ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭುವನೇಶ್ವರಿ ಹೆಗಡೆ ಅಂಕಣ- ತಪ್ಪದೆ ರೈಲು ನಿಲ್ದಾಣಕ್ಕೆ ಹಾಜರಾಗುವ ಶಿಷ್ಯರು..

16

ಮತ್ತೊಂದು ದಿನ ಅದೇ ರಷ್ ನ್ನು ಲೆಕ್ಕಿಸದೆ ದಿನದಂತೆ ಬಸ್ಸೇರಿದೆ. ಬಸ್ಸು ಹಾರಲಾರಂಭಿಸಿತ್ತು. ಅಕ್ಷರಶಃ ಜಿಗಿದು ಹಾರಿ ತನ್ನ ಗಮ್ಯದತ್ತ ಗುರಿಯಿಟ್ಟು ಹೊರಟ ಬಾಣದಂತೆ ಧಾವಿಸ ತೊಡಗಿತ್ತು. ನನ್ನ ಕೈಗಾಗಲಿ ಕಾಲಿಗಾಗಲಿ ಇನ್ನೂ ಯಾವುದೇ ಮಿತ್ಯಾಧಾರ ಸಹ ಸಿಕ್ಕಿರಲಿಲ್ಲ ವಾದ್ದರಿಂದ ನಾನಿನ್ನೂ ಜೋತಾಡುವ ಭಂಗಿಯಲ್ಲೇ ಇದ್ದೆ. ಕಂಡಕ್ಟರುದ್ವಯರು ಯಥಾಪ್ರಕಾರ ದುಂಪೋಲೆ ಪಿರಪೋಲೆ ಎಂದು ಬೊಬ್ಬಿರಿಯುತ್ತಿದ್ದರು. ಆಗ ಏನಾಯಿತೋ ತಿಳಿಯದು ‘ಬ್ರೇಕ್’ ಎಂಬ ಶಬ್ದದೊಂದಿಗೆ ಬ್ರೇಕ್ ಬಿದ್ದಿರಬೇಕು.

ಬಸ್ಸಿನಲ್ಲಿದ್ದ ಸಕಲರೂ ಡ್ರೈವರನಿಗೆ ನಮಸ್ಕರಿಸುವ ಭಂಗಿಯಲ್ಲಿ ಮುಗ್ಗರಿಸಿ ಬಿದ್ದರು. ಮೂಗು ಮುಖಗಳನ್ನು ಜಜ್ಜಿಕೊಂಡು ‘ಏಯ್ ದೇವೆರೇ ದಾದ ಅವಸ್ಥೆ ಮಾರ್ರೆ’ ಎಂದು ಗೊಣಗಲು ಶುರು ಹಚ್ಚಿದರು. ಉದ್ಗಾರಗಳಿಗೆ ಚೀತ್ಕಾರಗಳಿಗೆ ಚೂರೂಕೇರ್ ಮಾಡದ ಬಸ್ ಪೈಲಟ್ ಮಾತ್ರ ಅಬಾಧಿತನೂ ಅತಿಚಲಿತನೂ ಆಗಿ ಬಸ್ಸನ್ನು ಹಾರಿಸುತ್ತಲೇ ಇದ್ದ.

ಎಲ್ಲರಂತೆ ನಾನೂ ಮುಗ್ಗರಿಸಿ ಬಿದ್ದು ನಮಸ್ಕರಿಸಿದ್ದೆ ಮಾತ್ರ. ಅಷ್ಟರಲ್ಲಿ ನನ್ನ ಕೈಲಿದ್ದ ಪರ್ಸು ಬಾಗಿಲಿನ ಮೂಲಕ ಟಣ್ಣೆಂದು ಹಾರಿ ಜಿಗಿದು ಅಷ್ಟೇ ವೇಗವಾಗಿ ಮುಂದಕ್ಕೆ ಹೋಗುತ್ತಿದ್ದ ಆಟೋ ಒಂದರ ಒಳಗೆ ಬೀಳಬೇಕೆ? ಹಿಂದೊಮ್ಮೆ ಆದಂತೆ ಈ ಬಾರಿ ನನ್ನ ಪರ್ಸು ಅನಂತದಲ್ಲಿ ಲೀನವಾಗದೇ ಅನಂತ ವೇಗದಲ್ಲಿ ಹೋಗುತ್ತಿರುವ ಆಟೊದೊಳಗೆ  ಬಿದ್ದು  ಮುಂದೆ ಹೋಗುತ್ತಿರುವುದು ಕಣ್ಣಿಗೆ ಕಂಡಿತಾದರೂ ಬಾಯಲ್ಲಿ ಸೀಟಿ ಹಾಕಲು ಬಾರದ ನಾನು ಬಸ್ಸನ್ನು ಹೇಗೆ ನಿಲ್ಲಿಸಲಿ? ನನ್ನ ಪರ್ಸು ನನ್ನ ಪರ್ಸು ಎಂದು ಬೊಬ್ಬೆಯಿಡುತ್ತಿರುವಂ ತೆಯೇ ನನ್ನ ಪರ್ಸು ಆಟೊದೊಂದಿಗೆ ಕಣ್ಮರೆಯಾಗಿತ್ತು.         

ಮಹಿಳೆಯರ ಪರ್ಸು ವ್ಯಾನಿಟಿ ಬ್ಯಾಗುಗಳಲ್ಲಿ ಏನಿರಲು ಸಾಧ್ಯ ಪಿನ್ನು, ಹೇರ್ ಪಿನ್ನು, ಲಿಪ್ ಸ್ಟಿಕ್ ಪೌಡರ್ ಹಾಗೂ ಪುಡಿಗಾಸು ಎಂಬ ಒಂದು ತಾತ್ಸಾರದ ಅಭಿಪ್ರಾಯ ನಮ್ಮಲ್ಲಿದೆ ಆದರೆ ನನ್ನ ಪರ್ಸಿನಲ್ಲಿ ಈ ಲೌಕಿಕ ಚಿಲ್ಲರೆ ವಸ್ತುಗಳಲ್ಲದೆ ಕೆಲವು ಅಲೌಕಿಕ ಅಡ್ರೆಸ್ ಗಳು ಇದ್ದವು. ಆತ್ಮ ಪರಮಾತ್ಮಗಳ ಕುರಿತು ಪ್ರವಚನ ನೀಡಿಯೇ  ಜೀವನ ಪಾವನಗೊಳಿಸುವ ಯೋಗಿಗಳ ಅಡ್ರೆಸ್, ನೋವು ಇರುವ ಭಾಗವನ್ನೇ ದಿಟ್ಟಿಸಿ ನೋಡುವುದರ ಮೂಲಕ ನೋವು ಮಾಯ ಮಾಡುವ ದುರುದುರು(ಳ) ಮಾನವಿಯೊಬ್ಬಳ ಫೋನ್ ನಂಬರ್, ನಾನು ಸಾಲ ಕೊಟ್ಟು ಅದರ ನೆನಪಿಗೆಂದು ಬರೆದಿಟ್ಟುಕೊಂಡ ವರ ಹೆಸರು ಸಾಲದ ಮೊತ್ತದ ವಿವರ, ನಮ್ಮ ದುರದೃಷ್ಟಕ್ಕೆ ಕಾರಣವಾದ ಹೆಸರುಗಳನ್ನು ಬದಲಾಯಿಸುವುದರ ಮೂಲಕ ಅದೃಷ್ಟ ಖುಲಾಯಿಸಲು ಸಹಾಯಮಾಡುವ ನಾಮ ತಜ್ಞರ ವಿಳಾಸ ಏನೆಲ್ಲ ಇತ್ತು ಆ ಪರ್ಸಿನೊಳಗೆ ನನ್ನಿಂದ ಹಣ ಪಡೆದ ಯಾರಿಗೂ ಅದರ ಮೊತ್ತವಾಗಲೀ ಹಣ ಪಡೆದಿದ್ದೇವೆಂಬ ನೆನಪಾಗಲಿ ಇರುವುದಿಲ್ಲವಾದ್ದರಿಂದ ಈ ಪರ್ಸಿನೊಂದಿಗೇ ನಾನು ಕೈಗಡ ಕೊಟ್ಟ ಹಣದ ಮೊತ್ತವೂ ಪಡ್ಚ! ಆ ನನ್ನ ಪರ್ಸಿನಲ್ಲಿ ನನ್ನ ಖಾಸಗಿ ಜೀವನದ ಸಾಮರಸ್ಯದಲ್ಲಿ ಸಂದರ್ಭಕ್ಕೂ ಒದಗುವ ಸಂಜೀವಿನಿಯು ಬಂದಿತ್ತು ಅದೆಂದರೆ ನನ್ನ ಬದುಕಿನಲ್ಲಿ ತೀರ ಖಾಸಗಿ ಜನನವಾದ ನನ್ನ ಪತಿ ನಮ್ಮ ಮದುವೆಗೆ ಮುಂಚೆ ಬರೆದ ಪತ್ರವಾಗಿತ್ತು ‘ಬಸ್ಸುಗಳು ಹಾರುವ ಊರಲ್ಲಿರುವ ಪ್ರಿಯೆ ಎಂದು ಪ್ರಾರಂಭವಾಗುವ ಈ ಪತ್ರದಲ್ಲಿ ಎಷ್ಟೊಂದು ಆಶ್ವಾಸನೆಗಳಿದ್ದವು! ಜೀವನಪರ್ಯಂತ ನೀನು ಉಪ್ಪಿಟ್ಟಿನಂಥ ಇಡ್ಲಿ, ಇಡ್ಲಿಯಂತಹ ಉಪ್ಪಿಟ್ಟು ಏನೇ ಮಾಡಿದರೂ ನನಗದು ನಗಣ್ಯ ಬದುಕು ಉಪ್ಪಿಟ್ಟು ಸಾಂಬಾರು ಗಳಿಂದ ಶೋಭಿಸುವಂತಹುದಲ್ಲ. ಪರಸ್ಪರ ಪ್ರೀತಿ ಗೌರವ ಹೃದಯಗಳ ಸಂಭಾಷಣೆ (ಹೆಚ್ಚೂಕಡಿಮೆ ಎಲ್ಲರ ವಿವಾಹ ಪೂರ್ಣ ಪದಪುಂಜಗಳೂ ಬಳಸಲ್ಪಟ್ಟಿದ್ದವು). ಅನಿವಾರ್ಯವೆನಿಸಿದಾಗೆಲ್ಲ ನಾನು ಈ ಪತ್ರವನ್ನು ನನ್ನ ವರೆದುರು ಹಿಡಿದು ಇದು ನೀವು ಬರೆದ ಪತ್ರ ತಾನೇ ಎನ್ನುತ್ತ ನನ್ನ ಅಡುಗೆ ಉಡುಗೆಗಳ ವಿಷಯದಲ್ಲಿ ನನ್ನನ್ನು ಬಚಾವು ಮಾಡಿ ಕೊಡುವ ಅಸ್ತ್ರವನ್ನಾಗಿಸಿಕೊಂಡಿದ್ದೆ.         

ಇನ್ನು ನಿರಾಯುಧಪಾಣಿಯಾಗಿ ಪಾಣಿ ‘ಗ್ರಹಣ’ ಗೈದ ಪತಿಯನ್ನು ಸಂಭಾಳಿಸುವುದು ಹೇಗೆ? ಎಂಬ ಗಾಢ ಚಿಂತೆಯಲ್ಲಿ ನಿಂತೇ ಇದ್ದೆ. ಅಷ್ಟರಲ್ಲಿ ಯಾರದ್ದೋ ಕೊಡೆಗೆ ಸಿಕ್ಕು ನಾನು ಮೆಟ್ಟಿಲಿನತ್ತ ಎಳೆಯಲ್ಪಟ್ಟಾಗ ನನ್ನದೇ ಸ್ಟಾಪು ಬಂದಾಗಿತ್ತು. ಪರ್ಸುರಹಿತಳಾಗಿ ನಿರ್ಧನಿಕಗಳಾದ ನಾನು ಬಸ್ಸಿಳಿದು ಕಾಲೇಜಿನ ಗೇಟಿನತ್ತ ಕಾಲೆಳೆದುಕೊಂಡು ಹೋಗುತ್ತಿದ್ದಾಗ ಗೇಟಿನ ಬಳಿ ಕೂತ ನನ್ನ ಬಂಧು ಚಪ್ಪಲಿ ರಿಪೇರಿಯಾತ ದಿನವೂ ನನ್ನ ಚಪ್ಪಲಿಯನ್ನು ಮಾತ್ರ ದೃಷ್ಟಿಸಿ ನೋಡುವವ ಆದಿನ ನನ್ನನ್ನು ಇಡೀ ಆಪಾದ ಮಸ್ತಕ ನೋಡಿದಂತೆ ಭಾಸವಾಯಿತು. 

ಪ್ರಿನ್ಸಿಪಾಲರ ಚೇಂಬರಿಗೆ ತೆರಳಿ ಯಾರದ್ದೋ ಬಳಿ ಪೆನ್ನನ್ನು ಕೇಳಿ ಪಡೆದು ಸಹಿ ಮಾಡಿ ಸೋತ ಮುಖಮುದ್ರೆಯಲ್ಲಿ ನನ್ನ ವಿಭಾಗಕ್ಕೆ ತೆರಳಿದೆ. ನನ್ನ ಚೇಂಬರಿನ ಟೇಬಲ್ಲಿನ ಮೇಲೆ ಪವಾಡವೊಂದು ಜರುಗಿ ಹೋಗಿತ್ತು. ನನ್ನ ಪರ್ಸು, ಅದರ ಜೊತೆಗೊಂದು ಚಿಕ್ಕಪತ್ರ. ‘ಮೇಡಂ ನಾನು ನಿಮ್ಮ ಲೇಖನಗಳನ್ನು ಓದುತ್ತಿರುತ್ತೇನೆ. ನಾನು ರಿಕ್ಷಾ ಚಾಲಕ. ಇವತ್ತು ಬೆಳಿಗ್ಗೆ ನನ್ನ ರಿಕ್ಷಾದೊಳಗೆ ಹಾರಿಬಂದು ಮಾಯಕದಿಂದ ಕೂತ ನಿಮ್ಮ ಪರ್ಸು ನನ್ನ ಕಣ್ಣಿಗೆ ಬಿತ್ತು. ನನ್ನ ರಿಕ್ಷಾ ಚಾಲನೆಯ ಸಂಪಾದನೆ ನನಗೂ ನನ್ನ ಕುಟುಂಬಕ್ಕೂ ಸಾಕಾಗುವಷ್ಟಿದೆ. ನನ್ನ ಹೆಂಡತಿ ಮಕ್ಕಳು ಸುಖವಾಗಿದ್ದಾರೆ. ನೀವು ಒಂದು ಬಾರಿ ನಮ್ಮ ರಿಕ್ಷಾ ಚಾಲಕರ ಸಂಘದ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಬಂದು ಮಾಡಿದ ಭಾಷಣ ಇನ್ನೂ ನನ್ನ ಕಿವಿಯಲ್ಲಿದೆ. ರಿಕ್ಷಾ ಟ್ರಿಪ್ ಇಲ್ಲದಾಗ ಪತ್ರಿಕೆ ಓದುವ, ರಾಜಕೀಯವನ್ನು ವಿಮರ್ಶಿಸುವ ಇಲ್ಲಿಯ ರಿಕ್ಷಾ ಚಾಲಕರ ನಿಯತ್ತನ್ನು ನಾನು  ನಂಬುತ್ತೇನೆ. ನನ್ನ ನಂಬಿಕೆಯನ್ನು ಅವರು ಹುಸಿಗೊಳಿಸಿಲ್ಲ ಎಂಬ ಮಾತನ್ನು ಅಂದು ನೀವು ಹೇಳಿದ್ದಿರಿ. ನಾನು ನಿಮ್ಮ ವಿಳಾಸವನ್ನು ಪರ್ಸಿನೊಳಗೆ ಇರುವ ಪತ್ರವೊಂದರ ಮೂಲಕ ಪಡೆದವನಾಗಿ ನಿಮ್ಮೆಲ್ಲ ವಸ್ತುಗಳೊಂದಿಗೆ ಈ ಪರ್ಸನ್ನು ಹಿಂದಿರುಗಿಸುತ್ತಿದ್ದೇನೆ. ಇಂತು ನಿಮ್ಮ ಆಶೀರ್ವಾದಾಕಾಂಕ್ಷಿ, ಸಂತು’ ಎಂದು ಸ್ಪಷ್ಟವಾಗಿ ಬರೆದ ಚಿಕ್ಕ ಪತ್ರ ಅದಾಗಿತ್ತು.

ಅಂದಿನ ತರಗತಿಗೆ ಆ ಪತ್ರವನ್ನು ಒಯ್ದು ಓದಿ ತೋರಿಸಿ ಅರ್ಥಶಾಸ್ತ್ರದ ವಿಷಯ ಬಿಟ್ಟು ಜೀವನದಲ್ಲಿ ನಡೆಯುವ ಇಂಥ ಪವಾಡಗಳ ಕುರಿತಾಗಿ ವಿವರಣೆ ನೀಡಿದೆ. ‘ಜೀವನದಲ್ಲಿ ಇಂಥ ನಿಯತ್ತನ್ನು ಮೈಗೂಡಿಸಿಕೊಂಡವರು ಈ ಜಗತ್ತಿನಲ್ಲಿ ಇರುವುದರಿಂದಲೇ ಈ ಭೂಮಿ ಇನ್ನೂ ವಾಸಯೋಗ್ಯವಾಗಿದೆ’ ಎಂದು ಹೇಳಿದಾಗ ನನ್ನ ಕೆಲ ಶಿಷ್ಯರು ಮುಂದೆ ನಾವೂ ಈ ಪಾಲಿಸಿಯನ್ನು ಪಾಲಿಸಿಕೊಂಡು ಬರುತ್ತಿದ್ದೇವೆ ಮೇಡಂ  ಎಂದರು. ನನ್ನ ಶಿಷ್ಯರಲ್ಲಿ ಅನೇಕರು ಬಾಡಿಗೆ ಟ್ಯಾಕ್ಸಿ, ಆಟೊಗಳನ್ನಿಟ್ಟು ಬದುಕುತ್ತಿದ್ದಾರೆ.

ಇಂದಿಗೂ ನಾನು ಯಶವಂತಪುರ ಮಂಗಳೂರು ಟ್ರೇನಿನಲ್ಲಿ ಪಯಣಿಸಿ ರಾತ್ರಿ ಮೂರೂವರೆಗೆಲ್ಲ ಕಂಕನಾಡಿಯ ರೈಲ್ವೆ ಸ್ಟೇಶನ್ನಲ್ಲಿ ಇಳಿದು ನನ್ನ ಯಾರಾದರೂ ಒಬ್ಬ ಶಿಷ್ಯನಿಗೆ ಫೋನ್ ಮಾಡುತ್ತೇನೆ. ತಪ್ಪದೆ ರೈಲು ನಿಲ್ದಾಣಕ್ಕೆ ಹಾಜರಾಗುವ ಈ ಶಿಷ್ಯರು ನನ್ನನ್ನು ನನ್ನ ಕದ್ರಿಯ ಅಪಾರ್ಟ್ ಮೆಂಟಿಗೆ ತಲುಪಿಸುತ್ತಾರೆ. ಮಂಗಳೂರಿನ ಮಳೆ ಬೆಳೆಗಳ ಕುರಿತು ಕಾಯಿಲೆ ಕಸಾಲೆಗಳ ವಿವರಗಳನ್ನೂ ವರದಿಯ ರೂಪದಲ್ಲಿ ಒಪ್ಪಿಸಿರುತ್ತಾರೆ. ಅಧ್ಯಾಪನ ವೃತ್ತಿಯು ತಂದುಕೊಡುವ ಭಾಗ್ಯಗಳಲ್ಲಿ ಇದು ತುಂಬಾ ಮುಖ್ಯವಾದುದು ಎಂಬುದು ನನ್ನಂತೆಯೇ ಅಧ್ಯಾಪನ ವೃತ್ತಿ ಯನ್ನು ಕೈಗೊಂಡಿರುವವರ ಅಭಿಪ್ರಾಯವೂ ಹೌದು ಎಂಬುದು ನನಗೆ ಗೊತ್ತಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

19 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading