ಭಾಷೆಯ ಬಲವಂತ ಹೇರಿಕೆ ಸಲ್ಲದು

ಅಮು ಭಾವಜೀವಿ, ಮುಸ್ಟೂರು

 

ಭಾಷೆ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಇರುವ ಒಂದು ಸಾಧನ. ಭಾವನೆಗಳು ಮನಸ್ಸಿನ ಅಭಿವ್ಯಕ್ತಿ, ಮನಸ್ಸು ತನ್ನ ಹುಟ್ಟಿನಿಂದ ಬಂದ ಭಾಷೆಯಿಂದ ಮಾತ್ರ ಭಾವನೆಗಳನ್ನು ಬಹುಬೇಗ ಅರ್ಥ ಮಾಡಿಕೊಳ್ಳುತ್ತದೆ ಮತ್ತು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ಆದ್ದರಿಂದ ಮಗುವಿನ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕೊಡುವುದರಿಂದ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಅನೇಕ ಸಂಶೋಧನೆಗಳು ದೃಢಪಡಿಸಿವೆ.

ಪ್ರಾಣಿಗಳು ಅವುಗಳ ಆಂಗಿಕ ಚಲನೆಯಿಂದ ಭಾವನೆಗಳನ್ನು ಹಂಚಿಕೊಳ್ಳುತ್ತವೆ ಮತ್ತು ಅರ್ಥಮಾಡಿಕೊಂಡು ಪ್ರತಿಕ್ರಿಯಿಸುತ್ತವೆ. ಆದರೆ ಮನುಷ್ಯ ಮಾತ್ರ ತನ್ನ ಆಂಗಿಕ ಚಲನೆಯ ಹೊರತಾಗಿ ತನ್ನದೇ ಪ್ರದೇಶದ ತನ್ನದೇ ಸಂಸ್ಕೃತಿಯ ಪ್ರಭಾವದಿಂದ ಹುಟ್ಟಿದ ಭಾಷೆಯಿಂದ ಅತ್ಯಂತ ಸುಲಭವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ.

ಆಧುನಿಕ ಕಾಲದ ಮನುಷ್ಯ ತನ್ನ ಮಾತೃಭಾಷೆಯ ಜೊತೆಜೊತೆಗೆ ಹಲವಾರು ಭಾಷೆಗಳನ್ನು ಕಲಿಯುವ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಅವನ ಈ ಪ್ರಕ್ರಿಯೆ ಎಂದಿಗೂ ಬಲವಂತದ ಹೇರಿಕೆಯಿಂದ ಸಾಧ್ಯವಾದುದಲ್ಲ.

ಅದು ಗಾಳಿ ಬೀಸಿದಷ್ಟೇ ಸುಗಮ, ನೀರು ಹರಿದ ಸ್ಟೇ ಸುಲಲಿತವಾಗಿ ಬರಬೇಕೆ ವಿನಹ ಬಿರುಗಾಳಿಯಾಗಿ, ಪ್ರವಾಹವಾಗಿ ಆಕ್ರಮಣ ಮಾಡಬಾರದು. ಒತ್ತಾಯದ ಮೂಲಕ ಯಾವುದೇ ಸೃಜನಾತ್ಮಕ  ಅಭಿವ್ಯಕ್ತಿ ಸಾಧ್ಯವಾಗದು.

ಅದರಲ್ಲೂ ಕೇವಲ ರಾಜಕೀಯ ಲಾಭಕ್ಕಾಗಿ ಸರ್ಕಾರಗಳು ಹೇರಿಕೆಯ ತೀರ್ಮಾನ ಕೈಗೊಳ್ಳುವುದು ಪ್ರಾದೇಶಿಕ ಭಾಷೆಗಳನ್ನು ಶವ ಪೆಟ್ಟಿಗೆಯಲ್ಲಿಟ್ಟು ಮೊಳೆ ಹೊಡೆದಂತೆ ಆಗುತ್ತದೆ. ಅದರ ಜೊತೆ ಜೊತೆಗೆ ಒಂದು ಪ್ರದೇಶದ ಸಂಸ್ಕೃತಿ, ಸಂಪ್ರದಾಯ, ಆಚರಣೆ, ವೈಯಕ್ತಿಕ ಭಿನ್ನತೆ, ಸೃಜನಾತ್ಮಕತೆ, ಎಲ್ಲವೂ ನಾಶವಾಗುವ ಸಾಧ್ಯತೆ ಇದೆ. ಭಾಷೆ ಎಂಬುದು ಸರ್ವ ಒಪ್ಪಿತವಾದ ಅನುಸರಣೆ, ಅನುಕರಣೆ, ಅನಿವಾರ್ಯಗಳಿಂದ ಬರುತ್ತದೆಯೇ ಹೊರತು ಬಲವಂತದ ಹೇರಿಕೆಯಿಂದ ಅಲ್ಲ.

ಅದು ಕಾನೂನಿನ ಮೂಲಕ, ಅಧಿಕಾರದ ಬಲಪ್ರಯೋಗದ ಮೂಲಕ ಬೆಳೆಯಲಾರದು. ಅದು ವ್ಯಕ್ತಿಯ ಅಂತರ್ಗತ ಹೃದಯದ ಭಾವನೆಗಳನ್ನು ಅಭಿವ್ಯಕ್ತಿಸುವ ಸರಳ ಮಾಧ್ಯಮವಾಗಿರಬೇಕು. ಗೊತ್ತಿಲ್ಲ ಅದು ಯಾವುದು ಭಾಷೆಯಿಂದ ತಾಕಲಾಟಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುವುದು ಅಸ್ವಾಭಾವಿಕವಾಗಿರುತ್ತದೆ. ಅಲ್ಲದೆ ವ್ಯಕ್ತಿಯ ಭಾವನೆಗಳು ಅವನ ಅಕ್ಕ-ಪಕ್ಕದ ವ್ಯಕ್ತಿಗಳೊಂದಿಗೆ ವಿನಿಮಯವಾಗಬೇಕು.

ಅದಕ್ಕೆ ಅಷ್ಟೇ ಆಪ್ತವಾದ ಸ್ಪಂದನೆ ಸಿಗಬೇಕು. ಆಗ ಭಾಷೆಯ ಬಳಕೆ ಉಪಯುಕ್ತತೆಯನ್ನು ಪಡೆಯುತ್ತದೆ. ಅರಿಯದ ಬಾಷೆಯಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು.

ಕೇವಲ ಏಕತೆಯ, ಸಮಗ್ರತೆಯ ದೃಷ್ಟಿಕೋನದಲ್ಲಿ ನೋಡದೆ ವಿಭಿನ್ನವಾದ, ವೈವಿಧ್ಯಮಯವಾದ ತುಂಬಾ ಸಂಪತ್ಭರಿತವಾದ ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸಬೇಕಾದ ಕಾಲಘಟ್ಟದಲ್ಲಿ ಒಂದು ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡುವುದರಿಂದ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ, ಸನಾತನ ಪರಂಪರೆಗಳನ್ನು ನಾಶಗೈಯುವ ಮೂಲಕ ದೇಶದ ಭವಿಷ್ಯವನ್ನೇ ದಾರಿತಪ್ಪಿಸುವ ಆತಂಕ ಎದುರಾಗಿದೆ.

ಭಾಷೆಯ ಬಳಕೆ ಬಳಸುವ ವಿವೇಚನೆಗೆ ಬಿಡಬೇಕು. ಅನಿವಾರ್ಯವಾದಾಗ ಅವನು ಕಲಿತೆ ಕಲಿಯುತ್ತಾನೆ. ಅದನ್ನು ಬಿಟ್ಟು ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆ ಆದರೆ ಅದರಿಂದ ಆಗುವ ದುಷ್ಪರಿಣಾಮಗಳು ಒಂದು ಸಮುದಾಯದ ಅವನತಿಗೆ ಮುನ್ನುಡಿ ಬರೆದಂತೆ ಆಗುತ್ತದೆ. ಅಲ್ಲದೆ ಮಾನವನ ಭಾವನೆಗಳಿಗೆ ಧಕ್ಕೆ ಉಂಟಾದರೆ ಹೋರಾಟ, ಅಂತಹ ಘಟನೆಗಳಿಗೆ ಹಾದಿ ಸುಗಮ ಮಾಡಿಕೊಡುತ್ತದೆ.

ಇದರಿಂದ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿ ಪ್ರತ್ಯೇಕತೆಯ ಕೂಗು ಹೆಚ್ಚಾಗಿ ಒಕ್ಕೂಟ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಭಾರತ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟಿದೆ. ಭಾಷಾವಾರು ಪ್ರಾಂತ್ಯಗಳನ್ನು ಒಂದುಗೂಡಿಸಿ ಅದಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ್ದರಿಂದಲೇ ಹೊರತು ಬಲವಂತದ ಹೇರಿಕೆಯಿಂದ ಅಲ್ಲ. ಆಂಗ್ಲ ಮಾಧ್ಯಮದ ಪ್ರಭಾವದಿಂದ ಅವನತಿಯ ಹಾದಿ ಹಿಡಿದಿರುವ ಅದೆಷ್ಟೋ ಪ್ರಾದೇಶಿಕ ಭಾಷೆಗಳು ಈ ನಿರ್ಧಾರದಿಂದ ಸರ್ವನಾಶವಾಗಿ ಹೋಗುತ್ತವೆ.

ಸರ್ಕಾರಗಳು ಅಳಿವಿನಂಚಿನಲ್ಲಿರುವ ಭಾಷೆ, ಅದರ ಸಂಪತ್ತು, ಸಂಸ್ಕೃತಿಯನ್ನು ಪುನಶ್ಚೇತನಗೊಳಿಸಿ ಜೀವಂತವಾಗಿಡಲು ಶ್ರಮಿಸಬೇಕೇ ಹೊರತು ಅವುಗಳ ವಿನಾಶಕ್ಕೆ ಕೈಹಾಕಿದರೆ ಮುಂದೆ ಮಾನವನನ್ನು ತಾವೇ ತೋಡಿಕೊಂಡು ಅದರೊಳಗೆ ಬಿದ್ದು ಅಸುನೀಗುವ ಸಾಧ್ಯತೆಯೇ ಹೆಚ್ಚು.

ಈ ಗಂಭೀರತೆಯನ್ನು ಅರ್ಥಮಾಡಿಕೊಂಡು ಪ್ರಾದೇಶಿಕ ಭಾಷೆಗಳ ಏಳಿಗೆಗೆ ಆಸರೆಯಾಗಿ ನಿಂತು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸದಲ್ಲಿ ನವನವೀನ ಸಂಶೋಧನೆಗಳನ್ನು ಕೈಗೊಂಡು ಭಾಷಾ ಪ್ರಕಾರಗಳು ಅಳಿಯದಂತೆ ರಕ್ಷಿಸುವ ಹೊಣೆಯನ್ನು ಸರ್ಕಾರಗಳು ಹೊರಬೇಕಾಗುತ್ತದೆ.

ಒಟ್ಟಿನಲ್ಲಿ ಯಾವುದೋ ಒಂದು ಭಾಷೆಯಿಂದ ಇಡೀ ಸಮುದಾಯವನ್ನು ಒಗ್ಗೂಡಿಸುವುದು ಅಸಾಧ್ಯ. ಅದರಲ್ಲೂ ಪ್ರಾದೇಶಿಕ ವಿಭಿನ್ನತೆ, ವೈವಿಧ್ಯತೆ ಇರುವ ನಮ್ಮ ಭಾರತದಂತಹ ದೇಶಗಳಲ್ಲಿ ಭಾಷಾಭಿಮಾನದ ಆಳ ಹರಿವುಗಳನ್ನು ಅರ್ಥಮಾಡಿಕೊಂಡು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ನಮ್ಮ ಸಂವಿಧಾನದ ಆಶಯಗಳನ್ನು ಗೌರವಿಸುವ ಮೂಲಕ ಆಯಾಯ ಭಾಷಾ ಜನರ ಭಾವನೆಗಳನ್ನು ಕೆಣಕುವ ಬದಲು ಆ ಭಾಷೆಗಳನ್ನು ಬಳಸುವವರಿಗೆ ಸರ್ಕಾರಗಳು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಬೇಕು.

ಕಲಿತ ಭಾಷೆ ಅನ್ನದ ಭಾಷೆಯಾದಾಗ ಅದರ ಆಯಸ್ಸು ಹೆಚ್ಚುತ್ತದೆ. ಹಾಗಾಗಿ ಒಂದು ದೇಶ ಒಂದು ಭಾಷೆ ಎಂಬ ಪರಿಕಲ್ಪನೆಯನ್ನು ಕೈಬಿಟ್ಟು ಹಲವು ಭಾಷೆಗಳ ಸೊಗಡನ್ನು ಅರ್ಥಮಾಡಿಕೊಂಡು ಅವುಗಳ ಮುಖಾಂತರ ದೇಶದ ಆಡಳಿತ ವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು, ಸಂಶೋಧಕರು, ಭಾಷಾ ತಜ್ಞರು, ರಾಜಕಾರಣಿಗಳು ಎಲ್ಲರೂ ಕೂತು ಚರ್ಚಿಸಿ ಆ ನಂತರ ತೀರ್ಮಾನ ಕೈಗೊಳ್ಳಬೇಕು.

ಅದನ್ನು ಬಿಟ್ಟು ಏಕವ್ಯಕ್ತಿ ತೀರ್ಮಾನದಿಂದ ಸಮಗ್ರತೆಯನ್ನು ತರಲು ಸಾಧ್ಯವಿಲ್ಲ. ಬಲವಂತದ ಹೇರಿಕೆ ಎಂಬ ವೈಜ್ಞಾನಿಕ ಪದ್ಧತಿಯನ್ನು ಕೈಬಿಟ್ಟು ಆಯಾಯ ಭಾಷೆಗಳ ಬೆಳವಣಿಗೆಯ ಮುಖಾಂತರ ಸಮಗ್ರತೆಯನ್ನು ಸಾಧಿಸುವ ಅನಿವಾರ್ಯತೆ ಇಂದು ಅಧಿಕವಾಗಿದೆ.

‍ಲೇಖಕರು avadhi

September 20, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: