ಮಂಡಿಯೂರಿ ಗುಲಾಬಿ ಕೊಟ್ಟು ಪ್ರಪೋಸ್ ಮಾಡುವ ನಾನು..

ಕಾಳಿಮುತ್ತು ನಲ್ಲತಂಬಿ 

ಒಂದು ಕೆಲಸದ ನಿಮಿತ್ತ ದೆಹಲಿಗೆ ಮೊನ್ನೆ ಹೋಗಿದ್ದೆ.

ಕೆಲಸಮುಗಿಸಿ ಹಾಗೆಯೇ ಆಗ್ರಾ ಪಥೇಫುರ್ ಸಿಕ್ರಿ ನೋಡಿಬರುವ ಅನಿಸಿ ಹೊರಟೆ. ಆಗ್ರಾದಲ್ಲಿ ಉಳಿದುಕೊಂಡೆ. ಸುಮಾರು ಮೂವತ್ತೈದು ನಲವತ್ತು ವರ್ಷಗಳ ಹಿಂದೆ ತಾಜ್ ಮಹಲ್ ನೋಡಿದ್ದು. ಆಗ ಪ್ರೇಮ ಪ್ರೀತಿಯ ಬಗ್ಗೆಯ ಆದ ರೋಮಾಂಚನ, ಈಗ ತಾಜ್ ಮಹಲ್ ನೋಡುವಾಗ ಆಗಲಿಲ್ಲ. ತಾಜ್ ಮಹಲ್ ನ ಒಳಗೆ ಕತ್ತಲು. ಒಬ್ಬ ಪ್ರೇಮಿಯ ನೆನಪಿಗಾಗಿ ಪ್ರಜೆಗಳಿಂದ ದೋಚಿದ ಹಣದಿಂದ ಸ್ಮಾರಕ!? ಪ್ರೀತಿಯನ್ನು ವಿಮರ್ಶಿಸುತ್ತಿದ್ದೇನೆ , ನನಗೆ ವಯಸ್ಸಾಯಿತೆಂದು ಕಾಣಿಸುತ್ತದೆ.

ವಾಪಸ್ಸು ದೆಹಲಿಗೆ ಮರಳಲು ಮಾರನೆಯ ದಿನ ಕರ್ನಾಟಕ ಎಕ್ಸ್ ಪ್ರೆಸ್ ರೈಲನ್ನು ಬೆಳಗ್ಗೆ 6.40ಕ್ಕೆ ಹಿಡಿಯಬೇಕು. 5ಕ್ಕೆ ಎದ್ದು ಸ್ನಾನ ಮಾಡಿ ಪೆಟ್ಟಿಗೆ ತೆಗೆದುಕೊಂಡು ಹೊರಬಂದಾಗ ಗಂಟೆ 6. ಇನ್ನೂ ಕತ್ತಲು. ದಟ್ಟ ಮಂಜು. ಹಲ್ಲು ಟೈಪ್ ರೈಟರ್ ಹೊಡೆಯುವಷ್ಟು ಚಳಿ. ಆಟೋ ಮಾಡಿ ಬರುವಾಗ ರಸ್ತೆಯಲ್ಲಿ ಎದುರಿಗೆ ಅಕ್ಕಪಕ್ಕ ಬರುವ ಹೋಗುವವು ಯಾವುದೂ ಕಾಣಿಸಲಿಲ್ಲ.

‘ಪಂದ್ರ ದಿನ್ ಪಹಲೇ ಹೀ ಠಂಡ್ ಶುರು ಹೋಗಯಾ ಸಾಬ್’ ಆಟೋ ಡ್ರೈವರ್ ಹೇಳಿದ. 6.40ಕ್ಕೆ ಬರಬೇಕಾದ ರೈಲು ಅರ್ಧ ಗಂಟೆ, ಒಂದು ಗಂಟೆ ಹೀಗೆ ಮುಂದೂಡುತ್ತಾ ಬಂದು ಆಗ್ರಾ ನಿಲ್ಧಾಣ ತಲುಪಿದಾಗ 11ಗಂಟೆ. ಹೊಟ್ಟೆ ಹಸಿವು. ಅಂತಹ ಪ್ರಸಿದ್ಧ ಪ್ರವಾಸಿ ತಾಣದ ರೈಲು ನಿಲ್ಧಾಣದಲ್ಲಿ ಒಂದು ರೆಸ್ಟೌರೆಂಟ್ ಇಲ್ಲದ್ದು ಬಹಳ ಸೋಜಿಗ. ಬಂಡಿ, ಡಬ್ಬಗಳಲ್ಲಿ ಕಚೋರಿ, ಸಮೋಸ ಅಷ್ಟೇ. ಕೊಂಡು ತಿನ್ನುವಾಗ ಪಕ್ಕದಲ್ಲಿ ಸುಮಾರು ಹತ್ತು ವಯಸ್ಸಿನ ಹುಡುಗ ನನ್ನ ಮುಂದೆ ಬೇಡಿಕೆ ಕಣ್ಣುಗಳಿಂದ ಕೈಯೊಡ್ಡಿ ನಿಂತಿದ್ದ. ಅವನಿಗೂ ಸಮೋಸ ಕಚೋರಿ ಚಾಯ್ ಕೊಡಿಸಿದೆ. ತಿಂದು ಮುಗಿಸಿ, ನಕ್ಕು, ಸಲಾಂ ಹೊಡೆದು ಹೋದ.

ಸಮಯ ಕಳೆಯಲು ಅಲ್ಲಿದ್ದ ಪುಸ್ತಕದ ಅಂಗಡಿಯಲ್ಲಿ Paulo Coelho (ಉಚ್ಛಾರ ಸರಿಯಾಗಿ ತಿಳಿಯದ್ದರಿಂದ ಇಂಗ್ಲೀಷಿನಲ್ಲೇ ಬರೆದಿರುವೆ) ವಿನ ‘Like The Flowing River’ ಕೊಂಡು, ರೈಲಿಗಾಗಿ ಕಾಯುತ್ತಾ ಓದಲು ಕುಳಿತೆ. ‘On My Way to The Chicago Book Fair’ ಎಂಬ ಅಂಕಣದಲ್ಲಿ ಅವನು ನ್ಯೂಯಾರ್ಕಿನಿಂದ ಚಿಕಾಗೋ ಪುಸ್ತಕ ಪ್ರದರ್ಶನಕ್ಕೆ ವಿಮಾನದಲ್ಲಿ ಹೋಗುತ್ತಿದ್ದಾಗ, ವಿಮಾನದ ಮಧ್ಯ ಬಾಗಕ್ಕೆ ಒಬ್ಬ ಯುವಕ ಬಂದು ನಿಂತು ಹೀಗೆ ವಿನಂತಿಕೊಳ್ಳುತ್ತಾನೆ “ I need twelve volunteers each willing to carry a single rose when we get of the plane.”ಅನೇಕರು ಕೈಯೆತ್ತುತ್ತಾರೆ.

Paulo Coelho ಗೆ ಅವಕಾಶ ಸಿಕ್ಕದಿದ್ದರೂ ವಿಮಾನ ದರೆಗಿಳಿದ ಮೇಲೆ ಕುತೂಹಲಕ್ಕೆ ಅವರ ಹಿಂದೆ ನಡೆಯುತ್ತಾನೆ. ಆಗ ಯುವಕ O’ Hare ವಿಮಾನ ನಿಲ್ಧಾಣದಲ್ಲಿ ಆಗಮನದ ಹಾಲಿನಲ್ಲಿ ನಿಂತಿದ್ದ ಒಬ್ಬ ಯುವತಿಯನ್ನು ತೋರಿಸಿ ಅವಳಿಗೆ ಆ ಗುಲಾಬಿಗಳನ್ನು ಕೊಡಲು ಕೇಳಿಕೊಳ್ಳುತ್ತಾನೆ. ಮತ್ತು ಎಲ್ಲರ ಮುಂದೆ ಅವಳ ಎದುರು ಮಂಡಿಯೂರಿ ಅವನನ್ನು ಮದುವೆಯಾಗಲು ಬೇಡಿಕೊಳ್ಳುತ್ತಾನೆ. ಆಗ ಅಲ್ಲಿದ್ದ ವಿಮಾನ ಸೇವಕಿಯೊಬ್ಬಳು ಹೇಳುವ ಮಾತು “ I have been here for years, and that’s the most romantic thing that has ever happened in this airport” ಇಲ್ಲ ನನಗೆ ವಯಸ್ಸಾಗಿಲ್ಲ. ನಾನು ಈಗಲೂ ರೊಮಾಂಟಿಕ್ ಅನಿಸಿತು.

ಹನ್ನೊಂದಕ್ಕೆ ಬಂದ ರೈಲಿನಲ್ಲಿ ಹತ್ತಿ 195 ಕಿ.ಮೀ ರನ್ನು ಮೂರು ತಾಸಿನಲ್ಲಿ ತಲುಪಬೇಕಾದ ರೈಲು ಆರು ತಾಸು ತೆಗೆದುಕೊಂಡಿತು. ಅಂದು ಸಂಜೆ 4.05ರ ನನ್ನ ಬೆಂಗಳೂರಿನ ವಿಮಾನ ಕ್ಯಾನ್ಸಲ್ ಆಗಿರುವುದಾಗಿ ಮೆಸೇಜ್ ಬಂದಿತ್ತು. ಆದರೂ ನಾನು ಬೆಂಗಳೂರು ತಲುಪಬೇಕು. ಹೊಸ ದೆಹಲಿಗೆ ಬಂದು ತಲುಪಿದ ರೈಲಿನಲ್ಲಿ ಇಳಿದು, ಅಲ್ಲಿಂದ ಮೆಟ್ರೊ ಹಿಡಿದು, ಏರೋಸ್ಪೇಸ್ ಸಿಟಿಯಿಂದ ಬಸ್ ಹಿಡಿದು ಇಂದಿರ ಗಾಂಧಿ ಏರ್ರ್ಪೋರ್ಟು ತಲುಪಿದಾಗ ಸಂಜೆ 6.30.

ಅಲ್ಲಿ ಇಂಡಿಗೋ ಟಿಕೆಟ್ ಕೌಂಟರಿಗೆ ಹೋಗಿ ಕ್ಯೂ ನಿಂತು ಅಲ್ಲಿದ್ದ ಕರ್ಮಚಾರಿಗೆ ನನಗೆ ಬಂದ ಮೆಸೇಜ್ ತೋರಿಸಿ, ಕನ್ವಿನ್‌ಸ್ ಮಾಡಿದಾಗ ಮಾರನೆಯ ದಿನ ಬೆಳಗ್ಗೆ 8ರ ವಿಮಾನಕ್ಕೆ ಟಿಕೆಟ್ ಕೊಡುವುದಾಗಿ ಹೇಳಿದಾಗ, ಬೆಳಗ್ಗೆಯಿಂದ ಒಂದು ಸಮೋಸ ಕಚೋರಿ ಟೀ ಅಷ್ಟೇ ತಿಂದು ಸಂಜೆಯವರೆಗೂ ಹಸಿದಿದ್ದ ಕೋಪವಿದ್ದರೂ ಅವನೊಂದಿಗೆ ಸಮಾಧಾನದಿಂದ ಮಾತನಾಡಿ ಅಂದು ರಾತ್ರಿ 8ಗಂಟೆ ವಿಮಾನಕ್ಕೆ ಟಿಕೆಟ್ ಬದಲಾಯಿಸಿ ಕೊಂಡಾಗ ಒಂದಿಷ್ಟು ನೆಮ್ಮದಿ.

ಗಂಟೆ ನೋಡಿದರೆ 7.15. ದಬದಬ ಪೆಟ್ಟಿಗೆ ಎಳೆದುಕೊಂಡು ಕೇಮರ ಬೇಗನ್ನು ಹೊತ್ತು ಕೌಂಟರಿಗೆ ಬಂದು ಬೋರ್ಡಿಂಗ್ ಪಾಸ್ ತೆಗೆದುಕೊಂಡು ತಪಾಸಣೆಯ ಕ್ಯೂನಲ್ಲಿ ನಿಂತಾಗ ನೆನಪಾಯಿತು, ಟಿಕೆಟ್ ಕೌಂಟರಿನಲ್ಲಿ ಮೆಸೇಜ್ ನೋಡಲು ಅವನ ಕೈಗೆ ಕೊಟ್ಟ ಫೋನು. ಮತ್ತೆ ಓಡಿ ಬಂದರೆ ಸೆಕ್ಯೂರಿಟಿ ಕಾರಣಕ್ಕೆ ಹೊರಗೆಬಿಡುತ್ತಿಲ್ಲ. ಇಂಡಿಗೋ ಕರ್ಮಚಾರಿಯನ್ನು ಹಿಡಿದು ಗೋಗರೆದು ಫೋನ್ ತೆಗೆದುಕೊಂಡು ಬಂದಾಗ ಬೋರ್ಡಿಂಗ್ ಪಾಸ್ ಕೈಯಲ್ಲಿಲ್ಲ. ಮತ್ತೆ ಬಂದ ದಾರಿಯ ಹುಡುಕುತ್ತಾ ಬಂದಾಗ ಒಬ್ಬರು information counter ನಲ್ಲಿದೆ ಎಂದರು. ತಪಾಸಣೆ ಮುಗಿಸಿ ಬಂದು, ಉದ್ದಕ್ಕೆ ನಿಂತಿದ್ದ ಚೆಕ್ಕಿನ್ ಕ್ಯೂ ನೋಡಿ ಸಮಾಧಾನವಾಗಿ ಸುರಿಯುತ್ತಿದ್ದ ಬೆವರನ್ನು ಒರಸಿಕೊಂಡೆನು. ವಿಮಾನದಲ್ಲಿ ಕುಳಿತು 200 ರೂಪಾಯಿ ತೆತ್ತು ಉಪ್ಪಿಟ್ಟು ಕೊಂಡು ತಿಂದಾಗ ಕೋಪ ಬಂದರೂ ಸ್ವಲ್ಪ ಹೊಟ್ಟೆ ತಣ್ಣಗಾದ ಸಮಾಧಾನ.

ನಿದ್ದೆ. ಬಂದಿಳಿದಾಗ ರಾತ್ರಿ 11 ಗಂಟೆ. ಏರ್ಪೋರ್ಟ್ ಬಸ್ ಹಿಡಿದು ಶಾಂತಿನಗರ್ ಬಸ್ ನಿಲ್ದಾಣದಲ್ಲಿ ಇಳಿದು ಆಟೋದವನು ಹೇಳಿದ ಡಬ್ಬಲ್ ಚಾರ್ಜಿಗೆ ಒಪ್ಪಿ ಕುಳಿತು ನೋಡಿದರೆ, ಮೀಟರ್ ಆಟೋದ ವೇಗವ ಮೀರಿಸಿ ಓಡುತ್ತಿತ್ತು. ನಾರ್ಮಲ್ ಆಗಿ 105 ರೂಪಾಯಿಗಳು ಬರುತ್ತದೆ ಕಾಮಕ್ಯದ ಬಳಿಯ ನಮ್ಮ ಮನೆಗೆ. ಡಬ್ಬಲ್ ಎಂದರೂ 210. ಮೀಟರ್ ತೋರಿಸಿದ್ದೋ 175, ಅತ್ತದ್ದು 350. ತೋರಿಸಿದ ಕಿ.ಮೀ. 13.5. ಇರುವುದು ಸುಮಾರು 6 km. ಡ್ರೈವರ್ ಲೈಸೆನ್ಸ್ ವಿವರದ ಸಣ್ಣ ಮಾಹಿತಿಯ ಬೋರ್ಡೂ ಸಹ ಇರಲಿಲ್ಲ. ನಂಬರ್ ಗುರಿತಿಸಿಕೊಂಡು ಬೆಳಗ್ಗೆ ಮೆಯಿಲಿನಲ್ಲಿ ಟ್ರಾಫಿಕ್ ಪೋಲಿಸಿಗೆ ದೂರು ಕೊಟ್ಟದ್ದಾಯಿತು.

ರಾತ್ರಿ ಮಲಗಿದ್ದಾಗ ಕನಸಿನಲ್ಲಿ ಮಂಡಿಯೂರಿ ಗುಲಾಬಿ ಕೊಟ್ಟು ಪ್ರಪೋಸ್ ಮಾಡುವ ಯುವಕನಾಗಿ ನಾನು.. ದೆಹಲಿಯ ದಟ್ಟ ಮಂಜಿನಲ್ಲಿ ಮರೆಯಾಗಿದ್ದ ಯುವತಿಯ ಮುಖ..

‍ಲೇಖಕರು Admin

December 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಮುದುಕರಾಗಿದ್ದೇವೆ ಎಂಬುದನ್ನು ಆಗಾಗ ಹೀಗೆ ಮರೆಯುವುದು ಒಳ್ಳೆಯದು ಸರ್….:):):)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: