ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾನುವಾರದ ಸಣ್ಣಕಥೆ ’ಜೋಡಿ ಕೋಣಗಳು’

– ಮಂಜು ಹಿಚ್ಕಡ್

ದನಗಳಿಗೆ ಒಂದಿಷ್ಟು ಹಸಿ ಹುಲ್ಲು ಕೊಯ್ದುತಂದು ಮೇವಿನ ವ್ಯವಸ್ಥೆ ಮಾಡಿ, ಹಾಸಲು ಒಂದಿಷ್ಟು ಸೊಪ್ಪು ತರಲು ಬಂದ ವಿಠ್ಠಲಿನಿಗೆ ಸ್ವಲ್ಪ ಸುಸ್ತಾದಂತೆ ಅನಿಸಿ ಮರದ ಕೆಳಗೆ ಕುಳಿತೆ. ಸ್ವಲ್ಪ ಸುಸ್ತಾದಂತೆ ಅನಿಸಿ ಅಲ್ಲಿಯೇ ಮರದ ಕೆಳಗೆ ಕುಳಿತ. ಕಳೆದ ಒಂದು ವಾರದಿಂದ ಬೆಂಬಿಡದೇ ಸುರಿಯುತ್ತಿದ್ದ ಮಳೆ ಕಳೆದೆರಡು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಬಾಂದಳದ ಸೂರ್ಯ ಮೋಡಗಳ ನಡುವೆ ಆಗಾಗ ಕಣ್ಣು ಮುಚ್ಚಾಲೆಯಾಟವಾಡುತ್ತಿದ್ದ. ಆ ಹೊನ್ನೆ ಮರದ ಕೆಳಗೆ ಕುಳಿತು, ಸೊಂಟಕ್ಕೆ ಕಟ್ಟಿದ ಚಿಂಚೆಯಿಂದ (ಚಿಕ್ಕದಾದ ಚೀಲದಿಂದ) ಎಲೆ ಆಡಿಕೆ ತೆಗೆದು ಬಾಯಿಗೆ ಹಾಕಿ ಮೆಲ್ಲುತ್ತಾ ಕುಳಿತ ಅವನಿಗೆ ಈ ಬಾರಿ ಗದ್ದೆ ಕೊಯ್ಲು ಮುಗಿದು, ಶೇಂಗಾ ಹೋಟಿ ಪ್ರಾರಂಭವಾಗುವುದರೊಳಗಾಗಿ ಈಗಿರುವ ಹಳೆಯ ಎತ್ತುಗಳನ್ನು ಬದಲಿಸಬೇಕು ಎನ್ನುವ ಯೋಚನೆ ಮತ್ತೆ ಕಾಡತೊಡಗಿತು. ಇದು ಇಂದು ನಿನ್ನೆಯ ಯೋಚನೆಯೇನಲ್ಲ, ಆ ಯೋಚನೆ ಬಂದು ಆಗಲೇ ಆರೇಳು ತಿಂಗಳುಗಳಾಗಿದ್ದವು. ಈಗಿನ ತುಟ್ಟಿ ಕಾಲದಲ್ಲಿ ಅದೇನು ಅಷ್ಟು ಸುಲಭದ ಮಾತಾಗಿರಲಿಲ್ಲ. ಮೊದಲು ಮಳೆಗಾಲದ ಹೋಟಿಗೆ ಎತ್ತುಗಳನ್ನು ಬದಲಿಸಬೇಕು ಎಂದುಕೊಂಡು ಗೇರುಬೀಜ, ಶೇಂಗಾ ಮಾರಿದ ಹಣವನ್ನೆಲ್ಲ ಹಾಗಿಯೇ ಇಟ್ಟುಕೊಂಡು ಕುಳಿತಿದ್ದ. ಆದರೆ ಈಗಿರುವ ಎತ್ತುಗಳಿಗೆ ಸಕಾಲದಲ್ಲಿ ಯಾವುದೇ ಗಿರಾಕಿಗಳು ಬರದ ಕಾರಣ ಅದೇ ಎತ್ತುಗಳಲ್ಲಿಯೇ ಮಳೆಗಾಲದ ಬೇಸಾಯ ಮಾಡಿ ಮುಗಿಸಿದ್ದ. ಎತ್ತುಗಳಿಗೇನು ವಯಸ್ಸಾಗಿರಲಿಲ್ಲ ಇನ್ನೂ ಒಂದೆರಡು ವರ್ಷ ಹೋದರೂ ಪರವಾಗಿರಲಿಲ್ಲ, ಆದರೆ ಇನ್ನೆರಡು ವರ್ಷ ಬೇಸಾಯ ಮಾಡಿ ಎತ್ತುಗಳನ್ನು ಮಾರುವ ಬದಲು ಈಗಲೇ ಮಾರಿದರೆ ಒಳ್ಳೆಯದು, ಸ್ವಲ್ಪ ರೇಟದರೂ ಇದ್ದಿತೂ ಎನ್ನುವ ಭಾವನೆ ಇದ್ದಿತಾದರೂ, ಆ ಎಡಕ್ಕೆ ಕಟ್ಟುವ ಮಂಜ ಎತ್ತು, ಬಲಕ್ಕೆ ಕಟ್ಟುವ ಹುಬ್ಬನಿಗಿಂತ ಸ್ವಲ್ಪ ಎಡ, ನಡಿಗೆಯಲ್ಲೂ ಸ್ವಲ್ಪ ನಿಧಾನ. ಈ ಎತ್ತುಗಳು ಅದೇನೇ ಎಂದರೂ ಆ ಹಳೆಯ ಕೋಣದ ಜೋಡಿಯಿದ್ದಂತೆ ಯಾವ ಎತ್ತಿನ ಜೋಡಿಗಳು ಬರಲಾರದೂ ಎನ್ನಿಸಿತು.
ಕಲಘಟಿಕೆಯಿಂದ ತಂದ ಹಿಂದಿನ ಎರಡು ಜೊತೆ ಎತ್ತುಗಳಿಗಿಂತ, ಹಿಲ್ಲೂರಿನ ಸುಬ್ರಾಯನ ಕಡೆಯಿಂದ ತಂದ ಹಳೆಯ ಕೋಣದ ಜೋಡಿಗಳೇ ಭಲವಾಗಿದ್ದವೂ ಎನಿಸಿತು. ಅಂದು ಆ ಹಳೆಯ ಕೋಣದ ಜೋಡಿಗಳಿದ್ದಾಗ, ತನ್ನ ಬೇಸಾಯ ಮುಗಿದ ಮೇಲೆ ಅದೆಷ್ಟೋ ಜನರಿಗೆ ಊಳಿಕೊಟ್ಟು ಸ್ವಲ್ಪ ಮನೆ ಕರ್ಚಿಗೆ ಎಂದು ಹಣ ಮಾಡಿಕೊಂಡದ್ದು ಇತ್ತು. ಆಗೆಲ್ಲ ಕಬ್ಬಿನ ಗಾಣದ ಸಮಯದಲ್ಲಿ ಗಾಣಕ್ಕೆ ಅಪರೂಪಕ್ಕೆ ನಮ್ಮ ಕೋಣಗಳನ್ನು ಕಟ್ಟಿದಾಗ, ಅವುಗಳ ಸಾಮರ್ಥ್ಯವನ್ನು ನೋಡಿ ಅದೆಷ್ಟೋ ಜನ ಹುಬ್ಬೇರಿಸಿದ್ದು ಇತ್ತು. ಹಾಗೆ ಅಪರೂಪಕ್ಕೆ ಕಬ್ಬಿನ ಗಾಣಕ್ಕೆ ತನ್ನ ಕೋಣಗಳನ್ನು ಕಟ್ಟಿದ್ದೂ ಕೂಡ ತಪ್ಪಾಯಿತೆಂದು ಈಗ ಎನಿಸುತ್ತಿದೆ. ಆ ದಿನ ಇನ್ನೂ ಸರಿಯಾಗಿ ನೆನಪಿದೆ ಆತನಿಗೆ, ವಾಸರೆಯ ತಿಮ್ಮಣ್ಣನ ಗಾಣಕ್ಕೆ ಕೋಣ ಕಟ್ಟಿದ್ದಾಗ ಅವರ ಗಾಣ ನೋಡಲು ಬಂದಿದ್ದ ಆತನ ಹೆಂಡತಿಯ ಚಿಕ್ಕವ್ವಿಯ ಮಗ ಹೂವಣ್ಣ. ಬಂದವನು ತನ್ನ ಹೆಂಡತಿಯ ಸಂಬಂಧಿಕನಾಗಿದ್ದರಿಂದ ಸ್ವಲ್ಪ ಹೆಚ್ಚಾಗಿಯೇ ಮಾತನಾಡಿಸಿದ್ದ. ಅದೇ ತಪ್ಪಾಗಿದ್ದು. ಆ ಜನರೇ ಹಾಗೇ ಅವರಿಗೆ ತಮ್ಮ ಕೆಲಸವಿದ್ದಾಗಲೇ ಸಂಬಂಧವನ್ನು ನೆನೆಯುತ್ತಾರೆ ಎನ್ನುವುದು ಆಗ ತಿಳಿದಿರಲಿಲ್ಲ. ಅವರ ಮದುವೆಯಲ್ಲಿ ಇದೇ ಹೂವಣ್ಣನ ಮನೆಯವರು ಹೊಸ ಮದುಮಕ್ಕಳಿಗೆ ಒಂದೊಂದು ಸ್ಟಿಲಿನ ತಾಟು ಹಾಕಿ, ಉಡುಗೆರೆ ಹೊದ್ದು, ಹೊರಟು ಹೋದವರು, ಹೊಸ ಮದುಮಕ್ಕಳೆಂದು ಊಟಕ್ಕೂ ಕರೆದಿರಲಿಲ್ಲ. ಒಂದೆರಡು ಬಾರಿ ಅವನೂರ ಬಂಡಿ ಹಬ್ಬಕ್ಕೆ ಕರೆದಾಗ ಬಂದು ಕೋಳಿ ಆಸಿ ಉಂಡು ಹೋದರೇ ಹೊರತು ಅವರೂರಿನ ಬಂಡಿ ಹಬ್ಬಕ್ಕೆ ಎಂದು ಕರೆದಿರಲಿಲ್ಲ. ಇದೆಲ್ಲ ಗೊತ್ತಿದ್ದರೂ ಅಂತಹ ವ್ಯಕ್ತಿ ಅಲ್ಲಿಗೆ ಬಂದಾಗ ’ನಾನ್ಯಾಕೆ ಮಾತನಾಡಿಸಿದನೋ’ ಎಂದು ಅರ್ಥವಾಗಲಿಲ್ಲ. ಆಗ ಮಾತನಾಡಿದ್ದೇ ತಪ್ಪು ಎಂದು ಈಗ ಎನ್ನಿಸುತ್ತಿದೆಯಾದರೂ ಏನು ಮಾಡಲು ಆಗತ್ತೆ. ಕೆಟ್ಟ ಮೇಲೆ ಬುದ್ದಿ ಬಂದರೆ ಏನು ಪ್ರಯೋಜನ. ಮತ್ತೆ ಕೆಡದಂತೆ ನೋಡಬಹುದೇ ಹೊರತು ಕೆಟ್ಟು ಕಳೆದುಕೊಂಡದ್ದು ಮತ್ತೆ ಬರುತ್ತದೆಯೇ?
ಅಂದು ಗಾಣಕ್ಕೆ ಕಟ್ಟಿದ ಆ ಕೋಣಗಳನ್ನು ನೋಡಿದ ಹೂವಣ್ಣನ ಕಣ್ಣು ಅವನ ಕೋಣಗಳ ಮೇಲೆ ಇತ್ತು ಎನ್ನುವುದು ವಿಠ್ಠಲನಿಗೆ ನಂತರ ತಿಳಿಯಿತು. ಒಂದೆರಡು ದಿನಗಳು ಕಳೆದ ಮೇಲೆ ಇನ್ನೇನು ಗಾಣ ಮುಗಿಯುತ್ತಿದೆ ಎನ್ನುವುದು ತಿಳಿಯುತ್ತಿದ್ದಂತೆ, ವಿಠ್ಠಲ ತನ್ನ ಕೋಣಗಳನ್ನು ಊರಿಗೆ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸಿದ್ದ. ಆಗ ಅವನಿದ್ದಲ್ಲಿಗೆ ಬಂದ ಹೂವಣ್ಣ ” ತಮ್ಮಾ ನಾಡ್ದಿಗೆ ನಮ್ಮ ಮನಿಲೂ ಗಾಣ ಇಟ್ಕಂಡಿ, ನೀ ಮಾತ್ರೆ ನಿನ್ನ ಕೋಣ್ಗೋಳ ನನ್ನ ಗಾಣಕ್ಕೆ ಕಟ್ಟದ್ರರೆ ಆಣ್ಗೂ ಇಟ್ಟ ಅನುಕೂಲ ಆತತ್” ಎಂದಾಗ, ವಿಠ್ಠಲನಿಗೆ ಅರ್ಧಂಬರ್ಧ ಮನಸ್ಸಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ “ಬೇಡಾ ಅಣ್ಣಾ, ಮೂರ್ನಾಲ್ಕ ದಿನಾ ಆಯ್ತ, ನಾನ್ ಮನಿ ಇಂದೆ ಹೊರ್ಗೆ ಬಂದೆ. ಪಾಪ ಕೊಣ್ಗೋಳಿಗೂ ತ್ರಾಸ್ ಆಗಿರ್ತಿದ” ಅಂದ.

ಚಿತ್ರ ಕೃಪೆ : ಪುರೂರವೆ ಕೆ ವಿ

“ತಮ್ಮಾ ನಂದೇನ್ ಬಾಳ್ ದಿವ್ಸಾ ಆಗುದಿಲ್ವಾ, ಬೇಕರೇ ತಂಗಿಗೆ ಇಲ್ಲಿಂದೆ ಯಾರ್ಕೋಡರು ಹೇಳ್ ಕಳಿಸ್ತಿ, ನಾ ಹೇಳಿದ್ರೆ ತಂಗಿ ಏನ್ ಬೇಡಾ ಅನ್ನುಲಾ” ಎಂದ.
“ಅದ್ಕಲ್ವಾ ಅಣ್ಣಾ ನಂಗೂ ಸ್ವಲ್ಪೆ ಮನಿ ಬದಿಗೆ ಕೆಲ್ಸ ಇದ, ತೋಟಕ್ಕೆ ನೀರ್ ಹಾಕ್ಬೇಕ್, ಕಾಯು ಇನ್ನೂ ಕುಯ್ಸಲಾ, ಬೆಣದ್ ಬದಿಗೆ ಹೋಗ್ದೇ, ಗೆರ್ಬೇಜಾ ಕುಯ್ದೇ ಉಂದ ವಾರ ಆಗೋಯ್ತ, ಅಲ್ಯಾರದ್ರೂ ಹುಕ್ಕದ್ರೆ ಮುಗ್ದೇ ಹೋಯ್ತ, ಉಂದ ಬೇಜಾನೂ ಇಡುಲಾ”
“ನಂಗೂ ಆರ್ಥಾ ಆತೀದಾ ತಮ್ಮಾ, ಆದ್ರೆ ಏನ್ ಮಾಡುದ್, ನಮ್ಮ್ದು ಉಂದೇ ವಾರ್ಲಾ ಆತಿದ್, ನಮ್ಮ ತಮ್ಮನ ವಾರ್ಲಾನೂ ಇಲ್ಲಾ ಏಗೆ, ಅಲ್ವಾ ಸಂಬಂಧಿಕರ್ ಆದ ಮೇಲೆ ಒಬ್ಬರಿಗೊಬ್ಬರ್ ಸಹಾಯ ಮಾಡ್ದೇ ಇದ್ರೆ ಹೆಂಗೆ? ನೀನೇ ಬರ್ಬೇಕ್ ಅನ್ನುದ್ ಇಲ್ಲಾ, ನಿನ್ನ ಕೊಣ್ಗೋಳ್ ಕುಟ್ರು ಸಾಕ, ನಾನೇ ತಕಂಡೆ ಹೋಗೆ ಗಾಣಕ್ಕೆ ಕಟ್ಟತಿ, ನೀ ಬೇಕರೆ ನಿಂದೆಲ್ಲಾ ಕೆಲ್ಸಾ ಮುಗ್ಸಕಂಡೆ ಬಂದೆ ಕೊಣ್ಗೋಳ್ ಹುಡ್ಕಂಡೆ ಹೋಗಕ್.”
ವಿಠ್ಠಲಿನಿಗೂ ಒಂದು ಸಾರಿ ಇವನು ಇನ್ನೂ ಬಿಡುವುದಿಲ್ಲ ಅನ್ನಿಸಿ, “ಆಯ್ತ ಹಂಗಾರೆ, ನೀನ್ ಕೊಣ್ಗೋಳ್ ಹುಡ್ಕಂಡೆ ಹೋಗ, ನಂಗೆ ಗಾಣ ಮುಗದದ್ದೇ ಹೇಳ್ ಕಳ್ಸ್ ನಾ ಬಂದೆ ತಕಂಡೆ ಹೋಗ್ವೆ” ಎಂದ.
ಅವನು ಅದ್ಯಾವ ಗಳಿಗೆಯಲ್ಲಿ ಒಪ್ಪಿಗೆ ಕೊಟ್ಟನೋ, ಅದೇ ತಪ್ಪಾಗಿ ಹೋಯಿತು ಅನಿಸಿದ್ದು ನಂತರವೇ. ಹೂವಣ್ಣನಿಗೆ ಬೇಕಾಗಿದ್ದೂ ಅದೇ, ಖುಸಿಯಿಂದ ಕೋಣಗಳನ್ನು ಹೊಡೆದು ಕೊಂಡು ಹೋದ. ಗಾಣ ಮುಗಿದ ಮೇಲೆ ಅವನ ಪಾಲಿಗೆ ಬಂದ ಒಂದಿಷ್ಟು ಕಬ್ಬು, ಅವೆ ಬೆಲ್ಲ ತೆಗೆದುಕೊಂಡು ಅವನ ಊರಿಗೆ ಹೋದ ವಿಠ್ಠಲ. ಊರಿಗೆ ಬಂದು ಆಗಲೇ ಹದಿನೈದು ದಿನಗಳು ಕಳೆದಿದ್ದವೂ. ಅವನಿಗೂ ಊರ ಕಡೆ ಸ್ವಲ್ಪ ಕೆಲಸವಿದ್ದುದರಿಂದ ಹೂವಣ್ಣನ ಬಗ್ಗೆಯಾಗಲೀ, ಕೋಣಗಳ ಬಗ್ಗೆಯಾಗಲೀ ಯೋಚಿಸಲು ಹೋಗಿರಲಿಲ್ಲ. ’ಕೆಲಸ ಮುಗ್ದ ಕೂಡ್ಲೇ ಹೇಳ್ ಕಳಸ್ತಿ’ ಎಂದು ಕೋಣಗಳನ್ನು ಹೊಡೆದುಕೊಂಡು ಹೋಗುವಾಗ ಹೇಳಿದವನು ಎರಡು ವಾರ ಕಳೆದರೂ ಸುದ್ದಿ ಕಳಿಸಿರಲಿಲ್ಲ. ತನ್ನ ಹಾಗೆ ಅವನು ಕೆಲಸದಲ್ಲಿ ಮುಳುಗಿರಬೇಕು ಎಂದು ಕೊಂಡವನು, ’ಹೆಂಗೂ ಎರ್ಡವಾರ ಕಳ್ದೆ ಆಗಿದ್, ಇನ್ನುಂದ್ ವಾರ ಬಿಟ್ಟೇ ನೋಡ್ವಾ, ಸುದ್ದಿ ಬಂದ್ರೂ ಬಂತ’ ಎಂದು ತನ್ನಷ್ಟಕ್ಕೆ ಹೇಳಿಕೊಂಡು ಸುಮ್ಮನಾದ. ಮತ್ತೆ ಇನ್ನೆರಡೂ ವಾರ ಕಳೆದರೂ ಹೂವಣ್ಣನಿಂದ ಸುದ್ದಿ ಬರದೇ ಇದ್ದಾಗ, ಇನ್ನೂ ತಡ ಮಾಡುವುದು ಬೇಡ ಎಂದು, ಆ ದಿನ ಬೆಳಿಗ್ಗೆ ಹೆಂಡತಿಗೆ ಹೂವಣ್ಣನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೊರಟ.
ಹೂವಣ್ಣನ ಮನೆ ತಲುಪಿದಾಗ ಮಟ ಮಟ ಮಧ್ಯಾಹ್ನ. ಬೇಸಿಗೆಯ ದಿನಗಳು ಕಾಲಿಟ್ಟದ್ದರಿಂದ ಬಾಯಾರಿಕೆಯ ಜೊತೆಗೆ ಹಸಿವೂ ಕೂಡ ಕಾಡುತ್ತಿತ್ತು. ಹೇಗೂ ಹೂವಣ್ಣನ ಮನೆ ಇದೆಯಲ್ಲ ಅಂದು ಅಲ್ಲಿಯವರೆಗೂ ತಡೆದುಕೊಂಡು ಬಂದಿದ್ದ. ಹೂವಣ್ಣನ ಮನೆ ತಲುಪಿದಾಗ ಹೂವಣ್ಣ ಮನೆಯ ಜಗುಲಿಗೆ ಹೊಂದಿಕೊಂಡ ಚಿಟ್ಟೆಯ ಮೇಲೆ ಕುಳಿತಿದ್ದ. ವಿಠ್ಠಲ ಅವನ ಮನೆ ಬಾಗಿಲವರೆಗೂ ಬಂದರೂ, ನೋಡಿಯೂ ನೋಡದವನಂತೆ ಕುಳಿತಿದ್ದ. ಇವನೇ ಏನು ವಾಸ್ರೆ ಗಾಣದಲ್ಲಿ ಸಂಬಂಧದ ಬಗ್ಗೆ ಮಾತನಾಡಿದ್ದು ಎನ್ನುವ ಸಂದೇಹ ಬರದೇ ಇರಲಿಲ್ಲ. ಮನೆಯವರೆಗೆ ಬಂದವರನ್ನು ಮಾತನ್ನಾಡಿಸಲು ಮನಸ್ಸಿಲ್ಲದವರಿಗೆ ಸಂಬಂಧದ ಅರ್ಥ ತಿಳಿದಿರುತ್ತದೆಯೇ. ಅವರ ಮನೆಯವರೆಗೆ ಅವನ ಕೋಣಗಳಿಗಾಗಿ ಅವನೇ ಬಂದಿದ್ದರಿಂದ ಅವನಾದರೂ ಮಾತನಾಡಿಸಬೇಕಲ್ಲವೇ.
ಹಾಗಾಗಿ ಆತ “ಹೂವಣ್ಣ” ಎಂದು ಕರೆದ. “ಹೂಂ” ಎನ್ನುವುದನ್ನು ಬಿಟ್ಟರೆ ಮತ್ಯಾವ ಮಾತು ಬರಲಿಲ್ಲ ಹೂವಣ್ಣನ ಬಾಯಿಂದ.
ಇನ್ನೂ ತಡಮಾಡುವುದು ಬೇಡ ಎಂದು “ಆಣ್ಣಾ ಗಾಣ ಎಲ್ಲಾ ಮುಗಿತೆ?” ಎಂದು ಪೀಠಿಕೆ ಹಾಕಿ, “ಗಾಣಾ ಮುಗ್ದ್ರೆ ಕೋಣ ತಕಂಡೆ ಹೋಗ್ಲೆ?” ಎಂದ ವಿಠ್ಠಲ.
ಅದಕ್ಕೆ ಹೂವಣ್ಣ ” ಹ, ಗಾಣಾ ಮುಗಿತ, ಆದ್ರೆ ಕೋಣ ತಕ್ಕಂಡೆ ಹೋಗುಕೆ ಕೊಣ್ಗೋಳ್ ಇರ್ಬೇಕಲ್ಲಾ?” ಎಂದಾಗ ವಿಠ್ಠಲಿನಿಗೆ ಅವನ ಮಾತಿನ ಅರ್ಥವಾಗದೇ “ಹಂಗಂದ್ರೆ, ಕೊಣವ ಇಲ್ಲೆ ಹೋಗವ್” ಎಂದು ಕೇಳಿದ.
ಹೂವಣ್ಣನಿಗೆ ಮಾತು ಕಲಿಸಬೇಕೇ, ಸುಳ್ಳು ಹೇಳುವುದನ್ನು ಅವನಿಗೆ ಹೇಳಿ ಕೊಡಬೇಕೇ. ಆತ ಈ ರೀತಿಯ ಅದೆಷ್ಟೋ ಗುರುವಿಲ್ಲದ ವಿದ್ಯೆಗಳನ್ನು ಕಲಿತವನಲ್ಲವೇ . ತಕ್ಷಣವೇ ಆತ “ಏನ್ ಹೇಳುದ್ ತಮ್ಮಾ, ನಮ್ಮ ಗಾಣಾ ಮುಗಿತೇ ಇದ್ದಂಗೆ ಅವ್ಕೆ ಯಾರ್ದೋ ದೃಷ್ಠಿ ಬಿಸ್ಟಿ ಆಯ್ತಾ ಏನಾ ಬೆಲಾ, ಕಣ್ಣಲ್ಲೇ ಏನೋ ಹೂವ್ ಬಿದ್ದದ್ದೇ ಹೆಳೆ, ಉಂಥಾರಾ ಮಾಡ್ದಂಗೆ ಮಾಡೆ ಸತ್ತೇ ಹೋಗ್ಬಿಟ್ಟು, ನಿಂಗೆ ಹೇಳ್ಕಳಿಸುವಾ ಅಂದ್ರೆ ಹೆಂಗೆ ಹೇಳುದ್ ಅಂದೆ ತಿಳಿದೇ ಸುಮ್ಗಾಗ್ಬಿಟ್ಟೆ” ಎಂದು ಆಗ ತಾನೆ ಹೊಳೆದ ಸುಳ್ಳನ್ನು ಸತ್ಯದಂತೆ ಬಿಂಬಿಸಿ ಹೇಳಿಯೇ ಬಿಟ್ಟ.
ವಿಠ್ಠಲಿನಿಗೆ ಏನು ಹೇಳಬೇಕೆಂದು ತಿಳಿಯದೇ ಗರಬಡಿದವನ ಹಾಗೆ ನಿಂತು ಬಿಟ್ಟ. “ಅಷ್ಟು ಚಲೋ ಇದ್ದ ಕೊಣ್ಗೋಳಿಗೆ ಇದ್ಕಿದ್ದ ಹಂಗೆ ಏನಾಗುಕೆ ಸಾದ್ಯ. ನಾನೇ ತಪ್ಪ ಮಾಡ್ದೆ, ಕೊಣ್ಗೋಳ ನಾನೇ ತಕಂಡ್ ಬಂದೆ, ಗಾಣಾ ಮುಗ್ಸಕಂಡೆ ಹುಡ್ಕಂಡೆ ಹೋಗ್ಬೇಕಾಗತ್, ಆದ್ರೆ ಏನ್ ಮಾಡುದ್, ಆವಗೆ ಹಿಂಗೆ ಆತಿದ್ ಅಂದೆ ಗುತ್ತಿಲ್ಲಾ ಆಗತ್ ಅಲ್ಲಾ. ಏಗೆ ಮತ್ತೆ ಮಳಗಾಲದ್ ಹೋಟಿಗೆ ವಾರ್ಲಾ ಇಲ್ಲಿಂದೆ ತರುದ. ತರುಕೆ ರೊಕ್ಕಾನಾದ್ರೂ ಇದೆ.” ಹೀಗೆ ಅವನ ಮನಸ್ಸಲ್ಲಿ ಒಂದಿಷ್ಟು ಪ್ರಶ್ನೆಗಳು ಮೂಡಿ ಮರೆಯಾದವು. ಅವನ ಒಳ ಮನಸ್ಸಿಗೆ ಇದು ಸಾದ್ಯವಿಲ್ಲ ಅನ್ನಿಸಿದರೂ ಹೂವಣ್ಣನೊಂದಿಗೆ ವಾದ ಮಾಡಲು ಮನಸ್ಸಾಗದೇ ಹೊರಡಲು ಅನುವಾದ. ಹೂವಣ್ಣನಿಗೂ ವಿಠ್ಠಲ ಹೊರಟು ಹೋದರೆ ಸಾಕಿತ್ತು ಎನಿಸಿತೋ ಏನೋ? ಏನು ಮಾತನ್ನಾಡದೇ ಸುಮ್ಮನೆ ಮತ್ತೆ ಚಿಟ್ಟೆಯ ಮೇಲೆ ಕುಳಿತ. ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಸುಮ್ಮನೆ ಅಲ್ಲಿಂದ ಹೊರಟ ವಿಠ್ಠಲ. ಮನದಲ್ಲಿ ಮಳೆಗಾಲದ ಹೋಟಿಗೆ ಏನು ಮಾಡುವುದು? ತನ್ನ ಕೋಣಗಳು ನಿಜವಾಗಿಯೂ ಸತ್ತು ಹೋಗಿರಬಹುದೇ? ಹೀಗೆ ತಕ್ಷಣಕ್ಕೆ ಉತ್ತರವಿಲ್ಲದ ಹಲವು ಪ್ರಶ್ನೆಗಳು ಸುಳಿಯ ತೊಡಗಿದವು.
ಮನೆಗೆ ಬಂದರೂ ಊಟ ಮಾಡಲು ಮನಸ್ಸಾಗಲಿಲ್ಲ. ಹೆಂಡತಿಗೆ ನಡೆದದ್ದನ್ನೆಲ್ಲ ಹೇಳಿ, “ಇನ್ಮುಂದೆ ನಿಮ್ಮ ಚಿಕ್ಕವ್ವಿ ಮನಿಯೋರ ಬಂದ್ರೆ ಜಾಸ್ತಿ ಮೆರವಣಿಗೆ ಮಾಡುದ್ ಬ್ಯಾಡಾ” ಎಂದು ಎಚ್ಚರಿಕೆಯನ್ನು ನೀಡಿದ. ಆಮೇಲೆ ಹಾಗೂ ಹೀಗೂ ಮಾಡಿ ಅವನೂರ ಸಹಕಾರಿ ಸಂಘದಿಂದ ಸಾಲ ಮಾಡಿ ಹೊಸ ಎತ್ತುಗಳನ್ನು ಕೊಂಡಿದ್ದ. ಸತ್ಯ ಎಷ್ಟು ದಿನ ಮುಚ್ಚಿಡಲು ಸಾದ್ಯ. ಅದೊಮ್ಮೆ ಹೊರ ಬರಲೇ ಬೇಕು. ಅವನ ಕೋಣದ ವಿಷಯ ಆಗಲೇ ಜನರಿಂದ, ಜನರ ಬಾಯಿಗೆ ಬಿದ್ದು ಸತ್ಯವೂ ಹೊರಗೆ ಬಂದಿತ್ತು. ಅವನ ಕೋಣಗಳು ಹೂವಣ್ಣ ಹೇಳಿದಂತೆ ಸತ್ತು ಹೋಗಿರಲಿಲ್ಲ. ಹೂವಣ್ಣ ಅವಗಳನ್ನು ಕುಮ್ಟೆ ಕಡೆಯ ಅವನ ಪರಿಚಿತರಾರಿಗೋ ತನ್ನದೇ ಕೋಣಗಳೆಂದು ಮಾರಿ ಕೊಟ್ಟಿದ್ದ ಎಂದು ಅವನನ್ನು ಹತ್ತೀರದಿಂದ ಬಲ್ಲವರಿಂದ ತಿಳಿದು ಬಂತು. ಅವನಿಗೆ ನಿಜ ತಿಳಿಯುವ ಹೊತ್ತಿಗೆ ಆ ಘಟನೆ ಮುಗಿದು ಆಗಲೇ ಬಹಳ ದಿನಗಳಾಗಿದ್ದರಿಂದ ಆ ಕುರಿತು ಯೋಚಿಸಲು ಹೋಗಿರಲಿಲ್ಲ. ಇದಾದ ಮೇಲೆ ಒಬ್ಬರ ಮುಖವನ್ನು ಒಬ್ಬರು ನೋಡಿರಲೂ ಇಲ್ಲ.
ಹೀಗೆ ಬಹಳ ಹೊತ್ತಿನಿಂದ ಯೋಚಿಸುತ್ತಾ ಕುಳಿತಿದ್ದ ಅವನಿಗೆ ಹೊತ್ತು ಮೇಲೇರುತ್ತಿರುವುದನ್ನು ನೋಡಿ, ಹೋ ಇಷ್ಟೊತ್ತು ಕುಳಿತು ಬಿಟ್ಟನೇ ಎಂದನಿಸಿ ಸೊಪ್ಪು ಕೊಯ್ಯಲು ಹೊರಟ. ಬೇಗ ಬೇಗ ಒಂದಿಷ್ಟು ಸೊಪ್ಪು ಕೊಯ್ದು ತಂದು ಕೊಟ್ಟಿಗೆಯಲ್ಲಿ ಹಾಸಿ ಬುಟ್ಟಿ ಹಿಡಿದು ಮನೆಯ ಕಡೆಗೆ ಹೊರಟ. ಮನೆಯ ಸಮೀಪ ಬರುತ್ತಿದ್ದಂತೆ, ಮನೆಯ ಜಗುಲಿಯ ಒಳಗೆ ಯಾರೋ ಕುಳಿತು ಮಾತನ್ನಾಡುವುದು ಕೇಳಿಸಿದಂತಾಗಿ ಮನೆಯ ಕಡೆ ಸ್ವಲ್ಪ ಲಕ್ಷ ಕೊಟ್ಟು ಮಾತನ್ನು ಆಲಿಸ ಹತ್ತಿದ.
“ತಂಗಿ ವಿಠ್ಠಲ ಇಟ್ಟೊತ್ತಿಗೆ ಬತ್ಯಾ, ಇನ್ನೂ ತಡಾ ಆತಿದಾ ಹೆಂಗೆ?” ಎಂದು ಕೇಳಿದವನ ಧ್ವನಿ ಎಲ್ಲೋ ಕೇಳಿದಂತಿದೆಯಲ್ಲ. ಬಹುಷಃ ಆತನಿರಬಹುದೇ? ಆತ ಈಗೇಕೆ ಮತ್ತೆ ಇಲ್ಲಿಗೆ ಬಂದ ಎನ್ನಿಸಿ, ನಾಣಿಗೆ ಕೊಟ್ಟಿಗೆಯ ಪಕ್ಕದಲ್ಲಿ ಸೊಪ್ಪಿನ ಮುಟ್ಟಿ ಇಟ್ಟು ಒಳಗೆ ಬರುತ್ತಿದ್ದಂತೆ ವಿಠ್ಠಲನ ಹೆಂಡತಿ, “ಆಣ್ಣಾ ಅವ್ರ ಬರೂಕೆ ಆಯ್ತ” ಎಂದವಳು ವಿಠ್ಠಲನನ್ನು ನೋಡಿ “ಅದೆ ಬಂದೇ ಬಿಟ್ರ” ಎಂದಳು.
ವಿಠ್ಠಲ ಅಷ್ಟೊತ್ತಿಗೆ ಒಳ ಜಗುಲಿಯ ಸಮೀಪಕ್ಕೆ ಬಂದು ಒಳಗೆ ಇಣುಕಿ ನೋಡಿದ. ಹೌದು ಅವನೇ. ಅವನು ಇಷ್ಟು ದಿನ ಯಾರನ್ನು ನೋಡ ಬಾರದು, ಒಂದೊಮ್ಮೆ ನೋಡಿದರೂ ಮಾತನ್ನಾಡಿಸಬಾರದು ಎಂದು ಕೊಂಡಿದ್ದನೋ, ಅವನು ಮನೆಯ ಒಳಗೆ ಬಂದು ಕುಳಿತಿದ್ದ. ಅವನೆಂದು ಕೆಲಸವಿಲ್ಲದೇ ಬರುವವನಲ್ಲ, ಏನೋ ಯೋಜನೆ ಹಾಕಿ ಯೋಚಿಸಿ ಬಂದಿರ ಬೇಕು ಎನ್ನಿಸಿತು. ಮನೆಯ ಜಗುಲಿಯವರೆಗೆ ಬಂದವನು ಇನ್ನೇನು ಮನೆಯೊಳಗೆ ಅಡಿ ಇಡಬೇಕು ಎನ್ನುವಾಗ ಒಳಗೆ ಕುಳಿತಾತ “ವಿಠಲ, ಏಗ್ ಬಂದೆ, ಬಾ” ಎನ್ನುತ್ತಾ ಅವನ ಮನೆಯಲ್ಲಿ ಅವನನ್ನೇ ಆಹ್ವಾನಿಸಿದ. ವಿಠ್ಠಲ ಏನು ಮಾತನ್ನಾಡದೇ “ಹೂಂ” ಎಂದಷ್ಟೇ ಹೇಳಿ, ತಾಂಬೂಲದ ತಟ್ಟೆಗೆ ಕೈ ಹಾಕಿ ಕವಳ ಹಾಕಲು ಅಣಿಯಾದ. ವಿಠ್ಠಲನು ಅವನನ್ನು ಮಾತನ್ನಾಡಿಸಲಿಲ್ಲ, ಅವನು ವಿಠ್ಠಲನನ್ನು ಮಾತನಾಡಿಸಲಿಲ್ಲ. ಇಬ್ಬರು ತಮ್ಮಷ್ಟಕ್ಕೆ ತಾವೇ ಸುಮ್ಮನೆ ಕುಳಿತಿದ್ದರು. ವಿಠ್ಠಲನ ಹೆಂಡತಿ ಬಂದು “ಏನ್ರೆ, ಮಿಂದ್ಕಂಡರೂ ಬರ್ರಿ, ಗಂಜಿ ಉಣ್ಣಕಿ” ಎಂದು ಅವನಿಗೆ ಸ್ನಾನದ ಎಚ್ಚರ ಮಾಡಿದಳು. ವಿಠಲ ಸ್ನಾನ ಮಾಡಿ ಮುಗಿಸಿ ಬರುವಷ್ಟರಲ್ಲಿ ಮನೆಗೆ ಬಂದು ಕುಳಿತಿದ್ದ ಹೂವಣ್ಣ ಬಟ್ಟಲಿನ ಮುಕ್ಕಾಲು ಭಾಗ ಗಂಜು ಕಾಲಿಯಾಗಿತ್ತು. ವಿಠ್ಠಲ ಊಟಕ್ಕೆ ಕುಳಿತು ಕೊಳ್ಳುವಷ್ಟರಲ್ಲಿ ಅವನ ಊಟವೂ ಮುಗಿದಿತ್ತು. ವಿಠ್ಠಲ ಏನನ್ನು ಕೇಳದೇ ಸುಮ್ಮನೆ ಊಟ ಮಾಡಿ ಹೊರಗೆ ಬಂದ. ಹೂವಣ್ಣ ಏನನ್ನೋ ಹೇಳಲು ಬಂದವನು ಮನಸ್ಸಿನಲ್ಲೇ ಇಷ್ಟೊತ್ತು ಅದನ್ನು ಅಧುಮಿಕೊಂಡು ಕುಳಿತಿದ್ದ. ವಿಠ್ಠಲಿನಿಗೂ ಗೊತ್ತು ಹೂವಣ್ಣ ಹೀಗೆ ಸುಮ್ಮನೆ ಬಂದಿರಲಾರನೆಂದು. ಹಾಗಂತ ಅವನನ್ನು ಕೇಳಿ ತಿಳಿದು ಕೊಳ್ಳುವ ಅವಶ್ಯಕತೆ ವಿಠ್ಠಲಿನಿಗಿರಲಿಲ್ಲ.
ಊಟ ಮಾಡಿ ಬಂದವನು ಸ್ವಲ್ಪ ಹೊತ್ತು ಅಡ್ಡಾಗೋಣವೆಂದು ಮಾಳಿಗೆಗೆ ಹೋಗಲು ಅಣಿಯಾಗುತ್ತಿದ್ದುದನ್ನು ನೋಡಿದ ಹೂವಣ್ಣ ಇನ್ನೂ ತಡ ಮಾಡುವುದು ಬೇಡ ಎಂದುಕೊಂಡು, “ವಿಠಲ, ಯಾರೋ ಹೇಳ್ತೇ ಇದ್ದದ್ರ, ನೀನೇನೋ ವಾರ್ಲಾ ಮಾರ್ಬೇಕ ಅಂತೇ ಇಂವಿ ಕಡಾ. ಕುಡುದೇ ಆದ್ರೆ ಹೇಳ ನಾನೇ ತಕಂಡೆ ಹೋತಿ. ಒಳ್ಳೆ ರೇಟ್ ಹಿಡ್ಕಂಡೆ ಕುಡ್ತಿ” ಎಂದು ಒಂದೇ ಉಸಿರಿನಲ್ಲಿ ಹೇಳಿದ.
ವಿಠ್ಠಲನಿಗೆ ಅರ್ಥವಾಗಿ ಹೋಯಿತು, ಇದಕ್ಕೆ ಆತ ಬಂದಿರಬೇಕೆಂದು. ಹೋಗಿ ಹೋಗಿ ಯಾರಾದ್ರೂ ಇವನಂತೋರಿಗೆ ಮತ್ತೆ ಎತ್ತುಗಳನ್ನು ಕೊಡಕ್ಕೆ ಸಾದ್ಯಾನಾ? ಅದು ಇರುಳು ಕಂಡ ಬಾವಿಗೆ ಹಗಲಲ್ಲಿ ಬೀಳುವುದುಂಟೆ. “ಇಲ್ಲಾ ವಾರ್ಲಾ ಕುಡುಲಾ, ನಿಂಗೆ ಯಾರ್ ಹೇಳದ್ರ ನಾ ವಾರ್ಲಾ ಕುಡ್ತಿ ಅಂದೆ” ಎಂದ
“ಮೊನ್ನಗೆ ನಿಮ್ಮೂರ ಹೊನ್ನಯ್ಯ ಸಿಕ್ಕದ, ನೀನೇನೋ ವಾರ್ಲಾ ಮಾರ್ತೇ ಇಂವಾ ಅಂದ, ಅದ್ಕೆ ಕೇಳುವಾ ಅಂತೆ ಬಂದೆ”
“ಹೌದೆ, ನಾ ಇಲ್ಲಿವರಿಗೂ ಕೊಡ್ಬೇಕ ಅಂತೇ ಇದ್ದೆ, ಏಗೆ ನೋಡಿದ್ರೆ ಕುಡುದೇ ಬ್ಯಾಡಾ ಅನ್ನಿಸ್ತೇ ಇದ. ನಂಗೆ ಹೆಂಗೂ ಉಂದೆರ್ಡ ವರ್ಷ ತೊಂದ್ರೆ ಇಲ್ಲಾ. ಅವ ಸತ್ರೆ ಇಲ್ಲೇ ಸಾಯ್ತವ. ಬೇರೆ ಕಡಿಗೆ ಹೋಗೆ ಸಾಯುದ್ ಬ್ಯಾಡಾ” ಎಂದಿಷ್ಟು ಹೇಳಿ ತನ್ನ ಕೆಲಸ ಮಾತು ಮುಗಿಯಿತು ಎನ್ನುವಂತೆ ಮಾಳಿಗೆ ಏರಿದ ಮಧ್ಯಾನದ ನಿದ್ದೆಗಾಗಿ.
ಹೂವಣ್ಣ ಮತ್ತೇನನ್ನೂ ಹೇಳದೇ ವಿಠ್ಠಲನ ಹೆಂಡತಿ ಮಾಡಿ ಕೊಟ್ಟ ಚಹಾ ಕುಡಿದು ಹೊರಟು ಹೋದ. ವಿಠ್ಠಲನಿಗೆ ನಿದ್ದೆ ಬಾರದಿದ್ದರೂ ಅವನಿರುವವರೆಗೆ ಕೆಳಗೆ ಬರುವ ಮನಸ್ಸಾಗಲಿಲ್ಲ. ಅವನು ಹೋದ ಮೇಲೆ ಕೆಳಗೆ ಬಂದು ಚಹಾ ಕುಡಿದು ಬೆಳಿಗ್ಗೆ ಹೊರಗೆ ಮೇಯಲು ಬಿಟ್ಟ ದನಗಳು ಬಂದರೆ ಕೊಟ್ಟಿಗೆ ಹತ್ತಿರ ಬಂದರೆ ಕಟ್ಟಿ ಬರುತ್ತೇನೆ ಎನ್ನುವುದಾಗಿ ಹೆಂಡತಿಗೆ ಹೇಳಿ ದನ ಕಟ್ಟಿ ಬರಲು ಕೊಟ್ಟಿಗೆಯತ್ತ ಹೊರಟ.
 

‍ಲೇಖಕರು G

26 October, 2014

2 Comments

  1. shanthi k a

    good one ..idu yaava kade bhaashe ? koneyalli avanu konagalanna maarade bittaddu nemmadiyaaytu.

    • Manju Hichkad

      ಧನ್ಯವಾದಗಳು ಶಾಂತಿ, ಇದು ನಮ್ಮ ಅಂಕೋಲಾ ಕಡೆಯ ಆಡು ಭಾಷೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading