ರೇಣುಕಾ ಮಂಜುನಾಥ್
ಮೈಸೂರಿಗರೇ ಆದ, ವಿಶ್ವಮಟ್ಟದ ಸಾಹಿತಿ ಭೈರಪ್ಪನವರಿಗೆ ತಡವಾಗಿಯಾದರೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಗೆ ಅವಕಾಶ ಕೊಡಲಾಯಿತು ಮತ್ತು ಅವರಿಗೂ ಅದು ಸಿಕ್ಕಿತು.
ಅವರಿಗಿರುವ ಜ್ಞಾನ ಭಂಡಾರಕ್ಕೆ, ಆ ಜಾಗದಲ್ಲಿ ನಿಂತು ಮಾತನಾಡಲು ಎಷ್ಟೆಲ್ಲಾ ವಿಷಯಗಳಿದ್ದವು. ಸಮಾರಂಭದ ಸಂಭ್ರಮ ಹೆಚ್ಚಿಸಿ, ಎಲ್ಲರ ಮನಸ್ಸು ಸೂರೆಗೊಳ್ಳಲು , ಹೃದಯಕ್ಕೆ ಹತ್ತಿರವಾಗಲು ಏನೆಲ್ಲಾ ಹೇಳಬಹುದಿತ್ತು. ಅದೆಲ್ಲಾ ಬಿಟ್ಟು ಆಸ್ತಿಕ-ನಾಸ್ತಿಕ, ಮಹಿಳೆ- ದೇವಸ್ಥಾನ ಎಂಬ ವಿಷಯಗಳನ್ಬು ಮುಟ್ಟುವ ಅವಶ್ಯಕತೆ ಏನಿತ್ತು? ಅದರಿಂದ ಪರಿವರ್ತನೆ ಏನಾದರೂ ಆಯಿತಾ? ಎಡದವರು, ಬಲದವರು ಮತ್ತಷ್ಟು ಕಹಿ ಉಗುಳಿಕೊಂಡು ಕಿತ್ತಾಡಿಕೊಳ್ಳುವಂತಾಯಿತಷ್ಟೆ.
ಇವರು ಹೇಳಿದರೆಂದು, ಯಾರಾದರೂ ಅವರ ನಿಲುವು ಬಿಟ್ಟುಕೊಡಲು ಸಾಧ್ಯವೆ?. ಬದಲಾಗಿ ಸಕಾರಾತ್ಮಕ ವಿಷಯಗಳನ್ನು ಹರಿಬಿಟ್ಟಿದ್ದರೆ, ಅವರನ್ನು ಎಲ್ಲರೂ ಮನದುಂಬಿಸಿ ಕೊಳ್ಳುತ್ತಿದ್ದರು. ಆಂತರಿಕವಾಗಿ ಇಷ್ಟು ಸರಳವಾಗಿ ಬೆಳೆಯಲು ಇಷ್ಟೆಲ್ಲಾ ಬರೆದು ಬೆಳೆದಿರುವ ಭೈರಪ್ಪನವರಿಗೆ ಸಾಧ್ಯವಾಗಿಲ್ಲವೆಂದರೆ, ಬರಹಗಾರರಿಗೆ ಇದ್ಯಾವ ಸಂದೇಶ ರವಾನಾಗುತ್ತದೆ?.

(ನಮ್ಮ ಸುಧಾ ಮೂರ್ತಿ ನಿಜಕ್ಕೂ ನಮ್ಮ ಹೆಮ್ಮೆ. ಇದೇ ಸಂದರ್ಭದಲ್ಲಿ ಯಾವ ಜಾತಿ ವರ್ಗ ಎಡ-ಬಲಕ್ಕೆ ಜೋತು ಬೀಳದೆ, ಕೋಟಿಕೋಟಿ ಹಣವನ್ನು ಪ್ರವಾಹ ಸಂತ್ರಸ್ತರಿಗೆ ಕೊಡುವ ಮಾತಾಡಿ, ಅಲ್ಲಿದ್ದ ಒಬ್ಬ ಮುಖ್ಯಮಂತ್ರಿ ಮೊದಲ್ಗೊಂಡು ಎಲ್ಲರ ಮುಂದೆ ತಮ್ಮ ಘನತೆ ಗೌರವವನ್ನು ಕಾಪಾಡಿಕೊಂಡರು. ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮನೆಯವರ ನಕ್ಷತ್ರ ರಾಶಿ ಹೇಳುತ್ತಾ ಅರ್ಚನೆ ಮಾಡಿಸಿ ತಮ್ಮ ಪಾಡಿಗೆ ತಾವು ತಮ್ಮ ನಿಲುವಿಗೆ ಬದ್ಧರಾದರು. ಎಲ್ಲೂ ಕಹಿಯಿಲ್ಲ, ಅಳುಕಿಲ್ಲ. )
ಎಚ್. ನರಸಿಂಹಯ್ಯನವರು ದೇವರನ್ನು ನಂಬುತ್ತಿರಲಿಲ್ಲ, ಆದರೆ ದಸರಾ ಉದ್ಘಾಟನೆ ಮಾಡಿದ್ದು ನೆನಪು ಮತ್ತು ಚಾಮುಂಡೇಶ್ವರಿಗೆ ಬೆಳಗಿದ ಮಂಗಳಾರತಿ ಸ್ವೀಕರಿಸಿದ್ದು ನೆನಪು… ಒಂದು ಸಾಂಸ್ಕೃತಿಕ -ಸಾಮಾಜಿಕ ಕಾರ್ಯಕ್ರಮವನ್ನು ಒಪ್ಪಿಕೊಂಡಾಗ, ಅದು ನಡೆದುಕೊಂಡು ಬಂದ ಪದ್ಧತಿಯನ್ನು ಸೌಜನ್ಯಕ್ಕಾದರೂ ಮೀರದೆ ಎಲ್ಲರಂತೆ ನಡೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಹಾಗೇ ವೇದಿಕೆಯಲ್ಲಿ ಸ್ವಂತ ಅಭಿಪ್ರಾಯ ಅನಿಸಿಕೆ ವ್ಯಕ್ತ ಪಡಿಸುವುದರಲ್ಲೂ ತಪ್ಪಿಲ್ಲ.
ಆದರೆ, ಈ ದೇವಸ್ಥಾನಕ್ಕೆ ಮಹಿಳೆ ಹೋಗುವುದಕ್ಕೂ.. ಕಛೇರಿಗೆ ಹೋಗುವುದಕ್ಕೂ ಅಂದಿರುವುದಿದೆಯಲ್ಲಾ…ಆ ದೇವಸ್ಥಾನದ ಪದ್ದತಿ, ಸಂಪ್ರದಾಯ ಎಂದು ಹೇಳುವುದು… ಅದರಲ್ಲೂ ಭೈರಪ್ಪನವರು ಹೇಳಿದರೆ, ಅದನ್ನೆಲ್ಲಾ ಅರಗಿಸಿಕೊಳ್ಳುವುದು ಕಷ್ಟವೇ… ಪರ್ವ, ವಂಶವೃಕ್ಷದಂತಹಾ ಕಾದಂಬರಿ ಕೊಟ್ಟ ಭೈರಪ್ಪನವರು ಇವರೇನಾ ಅನಿಸಿಬಿಡುತ್ತೆ…
ಇಂತಹಾ ಪದ್ದತಿ, ಸಂಪ್ರದಾಯದ ಹೆಸರಲ್ಲೇ ಅಲ್ಲವೇ ಕೆಳಗಿನ ಪದ್ದತಿ ಸಂಪ್ರದಾಯಗಳಿದ್ದುದು? ಗಂಡ ಸತ್ತಾಗ ಅವನ ಚಿತೆಯ ಮೇಲೆ ಜೀವಂತವಾಗಿ ದಹಿಸಿಕೊಳ್ಳುವ ಸತಿ ಪದ್ದತಿ.. ಗಂಡ ಸತ್ತಾಗ ತಲೆ ಬೋಳಿಸುವುದು… ತಿಂಗಳಿಗೆ ಮೂರು ದಿನ ಅಸಹ್ಯವಾಗಿ ಸ್ನಾನವಿಲ್ಲದೆ ಪ್ರಪಂಚಕ್ಕೆಲ್ಲಾ ಸಾರುವಂತೆ ಮನೆಮುಂದೆ ಕೋಲು ಚಂಬು ಹಿಡಿದು ಕೂರುವುದು, ಅದರ ಬಗ್ಗೆ ಮನೆಯ ಸಣ್ಣ ಮಕ್ಕಳಿಂದ ಮುದುಕರ ವರೆಗೂ ಮಾತನಾಡೋದು… ಹೀಗೆ ಒಂದೆರೆಡಲ್ಲಾ…
ಅದೂ ಮುಂದುವರೆದ ಜಾತಿಯಲ್ಲೇ ಇದ್ದ ಅಮಾನುಷ ಅಸಹ್ಯ ಪದ್ದತಿ, ಸಂಪ್ರದಾಯಗಳು. ರಾಜಾರಾಮ್ ಮೋಹನ್ರಾಯ್ ಮೊದಲ್ಗೊಂಡು ಅನೇಕರು ‘ಅದು ಪದ್ದತಿ, ಸಂಪ್ರದಾಯ’ ಅಂದುಕೊಂಡು ಆಗೆಲ್ಲಾ ಸುಮ್ಮನಿದ್ದಿದ್ದರೆ, ನಮ್ಮ ಸಮಾಜ ಹೀಗಿರುತ್ತಿತ್ತಾ?.
ಒಂದು ಎಡಪಂಥೀಯ ಸರ್ಕಾರ (ಕೇರಳ) ಇದರಲ್ಲಿ ವಿಶೇಷ ಆಸಕ್ತಿ ತೋರಿಸಿ, (ನಮ್ಮ ಸಿದ್ದಣ್ಣ ಲಿಂಗಾಯತ-ವೀರಶೈವ ವಿಷಯ ಬಳಸಿಕೊಂಡಂತೆ, ಈಗವರಿಗೆ ಆ ವಿಷಯವೇ ಮರೆತುಹೋಗಿದೆ…) ಬಲಪಂಥೀಯರಿಗೆ ಇರಿಸುಮುರುಸು ಮಾಡಲಷ್ಟೇ ಅದನ್ನು ಅಷ್ಟು ದೊಡ್ಡ ಸುದ್ದಿ ಮಾಡಿದ್ದು ನಿಜ.
ಆದರೆ ದೇವಸ್ಥಾನಕ್ಕೆ ಹೋಗುವ ವಿಷಯದಲ್ಲಿ ಭೈರಪ್ಪನವರು ಶಬರಿಮಲೈ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳಬೇಕಿಲ್ಲ.
ಅಲ್ಲಿನ ಪದ್ದತಿಯಂತೆ ಹೋಗಬೇಕೋ.. ಬೇಡವೋ.. ಎನ್ನುವ ಆಯ್ಕೆ ಮಹಿಳೆಗೇ ಬಿಡಬೇಕು. ಅವಳಿಗೆ ದೇವಸ್ಥಾನಗಳು ಬಂಡಿಯಾಗಿವೆ. ಆಯ್ಕೆಯಿದೆ. ಬೇಕಿದ್ದರೆ ಹೋಗುತ್ತಾಳೆ ಅಥವಾ ಬಿಡುತ್ತಾಳೆ. ಆದರೆ ಒಬ್ಬ ಸಾಹಿತಿಯಾಗಿ ಹೀಗೆ ಹೇಳಿಕೆ ಕೊಟ್ಟರೆ ಮತ್ರು ಸಮಾಜ ಸುಧಾರಕರು ಒಂದು ಪಕ್ಷ ಈ ಬಗೆಯ ಮನಸ್ಥಿತಿಯನ್ನಿಟ್ಟುಕೊಂಡಿದ್ದರೆ, ಕೆಂಪು ಸೀರೆ ಬೋಡಮ್ಮಗಳು ಹೆಜ್ಜೆಹೆಜ್ಜೆಗೂ ಇರುತ್ತಿದ್ದರು.
ಮನೆಗಳ ಮುಂದೆ ಕುಳಿತ ಹೊರಗಾದ ಮಹಿಳೆಯರ ಅಸಹ್ಯ ದೃಶ್ಯಗಳು ಹೇರಳವಾಗಿರುತ್ತದ್ದವು. ತನ್ನದಲ್ಲದ ತಪ್ಪಿಗೆ ಸತ್ತ ಗಂಡನೊಡನೆ ಚಿತೆಗಾಹುತಿಯಾಗುತ್ತಿದ್ದವರೂ ಕಾಣಸಿಗುತ್ತಿದ್ದರು. ಸಂಪ್ರದಾಯ ಪದ್ದತಿ ಎನ್ನುತ್ತಾ ಶಾಲೆ, ಶಿಕ್ಷಣದಿಂದ ವಂಚಿತರಾಗಿ ಆರ್ಥಿಕ ಸಾಮಾಜಿಕ ತುಳಿತದಿಂದ ಬಿಡುಗಡೆಯೇ ಇಲ್ಲದಂತಿರುತ್ತಿದ್ದರು…
ಅದ್ಯಾಕೋ, ಭೈರಪ್ಪನವರು ಇಂತಹಾ ಬೇಕಿಲ್ಲದ ವಿಷಯಗಳನ್ನು ಪ್ರಸ್ತಾಪ ಮಾಡಿ ಮತ್ತಷ್ಟು ಸಲ್ಲದ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಇನ್ನಿಲ್ಲದಂತೆ ಅವರ ಅಭಿಮಾನಿಯಾಗಿ, ಅವರ ಕಾದಂಬರಿಗಳನ್ನು ಓದುತ್ತಿದ್ದ ನಾನು ಮಂದ್ರ ಓದುವಾಗಲೇ ಅದು ಮಂದಗತಿಯಲ್ಲಿ ಸಾಗಿ ಮುಂದೆ ಓದಿಸಿಕೊಳ್ಳಲೇ ಇಲ್ಲ. ಆ ನಂತರ ಅವರ ಕೃತಿಗಳನ್ನು ತರಲೂ ಇಲ್ಲ. ಕುತೂಹಲಕ್ಕೆ ಒಂದೆರಡು ತಂದು ಪೂರ್ತಿ ಓದಲೂ ಇಲ್ಲ…
ಹಾಗೆಂದು ಅವರ ಬಗ್ಗೆ ಬೇಸರವಿಲ್ಲ. ಯಾಕೆಂದರೆ ಆಗಿನ ಭೈರಪ್ ನನ್ನೊಳಗೆ ಗಟ್ಟಿ. ಆ ಅಭಿಮಾನಕ್ಕೆ ಕುಂದಾಗಿಲ್ಲ. ಈಗಿನದ್ದನ್ನು, ಬೇಡವೆನಿಸಿದ್ದನ್ನು ಅಷ್ಟಾಗಿ ಹಚ್ಚಿಕೊಂಡಿಲ್ಲ. ಆದರೆ, ಇತ್ತೀಚೆಗೆ ಅವರೊಡನೆ ಡಾ. ಆರ್ ಗಣೇಶ್ ಅವರ ಕಾರ್ಯಕ್ರಮ ಲಂಡನ್ನಲ್ಲಿದೆ ಎಂದು ತಿಳಿದಾಗ, ಅಯ್ಯೊ, ಅಲ್ಲಿದ್ದರೆ ಹೋಗಬಹುದಿತ್ತು ಅನಿಸಿದ್ದೂ ನಿಜ. ನಾವು ಮೆಚ್ಚಿಕೊಂಡ ಇಷ್ಟಪಟ್ಟ ಸಾಹಿತಿಗಳು ಗಣ್ಯರು ಸರ್ವರಿಗೂ ಸಲ್ಲುವಂಯೆ ನಡೆದುಕೊಳ್ಳದಿದ್ದರೆ ನಿಜಕ್ಕೂ ಬೇಸರವಾಗುತ್ತೆ.
ಎರಡು ಕನಸು ಚಿತ್ರದ ವರೆಗೂ ರಾಜ್ಕುಮಾರ್ ಚಿತ್ರಗಳನ್ನು ಬಿಡದಂತೆ ನೋಡಿದ ನಾನು ನಂತರ ಅಣ್ಣನವರ ಒಂದೂ ಚಿತ್ರ ನೋಡಲು ಇಷ್ಟವಾಗುತ್ತಿರಲಿಲ್ಲ. ಅವರಿಗೆ ಹೀರೋ ವಯಸ್ಸು ದಾಟಿತ್ತು.

ಮಂದ್ರದ ನಂತರ ಭೈರಪ್ಪನವರನ್ನು ಓದಬೇಕೆನಿಸಲಿಲ್ಲ. ಅವರು ಎಲ್ಲರಿಗೂ ಸಲ್ಲುವ ಮೊದಲಿನ ಸಾಹಿತಿಯಂತೂ ಆಗಿಲ್ಲ…
ಇಸ್ರೋದ ಮಂಗಳಯಾನದಲ್ಲಿ ಮಹಿಳಾ ವಿಜ್ಞಾನಿಗಳನ್ನು ಕಂಡು ಹೆಮ್ಮೆ ಪಡುವ ನಮಗೆ, ಆಮೂರು ದಿನ ಆಫೀಸು ಮತ್ತು ದೇವಸ್ಥಾನ ಎರಡೂ ಒಂದೇ ಅಲ್ಲ ಅನ್ನುವ ಹೇಳಿಕೆ ಅರಗಿಸಿಕೊಳ್ಳಲು ಕಷ್ಟ. ಇಂತಹಾ ನಿಯಂತ್ರಣ ಅಧಿಕೃತವಾಗಬಾರದು.
ಮಹಿಳೆಗೇ ಅವಳಾಗೇ ಆ ಸಮಯದಲ್ಲಿ ಹೋಗಲು ಸರಿಕಾಣದಿದ್ದರೆ ಅದು ಅವಳ ಡಿಸ್ಕ್ರಿಶನ್ ಆಗಬೇಕೇ ಹೊರತು ಅದು ಅವಳ ಘನತೆಗೆ ಧಕ್ಕೆ ಎನಿಸುವಂತಹಾ ಕಾನೂನಾಗಬಾರದು.
ಆಸ್ತಿಕ ನಾಸ್ತಿಕ ಹೇಗೆ ನಮ್ಮ ಆಯ್ಕೆಯೋ, ಹಾಗೇ ಮಹಿಳೆಯರಿಗೆ ದೇವಾಲಯ ಪ್ರವೇಶ ಅವಳ ಆಯ್ಕೆ ಆಗಬೇಕಷ್ಟೆ. ಅಧಿಕೃತವಾಗಿ, ನಿರ್ಬಂಧಿಸಬಾರದು.
ಮಹಿಳೆಯರು ನಿರ್ಬಂಧಿಸಲಿ, ಬಿಡಲಿ ಆ ಸಮಯದಲ್ಲಿ ಆದಷ್ಟೂ ತಮ್ಮನ್ನು ತಾವೇ ದೈಹಿಕವಾದ ತೊಂದರೆಗಳಿಂದಾಗಿ ನಿರ್ಬಂಧಿಸಿಕೊಂಡು ಕನಿಷ್ಟ ಚಟುವಟಿಕೆಯಲ್ಲೇ ಇರುತ್ತಾರೆ. ಪುರುಷ ವರ್ಗ ಅದನ್ನು ತಮ್ಮ ಅಧಿಕಾರದ ವ್ಯಾಪ್ತಿಗೆ ತೆಗೆದುಕೊಂಡು ಅಧಿಕೃತವಾಗಿ ಘೋಷಿಸಿ ಕಾರ್ಯಗತ ಗೊಳಿಸುವ ರೀತಿ ಮಾತ್ರ ಸಲ್ಲದು.
ಇಂತಹಾ ವಿಷಯಗಳ ಪ್ರಸ್ತಾಪವೇ ಇಲ್ಲದ, ಇದಕ್ಕೆ ಮಡಿಮೈಲಿಗೆ ಎಂಬ್ಯಾವ ಭಾವವನ್ನೂ ಲಗತ್ತಿಸದ ಚರ್ಚುಗಳಲ್ಲಿ ಎಲ್ಲರೂ ಅಡ್ಡಾಡುತ್ತಿರುತ್ತಾರೆ, ಪ್ರಾರ್ಥಿಸುತ್ತಿರುತ್ತಾರೆ. ನಮ್ಮ ದೇವಾಲಯಗಳಿಗಿಂತ ಚರ್ಚುಗಳು ಹೆಚ್ಚು ಶುಭ್ರವಾಗಿ ನಳನಳಿಸುತ್ತವೆ (ಮೇಲುಕೀಳು, ಗರ್ಭಗುಡಿ , ಒಳಗಿನವರು, ಹೊರಗಿನವರು ಎಂಬೆಲ್ಲಾ ಕೊನೆಪಕ್ಷ ಹೊರನೋಟಕ್ಕಾದರೂ ).






ತುಂಬಾ ಚೆನ್ನಾಗಿ ಬರೆದಿದ್ದೀರಿ ರೇಣುಕಾ.
ಎಡವಾದ!
ಮಾತನಾಡದಿದ್ದಡೆ ಮಾನವೇಕೆನ್ನುವರಯ್ಯ!ಮಾತನಾಡಿದರೆ ಇದೆಲ್ಲಾ ಬೇಕಿತ್ತಾ ಎನ್ನುವರಯ್ಯ!
ಎರಡು ಕನಸು ಚಿತ್ರದ ವರೆಗೂ ರಾಜ್ಕುಮಾರ್ ಚಿತ್ರಗಳನ್ನು ಬಿಡದಂತೆ ನೋಡಿದ ನಾನು ನಂತರ ಅಣ್ಣನವರ ಒಂದೂ ಚಿತ್ರ ನೋಡಲು ಇಷ್ಟವಾಗುತ್ತಿರಲಿಲ್ಲ. ಅವರಿಗೆ ಹೀರೋ ವಯಸ್ಸು ದಾಟಿತ್ತು.ಮೇಡಂ, ಭೈರಪ್ಪನವರನ್ನು ಪ್ರಶ್ನೆ ಮಾಡಿ ಅವರ ಹೇಳಿಕೆ ಬಗ್ಗೆ ಚರ್ಚೆ ಮಾಡಿ. ಅದ್ಬಿಟ್ಟು, ರಾಜ್ಕುಮಾರ್ ಗೆ ಹೀರೋ ವಯಸ್ಸು ದಾಟಿತ್ತು ಅಂತ ಷರಾ ಬರಿತಿರಲ್ಲ ಹೀರೋಗೆ ಇಷ್ಟೇ ವಯಸ್ಸಾಗಿರಬೇಕು ಅನ್ನೋ ಕಾನೂನೆನಾದ್ರು ಇದೆಯ?
ರೇಣುಕಾ ಮೇಡಂ ಭೈರಪ್ಪನವರ ಕುರಿತ ವಿಚಾರ ನಮಗಂತೂ ನಿಜಕ್ಕೂ ಬೇಕಿಲ್ಲ. ಡಾಕ್ಟರ್ ರಾಜಕುಮಾರ್ ಅವರ ವಿಷಯ ಈ ಲೇಖನದಲ್ಲಿ ನೀವು ಮಾತಾಡಿರೋದು ಅಪ್ರಸ್ತುತ. ರಾಜಣ್ಣ ನವರ ನಟನೆಯ ಬಗ್ಗೆ ಮಾತಾಡಬಾರದಿತ್ತು…. ಭೈರಪ್ಪನವರ ಮನುಪ್ರೇರಿತ ವಾದ ಅವರಂತೆ ಕಂದಾಚಾರ ಮೆಚ್ಚುವವರಿಗೆ ಇಷ್ಟವಾಗಬಹುದು. ಪರ್ವದ ಬದಲು ಯುಗಾಂತ ಪುಸ್ತಕ ಓದಿ ಮೇಡಂ.ಭೈರಪ್ಪನವರ ಜನನ ಗಂಡಿನ ಒಡಲಲ್ಲಿ ಆಗಿದ್ದ?? ಮಹಿಳೆಯರ ಬಗ್ಗೆ ಮಾತನಾಡುವ ಔಚಿತ್ಯ ಬಹಳ ಮುಖ್ಯ ದೇವಸ್ಥಾನ ಅನ್ನೋದು ಅವಮಾನಕ್ಕೆ ಕಾರಣವಾಗ್ತಿರೋ ಹೊತ್ತಲ್ಲಿ ಅಂಥ ಸಲ್ಲದ ವಿಷಯಗಳು ಮಹಿಳೆಯರಿಗೆ ಸಮೀಪವಾಗದಿರಲಿ. ಈ ದೇಶದಲ್ಲಿ ಮನುವಾದಿ,ಮನುವಾದಿಗಳು ಬದಲಾದರೆ ಮೌಢ್ಯಗಳು ಸಾಯುತ್ತವೆ….