ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಗ ಆಗುವುದಾ..?!

ಪಾರ್ವತಿ ಜಿ. ಐತಾಳ್

**

ಲೇಖಕ ಗೋಪಾಲ ತ್ರಾಸಿ ಅವರ ಕೃತಿ ‘ಒಟ್ರಾಸಿ ಪ್ರಸಂಗಗಳು’.

ಈ ಕೃತಿಯ ಕುರಿತು ಖ್ಯಾತ ಲೇಖಕಿ, ವಿಮರ್ಶಕಿ ಪಾರ್ವತಿ ಜಿ. ಐತಾಳ್ ಅವರು ಬರೆದ ಬರಹ ಇಲ್ಲಿದೆ.

**

ಮುಂಬೈನಲ್ಲಿರುವ ಕನ್ನಡ ಲೇಖಕ ಗೋಪಾಲ ತ್ರಾಸಿಯವರು ತಮ್ಮ ಕವನ ಸಂಕಲನಗಳು ಮತ್ತು ಅಂಕಣ ಲೇಖನಗಳ ಮೂಲಕ ಈಗಾಗಲೇ
ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ದೃಢವಾದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ‘ಒಟ್ರಾಸಿ ಪ್ರಸಂಗಗಳು‘ ಅವರ ಇತ್ತೀಚಿನ ಲಘು ಹರಟೆಗಳ
ಸಂಕಲನ. ಇದರಲ್ಲಿರುವ ಹದಿನಾಲ್ಕು ಲೇಖನಗಳು ಲಘು ಧಾಟಿಯಲ್ಲಿದ್ದರೂ ಚಿಂತನೆಗೆ ಪ್ರೇರಣೆ ನೀಡುವ ಹಲವು ಗಂಭೀರ ವಿಚಾರಗಳನ್ನೂ
ಒಳಗೊಂಡಿವೆ.

ನಗರಗಳ ಸಿಗ್ನಲ್ ಗಳಲ್ಲಿ ಪ್ರಯಾಣಿಕರನ್ನು ಗೋಳು ಹೊಯ್ದುಕೊಳ್ಳುವ ಮಂಗಳಮುಖಿಯರ ಸಮಸ್ಯೆ ‘ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬಂತೆ ಹೆಂಗಸರ ವೇಷ ಧರಿಸಿಕೊಂಡು ಬಂದು ಹಣ ಬೇಡುವ ನಿಜವಾದ ಗಂಡಸರು ಉಂಟು ಮಾಡುವ ತೊಂದರೆಗೆ ಏನು ಹೇಳುವುದೆಂಬ ಪ್ರಶ್ನೆಯನ್ನು ಎತ್ತುತ್ತದೆ ಮೊದಲ ಲೇಖನ ‘ಮೇನಕೆಯಲ್ಲಾ..’ ಧಾಟಿ ಹಾಸ್ಯದ್ದೇ ಆದರೂ ಒಂದು ಹೊಸ ಧಂಧೆ ಹುಟ್ಟಿಕೊಳ್ಳುತ್ತಿರುವ ಕುರಿತು ವಿಷಾದವೂ ಇದೆ. ಕೆಲವರಿಗೆ ಸಿಕ್ಕಾಪಟ್ಟೆ ಮಾತನಾಡುವ ಚಟ. ಎದುರಿಗೆ ಯಾರು ಸಿಕ್ಕಿದರೂ ಅವರಿಗೆ ಜಿಗಣೆಯಂತೆ ಅಂಟಿಕೊಂಡು ಏನೇನೋ ಹೇಳುತ್ತ ಮಾತು ನಿಲ್ಲಿಸಿದೆ ಅವರ ಕಿವಿ ತೂತು ಮಾಡುತ್ತಾರೆ. ಭಾಷಣ ಮಾಡುವವರೂ ಹಾಗೆಯೇ. ಕೈಗೆ ಮೈಕ್ ಸಿಕ್ಕಿದರೆ ಸಾಕು ಯಾರು ಕೇಳಲಿ ಬಿಡಲಿ ಮಾತಾಡುತ್ತಲೇ ಇರುತ್ತಾರೆ. ಇಂಥವರಿಗೆ ಒಂದು ‘ಲೈಟ್ ಡೋಸ್’ ಇದೆ ‘ಹೀಗೊಂದು ಕೊರೆತ’ ಎಂಬ ಲೇಖನದಲ್ಲಿ.

ಕಾಫಿ ಪ್ರಿಯರ ಕುರಿತಾದ ‘ಲೈಟ್ ಕಾಫಿ’,‌ ಭೂಕಂಪ ಸಂತ್ರಸ್ತರಿಗಾಗಿ ಬಟ್ಟೆಗಳನ್ನು ಸಂಗ್ರಹಿಸಿ ಅವುಗಳನ್ನು ಮಾರಾಟಕ್ಕಿಡುವ ಸಮಾಜ ಸೇವಕರು ಹಾಕುವ ಸೋಗಿನ ಕುರಿತಾದ ‘ಚೌಕುಳಿ ಅಂಗಿ’, ಬರೆಯುವವರನ್ನು ಕಂಡರೆ ಸಾಕು ಬರೆದು ಕೊಡಿ ಎಂದು ದುಂಬಾಲು ಬೀಳುವವರ ಕುರಿತಾದ ‘ಇದೊಂದು ಕೆಟ್ಟ ಚಟಾರಿ’, ಟೋಪಿ ಹಾಕುವ ಅಥವಾ ಹಾಕಿಸಿಕೊಳ್ಳುವವರ ಕುರಿತಾದ ‘ಮಂಗ ಆಗುವುದಾ?’ ಇವೆಲ್ಲವೂ ಲಘು ಧಾಟಿಯ ಹಾಸ್ಯದ ಜೊತೆಗೇ ವ್ಯಂಗ್ಯ ವಿಷಾದಗಳನ್ನೂ ಒಳಗೊಂಡಿವೆ.

ಕುಡುಕರ ಸಂಘದ ಸಭೆಯಲ್ಲಿ ಭಾಷಣ ಮಾಡುವವರ ಕುರಿತಾದ ‘ಅಭಾಕುಸಂ’ನಲ್ಲಿ ಉತ್ಪ್ರೇಕ್ಷೆಯ ಮೂಲಕ ಹಾಸ್ಯವಿದೆ. ಉಳಿದಂತೆ ಬಜೆಟ್, ಕ್ರಿಕೆಟ್, ಗಾದೆ ಮಾತುಗಳ ಬಳಕೆ, ಗುಂಡಿ ಎಂದರೆ, ಪತ್ರಿಕೋದ್ಯಮ ಶಿಬಿರಗಳ ಕುರಿತಾದ ಲೇಖನಗಳಲ್ಲಿ ನಿರೂಪಣೆಯ ಧಾಟಿ ಹಾಸ್ಯದ್ದೇ ಆದರೂ ವಿಚಾರಗಳು ಗಂಭೀರವಾಗಿದೆ. ಹಾಸ್ಯದ ಶೈಲಿ ಗೋಪಾಲರಿಗೆ ಚೆನ್ನಾಗಿ ಒಲಿದಿದೆ. ಎಲ್ಲಾ ಲೇಖನಗಳೂ ಓದುವಾಗ ನಗುವಿನ ಅಲೆಗಳನ್ನು ಎಬ್ಬಿಸುವಷ್ಟು ಶಕ್ತವಾಗಿವೆ. ಒಟ್ಟಿನಲ್ಲಿ ತಿಳಿಗನ್ನಡದಲ್ಲಿ ಬರೆದಿರುವ ಈ ಕೃತಿಯ ಓದು ಒಂದು ಖುಷಿಯ ಅನುಭವವನ್ನು ನೀಡುತ್ತದೆ.

‍ಲೇಖಕರು Admin MM

11 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading