ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾರತಿ ಹೆಗಡೆ ಬರೆದ ಭಾನುವಾರದ ಸಣ್ಣಕಥೆ ’ಗಲ್ಲು’

– ಭಾರತಿ ಹೆಗಡೆ

ಕತ್ತಲು ಎಲ್ಲೆಲ್ಲೂ ಮುಸುಕುತ್ತಿರುವ ಹೊತ್ತದು. ಮನೆ ಮನವನ್ನೆಲ್ಲ ಕತ್ತಲು ಆವರಿಸಿರುವಾಗ ಈ ಚಿಕ್ಕ ಸೊಡರಾದರೂ ಬೆಳಕು ಚೆಲ್ಲಬಹುದೆಂಬ ಒಂದು ಸಣ್ಣ ಆಸೆಯಿಂದ ದೇವರಿಗೆ ಇರುವ ಚೂರೇ ಚೂರು ಎಣ್ಣೆಯಿಂದ ದೀಪ ಹೊತ್ತಿಸಲು ಕಡ್ಡಿಗೀರುವ ಹತ್ತಿಗೂ ಸಂಜೆಯ 7 ಗಂಟೆಯ ಬಸ್ಸು ಬಸ್ನಿಲ್ದಾಣಕ್ಕೆ ಕಿರ್ ಎಂದು ಸದ್ದು ಮಾಡುತ್ತಾ ನಿಲ್ಲುವುದಕ್ಕೂ ಸರಿಹೋಯಿತು. ಜನಗಳೆಲ್ಲ ಗಲಾಟೆ ಮಾಡುತ್ತಾ, ತಮ್ಮ ತಮ್ಮ ಸಾಮಗ್ರಿಗಳನ್ನು ತೆಗೆದುಕೊಂಡು ಸಣ್ಣಮಟ್ಟಿಗೆ ಜಗಳವನ್ನೂ ಕಾಯುತ್ತಾ ಹೋಗುತ್ತಿದ್ದರು. ಕಚಪಚ ಎಂದು ಮಾತನಾಡುವುದು ಕೇಳಿಸುತ್ತಿದ್ದರೂ ಶಿವಮ್ಮನ ಕಿವಿ ಮಾತ್ರ ನೆಟ್ಟಗಾಗುತ್ತಿದ್ದದು ಅಣ್ಣ ತರುವ ಸುದ್ದಿಗಾಗಿ ಆಗಿತ್ತು. ಈಗ ಅಣ್ಣ ಬರುತ್ತಾನೆಂದು ನೆನೆಸಿಕೊಂಡೇ ಕಡ್ಡಿಗೀರುವುದನ್ನೂ ನಿಲ್ಲಿಸಿ ಮೆಲ್ಲಗೆ ಬಾಗಿಲ ಕಡೆ ಕೊನೆಯ ಆಸೆಯೆಂಬಂತೆ ನೋಡತೊಡಗಿದಳು. ಅವಳ ನಿರೀಕ್ಷೆಯೇ ಸರಿಯೇನೋ ಎಂಬಂತೆ ಅವಳಣ್ಣ ನಂಜಣ್ಣ ನಿಧಾನಕ್ಕೆ ಬಾಗಿಲು ತೆಗೆದ. ತಾನು ತೆಗೆಯುವ ಬಾಗಿಲು ಅವರ ಬದುಕಿನ ಬಾಗಿಲನ್ನೇ ಮುಚ್ಚಬಹುದು ಎಂಬ ನಿರೀಕ್ಷೆಯಲ್ಲಿಯೇ ಇದ್ದವನಂತೆ ತುಂಬ ನಿಧಾನಕ್ಕೆ ಬಾಗಿಲು ತೆಗೆದು ಬಸವಳಿದಂತೆ ಕೂತವನನ್ನೇ ದಿಟ್ಟಿಸಿ ನೋಡುತ್ತಿದ್ದಳು ಶಿವಮ್ಮ. ಮುಖದ ತುಂಬೆಲ್ಲ ನಿರೀಕ್ಷೆಯನ್ನೇ ಹೊತ್ತು ಇವ ಹೇಳುವ ಒಂದು ಸುದ್ದಿಗಾಗಿ ಇಡೀ ಜೀವನ ಪರ್ಯಂತ ತಾನು ಕಾಯುತ್ತಿರುವವಳಂತೆ ಅವನ ಮುಂದೆ ಮೌನವಾಗಿ ನಿಂತಳು. ಕುಸಿದು ಕೂತ ನಂಜಪ್ಪನಿಗೂ ಏನನ್ನೂ ಹೇಳಲು ಸಾಧ್ಯವಾಗದೇ ತಲೆತಗ್ಗಿಸಿ ಕೂತವನಿಗೆ ಗಂಟಲು ಕಟ್ಟಿದಂತೆನಿಸಿತು.
ಇವನು ತರುವ ಒಂದು ಸುದ್ದಿಗಾಗಿ ಇಡೀ ಮನೆಯೇ ಕಾಯುತ್ತಿತ್ತೆಂಬಂತೆ ಒಳಗಿನಿಂದ ಸಿದ್ದಮ್ಮಜ್ಜೀ ಓಡಿ ಬಂದು ಇವನ ಮುಂದೆ ನಿಂತು `ಅದ್ಯಾಕ್ಲಾ ನಂಜಪ್ಪ, ಈಂಗ್ ಕುಂತೀಯೇ.. ಅದೇನೂಂತ ಬುಡ್ನ ಏಳ್ಲಾ.. ತಡಕಣಕಾಗಾಕಿಲ’್ಲ ಎಂದು ಕಿರುಚಿದಂಥ ಧ್ವನಿಯಲ್ಲಿ ಹೇಳಿ ಅವನ ಮುಂದೆ ಕುಸಿದು ಕೇಳಿದಳು. ಅವಳು ಕೂರುತ್ತಿದ್ದ ಆ ರೀತಿಯೇ ನಂಜಪ್ಪ ಹೇಳುವ ಸುದ್ದಿ ತನಗೆ ಅಪಥ್ಯವಾದುದು ಎಂಬುದನ್ನು ಮೊದಲೇ ನಿರೀಕ್ಷಿಸಿದಂತೆಯೇ ಇತ್ತು. ಮಾತು ಸ್ವಲ್ಪವೂ ಬಾರದೇ ಮೂಕಿಯಂತೇ ನಿಂತೇ ಇದ್ದ ಶಿವಮ್ಮನಿಗೆ ಅವನು ಏನು ಹೇಳುವನೆಂಬ ಕಾತುರಕ್ಕಿಂತಲೂ ಅವನೇನೂ ಹೇಳದೇ ಇರಲಿ ಎಂಬ ನಿರೀಕ್ಷೆಯೇ ಹೆಚ್ಚಿತ್ತು. ಅಷ್ಟೊತ್ತಿಗೆ ನಂಜಪ್ಪ ಬಂದ ಸುದ್ದಿ ಕೇಳಿ ಅಕ್ಕಪಕ್ಕದವರೆಲ್ಲ ಒಬ್ಬೊಬ್ಬರಾಗಿ ಬಂದು ಜಮಾಯಿಸತೊಡಗಿದರು. ಯಾರು ಬಂದರೂ ನಂಜಪ್ಪನ ಬಾಯಿಯಿಂದ ಮಾತು ಹೊರಬರುತ್ತಿರಲಿಲ್ಲ. `ಏನಾಯಿತ್ಲಾ.. ಅದ್ಯಾಕಂಗೆ ಮೂಗನಂಗೆ ಕುಂತೀಯೇ’ ಎಂದು ಪಕ್ಕದ ಮನೆಯ ಕರಿಯ ನಂಜಪ್ಪನನ್ನ ಅಲುಗಾಡಿಸದೇ ಇದ್ದಿದ್ದರೆ ಬಹುಶಃ ನಂಜಪ್ಪ ಬಾಯೇ ಬಿಡುತ್ತಿರಲಿಲ್ಲವೇನೋ.. ಬಾಯಿಬಿಟ್ಟ ಆ ಸುದ್ದಿ ಹೊರ ಬಂದು ಶಿವಮ್ಮನ ಎದೆಯೊಳಗೆ ಇಳಿಯುವ ಹೊತ್ತಿಗೆ ಸಿದ್ದವ್ವ ತಲೆ ತಲೆ ಕುಟ್ಟಿಕೊಂಡು ಬೋರೆಂದು ಅಳುತ್ತಿದ್ದಳು. ಸುತ್ತವರೆಲ್ಲರೂ ಲೊಚಗುಡುತ್ತಾ ಸಮಾಧಾನಿಸುತ್ತಿದ್ದರು.
ಕೆಲವರು ಸರಿಯಾಯಿತೆಂದು ಹೇಳಿದರೆ ಮತ್ತೆ ಕೆಲವರು ಕರುಣೆ ತೋರುತ್ತಿದ್ದರು. ಶಿವಮ್ಮನಿಗೆ ಮಾತ್ರ ಇದ್ಯಾವುದೂ ಅರ್ಥವಾಗದೇ ಸುಮ್ಮನೆ ಬಂದು ದೇವರ ಮುಂದೆ ಕುಸಿದಳು. ಅವಳ ಮಾತು, ಕಾಲು, ಕೈಗಳೆಲ್ಲ ಬತ್ತಿ ಹೋದಂತಿದ್ದವು. ತಡೆತಡೆದು ಹೇಳಿದ ನಂಜಣ್ಣನ ಒಂದೊಂದೇ ಮಾತುಗಳೆಲ್ಲವೂ ನಿರೀಕ್ಷಿತವೇ ಆಗಿದ್ದರೂ ಅವನ್ನು ಅರಗಿಸಿಕೊಳ್ಳಲಾಗದ ಸ್ಥಿತಿ ಅವಳ ದ್ದಾಗಿತ್ತು. ಇಲ್ಲ…ಇಲ್ಲ.. ಹೀಗಾಗಲಿಕ್ಕಿಲ್ಲ…ಎಂಬ ಭರವಸೆಯೊಂದಿಗೆ ಅವನನ್ನು ನೋಡುತ್ತಿದ್ದವಳಿಗೆ ನಂಜಣ್ಣ ಜುಂಜ ಸ್ವಾಮಿಗೆ ಗಲ್ಲು …ಕೋಟರ್ು…ತೀರ್ಪು ಹೊರ ಬಂತು…ಎಂದು ತಡೆತಡೆದು ಹೇಳಿದ ಅವನ ಮಾತುಗಳನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಳು. `ಏನಾಯ್ತೇ ನಿಂಗೇ.. ‘ಎಂದು ಗಾಬರಿಯಿಂದ ಸೊಸೆಯನ್ನೂ ವಿಚಾರಿಸಿಕೊಂಡಳು ಸಿದ್ದವ್ವ. ಆದರೆ ಯಾರನ್ನೂ ನೋಡುವ ಪರಿಸ್ಥಿತಿಯಲ್ಲಿ ಶಿವಮ್ಮ ಇರಲಿಲ್ಲ. ಅವಳ ಕಣ್ಣುಗಳಲ್ಲಿ ನೀರೂ ಬತ್ತಿ ಹೋದಂತಿದ್ದವು. ಒಂದು ಸಣ್ಣ ಬಿಕ್ಕು ಕೂಡ ಬಾರದ ಶಿವಮ್ಮ ನ ಮನದ ತುಂಬೆಲ್ಲ ಶೂನ್ಯವೇ ಆವರಿಸಿತ್ತು.
