ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾನುವಾರದ ಸಣ್ಣ ಕಥೆ

ಮನದ ಮರ

ಸಿದ್ದು ಸತ್ಯಣ್ಣವರ


ಸದಾ ಮಂಕು ಬಡಿದವನಂತಿರುತ್ತಿದ್ದ ತಿಮ್ಮಣ್ಣ ಈಚೆಗೆ ಕೆಲದಿನಗಳಿಂದ ತನ್ನ ಗುರುತು ತನಗೇ ಗೊತ್ತಿಲ್ಲದಂತಾಡುತ್ತಿದ್ದ. ದಾರಿ, ಮನೆ ಹೀಗೆ ಎಲ್ಲಾದರೂ ಇದ್ದಾಗ ಯಾರೋ ಯಾರನ್ನೋ ಕೂಗಿದರೆ ತಿಮ್ಮಣ್ಣ ಏನು ಎನ್ನುತ್ತಿದ್ದ, ಆತನ ಹುಬ್ಬು ಗಂಟಿಕ್ಕಿ ತಿರುಗಿ ಕೇಳಿದ್ದನ್ನು ಕಂಡು, ಕೂಗಿದವರು ನೀವಲ್ಲ ಎನ್ನುತ್ತಿದ್ದರು. ಈತ ಮತ್ತೆ ಅವರತ್ತ ಹೀ…. ಎಂದು ಹಲ್ಲು ಕಿಸಿದು ವಿಕ್ಷಿಪ್ತ ನಗೆಯನ್ನು ಮುಖದ ಮೇಲೆ ತರುತ್ತಿದ್ದ.
ಪಕ್ಕದ್ಮನೆ ಶ್ಯಾಮಣ್ಣನ ಪತ್ನಿ ಅವತ್ತು ಬೆಳಿಗ್ಗೆ ಎರಡು ಮೂರು ಸಾರಿ ಗಂಡನನ್ನು ತರಕಾರಿಯವನಿಗೆ, ದುಡ್ಡು ಕೊಡಲು ಕೂಗಿದಾಗಲೂ, ತಿಮ್ಮಣ್ಣ ಅವರ ಮನೆಯ ಕಂಪೌಂಡಿಗೆ ಹತ್ತಿಕೊಂಡೆ ನಿಂತಾಗಲೂ ‘ನಾನಾ, ನಾನಾ, ಕೂಗಿದ್ರಾ’ ಅಂತ ಅದೇ ವಿಕ್ಷಿಪ್ತ ನಗೆಯಲ್ಲಿ ಪ್ರಶ್ನಿಸಿದಾಗ ವೈಶಾಲಿಗೆ ರೇಗಿ ಹೋಗಿತ್ತು. ‘ಅನಿಷ್ಟ ಮುಂಡೇದು, ಬೆಳ್ ಬೆಳಗ್ಗೆ ಮುಖ ತೋರಿಸ್ತು,’ ಬೈದುಕೊಳ್ಳುತ್ತಲೆ ಒಳಗೆ ಹೋದವಳು ಗಂಡನ ಮೇಲೆ ಸಿಡಿಮಿಡಿಗುಟ್ಟಿದಳು. ಅವಳು ಬೈದದ್ದು ಕಿವಿಗೆ ಬಿದ್ದರೂ ಏನೂ ಆಗಿಲ್ಲವೆಂಬಂತೆ ತಿಮ್ಮಣ್ಣ ಬಾಲ್ಕನಿ ಹತ್ತಿರ ನಿಲ್ಲಲು ಹೊರಟ. ಒಂದರ್ಥದಲ್ಲಿ ನಿತ್ಯವು ಹೀಗೆ ಉಗಿಸಿಕೊಳ್ಳುವುದು ಆತನ ದೈನಂದಿನ ಜೀವನ ಕ್ರಮದ ಒಂದೇ ಭಾಗದಂತೆಯೇ ಆಗಿತ್ತು.
ತಿಮ್ಮಣ್ಣನ ಮನೆಯ ಮಂದೆ ಅವರಪ್ಪನ ಕಾಲಕ್ಕಿಂತಲೂ ಮುಂಚಿತವಾದ ದೊಡ್ಡ ಆಲದ ಮರವೊಂದಿತ್ತು. ನೆಲಕ್ಕೆ ಹತ್ತುವಂತೆ ಇಳಿಬಿದ್ದಿದ್ದ ಅದರ ಬಿಳಲುಗಳೇ ಆಯುಷ್ಯ ಸೂಚಿಸುವಂತಿದ್ದವು. ನಿತ್ಯವು ಆಲದ ಗಿಡ ಅನೇಕರ ಪಾಲಿಗೆ ಅವತ್ತಿನ ಅನ್ನಕ್ಕೆ ಕಾರಣವಾಗಿತ್ತು. ಎಗ್ಗ್ರೈಸ್ ಮಾರುವ ಬಿಸ್ಮಿಲ್ಲಾ, ಪೇರಲ ಮಾರುವ ಮಂಜ, ಮನೆಯಿಂದಲೆ ಮಾರಾಟಕ್ಕೆ ತಯಾರಿಸಿ ತಂದಿರುತ್ತಿದ್ದ ಭಜ್ಜಿಗಳೊಂದಿಗೆ ಹುಸೇನವ್ವ ಹಾಜರಾಗಿ ಬಿಡುತ್ತಿದ್ದರು. ಬೆಳಗ್ಗೆ ಹತ್ತರ ವೇಳೆಗೆ ಇವರೆಲ್ಲ ನವೋದಯ ನಗರ ಬಸ್ಸ್ಟಾಪ್ ಹತ್ತಿರದ ಖಾಯಂ ಜಾಗೆಯಲ್ಲಿ ಒಬ್ಬರ ಮುಖ ಒಬ್ಬರು ನೋಡಿಕೊಂಡೆ ವ್ಯಾಪಾರಕ್ಕಿಳಿಯುತ್ತಿದ್ದರು. ಅಲ್ಲಿ ಸಂಚರಿಸುವ ಬಸ್ಗಳೆಲ್ಲಾ ಆಲದ ಗಿಡದ ಬುಡದಲ್ಲೆ ನಿಲ್ಲುತ್ತಿದ್ದರಿಂದ ಅಲ್ಲೆ ಶಾಶ್ವತ ಬಸ್ನಿಲ್ದಾಣವಾಗಿ ಮಾಪರ್ಾಡಾಗಿತ್ತು. ಸೈಟ್ಗಳು ಎದ್ದಿದ್ದರಿಂದ ಹಾದಿಗಂಟಿಕೊಂಡಿದ್ದ ಈ ನಿಲ್ದಾಣ ಎಲ್ಲ ರೀತಿಯಿಂದಲೂ ಅಲ್ಲಿನ ನಿವಾಸಿಗಳಿಗೆ ಅನುಕೂಲಕರವಾಗಿತ್ತು.
ಅಲ್ಲಿಗೆ ಬಂದು ಹೋಗುವ ಸಿಟಿ ಬಸ್ಸುಗಳ ಮೇಲೆಲ್ಲಾ ಆಲದ ಮರದ ನೆರಳು ಮಟ್ಟಸವಾಗಿ ಬೀಳುತ್ತಿತ್ತು. ತಿಮ್ಮಣ್ಣನ ಮನೆ ಬಾಲ್ಕನೀಲಿ ನಿಂತರೆ ಆಲದ ಮರ ತೀರಾ ಸ್ಪಷ್ಠವಾಗಿ ಕಾಣುತ್ತಿತ್ತು. ಬಾಲ್ಕನೀಲಿ ಬಂದು ಹುಚ್ಚು ಏಕಾಂತವನೆಲ್ಲಾ ತನಗೆ ತಾನೇ ಭ್ರಮಿಸಿಕೊಂಡು ನಿಂತಾಗೆಲ್ಲಾ ತಿಮ್ಮಣ್ಣ ಬರೀ ಆಲದ ಮರವನ್ನೇ ದಿಟ್ಟಿಸುತ್ತಿದ್ದ. ಹುಸೇನವ್ವ, ಬಿಸ್ಮಿಲ್ಲಾ, ಮಂಜ, ಬಸ್ಸಿನ ಸಪ್ಪಳ ಇವ್ಯಾವುವು ಆತನ ಚಿತ್ತ ಕೆಡಿಸುತ್ತಿದ್ದಂತಿರಲಿಲ್ಲ. ಶಹರದಾಚೆ ಇದ್ದದ್ದರಿಂದ ಸಿಟಿಯ ಟ್ರಾಫಿಕ್ಕಿಗೆ ಹೋಲಿಸಿದರೆ ನವೋದಯ ನಗರ ತೀರಾ ಶಾಂತ ಶಾಂತ. ಈ ಕಾರಣಕ್ಕಾಗಿಯೆ ಸರಕಾರಿ ನಿವೃತ್ತ ನೌಕರರು, ಕೆಲವು ಖ್ಯಾತನಾಮ ಪ್ರೊಫೆಸರ್ಗಳು ಅಲ್ಲಿ ಇಷ್ಟಪಟ್ಟು ಮನೆಮಾಡಿಕೊಂಡಿದ್ದರು.
ತಿಮ್ಮಣ್ಣನ ಅಪ್ಪ ಮನೆಯಲ್ಲಿನ ಯಾವುದೋ ಕಲಹಕ್ಕೆ ಪಿತ್ರಾಜರ್ಿತ ಆಸ್ತಿಯನೆಲ್ಲಾ ಮಾರಿದ್ದ. ಬಂದ ದುಡ್ಡಲ್ಲಿ ಬಲು ಮೋಹದಿಂದ ಈ ಮನೆಯನ್ನು ಕೊಂಡಿದ್ದ. ಎರಡು ಸಂಸಾರಗಳು ಆರಾಮಾಗಿರಬಹುದಾದ ವಿಶಾಲ ಮನೆ ಅದು. ವಿದುರನಾಗಿದ್ದಾತನಿಗೆ ತಿಮ್ಮಣ್ಣ ಒಬ್ಬನೇ ಮಗ. ಆತ ತೀರಿಹೋದ ಆರು ತಿಂಗಳಿಂದೀಚಿಗೆ ತಿಮ್ಮಣ್ಣ ಮರದತ್ತಲೇ ದಿಟ್ಟಿಸುವುದನ್ನ ತನಗೆ ಗೊತ್ತಿಲ್ಲದೆ ರೂಢಿಸಿಕೊಂಡಂತಿದ್ದ. ಪ್ರೀತಿಯಿಂದ ಕಾಣುತ್ತಿದ್ದ ಅಪ್ಪನ ದುಃಖ ಒತ್ತರಿಸಿ ಬಂದಾಗೆಲ್ಲಾ ಆತ ಬಾಲ್ಕನಿಗೆ ಬಂದು ನಿಂತು ಬಿಡುತ್ತಿದ್ದ. ಬಾಲ್ಕನಿಯಲ್ಲಿ ನಿಂತರೆ ಎಲ್ಲಕಿಂತ ಮೊದಲೇ ಆಲದ ಮರ ಕಣ್ಣಿಗೆ ಬೀಳುತ್ತಿತ್ತು.
ತಿಮ್ಮಣ್ಣ ಬಾಲ್ಕನೀಲಿ ನಿಂತಾಗೆಲ್ಲಾ ಗಮನ ಮರದಲ್ಲಿನ ಆ ಒಣಗಿದ ಕೊಂಬೆಯ ಮೇಲೆಯೆ ಕೇಂದ್ರಿಕೃತವಾಗುತ್ತಿತ್ತು. ಬಹುಶಃ ಟೊಂಗೆಯಲ್ಲಿ ಒಂದೂ ಎಲೆ ಇಲ್ಲದೆ ಹೋಗಿದ್ದರಿಂದ ಹಾಗಾಗುತ್ತಿದ್ದಿರಿಬೇಕು. ಆದರೆ, ತಿಮ್ಮಣ್ಣ ಬೇಕಂತಲೆ ತನ್ನ ಗಮನವನ್ನೆಲ್ಲ ಬೇರೆ ಕಡೆ ಹೊರಳಿಸುತ್ತಿದ್ದ. ಮರದ ನೆರಳು ಬಸ್ಸುಗಳಿಂದ ಇಳಿದ ಪ್ರಯಾಣಿಕರ ಮೇಲೆ ಆವರಿಸೋದು. ಯಾವುದೇ ಬಸ್ಸು ಬರಲಿ-ಹೋಗಲಿ ತಿಮ್ಮಣ್ಣ ಮಾತ್ರ ಬಸ್ಸಿಂದ ಇಳಿಯುವವರು ಮತ್ತು ಹತ್ತುವವರ ಮೇಲೆಯೆ ಗಮನವಿಟ್ಟಿರುತ್ತಿದ್ದ.
ಅಪ್ಪ ಸತ್ತ ನಂತರದ ದಿನಗಳಲ್ಲಿ ತಿಮ್ಮಣ್ಣನಿಗೆ ಯಾರೂ ಇಲ್ಲದೆ ಒಬ್ಬಂಟಿಯಾಗಿದ್ದ. ಬೆಳಿಗ್ಗೆ ಬ್ರೆಡ್ಡು, ಜಾಮು, ಮಧ್ಯಾಹ್ನ ಮತ್ತು ರಾತ್ರಿಗೆ ಇಪ್ಪತ್ತು ರೂಪಾಯಿ ಕೊಟ್ಟು ಮಾತಾಡದೆ ಕೈಸನ್ನೆ ಮೂಲಕ ತೋರಿಸಿ ಬಿಸ್ಮಿಲ್ಲಜ್ಜನ ತಳ್ಳುಗಾಡಿ ಹೋಟೆಲಿಂದ ಎಗ್ಗರೈಸ್ ಪಾರ್ಸಲ್ ತಂದಿಟ್ಟುಕೊಳ್ಳುತ್ತಿದ್ದ. ಆರು ತಿಂಗಳಿಂದಲೂ ಹೊಟ್ಟೆಗೆ ಇದೇ ಗತಿಯಾದದ್ದರಿಂದ ದಿನದಿಂದ ದಿನಕ್ಕೆ ಕೃಶನಾಗಿ ಕುಗ್ಗತೊಡಗಿದ್ದ.
ತಿಮ್ಮಣ್ಣನಲ್ಲಿ ಮರ ದಿಟ್ಟಿಸುವುದು ವೃತ್ತಿಯಂತಾಗತೊಡಗಿತ್ತು. ಇತ್ತೀಚೆಗೆ ಮನೆಯಿಂದ ಆಚೆಗೆ ಹೋಗದವನು ಸೀದಾ ಬಾಲ್ಕನಿಯಲ್ಲಿ ಕುಚರ್ಿ ಹಾಕಿಕೊಂಡು ಸುಮ್ಮನೆ ಕೂತು ಬಿಡುತ್ತಿದ್ದ. ಮರವನ್ನೆ ದಿಟ್ಟಿಸುತ್ತಾ ಕೆಲವೊಮ್ಮೆ ಮೆತ್ತಗೆ ಯಾರಿಗೂ ಕೇಳದಂತೆ ಅಳುತ್ತಿದ್ದ. ಪಕ್ಕದ್ಮನೆಯ ವೈಶಾಲಿ ಈತ ಮರ ದಿಟ್ಟಿಸುವುದನ್ನು ತೀರಾ ಕುತೂಹಲದಿಂದ ಒಮ್ಮೆ ಗಮನಿಸುತ್ತಿದ್ದದ್ದನ್ನ ಶ್ಯಾಮಣ್ಣ ನೋಡಿದ್ದ. ಕಣ್ಣಲ್ಲೆ ಅನುಮಾನ ದೃಷ್ಠಿಹರಿದಾಡಿತ್ತು. ಅವತ್ತಿಂದ ಜಾಗೃತವಾಗಿದ್ದ ವೈಶಾಲಿ ಹೆದರಿಕೆಯಲ್ಲೆ ಕದ್ದು ಕದ್ದು ನೋಡಿದರೂ ನೋಡದವರಂತೆ ನಟಿಸುತ್ತಿದ್ದಳು.
ಅಲ್ಲಿದ್ದವರು ಮರದ ನೆರಳಿನ ವ್ಯಾಪ್ತಿಗೆ ಒಳಪಟ್ಟಾಗ, ಬಸ್ಸುಗಳ ಮೇಲೆಲ್ಲಾ ಹರಡಿಕೊಂಡಾಗ ಮುಗುಳ್ನಗೆ ಆತನಿಗೆ ಗೊತ್ತಾಗದಂತೆಯೇ ತುಳುಕುತ್ತಿತ್ತು. ಕೆಲವೇ ಕ್ಷಣಗಳ ಅಂತರದಲ್ಲಿ ವಿಚಿತ್ರ ಆಲೋಚನಾ ಲಹರಿಗಳು ತಿಮ್ಮಣ್ಣನ ತಲೆಯಿಂದ ಹೊರಬೀಳುತ್ತಿದ್ದವು – ‘ಮರ ನೆರಳು ನೀಡಿದೆ. ಮುಂದೆಯೂ ನೀಡುತ್ತದೆ. ನಾನು? ಮನುಷ್ಯನಾಗಿದ್ದೇನೆ ಏನು ನೀಡಲು ಸಾಧ್ಯವಾಗಿದೆ? ಅಪ್ಪನಿಗೂ ಮರದ ಮೇಲೆ ಭಾರೀ ಅಭಿಮಾನವಿತ್ತು. ಮಾತಿಗೆ ಬಂದಾಗೊಮ್ಮೆ ಮರವನ್ನು ಎಳೆದು ತರುತ್ತಿದ್ದ. ನನಗೆ ಬುದ್ಧಿ ಬಂದಾಗಿಂದ ವಿಚಿತ್ರ ರೀತಿಯ ಪ್ರೀತಿ ಆತನಿಗೆ ಮರದ ಮೇಲೆ ಬೆಳೆದಿತ್ತು. ಅಪ್ಪನೂ ಆಲದ ಮರದ ಬಿಳಲುಗಳನ್ನು ತೀರಾ ಧ್ಯಾನಸ್ಥನಾಗಿ ನೋಡುತ್ತಿದ್ದನಾದರೂ ನನ್ನಷ್ಟಲ್ಲ’ ತನ್ನಲ್ಲಿ ತಾನೇ ಮಾತಾಡಿಕೊಂಡು ಸುಮ್ಮನಾಗಿದ್ದ. ಓತಪ್ರೇತವಾಗಿ ಹರಿದಾಡುತ್ತಿದ್ದ ಈ ವಿಚಾರಗಳೆಲ್ಲ ಆತನಿಗೆ ಮುದ ನೀಡುತ್ತಿದ್ದಿರಬೇಕು.
ಒಣಗಿದ ಕೊಂಬೆಯನ್ನು ನೋಡಿದಾಗೆಲ್ಲ ‘ಇದೊಂದ್ಯಾಕೆ ಹೀಗೆ’ ತೀರಾ ವಿಚಿತ್ರಗೊಂಡವನಂತೆ ಆಲೋಚನೆಗಿಳಿದು ದಿನಾ ಕಂಡರೂ ಕೆಲವೊಮ್ಮೆ ಯಾಕೆ ಹೀಗನಿಸುತ್ತದೆ ಎಂದು ಪರಾಮಶರ್ಿಸಿಕೊಳುತ್ತಿದ್ದ. ಯಾವುದಾದರೂ ಬಸ್ಸು ಬಂದು ನಿಂತ ಕೂಡಲೇ ಎಲ್ಲವನ್ನು ಮರೆತು ಬಿಡುತ್ತಿದ್ದ. ಒಂದಿನ ಮರದ ಸುತ್ತ ಅಳತೆ ಮಾಡಿ, ಮರದ ನಡುವಿಗೆ ಸುಣ್ಣ ಬಳಿಯುತ್ತಿದ್ದದ್ದನ್ನು ನೋಡಿದರೂ ತಿಮ್ಮಣ್ಣ ಅತ್ತ ಗಮನ ಕೊಟ್ಟಿರಲಿಲ್ಲ.
ಬಹುಶಃ ಅವತ್ತು ಗುರುವಾರವಿರಬೇಕು. ಮನೆ ವಿಳಾಸಕ್ಕೊಂದು ಪತ್ರ ಬಂದಿತ್ತು. ಅಪ್ಪನ ವಿಮಾ ಪಾಲಿಸಿ ಹಣವನ್ನು ಕೆಲವೇ ದಿನಗಳಲ್ಲಿ ಕೈಗೆ ತಲುಪಲಿದೆ. ಅದಕ್ಕೂ ಮುನ್ನ ಆಫೀಸಿಗೆ ಬಂದು ಎಲ್ಲ ಫಾಮರ್ಾಲಿಟೀಸ್ ಮುಗಿಸಿ ಹೋಗಬೇಕೆಂದು ಸೂಚಿಸಲಾಗಿತ್ತು. ಸೋಮವಾರವೇ ಬಂದರೆ ಉತ್ತಮ ಎಂಬ ಸಾಲು ಕೊನೆಗೆ ಸೇರಿಕೊಂಡಿತ್ತು. ಪತ್ರ ಆತನಲ್ಲಿ ಯಾವುದೇ ಬದಲಾವಣೆ ತರಲಿಲ್ಲ. ಅಪ್ಪ ಪಾಲಿಸಿ ಮಾಡಿಸಿದ್ದು ಹತ್ತು ವರ್ಷದ ಹಿಂದೆ, ಮುಗಿಯಲು ಇನ್ನು ಎರಡು ವರ್ಷವಿತ್ತು. ಅಪ್ಪ ಹೋಗಿದ್ದರಿಂದ. . . . . . . ಯೋಚಿಸುತ್ತಿದ್ದವ ಪತ್ರಕ್ಕೆ ಸೀಲು ಬಿದ್ದ ದಿನಾಂಕ ನೋಡಿ ಎತ್ತಿಟ್ಟ.
ಒಲ್ಲದ ಮನಸ್ಸಿನಿಂದಲೆ ವಿಮಾ ಕಂಪನಿ ಆಫೀಸಿಗೆ ಹೊರಡಲು ತಿಮ್ಮಣ್ಣ ತಯಾರಾದ. ಆಲದ ಮರದ ಕೆಳಗೆ ಬಸ್ಸು ಹತ್ತಿದನಾದರೂ, ಬಸ್ಸಿನ ಹಿಂದೆಯೇ ಬಂದ ಜೆಸಿಬಿ ಯಂತ್ರ ಆತನ ಗಮನ ಸೆಳೆಯಲಿಲ್ಲ. ಎಲ್ಲ ದಾಖಲೆ ಸಲ್ಲಿಸಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ತಿಮ್ಮಣ್ಣ ಅವತ್ತ್ಯಾಕೊ ಪ್ರತಿದಿನ ಇರುತ್ತಿದ್ದವನಂತಿರಲಿಲ್ಲ. ದಿನವಿಡೀ ಕೆಲಸದಲ್ಲಿ ಅಡ್ಡಾಡಿ ದಣಿದಿದ್ದ. ಮನೆಗೆ ಬಂದವನೇ ಹಾಸಿಗೆಗೊರಗಿದ್ದರಿಂದ ಊಟದ ಪರಿವೆಯೂ ಬಾರದಂತೆ ನಿದ್ರೆ ಆವರಿಸಿತು.
ಬೆಳಿಗ್ಗೆ ತುಸು ತಡವಾಗಿಯೆ ಎದ್ದು ಹೊರಗೆ ಬಂದಾಗ ಸುಮ್ಮನೆ ದಿಟ್ಟಿಸತೊಡಗಿದ. ಅದೇ ಸಮಯಕ್ಕೆ ನಿತ್ಯ ತುಳಸಿ ಪೂಜೆ ಮಾಡುವಾಗ ಜಾಣತನದಿಂದ ಕದ್ದು ನೋಡುತ್ತಿದ್ದ ವೈಶಾಲಿ ಯಾಕೋ ಕಾಣಲಿಲ್ಲ. ಇಡೀ ನವೋದಯ ನಗರವನ್ನು ಯಾವುದೋ ಸ್ಮಶಾನ ಆಪೋಷನ ತೆಗೆದುಕೊಂಡಿದೆ ಎನಿಸತೊಡಗಿತು ಆತನಿಗೆ. ಬಾಲ್ಕನಿಯಿಂದ ಕೆಳಗಿಳಿದು ಬಂದ. ಎಂದಿನಂತೆ ಅವತ್ತು ಮರದ ನೆರಳ ತಂಪಿನ ಬದಲಾಗಿ ಬಿಸಿಲು ಮೈಗೆ ತಾಕಿತು. ನಿನ್ನೆ ಕಡಿಯಲಾಗಿದ್ದ ಆಲದ ಮರದ ಎಲೆಗಳು ಅಲ್ಲಲ್ಲಿ ಚೆಲ್ಲಿದ ಕರುಳುಗಳಂತೆ ಹರಡಿಕೊಂಡಿದ್ದವು. ಎಲೆಗಳನ್ನೆ ತೀರಾ ಧ್ಯಾನಸ್ಥನಂತೆ ನೋಡತೊಡಗಿದ್ದ ತಿಮ್ಮಣ್ಣನಿಗೆ ಸಮಾಧಾನವಿಲ್ಲದಂತಾಗಿತ್ತು. ದಾರಿಯಲ್ಲೇ ನಿಂತಿದ್ದವನಿಗೆ ಬಿಸಿಲಿಗೆ ಬಿದ್ದ ಜನರ ನೆರಳು ಅಣಕಿಸಿದಂತಾಯ್ತು. ಎಲೆಗಳನ್ನೇ ಆರಿಸಿ ಎದೆಗೊತ್ತಿಕೊಂಡು ಸುತ್ತಲೂ ಕಣ್ಣ್ಹಾಯಿಸಿದ. ಕೆಲ ಅಂಗುಲ ಸಪಾಟಾಗಿ ನಿಂತಿದ್ದ ಕಾಂಡವೊಂದನ್ನು ಬಿಟ್ಟರೆ, ಅಲ್ಲಿ ಮರವಿತ್ತು ಎಂಬುದಕ್ಕೆ ಯಾವುದೇ ಪುರಾವೆಗಳಿರಲಿಲ್ಲ.
ಬಾಲ್ಕನೀಲಿ ನಿಂತು ಕಾಂಡವನ್ನು ನೋಡುವುದು. ಒಳಗೆ ಒಬ್ಬನೇ ಕೂತು ಅಳುವುದು ನಿತ್ಯದ ಕಾಯಕವೇ ಆಗಿ ಹೋಯಿತು. ಈಗೀಗ ಆಲದ ಮರದ ಬಿಳಲುಗಳು ಆತನ ಕೊರಳಿಗೆ ಉರುಳಾದಂತೆ ಭಾಸವಾಗತೊಡಗಿದವು. ನಿತ್ಯವು ನಾನವತ್ತು ಹೋಗಬಾರದಾಗಿತ್ತು. ಮರ ಉಳಿಯುತ್ತಿತ್ತೇ? ಇಲ್ಲವಾ? ಹೀಗೆ ಒಬ್ಬನೇ ಮಾತಾಡಿಕೊಂಡು ಚಿಟ್ಟನೆ ಚೀರುತ್ತಿದ್ದ. ಎರಡು ದಿನ ಮನೆಯಿಂದ ತಿಮ್ಮಣ್ಣ ಹೊರಗೆ ಬಾರದ್ದರಿಂದ ಮತ್ತು ಹಿಂದಿನ ರಾತ್ರಿ ಬರೀ ಆ ಮನೆಯಿಂದ ಚೀರುವ ಸಪ್ಪಳವೆ ಕೇಳುತ್ತಿದ್ದರಿಂದ, ವೈಶಾಲಿ ,ಶ್ಯಾಮಣ್ಣನಿಗೆ ತಿಳಿಸಿದಳು. ಬೆಳಿಗ್ಗೆಯೇ ಇಬ್ಬರೂ ಮನೆಯೊಳಗೆ ಹೊಕ್ಕರು. ಮನೆಯಿಡೀ ಅಸ್ತವ್ಯಸ್ತವಾಗಿತ್ತು. ಅಲ್ಲೇ ಪಕ್ಕದಲ್ಲಿ ಹಾಸಿಗೆ ಮೇಲೆ ಬಿದ್ದಿದ್ದ ತಿಮ್ಮಣ್ಣ ಅವರಿಬ್ಬರೂ ಬಂದದ್ದು ಕಂಡು ‘ಮರ ಉಳಿಯುತ್ತಿತ್ತೇ? ಇಲ್ಲವಾ?’ ಎಂದು ಮತ್ತೂ ಜೋರಾಗಿ ಚೀರತೊಡಗಿದ್ದ.
 

‍ಲೇಖಕರು G

18 January, 2015

2 Comments

  1. ಅಕ್ಕಿಮಂಗಲ ಮಂಜುನಾಥ

    ಮನದ ಮರ ಕತೆ ಚೆನ್ನಾಗಿದೆ.

  2. Hema Sadanand Amin

    sundaravada asshaya….. odisutta hoguthade.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading