ಬೇರೆ ಬೇರೆ ಕಾರಣಗಳಿಗಾಗಿ ಅವರು ಅದನ್ನು ಬಹಿರಂಗ ಗೊಳಿಸುತ್ತಿಲ್ಲ ಎಂದಿರುವದಿದೆ. ಇವುಗಳಲ್ಲಿ ಅಗಮ್ಯಗಮನ ಸಂಬಂಧಗಳೂ ಸೇರಿವೆ.[ ತಂದೆ ಇಲ್ಲವೇ ಸಂಬಂಧಿಗಳೇ ಲೈಂಗಿಕ ಶೋಷಣೆ ಮಾಡುವುದು] ರಾಹಿ ಎನ್ನುವ ಎನ್.ಜಿ.ಒ ಸಂಸ್ಥೆಯೊಂದು ಈ ಬಗೆಯ ಅಗಮ್ಯಗಮನ ಸಂಬಂಧಗಳನ್ನು ಅಧ್ಯಯನ ಮಾಡಿದೆ ಅದರ ಪ್ರಕಾರ 64% ಮಕ್ಕಳು 10-18 ವರ್ಷ ವಯೋಮಿತಿಯಲ್ಲಿ ಈ ಬಗೆಯ ಅಗಮ್ಯಗಮನ ಲೈಂಗಿಕ ಕ್ರಿಯೆಗೆ ಸಿಲುಕಿರುವದಿದೆ. 32% ಮಕ್ಕಳು 2-10 ವರ್ಷ ವಯಸ್ಸಿನಲ್ಲಿ ಈ ಬಗೆಯ ಲೈಂಗಿಕ ಶೋಷಣೆಗೆ ಸಿಲುಕಿದ ಬಗ್ಗೆ ಅದು ವರದಿ ಮಾಡಿದೆ. ಅಷ್ಟು ಮಾತ್ರವಲ್ಲ ಈ ಬಗೆಯ ಸಂಬಂಧಗಳು ಅಣು ಕುಟುಂಬಗಳಲ್ಲಿಯೇ ಅಂದರೆ ಚಿಕ್ಕ ಗಾತ್ರ ಇರುವ ಕುಟುಂಬಗಳಲ್ಲಿಯೇ ಹೆಚ್ಚು ಎನ್ನುವದನ್ನು ಅದು ತನ್ನ ಅಧ್ಯಯನದಿಂದ ತೋರಿಸಿಕೊಟ್ಟಿದೆ.

ತಂದೆ, ಚಿಕ್ಕಪ್ಪ, ಸಹೋದರ, ನೆರೆಹೊರೆಯಲ್ಲಿರುವಾತ ಹೀಗೆ ಈ ಬಗೆಯ ಅಗಮ್ಯಗಮನ ಸಂಬಂಧಗಳಿಗೆ ತುತ್ತಾಗುವುವರ ಪ್ರಮಾನ ಈಗ ಕಡಿಮೆಯಂತೂ ಇಲ್ಲ ಎನ್ನುವದನ್ನು ರಾಹಿ ತೋರಿಸಿಕೊಟ್ಟಿದೆ. ಲೈಂಗಿಕವಾಗಿ ಅತಿಯಾದ ಶಿಸ್ತು ಹೆಣ್ಣು ಗಂಡನ್ನು ತೀರಾ ಪ್ರತ್ಯೇಖವಾಗಿಯೇ ಬೆಳೆಸುವದು, ಹುಡುಗ-ಹುಡುಗಿಯರಿಗೆ ಒಟ್ಟಾರೆ ಬೆರೆಯಲು ಅವಕಾಶ ಇಲ್ಲದಿರುವ ಕಡೆಗಳಲ್ಲಿ ಈ ಬಗೆಯ ಅಗಮ್ಯಗಮನ ಸಂಬಂಧಗಳು ಹೆಚ್ಚು ಎನ್ನುವದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ.

ಮೂರು ವರ್ಷ, ನಾಲ್ಕು ವರ್ಷದ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರ ಮನ:ಸ್ಥಿತಿಯನ್ನು ನೆನೆದರೆ ಕ್ಷಣ ಕಾಲ ಯಾರಾದರೂ ತಬ್ಬಿಬ್ಬಾಗುತ್ತಾರೆ. ಇದರಷ್ಟೇ ಭಯಾನಕವಾದುದು 80 ವರ್ಷದ ವೃದ್ದೆಯನ್ನು ಅತ್ಯಾಚಾರಗೈಯುವದು. ಎರಡೂ ಒಂದು ಬಗೆಯಲ್ಲಿ ವ್ಯಕ್ತಿ ಹಾಗೂ ಸಮಾಜದ ಮನಸಿನ ರೋಗಗ್ರಸ್ಥ ಸ್ಥಿತಿಯನ್ನು ಕುರಿತು ಹೇಳುತ್ತವೆ. ಹಿಂದೆ ದೆಹಲಿಯಲ್ಲಿ ಡಿಶೆಂಬರ್ 16 -2012 ರಲ್ಲಿ ನಡೆದ ಗ್ಯಾಂಗ್ ರೇಪ್ ಮರುದಿನವೇ ಮೂರು ವರ್ಷದ ಮಗುವಿನ ಮೇಲೆ ಒಬ್ಬ ದುರುಳ ಅತ್ಯಾಚಾರ ಎಸಗಿರುವದಿತ್ತು. ಆತ ಆ ಮಗು ಓದುವ ಶಾಲೆಯ ಮುಖ್ಯೋಪಾಧ್ಯಾಯಿನಿಯ ಗಂಡ. ಆ ಮಗುವಿನ ಸ್ಥಿತಿ ಬೇಡ. ಕೇರಳದ ಪರವೂರ ಎನ್ನುವಲ್ಲಿ 14 ವರ್ಷದ ಬಾಲಕಿಯ ತಂದೆಯೊಬ್ಬ ತನ್ನ ಮಗಳ ಮೆಲೆಯೇ ಅತ್ಯಾಚಾರ ಗೈದು ಅವಳನ್ನು ಮಾರಾಟಮಾಡಿದ. 13 ವರ್ಷದ ಇನ್ನೋರ್ವ ಬಾಲಕಿಯನ್ನು ಆಕೆಯ ತಂದೆಯೇ ಅವಳಿಗೆ ಕ್ಲೋರೋಫಾರ್ಮ್ ಅನ್ನೋ ಕೆಮಿಕಲ್ಸ್ ನೀಡಿ ಅತ್ಯಾಸಾರವೆಸಗಿದ ಘಟನೆ ಮಹಾರಾಷ್ಟ್ರದ ಅಹಮದನಗರದಲ್ಲಿ 2011 ರಲ್ಲಿ ಬಯಲಾಗಿರುವದಿತ್ತು..

ಮಕ್ಕಳ ಮೇಲಿನ ಅತ್ಯಾಚಾರ ಖಂಡಿತವಾಗಿಯೂ ಒಂದು ಬಗೆಯ ವಿಕ್ಷಿಪ್ತ ಮತ್ತು ವಿಕೃತವಾದ ಕೃತ್ಯ. ಇಂಥಾ ಕೃತ್ಯದಲ್ಲಿ ಸಿಲುಕಿದವರನ್ನು ತೀರಾ ದೀರ್ಘ ಕಾಲದವರೆಗೆ ವಿಚಾರಿಸುವದು, ಪರಿಶೀಲಿಸುವದನ್ನು ಮಾಡದೇ ತಕ್ಷಣ ಶಿಕ್ಷೆ ನೀಡುವಂತಾಗಬೇಕು. ಪ್ರಾಥಮಿಕ ಹಂತದಲ್ಲಿಯೇ ಗಂಡು-ಹೆಣ್ಣು ಎರಡೂ ಲಿಂಗಗಳ ಬಗ್ಗೆ, ಅವುಗಳ ಜೈವಿಕ ರಚನೆಯ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡುವ ಕೆಲಸ ನಡೆಯಬೇಕು. ಔಚಿತ್ಯದ ನೆಲೆಯಲ್ಲಿ ಲೈಂಗಿಕ ಶಿಕ್ಷಣ ನೀಡುವಂತಾಗಬೇಕು. ಮಕ್ಕಳು, ವೃದ್ಧರೆನ್ನದೇ ಹೀಗೆ ಹರಿದು ಮುಕ್ಕುವ ಹಪಾಪಿ ಕಾಮಿಗಳಿಗೆ ತೀರಾ ಉಗ್ರವಾದ ಶಿಕ್ಷೆಯನ್ನು ವಿಧಿಸಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಕಳೆದ ಎರಡು ಮೂರು ವರ್ಷಗಳಲ್ಲಿ ವಿಪರೀತ ಹೆಚ್ಚಾಗಿವೆ. ಅವುಗಳನ್ನು ನಿಯಂತ್ರಿಸುವಲ್ಲಿ ಬರೀ ಪೋಲಿಸ್ ಮತ್ತು ಕಾನೂನು ಮಾತ್ರವಲ್ಲದೇ ಸಮಾಜದ ಪ್ರತಿಯೊಬ್ಬ ನಾಗರಿಕ, ಪಾಲಕರ ಪಾತ್ರವೂ ಇದೆ.

‍ಲೇಖಕರು avadhi

19 May, 2013

3 Comments

  1. keshava reddy handrala

    kamaaturanam na bayam na lazza.

  2. shanthi k a

    houdu kaamaaturaanam na bhayam na lajjaa saaladakke namma sadila kaanoonu vyavasteyoo idakke kaarana anisuttide. kaamaaturanige aa kshnagalallashte bhaya, lajje mai bittu hogiruttade aadare sadhya intha aparaadha esaguvavarige doreyuttiruva shiksheya pramaana , antha aparadhiyannoo bembalisi nilluva avara maneyavaru, tappannu muchchihaakuvavaru idanella noduvaaga intha vikruta manaskaru yaavatoo bhayapadade aaraamaagi iruvante ide namma vyavaste. idella badalaagalu bahala kaala beku ..janajaagruti aagabeku.pratiyobbna chintaneyalloo ondu badalaavane barabeku.
    aadare yaavaaga …hege ?

  3. ಉದಯಕುಮಾರ್ ಹಬ್ಬು

    ಅನಂಗನ ಹಾವಳಿಗೆ ತುತ್ತಾಗುತ್ತಿರುವ ಮುದ್ದು ಮಕ್ಕಳನ್ನು ಕಾಣುವಾಗ ಮನಸ್ಸು ಚುರ್ರೆನ್ನುತ್ತದೆ. ಮೊಲೆ ಹಾಲು ನಂಜಾದೊಡೆ. ಕುಡಿವ ನೀರು ವಿಷವಾದೊಡೆ ಸುಳಿವ ಗಾಳಿ ಉಸಿರುಗಟ್ಟಿಸಿದರೆ ಯಾರು ಕಾಪಾಡಬೇಕು ಈ ಮುದ್ದು ಕಂದಮ್ಮಗಳನ್ನು? ಹೆಣ್ಣು ಮಕ್ಕಳಿಗೆ ದೈಹಿಕ ಬಲವನ್ನು ಹೆಚ್ಚಿಸಿ ಒಂಟಿಯಾಗಿರದಂತೆ ಒಂಟಿಯಾಗಿ ತಿರುಗಾಡದಂತೆ ಹೆಚ್ಚು ರಕ್ಷಣಾತ್ಮಕವಾಗಿ ನಡೆದುಕೊಳ್ಳಬೇಕಾಗಿದೆ. ಅಪರಾಧಿಗಳಿಗೆ ಗರಿಷ್ಟ ಶಿಕ್ಷೆ ನೀಡಬೇಕಾಗಿದೆ. ಅರಿಯವನ್ನು ಉಂಟುಮಾಡಬೇಕಿದೆ. ಹೆಣ್ಣುಮಕ್ಕಳ ಸೈನ್ಯವನ್ನು ಕಟ್ಟಬೇಕಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading