ಡಾ ಶಿವಾನಂದ ಕುಬಸದ್

ಜೀವನ ಪೂರ್ತಿ ಕಷ್ಟಗಳನ್ನೇ ಹಾಸಿ ಹೊದ್ದು, ಮತ್ತೆ ಅವೆಲ್ಲವನ್ನೂ ಛಲದಿಂದ ಜಯಿಸಿ, ಬೆಳೆದುನಿಂತ ಮಗನ ಏಳ್ಗೆಯನ್ನು, ತನ್ಮೂಲಕ ಸುಖದ ದಿನಗಳನ್ನು ಆಶಿಸಿದವಳ ಪಾದಗಳಲ್ಲಿ ತಲೆಯಿಟ್ಟು ಮಗ ರೋದಿಸುತ್ತಿದ್ದಾನೆ. “ ನನದೇನೂ ತಪ್ಪಿಲ್ಲಮ್ಮ , ನನ್ನನ್ನು ಕ್ಷಮಿಸಿಬಿಡು..” ಎಂದು ಗೋಳಾಡುವ ಆತನನ್ನು ಇವಳು ನಿಂತು ದಿಟ್ಟಿಸುತ್ತಿದ್ದಾಳೆ. ಅವಳು ನಿಂತ ನಿಲುವಿನಲ್ಲಿ ಹೆಣ್ಣೊಬ್ಬಳು ಮನಸ್ಸು ಮಾಡಿದರೆ ಏನೆಲ್ಲವನ್ನೂ ಗೆಲ್ಲಬಲ್ಲಳೆಂಬ ವಿಶ್ವಾಸವಿದೆ. ಬಿರಿಯುತ್ತಿರುವ ನೆಲದ ಮೇಲೆ ಗಟ್ಟಿ ಹೆಜ್ಜೆಯನ್ನಿಟ್ಟು, ಮತ್ತೆ ತಾನು ಆಕಾಶದೆತ್ತರಕ್ಕೆ ಬೆಳೆದು, ತನ್ನ ಕೊನೆಯ ಒಂದೇ ಒಂದು ಆಸೆಯನ್ನು ಅದುಮಿಟ್ಟು, ಮಗನನ್ನು ಆತನ ಎರಡೂ ಭುಜಗಳನ್ನು ಹಿಡಿದು ಎತ್ತಿ ಅಪ್ಪಿಕೊಳ್ಳುತ್ತಾಳೆ. ಪ್ರಖರ ಸ್ಪಾಟ್ ಲೈಟಿನ ಬೆಳಕಲ್ಲಿ ತಾಯ ಕಣ್ಣಲ್ಲಿ ತುಂಬಿರುವ ಕಣ್ಣೀರು ದುಖಿಸುತ್ತಿರುವ ಅವನ ತಲೆಯನ್ನು ತಂಪಾಗಿಸುತ್ತದೆ. ಸುತ್ತಲೆಲ್ಲ ಕತ್ತಲು, ಅವಳ ಸುತ್ತ ಮಾತ್ರ ಬೆಳಕು. ತಾಯಿ ಅಂದರೆ ಹಾಗೇನೇ. ಎಲ್ಲವನ್ನೂ ನುಂಗಿ ಸಾಂತ್ವನವನ್ನು ಮಾತ್ರ ಹಂಚುವ ಕರುಣಾಮಯಿ.
ಹಿನ್ನೆಲೆಯಲ್ಲಿ ಎದೆ ಸೀಳುವ ಧ್ವನಿಯಲ್ಲಿ ಕಟ್ಟುಪದವೊಂದು ಕೇಳಿಬರುತ್ತದೆ.
ಚಂದನವ ತೇದು ಅರಿಶಿನವ ಅರೆದು
ರಾಣಿ ಸೋಪಲ್ಲಿ ನಿತ್ಯ ಮೈತೊಳೆದು
ಮಂಗಳವಾದರೂ ರೋಮಗಳ ನೋವು ತಪ್ಪುತ್ತಿಲ್ಲ
ನಡು ಪಳಗಿಸಿ ದನಿ ಉರುಳಿಸಿ ಸೀರೆ ರವಿಕೆಯ ಮಾತಾಡಿಸಿ
ಎದೆಯ ನೀವಿ ಲಂಗದ ಲಾಡಿಯ ಎಳೆದು ಕಟ್ಟಿದರೂ ಪೂರ್ಣ ಹೆಣ್ತನವಿಲ್ಲ
ಮೂಡಿದ ಹೂವು ಪೂಸಿಕೊಂಡ ಘಮಲು ಒರಟು ಬೆವರಿನ ಜೊತೆ ಸೇರುತ್ತಿಲ್ಲ
ಇತ್ತ ಲುಂಗಿ ಬಿಟ್ಟು ಲಂಗ ಕಟ್ಟುವಲ್ಲೇ ಮನವಿರುವಾಗ ಗಂಡಾಗೆ ಉಳಿ ಆನ್ನುವುದು
ಕೋಟಿ ಉಳಿಪೆಟ್ಟು ಕೊಡುತ್ತಿದೆ ಎದೆಗೆ, ಅಂಗಕ್ಕೆ ಲಿಂಗ ಮೂಲಕ್ಕೆ ಶ್ವೇತಪ್ರಿಯ ಗುರುವೇ….
ನಾಟಕ ನೋಡುತ್ತಾ ಕುಳಿತವರ ಎದೆಯಲ್ಲೂ ನೋವಿನ ಸೆಳಕು. ಅವಳ ದುಃಖದಲ್ಲಿ ಒಂದಾಗಿ ಕಣ್ಣೊರೆಸಿಕೊಂಡವರೆಷ್ಟೋ ನಿಟ್ಟುಸಿರು ಹಾಕಿದವರೆಷ್ಟೋ. ಇಡೀ ಹಾಲ್ ಎಲ್ಲ ಸ್ಥಬ್ದ. ಇದು ಮೊನ್ನೆ ನಾನು ನೋಡಿದ “ಭೂಮಿ” ಎಂಬ ಹೃದಯಸ್ಪರ್ಶಿ ನಾಟಕದ ಒಂದು ದೃಶ್ಯ.
“ನಮ್ಮಲ್ಲಿ ನಾಳೆಯಿಂದ ಮೂರು ದಿನ ‘ಕಾಜಾಣ ಕಾವ್ಯ ಕಮ್ಮಟ’ವಿದೆ. ನಾಳಿದ್ದು ಸಂಜೆ ಒಂದೊಳ್ಳೆ ನಾಟಕವಿದೆ. ನೀವು ಬನ್ನಿ..” ಎಂದು ವೀಣಕ್ಕ (‘ವೀಣಾ ಬನ್ನಂಜೆ’ಯವರನ್ನು ನಾವು ಕರೆಯುವುದು ಹಾಗೇನೆ. ವಯಸ್ಸಿನಲ್ಲಿ ನನಗಿಂತ ಚಿಕ್ಕವಳಾದರೂ ಸಾಹಿತ್ಯ, ಸಂಸ್ಕೃತಿಯ ದಾರಿಯಲ್ಲಿ ನನಗಿಂತ ಯೋಜನ ಯೋಜನ ಮುಂದಿರುವ ಅವರನ್ನು ‘ಅಕ್ಕ’ ಎನ್ನುವುದೇ ಸರಿ). ಅವರ ಮಾತೇ ಹಾಗೆ. ಚಿಕ್ಕದು ಆದರೆ ಸ್ಪಷ್ಟ. ಒಂದೇ ಮಾತು. ನಾನು ಹೋಗಲೇಬೇಕು, ಹಾಗಿರುತ್ತದೆ. ಕಲ್ಲೊಳ್ಳಿ ಎಂಬ ಸಣ್ಣ ಹಳ್ಳಿಯ ಗುಡ್ಡದಲ್ಲಿ ‘ಸತ್ಯಕಾಮ’ರ ನೆನಪಲ್ಲಿ ವೀಣಕ್ಕ ಎಬ್ಬಿಸಿ ನಿಲ್ಲಿಸಿದ “ಸುಮ್ಮನೆ” ಎಂಬ ಕಟ್ಟಡ ಸುಮ್ಮನೆ ಆದದ್ದಲ್ಲ. ಅದಕ್ಕೆ ಅವರ ಅಪಾರ ಮನೋಸ್ಥೈರ್ಯ, ಚಲ, ಶ್ರಮ, ಅರ್ಪಣಾ ಮನೋಭಾವ ಕಾರಣ. ಅಲ್ಲಿ ನೋಡಿದರೆ ಅನೇಕ ಫೇಸ್ ಬುಕ್ ಗೆಳೆಯರು ಕೂಡಿದ್ದರು. ಅನೇಕ ದಿನಗಳಿಂದ ಎಲ್ಲರನ್ನೂ ಬಲ್ಲೆವೇನೋ ಎಂಬಷ್ಟು ಆತ್ಮೀಯ ಮಾತುಗಳು. ಹಾಗೆ ನೋಡಿದರೆ ರಘುನಂದನ ಕೂಡ ಫೇಸ್ ಬುಕ್ ನಲ್ಲೆ ಪರಿಚಯವಾದವರು. ನಾಟಕದ ಪ್ರಾರಂಭಕ್ಕೆ ಮೊದಲು ಈ ನಾಡಿನ ಅಪ್ರತಿಮ ಕಲಾವಿದೆ , ಕನ್ನಡ ಮತ್ತು ಸಂಸ್ಕೃತಿ ಸಚಿವೆ ಶ್ರೀಮತಿ. ಉಮಾಶ್ರೀಯವರಿಂದ ಪ್ರೋತ್ಸಾಕರ ಮಾತುಗಳು. ಅವರ ಸರಳತೆಯೇ ಅವರ ಆಭರಣ.
ಯುವಪೀಳಿಗೆಯ ಪ್ರತಿಭೆಗಳನ್ನು ನೋಡಿದಾಗಲೆಲ್ಲ ಅವರ “ಎನರ್ಜಿ”ಗೆ ನಾನು ಆಶ್ಚರ್ಯ ಪಟ್ಟಿದ್ದೇನೆ. ಬರೆದವರು, ನಿರ್ದೇಶಿಸಿದವರು, ಬೆಳಕು ನೀಡಿದವರು, ಅಭಿನಯಿಸಿದವರು ಎಲ್ಲರೂ ಯುವಜನಾಂಗವೇ. ಆದರೆ ಅವರು ಮೂಡಿಸಿದ ಪರಿಣಾಮ ಮಾತ್ರ ಅವಿಸ್ಮರಣೀಯ. ‘ಬೇಲೂರು ರಘುನಂದನ’ ಎಂಬ ಅದ್ಭುತ ಪ್ರತಿಭೆಯ ಯುವಕ. ಅವರ ಜೊತೆಗೆ ನಿರ್ದೇಶನ, ಗಾಯನ, ಸಂಗೀತ ಇತ್ಯಾದಿ ಉಳಿದೆಲ್ಲವನ್ನೂ ಒಬ್ಬನೇ ನಿರ್ವಹಿಸುವ ಛಾತಿಯುಳ್ಳ ಇನ್ನೊಬ್ಬ ಅಮೋಘ ಪ್ರತಿಭೆಯ ಯುವಕ ‘ರಾಜಗುರು ಹೊಸಕೋಟಿ’ ಕೂಡಿ ಸೃಷ್ಟಿಸಿದ ನಾಟಕ ಮನೆಸೂರೆಗೊಳ್ಳುತ್ತದೆ. ನಾಟಕದ ಪ್ರಾರಂಭದಿಂದ ಕೊನೆಯವರೆಗೂ ಸ್ಟೇಜ್ ಮೇಲೆ ಕಂಗೊಳಿಸಿದವರೆಂದರೆ ಮುಖ್ಯ ಪಾತ್ರಧಾರಿಣಿ, ‘ನಯನ ಸೂಡ’ ಎಂಬ ಅಪಾರ ಪ್ರತಿಭೆಯ ಯುವತಿ.
ವಸ್ತ್ರವಿನ್ಯಾಸ, ಬೆಳಕಿನ ಸಂಯೋಜನೆ, ಅಗತ್ಯಕ್ಕೆ ತಕ್ಕಂತೆ ನೃತ್ಯ, ಪಾತ್ರಪೋಷಣೆ, ಸಂವಾದ ಎಲ್ಲವೂ ಶಿಸ್ತುಬದ್ಧ. “ಶ್ವೇತಪ್ರಿಯ ಗುರುವೇ” ಎಂಬ ಅಂಕಿತದೊಂದಿಗೆ ಕೊನೆಯಾಗುವ ಅರ್ಥಪೂರ್ಣ, ಧ್ವನಿಪೂರ್ಣ ಕಟ್ಟುಪದಗಳನ್ನು ಹೊಸೆದಿದ್ದು ಬೇಲೂರು ರಘುನಂದನ. ಈ ಕಟ್ಟುಪದಗಳ ಭದ್ರಬುನಾದಿಯ ಮೇಲೆ ಸುಮಾರು ಒಂದೂಕಾಲು ಗಂಟೆಯ ನಾಟಕ ಹೆಣೆದು, ನಿರ್ದೇಶನ ನೀಡಿದ್ದು ರಾಜಗುರು. ನಾಲ್ಕೈದು ವಾದ್ಯಗಳನ್ನು ಒಬ್ಬರೇ ನುಡಿಸುತ್ತ ತಮ್ಮ ಹೃದಯಸ್ಪರ್ಶಿ ಧ್ವನಿಯಿಂದ ಹಿನ್ನೆಲೆ ಮಾತುಗಳನ್ನು ಹೇಳುವ , ಗೀತೆಗಳನ್ನು ಹಾಡುವ ರಾಜಗುರು ಅಚ್ಚರಿ ಮೂಡಿಸುತ್ತಾರೆ.
ಮುಖ್ಯಪಾತ್ರದಲ್ಲಿ ನಯನ ರವರ ಅಭಿನಯ ಅಚ್ಚಳಿಯದೆ ಉಳಿಯುತ್ತದೆ. “ಪಾರಿಜಾತ”ಳ ಪಾತ್ರದಲ್ಲಿ ಮೊದಲಿನಿಂದ ಕೊನೆಯವರೆಗೂ ಭೂಮಿಕೆಯಲ್ಲಿ ಉಳಿದು ಫ್ಲಾಶ್ ಬ್ಯಾಕ ನಲ್ಲಿ ಒಂದು ಹೆಣ್ಣಿನ ಕಷ್ಟಗಳನ್ನೂ, ಎಂಥದೇ ಕಷ್ಟವನ್ನೂ ಅವಳು ಎದೆಗುಂದದೆ ನಿಭಾಯಿಸುವುದನ್ನೂ ಪ್ರೇಕ್ಷಕರೆದುರಿಗೆ ಬಿಚ್ಚಿಡುವ ಪರಿ ತುಂಬ ಚೆನ್ನ.
ಅವ್ವನ ಗೆಳೆತನ ಎಂದೂ ಸೋಲುವುದಿಲ್ಲ
ಕಂಡಷ್ಟು ಕಡಲು ನೋಡಿದಷ್ಟೂ ಮುಗಿಲು
ಮುನಿಸಿಕೊಂಡರೂ ಮನಸು ಕೇಳುವುದಿಲ್ಲ
ಹಸಿವು ಬೆಳೆದಂತೆ ಫಾಸಲು ಕೈತುತ್ತು
ನಕ್ಕರೆ ಸರಸೋತಿ, ಅತ್ತರೆ ಪಾರೋತಿ
ನೋವಲ್ಲೂ ಕೈಹಿಡಿದು ಎದೆಗಪ್ಪೋ ಲಕುಮಿ
ಖುಷಿಗೆ ಜೊತೆ ಜೊತೆಗೆ ಕುಣಿ ಕುಣಿವ ನವಿಲು
ಬಿದ್ದಾಗ ಬುದ್ಧಿ ಮಾತಿಗೆ ಉದ್ಧಾನ ಬುದ್ಧ ಮೂರ್ತಿ
ಗಿಡದ ಮೊಗ್ಗೆಲ್ಲ ಅರಳೋ ಸ್ನೇಹಮಯಿ
ಇವಳು ತುಂಬೆ ಮಲ್ಲಿಗೆ ಹೂವು …
ಎಂದು ಅವ್ವನನ್ನು ನೆನೆಯುತ್ತಲೇ ಇವಳೂ ಅವ್ವನಾಗುವ ಕ್ರಿಯೆಯಿದೆಯಲ್ಲ, ಅದು ಹೆಣ್ಣಿಗೆ ಮಾತ್ರ ಸಾಧ್ಯ.
ಎಂಥ ಕಷ್ಟ ಬಂದರೂ ಬದುಕಿನಿಂದ ವಿಮುಖರಾಗುವ ಪ್ರಶ್ನೆಯೇ ಇಲ್ಲ ಎಂಬುದನ್ನು ಅತೀ ಸುಂದರವಾಗಿ ಹೆಣೆದ ನಾಟಕ. ದಿನಾಲೂ ತಾಯಿಯನ್ನು ಹೊಡೆಯುವ ಕುಡುಕ ತಂದೆ, ಮದುವೆಯಾದ ಕೆಲವೇ ದಿನಗಳಲ್ಲಿ ಮರಣಿಸಿದ ಗಂಡ ಇತ್ಯಾದಿಗಳನ್ನೆಲ್ಲ ಸಹಿಸಿ ಬದುಕಿದವಳಿಗೆ, ಕೊನೆಗೆ ಕಾಲೇಜ್ ಕಲಿತು ತನ್ನೆಲ್ಲ ಕಷ್ಟಗಳನ್ನೂ ಕಳೆದು ತಾನಿದ್ದ ‘ಮೊಹಲ್ಲಾ’ಕ್ಕೆ ಕೀರ್ತಿ ತರುತ್ತಾನೆಂದು ಕನಸಿದ ಮಗ ಅತ್ತ ಗಂಡೂ ಅಲ್ಲದ ಇತ್ತ ಹೆಣ್ಣೂ ಅಲ್ಲದ ಸ್ಥಿತಿಯಲ್ಲಿ ಬಂದು ನಿಂತಾಗ ಅವಳು ತೋರಿದ ಧೈರ್ಯ ನೋಡಿ ‘ಭೇಷ್’ ಎನಿಸುತ್ತದೆ. ಮಗನನ್ನು ‘ಮಂಗಳಮುಖಿ’ ಎಂದು ತಿರಸ್ಕರಿಸದೆ ‘ಮಗನೂ ನೀನೆ, ಮಗಳೂ ನೀನೇ’ ಎನ್ನುತ್ತಾ ಎದೆಗಪ್ಪಿಕೊಳ್ಳುತ್ತಾಳೆ.
ನಾಟಕ ನೋಡಿ ಎದ್ದು ಬರುವಾಗ
ಹೂ ಮುಡಿದು ಜಡೆ ಹೆಣೆದದ್ದಕ್ಕೆ ಹಡೆದವರು
ಹೊಡೆದು ಬಡಿದು ಹೊರಕ್ಕೆ ದೂಡಿದರು
ಕಾಡಿಗೆ ಕುಂಕುಮ ಹಚ್ಚಿಕೊಂಡದ್ದಕ್ಕೆ ಒಡಹುಟ್ಟಿದವರು
ಹೆಣ್ಣುಗ ಹೆಣ್ಣುಗ ಎಂದು ಬಣ್ಣ ಅಳಿಸಲು ಬಂದರು
ರವಿಕೆ ತೊಟ್ಟು ಸೀರೆ ಉಟ್ಟಿದ್ದಕ್ಕೆ ಸ್ನೇಹಿತರೆಲ್ಲ
ಸರಸರನೆ ಪಕ್ಕಕ್ಕೆ ಸರಿದು ಹೋದರು
ಊರು ಬಿಟ್ಟು ಬಯಲಿಗೆ ಬಂದ ಅನಾಥ ಜೀವಕ್ಕೆ
ತುತ್ತು ತಿನ್ನಿಸಿ ಮಡಿಲು ಹಾಸಿದ ತಾಯಿ ನೀನು
ಹುಟ್ಟೆಂದರೆ ಹುಟ್ಟಲ್ಲ ಸಾವೆಂದರೆ ಸಾವಲ್ಲ
ಸಾವಲ್ಲೂ ಹೂವರಳಿಸಿ ಹೋಗುವುದೇ ನಿಜದ ಹುಟ್ಟು
ಅಲ್ಲವೇ ಶ್ವೇತ ಪ್ರಿಯ ಗುರುವೇ …
ಎಂಬ ‘ಮಂಗಳಮುಖಿಯರ’ ಒಳಗನ್ನು ಬಿಂಬಿಸುವ ಮಾತುಗಳು ಮನದಲ್ಲಿ ಉಳಿದು ಬಿಡುತ್ತವೆ.
ಒಂದೆರಡು ಕಡೆ ಎಳೆದಂತೆ ಎನಿಸಿದರೂ ಅಂತರಾಳಕ್ಕಿಳಿದು ಚಿಂತೆಗೆ ಹಚ್ಚುವ ನಾಟಕ. ಅತೀ ಗಂಭೀರವಾಗಿ ನಾಟಕ ಸಾಗುವಾಗ “ಶ್ವೇತಪ್ರಿಯ ಗುರುವೇ” ಎಂಬ ಅಂಕಿತ ಮೇಲಿಂದ ಮೇಲೆ ಬರುವುದು ನಾಟಕದ ಚಲನೆಯಲ್ಲಿ ಗಕ್ಕೆಂದು ಬ್ರೇಕ್ ಹಾಕಿದಂತೆನಿಸುತ್ತದೆ.
ನೀವೂ ಒಮ್ಮೆ ನೋಡಿ.






ವಂಡರ್ಫುಲ್ ಬರಹ ಸರ್ ಓದಿ ನಾನು ಮತ್ತೊಮ್ಮೆ ನಾಟಕವನ್ನು ನೋಡಿದಷ್ಟು ಖುಷಿಯಾಯಿತು. ಅಂದು ನೋಡಿದ ನಾಟಕದ ದೃಶ್ಯಗಳು ಅಚ್ಚಳಿಯದಂತೆ ಉಳಿದುಕೊಂಡಿವೆ . ರಘುನಂದನ್ ಸರ್ ಅವರ ಕಟ್ಟು ಪದಗಳು ಈ ನಾಟಕದ ಜೀವವೇ ಸರಿ ಅಲ್ವ ಸರ್. ತುಂಬಾ ಅದ್ಭುತವಾದ ಅನುಭೌನ್ನು ಆ ನಾಟಕ ನನಗೂ ಒದಗಿಸಿದೆ. ಬರಿ ಡಬಲ್ ಮೀನಿಂಗ್ ನಾಟಕ ನೋಡಿ ನಕ್ಕು ಮನೆಸೇರೊ ಹಳ್ಳಿ ಜನರಮದ್ಯ ಇಂತಹ ನಾಟಕಗಳು ಪ್ರದರ್ಶನವಾದರೆ ನಾಟಕದಿಂದ ಬದಲಾವಣೆಗಳುನೂರಕ್ಕೆ ನೂರರಷ್ಟು ಹೌದಲ್ವ ಸರ್.
ಪ್ರೀತಿಯ ಕುಬುಸದ್ ಸರ್
ನೀವು ಒಲುಮೆಯಿತ್ತು ಬಂದು ನಾಟಕ ನೋಡಿದ್ದು ಮತ್ತು ಭೂಮಿಯ ಬಗೆಗೆ ಬರೆದದ್ದು ನಮ್ಮ ಖುಷಿಯನ್ನು ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ. ನಾವು ಬನಹಟ್ಟಿಯಿಂದ ನಾಟಕ ಮುಗಿಸಿ ಇಂದು ಬೆಳಿಗ್ಗೆ ವಾಪಸ್ ಬರುವಾಗ ಇಡೀ ನಮ್ಮ ತಂಡ ನಿಮ್ಮ ಬರಹವನ್ನು ಒಟ್ಟಿಗೆ ಓದಿ ಆನಂದಪಟ್ಟೆವು. ಅಷ್ಟೇ ಅಲ್ಲ ಕಷ್ಟಪಟ್ಟು ಮಾಡಿದ ಒಂದು ಕಲಾಕೃತಿಯನ್ನು ನೋಡಿ ಹೀಗೆ ಬೆನ್ನು ತಟ್ಟುವ ಹಿರೀ ಜೀವಗಳು ನಮ್ಮ ನಡುವೆ ತೀರಾ ಕಡಿಮೆ. ಇಂಥದ್ದರಲ್ಲಿ ಭೂಮಿಯ ಎಲ್ಲಾ ಸಾಧ್ಯತೆ ಮತ್ತು ಮಿತಿಗಳನ್ನು ಅರ್ಥಪೂರ್ಣವಾಗಿ ಅಕ್ಷರವಾಗಿಸಿದ್ದು ನಮ್ಮ ತಂಡಕ್ಕೆ ಒಂದು ಸಾರ್ಥಕ ಭಾವ. ನಿಮ್ಮ ಮಾತುಗಳನ್ನು ಕಂಡು ಅದೆಷ್ಟೋ ಶ್ರಮ ನಿರುಮ್ಮಳವಾಗಿ ಹೊಂಗೆಯ ನೆರಳಲ್ಲಿ ಕೂತು ತಣ್ಣನೆ ಗಾಳಿಯ ಸುಖವುಂಡ ಹಾಗೆ ಆಯಿತು. ಅವಧಿಯಲ್ಲಿ ನಿಮ್ಮ ಅಂಕಣದಿಂದ ನಮ್ಮ ಒಳಗಿದ್ದಿರಿ. ಈಗ ಯುವಕರ ಕಲಾಸೇವೆಯನ್ನು ಮೈದುಂಬಿ ಮೆಚ್ಚುಗೆ ವ್ಯಕ್ತ ಪಡಿಸಿದ್ದೀರಿ. ನಿಮ್ಮ ಮಾತುಗಳಿಂದ ಖಂಡಿತ ಬೀಗುವುದಿಲ್ಲ ಸರ್. ಮತ್ತಷ್ಟು ಬಾಗುತ್ತೇವೆ, ಕಲಿಕೆಯ ಹುಡುಕಾಟ ಮಾಡಿಕೊಳ್ಳುತ್ತೇವೆ.
ಪ್ರೀತಿಯ ನಮಸ್ಕಾರಗಳೊಂದಿಗೆ…
ಸುಂದರ ನಿರೂಪಣೆಯ ಶೈಲಿ, ತಮ್ಮ ಎಲ್ಲಾ ಬರಹಗಳಂತೆ ಮನೋಜ್ಞ. ರಘುನಂದನ್ ಹಾಗೂ ವೀಣಾ ಮೇಡಂ ರಂಥವರಿಗೆ ಮತ್ತೆ ಮತ್ತೆ ಅಭಿನಂದನೆಗಳು ಸಲ್ಲಲೇಬೇಕು. ‘ವೀಣಮ್ಮ’ನವರ ಪರಿಶ್ರಮದಿಂದ ‘ಸುಮ್ಮನೆ’, ನಾಡಿನ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರವಾಗುತ್ತಿರುವುದು ಹೆಮ್ಮೆ ಎನಿಸುತ್ತದೆ.
ಹೇಗೋ ಏನೋಪ್ಪ..
ನಾಟಕದ ಬಗ್ಗೆಯಂತೂ ಗೊತ್ತಿಲ್ಲ..!
ಇನ್ನು ಹೇಳಿದ್ದಾರೆಂದರೆ ಚನ್ನಾಗೇ ಇರಬಹುದು ಅಂದುಕೊಂಡೇ ಹೋಗಿದ್ದೆ..
ನಾಟಕ ನೋಡಿದ ಬಳಿಕ ,ಬರದಿದ್ದರೆ ಎಂಥ ಅದ್ಬುತ ನಾಟಕವೊಂದರಿಂದ ವಂಚಿತನಾಗುತ್ತಿದ್ದೆ ಅನಿಸಿತು..
ಇಡೀ ನಾಟಕವನ್ನು ಸಾರ್ಥಕಗೊಳಿಸಿದ ಮುಖ್ಯ ಪಾತ್ರಧಾರಿಣಿ ಮತ್ತು ಪುಟ್ಟ ಬಾಲಕಿಯ ಅದ್ಬುತ ನಟನೆಯ ನೆನಪು ಇನ್ನೂ ಹಸಿರಾಗಿದೆ..
ನಾಟಕ ಮಾಡಿದರೆ ರಘುನಂದನ ಟೀಂ ತರಹ ಮಾಡಬೇಕು ,
ನಾಟಕದ ವಿಮರ್ಶೆ ಬರೆದರೆ ಡಾ|| ಶಿವಾನಂದ ಕುಬಸದ್ ರಂತೆ ಬರೆಯಬೇಕು..
thumba chenna nimma mathu. nataka nodabeku anisuvanthe barediddiri
ನಮಸ್ಕಾರ,
ನಾಟಕ, ಕವನವಾಚನ ಎಂದು ಹೋಗಿ ಬಹಳ ದಿನಗಳಾದವು. ತಮ್ಮ ನಿರೂಪಣೆ ನೋಡಿ ಬಾಯಿ ನೀರೋಡೆಯಿತು. ಹೋಗುವ ಸಂದರ್ಭ ಎಂದು ಸಿಗುವುದೋ ನೋಢೋಣ.
ತಮಗೆ ಧನ್ಯವಾದಗಳು
ಗೌರವಾದರಗಳೊಂದಿಗೆ
ಕೆ ಎಸ್ ನವೀನ್
Sir nimmellara comments odi thumba kushi aitu, tadavaagi nanna reply dayamaadi kshamisi, nimmellara preethi hige irali, rangapayana dinda mattashtu olle natakavanna kodtheve, nimma prothsaha, asirvada sada jothegirali, nimma bhoomi ( nayana sooda)