8

ನಮ್ಮ ಕಾಲೇಜಿನಲ್ಲಿ ಇದ್ದ ಭೂಗೋಳಶಾಸ್ತ್ರದ ವಿಷಯವನ್ನು ಆರಿಸಿಕೊಂಡ ಮಕ್ಕಳಿಗೆ ಪ್ರತಿವರ್ಷ ಕಾಲೇಜಿನಿಂದ ಶೈಕ್ಷಣಿಕ ಪ್ರವಾಸ ಏರ್ಪಡಿಸುತ್ತಿದ್ದರು. ಉತ್ತರಭಾರತಕ್ಕೆ ಹೋಗಿ ಬಂದ ವಿದ್ಯಾರ್ಥಿಗಳು ತಾಜ್ ಮಹಲ್ ಮುಂದೆ ನಿಂತ ಫೋಟೋಗಳು ಹಿಮಾಲಯದ ಹಿನ್ನೆಲೆಯಲ್ಲಿ ಕೊಟ್ಟ ಪೋಸ್ಗಳು ದೆಹಲಿಯ ಮಾರುಕಟ್ಟೆಯಲ್ಲಿ ಖರೀದಿಸಿದ ಕಡಿಮೆ ದರದ ಶೂಗಳು ವ್ಯಾನಿಟಿ ಬ್ಯಾಗ್ ಗಳನ್ನು ಇಡೀ ಕಾಲೇಜಿನ ವಿದ್ಯಾರ್ಥಿಗಳ ಮುಂದೆ ತೋರಿಸಿ ತೋರಿಸಿ ಬೀಗುತ್ತಿದ್ದರು.
ಇದು ಭೂಗೋಳಶಾಸ್ತ್ರ ವನ್ನು ತೆಗೆದುಕೊಳ್ಳದ ಕೇವಲ ಅರ್ಥಶಾಸ್ತ್ರದ ವಿದ್ಯಾರ್ಥಿಗಳೇ ಆದ ಸೆಕ್ಷನ್ ಗಳವರಿಗೆ ತುಂಬಾ ಬೇಸರವನ್ನುಂಟು ಮಾಡುತ್ತಿತ್ತು. ಅವರ ಚಿಕ್ಕ ಮುಖ ನೋಡಲಾಗದೆ ಒಮ್ಮೆ ನಾನೇ ಪ್ರಾಂಶುಪಾಲರ ಬಳಿ ‘ಭೂಗೋಳ ಶಾಸ್ತ್ರ ತೆಗೆದುಕೊಳ್ಳದ ಮಕ್ಕಳಿಗೂ ಶೈಕ್ಷಣಿಕ ಪ್ರವಾಸ ಏರ್ಪಡಿಸುವ ವ್ಯವಸ್ಥೆ ಮಾಡೋಣ’ ಎಂದು ಸಲಹೆ ನೀಡಿದೆ ಪರಿಣಾಮ ಅದೇ ವರ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆಂದು ಸಹ ಪ್ರಾಧ್ಯಾಪಕರೊಬ್ಬರು ಹಾಗೂ ನಾನು ವಿದ್ಯಾರ್ಥಿಗಳ ಜತೆ ಮೈಸೂರು, ಊಟಿಗಳಿಗೆ ಹೋಗಬೇಕಾಗಿ ಬಂತು.
ವಿದ್ಯಾರ್ಥಿಗಳು ತಮ್ಮ ಸಹಜ ಚೇಷ್ಟೆ, ನಗು, ಗದ್ದಲಗಳಲ್ಲಿ ಮುಳುಗಿದ್ದಾಗ ನಾವವರನ್ನು ತಡೆಯಬಾರದೆಂದು ಮೊದಲೇ ನಿರ್ಧರಿಸಿಕೊಂಡಿದ್ದೆವು. ಮೈಸೂರು ನೋಡುವಾಗಲೂ ಎಲ್ಲಿಯೂ ಎಲ್ಲೆ ಮೀರಿದ ಅಶಿಸ್ತಿನ ನಡವಳಿಕೆ ತೋರಿಸದೇ ಸಾಕಷ್ಟು ಪ್ರೌಢರಂತೆ ವ್ಯವಹರಿಸುತ್ತಿದ್ದರು. ನಾವು ಹೋದ ಕಡೆಯೆಲ್ಲ ನಮ್ಮಂತೇ ಟೂರಿಗೆ ಬಂದ ಒಂದು ಮಹಿಳಾ ಕಾಲೇಜಿನ ಬಸ್ಸು ನಮ್ಮ ಬಸ್ಸಿನ ಹಿಂದೆ ಅಥವಾ ಮುಂದೆ ಬರುತ್ತಿತ್ತು. ಸಹಜವಾಗಿಯೇ ನಾವು ಅರಮನೆ ನೋಡುವಾಗ ಅವರೂ ಅರಮನೆಯಲ್ಲಿರುತ್ತಿದ್ದರು. ಜೂ ನೋಡುವಾಗ ಜೂನಲ್ಲಿದ್ದರು.
ಅವರ ಬಸ್ಸು ನಮ್ಮದನ್ನು ಹಾದು ಹೋಗುವಾಗ ಅದರೊಳಗಿದ್ದ ಹುಡುಗಿಯರು ನಮ್ಮ ಹುಡುಗರನ್ನು ಕೆಣಕುವ ಹಾಗೆ ಅಣಕಿಸುವುದು, ಕೈ ಬಾಯಿ ತಿರುಗಿಸಿ ಜಗಳಕ್ಕೆ ಕರೆಯುವುದು ಪ್ರಾರಂಭವಾಯಿತು. ಅವರನ್ನು ಅಲಕ್ಷಿಸಬೇಕೆಂದು ನಮ್ಮ ವಿದ್ಯಾರ್ಥಿಗಳಿಗೆ ಹೇಳಿದ್ದೆನಾದ್ದರಿಂದ ಆದಷ್ಟೂ ಸಂಯಮದಿಂದ ಇದ್ದರು. ಹೋಟೆಲೊಂದರ ಮುಂದೆ ಎರಡೂ ಬಸ್ಸುಗಳು ನಿಂತಾಗ ಹುಡುಗಿಯರ ಚೇಷ್ಟೆ ಜಾಸ್ತಿಯಾಗಿ ನಮ್ಮ ಹುಡುಗನೊಬ್ಬನನ್ನು ‘ಬಚ್ಚಂಗಾಯಿ’ (ಅವನು ಸ್ವಲ್ಪ ದಪ್ಪಗೆ ಉರುಟಾಗಿ ಇದ್ದವ) ಎಂದು ಕರೆದು ಅಣಕಿಸಿದಳು.

ಹುಡುಗರ ಸಹನೆಯ ಕಟ್ಟೆ ಒಡೆದಿತ್ತು. ತಾವು ಖರೀದಿಸಿದ್ದ ಪಿಚಕಾರಿಯಿಂದ ಹುಡುಗಿಯರ ಕಡೆ ಬಣ್ಣದ ನೀರು ಹೊಡೆದೇ ಬಿಟ್ಟರು. ಚೀತ್ಕರಿಸಿದ ಹುಡುಗಿಯರು ಪೈಲ್ವಾನನಂತೆ ಮೀಸೆ ಬೆಳೆಸಿದ್ದ ತಮ್ಮ ಓರ್ವ ಪ್ರಾಧ್ಯಾಪಕರನ್ನು ತಂದು ಎದುರಿಗೆ ನಿಲ್ಲಿಸಿಕೊಂಡು ಜಗಳಕ್ಕೆ ನಿಂತರು.
ನಮ್ಮ ಸಹ ಅಧ್ಯಾಪಕರಿಗೆ ಕೆಳಗಿಳಿದು ಹೋಗಿ ನಾಲ್ಕು ಸಮಾಧಾನದ ಮಾತಾಡಿ ಬನ್ನಿ ಎಂದು ಕಳಿಸಿದೆ. ‘ಏನೋ ವಿದ್ಯಾರ್ಥಿಗಳು ತಪ್ಪು ಮಾಡಿರಬಹುದು. ಅದನ್ನೀಗ ದೊಡ್ಡದು ಮಾಡೋದು ಬೇಡ. ನಮ್ಮ ಹುಡುಗರಿಗೆ ನಾವು ಹೇಳ್ತೀವಿ, ನಿಮ್ಮ ಹುಡುಗೀರನ್ನ ನೀವು ನೋಡ್ಕೋಳ್ಳಿ’ – ಎಂದು ಹಿರಿಯರ ಧಾಟಿಯಲ್ಲಿ ನಮ್ಮ ಮೇಷ್ಟ್ರು ಹೇಳುತ್ತಿದ್ದಂತೆ ಹಿನ್ನೆಲೆಯಲ್ಲಿ ನಿಂತ ಹುಡುಗಿಯರು ನಮ್ಮ ವಿದ್ಯಾರ್ಥಿಗಳತ್ತ ನಾಲಿಗೆ ಸಿಗಿದು ಅಣಕಿಸುವುದು, ಕೈ ಬಾಯಿ ಬಳಸಿ ಬೈಯ್ಯುವುದು, ಕೋತಿ ಚೇಷ್ಟೆ, ಮುಂದುವರಿದೇ ಇತ್ತು. ಇದನ್ನು ನೋಡಿಯೂ ನೋಡದಂತಿದ್ದ ಆ ಪೈಲ್ವಾನ ಪ್ರಾಧ್ಯಾಪಕರು,
‘ಇಡೀ ಬಸ್ಸನ್ನು ಒಳಗೆ ಹಾಕಿಸಿ ಬಿಡ್ತೇನೆ ನೋಡ್ರಿ. ಹುಡುಗೀರನ್ನು ಚುಡಾಯಿಸೋದು ಅಪರಾಧ ಆಗುತ್ತೆ ಅಂತ ಗೊತ್ತು ಮಾಡಿಸ್ತೇನೆ. ನೀನ್ ಯಾವನಲೇ ನನಗೆ ಬುದ್ಧಿ ಹೇಳೋದಕ್ಕೆ…’ ಎಂದು ನನ್ನ ಸಹೋದ್ಯೋಗಿ ಮಿತ್ರರಿಗೇ ಬೈಯ್ಯತೊಡಗಿದಾಗ ನನ್ನ ವಿದ್ಯಾರ್ಥಿಗಳೂ ಹೆದರಿ ಬಸ್ಸೇರತೊಡಗಿದರು. ಪರಿಸ್ಥಿತಿಯ ಸೂಕ್ಷ್ಮತೆ ನನಗೆ ಈಗ ಅರ್ಥವಾಗಿತ್ತು. ಕ್ಯಾಮರಾ ಕುತ್ತಿಗೆಗೆ ಜೋತಾಡಿಸಿಕೊಂಡು ನಾನೂ ಎದ್ದೆ. ಬಯಸಿದಾಗ ಒದಗುವ ಭೀಮಬಲವನ್ನು ಮೈಮೇಲೆ ಆಹ್ವಾನಿಸಿಕೊಂಡಿದ್ದೆ.
‘ಹೋಲ್ಡ್ ಯುವರ್ ಟಂಗ್ ಜೆಂಟಲ್ಮ್ಯಾನ್’… ಎಂದೊಂದು ಅರಚು ಹಾಕಿದೆ. ‘ಚೇಷ್ಟೆ ಪ್ರಾರಂಭಿಸಿದ್ದು ನಿಮ್ಮ ಹುಡುಗಿಯರು. ಅವರ ಅಂಗ ಚೇಷ್ಟೆಗಳನ್ನು ನನ್ನ ಈ ಕ್ಯಾಮರಾದಲ್ಲಿ ಫೋಟೋ ತೆಗೆದಿಟ್ಟಿದ್ದೇನೆ. ಈಗ ಸ್ವಲ್ಪ ಹಿಂದಿರುಗಿ ನೋಡಿ, ಆ ಹುಡುಗಿಯರ ಹಾವಭಾವ. ಎಲ್ಲಾ ರೆಕಾರ್ಡ್ ಮಾಡಿದ್ದೇನೆ. ನಡೀರಿ ಪೋಲೀಸ್‍ಸ್ಟೇಶನ್ನಿಗೆ ಹೋಗೋಣ. ತಪ್ಪು ಯಾರದ್ದು ಅಂತ ಅಲ್ಲಿ ತೀರ್ಮಾನ ಆಗುತ್ತೆ….’ ಎಂದು ಹುಡುಗಿಯರ ಕಡೆ ನೋಡಿದೆ. ಒಂದೊಂದೇ ಹುಡುಗಿಯರು ಬಸ್ಸೇರತೊಡಗಿದ್ದರು – ‘ಓ ಮೇಡಂ ಅವರೂ ಇದ್ರಾ? ಎಲ್ಲಾ ಒಂದೇ ವಯಸ್ಸು ನೋಡ್ರೀ, ಏನೋ ಚೇಷ್ಟೆ, ನಗು ಮಾಡ್ತಾವೆ. ನಾವು ಮೇಷ್ಟ್ರು ಸ್ಟ್ರಿಕ್ಟ್ ಆಗಿ ಮಾತಾಡ್ದಿದ್ರೆ ಆಗ್ತದಾ?….’ ಎಂದು ಮೀಸೆ ಮಾಷ್ಟ್ರು ಧಾಟಿ ಬದಲಾಯಿಸಿ ರಾಜಿಗೆ ಬಂದರು. ಸಮಸ್ಯೆ ಬಗೆಹರಿದಿತ್ತು.
ಹೆಚ್ಚು ಹೊತ್ತು ರಾಜಿ ಪಂಚಾಯ್ತಿಕೆ ಮಾಡುತ್ತಾ ಅಲ್ಲೇ ಕುಳಿತರೆ ಬೃಂದಾವನದ ದೀಪಾಲಂಕಾರ ತಪ್ಪಿ ಹೋಗುತ್ತದೆ ‘ರೈಟ್ ಪೋಯೀ’ ಎನ್ನುತ್ತಾ ಬಸ್ಸೇರಿದೆ. ಹುಡುಗರು ಗಪ್ ಚಿಪ್ ಆಗಿ ಕೂತಿದ್ದರು. ಮೈಸೂರು ಮುಗಿಸಿ ಮರುದಿನ ಊಟಿಗೆ ಹೋಗಿ ದೋಣಿ ವಿಹಾರ, ಕುದುರೆ ಸವಾರಿ ಎಲ್ಲಾ ಸವಿದು ಖುಷಿಯಿಂದ ಹಿಂದಿರುಗುವಾಗ ಪುನಃ ಗ್ರಹಚಾರ ಕೈ ಕೊಟ್ಟಿತು.

ಬಸ್ ಹೀಟ್ ಆಗಿದೆ ಎಂದು ಡ್ರೈವರ್ ಒಂದು ಹಳ್ಳಿಯ ಬಳಿ ಬಸ್ಸು ನಿಲ್ಲಿಸಿದ. ಹುಡುಗಿಯರು ಯಾರೂ ಬಸ್ಸು ಇಳಿಯಕೂಡದೆಂದು ತಾಕೀತು ಮಾಡಿದ್ದೆ. ಹುಡುಗರು ಅಲ್ಲೇ ಇಳಿದು ಆಚೀಚೆ ಅಡ್ಡಾಡತೊಡಗಿದರು. ಶ್ಯಾಮನೆಂಬ ವಿದ್ಯಾರ್ಥಿ ಒಂದಿಷ್ಟು ಬಣ್ಣದ ಗಿಡಗಳ ಟೊಂಗೆಯನ್ನು ಎಲ್ಲಿಂದಲೋ ಮುರಿದು ತಂದು ಬಸ್ಸಿಗೆ ಸಿಕ್ಕಿಸತೊಡಗಿದ್ದ. ಅಷ್ಟರಲ್ಲಿ ಎಲ್ಲಿದ್ದಳೋ ಒಂದು ಮುದುಕಿ ಕೈಯಲ್ಲಿ ಒಂದು ಕಸಬರಿಗೆ ಹಿಡಿದು ಪ್ರತ್ಯಕ್ಷಳಾದಳು, ಸಾಕ್ಷಾತ್ ತಮಿಳು ಕಾಳಿಯಂತೆ!
‘ಯಾರ್ ಡಾ ಅಂವನ್? ಎಂಗ ಪೂತೋಟತೆಲ್ಲಾಂ ನಾಶಪಣ್ಣಿನದು ಅವನೈ ವಿಡಮಾಟ್ಟೆನ್’ (ಯಾವೋನೋ ಅವನು? ನಮ್ಮ ಹೂದೋಟಾನೆಲ್ಲಾ ಹಾಳು ಮಾಡಿದವನು ಬಿಡೋದಿಲ್ಲ ಅವನ) ಎಂದು ಗರ್ಜಿಸುತ್ತಾ ಹಿಡಿಸೂಡಿಯನ್ನು ಗದೆಯಂತೆ ತಿರುಗಿಸಹತ್ತಿದಳು. ತಮಿಳು ಭಾಷೆಯ ಶಕ್ತಿ, ಅದರಲ್ಲಿನ ಬೈಗಳು ಪದಗಳಲ್ಲಿಯೇ ಅಡಗಿದೆ ಎಂದು ಕೇಳಿದ್ದೆ. ಈಗ, ಅದರ ಅರ್ಧಶಕ್ತಿ ಅವರ ಹೆಂಗಸರಲ್ಲಿ ಅಡಗಿರಬೇಕು ಎನ್ನಿಸಿತು. ಅಷ್ಟರಲ್ಲಿ ಆಚೀಚೆಯ ಜನರೆಲ್ಲಾ ಬಂದು ಸೇರಿ ಆಗಿತ್ತು. ಬಸ್ಸಿಗೆ ಜೋತಾಡಿಸಿದ ಬೋರ್ಡು ನೋಡಿ ಮೂಗು ಮುರಿಯುತ್ತಾ, ‘ಓ ಕನ್ನಡಕಾರಂಗಲ್ಲಾ? ಎಂಗ ಕಾವೇರಿ ತಣ್ಣಿಯೆಲ್ಲ ಕುಡಿಚಿವಿಟ್ಟವಂಗಲಾ? ಅವಂಗಳೆವಿಡಕ್ಕೂಡಾರು’… (ಓ ಕನ್ನಡದವರಾ? ನಮ್ಮ ಕಾವೇರಿ ನೀರನ್ನೆಲ್ಲ ಕುಡಿದುಬಿಟ್ಟವರಾ? ಅವರನ್ನು ಬಿಡಬಾರದು) ಎಂದೆಲ್ಲ ಕಿರುಚಹತ್ತಿದರು.
ಈಗ ನನಗೆ ಗಂಟಲೊಣಗಿ ಬರತೊಡಗಿತು. ಬಯಸಿದಾಗ ಒದಗುವ ಭೀಮ ಬಲ ಪರಾರಿ. ಏನಾದರೂ ತಪ್ಪಾಯ್ತು. ಸುಡುಗಾಡು ಎಂದೆಲ್ಲ ಹೇಳಿ ಅಂಗಲಾಚೋಣವೆಂದರೆ ಹಾಳು ತಮಿಳು ಬಾರದು. ‘ಕಾವೇರಿ’ ಶಬ್ದ ಬೇರೆ ಕಿವಿ ಮೇಲೆ ಬಿದ್ದಾಗಲಂತೂ ಮುಗಿಯಿತು ಕಥೆ ಎಂದುಕೊಂಡೆ. ‘ಕಾಲೇಜು ವಿಹಾರಕ್ಕೆ ಬಂದವರು ಕಾವೇರಿ ವಿವಾದಕ್ಕೆ ಬಲಿ’ ಎಂಬ ತಲೆಬರಹಕ್ಕೆ ವಸ್ತುವಾಗುವುದೇ ನಮ್ಮ ಹಣೆಬರಹವಾಯ್ತೆ ಎನ್ನಿಸಿ ಕಣ್ಣು ಕತ್ತಲಿಟ್ಟಿತು.
ಆಗ ಆಪದ್ಭಂಧುವಿನಂತೆ ನಮ್ಮ ಬಸ್ ಡ್ರೈವರ್ ಮುಂದೆ ಬಂದ. ‘ಈರ್ ಮಂಡೆ ಬೆಚ್ಚ ಮಲ್ಪೊಡ್ಚಿ, ದೇವೆರ್ ಉಲ್ಲೇರ್’ ಎಂದು ತುಳುವಿನಲ್ಲಿ ಧೈರ್ಯ ನೀಡಿ, ತನ್ನ ಬಸ್ಸಿಗೆ ಹಾಕಿಕೊಂಡಿದ್ದ ಕೊಲ್ಲೂರು ಮೂಕಾಂಬಿಕೆಯ ಫೋಟೋ ಎದುರಿಗೆ ಹಿಡಿದ. ನನಗೆ ಒಂದೆರಡು ತಮಿಳು ವಾಕ್ಯ ಹೇಳಿಕೊಟ್ಟು, ಜೋರಾಗಿ ಹೇಳಲು ಹೇಳಿದ. ಅದರ ಸಾರಾಂಶ –
‘ನೋಡಿ, ನಾವು ಕೊಲ್ಲೂರು ಮುಗಾಂಬಿಕಾ ಜಿಲ್ಲೆಯವರು. ನಿಮ್ಮ ಎಂ.ಜಿ.ಆರ್., ಜಯಲಲಿತಾ ಎಲ್ಲರೂ ಕೊಲ್ಲೂರಮ್ಮನ ಭಕ್ತರು. ಕೊಲ್ಲೂರಮ್ಮನಿಗೆ ಕೆಂಪು ಹೂವೆಂದರೆ ಪ್ರೀತಿ. ಈ ಹುಡುಗ ನಿಮ್ಮ ತೋಟದ ನಾಲ್ಕು ಹೂ ಕಿತ್ತಿದ್ದರಿಂದ ನಿಮ್ಮ ಮೇಲೆ ದೇವಿಯ ಕೃಪಾಕಟಾಕ್ಷ ಬಿದ್ದಿದೆಯೆಂದೇ ತಿಳಿಯಿರಿ. ಈ ಹೂವನ್ನೂ ನಾವು ದೇವಿಗೇ ಹೋಗಿ ಮುಟ್ಟಿಸುತ್ತೇವೆ. ಕೊಲ್ಲೂರಮ್ಮ ನಿಮ್ಮನ್ನು (ನಮ್ಮನ್ನು!) ಕಾಪಾಡಲಿ…’ ಎಂದು ಕನ್ನಡ್ಕಾರಂಗಳ ಶೈಲಿಯಲ್ಲಿ ತಮಿಳಿನಲ್ಲಿ ಒಂದು ಡೈಲಾಗು ಹೇಳಿದೆ.

ಆಶ್ಚರ್ಯ! ಕೊಲ್ಲೂರು ಮುಗಾಂಬಿಕೆಗೆ ಗೌರವ ಕೊಟ್ಟರೋ, ಎಂ.ಜಿ.ಆರ್., ಜಯ ಲಲಿತಾ ಹೆಸರಿಗೆ ಕರಗಿದರೋ, ಅಂತೂ ನಮ್ಮ ಕಡೆ ಕ್ರೂರ ನೋಟ ಬೀರಿ, ‘ಪೋಂಗೋ ಪೋಂಗೋ ವಾಳುಂಗೋ ಇಲ್ಲಾಟಿ ಎಂಗ ಕೈಲೆ ನಿಂಗ ಚತ್ತು ಪೋವಿಂಗ’ (ಹೋಗಿ ಹೋಗಿ ಬದುಕ್ಕೊಳ್ಳಿ ಇಲ್ಲಾಂದ್ರೆ ನಮ್ಮ ಕೈಯಲ್ಲಿ ಸಾಯ್ತಿದ್ರಿ)
ಎನ್ನುತ್ತಾ ಬಸ್ಸು ಬಿಟ್ಟು ಬದಿಗೆ ಸರಿದು ನಿಂತರು. ಅವರ ಕೈಯಲ್ಲಿದ್ದ ಪೊರಕೆ, ಸೊಂಟದ ಮೇಲೆ ಕೈಯಿಟ್ಟು ನಿಂತ ಭಂಗಿ, ಕೆಕ್ಕರಗಣ್ಣಿನಿಂದ ನಮ್ಮತ್ತ ಎಸೆಯುತ್ತಿದ್ದ ಕೆಕ್ಕರ ನೋಟ ನೋಡಿ ಬೆವೆತು ಹೋಗಿದ್ದೆವು. ಈಗ ಅಂತೂ ‘ಪೋಂಗೋ ಪೋಂಗೋ’ ಎಂದಾಗ ‘ತಮಿಳರ ದಯೆ’ ಎಂಬುದೂ ಎಷ್ಟು ಭಯಂಕರವಾಗಿರಬಲ್ಲುದೆಂದು ಮನವರಿಕೆಯಾಯ್ತು. ನಮ್ಮ ಇಡೀ ಬಸ್ಸಿನ ಪ್ರಾಣ ಕಾಪಾಡಿಕೊಟ್ಟಿದ್ದಕ್ಕೆ ಕೊಲ್ಲೂರು ಮೂಕಾಂಬಿಕೆಗೆ ಮನಸಾ ವಂದಿಸಿ, ಕನ್ನಡನಾಡು ಸೇರಿಕೊಂಡೆವು.
ಟ್ರಿಪ್ ಮುಗಿಸಿ ಬಂದ ಬಳಿಕ ಕ್ಲಾಸಿನಲ್ಲಿ ವಿದ್ಯಾರ್ಥಿಗಳಿಗೆ ‘ನೋಡ್ರಪ್ಪಾ ನೀವು ಬುದ್ಧಿಯನ್ನು ಬೆಳೆಸಿಕೊಳ್ಳುತ್ತೀರೋ ಬಿಡುತ್ತೀರೋ ನಿಮಗೆ ಬಿಟ್ಟಿದ್ದು. ಆದರೆ ದೇಹವನ್ನಾದರೂ ಚೆನ್ನಾಗಿ ಬೆಳೆಸಿಕೊಳ್ಳಿ ಪರಸ್ಥಳಗಳಿಗೆ ಹೋದಾಗ ಉಪಯೋಗಕ್ಕೆ ಬರುತ್ತದೆ ಎಂದು ತಮಾಷೆ ಮಾಡುತ್ತಿದ್ದೆ. ನಂತರದ ವರ್ಷಗಳಲ್ಲಿ ಮಕ್ಕಳು ಮೇಡಮ್ ಕಾಲೇಜು ಟ್ರಿಪ್ಪೂ ಎಂದ ಕೂಡಲೇ ನನಗೆ ಹುಶಾರಿಲ್ರಪ್ಪ, ನಾನು ಈ ಸಲ ಟೂರಿಗೆ ಬರಲಾರೆ ಪಿ.ಟಿ ಮಾಸ್ಟ್ರನ್ನ ಕೇಳಿ ನೋಡಿ’ ಎಂದು ಹೇಳತೊಡಗಿದೆ.
| ಇನ್ನು ಮುಂದಿನ ವಾರಕ್ಕೆ |






0 Comments