ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾಷೆಗಳೊಂದಿಗೆ ಪರದಾಟ

‘ಹಿಂದೊಮ್ಮೆ ಸೈಕಲ್ ಜತೆಗೆ ಪ್ರಪಂಚ ಸುತ್ತಿದೆ. ಹಕ್ಕಿಯಂತೆ ಹಾರುವ ಆಸೆಯಲ್ಲಿ ಯಡವಟ್ಟಾಗಿ ಬೆನ್ನೆಲುಬು ಡಮಾರ್. ಸದಾ ಬಾಧಿಸುವ ನೋವು ಮರೆಯಲು ಹಾಗೂ ಅನಿಸಿಕೆಗಳ ಹಂಚಿಕೊಳ್ಳಲು ಈ ಬರವಣಿಕೆ. ಈಗ ದಕ್ಷಿಣ ಕನ್ನಡದಲ್ಲಿ ಅಡಿಕೆ ಕೃಷಿಕ. ವಂದನೆಗಳು’ ಎನ್ನುವ ಅನಂತಾಡಿ ಗೋವಿಂದ ಭಟ್ ಅವರು ತಮ್ಮ ‘ಹಳ್ಳಿಯಿಂದ’ ಬ್ಲಾಗ್ ನಲ್ಲಿ ಹಂಚಿಕೊಂಡದ್ದು ಇಲ್ಲಿದೆ 
0021ನಾವು ಪರದೇಶಕ್ಕೆ ಹೋದಾಗ ಅಲ್ಲಿ ಸಂವಾದಕ್ಕೆ ದಾರಿಗಳೇನು ಎನ್ನುವುದು ಪ್ರತಿಯೊಬ್ಬ ಯಾತ್ರಿಗೂ ಗೊಂದಲಗಳಿರುತ್ತದೆ. ಇಂಗ್ಲೀಷ್ ಪ್ರಪಂಚದ ಹೆಚ್ಚಿನ ಕಡೆಗಳಲ್ಲಿ ಪರವಾಗಿಲ್ಲ ಎನ್ನುವಂತಿದ್ದರೂ ಮದ್ಯ ಮತ್ತು ದಕ್ಷಿಣ ಅಮೇರಿಕದಲ್ಲಿ ಸ್ಪಾನಿಶ್ ಬಾಷೆಯದೇ ಕಾರುಬಾರು. ಯುರೋಪಿನಲ್ಲೂ ಅವರವರ ಬಾಷೆಗೆ ಪ್ರಾಮುಖ್ಯತೆಯಾದರೂ ಇಂಗ್ಲೀಷಿನಲ್ಲಿ ವ್ಯವಹರಿಸಬಹುದು. ಕೆಲವರು ಪ್ರವಾಸಕ್ಕಾಗಿ ಬಾಷೆಯ phrase book ಹಿಡಕೊಂಡು ಹೋಗುವುದುಂಟು. ಆದರೆ ನಾನು ಅಂತಹ ಪುಸ್ತಕಗಳು ನಿಷ್ಪ್ರಯೋಜಕ ಎನ್ನುವ ನಿಲುವಿನವನು. ಕೈಸನ್ನೆಯಲ್ಲೇ ಸಾಕಷ್ಟು ಸಂವಾದ ಸಾದ್ಯ.
ಡೆನ್ಮಾರ್ಕಿನಲ್ಲಿ ಒಮ್ಮೆ ಏಕಾಂಗಿಯಾಗಿ ವಾಸಿಸುವ ಅಜ್ಜಿಯಲ್ಲಿ ಅವರ ಮನೆಯ ಎದುರು ಹುಲ್ಲು ಹಾಸಿನಲ್ಲಿ ನನ್ನ ಡೇರೆ ಹಾಕಿ ನಿದ್ದೆ ಮಾಡಬಹುದೇ ಎಂದು ಕೇಳಿದೆ. ಒಪ್ಪಿದರು. ಡೇರೆ ಎಬ್ಬಿಸಿದ ನಂತರ ತಿಂಡಿ ಕೊಡುತ್ತೇನೆ ಎಂದು ಕೈಸನ್ನೆ ಮಾಡಿದರು. ಸಂಜೆಯ ಅಹಾರ ಕೊಟ್ಟರು. ನಂತರ ಸ್ನಾನಮಾಡುತ್ತಿಯಾ ಕೇಳಿ ಅವಕಾಶವನ್ನಿತ್ತರು. ಗೋಡೆಯಲ್ಲಿರುವ ಚಿತ್ರಗಳ ಮೂಲಕ ಅವರ ಮಕ್ಕಳ ಪರಿಚಯವಾಯಿತು. ಮರುದಿನ ಬೆಳಗ್ಗೆ ಡೇರೆ ಸುತ್ತಿಡುವಾಗ ಕರೆದು ಉಪಹಾರ ಕೊಟ್ಟರು. ನಮ್ಮ ಮಾತುಕಥೆಯೆಲ್ಲ ಕೈ ಸನ್ನೆಯಲ್ಲೇ ನಡೆಯಿತು. ಬಾಷೆ ಅರಿಯದಿರುವುದು ಕೊರತೆ ಅನ್ನಿಸಲೇ ಇಲ್ಲ.
ಜಪಾನಿನಲ್ಲಿ ನಾನು ಎನ್ನಲು ನಾವು ಎದೆ ತೋರುವಂತೆ ಅವರು ಮೂಗಿಗೆ ಬೊಟ್ಟು ಮಾಡಿ ತೋರಿಸುತ್ತಾರೆ. ಒಮ್ಮೆ ಒಂದು ಗದ್ದೆಯ ಬದಿಯಲ್ಲಿ ಡೇರೆ ಹಾಕಲು ಯೋಚಿಸುತ್ತಿರುವಾಗ ಒಂದು ಅಪ್ಪ ಮಗನ ಜತೆ ಕಂಡಿತು. ಗದ್ದೆ ಅವರದೇ ಅನಿಸಿ ನಾನು ಅವರ ಒಪ್ಪಿಗೆ ಕೇಳಿದೆ. ಅವರು ಮನೆಗೆ ಬಾ ಎಂದು ಸೈಕಲಿನಲ್ಲಿ ಅವರ ಕಾರನ್ನು ಹಿಂಬಾಲಿಸಲು ಹೇಳಿದರು. ಅಲ್ಲಿ ಆಗ ಹೈಸ್ಕೂಲ್ ಕೊನೆ ಹಂತದಲ್ಲಿದ್ದ ಸಟೋಶಿಗೆ ಹೊರತು ಯಾರಿಗೂ ಇಂಗ್ಲೀಷ್ ಬಾರದು. ಮರುದಿನ ಬೆಳಗ್ಗೆ ಗೆಳೆಯನ ಕಂಡು ಒಹಾಯೋ ಗೊಜೈಮಾಸು ಸಟೋಶಿ ಸಾನ್ ಎಂದೆ. Good morning, Mr Satoshi ಎನ್ನುವ ಅರ್ಥ. ಸಟೋಶಿ ಬಹಳ ಸಂತೋಷದಿಂದ ಅವರ ಬಾಷೆಯಲ್ಲಿ ಮಾತು ಮುಂದುವರಿಸಲು ಮಹರಾಯ, ನನಗೆ ಗೊತ್ತಿರುವುದು ಅಷ್ಟೇ, ದಯವಿಟ್ಟು ಇಂಗ್ಲೀಷಿನಲ್ಲಿ ಮಾತನಾಡು ಎಂದು ವಿನಂತಿಸಿದೆ. ನಾವು ಅವರ ಬಾಷೆಯಲ್ಲಿ ಮಾತನಾಡಿದರೆ ಅವರೂ ಅದರಲ್ಲೇ ಉತ್ತರಿಸುತ್ತಾರೆ. ನಾವು ಕಂಗಾಲು ಆಗುತ್ತೇವೆ. ಅಪರಿಚಿತ ಬಾಷೆಯಲ್ಲಿ ಮಾತನಾಡಿದರೆ ಅರ್ಥೈಸಲು ಹೆಚ್ಚು ಪ್ರಯತ್ನ ಮಾಡುತ್ತಾರೆ ಅನ್ನುವುದು ನನ್ನ ಅನುಭವ.
ದಕ್ಷಿಣ ಅಮೇರಿಕದಲ್ಲಿ ಇಂಗ್ಲೀಷ್ ಜ್ನಾನ ಕಡಿಮೆ. ಅಲ್ಲಿ ಪ್ರವಾಸ ಮಾಡುವಾಗ ಕೈಸನ್ನೆಯೊಂದಿಗೆ ಕನ್ನಡದಲ್ಲೇ ಹೇಳಿ ಸುದಾರಿಸಿರುವುದಾಗಿ ನೇಮಿಚಂದ್ರರು ಪ್ರವಾಸ ಕಥೆಯಲ್ಲಿ ಬರೆದಿದ್ದಾರೆ. ಮೊದಲು ಇಂಗ್ಲೀಷ್ ಉಪಯೋಗಿಸುತ್ತಿದ್ದೆವು. ಅದು ಏನೂ ಪ್ರಯೋಜನವಿಲ್ಲವೆಂದು ಅರಿತ ನಂತರ ಇಂಗ್ಲೀಷ್ ಆದರೇನು ಕನ್ನಡ ಆದರೇನು ಎಂದು ಕನ್ನಡವೇ ಬಳಸುತ್ತಿದ್ದೆವು ಎಂದಿದ್ದಾರೆ.

‍ಲೇಖಕರು avadhi

6 March, 2009

1 Comment

  1. ಅಶೋಕವರ್ಧನ

    ಮನುಷ್ಯನ (ಕನಿಷ್ಠ) ಪ್ರಾಕೃತಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಮನುಷ್ಯಕೃತ ಭಾಷೆ ಒಂದು ಅಡ್ಡಿಯಲ್ಲ ಎನ್ನುವ ಸಾರ್ವತ್ರಿಕ ಸತ್ಯವನ್ನು ಗೋವಿಂದ ಭಟ್ಟರು ಚೆನ್ನಾಗಿ ನಿರೂಪಿಸಿದ್ದಾರೆ. ನಮ್ಮ ಉತ್ತರ ಭಾರತ ಪ್ರವಾಸದಲ್ಲಿ ನಾನು ಉದ್ದೇಶಪಡದೇ ಹಿಂದಿ ವಾಕ್ಯಗಳಲ್ಲಿ ಸೇರಿಸಿಬಿಡುತ್ತಿದ್ದ ತುಳು ಶಬ್ದಗಳು ಪರಿಚಿತ ಸಹಯಾನಿಗಳಿಗೆ ನಗೆಬುಗ್ಗೆಗಳು. ಆದರೆ ಕೆಲಸ ಸಾಧಿಸುವಲ್ಲಿ ಭಾರೀ ಬಾಧಕವೆಂದೂ ಆಗಿಲ್ಲ. ಹಾಗೇ ನನ್ನ ಹೆಂಡತಿ (ದೇವಕಿ) ತನ್ನ ಟೀವೀ ಹಿಂದೀ ಸೀರಿಯಲ್ ವೀಕ್ಷಣೆಯ ಬಲದಲ್ಲಿ ಗಳಿಸಿದ ಹಿಂದಿಯಲ್ಲಿ “ಹಮ್ ಲೋಗೋಂಕೋ ಇದರ್ ನಹಾನೇ ಕೇಲಿಯೇ ಗರಂ ಪಾನೀ ಮಿಲ್ತಾ ಹೈ ಕ್ಯಾ” ಎಂದು ವಾಕ್ಯ ಪೂರ್ಣಗೊಳಿಸುವುದರೊಳಗೆ ಭಯ್ಯಾ ಬಕೆಟ್ ಭರ್ತಿ ನೀರು ಕಾಯಿಸಿ ತಂದಿಟ್ಟ ಎಂದೂ ಪ್ರಚಾರದಲ್ಲಿರುವುದು ಪ್ರತಿ-ಹಾಸ್ಯ ಅಷ್ಟೇ!
    ಅಶೋಕವರ್ಧನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading