ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭುವನೇಶ್ವರಿ ಹೆಗಡೆ ಅಂಕಣ- ನಾನೂ ಯಾಕೆ ಒಂದು ರಿಕ್ಷಾ ಖರೀದಿಸಬಾರದು?..

17

ಅರ್ಥಶಾಸ್ತ್ರದಲ್ಲಿ ಖಾಸಗಿರಂಗ, ಸರಕಾರಿ ಸ್ವಾಮ್ಯ ಹಾಗೂ ಮಿಶ್ರ ಅರ್ಥ ವ್ಯವಸ್ಥೆಯೆಂದು ಮೂರು ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಹೇಳಬೇಕಾದ ಸಂದರ್ಭಗಳಲ್ಲಿ ನಾನು ಎಲ್ಲವನ್ನೂ ವಿವರಿಸಿ ಉದಾಹರಣೆಗಳನ್ನು ಕೊಡುವಾಗ ನನ್ನ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಕೈ ತೋರಿಸಿದಲ್ಲಿ ನಿಲ್ಲಿಸುವ ಕೇವಲ ಕೆಂಪು ಸರಕಾರಿ ಬಸ್ಸುಗಳು, ದಕ್ಷಿಣ ಕನ್ನಡದಲ್ಲಿ ಇರುವ ವಿಮಾನದ ವೇಗದಲ್ಲಿ ಹಾರುವಂತೆ ತೋರುವ ಕೇವಲ ಖಾಸಗಿ ಬಸ್ಸುಗಳ ಉದಾಹರಣೆ ಕೊಟ್ಟು, ಮಿಶ್ರ ಅರ್ಥವ್ಯವಸ್ಥೆಯ ಉದಾಹರಣೆಯಾಗಿ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆರಡೂ ಓಡಾಡುವ ಜಿಲ್ಲೆಗಳನ್ನು ಉದಾಹರಿಸುತ್ತಿದ್ದೆ. ಸಹಜವಾಗಿಯೇ ಯಾವ ಅರ್ಥ ವ್ಯವಸ್ಥೆ ಬೇಕು ಎಂಬುದರ ಚರ್ಚೆ ಕ್ಲಾಸಿ ನಲ್ಲಿ  ಬಿಸಿಬಿಸಿಯಾಗಿ ನಡೆಯುತ್ತಿತ್ತು. 

ಮೂರೂ ವ್ಯವಸ್ಥೆಗಳ ಮೆರಿಟ್ ಡಿಮೆರಿಟ್ಸ್ ವಿವರಿಸುವಾಗ ಸರ್ಕಾರಿ ಬಸ್ಸುಗಳ ಗಲೀಜು ಸೀಟುಗಳನ್ನು ಸಮಯ ಪರಿಪಾಲನೆ ಮಾಡದ ಅವುಗಳ ಅನಿಶ್ಚಿತ ಪ್ರಯಾಣಗಳನ್ನು ಲಾಭದ ದರ್ದು ಇಲ್ಲದ ಚಾಲಕ ವರ್ಗದ ಸೋಂಬೇರಿತನವನ್ನು ತಮಾಷೆಯಾಗಿ ಹೇಳುತ್ತಿದ್ದೆ. ಖಾಸಗೀ ವ್ಯವಸ್ಥೆಯ ಅನುಕೂಲತೆಗಳು ಅನಾನುಕೂಲತೆಗಳನ್ನು ವಿವರಿಸಲು ಮಕ್ಕಳನ್ನೇ ಕೇಳಿಕೊಳ್ಳುತ್ತಿದ್ದೆ. ಸಹಜವಾಗಿಯೇ ತಮ್ಮ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಖಾಸಗಿ ಬಸ್ಸುಗಳ ಗುಣಗಾನ ಮಾಡುವ ವಿದ್ಯಾರ್ಥಿಗಳು ಇದ್ದಷ್ಟೇ ಅವುಗಳ ಲಾಭ ಬಡುಕತನ ದಿಂದಾಗಿ ಸ್ಪರ್ಧೆ ಏರ್ಪಟ್ಟು ಬಸ್ಸಿನ ಪ್ರಯಾಣಿಕರಿಗಾಗುವ ತೊಂದರೆಗಳನ್ನು ವಿವರಿಸುವ ವಿದ್ಯಾರ್ಥಿಗಳೂ ಇದ್ದರು.

ಎರಡೂ ವ್ಯವಸ್ಥೆಯ ಲಾಭಗಳನ್ನು ಒಳಗಿಟ್ಟುಕೊಂಡು ಎರಡೂ ವ್ಯವಸ್ಥೆಯ ಅನಾನುಕೂಲತೆಗಳನ್ನು ಹೋಗಲಾಡಿಸಲು ಮಿಶ್ರ ಅರ್ಥ ವ್ಯವಸ್ಥೆಯೇ ಸೂಕ್ತ ಎಂಬ ತೀರ್ಮಾನ ಕ್ಲಾಸಿನಲ್ಲಿ ಆಗುತ್ತಿತ್ತು. ಆದರೆ mixed economy is also called ‘confused economy’ ಎಂಬುದನ್ನು ಹೇಳಲು ಮರೆಯದೆ ಅದರ ಉದಾಹರಣೆಗೆ ಭಾರತೀಯ ಮಿಶ್ರ ಅರ್ಥವ್ಯವಸ್ಥೆಯ ಎಡವಟ್ಟುಗಳನ್ನು ವಿವರಿಸುತ್ತಿದ್ದೆ. ಒಟ್ಟಾರೆಯಾಗಿ ನನ್ನ ಅರ್ಥ ಶಾಸ್ತ್ರದ ಪಾಠ ಉದಾಹರಣೆಗಳ ಮೆರವಣಿಗೆಯಲ್ಲಿಯೇ ಮುಗಿಯುತ್ತಿತ್ತು. ವಿದ್ಯಾರ್ಥಿಗಳ ಗಮನವೂ ನನ್ನ ಉದಾಹರಣೆಗಳ ಕಡೆಗೇ ಇರುತ್ತಿತ್ತು. ನಾನು ಉದಯವಾಣಿಯಲ್ಲಿ ಬರೆಯುತ್ತಿದ್ದ ಹಾಸ್ಯ ಲೇಖನಗಳನ್ನು ಓದುವ ನನ್ನ ವಿದ್ಯಾರ್ಥಿಗಳು ಸಿಟಿಬಸ್ ಕುರಿತಾದ ನನ್ನ ಲೇಖನಗಳನ್ನು ಓದಿರುತ್ತಿದ್ದರು.

ಕಾಲೇಜಿಗೆ ಬರುವಾಗ ತಮಗಾದ ವಿಚಿತ್ರ ತಮಾಶೆಯ ಅನುಭವಗಳನ್ನು ತಪ್ಪದೇ ನನಗೆ ಕ್ಲಾಸಿನಲ್ಲಿ ಹೇಳುತ್ತಿದ್ದರು. ಈ ನಡುವೆ ನನ್ನ ಅಪಾರ್ಟ್ಮೆಂಟ್ನಲ್ಲಿದ್ದ ರೋಜಿಬಾಯಿ ಎಂಬವರು ಒಂದು ರಿಕ್ಷಾ ಖರೀದಿಸಿ ಬಾಡಿಗೆಗೆ ಬಿಟ್ಟಿದ್ದರು. ಮಾರ್ಕೆಟ್ಟಿಗೆ, ಮಗಳ ಶಾಲೆಗೆ ಹೀಗೆ ಅವರು ಹೋಗಿ ಬರುವಲ್ಲೆಲ್ಲಾ ತಮ್ಮದೇ ರಿಕ್ಷಾದಲ್ಲಿ ಹೋಗುವುದು, ಸಾಮಾನು ತರುವುದು ಇತ್ಯಾದಿ ಮಾಡಿ ಉಳಿದ ಸಮಯದಲ್ಲಿ ಡ್ರೈವರನು ಬಾಡಿಗೆಗೆ  ಹೋಗಿರುತ್ತಿದ್ದ. ದಿನನಿತ್ಯ ಇಷ್ಟು ಬಾಡಿಗೆ ಎಂದು ಸಂಜೆ ರೋಜಿಬಾಯಿ ಅವರ ಕೈಗೆ ಹಣ ಕೊಟ್ಟು ಕೆಳಗೆ ಪಾರ್ಕಿಂಗಿನಲ್ಲಿ ರಿಕ್ಷಾ ನಿಲ್ಲಿಸಿ ತನ್ನ ಮನೆಗೆ ಬಸ್ಸಿನಲ್ಲಿ ಹೋಗುತ್ತಿದ್ದ. ರೋಜಿಬಾಯಿ ಅವರು  ಸಿಟಿಬಸ್ಸು, ಬಾಡಿಗೆ ರಿಕ್ಷಾ ಯಾವುದರ ಗೊಡವೆಯೂ ಇಲ್ಲದೆ  ಹಾಯಾಗಿ ರಿಕ್ಷಾ ರಾಣಿಯಂತೆ ಓಡಾಡುತ್ತಿರುವುದನ್ನು ನೋಡಿ ನನಗೆ ಚುರುಚುರು ಆಗುತ್ತಿತ್ತು. ನಾನೂ ಯಾಕೆ ಒಂದು ರಿಕ್ಷಾ ಖರೀದಿಸಬಾರದು? ಎನ್ನಿಸತೊಡಗಿತ್ತು. 

ನಿತ್ಯವೂ ನನ್ನನ್ನು ಕಾಲೇಜಿಗೆ ಬಿಟ್ಟು ನಂತರ ಡ್ರೈವರ್ ಬಾಡಿಗೆ ನೋಡಿಕೊಳ್ಳಲಿ ಪುನಃ ಸಂಜೆ ಕಾಲೇಜಿನಿಂದ ಕರೆದುಕೊಂಡು ಬಂದು ಮನೆಗೆ ಬಿಟ್ಟರಾಯಿತು. ಇದು ನನ್ನ ಯೋಜನೆಯ ಕರಡುಪ್ರತಿ. ಕೊಂಕಣಿ ಮಾತನಾಡುವ ರೋಜಿಬಾಯಿ ನನಗೆ ಮಾರ್ಗದರ್ಶಕಿ ಯಾಗುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದರು. (ಆಗಿನ್ನೂ ಯುಜಿಸಿ ಸಂಬಳ ಪ್ರಾರಂಭವಾಗಿರಲಿಲ್ಲವಾದ್ದರಿಂದ ಕಾರಿಡುವ ಯೋಚನೆ ಬರುವಂತಿರಲಿಲ್ಲ.) ಸರಿ ಕ್ಲಾಸಿನಲ್ಲಿ ‘ಔಟ್ ಆಫ್ ಸಿಲೆಬಸ್ ಮಾತನಾಡುವ ಸಮಯ’ದಲ್ಲಿ ಈ ನನ್ನ ರಿಕ್ಷಾ ಯೋಜನೆಯನ್ನು ಮಕ್ಕಳಿಗೆ ಹೇಳಿ ನಿಮ್ಮ ಸುತ್ತಮುತ್ತ ಈ ಬಗೆಯ ಡ್ರೈವರ್ ಕೆಲಸ ಮಾಡಲು ಯಾರಾದರೂ ಇದ್ದರೆ ಹೇಳಿ ಎಂದು ಹುಡುಗರ ತಲೆಯಲ್ಲಿ ಹುಳ ಬಿಟ್ಟೆ. ಪರಿಣಾಮ ಮರುದಿನ ಕ್ಲಾಸು ಶುರುವಾಗುವ ಮೊದಲೇ ನನ್ನ ಚೇಂಬರಿನಲ್ಲಿ ಹುಡುಗರ ಗಜಿಬಿಜಿ.

ನನ್ನ ಚಿಕ್ಕಪ್ಪ ಒಬ್ಬರು ಕೆಲಸವಿಲ್ಲದೆ ಮನೆಯಲ್ಲಿದ್ದಾರೆ ಡ್ರೈವಿಂಗ್ ಬರುತ್ತದೆ ಅವರು ಆದೀತಾ? ಎಂದೊಬ್ಬನು ಹೇಳಿದರೆ ನನ್ನ ಅಣ್ಣ ಇದ್ದಾನೆ   ಅಂತ ಇನ್ನೊಬ್ಬ. ಎಲ್ಲರದ್ದೂ ಅಡ್ರೆಸ್ಸು ಫೋನ್ ನಂಬರು ತೆಗೆದಿಟ್ಟುಕೊಂಡು ಇಷ್ಟಕ್ಕೂ ನಾನಿನ್ನೂ ರಿಕ್ಷಾ ಖರೀದಿಸಿಲ್ಲವಯ್ಯ ಎಲ್ಲ ಮುಗಿದಾಗ  ಸಂಪರ್ಕಿಸುತ್ತೇನೆ ಎಂದು ಹೇಳಿ ಕಳುಹಿಸಿದೆ. ಈ ಸುದ್ದಿ ಕಾಲೇಜಿನಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿ ನನ್ನನ್ನು ಭೇಟಿಯಾಗಲು ಬರುವ ವಿದ್ಯಾ ರ್ಥಿಗಳ ಸಂಖ್ಯೆ ಹೆಚ್ಚಿತು. ಒಂದು ಶನಿವಾರ ಕ್ಲಾಸ್ ಮುಗಿಸಿ ಮನೆಗೆ ಹೊರಟಾಗ ಅಟೆಂಡರ್ ಬಂದು ಪ್ರಿನ್ಸಿಪಾಲ್ ಕರೆಯುತ್ತಿದ್ದಾರೆ ಅಂದ. ಏನಪ್ಪಾ ಗ್ರಹಚಾರ ಬಂತು ಎಂದುಕೊಳ್ಳುತ್ತಾ ಪ್ರಿನ್ಸಿಪಾಲರ ಚೇಂಬರಿಗೆ ಹೋದಾಗ ಅಲ್ಲಿ ನನ್ನ ಇಬ್ಬರು ಕುತ್ತಿಗೆ ಸ್ನೇಹಿತೆಯರು ಕುಳಿತಿದ್ದು ಇವರು ಇಲ್ಲೇನೋ ಮಸಲತ್ತು ನಡೆಸಿದ್ದಾರೆ ಎಂಬುದು ತಿಳಿದು ಹೋಯಿತು.

ಒಬ್ಬಳು ಇಂದಿರಾ ಭೌತಶಾಸ್ತ್ರದ ಪ್ರಾಧ್ಯಾಪಕಿ, ಇನ್ನೊಬ್ಬರು ರತಿ ಗಣಪತಿ ಭೂಗೋಳಶಾಸ್ತ್ರದ ಪ್ರಾಧ್ಯಾಪಕಿ. ಇಬ್ಬರೂ ನನ್ನನ್ನು ದುರುದುರು ನೋಡಿ ಪ್ರಾಂಶುಪಾಲರ ಕಡೆಗೆ ಹೇಳಿ ಸಾರ್ ಎಂಬಂತೆ ಸನ್ನೆ ಮಾಡಿದ್ದು ಕಂಡುಬಂತು. ಪ್ರಿನ್ಸಿಪಾಲರ ಚೇಂಬರಿನೊಳಗೆ ವಾತಾವರಣ ನೋಡಿದರೆ ಕಾಲೇಜಿನ ಪಾಠ ಪಠ್ಯಕ್ಕಾಗಲೀ ಆಡಳಿತಕ್ಕಾಗಲಿ ಸಂಬಂಧಪಟ್ಟ ವಾತಾವರಣ ಅಲ್ಲಿರಲಿಲ್ಲ. ನನ್ನನ್ನು ಕೂಡಲು ಹೇಳಿ ಪ್ರಾಂಶುಪಾಲರು ನಗುತ್ತ  ಸ್ನೇಹದಿಂದ ‘ನೋಡಿ ಹೆಗ್ಡೆಯವರೇ ನೀವೇನೋ ರಿಕ್ಷಾ ಖರೀದಿಸುವ ಯೋಜನೆ ಹಾಕಿದ್ದೀರಂತೆ ಅದಕ್ಕೆ ಸಂಬಂಧಿಸಿದಂತೆ ಡ್ರೈವರ್ ವಿಚಾರದಲ್ಲಿ ವಿದ್ಯಾರ್ಥಿಸಮೂಹದಲ್ಲಿ ಭಾರಿ ಸಂಚಲನವೇ ಉಂಟಾಗಿದೆ ಅನೇಕ ವಿದ್ಯಾರ್ಥಿಗಳು ಕ್ಲಾಸು ಮುಗಿದ ಬಳಿಕ ಡ್ರೈವಿಂಗ್ ಕ್ಲಾಸ್ ಸೇರಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ ಎಂದು ಪ್ರಾರಂಭಿಸಿದರು.

ಇಂದಿರಾ ‘ನೋಡಿ ಸಾರ್ ಇವಳು ಕೊಳ್ಳಿ ತಗೊಂಡು ತಲೆ ತುರಿಸಿಕೊಳ್ಳುವುದರಲ್ಲಿ ಪ್ರಸಿದ್ದಳು. ಇವಳು ಸ್ವಂತ ರಿಕ್ಷಾದಲ್ಲಿ ಕಾಲೇಜಿಗೆ ಬರುವುದು, ಆಮೇಲೆ ಆ ಡ್ರೈವರ್ ಎಲ್ಲೋ ಬಾಡಿಗೆಗೆ ಹೋಗಿ ಕುಟ್ಟಿಕೊಂಡು ಆಕ್ಸಿಡೆಂಟ್ ಮಾಡುವುದು, ಮಾಲೀಕಳಾದ ಇವಳಿಗೆ ಪೋಲಿಸರ ಫೋನ್ ಬರುವುದು, ಪಾರ್ಟ್ ಹೋಗಿದೆ ಅರ್ಜೆಂಟಾಗಿ ಹಾಕಿಸಬೇಕು ಹಣ ಕೊಡಿ ಎಂದು ಆತ ಕ್ಲಾಸ್ ರೂಮಿನ ಬಾಗಿಲಿಗೆ ಬಂದು ಕೇಳುವುದು ಬೇಕಾ ಸಾರ್ ಇದೆಲ್ಲಾ?’ ಎಂದು ನನ್ನ ಮುಖ ನೋಡದೆಯೇ ಪ್ರಾಂಶುಪಾಲ ರತ್ತ ನೋಡಿ ಹೇಳಿ ಕುಳಿತಳು, ನನ್ನ ಪ್ರಾಣಪ್ರಿಯ ಸ್ನೇಹಿತೆ ಭೌತಶಾಸ್ತ್ರದ ಪ್ರಾಧ್ಯಾಪಕಿ.

ಹಿರಿಯಕ್ಕ ನಂತಿರುವ ಕೊಡಗಿನವರಾದ ರತಿ ಗಣಪತಿ ಪೊಲೀಸರ ಪತ್ನಿ ಬೇರೆ. ಅತ್ಯಂತ ನಿಷ್ಠುರ ಧಾಟಿಯಲ್ಲಿ ‘ರಿಕ್ಷಾ ಬೇಡ ಏನೂ ಬೇಡ ಈಗಿನಂತೆಯೇ ಬಾಡಿಗೆ ರಿಕ್ಷಾದಲ್ಲಿ ಓಡಾಡಿ ಆದಾಗ ಕಾರನ್ನೇ ತೆಗೆದುಕೊಳ್ಳಿ. ಮತ್ತೆ ಕೊಳ್ಳಿ ರಿಕ್ಷಾ ತಗೊಂಡು ತಲೆಕೆಡಿಸಿಕೊಳ್ಳಬೇಡಿ’ ಎಂದು ಖಡಕ್ಕಾಗಿ ಹೇಳಿ ಕೂತರು. ನಾನು ಎದ್ದು ನಿಂತು ಇಬ್ಬರೂ ಸ್ನೇಹಿತೆಯರನ್ನು ಕಣ್ಣಲ್ಲಿಯೂ ನೋಡದೆ ಪ್ರಿನ್ಸಿಪಾಲರ ಬಳಿ ‘ಆಯ್ತು ಸಾರ್ ನಾನು ರಿಕ್ಷಾ ತೆಗೆಯುವ ಯೋಜನೆ ಕೈಬಿಟ್ಟೆ. ಪಕ್ಕದ ಮನೆಯ ರೋಜಿಬಾಯಿ ಅವರಲ್ಲಿಯೇ ದಿನವೂ ಕಾಲೇಜಿಗೆ ನನ್ನನ್ನು ಬಿಡುವಂತೆ ಕೇಳಿಕೊಳ್ಳುತ್ತೇನೆ’ ಎಂದು ಹೇಳಿ ಹೊರಟೆ. ಅಲ್ಲಿಯೇ ಕುಳಿತ ಇಬ್ಬರು ಸ್ನೇಹಿತೆಯರ ಬಳಿ ಬಗ್ಗಿ, ಪ್ರಿನ್ಸಿಪಾಲರಿಗೆ ಕೇಳದಂತೆ ‘ಅಂತೂ ನನ್ನ ಮುಗ್ಗಾಲಿಯ ಖರೀದಿ ಯೋಜನೆ ಮುಗ್ಗರಿಸುವಂತೆ ಮಾಡಿದ ನಿಮ್ಮಿಬ್ಬರನ್ನು ಒಂದಲ್ಲ ಒಂದು ದಿನ ನೋಡಿಕೊಳ್ಳುತ್ತೇನೆ (ತುಳುವಿನಲ್ಲಿ ಬಕ್ಕ ತೂಪೆ)’ ಎಂದು ಹೇಳಿ ಹೊರಬಂದೆ.

ಕಾಲೇಜಿನ ಗೇಟಿನ ಬಳಿಯೇ ಆಟೋವೊಂದನ್ನು ಹಿಡಿದು ಕದ್ರಿಗೆ ಎಂದೆ. ದಿನದಂತೆ ರಿಕ್ಷಾ ಎಷ್ಟು ಪೆಟ್ರೋಲ್ ಕುಡಿಯುತ್ತದೆ? ಗ್ಯಾಸ್ ಹಾಕಿಸುವಾಗ ಎಷ್ಟು ಖರ್ಚು ಬಂತು? ಪಾರ್ಟ್ ಹೋದಾಗ ನೀವು ಹಾಕುತ್ತೀರಾ ಮಾಲೀಕರು ಹಾಕುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಉತ್ಸಾಹವೇ ಹೊರಟುಹೋಗಿತ್ತು. ಮೌನವಾಗಿ ಕುಳಿತು ಮನೆ ತಲುಪಿದೆ. ಗೇಟಿನಲ್ಲೇ ಇದ್ದ ರೋಜಿಬಾಯಿ ‘ಕಾಲೆ ಜಲೋ?’ ಎಂದು  ವಿಚಾರಿಸಿಕೊಂಡರು. ಏನೂ ಇಲ್ಲ ಅಂತ ಹೇಳಲೇಬೇಕಲ್ಲ ‘ಕಾಯ್ ನಾ’ ಎಂದಷ್ಟೇ ಹೇಳಿ ಮನೆ ಹೊಕ್ಕು ಬಾಗಿಲು ಹಾಕಿಕೊಂಡೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

26 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading