ಏನಿದೆ ಭೈರಪ್ಪ ಕಾದಂಬರಿಗಳಲ್ಲಿ…
ಹರವು ಸ್ಪೂರ್ತಿ ಗೌಡ
ಫೇಸ್ ಬುಕ್ಕಿನಲ್ಲಿ ಕೆಲ ದಿನಗಳಿಂದ ಗಲಭೆ ಎದ್ದಿದೆ, ಹಿರಿಯ ಸಾಹಿತಿಗಳಾದ ಎಸ್ ಎಲ್ ಭೈರಪ್ಪ ಹಾಗೂ ದೆಹಲಿಯ ನಿರ್ಭಯ ಅತ್ಯಾಚಾರ ಅಪರಾಧಿಯೊಂದಿಗೆ ಹೋಲಿಸಿದ್ದೆ ಕಾರಣವಾಗಿದೆ. ಈ ವಿಚಾರದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿವೆ. ಕೆಲವರು ಭೈರಪ್ಪ ಅವರ ಒಂದೂ ಕಾದಂಬರಿ ಓದದೇ ಅವರ ನಿಲುವನ್ನ ಬೆಂಬಲಿಸುತ್ತಿದ್ದಾರೆ ಹಾಗೆ ವಿರೋಧಿಸುತ್ತಿದ್ದಾರೆ. ಭೈರಪ್ಪ ಅದ್ಭುತ ಬರಹಗಾರ, ಇವರ ಸಾಹಿತ್ಯ ಓದಿ ಮುಂದಿನ ಪೀಳಿಗೆ ಕಲಿಯುವಂತದ್ದು ಏನಿದೆ ನೋಡೋಣಾ..ಅವರ ಕಾದಂಬರಿಗಳಾದ ಪರ್ವ, ಕವಲು ಇವುಗಳಲ್ಲಿನ ಕೆಲ ವಿಚಾರದ ಮೇಲೆ ನನ್ನ ಆಕ್ಷೇಪಣೆ ಇದೆ.

ಮೊದಲನೇಯದಾಗಿ ಪರ್ವ: ಇದರಲ್ಲಿ ಪುರಾಣವನ್ನು ಇತಿಹಾಸ ಮಾಡಲು ಹೊರಟಿದ್ದಾರೆ. ಜೊತೆಗೆ ಅದನ್ನೂ ತಿರುಚಿ ಸ್ತ್ರೀ, ಹಿಂದುಳಿದ ಜನರನ್ನ ಕೀಳಾಗಿ ಕಂಡಿದ್ದಾರೆ.
ಭೀಮ ಕೌರವರೊಡನೆ ಯುದ್ಧಕ್ಕಾಗಿ ಜನ ಸೇರಿಸುತ್ತಾ ತನ್ನ ಹೆಂಡತಿ ಸಾಲಕಂಟಕಿಯ ರಾಕ್ಷಸಗಣವನ್ನು ಕರೆಯಲು ಹೋಗುತ್ತಾನೆ. ಅವಳೊಂದಿಗೆ ಇದ್ದು ಮಗು ಕರುಣಿಸಿ, ಮತ್ತೆ ಭೇಟಿಯಾಗಿರಲಿಲ್ಲ. ಯುದ್ಧಕ್ಕಾಗಿ ಬೆಂಬಲ ಬೇಡಲೆಂದಷ್ಟೆ ಬಂದಿರುತ್ತಾನೆ. ಘಟೋತ್ಕಚ ಒಬ್ಬನೇ ಅವನ ಮಗ ಉಳಿದವರು ಯಾರೆಂದು ಕೇಳಲು,
1, “ಗಂಡ ಒಂದು ವರ್ಷ ತಲೆ ತಪ್ಪಿಸಿಕೊಂಡರೆ, ಅವನು ಸತ್ತಿದ್ದಾನೆಂದು ತಿಳಿದು ಬೇರೆ ಮದುವೆಯಾಗುವುದು ನಮ್ಮ ಪದ್ಧತಿ, ನೀನಾದರೂ ವಾಪಸು ಬರ್ತೀನಿ ಅಂತ ಹೇಳಿದ್ದೆಯ? ಅದರೂ ನಾನು ನಾಲ್ಕು ವರ್ಷ ಕಾದೆ. ಮಹಾರಾಣಿಗೆ ತುಂಬ ಮಕ್ಕಳಿಲ್ಲದಿದ್ದರೆ ರಾಕ್ಷಸ ಕುಲ ಸುಮ್ಮನಿದ್ದೀತೆ, ಆದರೂ ನಾನು ಬೇರೆ ಯಾರನ್ನೂ ಮದುವೆಯಾಗಲಿಲ್ಲ. ಸುಮ್ಮನೆ ಕರೆದುಕೊಂಡೆ ನಾಲ್ಕು ಮಕ್ಕಳಾದವು ಅಷ್ಟೆ” (ಪುಟ ಸಂಖ್ಯೆ 135)
ಪ್ರಶ್ನೆ:
ಅ) ಮಾತುಮಾತಿಗೂ ಮನುಶಾಸ್ತ್ರ ವೇದ ಪುರಾಣಗಳಲ್ಲಿ ಹೆಣ್ಣು ಇದ್ದ ಬಗೆ ಹೇಳುವ ಪುರುಷಪ್ರಧಾನ ಸಮಾಜವೇ. ಸಾಲಕಂಟಕಿಯ ಹಾಗೆ ಮೋಸಹೋದ ಯಾವುದಾದರೂ ಹೆಣ್ಣು ಮಾಡಿದ್ದರೆ ?
2, ಭೀಷ್ಮ ತಂದೆಗೆ ಎರಡನೇ ಮದುವೆ ಮಾಡುವ ಸಂದರ್ಭ
ಅ) “ಅಪ್ಪನಿಗೆ ಯಾಕೆ ಮುದಿ ವಯಸ್ಸಿನಲ್ಲಿ ಎರಡನೆಯ ಮೋಹ ಕವಿಯಿತು? ಅದೂ ಮೀನು ಹಿಡಿಯುವ ಹುಡುಗಿಯಲ್ಲಿ. ಹೆಸರೇ ಕಾಲಿ, ಕಪ್ಪು ಬಣ್ಣ. ಅಪ್ಪ ಆರ್ಯ ಅಂದರೆ ಆರ್ಯವರ್ಣ… ಮುಪ್ಪಿನಲ್ಲಿ ಮೋಹವಾದದ್ದು ವಿಚಿತ್ರವಲ್ಲ, ಆದರೆ ಮೊದಲ ಬಾರಿಯಾದದ್ದು ಪರ್ವತ ಸೀಮೆಯ ಹೆಣ್ಣಿನ ಸಂಗಡ, ಎರಡನೇ ಬಾರಿ ಮೀನು ಹಿಡಿಯುವ ಕಸುಬಿನ, ಕೀಳುಜಾತಿಯ ಹೆಂಗಸರಲ್ಲಿ. ಯಾವ ಆಕರ್ಷಣೆ ಕಾಣುತ್ತಾರೆ ಆರ್ಯ ಗಂಡಸರು. (ಪುಟ ಸಂಖ್ಯೆ 372)
ಪ್ರಶ್ನೆ: ದ್ರಾವಿಡ ವರ್ಣ ಕೀಳೆ? ಮೀನು ಹಿಡಿಯುವ ಜಾತಿ ಕೀಳೇ? ಮೀನು ಹಿಡಿಯುವ ಹೆಂಗಸಲ್ಲಿ ಆಕರ್ಷಣೆ ಹುಟ್ಟಿದ್ದು ಅಪರಾಧವೇ?
ಆ) ನಾನು ಸಾರಥಿ ಹೋದಾಗಲೂ ಅವಳು ದೋಣಿಯ ಮೇಲೆ ಕೂತು ಹುಟ್ಟುಹಾಕುತ್ತಿದ್ದಳು. ಕಪ್ಪು ಬಣ್ಣ, ಬಿಸಿಲಿಗೆ ಕಾದು, ನೀರಿನಲ್ಲಿ ನೆನೆದು ಗಟ್ಟಿಯಾಗಿ ಕಾಣುವ ಮೀನುಖಂಡ, ಮಂಡಿ, ಕೆಳ ತೊಡೆ, ತೋಳು, ಉಬ್ಬು ಎದೆ, “ಇವಳೇ ಆ ಕಾಳೀ” ಸಾರಥಿ ಹೇಳಿದಾಗ ಇವಳಿಗೆ ಮೋಹಗೊಂಡನೇ ಅಪ್ಪ ಎಂಬ ಆಶ್ಚರ್ಯ ತಿರಸ್ಕಾರ ಹುಟ್ಟಿದ್ದಂತೂ ಇನ್ನೂ ನೆನಪಿದೆ. ಆ ತಿರಸ್ಕಾರದಲ್ಲಿಯೇ ದೋಣಿಯ ಮೇಲೆ ಅವಳ ಹತ್ತಿರ ಕುಳಿತಾಗ ಮೀನಿನ ವಾಸನೆ, ನದಿಯ ಆಚೆ ದಡದಲ್ಲಿದ್ದ ಅವಳ ಅಪ್ಪನ ಗುಡಿಸಲಿಗೆ. ಗುಡಿಸಲೋ ಮನೆಯೋ?… ಜಗುಲಿಯ ಮೇಲೆ ಕೂರಿಸಿ ಕೈ ಮುಗಿದು ಅಡ್ಡ ಬಿದ್ದು ಅವರಪ್ಪನ ನಯವಿನಯ ಓಹ್!…… ನನ್ನ ಅನುಭವ ಇದನ್ನು ಕಲಿಸಿದೆ, ಕೀಳು ಜನರು ಮೇಲಿನವರ ಕಾಲಿಗೆ ಬೀಳುತ್ತಾರೆ. ನೀನು ದಣಿ ನಾನು ದಾಸ ಎಂದು ಉಬ್ಬಿಸುವ ಮಾತನಾಡುತ್ತಾರೆ. ಅಲ್ಪ ಭಿಕ್ಷೆಯ ಹೆಸರಲ್ಲಿ ಒಂದೊಂದಾಗಿ ದೋಚುತ್ತಾರೆ. (ಪುಟ 373)
ಪ್ರಶ್ನೆ:1 ಬಡತನ, ಗುಡಿಸಲು, ಕಪ್ಪು ವರ್ಣದ ಹೆಂಗಸಿನ ಮೇಲೆ ತಿರಸ್ಕಾರವೇಕೆ?
2. ಅಲ್ಲ ರೀ ಭೈರಪ್ಪ ಸಾರ್ ನಾವು ಯಾವಾಗ ಕೀಳಾದೆವು? ಪದೇ ಪದೇ ಕೀಳುಕೀಳು ಅಂತ್ತೀರಲ್ಲ, ಅರ್ಯರು ಯಾವಾಗಾ ಮೇಲು ಆದ್ರು? ನೀವು ದಣಿಗಳೇ ನಾವು ದಾಸರೇ? ಬಡವ ಆದರೆ ಯಾಕ್ರಿ ಭಿಕ್ಷೆ ಬೇಡಬೇಕು, ಸ್ವಾಭಿಮಾನ ಇಲ್ಲವೆ ನಮಗೆ.. ನಮ್ಮ ಹಸಿವು ದರೋಡೆಯಂತೆ ಕಾಣುತ್ತೇನ್ರಿ?
ಇ) ರಥದಲ್ಲಿ ಅವಳನ್ನು ಕೂರಿಸಿಕೊಂಡು ಹೋಗುವಾಗ ಮೀನಿನ ವಾಸನೆ, ರಾಜರಥದಲ್ಲಿ ಕೂರುವ ರೀತಿ ಭಂಗಿಗಳು ತಿಳಿಯದ….ದೊಡ್ಡ ಮನೆಗೆ ಹೆಣ್ಣು ಕೊಟ್ಟು ಆ ಮೂಲಕ ಅಧಿಕಾರ ಕಬಳಿಸುವುದೇ ಕೀಳುಜನಗಳ ದಾರಿ..(ಪುಟ 375)
ಪ್ರಶ್ನೆ:
1. ಮುದುಕನಿಗೆ ಹೆಣ್ಣು ಕೊಡೋದು ಅಲ್ಲದೇ, ಅಧಿಕಾರ ಕಬಳಿಸುವ ಕೀಳುಜನ ಎಂಬ ಆರೋಪವಾ?
ಈ) ಅಪ್ಪ ಸತ್ತ ಮೇಲೆ, ಸತ್ತ ಮೇಲೇನು , ಇವಳು ಬಂದು ಮೀನುಗಾರನು ರಾಜ್ಯಾಡಳಿತದ ಪ್ರಮುಖನಾದಾಗಿನಿಂದ ರಾಜ್ಯದ ಮರ್ಯಾದೆ ಹೋಗದೆ ಇರುವುದಾದರೂ ಹೇಗೆ!(ಪುಟ 376),
1. ಮೀನುಗಾರ ರಾಜ್ಯದ ಪ್ರಮುಖನಾದರೆ ಮರ್ಯಾದಿ ಹೋಗುತ್ತಾ?
ಉ) ಇಷ್ಟೊಂದು ಧರ್ಮದ, ತರ್ಕದ ಮಾತನ್ನು ಇವಳು(ಸತ್ಯವತಿ) ಯಾವಾಗ ಕಲಿತಳು? ನನಗೆ ಆಶ್ಚರ್ಯ. ಮೊದಲು ಕೆಲವು ದಿನ ಅರಮನೆಯಲ್ಲಿ ಅವಳ ನಡೆನುಡಿ ಮಾತುಕತೆಗಳನ್ನ ಗಮನಿಸಿದ್ದೆ. ಹೇಸಿಗೆ ಪಟ್ಟಿದ್ದೆ. ಮನಸ್ಸಿನಲ್ಲೇ ನಕ್ಕಿದ್ದೆ….ನನಗೆ ಧರ್ಮದ, ಕರ್ತವ್ಯದ, ಪಿತೃಋಣದ ಸವಾಲು ಹಾಕಿ ನನಗಿಂತ ತಾನು ಸಂಸ್ಕೃತಳು, ನಾನೇ ಪ್ರಾಕೃತ ಎಂಬ ಅರ್ಥವನ್ನು ಧ್ವನಿಸುತ್ತಿದ್ದಳು. ನನ್ನ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಸಿಟ್ಟು ಬಂತು.(ಪುಟ 378)
ಪ್ರಶ್ನೆ:
1, ರಾಜಗಾಂಭೀರ್ಯ ಬಿಟ್ಟು ಸಾಮಾನ್ಯ ಮಹಿಳೆಯ ನಡೆನುಡಿಗಳು ಹೇಸಿಗೆ ಹುಟ್ಟಿಸುತ್ತವೆಯೇ?
2, ಉತ್ತಮ ಆಶಯವನ್ನ ಬೆಸ್ತ ಮಹಿಳೆ ಆಲೋಚಿಸಿದರೆ ನಿಮ್ಮ ಮೇಲ್ಜಾತಿ ಪುರುಷಪ್ರಭುತ್ವಕ್ಕೆ ಪೆಟ್ಟು, ಸಿಟ್ಟು ತರುತ್ತದೆಯೇ?
ಊ) ಮಾವನ (ಸತ್ಯವತಿ ತಂದೆ) ಆಡಳಿತ ಆರಂಭವಾಯಿತು. ಯೋಗ್ಯತೆ ಇಲ್ಲದವನು ಉಚ್ಚಪೀಠ ಹಿಡಿದರೆ, ಪೀಠ ಮಾತ್ರವಲ್ಲದೆ. ಅದರ ಅಧಿಕಾರ ವ್ಯಾಪ್ತಿ ಎಲ್ಲ ಕೊಳೆಯುವಂತೆ ಆಯಿತು. ಮೊದಮೊದಲು ತನ್ನ ಕೀಳುತನದ ಅರಿವಿನಿಂದ ಪೀಠಕ್ಕೆ ಶೋಭಿಸದಷ್ಟು ವಿನಯಿಯಾಗಿದ್ದನಂತೆ. ಆ ನಂತರ ಕ್ರಮೇಣ ಅತಿ ನಿಷ್ಠುರಿಯಾದನಂತೆ. ದಬ್ಬಾಳಿಕೆಗೂ ಹೋದ ಅಧಿಕಾರವೆಂದರೆ ಇತಿಮಿತಿ ಇಲ್ಲದೆ ಚಲಾಯಿಸುವುದು ಎಂದು ವರ್ತಿಸಿದ.(ಪುಟ 380)
ಪ್ರಶ್ನೆ;
1, ಬೆಸ್ತ ಆಡಳಿತ ಮಾಡಿದರೆ ಅಧಿಕಾರ ವ್ಯಾಪ್ತಿ ಕೊಳೆಯುತ್ತದೆಯೇ? ನಿಷ್ಠುರತೆ ದಬ್ಬಾಳಿಕೆ ಹೇಗೆ ಆಗುತ್ತೆ?
ಇನ್ನು ನಿಯೋಗದಿಂದ ಪಾಂಡವರ ಹುಟ್ಟು, ಬೈಯೋಲಾಜಿಕಲ್ ಫಾದರ್ ಪಾಂಡು ಅಲ್ಲವೇ ಅಲ್ಲ…ನೂರಾರು ಸಖಿಯರೊಂದಿಗೆ ರಾಜರು ಮಜ ಮಾಡಬಹುದು, ಸಖಿಯರಿಗೆ ಸಾಮಾಜಿಕ ಭಾಂದವ್ಯದ ಜವಾಬ್ದಾರಿ ನೀಡಿಲ್ಲ. ಮಕ್ಕಳ ಹೆಸರುಗಳ ಗೊತ್ತಿಲ್ಲ ಯುದ್ಧದ ಸಮಯದಲ್ಲಿ ಮಾತ್ರ ಮಕ್ಕಳ ಲೆಕ್ಕ,
ಎರಡನೇಯ ಕಾದಂಬರಿ ಕವಲು:
ಎಂ.ಡಿ ಜಯಕುಮಾರ್ ಎಂಬ ಪಾತ್ರ ತನ್ನ ಸಹಾಯಕಿ ಮಂಗಳಗನ್ನ ಮದುವೆಯಾಗುವ ಸಂದರ್ಭ, ಆಕೆಯ ದಿಟ್ಟತನವೆಲ್ಲ ಅಹಂಕಾರದಂತೆ ವರ್ಣಿಸಿ, ಮದುವೆಯಾಗಲು ನಿರಾಕರಿಸಿ ಅವಳು ಫೆಮಿನಿಸ್ಟ್ ಎಂಬ ನಿರ್ಧಾರಕ್ಕೆ ಬರುತ್ತಾನೆ. ನಂತರ ಹಲವು ಮಹಿಳಾ ಸಂಘಟನೆ ಸೇರಿ ಅವನನ್ನ ಒಪ್ಪಿಸಿ ಮದುವೆ ಮಾಡಿಸುತ್ತಾರೆ. ಆದರೂ ನೆಟ್ಟಗೆ ಸಂಸಾರ ಮಾಡಲು ಅವನ ಪಿತೃಪ್ರಧಾನ ಧೋರಣೆಗಳು ಅಡ್ಡ ಬಂದು ಎರಡನೇ ಹೆಂಡತಿಯನ್ನ ರಾಕ್ಷಸಿ ಎಂಬಲ್ಲಿಗೆ ತಂದು ನಿಲ್ಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳ ಪೊಲೀಸರಿಗೆ ದೂರು ನೀಡಿರುತ್ತಾಳೆ. ಜಯಕುಮಾರ್ ತನ್ನ ಧಾರ್ಮಿಕ ಪುರುಷತ್ವದ ಕಣ್ಣುಗಳಲ್ಲಿ ಅಫೀಶಿಯಲ್ ಲೇಡಿ ಪೊಲೀಸ್ ರನ್ನ ಹೇಗೆ ನೋಡುತ್ತಾನೆ ಎಂಬುದಕ್ಕೆ ಉದಾಹರಣೆ
1, “ಗುಂಡು ಮುಖ, ನನ್ನ ಕೂದಲಿಗಿಂತ ತುಂಡಾದ ಕಪ್ಪು ಬಣ್ಣ ಹಾಕಿದ ಕ್ರಾಪ್ ಕಟ್, ಖಾಲಿ ಹಣೆ, ಬೋಳು ಕಿವಿ, ಖಾಕಿ ಪ್ಯಾಂಟು, ಬಿಗಿಯಾಗಿ ಹಿಸುಕಿ ಚಪ್ಪಟೆ ಮಾಡಿದಂತೆ ಎದೆಯನ್ನು ಸುತ್ತವರೆದ ಖಾಕಿ ಕೋಟು ಉರಿಯುವ ದರ್ಪದ ಕಣ್ಣು”(ಪುಟ 10)
ಇಲ್ಲಿ ಕ್ರಾಪ್ ಕಟ್, ಖಾಲಿ ಹಣೆ, ಬೋಳು ಕಿವಿ ಎದ್ದು ಕಂಡಿವೆ. ಪೊಲೀಸ್ ಯುನಿಫಾರಂ ಎಂಬ ಮಿನಿಮಂ ಕಾಮನ್ ಸೆನ್ಸ್ ಇರದ ಪಾತ್ರ ಜಯಕುಮಾರ್ .
2, ಒಬ್ಬ ಪೊಲೀಸ್ ಪೇದೆ ತನ್ನ ಎರಡನೇ ಹೆಂಡತಿ ಮಾತು ಕೇಳದಾಗ ಏನು ಮಾಡಿದ ಎಂಬುದನ್ನ ವಿವರಿಸಿದ್ದಾರೆ.
“ನಮಗೆಲ್ಲ ಟ್ರೇನಿಂಗ್ ಆಗಿರ್ತದರೀ ಯಾವಯಾವ ಜಾಗಕ್ಕೆ ಹ್ಯಂಗ್ ಹಂಗ್ ಹ್ವಡದ್ರೆ ಏನೇನಾಯ್ತದೆ ಅಂತ. ಅವಳೂ ರಾಂಗ್ ಮಾಡಿದ್ಲು . ಮತ್ತೆ ಎತ್ತಿ ಎತ್ತಿ ಆಕಿದೆ ನೋಡ್ರಿ. ಒಂದು ತಿಂಗಳಿಗೆ ನೆಟ್ಟಗಾದ್ಲು. ಅವರವ್ವನ್ನ ಕುತ್ಗೆ ಇಡಿದು ಹೊರಗೆ ನೂಕಿ ಊರಿಗೆ ಕಳಿಸಿದೆ. ನೀವ್ಯಾಕ್ ಹಂಗ್ ಮಾಡ್ಳಿಲ್ಲ.” (ಪುಟ 12)
ಪ್ರಶ್ನೆ:
ಅ) ಒಬ್ಬ ಹೆಣ್ಣು ಮಗಳ ಮೇಲೆ ಸಿಕ್ಕಿದಂಗೆ ಹಲ್ಲೆ ಮಾಡಿ ಸಂಸಾರ ಸರಿ ಮಾಡುವವನು ಎಂಥ ಸೀಮೆ ಗಂಡ್ಸು ನನಗೆ ಗೊತ್ತಿಲ್ಲ! ಸಮಾಜಕ್ಕೆ ಇಂತ ಮಹಿಳಾ ದೈಹಿಕ ದೌರ್ಜನ್ಯದ ಪಾಠವಿರುವ ಸಾಹಿತ್ಯ ಬೇಕಾ?
3, “ಓದಿದ ಗಂಡಸರೆಲ್ಲ ಎಂಗಸರಾಗ್ತಾರೆ. ಓದಿದ ಎಂಗಸರೆಲ್ಲ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ, ಎಂಗಸರು ಎಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು” (ಪುಟ 14)
ಪ್ರಶ್ನೆ:
ಅ) ಮಹಿಳಾ ಶೈಕ್ಷಣಿಕ ವಿಚಾರದಲ್ಲಿ ಭೈರಪ್ಪ ಅವರ ಸಾಹಿತ್ಯ ಯಾವ ನಿಟ್ಟಿನಲ್ಲಿ ಹೋಗತ್ತಿದೆ?
ಬೇಟಿ ಬಚಾವ್, ಬೇಟಿ ಪಡಾವ್ ಯೋಜನೆ ತಂದ ಮೋದಿ ಅವರೇ, ಸ್ತ್ರೀ ಶಿಕ್ಷಣ ವಿರೋಧಿ ಸಾಹಿತ್ಯವನ್ನ ನಿಷೇಧಿಸಬೇಕು.
ಜಯಕುಮಾರ್ ಮೊದಲ ಹೆಂಡತಿ ಬುದ್ಧಿಮಾಂದ್ಯೆ ಮಗಳು ದೊಡ್ಡವಳಾದ ಸಂದರ್ಭದಲ್ಲಿ
4, “ಈ ದರಿದ್ರ (ಮಂಗಳ) ತಾನೇ ಹಣೆಗೆ ಕುಂಕುಮ ಇಡುವುದಿಲ್ಲ, ಮಲಮಗಳು ದೊಡ್ಡವಳಾದಳೆಂದರೆ ಯಾಕೆ ಸಂಭ್ರಮಪಟ್ಟಾಳು?”
ಪ್ರಶ್ನೆ:
ಹಣೆಗೆ ಕುಂಕುಮವಿಡದ ಮಹಿಳೆ ದರಿದ್ರವಾ?
ಸರಾಫ್ ಎಂಬ ಮಹಿಳಾವಾದಿ ಮಂಗಳೆಗೆ ಕುಡಿತದ ಬಗ್ಗೆ ಹೇಳಿಕೊಡುವುದು,
ಅ) “ಸ್ಟ್ರಾಂಗ್ ಆದದ್ದೆಲ್ಲ ಮ್ಯಾಸ್ಕುಲೈನ್ ಗಳಿಗೆ ಅನ್ನೂದ ಒಪ್ಪಬಾರದು. ಒಪ್ಪಿ ಅದರಂತೆ ನಡೆದರೆ ಅವರು ಸ್ಟ್ರಾಂಗ್ ನಾವು ವೀಕ್ ಅಂತ ಒಪ್ಪಿಕಂಡಂತಾಗುತ್ತೆ. ಸ್ಕಾಚ್ ಆಗಬಹುದಾ?” (ಪುಟ 66)
ಯಾವ ಮಹಿಳೆ ಇಂಥ ತತ್ವಗಳ ಹೇಳಿಕೊಡುತ್ತಾರೆ. ಮಹಿಳಾವಾದಿಗಳ ಬಗೆಗಿನ ಬಾಲಿಶ ವಿವರಣೆ.
ಹಾಗೇ ಮಂಗಳ ತನ್ನ ಗೆಳೆಯ ದೈಹಿಕವಾಗಿ ಬಳಸಿಕೊಂಡ ಪ್ರೇಮವೈಫಲ್ಯ ಹೇಳಿಕೊಂಡಾಗ.
5, “ ಪ್ರಕೃತಿಸಹಜವಾದ ದೈಹಿಕ ಕಾಮನೆಗಳನ್ನು ಹತ್ತಿಕ್ಕಬಾರದು. ಆದರೆ ಅದಕ್ಕಾಗಿ ಹೆಂಗಸರು ಗಂಡಸಿನ ಯಜಮಾನಿಕೆಗೆ ಒಳಗಾಗಬಾರದು. ಹೆಂಗಸು ಹೆಂಗಸರೇ ಪರಸ್ಪರಾವಲಂಬಿಗಳಾಗಬೇಕು. ಅದೀಗ ವಿಮೋಚನೆಯ ಅತ್ಯುಚ್ಚ ಮೆಟ್ಟಿಲು’(ಪುಟ 68)
ಹೀಗೆ ಸರಾಫ್ ಎಂಬ ಮಹಿಳಾವಾದಿ ಅವಳನ್ನ ದೈಹಿಕವಾಗಿ ಬಳಸಿಕೊಳ್ಳುತ್ತಾಳೆ.
6, “ಯಾವುದೂ ಶುರುವಿನಲ್ಲಿ ಅಸಹ್ಯ ಉಂಟುಮಾಡುವದೇ, ಅಭ್ಯಾಸವಾದಮೇಲೆ ರುಚಿಕರವಾಗುತ್ತದೆ, ಮದ್ಯದಂತೆ ಎಂಬ ಸಮಾಧಾನ ತಂದುಕೊಳ್ಳಲು ಯತ್ನಿಸಿದೆ” … “ ಸ್ರೀ ಸಲಿಂಗಕಾಮವು ವಿಮೋಚನೆಯ ಒಂದು ಮುಖವೆಂದು ಪಶ್ಚಿಮದೇಶದ ಕೆಲವು ಸ್ತ್ರೀ ವಿಮೋಚನಾವಾದಿಗಳು ಬರೆದಿದ್ದಾರೆ” (ಪುಟ 69)
ಮಂಗಳ ಎಂಬ ಪಾತ್ರದಿಂದ ತಾನು ಮಾಡಿದ್ದು ತಪ್ಪಲ್ಲ, ಸ್ರೀ ಹೋರಾಟಗಾರರಲ್ಲಿ ಇದು ಕಾಮನ್ ಎಂದು ಹೇಳಿಸಿದ್ದಾರೆ. ಬಯೋಲಾಜಿಕಲಿ ಗಂಡಿನೊಂದಿಗೆ ಬೆರೆಯಲು ಸಾಧ್ಯವಿಲ್ಲದವರು, ಹಾರ್ಮೊನ್ ತೊಂದರೆ ಇರುವವರು ಸಲಿಂಗಕಾಮಿಗಾಳಗಿರಬಹುದು, ಆದರೆ ನಮ್ಮ ದೇಶದಲ್ಲಿ ಸ್ತ್ರೀವಾದಿಗಳೆಲ್ಲರೂ ಸಲಿಂಗಕಾಮವನ್ನ ಒಪ್ಪಿದ್ದಾರೆ ಎನ್ನುವುದು ಎಷ್ಟು ಸರಿ.
7, “ವಿಮೋಚನೆ, ಚಳವಳಿಯ ಹೆಂಗಸರ ಜೊತೆ ಸ್ನೇಹವಾಗಿರಬಹುದು, ವಿವೇಕಿಯಾದ ಗಂಡಸು ಎಂದೂ ಅಂಥೋರನ್ನ ಮದುವೆಯಾಗುಲ್ಲ” (ಪುಟ 72)
ಇದು ಮಂಗಳ ಪ್ರೇಮಿ ಪ್ರಭಾಕರನ ಮಾತು. ಹೆಣ್ಣ ದೈಹಿಕವಾಗಿ ಅನುಭವಿಸಿ, ಬುದ್ದಿವಂತ ಹೆಣ್ಣ ಮದುವೆಯಾಗಲು ಹೆದರಿದ ಗಂಡು ಆಡುವುದು ಇಂಥ ಮಾತೇ ಸರಿ.. ಇಂಥ ಪಾತ್ರ, ಮಹಿಳಾ ವಿರೋಧಿ ಹೇಳಿಕೆ ಸೃಷ್ಠಿಸಿದ ಭೈರಪ್ಪ ಅವರೆ ನೇರ ಹೊಣೆ, ಅವರೇ ಇಂಥದಕ್ಕೆ ಉತ್ತರ ನೀಡಬೇಕು
ಈ ಕಾದಂಬರಿಗಳಲ್ಲಿ ಇಂಥಹದೇ ಹಲವು ಉದಾಹರಣೆಗಳ ಬಂದಿವೆ..ಮಾನವತಾವಾದಿಯಾದ ಯಾವ ಸಾಹಿತಿ ಕೂಡ ಕವಲಿನಂತ ಕಾದಂಬರಿ ಬರೆಯಲಾರ.






ಕವಲು ಕಾದಂಬರಿ ನಂತರ ನಾನು ಭೈರಪ್ಪನವರನ್ನು ಓದುವುದನ್ನು ಬಿಟ್ಟೆ.ಆದರೆ ವಂಶವೃಕ್ಷ.ಗೃಹಭಂಗ.ದಾಟು ಮುಂತಾದವು ಚೆನ್ನಾಗಿವೆ.
ಬೈರಪ್ಪನವರ ಬರವಣಿಗೆಗಳನ್ನು ಅತೀವವಾಗಿ ಪ್ರೀತಿಸುತ್ತಿದ್ದ ನನಗೆ, ಇಂತಹ ಪ್ರಶ್ನೆಗಳು ಮೂಡಿದ್ದು ನಿಜ.
ಅವರೂ ಕೇವಲ.., ಮನುಷ್ಯರೇ ಅಲ್ಲವೇ ? ಸ್ವಲ್ಪನಾದರೂ ಪಕ್ಷಪಾತ ಇರುತ್ತೇ…!
ಅನುಭವಿಸುವುದಕ್ಕೂ, ಬರೆಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತೆ. ಬೈರಪ್ಪ ಸೋಲುವುದು ಇಲ್ಲೇ…!
ಕೆಲವು ಪ್ರಶ್ನೆಗಳಿಗೆ ಎಲ್ಲೂ ಉತ್ತರವಿಲ್ಲ,ಅಲ್ಲ ಸಿಗುವುದಿಲ್ಲ..:)
ಪ್ರಶ್ನೆಗಳನ್ನು ಕೇಳುವುದೇ ತಪ್ಪು ಅನ್ನುವವರೇ ಹೆಚ್ಚಿನವರು..ಅಂಧ ಅಭಿಮಾನಿಗಳು..:(
ಓಹ್ ! ನಮಗೇನಾಗಿದೆ? ಮೊದಲರ್ಧ ಓದಿದೆ, ಆಮೇಲಿನದ್ದು ಓದಲಾಗಲಿಲ್ಲ. ಅವಧಿ, ಸಾಹಿತ್ಯ ಅಂತ ಬರೆದಾಗ ಲೇಖಕ ಬರೆಯುವ ಎಲ್ಲ ಪಾತ್ರಗಳೂ ಅವನ ವಿಚಾರದ ಅಭಿವ್ಯಕ್ತಿ ಎಂದು ನಾವು ಯಾವಾಗಿನಿಂದ ಪರಿಗಣಿಸುತ್ತಿದ್ದೇವೆ! ಉಫ್!! ಒಂದು ಪಾತ್ರವನ್ನು ಅದರದ್ದೇ ನಿಟ್ಟಿನಲ್ಲಿ ಕಟ್ಟಿಕೊಡುತ್ತಾನೆ. ಅದು ಕಲ್ಪಿತ ಪಾತ್ರ. ಅವರೇನು ನಿಜ ಜೀವನದ ಪಾತ್ರಗಳಾ ? ಇದು ಸಿನೆಮಾದಲ್ಲಿ, ಧಾರಾವಾಹಿಗಳಲ್ಲಿ ಸೃಷ್ಟೀಸುವ ಪಾತ್ರಗಳು, ಅವುಗಳ ಮಾತುಗಳೆಲ್ಲಾ ಬರೆದವನ ವಿಚಾರವನ್ನೇ ಪ್ರತಿನಿಧಿಸುತ್ತವೆ ಅಂದಂತಾಯಿತು!
ಅದು ಕಾದಂಬರಿ ಅಲ್ಲದೆ ಚರಿತ್ರೆಯ ಪುಸ್ತಕವಾದರೆ ಈ ರೀತಿ ಒಂದೊಂದು ವಾಕ್ಯವನ್ನು ಎತ್ತಿ ಕೇಳಬಹುದೇನೊ. ಬರಹಗಾರ ಯಾವ ರೀತಿ ಓದುಗನಿಗೆ ಕಲ್ಪಿತ ಚಿತ್ರ ಕಟ್ಟಿಕೊಡುತ್ತಾನೆ, ತನ್ನ ಜೊತೆ ಓದುಗನನ್ನು ಅವನ ಕಲ್ಪಿತ ಕಥಾಲೋಕಕ್ಕೆ ಏಳೆಯುತ್ತಾನೆ, ತನ್ನ ಪಾತ್ರಗಳನ್ನು ಹೇಗೆ ಆಡಿಸುತ್ತಾನೆ, ಹೇಗೆ ಬೆಳೆಸುತ್ತಾನೆ, ಅದಕ್ಕೆ ಪೂರಕ ಭಾಷೆ, ಶೈಲೆ, ಹೆಣಿಗೆ ಇದೆಲ್ಲದರ ಬಗ್ಗೆ ಮಾತನಾಡದೇ ಆ ಮಾತನ್ನು ಆ ಪಾತ್ರದಿಂದ ಆಡಿಸಿದ ಹಿಂದಿನ ಉದ್ದೇಶವೇನು, ಆ ಮಾತುಗಳನ್ನು ಬರೆದ ಲೇಖಕನ ಮನಸ್ಥಿತಿಯ ಬಗ್ಗೆ ಮಾತನಾಡುತ್ತಾ ಒಂದು ಕಲೆಯ ರಸಾನುಭವವನ್ನು ಕಳೆದುಕೊಳ್ಳುತ್ತಿದ್ದೇವೆಯೇ?
I am confused.
ಇದಕ್ಕೆಲ್ಲ ಪರಿಹಾರ ಅಂದ್ರೆ
ಒಂದು ಒಳ್ಳೆ ಖಾಲಿ ನೋಟ್ ಬುಕ್ ಮೇಲೆ ಎಸ್ ಎಲ್ ಭ್ಯೆರಪ್ಪ ಅಂತ ಪ್ರಿಂಟ್ ಹಾಕಿಸಿ ಮಾರಾಟ ಮಾಡೋದು
ಆಗ ಯಾರಿಗೂ ಒಂಚೂರು ನೋವಾಗುವುದಿಲ್ಲ ಮತ್ತು
ನೀವು ಇಷ್ಟು ಸವಿವರವಾಗಿ ಹೇಳಿರುವಾಗ ನಾನು ಹೆಚ್ಚು ಹೇಳುವುದಿಲ್ಲ
ಪರ್ವದಲ್ಲಿ ಕರ್ಣನ ಪಾತ್ರ ಮತ್ತು ಅದರ ತೊಳಲಾಟಗಳನ್ನೂ ಬರೆದಿದ್ದು ಭ್ಯೆರಪ್ಪ ನವರೇ .
ಕವಲಿನಲ್ಲಿ ಗಂಡನ ಸರಿಸಮನಾಗಿ ನಿಂತು ಒಂದು ಕಂಪನಿ ಕಟ್ಟುತ್ತಳಲ್ಲ ಆ ಪಾತ್ರ ಕೂಡ ಭ್ಯೆರಪ್ಪ ನವರ ಸೃಷ್ಟಿಯೇ
ಕಾದಂಬರಿಯನ್ನು ರಸಾಸ್ವಾದನೆಗಾಗಿ ಓದಿ, ತಪ್ಪು ಕಂಡುಹಿಡಿಯಲೇ ಬೇಕು ಅಂತ ಓದಿದರೆ ಹೀಗೆ ಆಗೋದು
ಇನ್ನೂ ಇವನ್ನೇ ಹಿಡ್ಕೊಂಡು ಒದ್ದಾಡ್ತಿದ್ದಾರಲ್ಲ ನಮ್ಮ ಜನ ಅಂತ ಆಶ್ಚರ್ಯ ಆಗತ್ತೆ. ಕತೆಗಳನ್ನ ಕತೆಗಳಾಗಿ ಓದೋದು ಕಲಿಯೋಣ ಅಷ್ಟೆ.
ಒಂದು ಪಾತ್ರವನ್ನು ಬಿಂಬಿಸುವಾಗ ಆ ಪಾತ್ರದ ಮನಸ್ಥಿತಿಯ, ಆಲೋಚನಾ ಲಹರಿಯ ಆಯಾಮಗಳನ್ನು ಪ್ರತನಿಧಿಸುವುದು ಕಥೆಯಾರನ್ನು ಕೆಲಸ. ಆ ಪಾತ್ರದ ಮನಸ್ಸಿನಲ್ಲಿ ಬರಬಹುದಾದ ಯೋಚನೆಗಳು ಸಂದೇಹಗಳನ್ನು. ಆಗಿದ್ದ ಸಾಮಾಮಾಜಿಕ,ರಾಜಕೀಯ,ಧಾರ್ಮಿಕ ನಂಬಿಕೆ, ವ್ಯವಸ್ಥೆ ಹಾಗು ವಿಚಾರಗಳ ಹಿನ್ನೆಲೆಯಲ್ಲಿ ಕಟ್ಟಿ ಕೊಟ್ಟಿರಇಱ್ತಾರೆ. ಇದನ್ನೆಲ್ಲ ಇಂದಿನ ವ್ಯವಸ್ಥೆಯ,ತಮ್ಮ ಪೂರ್ವಾಗ್ರಹದ ಮಸೂರದ ಮೂಲಕ ನೋಡುತ್ತಾ ಪ್ರಶ್ನಿಸುವ ವಿಧಾನ ಹಾಗೂ ಕೇಳಿರುವ ಪ್ರಶನೆಗಳು ಎಷ್ಟು ಸಮಂಜಸ ಎನ್ನುವುದು ಯೋಚಿಸಬೇಕಾದ ವಿಷಯ.
ಮೇಲು ಕೀಳು,ಇಷ್ಟ ಅನಿಷ್ಟ. ಭಾವಗಳು ಮನಸ್ಸಿನ ಸಮಾಜದ ಸಾರ್ವಕಾಲಿಕ ಭಾಗಗಳು.ಅದು ಸರಿಯೋ ತಪ್ಪೋ ಎನ್ನುವುದು ಬೇರೆ ವಿಷಯ.
ಭೈರಪ್ಪನವರ ಕಾದಂಬರಿಗಳು ಸಾರ್ವಕಾಲಿಕ ಆಗುವುದು ಅದಕ್ಕಾಗಿ.
ಹೆಣ್ಣು ಕೂಡಾ ಒಳ್ಳೆಯ ಕೆಟ್ಟ ಗುಣಗಗಳ ಪ್ರತಿನಿಧಿಯೇ.ಒಂದು ಕಾದಂಬರಿಯ ಪಾತ್ರವನ್ನು ಕೆಟ್ಟದಾಗಿ ಚಿತ್ರಿಸಿದ ಮಾತ್ರಕ್ಕೆ ಅದೇ ಅವರ ನಿಲುವು ಎಂದು ಫರ್ಮಾನು ಹೊರಡಿಸಿ ಗೊಂಗಡಿ ಬಜಾಯಿಸುವ ಮೌಢ್ಯವನ್ನು ಏನೆಂದು ವ್ಯಾಖ್ಯಾನಿಸುವುದು?
ಭೈರಪ್ಪನವರನ್ು ನಿಂದಿಸಿಯಾದರೂ ಪ್ರಚಾರ ಪಡೆಯಬಹುದು ಎಂಬುದು ಇಂದಿನ ಫ್ಯಾಷನ್. ಹರಿ ನಿಂದೆ ಮಾಡುತ್ತಲೇ ಕೈವಲ್ಯವನ್ನು ಪಡೆದ ಹಿರಣ್ಯಕಶಿಪು ಥರ.
Yes. Kale ya abhivyakti saahitya. Grihabhanga dalli channigaraya purusha kula pratinidhisuttaanaa …
Haage paatra paatra ashte. Lekhakana manassu saavira paatra Srishti maduttade.
Patra aado maatu Aa sandarbhakke ashte.
Ishtagi Samaja kaliyali anta bhairappa baredoo illa.
Ishta idre odi. Illandre bidi.
ಸ್ಫೂರ್ತಿ ಗೌಡ ಅವರಿಗೆ—(೧) ನೀವು ಪರ್ವ ಕಾದಂಬರಿಯನ್ನು ಓದಿ ಅರ್ಥ ಮಾಡಿಕೊಂಡಿರುವ ರೀತಿಯ ಬಗ್ಗೆ ನನಗೆ ಅನುಮಾನಗಳಿವೆ. ಪರ್ವವನ್ನು ಭೈರಪ್ಪನವರು ಚರಿತ್ರೆಯ ಮರುಸೃಷ್ಟಿ ಎಂದು ಎಲ್ಲೂ ಹೇಳಿಲ್ಲ. ಪರ್ವ ಪೂರ್ತಿ ಅರ್ಥವಾಗಬೇಕಿದ್ದರೆ ತಾವು ಇರಾವತಿ ಕರ್ವೆ ಅವರ ‘ಯುಗಾಂತ’ (ಇದು ಕನ್ನಡಕ್ಕೂ ಅನುವಾದವಾಗಿದೆ. ಪ್ರಕಾಶಕರು: ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ), ‘ ಪರ್ವ ಒಂದು ಸಮೀಕ್ಷೆ’ ಎಂಬ ವಿಮರ್ಶಾಕೃತಿ (ಸಂಪಾದಕರು: ವಿಜಯಾ, ಪ್ರಕಾಶಾಕರು: ಇಳಾ ಪ್ರಕಾಶನ ಬೆಂಗಳೂರು ೧೮) ಮತ್ತು ಭೈರಪ್ಪನವರ ‘ನಾನೇಕೆ ಬರೆಯುತ್ತೇನೆ’ ಎಂಬ ಕೃತಿಯಲ್ಲಿರುವ (ಪ್ರಕಾಶಕರು: ಸಾಹಿತ್ಯ ಭಂಡಾರ ಬೆಂಗಳೂರು -೫೩) ‘ಪರ್ವ ಬರೆದಿದ್ದು’ ಎಂಬ ದೀರ್ಘ ಲೇಖನ ಓದಿ ನೋಡಿ.
(೨) ‘ಕವಲು’ ಕಾದಂಬರಿಯ ಬಗ್ಗೆ ಅಜಕ್ಕಳ ಗಿರೀಶ್ ಭಟ್ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ‘ಕವಲು; ಕಲೆ ಮತ್ತು ಕಾಳಜಿ’ (ಪ್ರಕಾಶಕರು:ಸಾಹಿತ್ಯ ಭಂಡಾರ ಬೆಂಗಳೂರು ೫೩) ಓದಿದ್ದೀರಾ?
ಎಸ್ .ಎಲ್ .ಭೈರಪ್ಪನವರು ಬಹುತೇಕ ತಮ್ಮ ಕಾದಂಬರಿಯಲ್ಲಿ ಹಿಂದು ಧರಮ ವನ್ನು ವೈಭವಿಕರೀಸಿ ಉಳಿದ ಧರಮದಲ್ಲಿ ಮೌಲ್ಯವೇ ಇಲ್ಲ ೆಎಂದು ಒಂದು ಕಡೆ ಹೇಳುತ್ತಾರೆ. ಮತ್ತೋಂದು ಕಡೆ ವೈದಿಕ ಧರಮದ ಹೆಣ್ಣು ಮಾತ್ರ ಶ್ರೇಷ್ಠ ಉಳಿದವರು ನೀಚರು ಎಂದು ಬಿಂಬಿಸುತ್ತಾರೆ. ಇವರ ಸಾಂಸ್ಕೃತಿಕ ರಾಜಕಾರಣ ಿಇದಿಯಲ್ಲ ಿಇದನ್ನು ನೋಡಿದರೆ ಇವರು ಹಿಂದು ಧರದ ವಕ್ತಾರ ಹೋರತು ಒಬ್ಬ ಶ್ರೇಷ್ಠ ಸಾಹಿತಿಯಲ್ಲ ಎನ್ನುವುದು ತಿಳಿಯಬಹುದು.
ನೀವು ಸೂಕ್ಷ್ಮವಾಗಿ ಗಮನಿಸಿ ನೋಡಿ, ಮತೀಯವಾದಿಗಳಲ್ಲಿ ಇತ್ತೀಚೆಗೆ ಒಂದು ಹೊಸ ವಾದ ಹುಟ್ಟಿಕೊಂಡಿದೆ.
ಅವರ ಇಷ್ಟದ ಲೇಖಕನ ಕೃತಿಗಳಲ್ಲಿ ಬರುವ ಪಾತ್ರಗಳು ಜೀವವಿರೋಧಿಯಾಗಿ, ಮನುಷ್ಯ ವಿರೋಧಿಯಾಗಿ, ಮತೀಯ ಗಲಭೆ ಎಬ್ಬಿಸುವ ಹೇಳಿಕೆಗಳಾದಿಯಾಗಿ… ಒಟ್ಟಾರೆ ಮನುಷ್ಯ ವಿರೋಧಿಯಾಗಿ ಮಾತನಾಡಿರುವುದನ್ನು ಯಾರಾದರೂ ಪ್ರಶ್ನಿಸಿನೋಡಿ.
ಉತ್ತರ ಏನಿರುತ್ತದೆ ಗೊತ್ತಾ?
‘ಅಯ್ಯೋ ಅದು ಕಾಲ್ಪನಿಕ ಪಾತ್ರ. ಅದು ಲೇಖಕನ ಮಾತಲ್ಲ. ಆ ಮಾತಿಗೂ, ಲೇಖಕನಿಗೂ ಸಂಬಂಧವಿಲ್ಲ’ ಎಂದುಬಿಡುತ್ತಾರೆ. ಅದೇ ಉಸಿರಿನಲ್ಲಿ ‘ಅವರ ಹಿಂದಿನ ಕೃತಿಗಳು ಹಾಗಿವೆ, ಹೀಗಿವೆ, ಅಷ್ಟು ಗ್ರೇಟ್, ಇಷ್ಟು ಗ್ರೇಟ್’ ಎಂದು ನಿಮ್ಮ ಬಾಯಿ ಮುಚ್ಚಿಸಲು ಯತ್ನಿಸುತ್ತಾರೆ.
ಆದರೆ, ಅವರ ಲೇಖಕನ ಕೃತಿಗಳ ಪಾತ್ರಗಳು ಎಸೆದ ಮಾತುಗಳನ್ನೇ ಚಪ್ಪರಿಸಿಕೊಂಡು ತಿನ್ನುತ್ತಾ, ತಿಂದು ತೊಳೆದ ನೀರನ್ನು ಬೇರೆಯವರ ಮೇಲೆ ಎರಚುವಾಗ ಈ ‘ಕಾಲ್ಪನಿಕ’ ಅವತಾರಗಳು ಮುಂದೆ ಬಂದು ಥೈತಕ್ಕ ಥೈಯ್ಯ ತಕ್ಕ ಎಂದು ಕುಣಿಯುವುದಿಲ್ಲವೆ?
ಎಂಥ ದ್ವಂದ್ವವಾದಿಗಳು ಅಲ್ವಾ?
ವಿ ಆರ್ ಕಾರ್ಪೆಂಟರ್ ಅವರಿಗೆ—- ಸಾಹಿತ್ಯದ ಬಗ್ಗೆ ತಮ್ಮ ಕಲ್ಪನೆಗಳು,ತಿಳುವಳಿಕೆಗಳು ಪ್ರಾಥಮಿಕ ಹಂತದಲ್ಲಿವೆ ಎಂದು ತಿಳಿಸಲು ವಿಷಾದಿಸುತ್ತೇನೆ. ಸಾಹಿತ್ಯ ಜೀವನದ ಪ್ರತಿಬಿಂಬ ಆಗಿರಬೇಕು; ಸಾಹಿತಿ ದಂತ ಗೋಪುರದಲ್ಲಿ ಕುಳಿತು ಸುಮ್ಮನೆ ಕಲ್ಪನೆಮಾಡಿಕೊಂಡು ಬರೆಯುತ್ತಾ ಕೂರಬಾರದು ಎಂಬ ಹೊಸಗನ್ನಡದ ಸಾಹಿತ್ಯ ವಿಮರ್ಶೆಯ ಮಾತುಗಳಿಗೆ ಈಗಾಗಲೇ ಒಂದು ನೂರು ವರ್ಷಗಳಾಗುತ್ತಾ ಬಂತು. ನವೋದಯ, ಪ್ರಗತಿಶೀಲ ,ನವ್ಯ,ಬಂಡಾಯ,ದಲಿತ ,ನವ್ಯೋತ್ತರ ಎಂದು ನಾವು ಗುರುತಿಸುವ ಸಾಹಿತ್ಯದ ಮೂಲ ಉದ್ದೇಶ ಇದೇ. ಈ ಪರಿಕಲ್ಪನೆ ನಮ್ಮ ಕನ್ನಡ ಸಾಹಿತ್ಯವನ್ನು ಪ್ರಭಾವಿಸದೆ ಇದ್ದರೆ ಈಗಲೂ ರಾಜ,ಮಹಾರಾಜರ ಕಥೆಗಳನ್ನು ಬರೆದುಕೊಂಡು, ನೀತಿ ಬೋಧನೆ ಮಾಡುತ್ತಾ ಸಾಹಿತಿಗಳು ಇರುತ್ತಿದ್ದರು. ಇದನ್ನು ತಾವು ಗಮನಿಸಬೇಕು. ಸಾಹಿತ್ಯದ ಉದ್ದೇಶ ನೀತಿ ಉಪದೇಶವಲ್ಲ. ಸದ್ಯದ ನಮ್ಮ ಜನ ಜೀವನದ ಚಿತ್ರಣ.
ಕಾದಂಬರಿಯ ಆಯಾ ಸಾಲಿನ ಹಿನ್ನೆಲೆ ಮುನ್ನೆಲೆಗಳನ್ನು ಗಮನಿಸಿದರೆ ಒಳಿತು, ಕಾದಂಬರಿಯನ್ನು ಮತ್ತೊಮ್ಮೆ ಒೊದಿ
ಹರವು ಸ್ಪೂರ್ತಿ ಗೌಡ ಅವರೇ….
ಸಾಹಿತ್ಯ ಆಯಾ ಕಾಲ-ಘಟ್ಟದ ಸಾಮಾಜಿಕ ಸ್ಥಿತಿ-ಗತಿ, ಸಮಕಾಲಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎನ್ನುವದನ್ನು ಎಲ್ಲಿಯೋ ಓದಿದ ನೆನಪು ಮತ್ತು ಸಾಹಿತಿ ತನ್ನ ಕಥೆಗೆ ಪೂರಕವಾಗಿ ಪಾತ್ರಗಳನ್ನು ರೂಪಿಸುತ್ತಾ ಹೋಗುತ್ತಾನೆ…..
ನೀವು ಎತ್ತಿರುವ ಬಹುತೇಕ ಪ್ರಶ್ನೆಗಳನ್ನು ಆಯಾ ಕೃತಿಗಳನ್ನು ಸಮಗ್ರ ದೃಷ್ಟಿಕೋನದಿಂದ ನೋಡಿದಾಗ ಮಾತ್ರ ನಿಮ್ಮ ಪ್ರಶ್ನೆಗೆ ನಿಮಗೆ ಬಹುಶಃ ಉತ್ತರ ಸಿಗಬಹುದು….
ಎಲ್ಲದಕ್ಕಿಂತ ಮುಖ್ಯವಾಗಿ ನಾನು ಭೈರಪ್ಪನವರ ಕಟ್ಟಾ ಅಭಿಮಾನಿ ಅಲ್ಲ (ಪೂರ್ವಾಗ್ರಹದ ಪ್ರಿತಿಕ್ರಿಯೆ ಬೇಡ)
ಹಾಗೆ ನೋಡಿದರೇ…
ಯಾವುದೇ ಭಾಷೆಯ, ಯಾವುದೇ ಸಾಹಿತ್ಯದ ಕೃತಿಗಳಲ್ಲಿ ಪಾತ್ರಗಳು ಆಡುವ ಮಾತುಗಳನ್ನು ಹಿನ್ನೆಲೆ-ಮುನ್ನೆಲೆಯನ್ನು ಗಮನಿಸದೇ ಎತ್ತಿಕೊಂಡರೇ ಪರಿಪೂರ್ಣ ಸಾಹಿತ್ಯವೂ ದೊರಕಲಾರದು ಅಲ್ವಾ…..
ಪೂರ್ಣ ಚಂದ್ರ ತೇಜಸ್ವಿಯವರ “ಕಿರಗೂರಿನ ಗಯ್ಯಾಳಿಗಳು” ಕೃತಿಯನ್ನು ಅವಲೋಕಿಸದೇ ಹೆಂಗಸರನ್ನ ಗಯ್ಯಾಳಿಗಳು ಅಂತ ಕರೆದರು ಎಂದು ತೇಜಸ್ವುಯವರನ್ನು ಜರಿಯುವದಕ್ಕೆ ಆಗುತ್ತಾ…..
ಇನ್ನು ಕೊನೆಗೆ
ಇಂದು ಪ್ರತಿನಿತ್ಯ ಚಾನೆಲ್ ಬೇಧವಿಲ್ಲದೇ ಪ್ರಸಾರವಾಗುತ್ತಿರುವ ಧಾರಾವಾಹಿಗಳನ್ನು ನೋಡಿದ್ರೆ ಹೆಣ್ಣಿನ ಸ್ಥಾನಮಾನ ಕುರಿತು ನಿಮಗೆ ಯಾವುದೇ ಪ್ರಶ್ನೆ ಮೂಡುವುದಿಲ್ಲವೇ…..
ನಿಮ್ಮ ಮನಸ್ಥಿತಿ ದೋಷಪೂರ್ಣವಾಗಿದೆ. ಅಷ್ಟು ಬಿಟ್ಟು ಉಳಿದದ್ದು ಸರಿಯೆಂದು ಒಪ್ಪಿಕೊಂಡಾಗ ನೀವು ಭೈರಪ್ಪನವರನ್ನು ಜರಿಯುವಂತಿಲ್ಲ. ನಾನು ಓದಿ ಅರ್ಥ ಮಾಡಿಕೊಂಡಂತೆ ಭೈರಪ್ಪನವರು ಧರ್ಮ, ನ್ಯಾಯ ಪಕ್ಷಪಾತಿ. ಅವರಗನಿಸಿದ ಧರ್ಮವನ್ನು ಅವರು ಎತ್ತಿ ಹಿಡಿಯುತ್ತಾರೆ. ಸಹನೆ ಇಲ್ಲದ ಧರ್ಮಪಕ್ಷಪಾತಿಯಂತೂ ಅವರಲ್ಲ. ಸಾಹಿತ್ಯ ರಸಿಕನಾಗಿ ಅವರ ಬರೆಹಗಳನ್ನು ಓದಿ, ಸಂತಸಗೊಂಡಿರುವೆ. ಬುದ್ಧಿಜೀವಿ, ವಿಮರ್ಶಕರ ತರಹ ಯೋಚಿಸಲಾರೆ.
ಸಾಹಿತ್ಯ ಕೃತಿಗೆ ಧ್ವನಿ ಅಂತ ಇರುತ್ತೆ.ಸಾಹಿತಿಗೆ ಜೀವನ ದರ್ಶನ ಅಂತ ಇರುತ್ತೆ. ಈಮೂಲಭೂತ ಸಾಹಿತ್ಯ ತತ್ವ ಅಂಧಾಭಿಮಾನದಲ್ಲಿ ಕಳೆದು ಹೋಗಬಾರದು.ಕಥೆಗಾಗಿ ಓದುಗ ಕೃತಿಯನ್ನು ಓದುತ್ತಾನೆಯೆ ಅಥವಾ ಸಾಹಿತಿಯ ಜೀವನ ದರ್ಶನದ ಒಳನೋಟಕ್ಕಾಗಿಯೆ? ಎಸ್ ಎಲ್ ಭೈರಪ್ಪನವರ ಅಭಿಮಾನಿಗಳು ಅವರ ಕೃತಿಗಳನ್ನು ಸಾಹಿತ್ಯ ಕೃತಿಗಳನ್ನಾಗಿ ನೋಡಬೇಕೆ ವಿನಹ ಸುಖಾಸುಮ್ಮನೆ ಅಭಿಮಾನ ವ್ಯಕ್ತಪಡಿಸೋದು ಸಮಂಜಸವೆ? ಕುತೂಹಲಭರಿತವಾಗಿ ತುಂಬ ರೋಚಕವಾಗಿ ಬರೆಯುತ್ತಾರೆ ಆದರೆ ಯಾಕೆ ಕೆಲ ಓದುಗರು ಅವರ ದೃಷ್ಟಿಕೋಣದ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸುತ್ತಾರೆ? ವಸ್ತುನಿಷ್ಠ ವಿಮರ್ಶೆಯಾಗಲಿ ಸಾಹಿತಿಗಳ ಕೃತಿಗಳ. ಅಲ್ಲವೆ?
ವಾದ ವಿವಾದಗಳನ್ನು ಸೃಷ್ಠಿಸದ ಸಾಹಿತಿಯೇ ಇಲ್ಲವೇ ಎಂಬ ಪ್ರಶ್ನೆ ಪದೇ ಪದೇ ಕಾಡುತ್ತಿರುತ್ತದೆ. ಹಾಗೆ ಯೋಚಿಸಿ ನೋಡಿದರೆ ಏನು ಬರೆದರೆ ಸರಿ ಈ ಸಮಾಜಕ್ಕೆ ಎಂಬ ಗೊಂದಲವೂ ಮೂಡುತ್ತದೆ . ಒಂದು ಕತೆಯಲ್ಲಿ ಎಲ್ಲಾ ಪಾತ್ರಗಳಿಗೂ ಸಾಮಾಜಿಕ ನ್ಯಾಯ ಕೊಡುವುದು ಸಾಧ್ಯವೇ?
yeno yako idu koncha atiyayitu anisalva
kavalu bage heluva mahileyaru yake datu kadambariya mahila patrada bage yochisuvudila pity just enjoy the reading and also be proud that kannada novels selling in lakhs in your period enjoy enjoy man
kelavu cinemadalli kelavu patra hageye hagatha a gantha director actor baidare so finally its a created story just enjoy and dont blame as of today no one is matching bairappa as a writer
ಶ್ರೀಮಾನ್ ಬೈರಪ್ಪನವರಿಗೆ ಒಳ್ಳೆಯ ಪ್ರಶ್ನೆಗಳನ್ನೆ ಹಾಕಿದ್ದೀರಿ, ನಾಗರೀಕ ಸಮಾಜದ ಪರವಾಗಿ, ಆದರೆ ಬೈರಪ್ಪರವರಿಗೆ ಅವರು ನಂಬುವ ದೇವರು ಬೇಗನೆ ಉತ್ತರ ಕೊಡುವ ಬುದ್ದಿಯನ್ನು ಕೊಡಲಿ ಎಂದು ಆಶಿಸುತ್ತ…………
ಮೊಸರಿಗೆ ಒಗ್ಗರಣೆ ಹಾಕಿಕೊಂಡು ಸವಿಯುವ ಬದಲು, ಕಲ್ಲು ಹುಡುಕುವ ಕೆಲಸ ಏಕೆ ಮಾಡುತ್ತಾರೋ! ಮೊಸರಿನ ಬಗ್ಗೆ ಅವಹೇಳನ ಮಾಡಿದಂತೆಲ್ಲಾ ಅದರ ಘನತೆ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.
ಸ್ಪೂರ್ತಿ, ನೀನು ಭೈರಪ್ಪನವರ ದೂರ ಸರಿದವರು, ಮತದಾನ, ಗೃಹಭಗ, ವಂಶವೃಕ್ಷ, ದಾಟು ಇವುಗಳನ್ನು ಓದಿ, ನಂತರ ಂದರೆ, 1990 ರ ದಶಕದ ನಂತರ ಬಂದ ವರ ಕವಲು, ಮಂದ್ರ, ಇತ್ಯಾದಿಗಳ ಬಗ್ಗೆ ಬರೆದಿದ್ದರೆ, ನಿನ್ನ ಬರಹಕ್ಕೆ ಒಂದಿಷ್ಟು ತೂಕ ಬರುತ್ತಿತ್ತು. ನಾನು 1976 ರಿಂದ ಭೈರಪ್ಪನವರನ್ನು ಓದುವುದನ್ನು ನಿಲ್ಲಿಸಿಬಿಟ್ಟೆ. ಆದರೆ, ಅವರನ್ನು ಒಬ್ಬ ಶ್ರೇಷ್ಟ ಕಾದಂಬರಿಕಾರ ಅಲ್ಲ ಎಂದು ನಾನು ನಿರಾಕರಿಸಲಾರೆ. ಏಕೆಂದರೆ 1969 ಮತ್ತು 1970 ರ ಹೈಸ್ಕೂಲ್ ದಿನಗಳಲ್ಲಿ ಓದಿದ ಅವರ ಮತದಾನ, ದೂರ ಸರಿದವರು ಇವುಗಳನ್ನು ಹೇಗೆ ಮರೆಯಲಿ? ಕಾಲಿಗೆ ಚಕ್ರ ಕಟ್ಟಿಕೊಂಡಂತೆ ವರ್ಷದಲ್ಲಿ ಎರಡು ಮೂರು ದೇಶದ ಮೂಲೆ ಮೂಲೆಗಳಲ್ಲಿ ತಿರುಗುತ್ತೀನಿ. ಯಾವ ರಾಜ್ಯಕ್ಕೆ ಹೋದರೂ, ಅಲ್ಲಿನ ಬರಹಗಾರರನ್ನು ಬೇಟಿಯಾದಾಗ ವರು ಮೊದಲು ಪ್ರಸ್ತಾಪಿಸುವುದು ಬೈರಪ್ಪನವರನ್ನು. ಮರಾಠಿ, ಹಿಂದಿ, ಭಾಷೆಯಲ್ಲಿ ಭೈರಪ್ಪನವರಿಗೆ ಅತಿ ಹೆಚ್ಚು ಓದುಗರಿದ್ದಾರೆ, ನೆರೆಯ ತಮಿಳುನಾಡು ಮತ್ತು ಕೇರಳದಲ್ಲಿ ನಮ್ಮ ಹಾಗೆ ಭೈರಪ್ಪನವರು ಹೆಚ್ಚು ಚರ್ಚೆಯಲ್ಲಿ ಇದ್ದಾರೆ.ಇದನ್ನು ನಾನು ಹೇಗೆ ಅಲ್ಲಗೆಳೆಯಲಿ? ಸಾಧ್ಯವಾದರೆ, ಅವರ ಹಳೆಯ ಕೃತಿಗಳನ್ನು ಅಪ್ಪನ ( ಹರವು ದೇವೇಗೌಡ) ಮೂಲಕ ಹುಡುಕಿಸಿ ಓದು. ನಿನ್ನ ಚಿಂತನೆ ಇನ್ನಷ್ಟು ಪಕ್ವತೆ ಬರುತ್ತೆ. ಒಬ್ಬ ಲೇಖಕಕನ್ನು ವಿಶ್ಲೇಷಿಸುವಾಗ ಅವನ ಕೃತಿಗಳನ್ನು ಇಟ್ಟುಕೊಂಡು ಎಲ್ಲಾ ಮಗ್ಗುಲುಗಳಿಂದ ಪರಿಶೀಲಿಸುವ ಒಳನೋಟಗಳು ದಕ್ಕುತ್ತವೆ. ನೀನು, ನನ್ನ ಕಣ್ಣ ಮುಂದಿನ ಕೂಸು. ಲೇಖನ ಬರೆಯುವಷ್ಟು ಎತ್ತರಕ್ಕೆ ಬೆಳೆದಿರುವುದು ವೈಯಕತ್ತಿಕವಾಗಿ ನನಗೆ ಖುಷಿ ತಂದಿದೆ.
ಜಗದೀಶ್ ಕೊಪ್ಪ.
Dear spoorthi u seem to a new reader with all the Zest n josh of a new feminist… Nimma vayasige e prashnegalella sahajave… But AVARA Ella kadambarigannoo odu… Nishpakshapaathavaagi yochisu… Nanthara ninnella prashnegaloo innashtu thookavaagirutthave. E reethiya athyuthsaaha olleyade aadaroo adu ninnanna blind madabaradu. Indu varadakshine kaanoonu r mahilaa rakshanaa kanoonuglu durbalakeyaagutthive endu swathaha police department e helutthide embudu ninne nenspinallirali. Vasthu sthithigoo mahilaavaadakkoo thaluku haakabeda.
Abhivyakthi swathanthryada hesaralli anisiddellavaalnnoo kelavomme helabaaradu…
ಉದಯಕುಮಾರ್ ಹಬ್ಬು ಅವರಿಗೆ– ಕನ್ನಡದ ಓದುಗರೆಲ್ಲರೂ ಮೆಚ್ಚುವಂತಹ ಜೀವನ ದೃಷ್ಟಿಕೋನ, ಜೀವನ ದೃಷ್ಠಿ ಹೊಂದಿರುವ ಲೇಖಕ ಯಾರು? ಯಾವ ಕೃತಿಗೆ ಆ ಸೌಭಾಗ್ಯ ಇಲ್ಲಿಯ ತನಕ ದೊರಕಿದೆ?
Good read spoorthi. Many opined you should all the books he has written so far. That is utter time waste exercise. There is no need to peg on Byrappa. He is out dated and irrelevant writer. Better to read others who are sensible and more progressive in attitude.
shauri ಅವರಿಗೆ—ಒಬ್ಬ ಲೇಖಕನ ಸಾಹಿತ್ಯದ ಬಗ್ಗೆ ಸಾರಾಸಗಟಾಗಿ ತೀರ್ಮಾನಕ್ಕೆ ಬರುವ ಮುಂಚೆ ಆತನ ಎಲ್ಲಾ ಕೃತಿಗಳನ್ನು ಯಾವ ಪೂರ್ವಗ್ರಹಗಳಿಲ್ಲದೆ ಓದಬೇಕಾದ್ದು ಪ್ರಾಥಮಿಕ ಅಗತ್ಯ. ಅದನ್ನು ಪಾಲಿಸಿದರೆ ವಿಮರ್ಶೆಗೆ ಒಂದು ತೂಕ ಬರುತ್ತದೆ.
ಕಾದಂಬರಿಯ ಮಧ್ಯದಲ್ಲಿ ಬರುವ ಕೆಲವೊಂದು ವಾಕ್ಯಗಳನ್ನು ಉದಾಹರಿಸಿ ಅದಕ್ಕೆ ಅರ್ಥ ಕಲ್ಪಿಸುವ ಕಲ್ಪನೆಯೇ ಸರಿ ಅಲ್ಲ. ಅಥವಾ ಅವರ ಕಾದಂಬರಿಯ ಪಾತ್ರಗಳು ಹೀಗೆ ಹೇಳಬೇಕಿತ್ತು /ಹೇಳಬಾರದು ಎಂದರೆ ಕಾದಂಬರಿಕಾರ ಇನ್ನು ಹೇಗೆ ಬರೆಯಬೇಕು? ಕಾದಂಬರಿಯನ್ನು ಓದುವವರು ಕೆಲವರಾದರೆ, ನಮ್ಮ ಈಗಿನ ದೃಶ್ಯ ಮಾಧ್ಯಮವಾದ ಕಿರು ತೆರೆ ,ಬೆಳ್ಳಿ ತೆರೆ ಇವುಗಳ ವ್ಯಾಪ್ತಿ ಇನ್ನು ದೊಡ್ಡದು . ಇದರಲ್ಲಿ ವ್ಯಾಪಕವಾದ ರೀತಿಯಲ್ಲಿ ಮಹಿಳೆಯರನ್ನು ಕೀಳಾಗಿ ಕಾಣುವುದು ಅವರನ್ನು ಒಂದು ಮಾರಾಟದ ವಸ್ತುವಿನಂತೆ ಜಾಹೀರಾತುಗಳಲ್ಲಿ ಬಳಸುವುದು ಕಾಣಿಸುವುದಿಲ್ಲವೇ?ಆದರೆ ಅವರೂ ಅಭಿವ್ಯಕ್ತಿ ಸ್ವಾತಂತ್ರ್ಯ,ಕಲಾ ಮಾಧ್ಯಮ ಇತ್ಯಾದಿ ಪ್ರಕಾರಗಳ ಅಡಿಯಲ್ಲಿ ತಮ್ಮಸಿನೆಮಾ,ಧಾರವಾಹಿ,ಪೈಂಟಿಂಗ್ಸ್ ಅನ್ನು ಸಮರ್ಥಿಸಿಕೊಳ್ಳುತ್ತಾರೆ. ಅದನ್ನು ನಾವು ಒಪ್ಪುವಂತೆ ಮಾಧ್ಯಮಗಳು ಮಾಡುತ್ತವೆ . ಹಾಗೆಯೇ ಭೈರಪ್ಪನವರು ಕಾದಂಬರಿ ಬರೆದು ಪ್ರಕಟಿಸುತ್ತಾರೆ .ಹಾಗಿದ್ದ ಮೇಲೆ ಭೈರಪ್ಪನವರೇ ಯಾಕೆ ಟೀಕೆಗೆ ಗುರಿಯಾಗಬೇಕು?