ಭೃಂಗದ ಬೆನ್ನೇರಿ ಬಂತು..

ಅದು ಹೀಗಾಯ್ತು-
ಮೊನ್ನೆ ಒಂದು ಪುಸ್ತಕದ ಅಂಗಡಿಯ ಬೆನ್ನತ್ತಿ ಒರಿಸ್ಸಾಗೆ ಹೋದ ಕಥೆ ಹೇಳುತ್ತಿದ್ದೆನಲ್ಲಾ ಆಗ ಏಕಾಏಕಿ ‘ದುಂಬಿಗೆ ಮಕರಂದ ಯಾವ ಜಾಗದ, ಯಾವ  ಹೂವಿನ, ಯಾವ ಮೂಲೆಯಲ್ಲಿ ಅಡಗಿರುತ್ತದೆ ಎನ್ನುವುದು ಗೊತ್ತಾಗುವುದಿಲ್ಲವೇ..’ ಎಂದು ಬರೆದುಬಿಟ್ಟೆ. ಆದರೆ ಮರುಕ್ಷಣ ನನ್ನ ಬೆರಳು ನನ್ನ ಕೆನ್ನೆಯ ಮೇಲೆ ಹೋಗಿ ಕೂತಿತ್ತು. ಹೌದು ಬರೆದದ್ದೇನೋ ಬರೆದೆ. ಆದರೆ ದುಂಬಿಗೆ ಮಕರಂದ ಯಾವ ಜಾಗದ ಯಾವ ಹೂವಿನಲ್ಲಿ ಯಾವ ಮೂಲೆಯಲ್ಲಿ ಇರುತ್ತದೆ ಎನ್ನುವುದು ಹೇಗೆ ಗೊತ್ತಾಗುತ್ತದೆ ಎನ್ನುವ ವಿಷಯ ತಲೆ ಕೊರೆಯಲಾರಂಭಿಸಿತು.

ಹಾಗೆ ನೋಡಿದರೆ ಜೇನ್ನೊಣ ನನಗೆ ಅಪರಿಚಿತ ಏನಲ್ಲ. ಜೇನು ಕೇಳುವವರ ಹಿಂದೆ, ಜೇನು ನೊಣಗಳ ಹಿಂದೆ, ಜೇನಿನ ಪಾಠ ಮಾಡುವ ಪ್ರೊಫೆಸರ್ ಗಳ ಹಿಂದೆ, ಜೇನಿನ ಅಧ್ಯಯನ ಮಾಡುವ ಸಂಶೋಧಕರ ಜೊತೆ ಸಾಕಷ್ಟು ಕಾಲ ಕಳೆದಿದ್ದೇನೆ. ಅದಕ್ಕೆ ಕಾರಣ ನಾವು ಇದ್ದ ಮನೆಯ ಎದುರೇ ಕೃಷಿ ವಿಶ್ವವಿದ್ಯಾಲಯವಿದ್ದದ್ದು ಹಾಗೂ ನನ್ನ ಅಣ್ಣ ಕೃಷಿ ಅಧ್ಯಯನ ಮಾಡುತ್ತಾ ಇದ್ದದ್ದು.

ಒಮ್ಮೆ ಹೀಗಾಯ್ತು. ನಮ್ಮ ಮನೆಯ ಪಕ್ಕ ಕಟ್ಟಡ ಕಟ್ಟಲು ಸಾಕಷ್ಟು ಲೋಡ್ ಕಲ್ಲು ಬಂದು ಬಿತ್ತು. ಪಾಪ ಏನಾಯಿತೋ ಏನೋ ಅಲ್ಲಿ ಕಲ್ಲು ಬಂದು ಬಿತ್ತೇ ಹೊರತು ಕಟ್ಟಡ ಏಳುವ ಯಾವ ಲಕ್ಷಣವೂ ಕಾಣಲಿಲ್ಲ. ಹಾಗಾಗಿ ನಮಗೆ ಅದೇ ಆಟದ ತಾಣ, ಅಪ್ಪ ಅಮ್ಮನಿಗೆ ಏನೆಂದರೆ ಏನೂ ಕೈಗೆ ಸಿಗದಂತೆ ಮುಚ್ಚಿಡುವ ಸೇಫ್ ಲಾಕರ್. ಜೀರುಂಡೆಗೆ ದಾರ ಕಟ್ಟಿ ಹಾರಿಸಿ ನಂತರ ಅದನ್ನು ಸೇರಿಸಲು ಇದ್ದ ಗೂಡು.. ಹೀಗೆ ಏನೇನೋ ಆಗಿ ಬದಲಾಗಿಬಿಟ್ಟಿತ್ತು. ಅಂತಹ ಕಲ್ಲುಗಳ ರಾಶಿಯ ಮಧ್ಯೆ ಒಂದು ದಿನ  ಜೇನ್ನೊಣಗಳು ಜುಂಯ್ ಎಂದು ಶಬ್ದ ಮಾಡುತ್ತಾ ಹಾರುತ್ತಿದೆ. ಅದರ ಆವೇಶ ಎಷ್ಟಿತ್ತು ಎಂದರೆ ಹತ್ತಿರ ಹೋದರೆ ಕೊಂದೇ ಸಿದ್ಧ ಎನ್ನುವಂತೆ. ಒಂದು ಹೊಸ ನೆಲವನ್ನು ಆಕ್ರಮಿಸಿದ ಸೇನೆ ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮುನ್ಸೂಚನೆ ಕೊಡುವಂತೆ.

ಅಲ್ಲಿಂದ ಶುರುವಾಯ್ತು ನಮ್ಮ ಜೇನು ಅಧ್ಯಯನ. ಪ್ರತೀ ದಿನ ಆ ಕಲ್ಲಿನ ರಾಶಿಗಳ ನಡುವಿನಿಂದ ಜೇನ್ನೊಣಗಳು ಎದ್ದು ಹೊರಗೆ ಹಾರುವುದೂ, ಮತ್ತೆ ಗೂಡು ಸೇರುವುದೂ, ಕಮ್ಮನೆ ಪರಿಮಳ ಬರುವುದೂ ಹೀಗೆಯೇ. ಹೀಗೆ.. ಇದೆಲ್ಲವನ್ನೂ ನೋಡುತ್ತಿದ್ದ ಅಣ್ಣ ಒಂದು ದಿನ ತಮ್ಮ ಗೆಳೆಯ ಪ್ರೊಫೆಸರ್ ಜೊತೆ ಕಾರ್ಯಾಚರಣೆಗೆ ಇಳಿದೇಬಿಟ್ಟರು. ಮುಖಕ್ಕೆ ಟವಲ್ ಕಟ್ಟಿಕೊಂಡು ಅಂಗೈ ಮುಚ್ಚುವ ಶರ್ಟ್ ಧರಿಸಿ ಏನೇನೋ ಟ್ರಿಕ್ ಬಳಸಿ ಜೇನುಗೂಡಿಗೆ ಕೈ ಹಾಕಿಯೇ ಬಿಟ್ಟರು. ಓಹ್ ! ಎಷ್ಟೊಂದು ಜೇನು. ಆದರೆ ಆ ಪ್ರೊಫೆಸರ್ ಆ ಜೇನು ನೆಕ್ಕಿ ನೋಡುವ ಮನಸ್ಸೂ ಮಾಡುತ್ತಿಲ್ಲ. ಬದಲಿಗೆ ಅವರ ಗಮನವೆಲ್ಲ ಅದೊಂದೇ ಜೇನ್ನೊಣದ ಮೇಲೆ. ಅದು ರಾಣಿ ಜೇನು. ಅವರು ರಾಣಿ ಜೇನಿನ ಬೆನ್ನತ್ತಿ ಬಂದಿದ್ದರು. ಕೊನೆಗೂ ಅದು ಸಿಕ್ಕೇಬಿಟ್ಟಿತು. ಅವರು ಅದನ್ನು ಒಂದು ಬೆಂಕಿ ಪೊಟ್ಟಣದಲ್ಲಿ ಕೂಡಿಟ್ಟು ಆರಾಮು ಮಾತುಕತೆಗೆ ಇಳಿದರು. ನಾವು ಇತ್ತ ಜೇನು ನೆಕ್ಕಿ ಅವರ ಪಕ್ಕ ಹಾಜರಾದವರೇ ಅಲ್ಲಿದ್ದ ಬೆಂಕಿ ಪೊಟ್ಟಣ ಎಗರಿಸಿಕೊಂಡು ಬಂದು ಸದ್ದು ಮಾಡದಂತೆ ತೆರೆದೆವು. ಅಷ್ಟೇ..! ಅದಕ್ಕೆ ಕಾಯುತ್ತಾ ಕೂತಿದ್ದಂತೆ ಆ ರಾಣಿ ಜೇನು ಹಾರಿಹೋಗಿಯೇ ಬಿಟ್ಟಿತು.

ಆ ಪ್ರೊಫೆಸರ್ ಮುಖದಲ್ಲಿ ಮಡುಗಟ್ಟಿ ಹೋದ ಆ ನಿರಾಸೆಯನ್ನು ನನ್ನ ಮನದಿಂದ ಅಂದಿನಿಂದ ಇಂದಿನವರೆಗೂ ಹೊರ ಓಡಿಸಲು ಆಗಿಲ್ಲ. ಹಾಗಾಗಿ ಅಂದಿನಿಂದ ಇಂದಿನವರೆಗೂ ಜೇನಿಗಿಂತ ಜೇನ್ನೊಣವೇ ನನ್ನನ್ನು ಆಕ್ರಮಿಸಿಬಿಟ್ಟಿದೆ. ಇನ್ನೂ ಶಾಲೆಗೆ ಹೋಗುತ್ತಿದ್ದ ಆ ಕಾಲದಿಂದ ಇಂದಿನವರೆಗೂ ನನ್ನ ತಲೆಯಲ್ಲಿ ಆ ಜೇನ್ನೊಣದ ಮೊರೆತ. ಮಂಗಳೂರಿಗೆ ಹೋಗಿ ಇಳಿದಾಗಲಂತೂ ನನಗೆ ಜೇನಿನ ಅಜ್ಜ ಎಂದೇ ಹೆಸರಾಗಿದ್ದ ಪೈಲೂರು ಲಕ್ಷ್ಮೀನಾರಾಯಣ ರಾಯರು ಸಿಕ್ಕಿ ಹೋದರು. ಅವರು ಆ ಕಡಲ ನಗರಿಗೂ, ಪಶ್ಚಿಮ ಘಟ್ಟದವರಿಗೂ ಜೇನಿನ ಹುಚ್ಚು ಹಿಡಿಸಿದವರು. ಹಾಗಾಗಿ ನಾನು ಅವರ ಹಿಂದೆ ಸಾಕಷ್ಟು ಬಾರಿ ಜೇನು ಪಾಠ ಕೇಳುತ್ತಾ ಸುತ್ತಿದೆ. ಅಷ್ಟೇ ಅಲ್ಲ ಅವರ ಮನೆಯ ಬಾಗಿಲಲ್ಲಿ ಕೂತು ಜೇನು ಪೆಟ್ಟಿಗೆ, ಜೇನು ಬೇಧ, ಜೇನಿನ ಪೆಟ್ಟಿಗೆ ಎಲ್ಲಿಡಬೇಕು, ಅದರೊಳಗಿನ ಮೇಣ ಏನು ಮಾಡಬೇಕು ಎನ್ನುವುದೆಲ್ಲಾ ತಲೆಯೊಳಗೆ ಕೂರಿಸಿಕೊಳ್ಳುತ್ತಾ ಹೋದೆ.

ಈ ಮಧ್ಯೆ ಜೋಗದ ಹಾದಿಯಲ್ಲಿರುವ  ತಲವಾಟದ ರಾಘವೇಂದ್ರ ಶರ್ಮ ತಮ್ಮ ಮಾಂತ್ರಿಕ ಶೈಲಿಯಲ್ಲಿ ‘ಒಂದು ಜೇನಿನ ಹಿಂದೆ’ ಪುಸ್ತಕ ಬರೆದದ್ದೂ ಅಲ್ಲದೆ ಜೇನು ಗೂಡನ್ನು ಹೊತ್ತೊಯ್ದು ನಗರದಿಂದ ನದಿ ಈಜಲು, ಬೆಟ್ಟ ಹತ್ತಲು ಬರುತ್ತಿದ್ದ ಮಕ್ಕಳಿಗೆ ಹೊನ್ನೆಮರಡುವಿನಲ್ಲಿ ಪಾಠ ಮಾಡುತ್ತಾ ಇದ್ದರು. ಹೀಗಿರುವಾಗಲೇ ಒಂದು ದಿನ ನಾನು ರಾಮಚಂದ್ರ ದೇವ ಬರೆದದ್ದನ್ನು ಓದಿದ್ದು. ಚಿಟ್ಟೆಗಳು ಎಲ್ಲಾ ಸಸ್ಯಗಳ ಮೇಲೂ ಹೋಗಿ ಕೂರುವುದಿಲ್ಲ. ಒಂದೊಂದು ಪ್ರಭೇದದ ಚಿಟ್ಟೆಗೆ ಅದರದ್ದೇ ಆದ ಸಸ್ಯಗಳ ಆಯ್ಕೆ ಇರುತ್ತದೆ ಅಂತ ಹೇಳುತ್ತಾ ಒಂದು ನೆನಪಿಡಿ ನಾವು ನಡೆಸುತ್ತಿರುವ ಪರಿಸರ ನಾಶದಿಂದಾಗಿ ಈ ಸಸ್ಯಗಳು ನಾಶವಾಗುತ್ತಾ ಹೋದರೆ ಬರೀ ಸಸ್ಯಗಳಲ್ಲ ಅದನ್ನೇ ಅವಲಂಭಿಸಿರುವ ಚಿಟ್ಟೆ ಸಂತತಿಯೂ ನಾಶವಾಗಿ ಹೋಗುತ್ತದೆ ಎಂದಿದ್ದರು.

ಹೌದಲ್ಲಾ.. ಎನಿಸಿ ಅರೆ ಕ್ಷಣ ಕಂಪಿಸಿದ್ದೆ. ಆದರೆ ಈಗ ಅದೇ ರೀತಿ ಮತ್ತೊಮ್ಮೆ ಕಂಪಿಸುವ ಕಾಲ ಬಂದುಬಿಟ್ಟಿತ್ತು. ಒರಿಸ್ಸಾದ ಪುಸ್ತಕದಂಗಡಿಯ ಕಥೆ ಹೇಳುತ್ತಾ ದುಂಬಿಯ ಬೆನ್ನಟ್ಟಿದ ನಾನು ಇದ್ದ ಪುಸ್ತಕಗಳೆಲ್ಲದರ ಮೊರೆ ಹೋದೆ. ಗೂಗಲ್ ನಲ್ಲಿ ಜಾಲಾಟ ನಡೆಸಿದೆ . ಹತ್ತು ಹಲವು ಮಂದಿಗೆ ಫೋನಾಯಿಸಿದೆ. ಇ ಮೇಲ್ ಗಳು ಈ ಕಡೆಯಿಂದ ಆ ಕಡೆಗೆ ಆ ಕಡೆಯಿಂದ ಈ ಕಡೆಗೆ ಪಿಂಗ್ ಪಾಂಗ್ ಬಾಲ್ ನಂತೆ ಅಡ್ಡಾಡಿದವು. ಗಂಟೆಗಳ ಲೆಕ್ಕ ಬಿಡಿ, ದಿನಗಳು ಉರುಳಿದವು. ಸಿಕ್ಕ ಮಾಹಿತಿ ಕೈನಲ್ಲಿ ಹಿಡಿದು ನಾನು ನಿಜಕ್ಕೂ ಮಾತಿಲ್ಲದವನಾಗಿದ್ದೆ.

ಕುಂಬಳಕಾಯಿ, ಸೌತೆ ಕಾಯಿ, ಕಲ್ಲಂಗಡಿ  ಹಣ್ಣು, ನಿಂಬೆಹಣ್ಣು, ದ್ರಾಕ್ಷಿ, ಟೊಮೇಟೊ, ಬದನೇಕಾಯಿ, ಈರುಳ್ಳಿ, ಎಲೆಕೋಸು, ಹೂಕೋಸು, ಸೂರ್ಯಕಾಂತಿ, ಸೇಬು, ಸೀಬೆಕಾಯಿ, ಹುರುಳಿಕಾಯಿ, ಕ್ಯಾರಟ್, ಕಾಫಿ, ತೆಂಗಿನಕಾಯಿ, ಮಾವಿನಹಣ್ಣು, ಹುಣಿಸೇ ಹಣ್ಣು, ಹತ್ತಿ, ಗೋಡಂಬಿ, ಬಾದಾಮಿ… ಎಲ್ಲಕ್ಕೂ ಈ ಎಲ್ಲಕ್ಕೂ ಜೇನ್ನೊಣಗಳ ನಂಟಿತ್ತು. ಜಗತ್ತಿನ ಪ್ರತೀ ಊಟದ ತಟ್ಟೆಯಲ್ಲೂ ಜೇನ್ನೊಣಗಳ ಹೆಜ್ಜೆಗುರುತಿತ್ತು. ನಾವು ತಿನ್ನುವ ಹಣ್ಣು, ತರಕಾರಿ, ಸೊಪ್ಪು ಈ ಎಲ್ಲವೂ ತಮ್ಮ ಹುಟ್ಟಿಗೆ ಜೇನ್ನೊಣಗಳ ಸ್ಮರಣೆ ಮಾಡುತ್ತಿದ್ದವು. ದುಂಬಿ ಮಾತ್ರವೇ ಪರಾಗ ಸ್ಪರ್ಶ ಮಾಡುವುದಿಲ್ಲ ಆದರೆ.. ನೆನಪಿಡಿ ಈ ಜಗತ್ತಿನ ಮೂರನೇ ಒಂದು ಭಾಗದ ಆಹಾರ ಹುಟ್ಟಬೇಕಾದರೆ ಅದಕ್ಕೆ ದುಂಬಿಯ ಪರಾಗ ಸ್ಪರ್ಶವೇ ಆಗಬೇಕು. ಅದರಲ್ಲೂ ಈ ಜಗತ್ತಿನ ಶೇಖಡಾ ೯೦ ಸಸ್ಯಗಳಿಗೆ ದುಂಬಿ ಇಲ್ಲದೆ ಉಳಿಗಾಲವಿಲ್ಲ. ೧೩೦ ರೀತಿಯ ಹಣ್ಣುಗಳು ಹಾಗೂ ತರಕಾರಿಗಳು ಉಸಿರಾಡುತ್ತಿರುವುದೇ ದುಂಬಿಗಳ ಸ್ಪರ್ಶದಿಂದ. ಅಮೆರಿಕಾ ಒಂದರಲ್ಲೇ ದುಂಬಿಗಳು ೪೦ ಬಿಲಿಯನ್ ಡಾಲರ್ ಕೃಷಿ ಉತ್ಪನ್ನಕ್ಕೆ ಕಾರಣ. ಇನ್ನೊಂದು ವಿಸ್ಮಯ ಎಂದರೆ ದುಂಬಿಗಳು ಮಾತ್ರವೇ ಇನ್ನೊಂದು ಜೀವವನ್ನು ತಿನ್ನದೇ ಬದುಕುವುದು

ಒಂದು ಜೇನುಗೂಡಲ್ಲಿ ೮೦ ಸಾವಿರ ಜೇನ್ನೊಣಗಳಿರುತ್ತವೆ. ಒಂದು ದಿನದಲ್ಲಿ ಇವು ಮುತ್ತಿಕ್ಕುವ ಹೂಗಳ ಸಂಖ್ಯೆಯೇ ೩೦೦ ಮಿಲಿಯನ್. ಪ್ರತೀ ವರ್ಷ ಒಂದು ಗೂಡಿನಲ್ಲಿ ೮೮ ಪೌಂಡ್ ಜೇನು ಸಂಗ್ರಹವಾಗುತ್ತದೆ. ನನಗೋ ಆ ಚಿಟ್ಟೆಗಳದ್ದೇ ನೆನಪು. ಇಷ್ಟೊಂದೆಲ್ಲಾ ಸಸ್ಯಗಳು ಚಿಟ್ಟೆಗಳ ಉಳಿವಿಗೆ ಕಾರಣವಾಗಿದ್ದರೆ ಇಲ್ಲಿ ಇಷ್ಟೆಲ್ಲಾ ದುಂಬಿಗಳು ನಮ್ಮ ಆಹಾರದ ಬಟ್ಟಲನ್ನು ಉಳಿಸುತ್ತಿದ್ದವು ಅಕಸ್ಮಾತ್ ಈ ದುಂಬಿಗಳು ಇಲ್ಲವಾಗಿಬಿಟ್ಟರೆ.. ಎನಿಸಿತು. ಆಗಲೇ ಅಲ್ಬರ್ಟ್ ಐನಸ್ಟೈನ್ ನನ್ನ ಕೈಗೆಟುಕಿದ್ದು. ಆ ಕಾಲಕ್ಕೇ ಈ ಬಗ್ಗೆ ಚಿಂತಿತನಾಗಿದ್ದ ಐನಸ್ಟೈನ್ ‘ಅಕಸ್ಮಾತ್ ದುಂಬಿಗಳೇನಾದರೂ ಈ ಜಗತ್ತಿನಿಂದ ಅಳಿದು ಹೋದರೆ ಮನುಷ್ಯನಿಗೆ ಉಳಿಗಾಲವಿರುವಿದು ಕೇವಲ ನಾಲ್ಕು ವರ್ಷ ಮಾತ್ರ’ ಎಂದು ಹೇಳಿಬಿಟ್ಟಿದ್ದ.

ಇದರಿಂದಾಗಿ ಏನಾಗಿಬಿಟ್ಟಿದೆಯಪ್ಪಾ ಈ ದುಂಬಿಗಳ ಕಥೆ ಎಂದು ಹುಡುಕಿದೆ. ಪಕ್ಕಾ ಅದು ಜೇನುಹುಟ್ಟಿಗೇ ಕೈ ಹಾಕಿದಂತಾಗಿ ಹೋಯಿತು. ಈ ಜಗತ್ತು ರಾಸಾಯನಿಕಗಳ ಸುರಿಹೊಂಡ ಆಗುತ್ತಿರುವುದು ಮೊದಲು ಗೊತ್ತಾಗಿರುವುದೇ ಈ ದುಂಬಿಗಳಿಗೆ. ಜಗತ್ತಿನ ಎಲ್ಲೆಲ್ಲಿ ನೋಡಿದರೂ ಜೇನು ಗೂಡುಗಳಲ್ಲಿ ಜೇನ್ನೊಣಗಳೇ ನಾಪತ್ತೆ. ರಾಣಿ ಹಾಗೂ ಮರಿ ಜೇನು ಬಿಟ್ಟರೆ ಮತ್ತೇನಿಲ್ಲ ಎನ್ನುವ ಶೋಕದ ವಾತಾವರಣ. ಒಂದು ಜೇನ್ನೊಣ ಎಲ್ಲಿಯಾದರೂ ಅಲುಗಾಡದೆ ಬಿದ್ದಿದೆ ಎಂದರೆ ಅದು ಸತ್ತಿದೆ ಎಂದು ಅರ್ಥವಲ್ಲ. ಅದು ತನ್ನ ಶಕ್ತಿಗೂ ಮೀರಿ ಪರಾಗವನ್ನು ಗೂಡಿನಂತ ಹೊತ್ತೊಯ್ಯುತ್ತಿದೆ ಎಂದು ಅರ್ಥ, ಅದು ಶಕ್ತಿಗೂ ಮೀರಿ ಪರಾಗ ಹೊತ್ತಿದೆ ಎಂದರೆ ಅದು ತನ್ನ ಶಕ್ತಿ ಮೀರಿ ಪರಾಗ ಸ್ಪರ್ಶ ಮಾಡಿದೆ ಎಂದರ್ಥ. ಅದು ಶಕ್ತಿ ಮೀರಿ ಪರಾಗ ಸ್ಪರ್ಶ ಮಾಡಿದೆ ಎಂದರೆ ನಮ್ಮ ಊಟದ ಬಟ್ಟಲಿನಲ್ಲಿ ಸಾಕಷ್ಟು ತರಕಾರಿ, ಸೊಪ್ಪಿನ ಸಾರು ಇದೆ. ಊಟದ ನಂತರ ತಿನ್ನಲು ಸಾಕಷ್ಟು ಹಣ್ಣುಗಳಿವೆ. ಅಷ್ಟೇ ಅಲ್ಲ ಅವು ನಮ್ಮ ಹಲವು ಖಾಯಿಲೆಗಳನ್ನು ದೂರ ತಳ್ಳುತ್ತಿವೆ ಎಂದೇ ಅರ್ಥ.

ಶಿವಾನಂದ ಕಳವೆಯವರ ‘ಮೊನೋಕಲ್ಚರ್ ಮಹಾಯಾನ’ ತಿರುವಿ ಹಾಕುತ್ತಿದ್ದೆ. ನಮ್ಮ ಪಶ್ಚಿಮ ಘಟ್ಟಗಳು, ನಮ್ಮ ನಾಡಿನ ಅರಣ್ಯಕ್ಕೆ ಹಿಡಿದಿರುವ ಏಕರೂಪದ ಹುಚ್ಚನ್ನು ಪುಸ್ತಕ ಬಿಚ್ಚಿಟ್ಟಿತ್ತು. ಇದೆ ಮೊನೋಕಲ್ಚರ್ ಹುಚ್ಚೇ ದುಂಬಿಗಳಿಗೂ ಕುತ್ತು ತಂದಿವೆ. ಅಷ್ಟೇ ಅಲ್ಲ, ಪ್ರತೀ ವರ್ಷ ಜಗತ್ತಿನಾದ್ಯಂತ ಈ ಭೂಮಿಗೆ ನಾವು ಸುರಿಯುತ್ತಿರುವುದು ಏನಿಲ್ಲೆಂದರೂ ೨.೫ ಬಿಲಿಯನ್ ಕೆ ಜಿ ರಾಸಾಯನಿಕಗಳನ್ನು. ಈ ರಾಸಾಯನಿಕದಿಂದಾಗಿ ಬಂಜೆತನ, ಕ್ಯಾನ್ಸರ್, ಹಾರ್ಮೋನ್ ಗಳ ವ್ಯತ್ಯಾಸ, ವಂಶವಾಹಿನಿಯಲ್ಲೇ ವ್ಯತ್ಯಾಸ ಹೀಗೆ ೨೭ ಮಹಾ ಖಾಯಿಲೆಗಳು ಬರುತ್ತವೆ ಎಂದು ಸಂಶೋಧಕರು ಪಟ್ಟಿ ಮಾಡಿದ್ದಾರೆ. ಮೂರು ಸಾವಿರ ವರ್ಷ ಇಟ್ಟರೂ ಕೆಡದ ವಸ್ತು ಜೇನು ಎನ್ನುತ್ತಾರೆ. ಕ್ಯಾನ್ಸರ್, ಏಡ್ಸ್ ನಿಂದ ದೂರ ಇರಲೂ ದುಂಬಿಗಳು ಬೇಕು. ಸ್ವರ್ಗ ಅಥವಾ ನರಕ ನಿಮ್ಮ ಆಯ್ಕೆ ಯಾವುದು ಎಂದರೆ ನರಕದತ್ತಲೇ ವಾಲುತ್ತಿದ್ದೇವೆ. ಮಾರಕ ರೋಗಗಳಿಂದ ಮುಕ್ತವಾಗಿಸುವ ದುಂಬಿಗಳನ್ನು ಕೊಂದು ನಾವು ರೋಗಗಳ ಬಾಣಲೆಗೆ ಬೀಳುತ್ತಿದ್ದೇವೆ.

ಇಂಗ್ಲೆಂಡ್ ನಲ್ಲಿ ಒಂದು ನಂಬಿಕೆ ಇದೆ. ಮನೆಯ ಮುಖ್ಯಸ್ಥರು ಸತ್ತರೆ ಹೋಗಿ ಜೇನ್ನೊಣಗಳಿಗೆ ಆ ಸುದ್ದಿ ಮುಟ್ಟಿಸಿ ಬರಬೇಕು ಎಂದು. ಜೇನು ಗೂಡಿರುವ ಕಡೆ ಹೋಗಿ ಮನೆಯವರು ‘ನಮ್ಮ ಮನೆಯಲ್ಲಿ ಸಾವಾಗಿದೆ. ದುಃಖಿಸು ಜೇನ್ನೊಣವೇ’ ಎಂದು ಅರುಹಿ ಬರುತ್ತಾರೆ. ಹಾಗೆ ಸುದ್ದಿ ತಿಳಿಸದಿದ್ದರೆ ಜೇನ್ನೊಣಗಳು ತಾವು ಈ ಕುಟುಂಬದವರಲ್ಲ ಎನ್ನುವ ಚಿಂತೆಯಲ್ಲೇ ಅವರನ್ನು ತೊರೆದು ಹೋಗಿಬಿಡುತ್ತವೆ ಎನ್ನುವ ನಂಬಿಕೆ;

ಒಂದು ಕಾಲದಲ್ಲಿ ಜೇನ್ನೊಣಗಳು ಹಾಗೂ ಜನರ ನಡುವಿನ ಸಂಬಂಧ ಹಾಗಿತ್ತು. ಯಾಕೋ ಬೇಂದ್ರೆ, ಭೃಂಗದ ಬೆನ್ನೇರಿ ಬಂದ ಕಲ್ಪನಾವಿಲಾಸವನ್ನು ವಿವರಿಸಿದ ಬೇಂದ್ರೆ  ನೆನಪಾದರು.
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ

ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ

ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ

 

ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ

ಓಂಕಾರದ ಶಂಖನಾದಕಿಂತ ಕಿಂಚಿದೂನಾ

ಕವಿಯ ಏಕತಾನ ಕವನದಂತೆ ನಾದಲೀನಾ

 

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ…

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ.. ಎನ್ನುವ ಸಾಲಿಗಿಂತ ಮುಂದೆ ಹೋಗಲಾಗಲಿಲ್ಲ. ದುಂಬಿಗಳ ಸ್ಪರ್ಶವನ್ನು ನಾವ್ಯಾರೂ ಔಟ್ ಸೋರ್ಸ್ ಮಾಡಲು ಸಾಧ್ಯವಿಲ್ಲ ಅಲ್ಲವೇ..??

‍ಲೇಖಕರು avadhi

November 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sathyakama Sharma K

    ರೆಫ್ರಿಜೆರೇಷನ್ ಅಗತ್ಯವಿಲ್ಲದ ಆಹಾರ ಎಂಬುದು ಜೇನಿನ ವೈಶಿಷ್ಟ್ಯಗಳಲ್ಲಿ ಒಂದು.

    ಪ್ರತಿಕ್ರಿಯೆ
  2. Sudha ChidanandGowd

    ತುಂಬ ಸೊಗಸಾಗಿದೆ ಜೇನುಯಾನ..!
    ರಾಣಿಜೇನು ಮತ್ತದರ ಸೇವಕರುಗಳಿಗೆ ಋಣಿಯಾಗಿರಬೇಕಾದ ಮನುಷ್ಯ ಕೊಲೆಗಡುಕನಾಗುತ್ತಿದ್ದಾನೆ..
    ಮಾಹಿತಿ ದೊರಕಿದಷ್ಟೂ ಬುದ್ಧಿಮತ್ತೆ, ವಿವೇಕ ಕಳೆದುಕೊಳ್ಳುತಿದ್ದಾನೆ.
    ಸಾಕಷ್ಟು ವಿಷಯ ಸಂಗ್ರಹದ ಲೇಖನ..
    ಹಿಂದೊಮ್ಮೆ ನಾನೂ ಪಾತರಗಿತ್ತಿಗಳ ಬೆನ್ನಟ್ಟಿ, ಹುಡುಕಾಡಿ ಅಡ್ಡಾಡಿದ್ದು ನೆನಪಾಯಿತು..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: