ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭುವನೇಶ್ವರಿ ಹೆಗಡೆ ಅಂಕಣ- ಕರಾವಳಿಯ ಮೆರವಣಿಗೆ… ಎಂಬ ಅದ್ಭುತ ಆರ್ಭಟ

28

ಮಂಗಳೂರಿನ ನನ್ನ ಕಾಲೇಜು ನಗರದ ಮುಖ್ಯರಸ್ತೆಗೆ ಹೊಂದಿಕೊಂಡಿದೆ. ನಗರದಲ್ಲಿ ನಡೆಯುವ ಎಲ್ಲ ಗದ್ದಲ ಗಲಾಟೆ, ಅಪಘಾತ, ಮೆರವಣಿಗೆ ಏನು ನಡೆಯುವುದಿದ್ದರೂ ನಮ್ಮ ಕಾಲೇಜಿನ ಮುಂಭಾಗದ ರಸ್ತೆಯಲ್ಲೇ ನಡೆಯುತ್ತಿರುತ್ತದೆ. 

ಕಾಲೇಜಿನ ಪಕ್ಕದಲ್ಲಿರುವ ನೆಹರೂ ಮೈದಾನದತ್ತ ವಿಜಯೋತ್ಸವದ ಮೆರವಣಿಗೆಗಳು, ಅಲ್ಲೇ ಇರುವ ಡಿ ಸಿ ಆಫೀಸಿನ ಕಡೆಗೆ ಹೋಗುವ ಪ್ರತಿಭಟನಾ ಮೆರವಣಿಗೆಗಳು, ಎಲೆಕ್ಷನ್ನಿನ ಸಮಯವಾದರೆ ನಾಮಿನೇಷನ್ ಸಲ್ಲಿಸಲು ತನ್ನ ಹಿಂಬಾಲಕರ ಜತೆ ಸಾಗುವ ಮುಖಂಡನ ಗಲಾಟೆ ಪೂರ್ಣ ಮೆರವಣಿಗೆ, ಕರಾವಳಿ ಉತ್ಸವ… ಹೀಗೆ ನಿತ್ಯವೂ ಒಂದೊಂದು ಉದ್ದೇಶದ ಮೆರವಣಿಗೆಗಳು ಹೋಗುತ್ತಲೇ ಇರುತ್ತವೆ. 

ನಮ್ಮ ತರಗತಿಗಳು ಗಂಭೀರವಾಗಿ ನಡೆಯುತ್ತಿರುವಾಗ ರಸ್ತೆಯಲ್ಲಿ ಡಢಂ ಡಢಂ ಟರಟರ… ಸಪ್ಪಳ ಕೇಳುತ್ತದೆ. ನಾವು ಅಧ್ಯಾಪಕರು ಅದನ್ನು ಕೇಳಿಸಿಕೊಳ್ಳದಂತೆ ನಟಿಸುತ್ತಾ ಪಾಠ ಮುಂದುವರಿಸುತ್ತೇವೆ. ಆದರೆ ತೀರಾ ನಮ್ಮ ಕ್ಲಾಸಿನ ಕಿಟಕಿಗೇ ಆ ಮೆರಣಿಗೆಯ ದೃಶ್ಯಗಳು ಕಾಣತೊಡಗಿದಾಗ ವಿದ್ಯಾರ್ಥಿಗಳ 66 ಕುತ್ತಿಗೆಗಳು ಅಪ್ರಯತ್ನವಾಗಿ ಹಿಂದುಗಡೆ ತಿರುಗಿಬಿಡುತ್ತವೆ.

ಅಧ್ಯಾಪಕರು ಒಬ್ಬಂಟಿಯಾಗಿ  ಬೋರ್ಡಿನ ಕೆಳಗೆ ನಿಂತು ಮೆರವಣಿಗೆ ಪೂರ್ತಿ ಹಾದು ಹೋಗಿ ಬೀದಿಗಳು ನಿಶ್ಯಬ್ದ ವಾಗುವ ತನಕ ಕಾಯಬೇಕಾಗುತ್ತದೆ. ಅದರಲ್ಲಂತೂ ಯಾವುದೋ ಒಂದು ಕ್ಲಾಸಿನಲ್ಲಿ ಅಂದು ಅಧ್ಯಾಪಕರು ಇರದಿದ್ದರೆ ಆ ಕ್ಲಾಸಿನ ಹುಡುಗರು ಕಾರಿಡಾರಿನಲ್ಲಿ ದಡಬಡ ದಡಬಡ ಎಂದು ಗೇಟಿನ ಕಡೆ ಓಡುತ್ತಾರೆ.  ‘ಬಲೇಯಾ ಸುರೇಶ ಪ್ರೊಸೆಷನ್ ಬತ್ತುಂಡು” ಎಂದು ಜೋರಾಗಿ ಗೆಳೆಯನನ್ನು ಕೂಗಿ ಕರೆಯುವುದು ಬೇರೆ! ಒಳಗೆ ಕೂತ ವಿದ್ಯಾರ್ಥಿಗಳಿಗೆ ಎದುರಿರುವ ಪ್ರಾಧ್ಯಾಪಕರೊಂದು ಪೀಡೆಯಾಗಿ  ತೊಡಕಾಗಿ ಕಾಣುತ್ತಾರೆ. 

“ಮೇಡಮ್ಎರಡೇ ನಿಮಿಷ ನೋಡಿ ಬಂದು ಬಿಡುತ್ತೇವೆ” ಎಂದು ಓಡುವ ಧೈರ್ಯವಂತರೂ ಇಲ್ಲದಿಲ್ಲ. ಯಾರೂ ಸಹ ಮೆರವಣಿಗೆ ನೋಡಲು ಹೋಗುವಂತಿಲ್ಲ ಎಂದು ಹೆದರಿಸಿ ಅಲ್ಲೇ ಕೂಡಿಸಿದರೊ ಕುತ್ತಿಗೆಗಳು ಪೂರ್ತಿಯಾಗಿ ಹಿಂಭಾಗಕ್ಕೆ ತಿರುಗಿದ ಸ್ಥಿತಿಗೆ ಮರಳುತ್ತವೆ. ಆದ್ದರಿಂದ ನಾನು ನನ್ನ ತರಗತಿಗಳಲ್ಲಿ ಆ ಬಗೆಯ ಮೆರವಣಿಗೆ ಬಂದರೆ “ಸರಿ ಐದು ನಿಮಿಷ ಕೊಡುತ್ತೇನೆ ಎಲ್ಲರೂ ಗೇಟಿನ ಬಳಿ ಹೋಗಿ ನೋಡಿ ವಾಪಸ್ ಬರಬೇಕು” ಎಂದು ಒಂದು ಉದಾರವಾದ ಪ್ರಕಟಣೆ ಹೊರಡಿಸಿದೆ. ಇಡೀ ಕ್ಲಾಸು ದಬದಬ ಓಡಿತ್ತು ಮತ್ತು ಪೂರ್ತಿ ಬೆಲ್ಲಾಗುವ ತನಕ ವಾಪಸ್ ಬರುವುದನ್ನು ಮರೆತು ಬಿಟ್ಟಿತ್ತು. ಆ ದೃಶ್ಯದ  ಸಾರ ಸರ್ವಸ್ವವನ್ನು ಹೀರಿ ಮುಗಿಸಿ ಅಲ್ಲಿ ಇನ್ನೇನೂ ಉಳಿದಿಲ್ಲ ಎಂದಾಗುವ  ತನಕ ಈ ನೋಟಕರು ವಾಪಸ್ಸಾದರೆ ಕೇಳಿ. 

ಕರಾವಳಿಯ ಸಾಂಸ್ಕೃತಿಕ ಮೆರವಣಿಗೆ ಎಂದರೆ ಅದೊಂದು ರುದ್ರ ರಮಣೀಯ ನೋಡಲೇ ಬೇಕಾದ ದೃಶ್ಯಾವಳಿಗಳ ಅದ್ಭುತ ದೃಶ್ಯ . ಕಿಲೋಮೀಟರ್ ಗಟ್ಟಲೆ ಉದ್ದವಿರುವ ಕಲಾ ದಿಬ್ಬಣ. ವಿವಿಧ ಬಗೆಯ ಡೋಲು ಕಹಳೆ ತುತ್ತೂರಿ  ಕೀಲು ಕುದುರೆ, ತಟ್ಟಿ ರಾಯರು ವಿದೂಷಕರು ,ಯಕ್ಷಗಾನದ ದಿರಿಸು ಹಾಕಿಕೊಂಡ ಎತ್ತರೆತ್ತರ ಮೂರ್ತಿಗಳು ಪಕ್ಕದಲ್ಲಿ ನಿಂತವರ ಕೈಕುಲುಕುತ್ತಾ ನಮಸ್ಕರಿಸುತ್ತಾ ಮನರಂಜನೆ ನೀಡುತ್ತಾ ಹೋಗುವ ವಿವಿಧ ನಮೂನೆಯ ಸ್ತ್ರೀ ಪುರುಷ ವೇಷಧಾರಿಗಳು, ಸಿನಿಮಾ ಹಾಡುಗಳ ನ್ನಿಟ್ಟು ಕೋಲಾಹಲದ ಸಂಗೀತ ಸೃಷ್ಟಿಸುವ ವಾದ್ಯಗೋಷ್ಠಿಗಳು ಅದಕ್ಕೆ ತಕ್ಕಂತೆ ನರ್ತಿಸುವ ಯುವ ಸಮೂಹ, ಸ್ತ್ರೀ ವೇಷಧಾರಿಗಳ ನಗೆಯುಕ್ಕಿಸುವ ಕುಣಿತಗಳು ಹಾವ ಭಾವಗಳು ವಿನೋದದ ವಾತಾವರಣವೊಂದನ್ನು ಸೃಷ್ಟಿಸಿರುತ್ತವೆ.

ಮಾರ್ನಮಿಯಲ್ಲಿ ಮಾತ್ರ ಕಾಣುವ ಪಿಲಿ ಕುಣಿತ ದ ಹುಲಿಗಳಿಗೂ ಈ ಮೆರವಣಿಗೆಯಲ್ಲಿ ಪ್ರತ್ಯೇಕ ಲಾರಿ ಗಳಿರುತ್ತವೆ… ಕಿಲೋ ಮೀಟರ್ಗಟ್ಟಲೆ ಉದ್ದದ ವರ್ಣ ರಂಜಿತ ದ್ರಷ್ಯಗಳು ನೋಡುತ್ತಾ ನಿಂತರೆ ಗಂಟೆಗಳೇನು ದಿನಗಳುರುಳಿದರೂ ಗೊತ್ತಾಗುವುದಿಲ್ಲ. ಅಂಥಾದ್ದರಲ್ಲಿ ಐದು ನಿಮಿಷ ಮುಗಿಸಿ ಬನ್ನಿ ಎಂದು ಹೇಳುವ ಹೃದಯ ಹೀನ ಅಧ್ಯಾಪಕಿ ನಾನಾಗಲೇ ಬೇಕಿತ್ತು. ಒಂದೆರಡು ಬಾರಿ ನಾನು ಕ್ಲಾಸ್ ಇಲ್ಲದ ಪ್ರಯುಕ್ತ ಆ ಮಕ್ಕಳೊಟ್ಟಿಗೆ ಹೋಗಿ ಮುಂದಿನ ಸಾಲಿನಲ್ಲೆ ನಿಂತು ಕರಾವಳಿಯ ಕಲಾ ದಿಬ್ಬಣದ ಆರ್ಭಟವನ್ನು ಕಣ್ತುಂಬಿಸಿಕೊಂಡಿದ್ದುೂ ಇದೆ.

ಆಗ ನನ್ನೊಟ್ಟಿಗೆ ನಿಲ್ಲುವ ನನ್ನ ವಿದ್ಯಾರ್ಥಿಗಳಲ್ಲಿ ಒಂದು ಬಗೆಯ ಸಮಾನ ಸಂಭ್ರಮದ ಪುಳಕ. ತಮ್ಮ ಅಧ್ಯಾಪಕಿಯೆ ಸಾಥ್ ಕೊಡುತ್ತಿದ್ದಾರೆಂದು ಅನುಮೋದನೆಯ ಗತ್ತು ಬೇರೆ. ಮೆರವಣಿಗೆಯೆಲ್ಲ ಮುಗಿದು ಅದರ ಹಿಂದಿರುವ ಆ ಸಂಭ್ರಮದ ಕಾರಣಕರ್ತನಾದ ಸಮಾಜ ಸೇವಕನೊ ರಾಜಕಿಯ ಮುಖಂಡನೊ ಮೂಡಿ ಬಂದಾಗ ನಾನು ನೋಟಕರ ಸಾಲಿನಿಂದ ಮೆಲ್ಲನೆ ನುಸುಳಿಕೊಂಡು ಗೇಟಿನ ಮೂಲಕ ನನ್ನ ಚೇಂಬರನ್ನು ಪ್ರವೇಶಿಸಿ ಕೊಳ್ಳುತ್ತಿದ್ದೆ. ಇದೊಂದು ಬಗೆಯ ಕುತೂಹಲದ ಕಾಯಿಲೆಯಾದ್ದರಿಂದ ಅದನ್ನು ಖಂಡಿಸುವಂತೆಯೂ ಇಲ್ಲ ಪಾಲಿಸುವಂತೆಯೂ ಇಲ್ಲ.

ಮಲೆನಾಡಿನ ಮನೆಯಂಗಳದ  ಮದುವೆಗಳಲ್ಲಿ ಊರವರ ಸಮಕ್ಷಮ ಮದುವೆ ಮುಗಿಸಿದ ಬಳಿಕ ಮದು ಮಕ್ಕಳನ್ನು  ಮನೆ ದೇವರ ದರ್ಶನಕ್ಕೆಂದು ಪುರೋಹಿತರು ಒಳಗೆ ಕರೆದುಕೊಂಡು ಹೋಗುತ್ತಾರೆ. ಈ ಹಣಕು ವೀರರ ದಂಡು (ಇದರಲ್ಲಿ ಮಹಿಳೆಯರ ಸಂಖ್ಯೆಯೇ ಜಾಸ್ತಿ) ಅದೆಲ್ಲಿಂದ  ಎದ್ದು ಬಿಡುತ್ತಾರೊ ಚಿಕ್ಕದಾದ ದೇವರ ಕೋಣೆ ಇದ್ದರೆ ಅಲ್ಲಿ ಸಾಸಿವೆ  ಹಾಕಲಾಗದಷ್ಟು ಆಕ್ರಮಿಸಿ ನಿಂತು ಬಿಡುತ್ತಾರೆ.ಅದರಲ್ಲಿಯೇ ಪುರೋಹಿತರು, ವಿಡಿಯೋ ದಾತ ಹೆಣ್ಣು ಗಂಡಿನ ತಂದೆ ತಾಯಿಗಳು ಎಷ್ಟೊಂದು ಜನ ನುಸುಳ ಬೇಕು!  ಹಣಕುವರಿಯರು  ಮಾತ್ರ ನೋಡುತ್ತಲೇ ನಿಂತುಬಿಡುತ್ತಾರೆ. ಅವರನ್ನು ಅಲ್ಲಿಂದ ಹೊರಡಿಸಲು ಪುನಃ ಮದುಮಕ್ಕಳ ಲೊಕೇಷನ್ ಬದಲಾಗಬೇಕು.

ಇಂಗ್ಲಿಷಿನಲ್ಲಿ ಈ ಬಗೆಯ ಕೇವಲ ಕುತೂಹಲಕ್ಕಾಗಿ ನಿಂತು ನೋಡುವುದನ್ನು ‘ರಬ್ಬರಿಂಗ್’ ಎನ್ನುತ್ತಾರೆ. ಹಾಗಾಗಿ ಈ ಬಗೆಯ ಹಣಕು ವೀರರನ್ನು ‘ರಬ್ಬರಿಗರು’ ಎಂದು ಹೇಳಬಹುದು. ಓ ಹೆನ್ರಿಯ ಸಣ್ಣ ಕಥೆಯೊಂದು ಈ ರಬ್ಬರ್ ವಿನೋದಾವಳಿಗಳನ್ನು ಅದ್ಭುತವಾಗಿ ವಿವರಿಸಿದೆ. ನ್ನೂಯಾರ್ಕ್ ನಗರದ ಎಲ್ಲ ಸಾರ್ವಜನಿಕ ಸ್ಥಳದಲ್ಲಿ ಏನೇ ನಡೆಯಲಿ ಅಲ್ಲೊಬ್ಬ ಯುವಕ ಈ ನೋಟಕರ ನಡುವೆ ನುಸುಳಿ ಮುಂದಿನ ಸಾಲಿನಲ್ಲಿ ಹೋಗಿ ನಿಂತು ಬಿಡುತ್ತಾನೆ.

ಹಾಗೆ ನುಸುಳುವಾಗ ಅವನ ಕೂದಲು ಕೆದರಿ ಶೂಗಳು ಹರಿದು ಆಗಿರುತ್ತದೆ. ಅವನೆದುರು ಸಾಲಿನಲ್ಲಿಇವನಂತೆಯೆ ನುಗ್ಗಿ ಅಷ್ಟೇ ಶೀಘ್ರವಾಗಿ ಸ್ಥಾನ ಗಿಟ್ಟಿಸಿಕೊಂಡು ನೋಡುತ್ತಾ ನಿಲ್ಲುವ ಯುವತಿಯೊಬ್ಬಳು ದಿನವೂ ಅವನಿಗೆ ಕಾಣುತ್ತಾಳೆ. ಪರವಾ ಇಲ್ಲ ಇವಳು ನನಗಿಂತ ಮೊದಲೇ ನುಗ್ಗಿ ಬಂದಿದ್ದಾಳೆ ಎಂದು ಅವನು ಅವಳತ್ತ ನೋಡುವುದು, ಈತ ಕೊನೆಗೂ ನುಗ್ಗಿ ಬಂದ ಬಚಾವ್ ಎಂಬಂತೆ ಪ್ರಶಂಸಾಪೂರ್ವಕವಾಗಿ ಅವಳು ಆ ಹುಡುಗನತ್ತ ನೋಟ ಹಾಯಿಸುವುದು ನಡೆದಿರುತ್ತದೆ. ಕ್ರಮೇಣ ಅವರಿಬ್ಬರಲ್ಲೂ ‘ಸಮಾನಾಸಕ್ತಿಯ ಪ್ರೇಮ’ ಉದಯವಾಗಿ ಮದುವೆಯಾಗುವುದೆಂದು ತೀರ್ಮಾನಿಸುತ್ತಾರೆ.

ಯಾವಾಗಲೂ ಮದುವೆಗಳು ನಡೆಯುವ ಚರ್ಚಿನಲ್ಲಿ ಇವರಿಗೆ ಹೋಗಿ ನುಗ್ಗಿ ನಿಂತು ನೋಡುವ ಅಭ್ಯಾಸವಾಗಿರುತ್ತದೆ. ತಮ್ಮದೇ ಸ್ವಂತ ಮದುವೆಯ ದಿನವೂ ಅಭ್ಯಾಸ ಬಲದಿಂದ ಜನರ ನಡುವೆ ಹೋಗಿ ನಿಂತು ಬಿಡುತ್ತಾರೆ. ಎಷ್ಟು ಹೊತ್ತಾದರೂ ಮದುಮಕ್ಕಳ ದರ್ಶನವಾಗದಿದ್ದಾಗ ಸಂಬಂಧಪಟ್ಟವರು ಜನರ ನಡುವೆ ಹುಡುಕಿ ಇವರಿಬ್ಬರನ್ನು ಎಳೆದು ತಂದಾಗ ಎಂದಿನಂತೆ ನುಗ್ಗಿ ನುಚ್ಚಾದ ಅವರಿಬ್ಬರ ಬಟ್ಟೆಗಳು ಹರಿದು, ಕೂದಲು ಕೆದರಿ ಸಾಮಾನ್ಯ ಹಣಕುವೀರರೇ ಆಗಿಬಿಟ್ಟಿರುತ್ತಾರೆ. ಅಪರಾಧವೇನಲ್ಲದ ಈ ತಳ್ಳು ಆಸಕ್ತಿಯನ್ನು ಏನೆಂದು ಕರೆಯೋಣ?

ಲಾಕ್ ಡೌನ್ ಸಂದರ್ಭದಲ್ಲಿ ಹಣುಕಲು ದೃಶ್ಯಗಳೇ ಇಲ್ಲದೆ ಈ ಹಣಕು ಜನಾಂಗಕ್ಕೆ ಕೆಲಸವೇ ಇರಲಿಲ್ಲ ಪಾಪ. ಈಗ ಮತ್ತೆ ರಸ್ತೆಗಳಲ್ಲಿ ವಾಹನಗಳು ಕಾಣತೊಡಗಿವೆ. ಹಣಕು ವೀರರಿಗೆ ಜೀವನೋತ್ಸಾಹ ಮರಳಿದೆ. ಆದರೆ ಮೆರವಣಿಗೆಗಳ ಶಬ್ದ ಆರ್ಭಟದ ಸೌಂದರ್ಯ ನೋಡಿ ರೋಮಾಂಚಿತರಾಗಲು ಇನ್ನೆಷ್ಟು ದಿನ ಕಾಯಬೇಕೋ. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

1 February, 2022

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading