ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರು ಪದ್ಮ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಈ ಪುರಸ್ಕಾರವನ್ನು ಗೌರವಿಸುತ್ತಲೇ ಪತ್ರಕರ್ತ, ಸಾಹಿತಿ ಹಣಮಂತ ಹಾಲಗೇರಿ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ಒಂದು ಯುವ ತಲೆಮಾರು ಯಾವ ರೀತಿ ನೋಡುತ್ತಿದೆ ಎನ್ನುವುದರ ಸೂಚಕ.
ಈ ಬರಹ ‘ಜುಗಾರಿ ಕ್ರಾಸ್’ ನಲ್ಲಿದೆ. ಅಂದರೆ ಚರ್ಚೆಗೆ ಮುಕ್ತವಾಗಿದೆ. ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ. ಕಾಮೆಂಟ್ ಮಾಡಿ
ಭೈರಪ್ಪನವರಿಗೆ ಪದ್ಮಶ್ರೀ ಮತ್ತು ಕಥೆ ಎಂಬ ಮಾಯಾವಿ ವಿದ್ಯೆ

ಹನಮಂತ ಹಾಲಗೇರಿ
ನಾನೊಬ್ಬ ಸಾಹಿತ್ಯದ ವಿದ್ಯಾರ್ಥಿಯಾಗಿ, ಕಥೆ ಬರೆಯುವವನಾಗಿ ಭೈರಪ್ಪನವರ ಕಥನಕ್ರಮ, ನಿರೂಪಣಾ ಶೈಲಿ, ದೇಶ-ಕಾಲವನ್ನು ಕಟ್ಟುವಿಕೆ, ಅವರ ಕಲ್ಪನಾ ವಿಲಾಸ, ಸುಂದರವಾದ ಹೆಣಿಕೆ ಇವೆಲ್ಲವೂ ನನ್ನನ್ನು ನಿಬ್ಬೆರಗಾಗಿಸುತ್ತವೆ. ಅವರು ಮೇರು ಪರ್ವತವೇ ಸರಿ. ಅವರು ಸಂಸ್ಕೃತದ ಬಗ್ಗೆ ಎಷ್ಟೇ ಹಳಹಳಿಸಿದರೂ, ಕನ್ನಡದಲ್ಲಿ ಬರೆಯುವ ಮೂಲಕ ಕನ್ನಡಕ್ಕೆ ಮತ್ತೊಂದು ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟಿರುವುದಕ್ಕೆ ಅಭಿನಂದನೆಗಳು.
ನನ್ನಜ್ಜಿ ಹೇಳುತ್ತಿದ್ದ ಬಹುತೇಕ ಕಥೆಗಳಲ್ಲಿ ಒಬ್ಬ ಮಾಯಾವಿ ರಾಕ್ಷಸ ಬರುತ್ತಿದ್ದ. ಆತ ಏನೇನೋ ತಪಸ್ಸು ಮಾಡಿ, ದೇವರುಗಳನ್ನು ಮರಳು ಮಾಡಿ ಬದುಕುಗಳನ್ನು ಒಡೆಯುವ, ಇರಿದು ಕೊಲ್ಲುವ ಮಾಯಾವಿ ವಿದ್ಯೆಯನ್ನು ವರವಾಗಿ ಪಡೆಯುತ್ತಿದ್ದ. ಆಮೇಲೆ ಅಂವ ಹೋಗೋ ಹಾದಿಬೀದಿಗುಂಟ ಬದುಕುಗಳನ್ನು ಅಳಿಸುತ್ತ ಹೋಗುತ್ತಿದ್ದ.
ಈ ಕಥನ ಕೌಶಲ್ಯ ಎನ್ನುವುದು ಸಹ ಒಂದು ಮಾಯಾವಿ ವಿದ್ಯೆ ಇದ್ದಂತೆ. ಎಲ್ಲರಿಗೂ ಸುಲಭವಾಗಿ ದಕ್ಕುವಂಥದ್ದಲ್ಲ. ದಕ್ಕಿಸಿಕೊಂಡವರು ತುಂಬಾ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ರಾಕ್ಷಸರ ಮಾಯಾ ವಿದ್ಯೆ ಮನುಷ್ಯರನ್ನು ನಾಶ ಮಾಡಿದರೆ, ಈ ಕಥನವಿದ್ಯೆ ಮನುಷ್ಯರ ಮನಸ್ಸುಗಳನ್ನು ಆವರಿಸಿಕೊಂಡುಕೊಂಡು ನಿಧಾನಕ್ಕೆ ವಿಷವುಣಿಸುತ್ತಾ ಹೋಗುತ್ತದೆ. ಅವರು ಮೇಲು ಇವರು ಕೀಳು, ನಾವು ಬೇರೆ ನೀವು ಬೇರೆ ಎನ್ನುವ, ಮನಸ್ಸು ಮನಸ್ಸು ಒಡೆಯುವ, ಇತಿಹಾಸದಲ್ಲಿರುವ ಕಪ್ಪು ಚುಕ್ಕೆಗಳ ಸುತ್ತ ಮನಬಂದಂತೆ ಗಿರಗಿಟ್ಲೆ ಆಡಿ ಯಾವತ್ತೋ ಘಟಿಸಿರುವ ತಪ್ಪುಒಪ್ಪುಗಳನ್ನು ತಮ್ಮ ಮೂಗಿನ ನೇರಕ್ಕೆ ಕಲ್ಪಿಸಿಕೊಂಡು ಇಂದಿನ ಮನಸ್ಸುಗಳನ್ನು ಕೆರಳಿಸುವ, ಪುರಾಣ ಪುಣ್ಯ ಕಥೆಗಳಂತೆಯೇ ಬದುಕಲು ಹೇಳಿ ಮನುಷ್ಯನ ಆಗಾಧ ಶಕ್ತಿಯನ್ನು ಕಟ್ಟಿ ಹಾಕುವ, ಇಂಥವಕ್ಕೆಲ್ಲ ಕಥನ ವಿದ್ಯೆ ಬಳಕೆಯಾದರೆ.. ಇಡಿ ಮಾನವಕುಲದ, ದೇಶದ ಮುನ್ನೋಟವನ್ನು ಕಟ್ಟಿ ಹಾಕಿದಂತೆ ಎಂದು ನನ್ನ ಬಲವಾದ ನಂಬಿಕೆ.
ನಾನು ಮುಸ್ಲಿಂರೊಂದಿಗೆ ಕೂಡ್ಯಾಡಿ ಬೆಳೆದವನು. ಈಗಲೂ ನಮ್ಮ ಮನೆಯ ಪಕ್ಕ ನಾಲ್ಕೈದು ಮುಸ್ಲಿಂ ಕುಟುಂಬಗಳು ನೆಲೆಸಿವೆ. ಮೊದಲೆಲ್ಲ ನಮ್ಮ ಮನೆಯಲ್ಲಿ ಏನೇ ನೋವು ಸಂಭ್ರಮಗಳಿದ್ದರೂ ಅವರು ಇರುತ್ತಿದ್ದರು. ನಮ್ಮ ಹೊಲದಲ್ಲಿ ಅವರು ಮುಯ್ಯಾಳುಗಳಾದರೆ, ಅವರ ಹೊಲದಲ್ಲಿ ನಾವು ಮುಯ್ಯಾಳುಗಳು. ಆದರೆ, ಆ ಪರಿಸ್ಥಿತಿ ಈಗಿಲ್ಲ. ಮದುವೆಯಂಥ ಸಂಭ್ರಮಗಳಿಗೆ ಊರಿನ ಯಾವದೋ ಭಾಗದಲ್ಲಿರುವ ನಮ್ಮ ಸಮುದಾಯದವರನ್ನು ಹುಡುಕಿಕೊಂಡು ಹೋಗಿ ನೀವು ಬರಲೇಬೇಕು ಎಂದು ಒತ್ತಾಯಿಸುವ ನಮ್ಮ ಮನೆಯವರು, ಪಕ್ಕದ ಮನೆಯ ಮುಸ್ಲಿಮರತ್ತ ಸೌಜನ್ಯಕ್ಕೂ ಕರೆಯುವುದಿಲ್ಲ.
ಅವರೂ ಹಾಗೆ, ಆಗೆಲ್ಲ ಹಸನಪ್ಪ, ಹುಸನಪ್ಪ, ಸಕೀನವ್ವ, ಪಾತವ್ವರೆಂದು ಕರೆಸಿಕೊಳ್ಳುತ್ತ ನಮ್ಮ ಚಿಗವ್ವ, ದೊಡ್ಡಪ್ಪರಂತೆಯೆ ಇದ್ದ ಮುಸ್ಲಿಂರು ಈಗ ಥೇಟ್ ದಾಡಿ, ಟೋಪಿ ತೊಟ್ಟು ಖರೆ ಖರೆ ಮುಸ್ಲಿಂರಾಗುತ್ತಿದ್ದಾರೆ. 20 ವರ್ಷಗಳ ಹಿಂದಿದ್ದ ಮೋಹರಂ ಹಬ್ಬದ ಹೆಜ್ಜೆ ಕುಣಿತ, ರಿವಾಯತ್ ಪದಗಳು ಆ ಕೆಟ್ಟ ರಾತ್ರಿಯಲ್ಲಿ ನಡೆದ ಕೋಮುಗಲಬೆಯಿಂದಾಗಿ ಇವತ್ತು ಬರಿ ನೆನಪುಗಳಲ್ಲಿ ಮಾತ್ರ ಉಳಿದಿವೆ.
ಹೀಗೆ ಮನುಷ್ಯರ ಮನಸ್ಸು ಕಲುಷಿತಗೊಳ್ಳಲಿಕ್ಕೆ ನಮ್ಮಂಥವರು ಸೃಜಿಸುವ ಕಥೆಗಳು, ರಂಗಭೂಮಿ, ಸಿನೆಮಾ, ಮಾದ್ಯಮಗಳು ಬಹುಮುಖ್ಯ ಪಾತ್ರ ವಹಿಸುತ್ತಿವೆ. ಗ್ರಾಮಗಳಿಗೆ ಇವುಗಳ ಪ್ರವೇಶ ಹೆಚ್ಚುತ್ತಿದ್ದಂತೆಯೆ ಮನಸ್ಸುಗಳ ನಡುವಿನ ಕಂದರವೂ ಹೆಚ್ಚುತ್ತಿರುವುದಕ್ಕೆ ನೂರೆಂಟು ಸಾಕ್ಷಿಗಳು ಸಿಗುತ್ತವೆ.
ಈ ಎಲ್ಲವುಗಳ ನೆಲೆಯಿಂದ ನೋಡಿದಾಗ ಯಾವ ಕಥನತಂತ್ರವೂ ಗೊತ್ತಿಲ್ಲದ ಭಗವಾನ್ ರವರು ಭೈರಪ್ಪ ಅವರಿಗಿಂತ ಅಪ್ಪಟ ಮನುಷ್ಯಜೀವಿಯಾಗಿ ಮೇಲು ಎಣಿಸುತ್ತಾರೆ. ಅವರ ಪುರಾಣಗಳ ಹುಳುಕುಗಳನ್ನು ಹುಡುಕುಡುಕಿ ಮತ್ತೆ ಮತ್ತೆ ಚಾಲ್ತಿಗೆ ತರುವುದಕ್ಕೆ ನನ್ನದು ಅಸಮಧಾನವಿದೆ. ಆದರೆ, ಅವರೆಂದೂ ತಮ್ಮ ಮಾತು-ಕೃತಿಗಳಲ್ಲಿ ಮನುಷ್ಯರನ್ನು ಮನಸ್ಸುಗಳನ್ನು ತಾರತಮ್ಯದಿಂದ ನೋಡಿಲ್ಲ. ಹೊರತಾಗಿ ಮೇಲರಿಮೆಯ ಜನರಿಂದಾದ ತಪ್ಪುಗಳನ್ನು ಎತ್ತಿ ತೋರಿಸುವ, ತಾವು ಕಂಡುಕೊಂಡ ಸತ್ಯವನ್ನು ತಿಳಿಸುವ ಕೆಲಸವನ್ನು ನಿರ್ಭಿಡೆಯಿಂದ ಮಾಡುತ್ತಿದ್ದಾರೆ.
ಆದರೆ ಅವರಿಗೆ ಹೇಳುವ, ಸಂವಹಿಸುವ ಕಥನ ಕ್ರಮ ಗೊತ್ತಿಲ್ಲದ್ದರಿಂದ ಅವರಿಂದಲೂ ಸಹ ಮನಸ್ಸುಗಳ ಕೆರಳಿಸುವ ಕೆಲಸವೇ ಆಗುತ್ತಿದೆ ಎಂಬುದನ್ನು ಒಪ್ಪಲೇಬೇಕು. ಅವರಿಗೆ ರಾಜ್ಯಕ್ಕೆ ಸೀಮಿತವಾದ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಸಿಕ್ಕಾಗ ಹತ್ತಾರು ಸಾವಿರ ಮಂದಿ ವಿರೋಧವ್ಯಕ್ತಪಡಿಸಿ ಪತ್ರ ಚಳುವಳಿ ಮಾಡಿದರು. ಆದರೆ ಅವರೇ ಇಂದು ಭೈರಪ್ಪನವರಿಗೆ ಸಿಕ್ಕ ಪ್ರಶಸ್ತಿಯನ್ನು ಸಂಭ್ರಮಿಸುತ್ತಿದ್ದಾರೆ. ಇದ್ಯಾವ ಸೀಮೆ ನ್ಯಾಯವೋ ಗೊತ್ತಿಲ್ಲ.
ಕೊನೆಯದಾಗಿ ನನ್ನ ಅರಿವಿನ ವಿಸ್ತಾರಕ್ಕೆ ನೆರವಾದ, ಈ ಹೊತ್ತಿನಲ್ಲಿ ಮತ್ತೆ ಮತ್ತೆ ನೆನಪಾಗುವ ಕವಿತೆಯ ಸಾಲುಗಳನ್ನು ಒಮ್ಮೆ ಓದಿ ಬಿಡಿ. ಇಲ್ಲಿನ ಬಾಂಬ್ ಎನ್ನುವುದು ರೂಪಕ ಮಾತ್ರ. ಈ ಬಾಂಬ್ ಎನ್ನುವ ಜಾಗದಲ್ಲಿ ಕೋಮುವಾದ, ಜಾತಿಯತೆ, ಭ್ರಷ್ಟಾಚಾರ, ಅಸಹಿಷ್ಣುತೆ, ಕಾರ್ಪೋರೇಟೀಕರಣ ಇತ್ಯಾದಿಗಳೆಲ್ಲವನ್ನು ಹಾಕಿಕೊಳ್ಳಬಹುದು.
ಈತ ರಾಜಕಾರಣಿ
ಈತ ಬಾಂಬ್ ಸೃಷ್ಟಿಸಿದ
ಈತನಿಗೆ ಹತ್ತು ಬಾರುಕೋಲಿನಿಂದ ಬಾರಿಸಿರಿ.
ಈತ ಧರ್ಮಗುರು ಈತ ಬಾಂಬಿಗೆ ಧರ್ಮದ ಬಣ್ಣ ನೀಡಿದ
ಈತನಿಗೆ ಇಪ್ಪತ್ತು ಬಾರುಕೋಲಿನಿಂದ ಬಾರಿಸಿರಿ.
ಈತ ಕವಿ ಲೇಖಕ
ಈತನಿದ್ದೂ ಬಾಂಬ್ ಸೃಷ್ಟಿಯಾಯಿತು
ಈತನಿಗೆ ನೂರು ಬಾರುಕೋಲಿನಿಂದ ಬಾರಿಸಿರಿ!.”
-ಘನಶ್ಯಾಂ ಅಗರವಾಲ್ (ಕನ್ನಡಕ್ಕೆ ಸರಜೂ ಕಾಟ್ಕರ)
ಗಣರಾಜ್ಯೋತ್ಸವ. ಸಂವಿಧಾನ ದಕ್ಕಿದ ದಿನವನ್ನ ನಿನ್ನೆ . ಇನ್ನಾದರೂ ದೇಶದ ಸಂವಿಧಾನಕ್ಕೆ ಬದ್ಧರಾಗಿ ಮನಸ್ಸುಗಳನ್ನು ಕಟ್ಟುವ, ಆ ಮೂಲಕ ದೇಶವನ್ನು ಕಟ್ಟುವ, ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗಿಸುವ ಬರವಣಿಗೆ ಮಾಡೋಣ. ಮನುಷ್ಯನ ಅನಿಕೇತನವನ್ನು ಬಂಧಿಸಿಟ್ಟಿರುವ ದೇವರು, ಧರ್ಮಗಳ ಮೌಡ್ಯಗಳನ್ನು ಕಿತ್ತೆಸೆಯುವ ನಾಟಕ, ಸಿನೆಮಾಗಳನ್ನು ಮಾಡೋಣ..





ತೂಕದ ಬರಹ … ಯೋಚನೆಗೆ ಹಚ್ಚುತ್ತದೆ ಹಾಲಗೇರಿಯವರೇ
ಸಾರ್.. ಸಾಹಿತ್ಯ ವಲಯದಲ್ಲಿ ತಕ್ಕಡಿ ಹಿಡಿದು ಓಡಾಡಬೇಡಿ..!
What was the need to compare Byrappa with Bagavan? Either a sick mind or a mind which wants to hog the lime light can think like that.
“ಯಾವ ಕಥನ ತಂತ್ರವೂ………..ಅವರು ಪುರಾಣಗಳ ಹುಳುಕುಗಳನ್ನು ಹುಡುಕಿ ಹುಡುಕಿ ಮತ್ತೆ ಮತ್ತೆ ಚಾಲ್ತಿಗೆ ತರುವುದಕ್ಕೆ ನನ್ನದು ಅಸಮಧಾನವಿದೆ. ಆದರೆ ಅವರಿಗೆ ಹೇಳುವ ಸಂವಹಿಸುವ ಕಥನ ಕ್ರಮ ಗೊತ್ತಿಲ್ಲದರಿಂದ ಅವರಿಂದಲೂ ಮನಸ್ಸನ್ನು ಕೆರಳಿಸುವ ಕೆಲಸವೇ ಆಗುತ್ತಿದೆ. ”
ಈ ವಾಕ್ಯಗಳು ನಿಮ್ಮವೇ ಸರ್. ಭಗವಾನ್ ರ ಮಾತನ್ನ ಕೇಳಿಕೆರಳಿದ ಸಮುದಾಯ ಟೌನ್ ಹಾಲೆದುರು ಮಾಡಿದ ಪ್ರತಿಫಲ ನೀಡಿದಿರಿ. ಆದರೆ ಭೈರಪ್ಪ ನವರ ಕಥಾನಕಗಳನ್ನು ಓದಿದ ಯಾವಗುಂಪೂ ಚಳವಳಿಯನ್ನು ಮಾಡಿದ್ದು ನನಗೆ ತಿಳಿದಿಲ್ಲ. ಇಬ್ಬರ ಹಿಂಬಾಲಕರು ನೀಡಿದ ಪ್ರತಿಕ್ರಿಯೆ ಯಲ್ಲಿಯೇ ವ್ಯತ್ಯಾಸ ಗಮನಿಸಿದರೆ ಯಾರು ಸಮಾಜವನ್ನು ಎತ್ತ ಸಾಗಿಸುತ್ತಿದ್ದಾರೆ ಎನ್ನುವುದು ಯಾರಿಗಾದರೂ ತಿಳಿದೀತು.
ಉತ್ತಮ ಪ್ರಯತ್ನ… ಆದರೇ…
ನಾನು ಕೂಡ ಮುಸ್ಲಿಂರೊಂದಿಗೆ ಕೂಡ್ಯಾಡಿ ಬೆಳೆದವನು, ಇದನ್ನು ನನ್ನ excuse ಎಂದು ತಿಳಿಯಬೇಡಿ. ಇವತ್ತಿಗೂ ಮುಸ್ಲಿಮರಲ್ಲಿ ನನಗೆ ಕಾಕಾ, ಮಾಮಾ, ಚಿಗವ್ವ, ಅಕ್ಕ, ಅಜ್ಜರಿದ್ದಾರೆ.
ಒಂದು ನಿರ್ದಿಷ್ಟ ಧರ್ಮದ ನಂಬಿಕೆಗಳನ್ನು ಆಧಾರ ರಹೀತವಾಗಿ ಖಂಡಿಸುವ ಮತ್ತು ಅವಮಾನಿಸುವ ಮಾತುಗಳನ್ನಾಡಿದ ಭಗವಾನ್ ಮನುಷ್ಯರನ್ನು ಮನಸ್ಸುಗಳನ್ನು ತಾರತಮ್ಯದಿಂದ ನೋಡಿಲ್ಲ ಎಂಬ ನಿಮ್ಮ ಮಾತನ್ನು ನಾನು ಒಪ್ಪುವುದಿಲ್ಲ, ಮೇಲಾಗಿ ಭಗವಾನ್ “ತಾವು ಕಂಡುಕೊಂಡ ಸತ್ಯವನ್ನು ತಿಳಿಸುವ ಕೆಲಸವನ್ನು ನಿರ್ಭಿಡೆಯಿಂದ ಮಾಡುತ್ತಿದ್ದಾರೆ” ಎಂದು ಹೇಳುವ ನೀವು ಭೈರಪ್ಪ ಕೂಡ “ತಾವು ಕಂಡುಕೊಂಡ ಸತ್ಯವನ್ನು ತಿಳಿಸುವ ಕೆಲಸವನ್ನು ನಿರ್ಭಿಡೆಯಿಂದ ಮಾಡುತ್ತಿದ್ದಾರೆ” ಎಂದು ಏಕೆ ಅಂದುಕೊಳ್ಳುವುದಿಲ್ಲ. ಭೈರಪ್ಪನವರ ಕೃತಿಗಳಲ್ಲಿ ಹಲಾವರು ಸಂಶೋಧನಾ ಆಕರ (References) ಗಳನ್ನು ಕಾಣಬಹುದು, ಆದರೆ ಅಂತಹ ಉದಾಹರಣೆಗಳು ಭಗವಾನರ ಕೃತಿಗಳಲ್ಲಿ ಸಿಗ್ಲೇ ಇಲ್ಲ.
ಶ್ರೀಯುತ ಹನುಮಂತ ಹಾಲಗೇರಿಯವರೇ,
ಎಸ್.ಎಲ್. ಭೈರಪ್ಪನವರದು ಕೇವಲ ಕಥನ ಹೆಣೆಯುವ ಮಾಯಾವಿ ತಂತ್ರ ಎಂದು ನೀವು ಬರೆದದ್ದು ಓದಿ ವಿಚಿತ್ರವೆನಿಸಿತು. ಸತ್ಯವನ್ನು ದಾಖಲೆಗಳ ಸಮೇತ ತಮ್ಮ ಶೈಲಿಯಲ್ಲಿ ಬರೆದರೆ ಅದು ತಮ್ಮಂಥವರಿಗೆ ತಂತ್ರವೆನಿಸುತ್ತದೆ. ದಯವಿಟ್ಟು ತಿಳಿದುಕೊಳ್ಳಿ, ಭೈರಪ್ಪನವರು ಸಾಕಷ್ಟು ಸಲ ಪ್ರಸ್ತಾಪ ಮಾಡಿದಂತೆ ಲೇಖಕನೊಬ್ಬ ಕ್ರಾಂತಿಯನ್ನೋ ಬದಲಾವಣೆಯನ್ನೋ ತರುತ್ತಾನೆಂದು ಅವರೆಂದೂ ನಂಬಿಲ್ಲ. ನೀವು ತಿಳಿಸಿದ ಸಾಮಾಜಿಕ ಬದಲಾವಣೆಗಳನ್ನು ನಾನೂ, ಮತ್ತೂ ಅನೇಕ ಪ್ರಾಜ್ಞ ನಾಗರೀಕರು ಗಮನಿಸಿಯೇ ಇರುತ್ತಾರೆ. ಹೌದು, ಮೊದಲಿನಂತೆ ನಮಗೂ ಈಗ ಮೊಹರಮ್ಮನ ತಾಬೂತುಗಳನ್ನು ನೋಡಲು ಹೋಗಬೇಕೆನಿಸುವುದಿಲ್ಲ, ಅವರಿಂದ ಲೋಬಾನ ಹಾಕಿಸಿಕೊಳ್ಳಬೇಕೆನಿಸುವುದಿಲ್ಲ. ಆದರೆ ಅದಕ್ಕೆ ಕಾರಣ ಭೈರಪ್ಪನವರು ಅಥವಾ ಅಂಥ ಇನ್ನುಳಿದ ಲೇಖಕರು ಬರೆದ ಲೇಖನಗಳು ಅಥವಾ ಕಾದಂಬರಿಗಳಲ್ಲ, ದಿನಾಲೂ ದಿನಪತ್ರಿಕೆಯಲ್ಲಿ ಓದುತ್ತಿರುವ ಜೆಹಾದಿ ಸಂಘಟನೆಗಳ ಉಗ್ರಧಾಳಿಗಳಿಂದ ನಾವು ಬೇಸತ್ತಿದ್ದೇವೆ, ದಿನಾಲೂ ವರದಿಯಾಗುವ ಸಾವುನೋವುಗಳ ಸಂಖ್ಯೆಗಳು ಬೇಡವೆಂದರೂ ನಮ್ಮ ಕಣ್ಣುಗಳಲ್ಲಿ ರಕ್ತದ ಕಣ್ಣೀರು ಚಿಮ್ಮಿಸುತ್ತಿವೆ. ಭಾರತದ ಮುಸ್ಲಿಮರು ಆ ಥರದವರಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಿರುವಾಗಲೇ ಇಲ್ಲೇ ಹುಬ್ಬಳ್ಳಿಯಲ್ಲಿ, ಮಂಗಳೂರಿನಲ್ಲಿ, ಬೆಂಗಳೂರಿನಲ್ಲಿ, ಹುತ್ತದಿಂದ ಹೊರಟ ಹಾವಿನಂತೆ ಉಗ್ರರು ಹೆಡೆಯೆತ್ತುತ್ತಿದ್ದಾರೆ ಎನ್ನುವ ಸುದ್ದಿ ಮನಸ್ಸುಗಳಿಗೆ ವಿಷವುಣ್ಣಿಸುತ್ತಿದೆ. ಇಷ್ಟಾಗಿಯೂ ನಮ್ಮ ಎಲ್ಲಾ ಮುಸ್ಲಿಮ್ ಬಾಂಧವರನ್ನು ಸಾರಾಸಗಟಾಗಿ ನಾನು ಗುರಿ ಮಾಡುತ್ತಿಲ್ಲ ಎನ್ನುವುದನ್ನು ದಯವಿಟ್ಟು ನಿಮ್ಮಂಥವರು ತಿಳಿದುಕೊಳ್ಳಬೇಕು. ಸಮಾಜದ ಕೆಲವು ಜನರು, ದಾರಿ ತಪ್ಪಿದ ಯುವಕರು ಮಾಡುತ್ತಿರುವ ಕೃತ್ಯಗಳಿಂದ ಇಡೀ ಸಮಾಜ ತಲೆ ತಗ್ಗಿಸಬೇಕಾಗಿದೆ.
ಎಸ್. ಎಲ್. ಭೈರಪ್ಪನವರು ಎಂದರೆ, ಭಗವಾನ ಎಂದರೆ ಯಾರೆಂಬುದೇ ಗೊತ್ತಿಲ್ಲದ ದೊಡ್ಡ ಜನಸಂಖ್ಯೆ ನಮ್ಮ ರಾಜ್ಯದಲ್ಲಿದೆ, ಅವರಿಗೆಲ್ಲ ಒಂದು ವಿಷಯದ ಬಗ್ಗೆ ಅಭಿಪ್ರಾಯ ತಳೆಯಬೇಕೆಂದರೆ ಬರಿ ಸಾಹಿತಿಗಳೇ ಮುಂದೆ ನಿಂತು ದಾರಿ ತೋರಬೇಕಾದ ಅವಶ್ಯಕತೆಯಿಲ್ಲ. ಅವರಿಗೂ ಸುದ್ದಿಪತ್ರಿಕೆಗಳಿವೆ’ ಟಿ.ವಿ.ಚ್ಯಾನೆಲ್ಲುಗಳಿವೆ, ಹರಟೆಕಟ್ಟೆಗಳಿವೆ, ಅಲ್ಲಿ ಅಭಿಪ್ರಾಯಗಳು ಮೂಡುತ್ತವೆ, ಖಚಿತ ಸ್ವರೂಪ ತಳೆಯುತ್ತವೆ, ಮತ್ತು ಮುಂದೆ ಅವರ ಸ್ವಭಾವವನ್ನು ನಿರ್ದೇಶಿಸುತ್ತವೆ. “Pen is mightier than a sword” ಎನ್ನುವುದು ಭಾವನಾತ್ಮಕ ಲೇಖಕರು ತಮ್ಮನ್ನು ತಾವೇ ಹೊಗಳಿಕೊಂಡು ಬೆನ್ನು ತಟ್ಟಿಕೊಳ್ಳಲು ಹೇಳಿದ ಅತಿಶಯೋಕ್ತಿಯೇ ಹೊರತು ಅದೇ ನಿಜವಲ್ಲ. (ಹಾಗಂತ ನಾನು ಅವರನ್ನು ತೆಗಳುತ್ತಿಲ್ಲ. ಪ್ರತಿ ಲೇಖಕನೂ ಈ ಜಗತ್ತಿನೊಡನೆ ಭಾವನಾತ್ಮಕ ಸಂಬಂಧವನ್ನಿಟ್ಟುಕೊಂಡಾಗಲೇ ಬರವಣಿಗೆ ಸಹಜವಾಗಿ ಜೀವಂತಿಕೆ ತಳೆಯುವುದು, ತಮ್ಮ ತನ್ಮಯತೆಯಲ್ಲಿ ಮೈಮರೆತಾಗ ಅವರು ಹೀಗೆಲ್ಲ ಹೇಳುತ್ತಾರೆ, ಮತ್ತು ಅವರನ್ನು ಅದೇ ಕಾರಣಕ್ಕೆ ನನ್ನಂಥ ಪಾಮರರು quote ಮಾಡಿ ಚಪ್ಪಾಳೆಗಳನ್ನೂ ಗಿಟ್ಟೀಸುತ್ತೇವೆ)
ಭಗವಾನರು ಸಾಕಷ್ಟು ರದ್ಧಾಂತದ ಕೊನೆಗೆ, ಭಗವದ್ಗೀತೆಯ ಒಂದೇ ಅಧ್ಯಾಯದ ಒಂದೇ ಶ್ಲೋಕವನ್ನು ತೆಗೆದು ಸುಡಬೇಕು ಎಂದು ಟಿ.ವಿ. ಚ್ಯಾನೆಲನಲ್ಲಿ ಹೇಳಿದ ಮೇಲೆ ನಾನು ಭಗವದ್ಗೀತೆಯ ಆ ಅಧ್ಯಾಯ ಮತ್ತು ಶ್ಲೋಕವನ್ನು ಓದಿದೆನೇ ಹೊರತು ಎಷ್ಟೋ ದಿನಗಳಿಂದಲೂ ಮನೆಯಲ್ಲಿಯೇ ಇದ್ದ ಭಗವದ್ಗೀತೆಯನ್ನು ಸಂಪೂರ್ಣವಾಗಿ ಓದಿರಲಿಲ್ಲ. ಇವತ್ತಿಗೂ ಓದಿಲ್ಲ. ಹಾಗಿದ್ದ ಮೇಲೆ ಅದನ್ನು ಓದಿ ತಲೆಕೆಡೆಸಿಕೊಂಡು ಇತರರು ಆ ಗ್ರಂಥದ ಮೇಲೆ ಏಕೆ ಮುಗಿಬಿಳುತ್ತಾರೆ? ಮೂಲ ಸಂಸ್ಕೃತದಲ್ಲಿರುವ ಶ್ಲೋಕಗಳನ್ನು ಓದಿರುವವರು ತುಂಬ ಕಮ್ಮಿ. ಅದರ ಭಾವಾರ್ಥವನ್ನು ಓದಿದವರೂ ಕಡಿಮೆ. ಹಾಗಿದ್ದರೆ ತಮ್ಮಂಥವರು ಭಗವಾನರನ್ನೇಕೆ ಈ ಪ್ರಶ್ನೆ ಕೇಳಬಾರದು? ತಮ್ಮಂಥವರ double standardಗಳು ಇಲ್ಲಿಯೇ ಬಯಲಾಗುತ್ತವೆ. ದಯವಿಟ್ಟು ಇಂಥ ತಂತ್ರಗಳನ್ನು ಬಿಟ್ಟು ನೇರ, ಸರಳ ದೃಷ್ಟಿಯಿಂದ ಸಾಹಿತ್ಯವನ್ನು ಆಸ್ವಾದಿಸಲು ಉಳಿದವರಿಗಾದರೂ ಅವಕಾಶ ಕೊಡಿ.
ಎಸ್. ಎಲ್. ಭೈರಪ್ಪನವರಿಗೆ ಪದ್ಮಶ್ರೀ ಬಂದದ್ದು ಅವರ ಅಭಿಮಾನಿಗಳಿಗೂ ಬಹಳ ಸಂತಸವನ್ನೇನೂ ತಂದಿರಲಾರದು. ಎಂದೋ ದಕ್ಕಿ, ಇಂದಿಗೆ ಪದ್ಮವಿಭೂಷಣಕ್ಕೆ ಪಾತ್ರರಾಗಬೇಕಾದವರನ್ನು ಕಡಿಮೆ ಮಟ್ಟದ ಪುರಸ್ಕಾರದಿಂದ ಸನ್ಮಾನಿಸಲಾಗಿದೆ ಎನ್ನುವುದು ಅನೇಕರ ಭಾವನೆಯಾಗಿದೆ.
ಅಬ್ಬ ಏನು ವಿವರವಾದ ನಿರೂಪಣೆ. ಚನ್ನಾಗಿ ಹೇಳಿದಿರಿ. ನಾವು ಭೈರಪ್ಪ ನವರ ಕಾದಾಂಬರಿಗಳನ್ನು ಓದಿದ್ದೇವೆ. ಅವರ ಓದಿನಿಂದ ಯಾರೂ ಕ್ರಾಂತಿ ಮಾಡಿಲ್ಲ. ನಾವು ಇವತ್ತು ನಮ್ಮೂರಿಗೆ ಹೋದಾಗ ಬಂದೇನವಾಜ ದರ್ಗಾಕ್ಕೆ ಹೋಗುತ್ತೇನೆ. ಆದರೆ ಈ ಮಧ್ಯೆ ದಿನಾಗಲೂ ಪೆಪರಲ್ಲಿ ಟಿವಿಯಲ್ಲಿ ಬರುವ ಇಸ್ಲಾಂ ಉಗ್ರವಾದಿಗಳ ಹತ್ಯೆಯಿಂದ ಬೆೇಸತ್ತಿದ್ದೆವೆ.ಸಿಖ್ಖ ಉಗ್ರರಿಂದಲೂ ತೊಂದರೆಯಾದಾಗ ಸಿಖ್ಖ ರೇ ಅದನ್ನು ವಿರೋಧಿಸಿ ಸರಿಪಡಿಸಿದ ಹಾಗೆ ಇಸ್ಲಾಂ ನವರಿಗೆ ಮಾಡಲಿ. ಆದರೆ ಅವರು ಮಾಡುತ್ತಿಲ್ಲ. ಇಲ್ಲೇ ಪ್ರಾಬ್ಲಮ್ ಇರೋದು.
ಬಹಳ ಸರಿಯಾದ ಮಾತುಗಳನ್ನೇ ಹೇಳಿದ್ದೀರಿ ನೀತಾ ಅವ್ರೆ,ಧನ್ಯವಾದಗಳು.
ಭೈರಪ್ಪನವರಿಗೆ ಸಂದ ಪದ್ಮಶ್ರೀ ಪ್ರಶಸ್ತಿಯ ಹಿನ್ನೆಲೆಯಲ್ಲಿ ಅವರ ಸಾಹಿತ್ಯದ ಬಗ್ಗೆ ಚರ್ಚೆಗಳು ಎದ್ದಿವೆ. ಅದು ಸ್ವಾಭಾವಿಕ. ಭೈರಪ್ಪನವರ ಕೃತಿಗಳನ್ನು ನಾನು ಆಸಕ್ತಿಯಿಂದಲೇ ಓದುತ್ತಿದ್ದೆ. ವಂಶವೃಕ್ಷ, ದೂರ ಸರಿದವರು, ಗೃಹಭಂಗ, ಮತದಾನ ಮೊದಲಾದ ಕೃತಿಗಳನ್ನು ನನ್ನ ಮಿತ್ರರಿಗೆ ಓದಲು ಒತ್ತಾಯಿಸುತ್ತಿದ್ದೆ. ಕೆಲ ಕಾಲೇಜು ವಿಚಾರ ಸಂಕಿರಣಗಳಲ್ಲಿ ಅವರುಗಳ ಬಗ್ಗೆ ಸಹೃದಯ ವಿಮರ್ಶೆಯನ್ನೂ ಮಾಡಿದ್ದೆ. ಆದರೆ ಅವರ ಧರ್ಮಶ್ರೀ, ತಬ್ಬಲಿಯು ನೀನಾದೆ ಮಗನೆ, ದಾಟು, ಆವರಣ, ಕವಲು ಮೊದಲಾದನೇಕ ಕಾದಂಬರಿಗಳ ವಿಷಯಗಳು ಮತ್ತು ಅದರಲ್ಲಿ ಅವರು ವ್ಯಕ್ತಪಡಿಸಿದ ದೃಷ್ಟಿಕೋನ ಮತ್ತು ಅವುಗಳನ್ನು ಬರೆದ ಸಮಯಗಳನ್ನು ನೋಡಿ ಇವರ ಸಾಹಿತ್ಯದ ಬಗ್ಗೆ ನನ್ನ ಅಭಿಪ್ರಾಯ ಅನಿವಾರ್ಯವಾಗಿ ಬದಲಾಯಿತು. ಇವರು ಭಾರತದಲ್ಲಿ ಹಬ್ಬಿಸಲಾಗುತ್ತಿರುವ ಕೋಮು ದಂಗೆಗಳಿಗೆ ಹಾಗೂ ಸಮಾನತೆಯ ವಿರುದ್ದದ ವಿಚಾರಗಳಿಗೆ ಆಧುನಿಕ ವಿದ್ಯಾಭ್ಯಾಸ ಪಡೆದು ಪ್ರಜಾಪ್ರಭುತ್ವೀಯ ಮೌಲ್ಯಗಳ ಮೇಲ್ನೋಟದ ತಿಳಿವಳಿಕೆ ಪಡೆದಿದ್ದ, ಆ ಮೂಲಕ ಮಾನವರೆಲ್ಲ ಒಂದೇ ಎಂದು ಭಾವಿಸುವ ಆರಂಭದ ಹೆಜ್ಜೆಗಳನ್ನಿಡುತ್ತಿದ್ದ ಸಾಹಿತ್ಯ ಪ್ರಿಯರ ಮನಸ್ಸನ್ನು ಸೆಳೆಯಲೆಂದು ನಿಯೋಜಿತವಾಗಿರುವ ಆರೆಸ್ಸೆಸ್ ನ ಅಘೋಷಿತ ಪ್ರಚಾರಕ್ ಎಂಬುದು ಸ್ಪಷ್ಟವಾಯಿತು. ಆರೆಸ್ಸೆಸ್ ಮತಾಂತರ , ಗೋಹತ್ಯೆ, ಮೀಸಲಾತಿ, ಮಹಿಳಾ ಸಮಾನತೆಯ ವಿಚಾರಗಳ ಬಗ್ಗೆ ಅಸಮಧಾನ, ಮುಸ್ಲಿಂ ಪ್ರಭುತ್ವಗಳ ಬಗ್ಗೆ ಅನೈತಿಹಾಸಿಕ ಅಪಪ್ರಚಾರ ಹೀಗೆ ಆರೆಸ್ಸೆಸ್ ಯಾವ ಅಜೆಂಡಾವನ್ನು ಯಾವಾಗ ಕೈಗೆತ್ತಿಕೊಳ್ಳುತ್ತಾರೋ ಆಗ ಅದನ್ನು ತಿರುಳಾಗಿಸಿಕೊಂಡ ಕಾದಂಬರಿಗಳು ಉತ್ಪನ್ನವಾಗುವುದನ್ನು ನೋಡಿ ಸಖೇದಾಶ್ಚರ್ಯವಾಯಿತು. ಕಥನದ ಸಾರ್ಥಕತೆ ಕೇವಲ ಕಥನದ ತಂತ್ರದಲ್ಲಿರುವುದಿಲ್ಲ ಬದಲಾಗಿ ಅದರ ತಿರುಳು ಮತ್ತು ಉದ್ದೇಶದಲ್ಲಿರುತ್ತದೆ. ಅದನ್ನು ಆರ್ಷಕವಾಗಿ ಬಿಂಬಿಸಲಷ್ಟೇ ತಂತ್ರದ ಉಪಯೋಗ. ವಿಷ ತುಂಬಿದ ಹಣ್ಣು ಆಕರ್ಷಕವಾಗಿದ್ದಷ್ಟೂ , ರುಚಿಯಾಗಿದ್ದಷ್ಟೂ ಅಪಾಯಕಾರಿಯಲ್ಲವೇ ? ಹೀಗೆ ಭೈರಪ್ಪನವರ ಸಾಹಿತ್ಯ ಸಮಾಜದಲ್ಲಿ ನೆಮ್ಮದಿ, ಶಾಂತಿಯನ್ನು ಕದಡುವ ಸಾಧನವಾಗಿದೆ. ಎಲ್ಲರೂ ಸಾಹಿತ್ಯದ ಓದುಗರಲ್ಲದಿರಬಹುದು ಆದರೆ ಸಾಹಿತ್ಯದ ಓದುಗರು ಬಹಳಷ್ಟು ಬಾರಿ ಸಮಾಜದಲ್ಲಿ ಅಭಿಪ್ರಾಯ ರೂಪಿಸುವವರೂ ಆಗಿದ್ದಾರೆ. ಅದರಿಂದಾಗಿ ಭೈರಪ್ಪನವರ ಕೇವಲ ಜನಪ್ರಿಯ ಕಾದಂಬರಿ ಮಟ್ಟಕ್ಕೆ ಸೀಮಿತವಾಯಿತು. ಅದರಲ್ಲಿಯೂ ಬಿಜೆಪಿ ಬೆಳವಣಿಗೆಯೊಡನೆ ಅವರ ಓದುಗ ವಲಯವೂ ಉತ್ತರ ಭಾರತಕ್ಕೆ ಅನುವಾದಿತ ಕಾದಂಬರಿಗಳ ಮೂಲಕ ವಿಸ್ತಾರವಾಗಿರುವುದು ಕೇವಲ ಕಾಕತಾಳಿಯವಲ್ಲ.
ಇನ್ನು ಭಗವಾನ್ ರವರ ಬಗ್ಗೆ ಇಲ್ಲಿ ಪ್ರಸ್ತಾಪ ಬೇಕಾಗಿತ್ತೇ ಎಂಬ ಬಗ್ಗೆ ನನಗೆ ಸಂದೇಹ. ಾದರೆ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಿರೋಧಿಸಿದ ವರಕಾರಣಕ್ಆಗಿ ಎಂದುಕೊಳ್ಳೋಣ. ಾದರೆ ಭಗವಾನ್ ರವರ ಬಗ್ಗೆ ಹಾಲಗೇರಿಯವರೂ ಹೇಳುವಂತೆ ಕೆರಳಿಸುವುದಕ್ಕಾಗಿಯೆ ನೀಡುವ ಹೇಳಿಕೆಗಳು ಯಾವ ವಿಷಯವನ್ನು ಅವರು ಚರ್ಚೆಗೆ ತರಬಯಸುತ್ತಾರೋ ಆ ವಿಷಯಗಳ ಾರೋಗ್ಯಕರ ಚರ್ಚೆಗೆ ಸಾಧಕವಲ್ಲ. ಬದಲಾಗಿ ಅವರು ಹಿಂದೆ ಮಾಡುತ್ತಿದ್ದಂತೆ ಅಧ್ಯಯನ ಪೂರ್ವಕವಾದ ಮತ್ತು ಅದರಲ್ಲಿಯೂ ಸಮಾಜ ವಿಜ್ಞಾನಿಯೊಬ್ ೊಂದು ನಿರ್ಣಯಕ್ಕೆ ಬರುವ ವಿಧಾನದ ಬರಹ ಆ ವಿಷಯಗಳ ಬಗ್ಗೆ ಜನರು ಶಾಂತ ಮನಸ್ಸಿನಿಂದ ಅವಲೋಕಿಸಿ ಮನವರಿಕೆ ಮಾಡುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ.
ಉತ್ತಮ ಚರ್ಚೆ . ಇದು ಓದಿನ ವಿಭಿನ್ನ ಮಾದರಿ ಹಾಗೂ ನಿರೂಪಣೆಯ ಕ್ರಮವನ್ನು ತಿಳಿಸುತ್ತದೆ. ಇದೇ ಸಾಹಿತ್ಯ ಮತ್ತು ಚರಿತ್ರೆ ನಡುವಿನ ವ್ಯತ್ಯಾಸ .
ಅರ್ಥಪೂರ್ಣ ಲೇಖನ ಹಾಲಗೆರೆಯವರೆ.
ನನಗೆ ಅಥವ ನಮಗೆ ಭಗವಾನ್ ಯಾರು ಅನ್ನುವುದು ಗೊತ್ತಿಲ್ಲ …ಇನ್ನು ಭಾರಪ್ಪನವರ ಕಥನವನ್ನ ಅಲ್ಪಕ್ಕೆ ಓದಿದ್ದೇನೆ ……ಇನ್ನು ಯೋಗೇಶ್ ಮಾಸ್ಟರ್ ಅಂತವರು ಕೂಡ ತಮ್ಮ ಕಥನಕ ಪ್ರತಿಭೆಯಿಂದಲೇ ಭಾವೈಕ್ಯತೆ ಮತ್ತು ಮನಸುಗಳನ್ನ ಕೆಡುಸುತ್ತ ,ಭಾವನೆಗಳ ಜೊತೆ ನೇರವಾಗಿ ಆಡುತ್ತಾ ಬಂದಿದ್ದಾರೆ … ಅವರೆಲ್ಲ ನಿಮ್ಮ ಕಣ್ಣಿಗೆ ಕಂಡಿಲ್ಲವೆಂಬುದೆ ವಿಚಿತ್ರ
ವಿಷ ತುಂಬಿದ ಹಣ್ಣು ಆಕರ್ಷಕವಾಗಿದ್ದಷ್ಟೂ , ರುಚಿಯಾಗಿದ್ದಷ್ಟೂ ಅಪಾಯಕಾರಿಯಲ್ಲವೇ ? ಇಲ್ಲಿ ಸರಿಯಾದ ರೂಪಕ ಜಿಎನ್ ಎನ್ ಸರ್. ನಿಮ್ಮಂಥ ಹಿರಿಯರ ಸಂವಾದದಿಂದ ನನ್ನ ಗೊಂದಲಗಳು ತಿಳಿಯಾದವು. ಧನ್ಯವಾದಗಳು
Totally biased and meaningless article. You can never understand the depth of Bhairappa’s novels. Bhagavan is just another attention seeking psycho. You must be retard to make this comparison. Get well soon
This article only shows the ignorance of the writer, whoever it is. Bhagavan is known to very few people that too because of the controversy he created, not because of his work. I don’t have to talk about Sir Bhyrappa’s work, we all have known his work for long time now, even the hypocrites who criticize him. They do it because they cannot tolerate his success or they are too stupid not to appreciate it. Having said that you are entitled to your opinion however stupid it may be.
ಉತ್ತಮವಾದ ಲೇಖನ.
ಈ ಲೇಖನ ಬರೆದ ಪತ್ರಕರ್ತರನ್ನು ನಾನು ಬೆಂಬಲಿಸುತ್ತೇನೆ. ಭೈರಪ್ಪನವರ ಅಂಧಾಭಿಮಾನಿಗಳು ಎಷ್ಟೇ ಕಿರುಚಿ ಕೂಗಾಡಲಿ. ಸತ್ಯ ಎಂದಿಗೂ ಸುಳ್ಲಾಗುವುದಿಲ್ಲ.
ಸರಿ ಸುಮಾರು ಇಪ್ಪತ್ತು ಮೂವತ್ತು ವರುಷಗಳಿಂದ ನಮ್ಮ ಸಮಾಜ ಚೆನ್ನಾಗಿಯೇ ಇತ್ತು. ಅದರಲ್ಲೂ ನಮ್ಮ ಅವಾರ್ಡು ಕೊಡುವ ಒಂದು ಕಮಿಟಿ ಅತ್ಯದ್ಭುತವಾಗಿ ಕಾರ್ಯ ನಿರ್ವಹಿಸುತ್ತಾ ಇತ್ತು ಎಂದು ಎದೆ ಉಬ್ಬಿಸಿ ಹೇಳಬಹುದು.
ಆದರೆ ಎರಡು ಸಾವಿರದ ಹದಿನಾಲ್ಕು ಮೇ ನಂತರ, ಆ ಕಾರ್ಯಗಳು ಸರಿಯಾಗಿ ನಡೆಯುತ್ತಿವೆಯೇ ಎಂದು ಪ್ರಶ್ನಿಸಿದರೆ.. ಉತ್ತರ ಮಾತ್ರ ದೊಡ್ಡ, ಬಹು ದೊಡ್ಡ ಸೊನ್ನೆ ಮಾತ್ರ.
ಹಿಂದೆಲ್ಲಾ, ಸಾಹಿತ್ಯಿಕ ಮಾನದಂಡದ ಜೊತೆ, ಬರಹಗಾರರ ರಾಜಕೀಯ ಚಿಂತನಾಶಕ್ತಿ ಕೂಡ ಗಮನಿಸಲಾಗುತ್ತಿತ್ತು. ಯಾಕೆಂದರೆ, ಒಂದು ನಿರ್ದಿಷ್ಟ ಪ್ರದೇಶದ ರಾಜಕೀಯ ವಿದ್ಯಮಾನಗಳ ಬಗ್ಗೆ, ಅದರ ಆಗು ಹೋಗುಗಳ ಬಗ್ಗೆ, ಅಲ್ಲಿ ನಡೆಯುವ ಎಲ್ಲಾ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳ ಬಗ್ಗೆ, ತಮ್ಮ ಅದ್ಭುತ ಯೋಚನಾ ಲಹರಿಯನ್ನು ಹರಿಯಬಿಟ್ಟು, ಅದರ ತಿರುಳನ್ನು ಅಕ್ಷರ ರೂಪದಲ್ಲಿ ಸಾಕ್ಷೀಕರಿಸಿ, ಜನರನ್ನು ಸುಲಭವಾಗಿ ತಲುಪಲು ಸಾಹಿತಿಗಳು ಕಾರಣೀಭೂತರಾಗುತ್ತಾರೆ ಹಾಗು ಆಗುತ್ತಿದ್ದರು.
ಜ್ಞಾನಪೀಠ ಬಿಡಿ, ನಮ್ಮ ಅಕಾಡೆಮಿ ಅವಾರ್ಡು ಕೂಡ ನಾವು ಅತ್ಯಂತ ಜಾಗರೂಕತೆಯಿಂದ ಆರಿಸುವ ಗುಣ ನಮ್ಮದು. ಈ ಬಾರಿಯಂತೂ ಇಪ್ಪತೊಂದನೆಯ ಶತಮಾನದ, ಹೊಸ ಸಾಂಸ್ಕೃತಿಕ ಹರಿಕಾರ, ಜ್ಞಾನ – ವಿಜ್ಞಾನ ಹಾಗು ನಿಘಂಟು ಪಂಡಿತರಿಗೆ (ಆಸ್ತಿ ಇದ್ದೋನು ಆಸ್ತಿಕ ಎಂದು ಕಂಡು ಹಿಡಿದ್ದಿದ್ದು ನೆನಪಿಸಿಕೊಳ್ಳಿ )ಕೊಟ್ಟವರು ನಾವು. ಇನ್ನು ವಾರ ಪತ್ರಿಕೆಯ ಸಂಪಾದಕಿ, ಎಲ್ಲರ ಮೆಚ್ಚಿನ ನಾಟಕಕಾರ – ನಮ್ಮೆಲ್ಲಾ ಧಾರ್ಮಿಕ ಯೋಚನೆಗಳನ್ನು ತೀಕ್ಷ ಗೋಳಿಸ ಮಾಸ್ತರ್, ಇತ್ಯಾದಿಗಳನ್ನು ನಾಡಿನ ಉನ್ನತ ಮೆದುಳಿನ ಹೋಮೋ ಸೇಪಿಯನ್ ಎಂದು ಗುರುತಿಸಿದ್ದೇವೆ.
ವಾಸ್ತವ ಹಿಂಗಿರೋವಾಗ, ಯಾರ್ಯಾರಿಗೋ ಪದ್ಮ ಅವಾರ್ಡು ಕೊಡ್ತಾ ಇರೋದು ಇದೆಯಲ್ಲ…
ನಾಡಿನ, ಶತಮಾನದ, ಜೀವಪರ, ನೆಲಪರ, ಪರಪರ ಜೀವಿಗಳಿಗೆ ಮಾಡ್ತಾ ಇರೋ ಅವಮಾನ ಕಣ್ರೀ.
Another useless and pointless article.
ಹನಮಂತ ಹಾಲಗೇರಿ ಅವರಿಗೆ—-ಭೈರಪ್ಪನವರ ‘ಆವರಣ’ ಕಾದಂಬರಿ ಪ್ರಕಟವಾದ ನಂತರ ಈ ಹಿಂದೆ ಹಳ್ಳಿ ಹಳ್ಳಿಗಳಲ್ಲೂ ಇದ್ದ ಮುಸ್ಲಿಂ ಮತ್ತು ಹಿಂದೂ ಜನಗಳ ನಡುವಿನ ಭಾವೈಕ್ಯತೆ (ತಾವು ಹೇಳಿರುವಂತೆ ಮೊಹರಂ ಹಬ್ಬದಲ್ಲಿ ಮುಖ್ಯವಾಗಿ) ಈಗ ಕಾಣೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದೀರಿ. ಈಗಾಗಲೇ ಕರ್ನಾಟಕದ ಸುಮಾರು ಜನ ಸಾಹಿತಿಗಳು,ವಿಮರ್ಶಕರು ಸಾಕಷ್ಟು ಬಾರಿ ಹೇಳಿರುವುದನ್ನೇ ತಾವೂ ಹೇಳಿದ್ದೀರಿ. ಅವೆಲ್ಲವನ್ನೂ ಓದಿದವರಿಗೆ ನಿಮ್ಮ ಲೇಖನದಲ್ಲಿ ‘ಹೊಸ ಸರಕೇನೂ’ ಇಲ್ಲ ಎನಿಸುತ್ತದೆ. ಬಹುಷಃ ಈ ಕಾರಣಕ್ಕೆ ತಾವು ‘ಭಗವಾನ’ರ ಪ್ರಸ್ತಾಪ ಮಾಡಿದ್ದೀರಿ. ಮೂಲಭೂತವಾದ, ಕೋಮುವಾದ, ದರ್ಗಾ,ಮಸೀದಿ ಇತ್ಯಾದಿಗಳ ಬಗ್ಗೆ ಹೆಚ್ಚು ತಿಳಿಯುವ ಆಸಕ್ತಿ ಇದ್ದರೆ , ತಮ್ಮ ವೃತ್ತಿಯಾದ ಪತ್ರಿಕ್ಯೋದ್ಯಮ ಮತ್ತು ಪ್ರವೃತ್ತಿಯಾದ ಸಾಹಿತ್ಯ ಕೃಷಿಯ ನಡುವೆ ತಮಗೇನಾದರೂ ಬಿಡುವಾದರೆ ರಹಮತ್ ತರೀಕೆರೆ ಅವರ ‘ಧರ್ಮಪರೀಕ್ಷೆ’ ಎಂಬ ಕೃತಿಯನ್ನು ಓದಿ ಎಂದಷ್ಟೇ ನಾನು ಹೇಳಬಯಸುವೆ.
ಹನುಮಂತ ಹಾಲಗೇರಿ ಯವರೇ ನಿಮ್ಮ ಈ ಲೇಖನದಲ್ಲಿ ಹೊಸ ತಿರುಳೇನು ಇಲ್ಲಾ ನೀವು ಹೇಳ ಹೊರಟಿರುವ ವಿಷಯವು ಅಸ್ಪಷ್ಠವಾಗಿದೆ. ಬೈರಪ್ಪನವರು ತಮ್ಮ ಐತಿಹಾಸಿಕ ವಿಷಯಗಳ ನಿಜವನ್ನು ತಮಗೆ ತಿಳಿದಿರುವ ದಾರಿಯಲ್ಲಿ ಜಗತ್ತಿಗೆ ತಿಳಿಸ ಹೊರಟಿದ್ದಾರೆ ಭಗವಾನರವರು ಕೂಡಾ ಪುರಾಣ ವಿಷಯಗಳನ್ನು ತಮಗೆ ತಿಳಿದಿರುವ ದಾರಿಯಲ್ಲಿ ಜಗತ್ತಿಗೆ ತಿಳಿಸ ಹೊರಟಿದ್ದಾರೆ ಇದರಲ್ಲಿ ಕೋಮವಾದ ಸೃಷ್ಥಿಸುವ ಪ್ರಸಂಗ ಎಲ್ಲಿಂದ ಬಂತು. ಹೀಗಿರುವಾಗ ಸತ್ಯವನ್ನು ಎಷ್ಟು ದಿನ ಮರೆಮಾಚಲು ಸಾಧ್ಯ ನೀವೆ ಹೇಳಿ. ಈಗಲೂ ಭಾರತದ ಮುಸ್ಲೀಂರು ಈಗಲೂ ಸೌಹಾಧದಿಂದಲೇ ಇದ್ದಾರೆ.