ಆ ಇಡೀ ಮನೆ ಒಂದು ಸಣ್ಣ ಕೋಣೆಯಂತಿತ್ತು. ಒಂದು ಚಿಕ್ಕ ಜಗುಲಿ, ಅಡುಗೆ ಮನೆ, ಗುಡಿಸಲಿಗಿಂತ ಸ್ವಲ್ಪ ದೊಡ್ಡದಾದ ಆ ಮನೆಯಲ್ಲೀಗ ಇದ್ದದ್ದು ಶಿವಮ್ಮ ಮತ್ತು ಅವಳ ಅತ್ತೆ ಸಿದ್ದವ್ವ ಮಾತ್ರ. ಆ ಇಡೀ ಮನೆ ಈಗ ಜುಂಜಸ್ವಾಮಿಗೆಗಲ್ಲು ಇದು ಕಟ್ಟಕಡೆಯ ತೀಪರ್ು, ಇನ್ನು ಎಲ್ಲಿಯೂ ಇವನ ಬಿಡುಗಡೆ ಸಾಧ್ಯವಿಲ್ಲ ಎಂಬ ಮಾತನ್ನು ಪ್ರತಿಧ್ವನಿಸುತ್ತಿತ್ತು.

ಈ ತೀರ್ಪು ಇದೇ ಮೊದಲೇನಾಗಿರಲಿಲ್ಲ. ಮೊದಲು ಇದೇ ಜಿಲ್ಲೆಯ ನ್ಯಾಯಾಲಯಕ್ಕೆ ಹೋದಾಗಲೂ ಅಷ್ಟೇ, ಇದೇ ತೀರ್ಪು ಬಂದಿತ್ತು. ನಂತರ ಮೇಲ್ಮನವಿ ಸಲ್ಲಿಸಿ ಎಂದು ಯಾರೋ ಹೇಳಿದರು. ಇಂಥ ಒಂದು ಘಟನೆ ನಡೆದ ತಕ್ಷಣ ಯಾಯರ್ಾರೋ ಸಹಾಯಕ್ಕೆ ಬಂದು ನಿಲ್ಲುತ್ತಾರೆ. ಇದರಿಂದ ತಪ್ಪಿಸಿಕೊಳ್ಳುವ ಎಂತೆಂಥದ್ದೋ ಉಪಾಯಗಳನ್ನು ಹೇಳಿಕೊಡುತ್ತಿರುತ್ತಾರೆ. ಆದರೆ ಈ ಕೇಸಿನಿಂದ ಹೊರಬರುವುದು ಅಷ್ಟು ಸುಲಭ ಇರಲಿಲ್ಲ. ಇದು ಕೊಲೆ ಮತ್ತು ಅತ್ಯಾಚಾರ ಪ್ರಕರಣವಾಗಿತ್ತು. ಹಾಗಾಗಿ ಜುಂಜಸ್ವಾಮಿ ಬಿಡುಗಡೆಯಾಗುವುದು ಅನುಮಾನವಿತ್ತು. ಅದಕ್ಕೇ ಅವನ ಪರ ಹೋರಾಡುವಂತೆ ಶಿವಮ್ಮಳನ್ನು ಎತ್ತಿಕಟ್ಟಿದ್ದರು. ಅವಳಿಗೀಗ 22 ವರ್ಷ. ಮಕ್ಕಳೂ ಇರಲಿಲ್ಲ. ಜಮೀನೂ ಅಷ್ಟಕ್ಕಷ್ಟೇ. ಕೂಲಿನಾಲಿ ಮಾಡಿ ಬದುಕಬೇಕು. ಮನೆಗೆ ಆಧಾರವೇ ಜುಂಜಸ್ವಾಮಿ. ಅವನನ್ನೂ ಬಿಟ್ಟರೆ ಈ ಮನೆಗ ಆಧಾರವೇ ಇರುವುದಿಲ್ಲ. ವಯಸ್ಸಾದ ತಾಯಿ, ಚಿಕ್ಕ ವಯಸ್ಸಿನ ಹೆಂಡತಿ. ಇವರನ್ನೆಲ್ಲ ಸಂಬಾಳಿಸಬೇಕೆಂದರೆ ಜುಂಜಸ್ವಾಮಿ ಬಿಡುಗಡೆ ಆಗಬೇಕು. ಈ ರೂಟಿನಲ್ಲಿ ಹೋಗಿ ಎಂದು ಯಾರೋ ಹೇಳಿಕೊಟ್ಟರು. ಅದರ ಪ್ರಕಾರವೇ ಶಿವಮ್ಮ, ವಕೀಲರ ಹತ್ತಿರ, ಜಡ್ಜ್ ಹತ್ತಿರ ಹೋಗಿ ಹೋಗಿ ಅಳುತ್ತಿದ್ದಳು. `ನನ್ನ ಗಂಡ ಅಂಥವನಲ್ಲ, ಘಟನೆ ನಡೆದ ದಿನ ಅವನು ಊರಲ್ಲೇ ಇರಲಿಲ್ಲ. ನನ್ನ ಜೊತೆ ನನ್ನ ತವರು ಮನೆಗೆ ಬಂದಿದ್ದ.. ‘ ಹೀಗೆ ಉರು ಹೊಡೆದು ಅವರ ಮುಂದೆ ಹೇಳಿ ಅಳುತ್ತಿದ್ದಳು.
ಇದೆಲ್ಲವೂ ಸುಳ್ಳು ಎಂಬುದು ಅವಳಿಗೂ ಗೊತ್ತು. ಗಂಡ ವಾಪಾಸು ಬರಲಿ ಎಂಬ ಆಸೆ ಅವಳಿಗೂ ಇರಲಿಲ್ಲ. ಯಾಕೆಂದರೆ ಅವಳಿಗೆ ಗಂಡನ ಮೇಲೆ ಅಂತಹ ಅನುಭೂತಿ ಯಾವತ್ತೂ ಇರಲೇ ಇಲ್ಲ.
ಹಾಗೆ ನೋಡಿದರೆ ಶಿವಮ್ಮ ಆ ಮನೆಗೆ ಬಂದಾಗಿನಿಂದಲೂ ಸುಖ ಕಂಡದ್ದು ಅಷ್ಟಕ್ಕಷ್ಟೆ. ಮದುವೆಯಾಗಿ 2 ವರ್ಷ ತುಂಬುವುದರೊಳಗೆ ಗಂಡ ಜೈಲು ಪಾಲಾದ. ಊರಿನ ಹುಡುಗಿಯನ್ನು ಕೆಡಿಸಿ ಕೊಲೆ ಮಾಡಿದ ಎಂದು ಅವನ ಮೇಲೆ ಕೇಸು ದಾಖಲು ಮಾಡಿದ್ದರು. ಹಾಗೆ ಅವನು ಮಾಡಿಲ್ಲವೆಂಬ ಖಾತರಿ ಕೂಡ ಅವಳಿಗಿರಲಿಲ್ಲ. ಯಾಕೆಂದರೆ ಕುಡುಕ ಗಂಡ ಇವಳನ್ನು ಬಾಳಿಸಿದ್ದು ಅಷ್ಟರಲ್ಲಿಯೇ ಇತ್ತು. ಸದಾ ಹೊಡೆತ, ಬಡಿತ. ಎಲ್ಲಕ್ಕಿಂತ ಮುಖ್ಯವಾಗಿ ರಾತ್ರಿ ಅವನನ್ನು ಸಂಬಾಳಿಸುವುದೇ ಅವಳಿಗೆ ಕಷ್ಟವಾಗುತ್ತಿತ್ತು. ಅತಿಯಾದ ಹೆಣು ್ಣಬಾಕತನ, ಅತಿ ಕ್ರೂರಿ ಎನಿಸಿಕೊಂಡ ಜುಂಜಸ್ವಾಮಿ ಈ ಕೃತ್ಯ ಎಸಗಿಲ್ಲ ಎಂಬುದನ್ನು ಗಟ್ಟಿಯಾಗಿ ನಂಬಲೂ ಅವಳಿಗೆ ಸಾಧ್ಯವಿರಲಿಲ್ಲ. ಆದರೂ ಹೆಣ್ಣಾದವಳಿಗೆ ಗಂಡ ನೆಪಮಾತ್ರಕ್ಕೂ ಇಲ್ಲದಿದ್ದರೆ ಬಾಳ್ವೆ ಮಾಡೋದ್ಹೇಂಗೆ ಎಂಬ ಬೇರೆಯವುರ ಕೇಳುವ ಪ್ರಶ್ನೆಗೆ ಅವಳು ತಲೆ ತೂಗುತ್ತಿದ್ದಳು. ಈಗ ಜೈಲು ಸೇರಿಯೇ ಹತ್ತಿರ ಹತ್ತಿರ 8-10 ವರ್ಷಗಳೇ ಆಗಿಬಿಟ್ಟಿದ್ದವು. ಕೋಟರ್ು ಕಚೇರಿ ಎಂದು ಅಲೆಯುತ್ತಿದ್ದರೂ ಯಾಕೋ ಇವ ವಾಪಾಸು ಬರುತ್ತಾನೆ, ಕೇಸು ಖುಲಾಸೆಯಾಗುತ್ತದೆಂಬ ಯಾವುದೇ ಭರವಸೆ ಅವಳಲ್ಲಿರಲಿಲ್ಲ. ಆದರೆ ಕೇಸು ಎಂದು ಅವನ ಪರ ಓಡಾಡದೇ ಇದ್ದರೆ ಇವಳೆಂಥ ಹೆಂಡತಿ ಎಂದು ಜನ ಆಡಿಕೊಂಡಾರೆಂಬ ಅಳುಕಿನಿಂದಲೇ ಇಷ್ಟೆಲ್ಲ ಮಾಡುತ್ತಿದ್ದಳು. ಜೊತೆಗೆ ಅತ್ತೆ ಸಿದ್ದವ್ವನಿಗೆ ಅವನೊಬ್ಬನೇ ಮಗ ಸಿದ್ದವ್ವನಿಗೆ. ಅವನನ್ನು ಬಿಟ್ಟರೆ ಅವಳಿಗೆ ಬದುಕುವ ಮಾರ್ಗವೇ ಕಾಣಿಸುತ್ತಿಲ್ಲ. ಈಗ ಸಿದ್ದವ್ವನಿಗೆ 70 ವಯಸ್ಸಿರಬಹುದು. ಹಣ್ಣು ಮುದುಕಿ. ಈ ವಯಸ್ಸಲ್ಲಿ ಅವಳು ಮಗ ಈ ತಪ್ಪು ಮಾಡಿದ್ದಾನೆಂದು ಒಪ್ಪಿಕೊಳ್ಳುವುದಾದರೂ ಹೇಗೆ? ಹಾಗಾಗಿ ಮಗ ತಪ್ಪು ಮಾಡಿಲ್ಲವೆಂದೇ ಅವಳಿಗೆ ಬಲವಾದ ನಂಬಿಕೆ.
ಮದುವೆಯಾಗಿ ಆ ಮನೆಗೆ ಕಾಲಿಡುವಾಗ ಶಿವಮ್ಮನಿಗೂ ಸಾಕಷ್ಟು ಕನಸುಗಳಿದ್ದವು. ಶಿವಮ್ಮ ಏನೂ ಓದಿದವಳಲ್ಲ. ಅಲ್ಲೇ ಚಾಮರಾಜನಗರದ ಸಮೀಪದ ಹಳ್ಳಿ ಅವಳದ್ದು. ಅಪ್ಪ ಅಮ್ಮ ಕೂಲಿನಾಲಿ ಮಾಡಿಯೇ ಜೀವನ ಸಾಗಿಸುತ್ತಿದ್ದರು. 5-6 ಮಕ್ಕಳಲ್ಲಿ ಶಿವಮ್ಮನೇ ದೊಡ್ಡವಳು. ವಯಸ್ಸು 12 ಆದಕೂಡಲೇ ಅವಳನ್ನು ಮದುವೆ ಮಾಡಿಬಿಡಬೇಕೆಂದು ಅಮ್ಮ ಹೇಳುತ್ತಿದ್ದಳು. ಶಿವಮ್ಮನಿಗೂ ಮದುವೆ ಬಗ್ಗೆ ತಂಬ ಕನಸುಗಳಿದ್ದವು. ತುಂಬ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದ ಪಕ್ಕದ ಮನೆಯ ಪಾರ್ವತಿ ವಾಪಾಸು ಬಂದಾಗ ಅದೆಂಥ ಹೊಳಪಿತ್ತು ಅವಳ ಕಣ್ಣುಗಳಲ್ಲಿ. ಹೋಗಿ ಅವಳ ಬಳಿ ಮದುವೆಯ ಅನುಭವಗಳನ್ನೆಲ್ಲ ಕೇಳಿ ತಿಳಿದಿದ್ದಳು ಶಿವಮ್ಮ. ಹಾಗೆಯೇ ಗೆಳತಿಯರ ಜೊತೆ ಆಗೀಗ ಕದ್ದು ಟೆಂಟ್ಗೆ ಹೋಗಿ ಸಿನಿಮಾ ಕೂಡ ನೋಡಿ ಬರುತ್ತಿದ್ದಳು. ಅವೆಲ್ಲ ಪ್ರೀತಿ ಪ್ರೇಮದ ಬಗ್ಗೆ ಇಲ್ಲದ ಕನಸುಗಳನ್ನು ತುಂಬಿದ್ದವು ಅವಳ ಮನದಲ್ಲಿ. ಯಾವಾಗ ಅಪ್ಪ ತನ್ನನ್ನು ಮದುವೆ ಮಾಡುತ್ತಾನೆಂದು ಎದುರು ನೋಡುತ್ತಿದ್ದಳು.
ಅಪ್ಪ ಅದ್ಯಾರ್ಹತ್ರೋ ಒಂದಷ್ಟು ಸಾಲ ಮಾಡಿದ್ದ. ಆ ಸಾಲವನ್ನು ತೀರಿಸುವುದಕ್ಕಾಗಿ ಮತ್ತೊಂದು ಸಾಲ ಮಾಡಿದ. ಈ ಸಾಲ ಕೊಟ್ಟವರ ಪೈಕಿ ಜುಂಜಸ್ವಾಮಿಯೂ ಒಬ್ಬನಾಗಿದ್ದ. ದಿನಾ ಮನೆಗೆ ಬಂದು ಕುಡಿದು ಕೂಗಾಡಿ ಹೋಗುತ್ತಿದ್ದ ಜುಂಜಸ್ವಾಮಿಗೆ ಒಂದು ದಿನ ಶಿವಮ್ಮ ಕಣ್ಣಿಗೆ ಬಿದ್ದಳು. ಅಪ್ಪನ ಸಾಲ ಮನ್ನಾ ಮಾಡಿ, ಶಿವಮ್ಮನನ್ನು ಜುಂಜಸ್ವಾಮಿ ಮದುವೆಯಾಗಿಬಿಟ್ಟ. ಆಗ ಅವಳಿಗಿನ್ನೂ 12 ವರ್ಷ. ಜುಂಜಸ್ವಾಮಿಗೆ ಅಷ್ಟೊತ್ತಿಗೆ 28 ಮುಗಿದಿತ್ತು ಎನಿಸುತ್ತದೆ.
ಆದರೆ ಮದುವೆಯಾಗಿ ಬಂದ ದಿವಸದಿಂದಲೂ ಶಿವಮ್ಮನಿಗೆ ಜುಂಜಸ್ವಾಮಿಯ ನಡವಳಿಕೆ ಸರಿಬರಲೇ ಇಲ್ಲ. ಅವ ಕುಡಿಯುತ್ತಾನೆ, ಹೊಡೆಯುತ್ತಾನೆಂಬುದರ ಬಗ್ಗೆ ಅವಳಿಗೆ ಸ್ವಲ್ಪವೂ ಬೇಜಾರೇ ಇರಲಿಲ್ಲ. ಆದರೆ ರಾತ್ರಿ ಹಗಲೆನ್ನದೆ ತನ್ನನ್ನು ಹಿಡಿದೆಳೆಯುವುದು, ದಿವಸದಲ್ಲಿ 2-3 ಬಾರಿಯಾದರೂ ಸೇರಬೇಕೆಂದು ಅವನು ತನ್ನನ್ನು ಎಳೆದಾಡುವುದು ಅವಳಿಗೆ ಇಷ್ಟವಾಗುತ್ತಿರಲಿಲ್ಲ. ಮೊದಮೊದಲು ಅವನ ಈ ನಡವಳಿಕೆಗೆ ಸಹಕರಿಸುತ್ತಿದ್ದಳು. ಆದರೆ ಬರಬರುತ್ತಾ ಅವನ ಕಾಟ ಹೆಚ್ಚಾದಾಗ ಅವಳು ಪ್ರತಿಭಟಿಸಲು ಶುರುಮಾಡಿದಳು. ಇದರಿಂದ ಮತ್ತಷ್ಟು ಅವಳಿಗೆ ಕಾಟ ಶುರುವಾಯಿತು. ದಿನಾ ಹೊಡೆಯುವುದು, ನಿನ್ನಪ್ಪನಿಗೆ ನಡಿ ಎಂದು ಬಯ್ಯುವುದೆಲ್ಲವೂ ಮಾಮೂಲಾಯಿತು.
ಜುಂಜಸ್ವಾಮಿ ಮನೆಯಲ್ಲಿ ಹೀಗಿದ್ದರೂ ಆಚೀಚೆ ಕೇರಿಯ ಬಹುತೇಕ ಹೆಣ್ಣುಗಳನ್ನು ಅವ ಬಿಡಲಿಲ್ಲ. ಅವರ ಅಮ್ಮಂದಿರೆಲ್ಲ ದೂರು ತೆಗೆದುಕೊಂಡು ಬಂದಾಗಲೂ ಅತ್ತೆ ಸಿದ್ದವ್ವ ಅವರಿಗೆ ಬಯ್ದು ಕಳುಹಿಸುತ್ತಿದ್ದಳು.
ಜುಂಜಸ್ವಾಮಿಯ ಸ್ವಲ್ಪ ಜಮೀನು ಊರಿನ ಸ್ವಲ್ಪ ಮಟ್ಟಿಗೆ ದೊಡ್ಡ ಕುಳ ಎಂದೆನಿಸಿಕೊಂಡ ಬುಳ್ಳಪ್ಪನ ಜಮೀನಿನ ಪಕ್ಕದಲ್ಲಿತ್ತು. ಆ ಜಮೀನಿಗಾಗಿ ಇಬ್ಬರಿಗೂ ಆಗಾಗ ತಗಾದೆ ನಡೆಯುತ್ತಲೇ ಇರುತ್ತಿತ್ತು. ಬುಳ್ಳಪ್ಪ ಯಾವ ಕಾರಣಕ್ಕೂ ಆ ಜಮೀನನ್ನು ಬಿಟ್ಟುಕೊಡಲು ಸಿದ್ಧನಿರಲಿಲ್ಲ. ಅವ ಅಕ್ಕಪಕ್ಕದ ಜಮೀನನ್ನು ಹೀಗೆಯೇ ಒತ್ತುವರಿ ಮಾಡಿಕೊಂಡೇ ದೊಡ್ಡ ಮನುಷ್ಯನಾಗಿದ್ದು. ಆದರೆ ಜುಂಜಸ್ವಾಮಿಗೆ ಈ ಜಮೀನು ಬಿಟ್ಟರೆ ಬೇರೆ ಇರಲಿಲ್ಲ. ಅದವನ ಉಳಿವಿನ ಪ್ರಶ್ನೆಯಾಗಿತ್ತು. ಹಾಗಾಗಿ ಅವನೂ ಕೋಟರ್ು ಮೆಟ್ಟಿಲೇರಿದ್ದ. ಇದಕ್ಕಾಗಿ ಕೇಸು ಹಾಕಿದ್ದ. ಈ ಕಾರಣಕ್ಕಾಗಿಯೇ ಇಬ್ಬರಿಗೂ ಜಗಳವಾಗುತ್ತಿತ್ತು. ಇದಕ್ಕಾಗಿ ಊರಲ್ಲಿ ಪಂಚಾಯ್ತಿಯೂ ಆಗಿತ್ತು. ಆದರೂ ಇಬ್ಬರೂ ದ್ವೇಷ ಸಾಧಿಸುವುದನ್ನೇನೂ ಬಿಟ್ಟಿರಲಿಲ್ಲ. ಹೀಗೆ ಇಬ್ಬರ ನಡುವೆ ತಗಾದೆ ನಡೆಯುತ್ತಲಿರುವಾಗಲೇ ಒಂದು ದಿನ ಹೊಲಕ್ಕೆ ಗೊಬ್ಬರ ತೆಗೆದುಕೊಂಡು ಹೋಗುತ್ತಿದ್ದ ಬುಳ್ಳಪ್ಪನ ದೊಡ್ಡ ಮಗಳು ಸರಸೋತಿಯನ್ನು ಜುಂಜಸ್ವಾಮಿ ಕೆಣಕಿದ. ಇದನ್ನು ನಿನ್ನಪ್ಪನಿಗೆ ಹೋಗ್ಹೇಳು ಎಂದು ಜೋರು ಮಾಡಿ ಕಳುಹಿಸಿದ. ಅವಳು ಅಳುತ್ತಾ ಓಡಿ ಬಂದು ಅಪ್ಪನಿಗೆ ವರದಿ ಮುಟ್ಟಿಸಿದಳು. ಇದರಿಂದ ಬುಳ್ಳಪ್ಪ ಸಹಜವಾಗಿಯೇ ಸಿಟ್ಟಿಗೆದ್ದ. ಊರಲ್ಲಿ ಮಾರಾಮಾರಿಯಾಯ್ತು. ಪಂಚಾಯ್ತಿ ಕರೆದು ಜುಂಜಸ್ವಾಮಿಗೆ ಒಂದಷ್ಟು ದುಡ್ಡನ್ನು ಸಜೆ ನೀಡಿ, ಎಲ್ಲರೂ ಬಯ್ದು, ಇನ್ನು ಹೀಗೆ ಮಾಡೋದಿಲ್ಲವೆಂದು ಭಾಷೆ ತೆಗೆದುಕೊಂಡು, ನಂತರ ಪೊಲೀಸ್ಗೆ ಹೋಗ್ತೀವಿ ಎಂದೆಲ್ಲ ಎಚ್ಚರಿಕೆ ಕೊಟ್ಟು ಬಿಟ್ಟುಬಿಟ್ಟರು. ಆದರೆ ಜುಂಜಸ್ವಾಮಿಗೆ ಇದರಿಂದ ಭಯವೂ ಆಗಲಿಲ್ಲ. ಸಮಾಧಾನವೂ ಆಗಲಿಲ್ಲ. ಮುಖ್ಯವಾಗಿ ಅವನಿಗೆ ತನ್ನ ಜಮೀನು ಬೇಕಾಗಿತ್ತು. ಇದನ್ನು ಹೀಗೆ ಬಿಡುವುದಿಲ್ಲವೆಂದು ಶಪಥ ಮಾಡಿದ್ದ.
ಅದೇ ರೀತಿ ಬುಳ್ಳಪ್ಪನೂ ಇವನನ್ನು ಬಿಡಬಾರದೆಂದು ನಿಶ್ಚಯಿಸಿದವನ ಹಾಗೆ ಅಂದು ಜುಂಜಸ್ವಾಮಿ ರಾತ್ರಿ ಕುಡಿದು ರಸ್ತೆಯಲ್ಲಿ ತೂರಾಡುತ್ತಾ ಬರುವಾಗ ನಾಲ್ಕು ಜನರನ್ನು ಬಿಡಿಸಿ ಚೆನ್ನಾಗಿ ಹೊಡೆಸಿದ. ಕೈಕಾಲು ಮುರಿಯುವಂತೆ ಹೊಡೆಸಿಕೊಂಡು ಬಂದ ಜುಂಜಸ್ವಾಮಿಗೆ ಮತ್ತಷ್ಟು ದ್ವೇಷ ಹೊಗೆಯಾಡಿತು. ಇಷ್ಟೇ ಆಗಿದ್ದರೆ ಆತ ಕೂಡ ಸುಮ್ಮನಾಗಿರುತ್ತಿದ್ದ. ಆದರೆ ಮುಂದೆ ನಡೆದ ಘಟನೆಯಿಂದ ಅವನಲ್ಲಿ ಇನ್ನಷ್ಟು ಆಕ್ರೋಶ ತುಂಬಿತು. ಅದೆಂದರೆ..
ಒಂದು ದಿನ ಬುಳ್ಳಪ್ಪ ಕೆರೆ ಪಕ್ಕದ ಜಮೀನಿಗೆ ಹೋಗಿ ವಾಪಾಸು ಬರುತ್ತಿರುವ ಹೊತ್ತಿಗೂ ಶಿವಮ್ಮ ಆಗಷ್ಟೇ ಕೆರೆಗೆ ಹೋಗಿ ಬಟ್ಟೆ ಒಗೆದು ಮೇಲೆ ಬಂದು ಇಬ್ಬರೂ ಎದುರಾಬದುರಾ ನಿಲ್ಲುವುದಕ್ಕೂ ಸರಿಹೋಯಿತು. ಶಿವಮ್ಮನನ್ನು ಕಂಡ ಕೂಡಲೇ ಬುಳ್ಳಪ್ಪನಿಗೆ ಸಿಟ್ಟು ನೆತ್ತಿಗೇರಿತು. `ನೀನು ಆ ಬೇವಸರ್ಿ ಮುಂಡೇ ಮಗನ ಯೇಣ್ತಿ ಅಲ್ವಾ? ಅವ ನನ್ನ ಮಗಳ ಕೈ ಹಿಡಿದೆಳೀತಾನೋ.. ಈಗ ತೋರುಸ್ತೀನಿ ಕರಾಮತ್ತಾ .. ‘ ಎಂದು ಶಿವಮ್ಮನ ಕೈ ಹಿಡಿದೆಳೆಯಲು ಹೋದ. ಅವನಿಂದ ತಪ್ಪಿಸಿಕೊಂಡ ಶಿವಮ್ಮ ಬಟ್ಟೆಯನ್ನೂ ಅಲ್ಲೇ ಕೆಡವಿ ಓಡಿದಳು. ಆದರೂ ಬಿಡದೇ ಬುಳ್ಳಪ್ಪ ಅವಳ ಸೀರೆ ಸೆರಗಿಗೇ ಕೈ ಹಾಕಿ ಎಳೆದ. ಹಾಗೇ ನಡೆದಿದ್ದರೆ ಬಹುಶಃ ಬುಳ್ಳಪ್ಪ ಶಿವಮ್ಮನ ಮೇಲೆ ಅತ್ಯಾಚಾರವನ್ನೇ ನಡೆಸುತ್ತಿದ್ದನೇನೊ… ಆದರೆ ಅಷ್ಟರಲ್ಲಿ ಊರಿನ ಒಂದಷ್ಟು ಪಡ್ಡೆ ಹೈಕಳು ಅಲ್ಲಿಗೆ ಜಮಾಯಿಸಿದ್ರು. ಅವರೆಲ್ಲ ಊರು ಸುತ್ತಿಕೊಂಡು ಕೆರೆಗೆ ಬರುವಷ್ಟರಲ್ಲಿ ಈ ಅದ್ವಾನವಾಗುತ್ತಿರುವುದನ್ನು ನೋಡಿ ಜೋರಾಗಿ ಕೂಗಿಕೊಂಡರು. ಇನ್ನು ತನ್ನ ಮಯರ್ಾದೆ ಹೋಗುತ್ತದೆಂದು ಹೆದರಿದ ಬುಳ್ಳಪ್ಪ ಶಿವಮ್ಮನನ್ನು ಬಿಟ್ಟುಬಿಟ್ಟ.
ಅಷ್ಟರಲ್ಲಿ ಇಡೀ ಊರತುಂಬ ಇದು ಸುದ್ದಿಯಾಗಿಬಿಟ್ಟಿತು. ಪಡ್ಡೆ ಹೈಕಳ ಕಣ್ಣಿಗೆ ಇವೆಲ್ಲ ಬಿದ್ದರೆ ಅವರು ಸುಮ್ಮನಿದ್ದಾರೆಯೇ? ಅವರು ಇದನ್ನು ಇನ್ನಷ್ಟು ರಂಜಿತವಾಗಿ ಹೇಳಿ ಚಪ್ಪರಿಸಿದರು. ಇವೆಲ್ಲವೂ ಜುಂಜಸ್ವಾಮಿಯ ಕಿವಿಗೂ ಬಿದ್ದು ಅವನು ಇನ್ನಷ್ಟು ಕೆಂಡಾಮಂಡಲವಾದ. ಅದುವರೆಗೆ ಜಮೀನು ಹೋಗುತ್ತದೆಯೆಂದಾಗಲೂ ಅಷ್ಟು ಆಕ್ರೋಶ ಅವನಲ್ಲಿರಲಿಲ್ಲ. ತಾನು ಬೇಕಾದಷ್ಟು ಹೆಣ್ಣುಗಳನ್ನು ಕೆಣಕಿ ಅವರಿಂದ ತನ್ನ ಚಟ ತೀರಿಸಿಕೊಂಡಿದ್ದರೂ ತನ್ನ ಹೆಂಡತಿಯನ್ನು ಕೆಣಕಿದ್ದು ಅವನಿಗೆ ತಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ. ಅದಕ್ಕೆ ಸೀದಾ ಹೋಗಿ ಬುಳ್ಳಪ್ಪನ ಹೊಲಕ್ಕೆ ಬೆಂಕಿ ಇಟ್ಟು ಬಂದು ಮನೆಗೆ ಬಂದು ಮಲಗಿಬಿಟ್ಟ. ಧಗಧಗ ಉರಿಯುತ್ತಿದ್ದ ಬೆಂಕಿಗೆ ಬೆಳೆದು ನಿಂತ ರಾಗಿ ಪೈರೆಲ್ಲ ಸುಟ್ಟು ಬೂದಿಯಾದರೆ ಬುಳ್ಳಪ್ಪನ ಎದೆ ಹೊತ್ತಿ ಉರಿಯತೊಡಗಿತು. ಹಾಗೇ ಹೊತ್ತಿ ಉರಿಯುತ್ತಿದ್ದ ಜುಂಜಸ್ವಾಮಿಯ ಎದೆಯ ಬೆಂಕಿ ಇನ್ನೂ ಆರಿರಲಿಲ್ಲ. ಅವನಿಗೆ ಬುಳ್ಳಪ್ಪ ಶಿವಮ್ಮನನ್ನು ಕೆಣಕಿದ್ದು ಇನ್ನೂ ಮರೆಯಲಾಗಿರಲಿಲ್ಲ.
ಅದಕ್ಕೆ ಸರಿಯಾಗಿ ಊರಿನ ಕೆಲವರು ಇವನೊಂದಿಗೆ ಸೇರಿ ಬುಳ್ಳಪ್ಪ ಶಿವಮ್ಮನನ್ನು ಅತ್ಯಾಚಾರ ಮಾಡಿದ, ಇನ್ನು ನೀನು ಅವಳೊಂದಿಗೆ ಹೇಗಿರುತ್ತೀಯಾ? ಎಂದೆಲ್ಲ ಹೇಳಿದ್ದು ಅವನ ಮನಸ್ಸಿನಲ್ಲಿ ಮೊಳೆ ಹೊಡೆದಂತೆ ಅಚ್ಚಾಗಿಬಿಟ್ಟಿತ್ತು. ಅಷ್ಟೊತ್ತಿಗೆ ಅವನಿಗೆ ಶಿವಮ್ಮನ ಸುಖವೂ ಸಾಕಾಗಿತ್ತು. ಇಲ್ಲಿಗೆ ಬಂದ ಮೇಲೆ ತನ್ನೆಲ್ಲ ಕನಸುಗಳನ್ನು ಬೂದಿಮಾಡಿ, ಸುಖ ಎಂದರೆ ಏನೂ ಇಲ್ಲ ಎಂಬ ಸಿದ್ಧಾಂತಕ್ಕೆ ಬದ್ಧಳಾಗಿದ್ದವಳಂತೆ ಇರುತ್ತಿದ್ದ ಶಿವಮ್ಮ ಮೂಳೆ ಚಕ್ಕಳವಾಗಿದ್ದಳು. ಹಾಗಾಗಿ ಅವಳಿಂದ ದೂರವೇ ಇರುತ್ತಿದ್ದ. ಜುಂಜಸ್ವಾಮಿ ಅಂದು ಮನೆಗೆ ಬಂದವನೇ ದೊಡ್ಡ ಗಲಾಟೆ ಮಾಡಿದ.
`ನೀನು ನಿನ್ನಪ್ಪನ ಮನೆಗೆ ನೆಡಿ, ನೀನು ಕೆಟ್ಹೋಗಿದೀಯ’ ಎಂದು ತಾಯಿ ಸಿದ್ದವ್ವನಿಗೂ `ನಿನ್ನ ಸೊಸೆಯನ್ನು ಹೋಗಾಕೆ ಹೇಳು, ಕೆಟ್ಹೋಗವ್ಳೆ ಅವಳು’ ಎಂದುಬಿಟ್ಟ. ಸಿದ್ದವ್ವನಿಗೂ ಇದು ಹೌದೆನಿಸಿ ಇಬ್ಬರೂ ಸೇರಿ ಶಿವಮ್ಮನನ್ನು ಮನೆಯಿಂದ ಹೊರಗೆ ಹಾಕಿಯೇ ಬಿಟ್ಟರು. ಸೀದಾ ಅಪ್ಪನ ಮನೆಗೆ ಬಂದ ಶಿವಮ್ಮ ನಿರುಮ್ಮಳಾದಳು.
ಊರಿನ ಕೆಲವು ಹೆಂಗಸರೂ, ಅಪ್ಪನ ಮನೆಯಲ್ಲಿ ಅಪ್ಪ-ಅಮ್ಮ ಹಾಗೂ ಆ ಊರಿನ ಕೆಲವರು ಶಿವಮ್ಮನ ಎದುರು ಜೋರು ಮಾತಾಡಿ, `ಅದ್ಹೆಂಗೆ ಇವಳನ್ನು ಬಿಟ್ಟುಬಿಡುತ್ತಾನೆ ಅವ್ನು. ಇದು ಸಮ ಅಲ್ಲ, ಪಂಚಾಯ್ತಿ ಕರ್ಸೂವಾ.. ಅದಕ್ಕೂ ಬಗ್ಗಲಿಲ್ಲಾಂದ್ರೆ ಪೊಲೀಸ್ ತಾವ ಹೋಗೂವಾ’ ಎಂದೆಲ್ಲ ಮಾತನಾಡಿಕೊಂಡರು. ಆದರೆ ಶಿವಮ್ಮನಿಗೆ ಇದ್ಯಾವುದೂ ಬೇಕಾಗಿರಲಿಲ್ಲ. ದಿವಸಕ್ಕೆ 3-4 ಸಲ ಬಾ ಎಂದು ಹಾಸಿಗೆಗೆ ಕರೆಯುವ ಗಂಡ ಇಲ್ಲ, ಸದಾ ಕೊಟಗುಡುವ ಅತ್ತೆಯಿಲ್ಲ, ಪ್ರತಿದಿವಸವೂ ಗಂಡನ ವಿರುದ್ಧ ದೂರು ತೆಗೆದುಕೊಂಡು ಬರುವ ಊರವರಿಲ್ಲ. ಇದೇ ಈ ಎಲ್ಲ ನರಕಕ್ಕೆ ಮುಕ್ತಿ ಎಂಬಂತೆ `ಯಾವ ಪಂಚಾಯ್ತಿಯೂ ಬೇಡ, ಏನೂ ಬೇಡ, ಅಂಗೇನಾದ್ರೂ ಮಾಡ್ತೀರಾಂದ್ರೆ ನಾನು ನಿಮ್ಮೆದ್ರೇ ಸತ್ತೋಗ್ತೀನಿ’ ಎಂದು ಆಣೆ ತೆಗೆದುಕೊಂಡು ಅಲ್ಲಿಂದ ಹೊರಡುವಂತೆ ಹೊರಟಳು. ಎಲ್ಲರೂ ಸುಮ್ಮನಾದರು. ಅಪ್ಪ ಮಾತ್ರ ಇವಳನ್ನು ಮತ್ತೆ ತನ್ನ ತಲೆಗೇ ಕಟ್ಟಿದರಲ್ಲ ಎಂಬ ಚಿಂತೆಯಿಂದ ಮತ್ತಷ್ಟು ಕುಡಿದ. ಶಿವಮ್ಮ ಮಾತ್ರ ಎಲ್ಲ ಬಿಡುಗಡೆಗೂ ಇದೇ ಹಾದಿ ಎಂಬಂತೆ ಆರಾಮವಾಗಿದ್ದು ಬಿಟ್ಟಳು. ಇಂಥ ಆರಾಮವಿದ್ದ ದಿನಗಳಲ್ಲೇ ಅವಳಿಗೆ ಆ ಸುದ್ದಿ ಸಿಕ್ಕಿತು.
ಜುಂಜಸ್ವಾಮಿ ಬುಳ್ಳಪ್ಪನ ಮತ್ತೊಬ್ಬ ಮಗಳನ್ನು ಕೆಡಿಸಿ ಅವಳನ್ನು ಕೊಲೆ ಮಾಡಿದ್ದಾನೆಂದು…ಅದಕ್ಕಾಗಿ ಅವನನ್ನು ಜೈಲಿಗೆ ಹಾಕಿದ್ದಾರೆಂದು. ಅದರ ಕುರಿತಾಗಿ ಕೋಟರ್್ನಲ್ಲಿ ಕೇಸು ನಡೀತಿದೆ, ಸಾಕ್ಷಿ ಹೇಳಲು ಬರಬೇಕೆಂದು ಅವಳಿಗೆ ತಿಳಿಸಿದರು. ಜುಂಜಸ್ವಾಮಿ ತನ್ನ ಪಾಲಿಗಿಲ್ಲ ಎಂದು ಆರಾಮವಾಗಿದ್ದವಳಿಗೆ ಇದೆಲ್ಲ ಯಾಕೆಂದೆನಿಸಿ ಬರುವುದಿಲ್ಲ ಎಂದು ಬಿಟ್ಟಳು. `ಹಾಗೆ ಹೇಳಿದ್ರೆ ಆಗಲಿಲ್ಲ, ನೀನು ಅವನ ಹೆಂಡತಿ. ನಿನ್ನ ಕುತ್ತಿಗೆಲಿ ತಾಳಿ ಇದೆ. ಹಂಗಾಗಿ ನೀನು ಬಲರ್ೇ ಬೇಕು’ ಎಂದು ತಾಕೀತು ಮಾಡಿದರು ಸಿದ್ದವ್ವನ ಕಡೆಯವರು. ಇಲ್ಲಿ ಅಪ್ಪನ ಮನೆಯಲ್ಲೂ ಬುದ್ಧಿ ಹೇಳಿ ಅವಳನ್ನು ಕಳುಹಿಸಿಕೊಟ್ಟರು. ಕೊನೆಗೂ ಗಂಡ ಎಂಬ ಭಾವನೆಯೇ ಈ ಸಮಾಜದಲ್ಲಿ ನಡೆಯುತ್ತದಲ್ಲ, ಹಾಗೆ ಆಯಿತು ಶಿವಮ್ಮನ ಬದುಕಿನಲ್ಲೂ.
ಹಾಗೆ ಬಂದ ಶಿವಮ್ಮ ಮತ್ತೆ ಎಲ್ಲಿಗೂ ಹೋಗಲಿಲ್ಲ. ಸುಮಾರು ವರ್ಷಗಳ ಕಾಲ ಕೇಸು ಎಳೆಯಿತು. ಪೊಲೀಸು ಕೋಟರ್ು, ಲಾಯರ್ಗಳು ಎಂದು ಆಗೀಗ ಚಾಮರಾಜ ನಗರ, ಮೈಸೂರು, ಬೆಂಗಳೂರು ಎಂದೆಲ್ಲ ಸುತ್ತಿ ಬಂದದ್ದಾಯಿತು. ಎಲ್ಲಿಯೂ ಗಂಡನ ಪರ ನಿರ್ಣಯ ಸಿಗಲಿಲ್ಲ. ಅವನ ಪರ ನಿರ್ಣಯ ಬರಬೇಕೆಂಬ ಆಸೆಯಲ್ಲಿ ಶಿವಮ್ಮನೂ ಇರಲಿಲ್ಲ. ಆದರೂ ಅವಳು ಅಳುತ್ತಿದ್ದಳು. ಯಾರೇ ಕೇಳಿದ್ರೂ `ಇಲ್ಲ ನನ್ನ ಗಂಡ ಅಂಥವನಲ್ಲ. ಇದೆಲ್ಲ ಸುಳ್ಳು. ಆ ದಿನ ಅವನು ನಮ್ಮ ಊರಲ್ಲೇ ಇರಲಿಲ್ಲ. ನಾವಿಬ್ಬರೂ ನನ್ನ ತವರು ಮನೆಗೆ ಹೋಗಿದ್ವಿ. ಅದ್ಹೇಗೆ ಅಲ್ಲಿಗೆ ಹೋಗುತ್ತಾನೆ. ಇಲ್ಲ ಸಾಧ್ಯವಿಲ್ಲ’ ಎಂದು ಯಾರೋ ಹೇಳಿಕೊಟ್ಟದ್ದನ್ನು ನೀಟಾಗಿ ಒಪ್ಪಿಸುತ್ತಿದ್ದಳು.
ಅವತ್ತು ಕೋರ್ಟ್ ನಲ್ಲಿ ಅವಳ ವಿಚಾರಣೆ ಇತ್ತು. ಅಲ್ಲಿ ನಿಂತು `ನನ್ನ ಗಂಡ ಈ ಕೃತ್ಯ ಮಾಡಿದ್ದಾನೆ. ಅವನು ದಿನವೂ ನನ್ನ ಮೇಲೂ ಅತ್ಯಾಚಾರ ಮಾಡುತ್ತಿದ್ದ’ ಎಂದು ಕೂಗಿ ಹೇಳಿಬಿಡಬೇಕೆಂದು ಬಾಯಿ ತುದಿವರೆಗೆ ಬಂದಿತ್ತು. ಆದರೆ ಎದುರಿಗೆ ಸಿದ್ದವ್ವ ಕುಳಿತಿದ್ದಳು. ಆಗಷ್ಟೇ ಸಿದ್ದವ್ವ ಬಂದು `ನನ್ನ ಮಗ ಹೀಗೆ ಮಾಡಲಿಲ್ಲ. ಅವನು ಒಳ್ಳೆಯವನು, ನನಗೆ ನನ್ನ ಮಗನನ್ನು ಬಿಡಿಸಿಕೊಡಿ. ಇಲ್ಲಿ ಜಾತಿ ಕೆಲಸ ಮಾಡಿದೆ. ಅವರು ಮೇಲ್ಜಾತಿಯವರು. ನಮ್ಮ ಜಮೀನನ್ನು ನುಂಗಿ ಹಾಕಲು ಹೀಗೆ ಮಾಡ್ತಿದ್ದಾರೆ. ಈಗ ಮಗನೂ ಹೋದ, ಜಮೀನೂ ಓಗ್ತದೆ. ಅಂಗಾಗಿ ನನ್ನ ಮಗನ್ನ ನನಗೆ ಬುಡ್ಸಿಕೊಡಿ ದ್ಯಾವ್ರೂ..ನಿಮ್ಮ ಪಾದ ತೊಳ್ಕಂಡಿರ್ತೀನಿ..’ಎಂದು ಜೋರಾಗಿ ಅಳುತ್ತಾ ಕಿರುಚುತ್ತಾ ಹೇಳಿದಳು ಸಿದ್ದವ್ವ.
ಇವನ್ನೆಲ್ಲ ಕೇಳಿದ ಶಿವಮ್ಮ ನಿಜವನ್ನೇ ಹೇಳಬೇಕು, ಅವನನ್ನು ಬಿಡಬೇಡಿ ಎಂದು ಹೇಳಬೇಕೆನಿಸಿದರೂ ಅವಳಪ್ಪ , ಅಮ್ಮ, ಸಿದ್ದವ್ವ, ಅವಳಣ್ಣ ಎಲ್ಲರೂ ಎದುರಿಗೆ ಕುಳಿತಿದ್ದರು. ಎ ಲ್ಲರ ಮುಖದಲ್ಲೂ ನಿರೀಕ್ಷೆ, ಜುಂಜಸ್ವಾಮಿ ಬಿಡುಗಡೆ ಆಗಲಿ ಎಂಬ ಮಹದಾಸೆ. ಅವರ ಕಡೆ ಲಾಯರ್ ಎದುರಿಗೆ ಬಂದು ಪ್ರಶ್ನಿಸುತ್ತಿದ್ದ. `ನೀನೇನಾಗಬೇಕು ಜುಂಜಸ್ವಾಮಿಗೆ, ಘಟನೆ ನಡೆದ ದಿವಸ ನೀನೆಲ್ಲಿದ್ದೆ, ಮದುವೆಯಾಗಿ ಎಷ್ಟು ದಿವಸ ಆಯ್ತು… ಮಕ್ಕಳೆಷ್ಟು…’ ಇತ್ಯಾದಿ ಇತ್ಯಾದಿ ಕೇಳುತ್ತಲೇ ಇದ್ದ. `ಇಲ್ಲ ನನ್ನ ಗಂಡ ಹಾಗೆ ಮಾಡಲಿಲ್ಲ. ಅವರಂಥವರಲ್ಲ. ನನಗೆ ಮಕ್ಕಳಿಲ್ಲ. ಅವತ್ತು ಅವನು ನನ್ನಪ್ಪನ ಮನೆಯಲ್ಲೇ ಇದ್ದ. ನಾನು ಅವನಿಗೆ ಉಣಾಕಿಕ್ತಾ ಇದ್ದೆ’ ಎಂದು ಅವಳ ಬಾಯಿಯಿಂದ ಮಾತು ಹೊರಟಿತು. `ನಮ್ಮ ಜಾತೀಲಿ ಇನ್ನೊಂದು ಮದುವೆ ಮಾಡೋ ಹಾಗಿಲ್ಲ. ಗಂಡ ತೀರ್ಕಂಡ್ರೆ, ಬಿಟ್ಹೋದ್ರೆ ಇನ್ನೊಂದು ಮದುವೆ ಮಾಡಾಂಗಿಲ್ಲ. ನಂಗೆ ಮಾಂಗಲ್ಯ ಭಿಕ್ಷೆ ಕೊಡ್ಸೀ.. ‘ ಎಂದು ನ್ಯಾಯಾಧೀಶರಿಗೆ ಅತ್ತುಕೊಂಡು ಹೇಳಿದಳು. ಹೀಗೆ ಹೇಳುತ್ತಾ ಹೇಳುತ್ತಾ 8 ವರ್ಷ ಕಳೀತು. ಶಿವಮ್ಮನಿಗೂ ಇವೆಲ್ಲ ಮಾಮೂಲಾಗಿಬಿಟ್ಟಿತು. ಸಿದ್ದವ್ವ ಮಗನ ನಿರೀಕ್ಷೆಯಲ್ಲಿಯೇ ಕಾಲ ಕಳೆಯತೊಡಗಿದಳು. ಆದರೆ ಜುಂಜಸ್ವಾಮಿಯ ಬಿಡುಗಡೆ ಆಗಲಿಲ್ಲ.
ಅವನು ಮಾಡಿದ್ದು ಅಂತಿಂಥ ಕೊಲೆಯಲ್ಲ. ಬುಳ್ಳಪ್ಪನ ಮಗಳನ್ನು ಅತ್ಯಾಚಾರ ಮಾಡಿದ್ದಲ್ಲದೇ ಅಲ್ಲಲ್ಲಿ ಕಚ್ಚಿ ಕಚ್ಚಿ ತುಂಡು ಮಾಡಿದ್ದ. ಅಂಥವನನ್ನು ಬಿಡಲು ಹೇಗೆ ಸಾಧ್ಯ? ಅಲ್ಲದೇ ಬುಳ್ಳಪ್ಪನ ಕಡೆಯವರು ಹೆಚ್ಚು ಬಲವುಳ್ಳವರು. ದುಡ್ಡು ಕಾಸೂ ಇರುವವರಲ್ಲದೇ ಊರಿನ ಪುಡಿ ರಾಜಕಾರಣಿಯ ಸ್ನೇಹವೂ ಅವನಿಗಿತ್ತು. ಈ ಎಲ್ಲ ಬೆಂಬಲ ಇರುವ ಮನುಷ್ಯ ಮಗಳನ್ನು ಕಳೆದುಕೊಂಡ ದುಃಖವನ್ನು ಸುಮ್ಮಸುಮ್ಮನೆ ಬಿಟ್ಟಾನೆಯೇ? ಇದರ ಜೊತೆಗೆ ಅವನ ಹುಟ್ಟಡಗಿಸಿದರೆ ಅವನ ಜಮೀನನ್ನು ನುಂಗಬಹುದೆಂಬ ಚಿಕ್ಕ ದುರಾಸೆಯೂ ಇತ್ತು. ಅವನೇ ಹೋಗಿಬಿಟ್ಟರೆ ಈ ಹೆಣ್ಣ ಐಕಳು ಏನು ಮಾಡಿಯಾರೆಂಬ ಅಸಡ್ಡೆಯೂ ಇತ್ತು. ಜುಂಜಸ್ವಾಮಿಗೆ ಮರಣದಂಡನೆ ಶಿಕ್ಷೆ ಕೊಡಲೇ ಬೇಕೆಂಬ ಅವನ ಒತ್ತಾಯಕ್ಕೆ ಈ ಎಲ್ಲ ಕಾರಣಗಳೂ ಸೇರಿಕೊಂಡಿದ್ದವು. ಆದರೆ ಶಿವಮ್ಮನಿಗಿರುವ ಸಂಕಟ ಅದಲ್ಲ. ಅವಳಿಗೆ ಈಗ ಸುಲಭಕ್ಕೆ ಈ ಬಂಧ ಬಿಡುವ ಹಾಗಿರಲಿಲ್ಲ. ಜುಂಜಸ್ವಾಮಿಗೆ ಮರಣದಂಡನೆಯೇ ಆಗಬಹುದು ಅಥವಾ ಜೀವಾವಧಿಯೇ ಆಗಬಹುದು. ಆದರೆ ಮುಂದೆ ತನ್ನ ಜೀವನದ ಗತಿ?
ಸಿದ್ದವ್ವ ಅವಳೆಲ್ಲಿಗೂ ಹೋಗಕೂಡದೆಂದು ಮಾತು ತೆಗೆದುಕೊಂಡಿದ್ದಳು. ಶಿವಮ್ಮ ಅಪ್ಪನ ಮನೆಗೆ ಹೋಗಿಬಿಟ್ಟರೆ ಇಲ್ಲಿ ತನ್ನ ಗತಿ ಎಂಬ ಭಯ ಅವಳನ್ನು ಕಾಡುತ್ತಿತ್ತು. ತುಂಡು ಜಮೀನನ್ನು ಉಳಿಸಿಕೊಳ್ಳಬೇಕಿತ್ತು. ಇದಕ್ಕಾಗಿಯಾದರೂ ಶಿವಮ್ಮ ಅವಳಿಗೆ ಬೇಕೇ ಬೇಕಾಗಿತ್ತು. ಹಾಗಾಗಿ ಶಿವಮ್ಮನನ್ನು ಸಿದ್ದವ್ವ ಬಿಡಲು ತಯಾರಿರಲಿಲ್ಲ. ಜುಂಜಸ್ವಾಮಿ ಜೈಲಿಗೆ ಹೋದಾಗಿನಿಂದ ಊರಿನಲ್ಲಿ ಅವರ ಬದುಕು ದುಸ್ತರವಾಗಿತ್ತು. ಊರಿನ ಯಾರೊಬ್ಬರೂ ಅವರನ್ನು ಮಾತನಾಡಿಸುತ್ತಿರಲಿಲ್ಲ. ಎಲ್ಲರಿಗೂ ಬುಳ್ಳಪ್ಪನ ಕುಟುಂಬದ ಮೇಲೆಯೇ ಹೆಚ್ಚು ಕನಿಕರ. ಮಗಳು ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಾಳೆ. ಹಾಗಾಗಿ ಅವರ ಮೇಲೆ ಹೆಚ್ಚು ಕನಿಕರ. ಇಂಥ ಕೆಲಸ ಮಾಡಿದ್ದಾನೆಂದು ಜುಂಜಸ್ವಾಮಿ ಕುಟುಂಬದ ಮೇಲೆ ಎಲ್ಲರಿಗೂ ಸಿಟ್ಟಿತ್ತು. ಇದರಿಂದಾಗಿ ಅವರನ್ನು ಆ ಊರಿನಿಂದಲೇ ಬಹಿಷ್ಕಾರ ಹಾಕಿದ್ದರು. ಅವರಿಗೆ ಕೂಲಿ ಕೂಡ ಆ ಊರಿನಲ್ಲಿ ಸಿಗುತ್ತಿರಲಿಲ್ಲ. ಹಾಗಾಗಿ ಪಕ್ಕದ ಊರಿಗೆ ಕೂಲಿಗೆಂದು ಹೋಗುತ್ತಿದ್ಧಳು ಶಿವಮ್ಮ.
ಈ ಎಲ್ಲ ಕಾರಣಗಳಿಗಾಗಿ ಜುಂಜಸ್ವಾಮಿಯ ಬಿಡುಗಡೆ ಅವಳಿಗೂ ಮುಖ್ಯವಾಗಿತ್ತು. ಇಂಥ ಹೊತ್ತಲ್ಲಿಯೇ ಅಣ್ಣ ನಂಜಪ್ಪ ಬಂದು ಜುಂಜಸ್ವಾಮಿಗೆ ಗಲ್ಲು ಎಂದದ್ದು ಅವಳಿಗೆ ಆಧಾರವಿಲ್ಲದಂತೆನಿಸಿತು. ಮುಂದೇನು ಎಂದು ಯೋಚಿಸಲೂ ಆಗದಷ್ಟು ಅವಳಿಗೆ ಶೂನ್ಯ ಆವರಿಸಿತ್ತು.
ಏನೇ ಆದರೂ ಬದುಕು ನಿಲ್ಲುವುದಿಲ್ಲವಲ್ಲ. ತೀರ್ಪಿನ ನಂತರ ಅವನನ್ನು ನೋಡಲು ಜೈಲಿಗೆ ಹೋಗಲಿಲ್ಲ. ತುಂಬ ನಿರ್ಲಿಪ್ತವಾಗಿರುತ್ತಿದ್ದಳು. ಹೀಗಿರುವಾಗಲೇ ಒಂದು ಘಟನೆ ನಡೆದು ಹೋಯಿತು. ಅದು ಅವನ ಪ್ರವೇಶದಿಂದಾಗಿ. ಎಲ್ಲ ಕನಸುಗಳು ಸತ್ತ ಸಮಯದಲ್ಲಿ, ಜೀವನವೇ ಬೇಡ ಎಂದು ಅಂದುಕೊಂಡ ಹೊತ್ತಿನಲ್ಲಿ, ಜುಂಜ ಸ್ವಾಮಿಗೆ ಗಲ್ಲು ಶಿಕ್ಷೆ ವಿಧಿಸಿದ ಹೊತ್ತಿನಲ್ಲಿ, ಬದುಕೆಂದರೆ ಇನ್ನು ಅತ್ತೆ ಮತ್ತು ತನ್ನ ಹೊಟ್ಟೆಗಾಗಿ ಮಾತ್ರ ಎಂದುಕೊಂಡ ಹೊತ್ತಿನಲ್ಲಿ.
ಶಿವಮ್ಮನ ಬದುಕಿನಲ್ಲಿ ಅವನ ಪ್ರವೇಶ ಒಂದು ಆಕಸ್ಮಿಕವಾಗಿತ್ತು. ಶಿವಮ್ಮ ಊರಿನಲ್ಲಿ ಕೂಲಿ ಸಿಗುತ್ತಿರಲಿಲ್ಲವೆಂದು ಪಕ್ಕದೂರಿಗೆ ಕೂಲಿಗೆ ಹೋಗುತ್ತಿದ್ದಳು. ಹಾಗೆ ಹೋಗಿ ಬಂದು ಮಾಡುವಾಗ ಅವನ ಪರಿಚಯವಾಯಿತು. ಅವನ ಹೆಸರು ರಾಮನಾಥ. ನೋಡಲು ತಕ್ಕಮಟ್ಟಿಗಿದ್ದ. ಓದಿಕೊಂಡಿದ್ದ. ರಾಜಕೀಯ, ಸಮಾಜ ಸೇವೆ ಎಂದು ಅಲ್ಲಿ ಇಲ್ಲಿ ಓಡಾಡುತ್ತಿದ್ದ. ಅವನನ್ನು ಹಿಡಿದರೆ ಎಲ್ಲಿಯಾದರೂ ಕೆಲಸ ಸಿಗಬಹುದು, ಯಾವುದಾದರೂ ಸಂಘ ಸಂಸ್ಥೆಗಳಿಗೆ ಅವನು ಸೇರಿಸಬಹುದು ಎಂದು ಯಾರೋ ಹೇಳಿದರು. ಆಗ ಶಿವಮ್ಮ ಅವನನ್ನು ನೋಡಲು ಹೋಗಿದ್ದಳು. ಹೀಗೆ ಇಬ್ಬರಿಗೂ ಪರಿಚಯವಾಯಿತು. ಶಿವಮ್ಮನ ಕತೆ ಕೇಳಿ ಅವನೂ ಕರಗಿದ. ಅಲ್ಲಿ ಇಲ್ಲಿ ಕೆಲಸ ಕೊಡಿಸುತ್ತೇನೆಂದು ಆಗಾಗ ಅವನು ಅವಳನ್ನು ಕರೆದುಕೊಂಡು ಸಿಟಿ ಓಡಾಡತೊಡಗಿದ. ಹೀಗೆ ಪರಿಚಯವಾದ ಅವರಿಬ್ಬರೂ ತುಂಬ ಹತ್ತಿರವಾದರು. ಅವತ್ತು ಅವಳ ಜೀವನದ ಮರೆಯಲಾರದ ಘಟನೆ. ಅವತ್ತು ಇಬ್ಬರೂ ಮೈಸೂರು ರೈಲ್ವೇ ಸ್ಟೇಷನ್ನಲ್ಲಿ ಕುಳಿತಿದ್ದರು. ತನ್ನ ಕೆಲಸದ ಬಗ್ಗೆಯೇ ಯೋಚಿಸುತ್ತಿದ್ದಳು ಶಿವಮ್ಮ. ಆದರೆ ಪಕ್ಕದಲ್ಲಿ ಕುಳಿತ ರಾಮನಾಥನ ಸನಿಹ ಅವಳಿಗೆ ಅಪ್ಯಾಯಮಾನವಾಗಿತ್ತು. ಆಗಲೇ ಅವನು ಅವಳ ಕೈ ಹಿಡಿದು ಹೇಳಿದ, `ನಿನ್ನ ಜೊತ ನಾನಿದ್ದೇನೆ, ನಿನಗೆ ಖಂಡಿತ ಕೆಲಸ ಕೊಡಿಸುತ್ತೇನೆ’ ಎಂದು. ಅವನ ಆ ಒಂದು ಸ್ಪರ್ಶಕ್ಕೇ ಅವಳ ಮೈ ಝಂ ಎಂದಿತು. ಅವನ ಮೃದು ಮಾತು, ನಸುನಗೆ, ಇವೆಲ್ಲವೂ ಅವಳಲ್ಲಿ ಹೊಸ ಅನುಭವವನ್ನು ಸೃಷ್ಟಿಸಿದವು. ಮತ್ತೆ ಅವಳಿಗೆ ತಾನು ಕಂಡ ಟೆಂಟ್ ಸಿನಿಮಾಗಳು ನೆನಪಾದವು. ಕಣ್ಣುತುಂಬಾ ಕನಸುಗಳನ್ನುಕ್ಕಿಸುವ ಅಪ್ಪನ ಮನೆಯ ಪಕ್ಕದ ಮನೆಯ ಪಾರ್ವತಿ ನೆನಪಾದಳು. ತನಗೆ ಜುಂಜಸ್ವಾಮಿಯ ಜೊತೆ ಮದುವೆಯೇ ಆಗಿರದಿದ್ದರೆ ಎಷ್ಟು ಚೆಂದಿತ್ತು ಎಂದೂ ಅಂದುಕೊಂಡಳು. ಇದರ ಲ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಜಗತ್ತನ್ನೇ ಮರೆತು ಓಡಾಡುತ್ತಿದ್ದ ಇವರಿಬ್ಬರನ್ನು ಊರು ನಿಂತು ನೋಡಿತು. ಶಿವಮ್ಮನಿಗೆ ಹಿಡಿಶಾಪ ಹಾಕಿದರು. ಅತ್ತೆ ಸಿದ್ದವ್ವನಿಗೂ ಇದು ತಿಳಿಯಿತು. ಸಿಟ್ಟು ಬಂತು. ಶಿವಮ್ಮನಿಗೆ ಹಿಡಿ ಶಾಪ ಹಾಕಿದ್ದಲ್ಲದೇ ಮನೆಯಿಂದ ಹೊರಗಟ್ಟುತ್ತೇನೆಂದು ಹೆದರಿಸಿದಳು.
ಅವತ್ತು ನಡೆದ ಪಂಚಾಯ್ತಿಯಲ್ಲಿ ಊರಿನ ಜನರೆಲ್ಲ ನಡೆದುಕೊಂಡ ರೀತಿಗೆ ಶಿವಮ್ಮನಿಗೆ ಅವರೆಲ್ಲರ ಮೇಲೆ ಅಸಹ್ಯವುಂಟಾಯಿತು.
ಊರಿನ ಮುಖಂಡ ಕೇಳುತ್ತಾನೆ,
ಏನಮ್ಮ, ನಿನ್ನ ಗಂಡ ಅಲ್ಲಿ ಜೈಲಲ್ಲಿದ್ದಾನೆ. ಅವನಿಗೆ ಗಲ್ಲು ಶಿಕ್ಷೆ ಯಾಗಿದೆ, ನಿಂಗೇನೂ ಅನಿಸೋದೇ ಇಲ್ಲವಾ? ಇಲ್ಲಿ ಯಾವನ್ದೋ ಜೊತೆ ಚಕ್ಕಂದ ಆಡ್ತಾಯಿದಿಯಲ್ಲ, ನೀನೆಂಥ ಹೆಂಡ್ತಿ? ದೇವ್ರು ಮೆಚ್ತಾನಾ ಎಂದು ಜೋರು ಮಾಡಿದ.
ಶಿವಮ್ಮನಿಗೆ ಒಳಗೊಳಗೇ ರೋಷವುಕ್ಕುತ್ತಿತ್ತು. ಅದುವರೆಗೆ ತನ್ನ ಗಂಡ ತನ್ನೊಡನೆ ನಡೆದುಕೊಂಡ ರೀತಿ ಯಾರಿಗೂ ಕಾಣ್ಸೋದೇ ಇಲ್ಲವಾ? ಒಂದು ರೀತಿಯಲ್ಲಿ ಅವನೇ ನನಗೆ ಗಲ್ಲು ಕೊಟ್ಹಾಂಗಲ್ಲವಾ? ಎಂದು ಕೇಳಬೇಕೆನಿಸಿದರೂ ಮೂಕಿಯಂತೆ ನಿಂತಿದ್ದಳು.
`ಅದೇನ್ ಬಾಯೇ ಬರಾಕಿಲ್ಲವಾ ನಿಂಗೆ. ಅಂಥ ಸೀತಾಮಾತೆ ಏಟು ಕಷ್ಟ ಪಟ್ಟಳು, ಅವಳಂಥ ಮಾತೆ ಇದ್ದಂಥ ದೇಸ ನಮ್ದು. ನಿನ್ನಂಥವಳೂ ಇದ್ದಾಳಾ’ ಎಂದು ಮುಖಂಡ ಜೋರು ಮಾಡಿದ. ಹೀಗೆ ಮುಖಂಡನ ಮಾತು, ಅಲ್ಲಿ ನೆರೆದಿದ್ದವರ ಮಾತುಗಳೆಲ್ಲವುಗಳಿಗೂ ಶಿವಮ್ಮ ಕಿವುಡಿಯಾಗಿಯೇ ನಿಂತಿದ್ದಳು.
ಎಲ್ಲರೂ ಶಿವಮ್ಮನಿಗೆ ಛೀಮಾರಿ ಹಾಕಿದರು. ಗಂಡ ಜೈಲಲ್ಲಿರುವಾಗ ಶಿವಮ್ಮ ಯಾರದ್ದೋ ಜೊತೆ ಚಕ್ಕಂದ ಆಡಿದ್ದು ಮಹಾಪರಾಧವಾಗಿತ್ತು. ಅದು ಜುಂಜಸ್ವಾಮಿ ಮಾಡಿದ ಅಪರಾಧಕ್ಕಿಂತಲೂ ಘೋರ ಅಪರಾಧವಾಗಿತ್ತು ಅವರ ದೃಷ್ಟಿಯಲ್ಲಿ. ಹಾಗಾಗಿ ಯಾವ ಕಾರಣಕ್ಕೂ ಅವರು ಶಿವಮ್ಮನನ್ನು ಕ್ಷಮಿಸಲು ಸಿದ್ಧವಿರಲೇ ಇಲ್ಲ. ಹಾಗಾಗಿ ಮನೆಯಿಂದ, ಊರಿಂದ ಬಹಿಷ್ಕರಿಸ ಬೇಕು ಎಂದರು. ಯಾರಿಲ್ಲದಿದ್ದರೇನಂತೆ, ಅವನಿದ್ದಾನೆಂಬ ಬಲವಾದ ನಂಬಿಕೆ ಅವಳನ್ನು ಎಲ್ಲ ತಿರಸ್ಕಾರಗಳ ನಡುವೆಯೂ ಗಟ್ಟಿಯಾಗಿಸುತ್ತಿತ್ತು.
ಆದರೆ ಶಿವಮ್ಮನ ಈ ಪಂಚಾಯ್ತಿ ವಿಷಯ ರಾಮನಾಥನವರೆಗೂ ತಲುಪಿತ್ತು. ಅವತ್ತು ಅವನ ಕಚೇರಿಗೆ ಬಂದ ಶಿವಮ್ಮನನ್ನು ಕೂರಿಸಿ ಮಾತನಾಡಿಸಿದ ರಾಮನಾಥ ಅವಳಿಗೆ ಸಮಾಧಾನ ಮಾಡಿದ. ಎಲ್ಲ ಸರಿಹೋಗುತ್ತದೆ, ನಾನಿದ್ದೇನೆಂದು ಕೈಮೇಲೆ ಕೈ ಇಟ್ಟು ಹೇಳಿದ. ತಾನು ಬಸುರಿಯಾಗಿರುವ ವಿಷಯ, ನಿನ್ನನ್ನೇ ನಂಬಿಕೊಂಡಿದ್ದೇನೆಂದು ಶಿವಮ್ಮನೂ ಹೇಳಿದಳು. ಎಲ್ಲವೂ ಸರಿಹೋಗುತ್ತದೆಂದು ಪ್ರೀತಿಯಿಂದಲೇ ಮಾತನಾಡಿದ ರಾಮನಾಥ. ಗಟ್ಟಿ ಭರವಸೆಯೊಂದಿಗೆ ಶಿವಮ್ಮ ಅಂದು ತನ್ನ ತವರು ಮನೆಗೆ ಹೋದಳು. ಅಲ್ಲಿಯೂ ಎಲ್ಲರೂ ಬೈಯ್ದರು. ಅಪ್ಪ ಅಮ್ಮ ಎಲ್ಲರೂ ನಿನ್ನಂಥ ಹಾದರಗಿತ್ತಿ ಇರುವುದರ ಬದಲು ಸಾಯೋದೇ ಮೇಲು. ನಿನ್ನ ಗಂಡನಿಗೆ ಗಲ್ಲು ಶಿಕ್ಷೆ ಕೊಡೋದ್ರ ಬದಲು ನಿಂಗೇ ಗಲ್ಲು ಶಿಕ್ಷೆ ಕೊಡಬಹುದಿತ್ತು ಎಂದು ಅಪ್ಪ ಕೂಗಾಡಿದ. ಅಮ್ಮ ಹೊಡೆದಳು. ಅಣ್ಣ ಇವಳ ಮುಖವನ್ನೂ ನೋಡಲಿಲ್ಲ. ಗಂಡ ಅಲ್ಲಿ ಸಾಯುತ್ತಾ ಬಿದ್ದಿದ್ದಾನೆ. ಅವನಿಗಿಂತ ನಿನಗೆ ನಿನ್ನ ತೀಟೆ ಹೆಚ್ಚಾಯ್ತಾ ಎಂದು ಬಯ್ದ ರು. ಮನೆಗೆ ಯಾರೂ ಅವಳನ್ನ್ನ ಸೇರಿಸಲಿಲ್ಲ. ಅಲ್ಲಿಯೇ ಊರ ದೇವಸ್ಥಾನದ ಕಟ್ಟೆಯ ಮೇಲೆ ಮಲಗೆದ್ದ ಶಿವಮ್ಮ ಮಾರನೇ ದಿನ ಮತ್ತೆ ರಾಮನಾಥನಿರುವಲ್ಲಿಗೆ ಬಂದಳು. ಆದರೆ ರಾಮನಾಥನ ಕಚೇರಿಗೆ ಬೀಗ ಹಾಕಲಾಗಿತ್ತು. ಬೀಗ ನೋಡಿ ಮನೆಗೆ ಬಂದಳು.
ಹಾಗೆ ಬಂದವಳುರಾಮನಾಥನಿಗಾಗಿ ಕಾದಳು. ಆದರೆ ರಾಮನಾಥನ ಸುಳಿವೇ ಇರಲಿಲ್ಲ. ಸುಮಾರು ಬಾರಿ ಅವನ ಕಚೇರಿ ಬಳಿ ಹೋದಳು. ಕಚೇರಿಯಲ್ಲಿ ಎಲ್ಲರೂ ವ್ಯಂಗ್ಯವಾಗಿ ಮಾತನಾಡಿದರು. ಅವ ಬರಲೇ ಇಲ್ಲ. ಇತ್ತ ಅವನಿಟ್ಟ ಲ ದೊಡ್ಡದಾಗುತ್ತಿತ್ತು. ಆ ಫಲವನ್ನು ಹೊತ್ತೇ ಅವಳು ಕೂಲಿಗೆ ಹೋಗುತ್ತಿದ್ದಳು. ಒಂದು ದಿನ ಕೂಲಿ ಮುಗಿಸಿಕೊಂಡು ಬರುವಷ್ಟರಲ್ಲಿ ಅವಳ ಗುಡಿಸಲಿಗೆ ಯಾರೋ ಬೆಂಕಿ ಹಚ್ಚಿದ್ದರು. ಕಿರುಚಿಕೊಂಡು ಓಡಿದಳು. . ಹೋಗುವಷ್ಟರಲ್ಲಿ ಗುಡಿಸಲು ಉರಿಯುತ್ತಿತ್ತು. ಸಿದ್ದವ್ವ ತಲೆ ತಲೆ ಬಡಿದುಕೊಂಡಳು. ಶಿವಮ್ಮನ ಎದೆಯೂ ಧಗಧಗನೆ ಉರಿಯತೊಡಗಿತು. ಮೆಲ್ಲಗೆ ಒದೆಯುತ್ತಿದ್ದ ಪಿಂಡದ ಮೇಲೆಯೂ ಮಮತೆ ಉಕ್ಕಲಿಲ್ಲ. ಸುತ್ತಲೂ ನೋಡಿದಳು. ಮನೆಯಿಲ್ಲ, ಜಮೀನು ನಂದೇ ಎಂದು ಹಕ್ಕಿನಿಂದ ಕೇಳುವ, ಜಗಳವಾಡುವ ಗಂಡ ಜುಂಜಸ್ವಾಮಿಯಿಲ್ಲ. ಪ್ರೀತಿಯ ಮಳೆಯನ್ನೇ ಸುರಿಸಿದ ರಾಮನಾಥನಿಲ್ಲ. ಅತ್ತೆ ಸಿದ್ದವ್ವ ಕೂತು ಬೋರೆಂದು ಅಳುತ್ತಿದ್ದಳು. ಹೊಟ್ಟೆಯಲ್ಲಿರುವ ಪಿಂಡ ದೊಡ್ಡದಾಗುತ್ತಾ ಬಂದು ಅವಳನ್ನೇ ಸುತ್ತಿ, ಅವಳ ಕುತ್ತಿಗೆಯನ್ನು ಸುತ್ತಿ ಕತ್ತು ಹಿಸುಕಿ ಗಹಗಹಿಸಿ ನಗುತ್ತಿದ್ದಂತೆ ಭಾಸವಾಗುತ್ತಿತ್ತು.
ಅವಳಿಗೆ ರೋಷ ಉಕ್ಕಿಬಂತು. ಜುಂಜಸ್ವಾಮಿ ಮೇಲೆ, ತನ್ನ ಪಿಂಡದ ಮೇಲೆ, ರಾಮನಾಥನ ಮೇಲೆ, ಕಡೆಗೆ ಈ ಇಡೀ ವ್ಯವಸ್ಥೆಯ ಮೇಲೆ. ಅವಳು ಸೀದಾ ಪೊಲೀಸ್ ಸ್ಟೇಷನ್ಗೆ ಹೋಗಿ ದೂರು ನೀಡಿದಳು. ಆ ದೂರಿನಲ್ಲಿ ಹೀಗಿತ್ತು.
ಜುಂಜಸ್ವಾಮಿ ನನ್ನ ಬದುಕನ್ನು ಹಾಳು ಮಾಡಿದ. ಹಾಗೆ ನನ್ನ ಮೇಲೆ ಪ್ರೀತಿಯ ಮಳೆಯನ್ನೇ ಹರಿಸಿದ ರಾಮನಾಥ ಕೂಡ ನನ್ನ ಬದುಕುನ್ನು ಹಾಳು ಮಾಡಿದ. ನನ್ನ ದೃಷ್ಟಿಯಲ್ಲಿ ಈ ಇಬ್ಬರೂ ಒಂದೇ ರೀತಿಯ ಅಪರಾಧಿಗಳು. ರಾಮನಾಥ ನನ್ನನ್ನು ನಂಬಿಸಿ ನನಗೆ ಮೋಸ ಮಾಡಿದವನು. ಒಂದು ರೀತಿಯಲ್ಲಿ ರಾಮನಾಥ ನನ್ನ ಬದುಕಿನ ಮೇಲೆಯೇ ಅತ್ಯಾಚಾರವೆಸಗಿದ್ದಾನೆ. ಅವನಿಂದಾಗಿ ನಾನು ಗರ್ಭಿಣಿಯಾಗಿದ್ದೇನೆ. ನನಗೀಗ ಮನೆಯಿಲ್ಲ, ಜಮೀನಿಲ್ಲ, ಹಣವಿಲ್ಲ. ಇಂಥ ಸಮಯದಲ್ಲಿ ಇವನ ಮಗುವನ್ನು ಹೊತ್ತು ನಾನೆಲ್ಲಿಗೆ ಹೋಗಲಿ. ಅವನಿಗೂ ಗಲ್ಲು ಶಿಕ್ಷೆಯನ್ನೇ ಕೊಡಿ.
ದೂರು ಕೊಟ್ಟು ಹೊರ ನಡೆದಳು ಶಿವಮ್ಮ.
 

‍ಲೇಖಕರು G

15 June, 2014

3 Comments

  1. Lakshmeesha j hegade

    Superb story by Bharati hegade,which reflects the current situation of many villages..

  2. soory hardalli

    chennagide

  3. Kiran

    A very good, well woven story.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading