ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾನುವಾರದ ನೀಳ್ಗತೆ ’ದ್ರೌಪದಿ ಸಿಂಹಾಸನಾರೋಹಣಂ’

ಸವಿ ರಾಜ್ ಎ ಎಸ್

ನಾನು ಮಣಿಪುಷ್ಪಕ. ಭಗವಾನ್ ವೇದವ್ಯಾಸರ ಸಾವಿರಾರು ಶಿಷ್ಯರಲ್ಲಿ ನಾನೂ ಒಬ್ಬ. ನಾನೀಗ ಬರೆಯಲು ಹೊರಟಿರುವ ಕಥೆ ಗುರುಗಳಿಗೆ ತಿಳಿಯಬಾರದು. ತಿಳಿದರೆ ಅವರೇನೂ ನನ್ನ ಮೇಲೆ ಕೋಪಿಸಿಕೊಳ್ಳುವುದಿಲ್ಲ, ಯಕಶ್ಚಿತ್ ಬೇಸರವನ್ನೂ ತೋರ್ಪಡಿಸುವುದಿಲ್ಲ. ಅವರ ವ್ಯಕ್ತಿತ್ವವೇ ಅಂತಹುದು, ಅವರ ಕೃತಿಯಂತೆಯೇ ಅಗಾಧವಾದುದು. ಸುಮ್ಮನೆ ಭಗವಾನ್ ಎಂದು ಕರೆಸಿಕೊಂಡವರಲ್ಲ ಅವರು. ನಿಜಕ್ಕೂ ಅವರು ಮನುಷ್ಯ ರೂಪದ ಭಗವನ್. ಅಲ್ಲದೇ ಹೋದರೆ ಜೀವಮಾನವಿಡೀ ಕುಳಿತರೂ ನಮ್ಮಂತಹ ಸಾಮಾನ್ಯರು ಒಂದು ಭಾಗವನ್ನೂ ಓದಿ ಜೀರ್ಣಿಸಿಕೊಳ್ಳಲಾಗದ ಅಪೌರುಷೇಯವಾದ ವೇದಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅವುಗಳನ್ನು ವಿಭಜಿಸುವುದೆಂದರೆ ಮನುಷ್ಯಮಾತ್ರದವರು ಮಾಡಬಲ್ಲ ಕೆಲಸವೇ? ಅವರನ್ನು ಮೊದಲ ಸಲ ನೋಡಿದಾಗಲೇ ಎಂತಹ ದೈವಿಕವಾದ ಕಂಪನಗಳ ಅನುಭೂತಿಯಾಗಿತ್ತು. ಅವರ ಆಶ್ರಮ ಸೇರಿ ಪಶುಪಾಲನೆ, ವ್ಯವಸಾಯದಲ್ಲಿ ನಿರತನಾಗಿ ಮೂರು ತಿಂಗಳಾದ ನಂತರ ನನಗೆ ಕರೆ ಕಳುಹಿಸಿದ್ದರು. ಅಂಜುತ್ತಲೇ ಆಶ್ರಮದ ಕೇಂದ್ರ ಭಾಗದಲ್ಲಿದ್ದ ಅಶ್ವತ್ಥ ವೃಕ್ಷದ ಬುಡದಲ್ಲಿ ಕೃಷ್ಣಾಜಿನದ ಮೇಲೆ ಕುಳಿತಿದ್ದ ಅವರ ಮುಂದೆ ಕೈ ಮುಗಿದು ತಲೆತಗ್ಗಿಸಿ ನಿಂತೆ.
“ಮಗೂ ನಿನ್ನ ಹೆಸರೇನು?”, ಸಿಡಿಲಿನಂತೆ ಗಂಭೀರವಾದ ಆದರೆ ಕಾಠಿಣ್ಯವಿಲ್ಲದ ಕರುಣಾಪೂರ್ಣವಾದ ಧ್ವನಿ. ತಲೆಯೆತ್ತಿ ನೋಡಿದೆ. ಗಾಢವಾದ ಕೃಷ್ಣ ವರ್ಣ, ಎದೆಯ ಮೇಲೆ ಇಳಿಬಿದ್ದ ಶ್ವೇತ ದುಕೂಲದಂತಹ ಗಡ್ಡ, ಪದ್ಮಾಸನದ ಮೇಲೆ ಸ್ಥಿತವಾದ ಪರ್ವತ ಶಿಖರದಂತಹ ನೀಳ ಕಾಯ, ಮುಖದ ಮೇಲೆ ನೆಲೆ ನಿಂತ ದೈವೀ ತೇಜಸ್ಸು, ಅಗಾಧವಾದ ಜ್ಞಾನಸಂಪತ್ತನ್ನು ಕುಡಿದಿದ್ದ ಕಣ್ಣುಗಳಲ್ಲಿ ಇನ್ನೂ ಇಂಗದ ಬಾಯಾರಿಕೆ, ನಿರ್ಲಕ್ಷ್ಯಕ್ಕೆ ತುತ್ತಾಗಿ ಕೃಶವಾಗಿದ್ದರೂ ಆರೋಗ್ಯಪೂರ್ಣವಾದ ಶರೀರ, ಯಾವ ಭಾವವಿಕಾರಕ್ಕೂ ಒಳಗಾಗದ ನಿರ್ಲಿಪ್ತ ಮುಖಭಾವ. ಇಂತಹ ಅಲೌಕಿಕ ತೇಜಸ್ಸನ್ನು ನೋಡಿ ಕೃತಕೃತಾರ್ಥರಾಗುವ ಬದಲು ಅದೇಕೆ ಬೆದರಿದರೋ ಅಂಬಿಕೆ, ಅಂಬಾಲಿಕೆಯರು? ಉಗುಳು ನುಂಗುತ್ತ “ನಾನು ಮಣಿಪುಷ್ಪಕ, ನಿಮ್ಮ ಶಿಷ್ಯ ಸುಘೋಷ ಮುನಿಗಳ ಜೇಷ್ಠ ಪುತ್ರ” ಎಂದು ಉತ್ತರಿಸಿ ಸಂತೋಷ, ಅಚ್ಚರಿ ಅಥವಾ ಮಮತೆಯ ಭಾವವನ್ನು ಅವರ ಮುಖದಲ್ಲಿ ಹುಡುಕಲು ಪ್ರಯತ್ನಿಸಿದೆ. ಉಹೂಂ, ಯಾವ ಭಾವವೂ ಇಲ್ಲ, ಅದೇ ನಿರ್ಲಿಪ್ತತೆ, ಐದು ಕ್ಷಣಗಳ ಮೌನ. “ಮಗೂ, ನಿನಗೇನು ಗೊತ್ತು?” ಮತ್ತೊಂದು ಸಿಡಿಲು! ನಾನು ತಂದೆಯ ಮುಖಾಂತರ ಋಗ್ವೇದ ಮತ್ತು ಉಪನಿಷತ್ತುಗಳನ್ನು ಅಧ್ಯಯನ ಮಾಡಿದ್ದೇನೆ ಎಂದುತ್ತರಿಸಿದೆ.
’ಹಾಗಾದರೇ ನಾನು ನಿನಗೊಂದು ಪ್ರಶ್ನೆ ಕೇಳಬಹುದೇ?’
’ಕೇಳಿ ಗುರುದೇವ’
’ಕಣ್ಣು ಎಂದರೆ ಏನು?’
’ಯಾವ ಇಂದ್ರಿಯದ ಮುಖಾಂತರ ಲೌಕಿಕವಾದ ಭಾವಲೋಕದ ಪರಿಧಿಯೊಳಗೆ ಬಂದ ಅನುಭವಗಳನ್ನು ದೃಶ್ಯ ರೂಪದಲ್ಲಿ ಗ್ರಹಿಸುತ್ತೇವೆಯೋ ಆ ಇಂದ್ರಿಯವೇ ಕಣ್ಣು’
’ಕಿವಿ ಎಂದರೆ ಏನು?’
’ಕೇವಲ ದೃಶ್ಯರೂಪದಲ್ಲಿ ಗ್ರಹಿಸಿದ ಅನುಭವ ಅಪೂರ್ಣವಾಗುವುದರಿಂದ ದೃಶ್ಯದೊಂದಿಗೆ ಮಿಳಿತವಾದ ಶಬ್ಧಗಳನ್ನು ಗ್ರಹಿಸಿ ತನ್ಮೂಲಕ ಆ ಅನುಭವವನ್ನು ಪೂರ್ಣಗೊಳಿಸುವ ಇಂದ್ರಿಯವೇ ಕಿವಿ’
’ನಾಲಗೆ ಎಂದರೆ ಏನು?’
’ಕಣ್ಣು ಮತ್ತು ಕಿವಿಗಳ ಮೂಲಕ ದೊರಕಿದ ಅನುಭವವನ್ನು ಅಭಿವ್ಯಕ್ತಿಸುವ ಮಾಧ್ಯಮ ನಾಲಗೆ’
’ಮಗೂ, ಇನ್ನೂ ಮೂರು ತಿಂಗಳು ಪಶುಪಾಲನೆ ಮಾಡು. ಜೊತೆಗೆ ಇನ್ನೊಮ್ಮೆ ವೇದ, ವೇದಾಂತಗಳ ಅಧ್ಯಯನ ಮಾಡು. ಮೂರು ತಿಂಗಳ ನಂತರ ನಾನು ನಿನ್ನನ್ನು ಸಂದರ್ಶಿಸುತ್ತೇನೆ’
’ಅಪ್ಪಣೆ ಗುರುದೇವ’
ನನ್ನ ಅಭಿಮಾನಕ್ಕೆ ಮೊದಲ ಪೆಟ್ಟು ಬಿತ್ತು. ಮತ್ತೆ ಮೂರು ತಿಂಗಳು ಹಗಲಿನಲ್ಲಿ ಪಶುಪಾಲನೆ, ಇರುಳಿನಲ್ಲಿ ಉಪನಿಷತ್ತುಗಳ ಅಧ್ಯಯನ. ಮೂರು ತಿಂಗಳ ನಂತರ ಗುರುಗಳಿಂದ ಕರೆ ಬಂತು.
’ಮಗೂ ಈಗ ಹೇಳು, ಕಣ್ಣು ಎಂದರೆ ಏನು?’
’ಗೊತ್ತಿಲ್ಲ, ನೀವೇ ತಿಳಿಸಿ ಗುರುದೇವ’
’ಕಣ್ಣು ಎಂದರೆ ಕಣ್ಣಿನ ಕಣ್ಣು, ಕಿವಿ ಎಂದರೆ ಕಿವಿಯ ಕಿವಿ, ನಾಲಗೆ ಎಂದರೆ ನಾಲಗೆಯ ನಾಲಗೆ. ಜ್ಞಾನಿಯಾದವನಿಗೆ ಕಣ್ಣುಗಳಿದ್ದರೆ ಸಾಲದು, ಕಣ್ಣುಗಳಿಗೂ ಕಣ್ಣುಗಳು ಇರಬೇಕು. ಅರ್ಥವಾಯಿತೇ?’
’ಇಲ್ಲ’
’ಈಗ ಹೇಳು, ನಿನಗೇನು ಗೊತ್ತಿದೆ?’
’ನನಗೇನೂ ಗೊತ್ತಿಲ್ಲ, ಗುರುದೇವ’
’ನನಗೂ ಏನೂ ಗೊತ್ತಿಲ್ಲ. ನಾವೆಲ್ಲರೂ ಸೇರಿ ತಪಸ್ಸಿನ ಮೂಲಕ ಬ್ರಹ್ಮನನ್ನು ಅರಿಯುವ ಪ್ರಯತ್ನ ಮಾಡೋಣವೇ?’
ನನ್ನ ಅಹಂಕಾರವೆಲ್ಲಾ ಇಳಿದುಹೋಯಿತು. ಲಜ್ಜೆಯಿಂದ ತಲೆ ತಗ್ಗಿಸಿ ನಿಂತೆ.
’ಇವತ್ತಿನಿಂದ ನೀನು ಈ ಆಶ್ರಮದ ವಿಧ್ಯಾರ್ಥಿ’
ಅವತ್ತಿನಿಂದ ಆರಂಭವಾಯಿತು ನನ್ನ ನಿಜವಾದ ಆಶ್ರಮವಾಸಿಕ ವಿಧ್ಯಾಭ್ಯಾಸ. ವೇದ, ಉಪನಿಷತ್ತುಗಳ ಅಧ್ಯಯನ, ಅವುಗಳ ಸಾರವನ್ನು ತಿಳಿಸುವ ಉಪನ್ಯಾಸಗಳು, ಧರ್ಮ ಅಧರ್ಮಗಳ ಜಿಜ್ಞಾಸೆಗಳನ್ನು ಅವಲೋಕಿಸುವ ಗೋಷ್ಠಿಗಳಲ್ಲಿ ನನ್ನ ದಿನಗಳು ಕಳೆದುಹೋಗುತ್ತಿದ್ದವು. ವಾರಕ್ಕೊಮ್ಮೆ ಭಗವನ್ ವೇದವ್ಯಾಸರು ಪ್ರವಚನ ನೀಡುತ್ತಿದ್ದರು. ಅವರ ಉಳಿದ ಸಮಯವೆಲ್ಲಾ ಭರತ ವಂಶದ ಚರಿತ್ರೆಯನ್ನು ತಿಳಿಸುವ ’ಶ್ರೀಮನ್ಮಹಾಭಾರತ’ ಎನ್ನುವ ಕೃತಿಯ ರಚನೆಗೆ ಮೀಸಲು. ಬ್ರಹ್ಮನಿಂದ ಮೊದಲ್ಗೊಂಡು, ಬ್ರಹ್ಮನ ಮಾನಸ ಪುತ್ರ ಅತ್ರಿ, ಅತ್ರಿ ಅನಸೂಯರಿಗೆ ಜನಿಸಿದ ಚಂದ್ರ, ಚಂದ್ರ ರೋಹಿಣಿಯರ ಮಗ ಬುಧ, ಬುಧ ಮತ್ತು ಇಳಾದೇವಿಗೆ ಜನಿಸಿದ ಪುರೂರವಸ್, ಪುರೂರವನ ನಂತರ ಸಿಂಹಾಸನವೇರಿದ ಅನೇಕರಾದ ಆಯುಸ್, ನಹುಷ, ಯಯಾತಿ, ಪುರು, ದುಷ್ಯಂತ, ಭರತ, ಪ್ರತೀಪ, ಶಾಂತನು, ಚಿತ್ರಾಂಗದ, ವಿಚಿತ್ರವೀರ್ಯ, ಪಾಂಡು, ಧೃತರಾಷ್ಟ್ರರವರೆಗಿನ ಚಂದ್ರವಂಶದ ದೊರೆಗಳ ಇತಿಹಾಸವೇ ಒಂದು ತೂಕವಾದರೆ, ಸಿಂಹಾಸನಕ್ಕಾಗಿ ಪಾಂಡುಪುತ್ರರು ಮತ್ತು ಧೃತರಾಷ್ಟ್ರಪುತ್ರರ ನಡುವೆ ನಡೆಯುತ್ತಿರುವ ಘರ್ಷಣೆ ಅದರ ಸಮತೂಕಕ್ಕೆ ನಿಲ್ಲುತ್ತದೆ. ತಮ್ಮ ಕಾಲದಲ್ಲೇ ನಡೆಯುತ್ತಿರುವ ಈ ಘಟನೆಗಳನ್ನು ವೇದವ್ಯಾಸರು ಸ್ಥೂಲವಾಗಿ ಮತ್ತು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಯಾವ ಪೂರ್ವಾಗ್ರಹಕ್ಕೂ ಸಿಲುಕದೆ ಎಲ್ಲವನ್ನೂ ಯಥಾವತ್ ದಾಖಲಿಸುತ್ತಿದ್ದಾರೆ, ತಾವೇ ರಚಿಸುತ್ತಿರುವ ಕೃತಿಯಲ್ಲಿನ ಪಾತ್ರಗಳೊಂದಿಗೆ ಹಲವು ಸಾರಿ ಮುಖಾಮುಖಿಯಾಗಿದ್ದಾರೆ, ಹಲವು ಮಹತ್ತರ ಘಟನೆಗಳಲ್ಲಿ ತಾವೇ ಪಾತ್ರವಾಗಿ ಭಾಗವಹಿಸಿದ್ದಾರೆ.

* * *

ಅವತ್ತು ಆಶ್ರಮಕ್ಕೆ ಯುಧಿಷ್ಟಿರ ಬಂದಿದ್ದ. ಯುಧ್ಧಾರಂಭಗೊಳ್ಳಲು ಇನ್ನು ಕೇವಲ ಒಂದು ದಿನವಿತ್ತು. ಹನ್ನೆರಡು ವರ್ಷ ಅರಣ್ಯದಲ್ಲಿ ಕಳೆದುಬಂದು, ಒಂದು ವರ್ಷದಲ್ಲಿನ ಅಜ್ಞಾತವಾಸದಲ್ಲಿ ದಾಸ್ಯ ಜೀವನ ನಡೆಸಿದ್ದರೂ ಮುಖದ ಮೇಲಿನ ರಾಜಕಳೆ ಒಂದಿನಿತೂ ಮಾಸಿರಲಿಲ್ಲ. ಬಂದವನೇ ತನ್ನೊಂದಿಗೆ ತಂದಿದ್ದ ಅಪಾರವಾದ ಗೋಸಂಪತ್ತನ್ನು ಅರ್ಪಿಸಿ ಗುರುದೇವರ ಪಾದಗಳ ಮೇಲೆರಗಿದ. ಗುರುಗಳು ಅದೇ ನಿರ್ಲಿಪ್ತ ಮುಖಭಾವದಿಂದ ಆತನ ತಲೆಯ ಮೇಲೆ ಕೈಯಿರಿಸಿದರು.
ಆತಂಕದ ಭಾವದಲ್ಲಿಯೇ ಮಾತಿಗಾರಂಭಿಸಿದ, ’ಪೂಜ್ಯರೇ, ಈ ಯುಧ್ಧದ ಫಲಿತಾಂಶ?’
’ನಿಶ್ಚಿಂತೆಯಿಂದಿರು ಧರ್ಮಜ, ಎಲ್ಲಿ ಧರ್ಮವಿದೆಯೋ ಅಲ್ಲಿ ವಿಜಯ ನಿಶ್ಚಿತ. ಮತ್ತು ನೀನು ಸಾಕ್ಷಾತ್ ಧರ್ಮದ ಪ್ರತಿರೂಪ!’
ಮುಖದಲ್ಲಿ ದಟ್ಟೈಸಿದ್ದ ಆತಂಕದ ಮೋಡಗಳು ಮೆಲ್ಲನೆ ಚದುರತೊಡಗಿದವು. ನಿರಾಳನಾದ ಯುಧಿಷ್ಟಿರ ಮತ್ತೊಮ್ಮೆ ಗುರುಗಳ ಪಾದಗಳಿಗೆ ವಂದಿಸಿ ತನ್ನ ಪರಿವಾರದೊಂದಿಗೆ ನಿರ್ಗಮಿಸಿದ.
ಗುರುಗಳ ಮಾತಿನಿಂದ ಯುಧಿಷ್ಟಿರನ ಗೊಂದಲಗಳು ಬಗೆಹರಿದರೂ ನನ್ನಲ್ಲಿಯೇ ಗೊಂದಲಗಳು ಆರಂಭವಾದವು. ಶಿಷ್ಯರ ಅಪಾರ ಸಂದಣಿಯ ನಡುವೆಯೂ ನನ್ನ ಮನಸ್ಥಿತಿಯನ್ನು ನಿಚ್ಚಳವಾಗಿ ಗುರುತಿಸಿದ ಗುರುಗಳು ಸನ್ನೆಯಿಂದಲೇ ಬಳಿಗೆ ಕರೆದು ’ಮಗೂ ಮಣಿಪುಷ್ಪಕ, ಸಂದೇಹದಿಂದ ತೊಳಲಾಡಬೇಡ. ಯಾವುದೋ ಪ್ರಶ್ನೆ ನಿನ್ನ ಒಳಮನಸ್ಸನ್ನು ತಿನ್ನುತ್ತಿದೆ. ನಿಸ್ಸಂಕೋಚವಾಗಿ ಕೇಳು’ ಎಂದರು.
’ಗುರುದೇವ, ಕೌರವರ ಬಳಿ ಹನ್ನೊಂದು ಅಕ್ಷೋಹಿಣಿ ಸೈನ್ಯವಿದೆ. ಪಾಂಡವರ ಬಳಿಯಾದರೋ ಕೇವಲ ಏಳು ಅಕ್ಷೋಹಿಣಿ ಸೈನ್ಯ! ಅದೂ ಅಲ್ಲದೆ ಕುರು ಸೇನೆಯಲ್ಲಿ ಅಜೇಯರಾದ ಭೀಷ್ಮ ಪಿತಾಮಹ, ಮಹಾನ್ ಧನುರ್ಧರರಾದ ದ್ರೋಣಾಚಾರ್ಯ, ಮಹಾರಥಿ ಕರ್ಣ, ಮಹಾಬಲ ಶಲ್ಯ, ಪರಾಕ್ರಮಿಗಳಾದ ಶತಕೌರವರು, ಅಶ್ವತ್ಥಾಮ, ಸಂಶಪ್ತಕರಿದ್ದಾರೆ. ಭೀಷ್ಮ ಪಿತಾಮಹ ಇಚ್ಛಾಮರಣಿ, ವಸುಷೇಣನು ಎದೆಯಲ್ಲಿಯೇ ಅಮೃತ ಕಲಶವುಳ್ಳವನು, ಅಶ್ವತ್ಥಾಮನಾದರೋ ಚಿರಂಜೀವಿ. ಯುಧ್ಧದ ಕುರಿತು ಕನಿಷ್ಠ ಜ್ಞಾನವಿರುವವರನ್ನು ಕೇಳಿದರೂ ಕೌರವರ ವಿಜಯ ನಿಶ್ಚಿತ ಎಂದೇ ಹೇಳುತ್ತಾರೆ. ಇದೆಲ್ಲವೂ ನಿಮಗೆ ತಿಳಿದಿರುವ ವಿಷಯಗಳಲ್ಲವೇ ಗುರುದೇವ? ಹೀಗಿದ್ದರೂ ನೀವೇಕೆ ಯುಧಿಷ್ಠಿರನಿಗೆ ಅತಾರ್ಕಿಕವಾದ ಭರವಸೆಯನ್ನು ನೀಡಿದಿರಿ?’
’ಮಗೂ ನೀನು ಎತ್ತಿರುವ ಪ್ರಶ್ನೆ ಸಕಾರಣವಾದುದ್ದೇ. ಆದರೆ ಮಹಾಭಾರತ ಯುಧ್ಧ ಎಂದೋ ಮುಗಿದುಹೋಗಿ ಜಯಾಪಜಯಗಳು ನಿಶ್ಚಯವಾಗಿದೆ. ಮುಂದೆ ಕುರುಕ್ಷೇತ್ರದಲ್ಲಿ ನಡೆಯುವ ಸಮರ ವಿಜಯಿಯನ್ನು ಔಪಚಾರಿಕವಾಗಿ ಲೌಕಿಕ ಜಗತ್ತಿಗೆ ಉದ್ಘೋಷ ಮಾಡುವ ಕೆಲಸವಷ್ಟೇ’
’ಏನು, ಕುರುಕ್ಷೇತ್ರ ಯುಧ್ಧ ಮುಗಿದುಹೋಗಿದೆಯೇ?’
’ಮಗೂ, ಜಗತ್ತಿನ ಪ್ರತಿಯೊಂದು ಚರಾಚರ ವಸ್ತುವೂ ದ್ವಂದ್ವಾತ್ಮಕವಾದ ಶಕ್ತಿಗಳಿಂದ ನಿರ್ಮಿತವಾಗಿವೆ. ಜಗತ್ತು ಸೃಷ್ಠಿಯಾಗಿರುವುದೇ ದ್ವಂದ್ವಾತ್ಮಕವಾಗಿ. ಉದಾಹರಣೆಗೆ ಪುರುಷ-ಪ್ರಕೃತಿ, ಗಂಡು-ಹೆಣ್ಣು, ಸುಖ-ದುಃಖ, ಹುಟ್ಟು-ಸಾವು, ಜ್ಯೋತಿ-ತಮಸ್ಸು, ಹಗಲು-ರಾತ್ರಿ ಇತ್ಯಾದಿ. ಪರಸ್ಪರ ವಿರುದ್ಧ ಧ್ರುವಗಳಲ್ಲಿ ನಿಂತ ಎರಡು ಭಿನ್ನ ಶಕ್ತಿಗಳ ಸೆಳೆತಗಳು ಎಲ್ಲಿಯವರೆಗೆ ಸಕ್ರಿಯವಾಗಿರುತ್ತವೆಯೋ, ಅಲ್ಲಿಯವರೆಗೆ ಜಗತ್ತಿನಲ್ಲಿ ಜೀವಂತಿಕೆಯಿರುತ್ತದೆ. ಅದ್ವೈತವಾಗಿದ್ದ ಪರಬ್ರಹ್ಮ ಎಂಬ ಶಕ್ತಿಬೀಜ ಪುರುಷ ಮತ್ತು ಪ್ರಕೃತಿ ಎನ್ನುವ ಎರಡು ಭಿನ್ನ ಶಕ್ತಿಗಳಾಗಿ ಒಡೆಯಿತು. ಪುರುಷ ಮತ್ತು ಪ್ರಕೃತಿಯರ ಅಲೌಕಿಕ ಮಿಲನದಿಂದ ಜಗತ್ತು ಉತ್ಪತ್ತಿಯಾಗಿದೆ. ಪ್ರಕೃತಿಯೇ ಅದ್ವೈತವಾದ ಜೀವವನ್ನು ಗಂಡು-ಹೆಣ್ಣು ಎನ್ನುವ ದ್ವೈತವಾಗಿ ಬೇರ್ಪಡಿಸಿತು. ಈ ದ್ವೈತ ಮತ್ತೆ ಅದ್ವೈತವಾದಾಗ ಹೊಸ ಜೀವವೊಂದರ ವಿಕಾಸವಾಗುತ್ತದೆ. ಸುಖ ದುಃಖಗಳೆಂಬ ವಿರೋಧಿ ಭಾವಗಳ ಅನುಭವಗಳ ಸಂಘಟನೆಯಿಂದಾಗಿಯೇ ಮನುಷ್ಯ ಪ್ರಬುದ್ಧನಾಗುತ್ತಾನೆ. ಹುಟ್ಟಿದವನಿಗೆ ನಿಶ್ಚಿತವಾದುದು ಸಾವು. ಹಗಲನ್ನು ರಾತ್ರಿ ಹಿಂಬಾಲಿಸುತ್ತದೆ. ಕತ್ತಲೆಯೇ ಇರದೆಹೋದರೆ ಬೆಳಕಿಗೆಲ್ಲಿಯ ಅಸ್ಥಿತ್ವ? ಪ್ರತಿ ಚರಾಚರ ವಸ್ತುವಿನ ಮೂಲಕಣವಾದ ಅಣು ಕೂಡಾ ಋಣಾತ್ಮಕ ಮತ್ತು ಧನಾತ್ಮಕ ಶಕ್ತಿಗಳಿರುವ ಭಿನ್ನವಾದ ಉಪಕಣಗಳ ಸಂಯೋಜನೆಯಿಂದ ನಿರ್ಮಿತವಾಗಿದೆ. ಹಾಗೆಯೇ ಪ್ರತಿ ಮನುಷ್ಯನ ಎದೆಯೊಳಗೂ ಧರ್ಮ ಮತ್ತು ಅಧರ್ಮ ಎಂಬ ಭಿನ್ನ ತತ್ವಗಳ ಸಂಘರ್ಷ ನಡೆಯುತ್ತಿರುತ್ತದೆ. ವ್ಯಕ್ತಿಯ ಅಂತಃಸಾಕ್ಷಿಯೇ ಕುರುಕ್ಷೇತ್ರ ಯುದ್ಧಭೂಮಿ. ಅಲ್ಲಿ ಧರ್ಮ ಒಂದು ಪಕ್ಷವಾದರೆ ಅಧರ್ಮ ಇನ್ನೊಂದು ಪಕ್ಷ. ಲೌಕಿಕವಾದ ಬಂಧನಗಳು ಮನಸ್ಸನ್ನು ಅಧರ್ಮದೆಡೆಗೆ ಸೆಳೆದರೆ, ಅಲೌಕಿಕವಾದ ಔನ್ನತ್ಯದ ಬಯಕೆ ಅದೇ ಮನಸ್ಸನ್ನು ಧರ್ಮದೆಡೆಗೆ ಆಕರ್ಷಿಸುತ್ತದೆ. ಧಾರ್ಮಿಕನ ಮನಸ್ಸನ್ನು ಕೂಡಾ ಕ್ಷಣಮಾತ್ರವಾದರೂ ಅಧಾರ್ಮಿಕ ವಿಕೃತಿಗಳು ಆಕ್ರಮಿಸಿರುತ್ತವೆ, ಅಂತೆಯೇ ಪರಮ ದುಷ್ಟನ ಎದೆಯ ಆಳದಲ್ಲೆಲ್ಲೋ ಧರ್ಮ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿರುತ್ತದೆ. ಕತ್ತಲೆಯನ್ನು ಬೆಳಕು ಬೆಳಗುತ್ತದೆ, ಕತ್ತಲೆಯೇ ಇರದಿದ್ದರೆ ಬೆಳಕು ಯಾವುದನ್ನು ಬೆಳಗುತ್ತಿತ್ತು ಮತ್ತು ಅದನ್ನು ಬೆಳಕು ಎಂದೇಕೆ ಕರೆಯುತ್ತಿದ್ದೆವು? ಹಾಗೆಯೇ ನಮ್ಮೆಲ್ಲರೊಳಗೂ ಅಧರ್ಮ ಇರುವುದರಿಂದಲೇ ಯಾವುದು ಧರ್ಮ ಎಂಬ ಅರಿವು ಮೂಡುತ್ತದೆ ಮತ್ತು ಆ ಧರ್ಮವನ್ನು ಆಚರಿಸಿದಾಗ ಆತ್ಮಸಂತೋಷ ದೊರೆಯುತ್ತದೆ.
ನಾಳೆ ಕುರುಕ್ಷೇತ್ರದಲ್ಲಿ ಆರಂಭವಾಗಲಿರುವ ಬಾಹ್ಯ ಸಂಘರ್ಷಕ್ಕಿಂತಲೂ ನಿರ್ಣಾಯಕವಾದುದು ಮಹಾಭಾರತದ ಪಾತ್ರಗಳ ಒಳಗೆ ನಡೆದು ಹೋಗಿರುವ, ಈಗಲೂ ನಡೆಯುತ್ತಿರುವ, ಮುಂದೆಯೂ ನಡೆಯಲಿರುವ ಧರ್ಮಾಧರ್ಮಗಳ ನಡುವಿನ ಈ ಆಂತರಿಕ ಸಂಘರ್ಷ. ದ್ರೌಪದಿಯ ವಸ್ತ್ರಾಪಹರಣವಾದಾಗ ಭೀಷ್ಮರ ಎದೆಯೊಳಗೆ ನಡೆದಿದ್ದು ಇದೇ ಸಂಘರ್ಷ, ಏಕಲವ್ಯನ ಹೆಬ್ಬೆರಳು ಪಡೆಯುವಾಗ ದ್ರೋಣರ ಮನಸ್ಸಿನೊಳಗೂ ನಡೆದಿದ್ದು ಇದೇ ಸಂಘರ್ಷ. ಕೃಷ್ಣನಿಂದ ಜನ್ಮರಹಸ್ಯ ತಿಳಿದಾಗ ಕರ್ಣನೊಳಗೆ ನಡೆದಿದ್ದ ಸಂಘರ್ಷವೂ ಇದೇ. ಮಹಾಭಾರತದ ಯಾವ ಪಾತ್ರವೂ ಈ ಸಂಘರ್ಷದಿಂದ ತಪ್ಪಿಸಿಕೊಂಡಿಲ್ಲ. ಈ ಭಿನ್ನ ಸೆಳೆತಗಳ ಆಕರ್ಷಣೆಯಲ್ಲಿ ಧರ್ಮದೆಡೆಗೆ ಆಕರ್ಷಿತರಾದವರು ವಿಜಯಿಗಳಾಗಿದ್ದಾರೆ, ಅಧರ್ಮದೆಡೆಗೆ ಸೆಳೆಯಲ್ಪಟ್ಟವರು ತಮ್ಮ ಚರಮಗೀತೆಯನ್ನು ತಾವೇ ಬರೆದುಕೊಂಡಿದ್ದಾರೆ. ನಾಳೆಯಿಂದ ಆರಂಭವಾಗುವ ಯುದ್ಧ ಯಾರು ಯಾರು ವಿಜಯಿಯಾಗಿದ್ದಾರೆ ಮತ್ತು ಯಾರು ವಿನಾಶ ಹೊಂದಿದ್ದಾರೆ ಎನ್ನುವುದನ್ನು ಲೌಕಿಕ ಜಗತ್ತಿಗೆ ತಿಳಿಸುವ ಒಂದು ಸಾಂಕೇತಿಕ ಪ್ರಕ್ರಿಯೆ ಅಷ್ಟೇ. ನಾನು ಕುರುಕ್ಷೇತ್ರ ಯುದ್ಧ ಪರ್ಯಾವಸಾನವಾಗಿ ಯುಧಿಷ್ಠಿರನು ಸಿಂಹಾಸನಾರೋಹಣನಾಗುವ ದಿವ್ಯ ಮಹೂರ್ತವನ್ನೇ ಎದುರು ನೋಡುತ್ತಿದ್ದೇನೆ. ಧರ್ಮರಾಯ ಪಟ್ಟಾಭಿಷಿಕ್ತನಾಗುವ ಕ್ಷಣ ಭರತಖಂಡದ ಇತಿಹಾಸದಲ್ಲಿಯೇ ಸುವರ್ಣ ಕ್ಷಣ. ಯುಧಿಷ್ಠಿರ ಸಿಂಹಾಸನಾರೋಹಣ ಕೇವಲ ಪಾಂಡವರ ಆಳ್ವಿಕೆಯ ಪ್ರತಿಷ್ಠಾಪನೆ ಅಲ್ಲ. ಅದು ಧರ್ಮದ ಪ್ರತಿಷ್ಠಾಪನೆ, ಸನಾತನವಾದ ಆರ್ಯ ಧರ್ಮ ಭೋಧಿಸಿದ ಅತ್ಯುನ್ನತವಾದ ಆದರ್ಶಗಳ ಪ್ರತಿಷ್ಠಾಪನೆ, ಅಪೌರುಷೇಯವಾದ ವೇದಗಳ ಅಂತಃಸತ್ವದ ಪ್ರತಿಷ್ಠಾಪನೆ, ಸಹಸ್ರಾರು ವರ್ಷಗಳಿಂದ ನನ್ನಂತಹ ತಪಸ್ವಿಗಳು ನಂಬಿ ಆಚರಿಸುತ್ತಿರುವ ತತ್ವ, ಸಿದ್ಧಾಂತಗಳ ಪ್ರತಿಷ್ಠಾಪನೆ. ಯುಧಿಷ್ಠಿರನ ವಿಜಯ ಭರತವರ್ಷದ ಮುಂದಿನ ಸಹಸ್ರಾರು ತಲೆಮಾರುಗಳಿಗೆ ಧರ್ಮವನ್ನು ಆಚರಿಸಲು ನೈತಿಕ ಸ್ಥೈರ್ಯ ತುಂಬಲಿದೆ.

* * *

ಮಹಾಭಾರತ ಯುದ್ಧ ಹದಿನೆಂಟು ದಿನಗಳ ಕಾಲ ನಡೆಯಿತು. ಪ್ರತೀದಿನ ಏನಿಲ್ಲವೆಂದರೂ ಲಕ್ಷ ಯೋಧರು ಹತರಾಗುತ್ತಿದ್ದರು. ಕುರುಸೇನೆಯನ್ನು ಹತ್ತು ದಿನಗಳ ಕಾಲ ಮುನ್ನಡೆಸಿದ ಭೀಷ್ಮಾಚಾರ್ಯರು ಶರಶಯ್ಯೆಯ ಮೇಲೆ ಮಲಗಿದರು, ದ್ರೋಣಾಚಾರ್ಯರು ದ್ರುಪದ ಪುತ್ರನಿಂದ ಹತರಾದರು, ಕರ್ಣನನ್ನು ಅನುಜನಾದ ಧನಂಜಯನು ಸಂಹರಿಸಿದನು, ಶಲ್ಯನನ್ನು ಯುಧಿಷ್ಠಿರನು ವಧಿಸಿದನು, ಹದಿನೆಂಟನೆಯ ದಿನ ಸಮಂತಪಂಚಕದಲ್ಲಿ ನಡೆದ ಗದಾಯುದ್ಧದಲ್ಲಿ ಭೀಮನು ಸುಯೋಧನನನ್ನು ಮರ್ದಿಸುವ ಮೂಲಕ ಯುದ್ಧಕ್ಕೆ ತೆರೆಬಿತ್ತು. ಯುದ್ಧದ ಸಾವು ನೋವುಗಳು, ಬಂಧುಗಳನ್ನು ಕಳೆದುಕೊಂಡವರ ಆಕ್ರಂದನ, ಭೀಷ್ಮ, ದ್ರೋಣರಂಥ ಮಹಾರಥಿಗಳ ಸಾವು ಯಾವುವೂ ವ್ಯಾಸರನ್ನು ವಿಚಲಿತಗೊಳಿಸಲಿಲ್ಲ.
ಆದಿಪರ್ವ, ಸಭಾಪರ್ವ, ವನಪರ್ವ, ವಿರಾಟಪರ್ವ, ಉದ್ಯೋಗಪರ್ವ, ಭೀಷ್ಮಪರ್ವ, ದ್ರೋಣಪರ್ವ, ಕರ್ಣಪರ್ವ, ಶಲ್ಯಪರ್ವ, ಗದಾಪರ್ವಗಳೆಂಬ ಹತ್ತು ಪರ್ವಗಳಲ್ಲಿ ಮಹಾಭಾರತ ಯುದ್ಧದ ಅಂತ್ಯದವರೆಗಿನ ಘಟನೆಗಳನ್ನು ವ್ಯಾಸರು ದಾಖಲಿಸಿದರೆ, ಸ್ತ್ರೀ ಪರ್ವ ಮತ್ತು ಶಾಂತಿ ಪರ್ವಗಳಲ್ಲಿ ಯುಧಿಷ್ಠಿರ ಸಿಂಹಾಸನಾರೋಹಣದ ಮುಂಚಿನ ಯುದ್ಧಾನಂತರದ ಘಟನೆಗಳನ್ನು ದಾಖಲಿಸಿದರು.

* * *

ಇಂದು ಯುಧಿಷ್ಠಿರನ ಪಟ್ಟಾಭಿಷೇಕ ಮಹೋತ್ಸವ. ಅಂಗ, ವಂಗ, ಕಳಿಂಗ, ಸಿಂಧೂ, ಸೌರಾಷ್ಟ್ರ, ಕಾಂಭೋಜ, ದ್ರಾವಿಡ, ಚೋಳ, ಚೀನೀ, ಗಾಂಧಾರ, ಕಾಶ್ಮೀರ, ಕರ್ಣಾಟಕ, ಮಾಳ್ವ, ಸುಮಾತ್ರಾ, ವಿಧರ್ಭ ಮೊದಲಾದ ದೇಶಗಳ ಅರಸು ಮಕ್ಕಳಿಂದ, ರಾಯಭಾರಿಗಳಿಂದ, ಗಣ್ಯರಿಂದ ಹಸ್ತಿನಾವತಿ ನಗರ ತುಂಬಿಹೋಗಿದೆ. ಸ್ವಾಗತ ಸಮಿತಿಯ ನೇತೃತ್ವವನ್ನು ಸ್ವತಃ ವಾಸುದೇವನೇ ವಹಿಸಿಕೊಂಡಿದ್ದಾನೆ. ಮನೆಗಳ ಮುಂದೆ ಪನ್ನೀರು ಎರಚಿ, ಅಂಗಳವನ್ನು ಗೋಮಯದಿಂದ ಸಾರಿಸಿ, ಮಾನಿನಿಯರು ರಂಗವಲ್ಲಿಗಳನ್ನು ಬಿಡಿಸಿದ್ದಾರೆ. ರಾಜವೀದಿಯನ್ನು ತಳಿರು, ತೋರಣ, ಹೂವುಗಳಿಂದ ಸಿಂಗರಿಸಲಾಗಿದೆ. ಭರತವರ್ಷದಲ್ಲಿಯೇ ಅತ್ಯಂತ ವೈಭವೋಪೇತವಾಗಿ ನಡೆಯಲಿರುವ ಈ ಸಮಾರಂಭವನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಬಂದಿರುವ ಬಂಧು ಬಾಂಧವರ ಸತ್ಕಾರಕ್ಕೆಂದು ನದೀತೀರಗಳಲ್ಲಿ ತಾತ್ಕಾಲಿಕ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಗಣ್ಯ ವ್ಯಕ್ತಿಗಳ ಮನರಂಜನೆಗಾಗಿ ನಾನಾ ಊರುಗಳಿಂದ ನರ್ತಕಿಯರೂ, ವೇಶ್ಯೆಯರೂ ಆಗಮಿಸಿದ್ದಾರೆ. ರಸ್ತೆಗಳ ಇಕ್ಕೆಲಗಳಲ್ಲಿ ವರ್ತಕರು ಮಿಠಾಯಿಗಳು ಮತ್ತು ಕಲ್ಲು ಹಾಗೂ ಮರದಿಂದ ಮಾಡಲಾದ ಆಟಿಕೆಗಳ ಮಾರಾಟ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಪುರಾತನವಾದ ಹಸ್ತಿನಾವತಿ ನಗರಿಯು ಶೋಡಶ ಪ್ರಾಯದ ನವವಧುವಿನಂತೆ ಅಲಂಕೃತಗೊಂಡಿದೆ.
ಇತ್ತ ಅರಮನೆಯನ್ನು ತಾವರೆ, ನೈದಿಲೆ, ಮಲ್ಲಿಗೆ, ಸಂಪಿಗೆ ಮೊದಲಾದ ವನಸುಮಗಳಿಂದ ಸಿಂಗರಿಸಲಾಗಿದೆ. ಚಕ್ರವರ್ತಿಯಾಗಲಿರುವ ಯುಧಿಷ್ಠಿರನ ಅಲಂಕಾರಕ್ಕೆಂದೇ ಸಮುದ್ರ ತಳದಿಂದ ಶ್ರೇಷ್ಠವಾದ ಮುತ್ತು, ರತ್ನ, ಹವಳಗಳನ್ನು ಆರಿಸಿ ತರಲಾಗಿದೆ. ರಾಜ ಪರಿವಾರದವರ ಅಲಂಕಾರಕ್ಕಾಗಿ ವಜ್ರ ವೈಡೂರ್ಯಗಳ ಕಸೂತಿ ಮಾಡಲಾಗಿರುವ ಪೀತಾಂಬರ ವಸ್ತ್ರಗಳನ್ನು ಸಾಮಂತ ರಾಜರು ಕೊಡುಗೆಯಾಗಿ ನೀಡಿದ್ದಾರೆ. ಬ್ರಾಹ್ಮಣರಿಗೆ ದಾನವಾಗಿ ನೀಡಲು ಹೇರಳವಾದ ಗೋಸಂಪತ್ತನ್ನು ಸಂಗ್ರಹಿಸಲಾಗಿದೆ. ಬಡಬಗ್ಗರಿಗೆ ನೀಡಲು ವಸ್ತ್ರ, ಧಾನ್ಯಗಳ ರಾಶಿಯನ್ನು ಆಕಾಶದೆತ್ತರಕ್ಕೆ ಪೇರಿಸಲಾಗಿದೆ. ಲೋಕಕಲ್ಯಾಣಾರ್ಥವಾಗಿ ನೇರವೇರಲಿರುವ ಯಜ್ಞ ಯಾಗಾದಿಗಳಲ್ಲಿ ಹೋತೃ, ಅಧ್ವರ್ಯು, ಉದ್ಗಾತೃ ಮತ್ತು ಬ್ರಹ್ಮರಾಗಿ ಭಾಗವಹಿಸಲು ಉತ್ತರಪಥ ಮತ್ತು ದಕ್ಷಿಣಪಥಗಳಿಂದ ಬ್ರಹ್ಮರ್ಷಿಗಳು, ಮಹರ್ಷಿಗಳು ಮತ್ತು ಋಷಿಗಳು ಬಂದು ಸೇರಿದ್ದಾರೆ. ಒಮ್ಮೆಲೇ ಸಾವಿರಾರು ಮಂದಿ ಕುಳಿತು ಭೋಜನ ಸವಿಯಬಹುದಾದ ಬೃಹತ್ ಭೋಜನಶಾಲೆ, ಅದರ ಒಂದು ಪಾರ್ಶ್ವದಲ್ಲಿ ಸುಸಜ್ಜಿತವಾದ ಪಾಕಶಾಲೆಯನ್ನು ಕಟ್ಟಲಾಗಿದೆ. ದ್ರಾಕ್ಷಿ, ಗೋಡಂಬಿ, ಬಾದಾಮಿ, ಖರ್ಜೂರ, ಉತ್ತುತ್ತೆ, ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನು ಯಥ್ಥೇಚ್ಚವಾಗಿ ಸುರಿದು ನುರಿತ ಪಾಕಶಾಸ್ತ್ರಜ್ಞರು ಷಡ್ರಸಯುಕ್ತ ಪಂಚಭಕ್ಷ್ಯ ಪರಮಾನ್ನಗಳನ್ನು ಸಿದ್ಧಪಡಿಸುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇಂದ್ರನ ರಾಜಧಾನಿ ಅಮರಾವತಿ ನಗರಿಯೇ ಭುವಿಗಿಳಿದಂತೆ ಹಸ್ತಿನಾವತಿ ನಗರಿ ಶೋಭಿಸುತ್ತಿದೆ.
ಈ ವಿಶೇಷ ಸಂಧರ್ಭವನ್ನು ಕಣ್ತುಂಬಿಕೊಳ್ಳಲು ಭಗವಾನ್ ವೇದವ್ಯಾಸರ ಶಿಷ್ಯ ಪರಿವಾರದ ಅಂಗವಾಗಿ ನಾನೂ ಭಾಗವಹಿಸಿದ್ದೇನೆ. ಗುರುದೇವರು ಅವರೇ ಹೇಳಿದಂತೆ ಧರ್ಮ ಪ್ರತಿಷ್ಠಾಪನೆಯಾಗಲಿರುವ ಆ ಸುಮುಹೂರ್ತವನ್ನು ನೋಡಲು ಕಾತರರಾಗಿ ಕುಳಿತಿದ್ದಾರೆ. ಯುಧಿಷ್ಠಿರನು ಕುಲಪುರೋಹಿತರ ಮೇಲ್ವಿಚಾರಣೆಯಲ್ಲಿ ಸಿಂಹಾಸನವೇರುವ ಮುನ್ನ ನೆರವೇರಿಸಬೇಕಾದ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಪೂರೈಸಿದನು. ವಿಧಿಗಳ ಕೊನೆಯ ಹಂತವಾಗಿ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ನಮಸ್ಕರಿಸಿದನು. ನಹುಷ, ಯಯಾತಿ, ಪುರು, ಕುರು, ಭರತ ಮೊದಲಾದ ಮಹಾಪುರುಷರು ಅಲಂಕರಿಸಿದ್ದ ಆ ರತ್ನಖಚಿತವಾದ ಸಿಂಹಾಸನವನ್ನು ಇನ್ನೇನು ಯುಧಿಷ್ಠಿರನು ಆರೋಹಣ ಮಾಡಬೇಕು, ಅಷ್ಟರಲ್ಲಿ ವಿಚಿತ್ರವೊಂದು ಸಂಭವಿಸಿತು. ಧರ್ಮರಾಯನ ಮೇಲೆ ಪುಷ್ಪವೃಷ್ಟಿಗೈಯ್ಯಲು ಆಗಸದಲ್ಲಿ ನೆರೆದಿದ್ದ ಯಕ್ಷ, ಕಿನ್ನರ, ಕಿಂಪುರುಷ, ದೇವ, ಗಂಧರ್ವಾದಿಗಳು, ಹಸ್ತಿನಾವತಿಯಲ್ಲಿ ಸೇರಿದ ಮುನಿಗಣ, ರಾಜಗಣವೆಲ್ಲವೂ ವಿಸ್ಮಯದಿಂದ ನೋಡುತ್ತಿರುವಂತೆಯೇ ಆ ದಿವ್ಯವಾದ ಸಿಂಹಾಸನವು ನೆಲದಿಂದ ಮೇಲೆದ್ದು ಊರ್ಧ್ವಮುಖಿಯಾಗಿ ಚಲಿಸಲಾರಂಭಿಸಿತು. ಸುಮಾರು ಎಂಟು ಅಡಿಗಳಷ್ಟು ಮೇಲಕ್ಕೆ ಚಲಿಸಿ ಯಾವ ಆಧಾರವೂ ಇಲ್ಲದೆ ವಾತಾವರಣದಲ್ಲಿ ಸ್ಥಿರವಾಗಿ ನಿಂತಿತು. ಹಸ್ತಿನಾವತಿಯ ಆಗಸದಲ್ಲಿನ ಆದಿತ್ಯನನ್ನು ಮೋಡಗಳು ಮರೆಮಾಡಿ ಕತ್ತಲಾವರಿಸಿತು. ಭಯಾಗ್ರಸ್ತವಾದ ಖಗ ಮೃಗಗಳು ಕರ್ಕಶವಾದ ಶಬ್ದಗಳನ್ನು ಹೊರಡಿಸುತ್ತ ತಮ್ಮ ತಮ್ಮ ತಾವುಗಳನ್ನು ಸೇರಿಕೊಂಡವು. ಬಾನಿನಲ್ಲಿ ಧೂಮಕೇತು ಕಾಣಿಸಿಕೊಂಡಿತು. ಉಲ್ಕಾಪಾತವಾಯಿತು. ಕಾಲವು ಸ್ತಂಭಿಸಿತು. ಈ ಅಪಶಕುನಗಳಿಂದ ಭೀತರಾಗಿ ಎಲ್ಲರೂ ಆತಂಕಗೊಂಡಿರಲು ಲೋಹದಿಂದ ಲೋಹಕ್ಕೆ ಬಡಿದಾಗ ಉಂಟಾಗುವ ಠೇಂಕಾರದಂತಹ ಉಚ್ಛ ಸ್ವರದಲ್ಲಿ ಆ ಸಿಂಹಾಸನವು ಮಾತನಾಡಲಾರಂಬಿಸಿತು.
’ಹೇ ಆರ್ಯಪುತ್ರ! ಚಂದ್ರವಂಶದಲ್ಲಿ ಜನಿಸಿದ ಮಹಾಮಹಿಮರಾದ ಪುರೂರವ, ನಹುಷ, ಪುರು, ದುಷ್ಯಂತ, ಭರತ, ಶಾಂತನು ಮೊದಲಾದ ಮಹಾತ್ಮರು ನನ್ನನ್ನು ಆರೋಹಣ ಮಾಡಿ ನನ್ನ ಅಸ್ಥಿತ್ವವನ್ನು ಪುನೀತಗೊಳಿಸಿದ್ದಾರೆ. ಶ್ರೇಷ್ಠ ವಂಶದಲ್ಲಿ ಜನಿಸಿ ಅತ್ಯಂತ ಶ್ರೇಷ್ಠ ಗುಣಗಳಿಂದ ಸಂಪನ್ನರಾದ ವ್ಯಕ್ತಿಗಳು ಮಾತ್ರ ಅಲಂಕರಿಸಬಹುದಾದ ಸಿಂಹಾಸನವಿದು. ಅಖಂಡ ಭರತದೇಶವೇ ನನ್ನ ಮುಂದೆ ನಿಂತು ತಲೆಬಾಗಿ ಗೌರವಿಸುತ್ತದೆ. ಈ ಸಿಂಹಾಸನಕ್ಕಾಗಿ ಭೀಷ್ಮ, ದ್ರೋಣ, ಕರ್ಣರಂಥ ಅತೀಬಲ ಪರಾಕ್ರಮಿಗಳು ಪ್ರಾಣಾರ್ಪಣೆಗೈದಿದ್ದಾರೆ. ಅಸಂಖ್ಯ ಸೈನಿಕರು, ರಥಿಕರು, ಪದಾತಿಗಳು ತಮ್ಮ ಜೀವವನ್ನೇ ಬಲಿದಾನ ನೀಡಿದ್ದಾರೆ. ಸಹಸ್ರಾರು ಮಂದಿ ಪತೀವಿಯೋಗ, ಪುತ್ರವಿಯೋಗ ಮತ್ತು ಪಿತೃವಿಯೋಗದಿಂದ ದುಃಖಿಸುತ್ತಿದ್ದಾರೆ. ಈ ಯುದ್ಧಕ್ಕಾಗಿ ಅಪಾರವಾದ ಸಂಪತ್ತಿನ ನಷ್ಟವಾಗಿದೆ. ಹಸ್ತಿನಾವತಿಯ ಪ್ರಜೆಗಳಿಂದ ಸುಯೋಧನನು ಹದಿನಾರು ವರ್ಷಗಳ ತೆರಿಗೆಯ ಹಣವನ್ನು ಮುಂಚಿತವಾಗಿಯೆ ಸಂಗ್ರಹಿಸಿ ಯುದ್ಧಕ್ಕಾಗಿ ವಿನಿಯೋಗಿಸಿದ್ದಾನೆ. ನನ್ನನ್ನು ಅಲಂಕರಿಸಿ ರಾಜ್ಯಭಾರ ನಡೆಸಲು ಇಂತಹ ಅಗಾಧವಾದ ಸಂಘರ್ಷ, ತ್ಯಾಗ, ಬಲಿದಾನಗಳು ನಡೆದಿರುವಾಗ ಅತ್ಯಂತ ಶ್ರೇಷ್ಠವಾದ ಗುಣಗಳನ್ನು ಹೊಂದಿ ಅರ್ಹತೆ ಪಡೆದಿರುವ ವ್ಯಕ್ತಿಯೊಬ್ಬ ನನ್ನನ್ನು ಏರಿದರೆ ಮಾತ್ರ ಈ ತ್ಯಾಗ, ಬಲಿದಾನಗಳಿಗೆ ಸಾರ್ಥಕತೆ ದೊರೆಯುತ್ತದೆ. ಹೇ ಭರತಕುಲಪ್ರಸೂತ, ನೀನೇ ಹೇಳು ಈ ಸಿಂಹಾಸನವನ್ನೇರಲು ನಿನಗೇನು ಅರ್ಹತೆಯಿದೆ? ಈ ಅತ್ಯುನ್ನತವಾದ ಸ್ಥಾನವನ್ನಲಂಕರಿಸಲು ನೀನು ಮಾಡಿರುವ ತ್ಯಾಗ, ಬಲಿದಾನಗಳಾದರೂ ಏನು? ನನ್ನ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಿ ನನ್ನನ್ನು ತೃಪ್ತಿಗೊಳಿಸಿದರೆ ಮಾತ್ರ ನಾನು ಮತ್ತೆ ಕೆಳಗಿಳಿದು ಮೃತ್ತಿಕೆಯ ಮೇಲೆ ಸ್ಥಾಪಿತವಾಗಿ ನಿನ್ನ ಸಿಂಹಾಸನಾರೋಹಣಕ್ಕೆ ಅವಕಾಶ ನೀಡುತ್ತೇನೆ. ಇಲ್ಲದಿದ್ದರೆ ರಾಜಕಾರ್ಯದಿಂದ ನಿವೃತ್ತಿ ಪಡೆದು ಅರ್ಹ ವ್ಯಕ್ತಿಯೊಬ್ಬನನ್ನು ಚಕ್ರವರ್ತಿಯನ್ನಾಗಿಸು.’

ಸಿಂಹಾಸನದ ಮಾತುಗಳನ್ನು ಕೇಳಿಸಿಕೊಂಡ ಯುಧಿಷ್ಠಿರನು ರಾಜೋಚಿತವಾದ ತಾಳ್ಮೆ ಮತ್ತು ಗಾಂಭೀರ್ಯಗಳಿಂದ ಈ ಮಾತುಗಳನ್ನು ಹೇಳಿದನು. ” ಸ್ವರ್ಣ, ರಜತ, ವಜ್ರ, ವೈಡೂರ್ಯ, ಪಚ್ಚೆ, ಮರಕತ, ಮುತ್ತು, ರತ್ನ, ಹವಳಗಳಿಂದ ಸುಶೋಭಿತವಾದ ದೈವೀ ಗುಣಗುಳನ್ನುಳ್ಳ ಸಿಂಹಾಸನವೇ, ಶಾಂತನುವಿನ ಪ್ರಪೌತ್ರನಾದ, ಭೀಷ್ಮನ ಪೌತ್ರನಾದ, ಪಾಂಡುವಿನ ಜೇಷ್ಠ ಪುತ್ರನಾದ ಯುಧಿಷ್ಠಿರನ ನಮಸ್ಕಾರಗಳನ್ನು ಸ್ವೀಕರಿಸು. ಶ್ರೇಷ್ಠನಾದ ವ್ಯಕ್ತಿಯ ಕಾರ್ಯಗಳೇ ಆತನ ಶ್ರೇಷ್ಠತೆಯನ್ನು ಬಿಂಬಿಸಬೇಕೇ ಹೊರತು ಆತನ ಮಾತುಗಳಲ್ಲ. ಆತ್ಮಪ್ರಶಂಸೆ ತಾಮಸ ಗುಣದ ಅಭಿವ್ಯಕ್ತಿಗಳಲ್ಲಿ ಒಂದು. ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುವುದು ಎಂದರೆ ಪಾವಕನು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ತನ್ನನ್ನೇ ತಾನು ದಹಿಸಿಕೊಂಡಂತೆ. ಸ್ವಕುಚಮರ್ದನ ಧರ್ಮಜನ ನೀತಿ ಅಲ್ಲ. ಆದರೂ ನೀನು ನನ್ನ ಅರ್ಹತೆಯನ್ನು ಪ್ರಶ್ನಿಸಿರುವುದರಿಂದ ಅನಿವಾರ್ಯವಾಗಿ ನನ್ನ ಶ್ರೇಷ್ಠತೆಯನ್ನು ನಿನ್ನ ಅವಗಾಹನೆಗೆ ತರುತ್ತಿದ್ದೇನೆ. ಭರತವರ್ಷದಲ್ಲಿ ಅತ್ಯಂತ ಶ್ರೇಷ್ಠವಾದ ರಾಜಕುಲಗಳು ಸೂರ್ಯವಂಶ ಮತ್ತು ಚಂದ್ರವಂಶಗಳು. ಸಮಸ್ತ ವಿಶ್ವವೇ ಗೌರವಿಸುವ ಚಂದ್ರವಂಶದಲ್ಲಿ ನಾನು ಜನಿಸಿದ್ದೇನೆ. ಇಹ ಲೋಕದ ನ್ಯಾಯಾನ್ಯಾಯಗಳನ್ನು ಪರಲೋಕದಲ್ಲಿ ನಿರ್ಣಯಿಸುವ ತ್ರಿಲೋಕಗಳ ಸರ್ವೋಚ್ಛ ನ್ಯಾಯಾಧೀಶನಾದ, ಧರ್ಮದ ಅಧಿದೇವತೆಯಾದ ಯಮಧರ್ಮ ನನ್ನ ಜನಕ. ನಾನೆಂದೂ ನನ್ನ ಜೀವನದಲ್ಲಿ ಋಜುಮಾರ್ಗವನ್ನು ಮೀರಿಲ್ಲ. ಸತ್ಯದಲ್ಲಿ ಹರಿಶ್ಚಂದ್ರನಿಗೆ, ಧರ್ಮದಲ್ಲಿ ಶ್ರೀ ರಾಮಚಂದ್ರನಿಗೆ, ನೀತಿಯಲ್ಲಿ ವಿದುರನಿಗೆ ನಾನು ಸಮನೆಂದು ತಿಳಿದವರು ವರ್ಣಿಸಿದ್ದಾರೆ. ಇದು ನನ್ನ ಅರ್ಹತೆ. ಇನ್ನು ಹಸ್ತಿನಾವತಿಯ ಕ್ಷೋಣಿಗೋಸ್ಕರ ನಾನು ಮಾಡಿರುವ ತ್ಯಾಗ ಬಲಿದಾನಗಳನ್ನು ಪ್ರಶ್ನಿಸುತ್ತಿರುವೆ. ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸವನ್ನು ನಾನು ಅನುಭವಿಸಿಲ್ಲವೇ? ನನ್ನ ಕಣ್ಣೆದುರಿಗೇ ನನ್ನ ಪತ್ನಿಯ ವಸ್ತ್ರಾಪಹರಣವಾಗಲಿಲ್ಲವೇ? ಯುದ್ಧದಲ್ಲಿ ನನ್ನ ಮತ್ತು ಅನುಜರ ಪುತ್ರರನ್ನು ಕಳೆದುಕೊಂಡಿಲ್ಲವೇ? ನನ್ನ ಬಂಧುಗಳನ್ನೂ, ಮಿತ್ರರನ್ನೂ ಕಳೆದುಕೊಂಡಿಲ್ಲವೇ? ಇದೆಲ್ಲವೂ ತ್ಯಾಗವಲ್ಲದೇ ಮತ್ತೇನು?’
ಧರ್ಮರಾಯನ ಮಾತುಗಳಿಂದ ಎಲ್ಲರೂ ತೃಪ್ತರಾಗಿ ತಲೆದೂಗುತ್ತಿರಲು ಸಿಂಹಾಸನವು ಹೀಗೆ ಹೇಳೀತು ’ ಯುಧಿಷ್ಠಿರ, ನಿನ್ನ ಪತ್ನಿಯ ವಸ್ತ್ರಾಪಹರಣವಾಗಲು, ನೀವು ವನವಾಸ ಮತ್ತು ಅಜ್ಞಾತವಾಸಗಳನ್ನು ಅನುಭವಿಸಲು, ಯುದ್ಧಭೂಮಿಯಲ್ಲಿ ಬಂಧು ಮಿತ್ರರನ್ನು ಕಳೆದುಕೊಳ್ಳಲು ಯಾರು ಕಾರಣ ಎಂದು ನೀನೇ ಶಾಂತಚಿತ್ತನಾಗಿ ಯೋಚಿಸು. ನಿನ್ನ ಜೂಜುಕೋರತನವೇ ಇದಕ್ಕೆಲ್ಲಾ ಮೂಲ ಕಾರಣವಲ್ಲವೇ? ನಿನ್ನ ಜೂಜಿನ ವ್ಯಸನವನ್ನು ಮುಚ್ಚಿಹಾಕಲು ಧರ್ಮದ ಕಾರಣವನ್ನು ನೀಡಬೇಡ. ಅಗ್ನಿಸಾಕ್ಷಿಯಾಗಿ, ತ್ರಿಕರಣಪೂರ್ವಕವಾಗಿ ಕೈಹಿಡಿದ ಧರ್ಮಪತ್ನಿಯನ್ನು ಜೂಜಿನಲ್ಲಿ ಪಣಕ್ಕಿಟ್ಟವನು ನೀನು. ನಾಳೆ ಪಟ್ಟವೇರಿದ ಮೇಲೆ ಹಸ್ತಿನಾವತಿಯ ಮಹಿಳೆಯರನ್ನು ಜೂಜಿನಲ್ಲಿ ಪಣಕ್ಕಿಟ್ಟರೆ ಆಶ್ಚರ್ಯವೇನಿದೆ? ಕೈಹಿಡಿದ ಹೆಂಡತಿಯ ಮಾನವನ್ನೇ ರಕ್ಷಿಸಲಾಗದವನು ನೀನು, ನಿನ್ನಿಂದ ಈ ರಾಜ್ಯದ ಸ್ತ್ರೀಕುಲದ ಮಾನರಕ್ಷಣೆ ಸಾಧ್ಯವಾದೀತೆ? ನಿಜಕ್ಕೂ ದ್ರೌಪದಿಯ ವಸ್ತ್ರಾಪಹರಣ ಮಾಡಿದವನು ನೀನು, ದುಶ್ಯಾಸನ ಕೇವಲ ನಿಮಿತ್ತ ಮಾತ್ರ. .
ಪತಿಯಾಗಿ ಹೋಗಲಿ, ಅಣ್ಣನಾಗಿಯಾದರೂ ನಿನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಫಲನಾಗಿರುವೆಯಾ ಎಂದು ಆತ್ಮಾವಲೋಕನ ಮಾಡಿಕೋ. ಅಣ್ಣನಾದವನು ತಮ್ಮಂದಿರನ್ನು ರಕ್ಷಿಸಬೇಕು. ಆದರೆ ನಿನ್ನ ದುಶ್ಚಟದಿಂದಾಗಿ ನಿನ್ನ ಅನುಜರು ರಾಜವಂಶದಲ್ಲಿ ಜನಿಸಿದರೂ ನೋವು, ಸಂಕಟಗಳನ್ನು ಅನುಭವಿಸಬೇಕಾಯಿತು. ಹಂಸತೂಲಿಕಾತಲ್ಪದ ಮೇಲೆ ಮಲಗುತ್ತಿದ್ದವರು ಕಾಡಿನ ಒರಟು ನೆಲದ ಮೇಲೆ ಮಲಗುವಂತಾಯಿತು. ನಿನ್ನ ಕುಟುಂಬವನ್ನೇ ರಕ್ಷಿಸಲಾಗದವನು, ಇಂತಹ ಬೃಹತ್ ಸಾಮ್ರಾಜ್ಯವನ್ನು ಹೇಗೆ ರಕ್ಷಿಸುವೆ? ಹಿಂದೆ ಶಕುನಿಯೊಂದಿಗಿನ ದ್ಯೂತದಲ್ಲಿ ಇಂದ್ರಪ್ರಸ್ಥದ ಸಿಂಹಾಸನವನ್ನೇ ಪಣಕ್ಕಿಟ್ಟವನು ನೀನು, ನಾಳೆ ಇನ್ನಾರೋ ರಾಜನೊಂದಿಗಿನ ಜೂಜಿನಲ್ಲಿ ನನ್ನನ್ನು ಪಣಕ್ಕಿಡುವುದಿಲ್ಲ ಎಂದು ಹೇಗೆ ತಾನೇ ನಂಬಲಿ? ಆದ್ದರಿಂದ ಸರ್ವಥಾ ನೀನು ಈ ಸಿಂಹಾಸನವನ್ನೇರಲು ಯೋಗ್ಯನಲ್ಲ. ನಿನಗಿಂತ ಅರ್ಹರಾದವರಿಗೆ ಅವಕಾಶ ನೀಡಿ ನಿವೃತ್ತಿಯಾಗುವುದು ಉಚಿತ ಎಂದು ನಾನು ಸೂಚಿಸುತ್ತಿದ್ದೇನೆ.’
ಸಿಂಹಾಸನದ ಮಾತುಗಳನ್ನು ಕೇಳಿ ತಲೆತಗ್ಗಿಸಿದ ಯುಧಿಷ್ಠಿರ ಬಂಧುಗಳೊಂದಿಗೆ, ಹಿತೈಷಿಗಳೊಂದಿಗೆ ಚರ್ಚಿಸಿ ತಾನು ಹಿಂದೆ ಸರಿದು ತನ್ನ ತಮ್ಮನಾದ ಭೀಮನ ಹೆಸರನ್ನು ಚಕ್ರವರ್ತಿ ಸ್ಥಾನಕ್ಕೆ ಸೂಚಿಸಿದನು. ಈ ಪ್ರಸ್ತಾವನೆಯನ್ನು ಕೇಳಿದ ಸಿಂಹಾಸನವು ಭೀಮನನ್ನುದ್ದೇಶಿಸಿ ’ಹೇ ವೃಕೋದರ, ನೀನು ನಿನ್ನ ಪೂರ್ವೇತಿಹಾಸವನ್ನೆಲ್ಲಾ ಮರೆತಿರುವೆ ಎಂದು ತೋರುತ್ತಿದೆ. ಬಾಲ್ಯದಿಂದಲೂ ನೀನು ಇನ್ನೊಬ್ಬರ ಪಾಲನ್ನು ಕಿತ್ತು ತಿನ್ನುತ್ತಿದ್ದೆ. ನೀವು ಏಕಚಕ್ರನಗರಿಯಲ್ಲಿದ್ದಾಗ ಭಿಕ್ಷೆ ಬೇಡಿ ತಂದ ಆಹಾರವನ್ನು ಎರಡು ಪಾಲು ಮಾಡಿ ಒಂದು ಪಾಲನ್ನು ನೀನು ತಿನ್ನುತ್ತಿದ್ದೆ, ಇನ್ನೊಂದು ಪಾಲನ್ನು ನಿನ್ನ ತಾಯಿ ಮತ್ತು ಸಹೋದರರು ಹಂಚಿ ತಿನ್ನುತ್ತಿದ್ದರು. ರಾಜನಾದವನು ಹೊಟ್ಟೆಬಾಕನಾಗಿರಬಾರದು. ಕ್ಷಾಮದಂತಹ ಪರಿಸ್ಥಿತಿ ಉದ್ಭವಿಸಿದಾಗ ತಾನು ಖಾಲಿ ಹೊಟ್ಟೆಯಲ್ಲಿದ್ದಾದರೂ ಪ್ರಜೆಗಳ ಹಸಿವನ್ನು ನೀಗಬೇಕು. ಚಕ್ರವರ್ತಿಯಾದವನು ಮೊದಲು ಜನರ ಹಸಿವನ್ನು, ಕಷ್ಟಗಳನ್ನು ನೀಗಿಸುವತ್ತ ಗಮನ ನೀಡಿ ನಂತರ ತನ್ನ ಹಸಿವು, ಸಂಕಷ್ಟಗಳ ಬಗ್ಗೆ ಗಮನ ಹರಿಸಬೇಕು. ನಿನ್ನಲ್ಲಿ ಮಹಾರಾಜನಾಗುವ ಲಕ್ಷಣಗಳಿಲ್ಲ’ ಎಂದಿತು.
ಸಿಂಹಾಸನದ ಮಾತುಗಳಿಂದ ವಿಚಲಿತರಾಗದ ಪಾಂಡುಪುತ್ರರು, ಪಾಂಡವರಲ್ಲಿಯೇ ಶ್ರೇಷ್ಠನೆಂದು ಖ್ಯಾತಿವೆತ್ತ ಅರ್ಜುನನ ಹೆಸರನ್ನು ಚಕ್ರವರ್ತಿ ಸ್ಥಾನಕ್ಕೆ ಒಮ್ಮತದಿಂದ ಸೂಚಿಸಿದರು. ತನ್ನನ್ನೇರಲು ಸನ್ನದ್ಧನಾದ ಅರ್ಜುನನ್ನು ಉದ್ಧೇಶಿಸಿ ಸಿಂಹಾಸನವು ’ಧನಂಜಯ, ನಿನಗಾವ ಅರ್ಹತೆಗಳಿವೆಯೆಂದು ಚಂದ್ರವಂಶದ ಚಕ್ರವರ್ತಿಯಾಗಲು ಹಂಬಲಿಸುತ್ತಿರುವೆ? ಮರೆತೆಯಾ, ನಿನ್ನ ಮತ್ಸರ ಗುಣದಿಂದಾಗಿ ಏಕಲವ್ಯ ಹೆಬ್ಬೆರಳು ಕಳೆದುಕೊಳ್ಳುವಂತೆ ಮಾಡಿ ವಿಕೃತವಾದ ಆನಂದವನ್ನು ಅನುಭವಿಸಿದೆ. ನಿನ್ನ ಪರಾಕ್ರಮದ ಬಗೆಗಿನ ನಿನ್ನ ಅಹಂಕಾರ ಜನಜನಿತವಾದುದು. ಸಮರಧರ್ಮವನ್ನು ಮೀರಿ ಭೀಷ್ಮ, ಕರ್ಣರನ್ನು ಮೋಸದಿಂದ ಸಂಹರಿಸಿದೆ. ಭ್ರಾತೃಹತ್ಯೆಯ ದೋಷದಿಂದ ನೀನು ಮಲಿನನಾಗಿರುವೆ. ತೀರ್ಥಯಾತ್ರೆಗೊಂದು ಹೋದವನು ಹಲವು ಸ್ತ್ರೀಯರ ಮೋಹಪಾಶಕ್ಕೆ ಸಿಲುಕಿದೆ. ಸಾತ್ವಿಕ, ರಾಜಸ ಗುಣಗಳಿಗಿಂತ ಮಿಗಿಲಾಗಿ ಕಾಮ, ಮೋಹ, ಮದ, ಮಾತ್ಸರ್ಯವೇ ಮೊದಲಾದ ತಾಮಸ ಗುಣಗಳನ್ನು ಹೊಂದಿರುವ ನೀನು ಈ ಸ್ಥಾನಕ್ಕೆ ಯೋಗ್ಯನಲ್ಲ.’ ಎಂದಿತು.
ಅನಿರೀಕ್ಷಿತವೂ, ಅತಿಮಾನುಷವೂ ಆದ ಈ ಪ್ರಸಂಗದಿಂದ ಕ್ಷೋಭೆಗೊಳಗಾದ ಪಾಂಡವರು ಅತ್ಯಂತ ದೈನ್ಯದಿಂದ ಮಾದ್ರಿಸುತರಲ್ಲಿ ಒಬ್ಬರನ್ನು ಚಕ್ರವರ್ತಿಯನ್ನಾಗಿ ಸ್ವೀಕರಿಸಬೇಕೆಂದು ತನ್ಮೂಲಕ ಚಂದ್ರವಂಶದ ಗೌರವವನ್ನು ರಕ್ಷಿಸಬೇಕೆಂದು ಸಿಂಹಾಸನದ ಬಳಿ ಬೇಡಿಕೊಂಡರು. ಆದರೆ ಸಿಂಹಾಸನವು ’ನಕುಲನು ತನ್ನ ಕುಲದಲ್ಲಿಯೇ ಅತ್ಯಂತ ರೂಪವಂತನು ಮತ್ತು ಆ ಕಾರಣದಿಂದಾಗಿಯೇ ತನ್ನ ರೂಪದ ಕುರಿತು ದುರಭಿಮಾನವುಳ್ಳವನು. ಕನ್ನಡಿಯ ಮುಂದೆ ಹೆಚ್ಚು ಸಮಯ ಕಳೆಯುವ ಈತನಿಗೆ ರಾಜ್ಯಾಡಳಿತಕ್ಕೆ ತಕ್ಕುದಾದ ಗಾಂಭೀರ್ಯವಿಲ್ಲ. ಸಹದೇವನು ತನ್ನ ದಿವ್ಯಜ್ಞಾನದಿಂದ ಮದೋನ್ಮತ್ತನಾಗಿದ್ದಾನೆ. ಅಷ್ಟೇ ಅಲ್ಲದೆ ಈ ಸ್ಥಾನವನ್ನು ಪಡೆಯಲು ಅವನೇನೂ ಅಂತಹ ಮಹತ್ತರವಾದ ತ್ಯಾಗವನ್ನು ಮಾಡಿಲ್ಲ. ಕಿರಿಯವನೆಂಬ ಕಾರಣದಿಂದ ಕುಂತಿ ಮತ್ತು ದ್ರೌಪದಿಯರು ಯಾವ ಕಷ್ಟಗಳೂ ತಗುಲದಂತೆ ಅತ್ಯಂತ ನಾಜೂಕುತನ ಮತ್ತು ಜಾಗರೂಕತೆಯಿಂದ ಆತನನ್ನು ಪೋಷಿಸಿದ್ದಾರೆ’ ಎಂದಿತು.
ಅಂತೂ ಇಂತೂ ಕುಂತಿ ಮಕ್ಕಳಿಗೆ ಪಟ್ಟ ಸಿಗಲಿಲ್ಲ. ದೀರ್ಘವಾದ ಕತ್ತಲನ್ನು ಭೇದಿಸಿ ಮೂಡಿದ್ದ ಬಾಲರವಿಗೆ ಮತ್ತೆ ಮೋಡ ಕವಿದಂತಾಯಿತು. ನೆರೆದ ಪ್ರತಿಯೊಬ್ಬರೂ ಶ್ಮಶಾನದ ಪ್ರೇತಗಳಂತೆ ಅಮಂಗಳಕರವಾದ ಮುಖಭಾವ ಹೊದ್ದು ನಿಂತರು. ಧರ್ಮ ಪ್ರತಿಷ್ಟಾಪನೆಯನ್ನು ನೋಡಲು ಬಂದಿದ್ದ ವೇದವ್ಯಾಸರ ಮೊಗದಲ್ಲೂ ರಕ್ತವಿಲ್ಲ. ಕೊನೆಯ ಮಾರ್ಗವೆಂಬಂತೆ ಕುರುಕುಲದ ಹಿರಿಯರು, ಹಿತೈಷಿಗಳು, ರಾಜಕೀಯ ಮುತ್ಸದ್ಧಿಗಳು ಒಮ್ಮತದಿಂದ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು. ಎಲ್ಲರ ಪರವಾಗಿ ಯುಧಿಷ್ಠಿರನು ನಭದಲ್ಲಿ ಸ್ಥಿರವಾಗಿದ್ದ ಸಿಂಹಾಸನವನ್ನು ಕುರಿತು ’ಮುನಿಗಳಿಂದ, ಬ್ರಾಹ್ಮಣರಿಂದ, ಮಹರ್ಷಿಗಳಿಂದ ಪೂಜಿಸಲ್ಪಟ್ಟಿರುವ ಪವಿತ್ರವಾದ ಸಿಂಹಾಸನವೆ, ನಿನ್ನನ್ನು ಏರುವ, ಏರಿ ಭರತದೇಶವನ್ನು ಆಳುವ ತೇಜಸ್ಸಿರುವ ಗಂಡು ಕುರುಕುಲದಲ್ಲಿ ಯಾರಿಹರೆಂದು ನೀನೆ ಸೂಚಿಸಿ ನಮ್ಮನ್ನು ಈ ಸಂಕಟದಿಂದ ಪಾರು ಮಾಡು’ ಎಂದು ವಿನಂತಿಸಿಕೊಂಡನು.
ಈ ಮಾತಿಗೆ ಸಿಂಹಾಸನವು ’ಧರ್ಮಪುತ್ರ, ನನ್ನನ್ನು ಏರುವ ಪೌರುಷವಿರುವ ಏಕಮೇವ ವ್ಯಕ್ತಿ ಕುರುಕುಲದಲ್ಲಿದ್ದರೆ ಅದು ದ್ರೌಪದಿ ಮಾತ್ರ! ಆಕೆ ಯಜ್ಞಕುಂಡದಿಂದ ಉದ್ಭವಳಾದ ದೈವಾಂಶಳು. ತಂದೆ ದ್ರುಪದನಿಂದ ರಾಜಕುಮಾರರಿಗೆ ಉಚಿತವಾದ ವಿದ್ಯಾಭ್ಯಾಸವನ್ನು ಪಡೆದವಳು. ಐವರು ಪತಿಯರನ್ನು ಹೊಂದಿದ್ದರೂ ಪಂಚ ಪತಿವ್ರತೆಯರ ಸಾಲಿನಲ್ಲಿ ಪೂಜಿಸಲ್ಪಡುವವಳು. ಸದಾ ಸಮರವಿಮುಖಿಯಾಗಿದ್ದ ಪತಿ ಯುಧಿಷ್ಠಿರನಲ್ಲಿ ಸಮರೋತ್ಸಾಹವನ್ನು ತುಂಬಿದವಳು, ಭೀಮಾರ್ಜುನರಿಗೆ ಸ್ಫೂರ್ತಿಯಾದವಳು, ಕುಂತಿಯ ಅನುಪಸ್ಥಿತಿಯಲ್ಲಿ ನಕುಲ, ಸಹದೇವರಿಗೆ ಮಾತೃತ್ವದ ಪ್ರೀತಿಯನ್ನು ಉಣಬಡಿಸಿದವಳು. ಹದಿಮೂರು ವರ್ಷಗಳ ಕಾಲ ತನ್ನ ಶ್ರೀಮುಡಿಯನ್ನು ಕಟ್ಟದೆ, ದುಶ್ಯಾಸನನ ಮೇಲಿನ ಪ್ರತೀಕಾರಕ್ಕಾಗಿ ಕಾದವಳು. ಆಕೆಯ ಶೌರ್ಯ, ಧೈರ್ಯಗಳು ಧರ್ಮಜನಿಗಿಲ್ಲ, ಅವಳ ತಾಳ್ಮೆ ಭೀಮನಿಗಿಲ್ಲ, ಅವಳ ವಿವೇಕ ಅರ್ಜುನನಿಗೆಲ್ಲಿದೆ, ಆಕೆಯ ತೇಜಸ್ಸು ಯಮಳರಿಗಿಲ್ಲ. ತನ್ನ ಮಾನವನ್ನೇ ರಕ್ಷಿಸದ ಗಂಡಂದಿರನ್ನು ವನವಾಸ ಕಾಲದಲ್ಲಿ ದುರ್ವಾಸರ ಶಾಪದಿಂದ ರಕ್ಷಿಸಿದವಳು ಅವಳು. ಧೈರ್ಯ, ತೇಜಸ್ಸು, ಶೂರತನ ಮೊದಲಾದ ರಾಜಸ ಗುಣಗಳ ಮತ್ತು ಪ್ರೀತಿ, ತಾಳ್ಮೆ, ವಾತ್ಸಲ್ಯ ಮೊದಲಾದ ಸಾತ್ವಿಕ ಗುಣಗಳ ಅಪರೂಪದ ಸಮನ್ವಯತೆ ಅವಳಲ್ಲಿದೆ. ಧರ್ಮಪಾಲನೆಯಲ್ಲಿ ಅವಳು ಯುಧಿಷ್ಠಿರ, ಛಲದಲ್ಲಿ ಭೀಮ, ಸಾತ್ವಿಕತೆಯಲ್ಲಿ ಅರ್ಜುನ, ರೂಪದಲ್ಲಿ ನಕುಲ, ಜ್ಞಾನದಲ್ಲಿ ಆಕೆ ಸಹದೇವ.
ಅಷ್ಟೇ ಅಲ್ಲದೆ ಈ ಸಿಂಹಾಸನಕ್ಕಾಗಿ ಅತಿ ಹೆಚ್ಚು ಬಲಿದಾನಗಳನ್ನು ಮಾಡಿದವಳು ದ್ರೌಪದಿಯೇ ಅಲ್ಲವೇ? ತುಂಬಿದ ಕುರುಸಭೆಯಲ್ಲಿ ರಜಸ್ವಲೆಯಾಗಿ ಏಕವಸ್ತ್ರಧಾರಿಣಿಯಾಗಿದ್ದ ಅವಳ ವಸ್ತ್ರಾಪಹರಣವಾಯಿತು. ಹದಿಮೂರು ವರ್ಷಗಳ ಕಾಲ ತನ್ನ ಮಕ್ಕಳನ್ನು ಅಗಲಿ ಮಾತೃತ್ವದ ಸುಖದಿಂದ ವಂಚಿತಳಾದಳು. ಅಜ್ಞಾತವಾಸದಲ್ಲಿ ಮತ್ತೆ ಕೀಚಕನಿಂದ ಅವಮಾನ, ಶೋಷಣೆಗಳಿಗೆ ಗುರಿಯಾದಳು. ಕುರುಕ್ಷೇತ್ರ ಯುದ್ಧದ ಗೆಲುವನ್ನು ಸಂಭ್ರಮಿಸುವ ಮುನ್ನವೇ ತನ್ನ ಮಕ್ಕಳನ್ನೂ, ಸಹೋದರರನ್ನೂ ಕಳೆದುಕೊಂಡಳು. ಅವಳು ಅನುಭವಿಸಿದ ನೋವು, ಹತಾಶೆ, ಅವಮಾನಗಳ ಮುಂದೆ ನಿಮ್ಮ ಕಷ್ಟ ನಷ್ಟಗಳು ತೃಣಸಮಾನವಾದುವು. ನಿಜಕ್ಕೂ ಈ ಸಿಂಹಾಸನವನ್ನೇರುವ ಅರ್ಹತೆ, ಯೋಗ್ಯತೆಗಳು ಯಾರಲ್ಲಾದರೂ ಇದ್ದರೆ ಅದು ಈ ದ್ರುಪದಪುತ್ರಿ, ಯಜ್ಞೋದ್ಭವಿ ಪಾಂಚಾಲಿಗೆ ಮಾತ್ರ! ದ್ರೌಪದಿ ನನ್ನನ್ನು ಆರೋಹಣ ಮಾಡುವುದಾದರೆ ಮಾತ್ರ, ನಾನು ನಿಮ್ಮೆಲ್ಲರ ಅಪೇಕ್ಷೆಯಂತೆ ಕೆಳಗಿಳಿದು ಪಟ್ಟಾಭಿಷೇಕ ಮಹೋತ್ಸವ ಮುಂದುವರಿಯಲು ಅನುವು ಮಾಡಿಕೊಡುತ್ತೇನೆ’ ಎಂದುತ್ತರಿಸಿತು.
ಸಿಂಹಾಸನದ ಮಾತುಗಳನ್ನು ಕೇಳಿ ಸ್ತಂಭೀಭೂತರಾದ ಪಾಂಡವರು ತಮ್ಮೊಳಗೇ ಸಮಾಲೋಚಿಸಿ, ದ್ರೌಪದಿಯನ್ನೇ ಪಟ್ಟಕ್ಕೇರಿಸುವುದಾಗಿ ಆಶ್ವಾಸನೆ ನೀಡಿದರು. ಆ ತಕ್ಷಣವೇ ಕುರುಕುಲದ ಪುಣ್ಯವೇ ಮೂರ್ತಿವೆತ್ತಂತಿದ್ದ ಆ ಸಿಂಹಾಸನವು ಗರುಡ ಪಕ್ಷಿಯು ತನ್ನ ರೆಕ್ಕೆಗಳನ್ನು ಬಿಚ್ಚಿ ಸಾವಕಾಶದಿಂದ ನೆಲಕ್ಕಿಳಿಯುವಂತೆ ರಾಜಗಾಂಭೀರ್ಯದಿಂದ ನೆಲಕ್ಕಿಳಿದು ತನ್ನ ಸ್ವಸ್ಥಾನದಲ್ಲಿ ಸ್ಥಿರವಾಯಿತು.ದಿವ್ಯವಾದ ಆಭರಣಗಳಿಂದ, ಕಂಠೀಹಾರಗಳಿಂದ ಭೂಷಿತಳಾದ, ಚಂದನ ಗಂಧ ಲೇಪಿತಳಾದ ಕೃಷ್ಣೆ ಗಜಗಮನದಿಂದ ಮುಂದೆ ಬಂದು ತನ್ನ ಕುಲದ ಹಿರಿಯರಿಗೆ, ನೆರೆದಿದ್ದ ಋಷಿಗಣಕ್ಕೆ, ಹಸ್ತಿನಾವತಿಯ ಪ್ರಜೆಗಳಿಗೆ ನಮಸ್ಕರಿಸಿ, ಸಿಂಹಾಸನಕ್ಕೂ ಪ್ರಣಾಮಗಳನ್ನು ಸಲ್ಲಿಸಿ ಅತ್ಯಂತ ಗಾಂಭೀರ್ಯದಿಂದ ಮೆಟ್ಟಿಲುಗಳನ್ನು ಹತ್ತಿ ಸಿಂಹಾಸನವನ್ನು ಏರಿ ರಾಜಮುದ್ರೆಯಲ್ಲಿ ಕುಳಿತಳು. ನೆರೆದಿದ್ದ ಜನವೃಂದ ಜೈಕಾರದ ಉದ್ಘೋಷ ಮಾಡಿತು. ಪುಷ್ಪವೃಷ್ಠಿಯಾಯಿತು. ಎಲ್ಲರಲ್ಲೂ ಕವಿದಿದ್ದ ದುಗುಡ, ಆತಂಕ ಕಳೆದು ನೆರೆದಿದ್ದ ಪ್ರತಿಯೊಬ್ಬರೂ ಮಂದಸ್ಮಿತರಾದರು.
ಆದರೆ ದ್ರೌಪದಿ ಸಿಂಹಾಸನವೇರಿದ ಮರುಕ್ಷಣದಲ್ಲಿಯೇ ಮತ್ತೊಂದು ಪವಾಡ ಸಂಭವಿಸಿತು. ಸಿಂಹಾಸನದ ಶಿರೋಭಾಗದಲ್ಲಿ ಕೆತ್ತಲಾಗಿದ್ದ ಬಂಗಾರದ ಹಂಸಪಕ್ಷಿಗಳು ಜೀವತಳೆದು ದ್ರೌಪದಿಯ ಮುಂದೆ ಬಂದು ನಿಂತವು. ನೋಡನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಗಂಡು ಹಂಸ ಪಕ್ಷಿಯು ತೇಜೋರೂಪಿಯಾದ ತಪಸ್ವಿಯಾಗಿ ಮತ್ತು ಹೆಣ್ಣು ಹಂಸಪಕ್ಷಿಯು ರೂಪವತಿಯೂ, ಸಾಧ್ವಿಯೂ ಆದ ತಪಸ್ವಿನಿಯಾಗಿ ರೂಪಾಂತರ ಹೊಂದಿದರು. ನೆರೆದಿದ್ದ ಎಲ್ಲರಿಗೂ ಕೈಜೋಡಿಸಿ ನಮಸ್ಕರಿಸಿದ ತಪಸ್ವಿಯು ಪಶ್ಚಾತ್ತಾಪದ ಭಾವದಿಂದ ಮಂದ್ರಸ್ಥಾಯಿಯಲ್ಲಿ ಮಾತನಾಡಲಾರಂಬಿಸಿದನು ’ ಎಲ್ಲಕ್ಕಿಂತ ಪ್ರಥಮವಾಗಿ ಇಲ್ಲಿ ನೆರೆದಿರುವ ಪ್ರತಿಯೊಬ್ಬರಲ್ಲಿಯೂ ವಿನಯಪೂರ್ವಕವಾಗಿ ಕ್ಷಮಾಪಣೆಯನ್ನು ಬೇಡುತ್ತಿದ್ದೇನೆ, ನಮ್ಮ ಉದ್ಧಟತನವನ್ನು, ಪಾಂಡವರ ಕುರಿತು ಆಡಿದ ಅವಹೇಳನಕಾರಿ ಮಾತುಗಳನ್ನು ಚತುರಮತಿಗಳಾದ ಹಸ್ತಿನಾವತಿಯ ಪ್ರಜೆಗಳು ಕ್ಷಮಿಸಬೇಕು. ಪರಿಸ್ಥಿತಿಯ ಅನಿವಾರ್ಯತೆಯಿಂದ ಈ ಪ್ರಸಂಗವನ್ನು ಸೃಷ್ಠಿಸಿ ನಿಮ್ಮೆಲ್ಲರ ಗೊಂದಲ, ದುಗುಡಗಳಿಗೆ ಕಾರಣವಾಗಬೇಕಾಯಿತು. ನಾನು ಮಹಾಮುನಿ ಜ್ಞಾನವ್ರತ, ಈಕೆ ನನ್ನ ಪತ್ನಿ ತಪಸ್ವಿನಿಯಾದ ವಿದ್ಯಾಧರೆ. ಸಹಸ್ರಾರು ವಸಂತಗಳ ಹಿಂದೆ ಕೃತಯುಗದಲ್ಲಿ ಕಪಿಲಾ ನದಿಯ ತೀರದಲ್ಲಿ ಬೃಹಾದರಣ್ಯ ಪ್ರದೇಶದಲ್ಲಿ ನಾವು ಪರ್ಣಕುಟೀರವನ್ನು ರಚಿಸಿಕೊಂಡು ಬ್ರಾಹ್ಮಣ ಮತ್ತು ಕ್ಷತ್ರಿಯ ಕುಮಾರರಿಗೆ ವಿದ್ಯಾದಾನವನ್ನು ನೀಡುತ್ತಿದ್ದೆವು. ಲೋಕಕಲ್ಯಾಣಾರ್ಥವಾಗಿ ಯಜ್ಞ ಯಾಗಾದಿಗಳನ್ನು ನೆರವೇರಿಸುತ್ತಿದ್ದೆವು. ಒಂದು ವಸಂತಋತುವಿನ ಮುಂಜಾವು ಅತ್ಯಂತ ಸುಮನೋಹರವಾದ ಚೆಲುವಿನಿಂದ ಕಂಗೊಳಿಸುತ್ತಿದ್ದ ಪ್ರಕೃತಿಯನ್ನು ನೋಡಿ ಆನಂದೋದ್ರೇಕಕ್ಕೆ ಒಳಗಾದ ನಾವು ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡು ಮನ್ಮಥನ ಶರಾಘಾತಕ್ಕೆ ನಮ್ಮ ಹೃದಯವನ್ನು ತೆರೆದುಕೊಂಡೆವು.
ಪ್ರಾತಃಕಾಲದಲ್ಲಿ ಆಶ್ರಮದಲ್ಲಿ ಪ್ರಣಯ ನಿಷಿದ್ಧವಾಗಿದ್ದರಿಂದಲೂ ಮತ್ತು ಯಾರಾದರೂ ಗಮನಿಸಬಹುದೆಂಬ ಅಂಜಿಕೆಯಿಂದಲೂ ನಮ್ಮ ತಪಃಶಕ್ತಿಯಿಂದ ಮಾನವ ರೂಪವನ್ನು ತ್ಯಜಿಸಿ ಹಂಸ ಪಕ್ಷಿಗಳ ರೂಪವನ್ನು ಧರಿಸಿ ಮಿಲನ ಕ್ರಿಯೆಯಲ್ಲಿ ತೊಡಗಿಕೊಂಡೆವು. ವಿಧಿನಿಯಾಮಕವೇನೋ ಎಂಬಂತೆ ಅದೇ ಸಮಯದಲ್ಲಿ ಬ್ರಹ್ಮರ್ಷಿ ವಿಶ್ವಾಮಿತ್ರರು ನಮ್ಮ ಆಶ್ರಮಕ್ಕೆ ಆಗಮಿಸಿದರು. ಮಿಲನ ಮಹೋತ್ಸವದ ತುತ್ತ ತುದಿಯಲ್ಲಿ ಸಮಾಧಿಸ್ತರಾಗಿದ್ದ ನಮಗೆ ಅವರ ಆಗಮನ ಅರಿವಿಗೆ ಬರಲಿಲ್ಲ. ವಿಶ್ವಾಮಿತ್ರರು ತಮ್ಮ ದಿವ್ಯದೃಷ್ಠಿಯಿಂದ ನಾವು ಹಂಸ ಪಕ್ಷಿಗಳ ರೂಪದಲ್ಲಿ ಸುಖಿಸುತ್ತಿರುವುದನ್ನು ನೋಡಿದರು. ಉಗ್ರಕೋಪಿಗಳಾದ ವಿಶ್ವಾಮಿತ್ರರು ಕ್ರೋಧದಿಂದ ’ಬ್ರಹ್ಮರ್ಷಿಯಾದ ನನ್ನನ್ನು ಆರ್ಘ್ಯ, ಪಾದ್ಯ, ಆಚಮನಗಳನ್ನು ನೀಡಿ ಯಥೋಚಿತವಾಗಿ ಸತ್ಕರಿಸದೆ, ನನ್ನ ಇರುವನ್ನು ಉಪೇಕ್ಷಿಸಿ ಅವಮಾನಕ್ಕೆ ಈಡುಮಾಡಿದ್ದೀರಿ. ತಪಸ್ವಿಗಳಾಗಿ ನಿಮ್ಮ ಕರ್ತವ್ಯಗಳನ್ನು ಆಚರಿಸುವ ಬದಲು ಪ್ರಾಣಿಗಳ ರೂಪದಲ್ಲಿ ಅಸಹ್ಯಕರವಾದ, ಅನೀತಿಕರವಾದ ಪಾಶವೀ ಕಾಮದಲ್ಲಿ ತೊಡಗಿ ಈ ಸ್ಥಳದ ಪಾವಿತ್ರ್ಯತೆತನ್ನು ಹಾಳುಗೆಡಹಿದ್ದೀರಿ. ಅತಿಥಿಗಳನ್ನು ಸತ್ಕರಿಸುವ ಸಾತ್ವಿಕ ಕಾರ್ಯವನ್ನು ನಿರ್ಲಕ್ಷಿಸಿ ದೇಹಕಾಮನೆ ಮತ್ತು ಅಹಂಕಾರಗಳಿಗೆ ವಶರಾಗಿ ರಾಜಸವಾದ ವರ್ತನೆಯನ್ನು ತೋರಿದ್ದೀರಿ. ಈ ಸ್ಥಾನದಲ್ಲಿರಲು ನೀವು ಸರ್ವಥಾ ಅರ್ಹರಲ್ಲ. ರಾಜಸವಾದ ಗುಣಗಳಿಂದ ಮದೋನ್ಮತ್ತರಾದ ನೀವು ಚಂದ್ರವಂಶದ ರಾಜರ ಸಿಂಹಾಸನದಲ್ಲಿ ನೀವು ಧರಿಸಿರುವ ಹಂಸಪಕ್ಷಿಗಳ ರೂಪದಲ್ಲಿಯೇ ಜಡವಾಗಿ ನೆಲೆಸಿ’ ಎಂದು ಶಾಪವಿತ್ತರು. ಶೃಂಗಾರದಿಂದ ತೋಯ್ದ ದೇಹಗಳ ಮೇಲೆ ರೌದ್ರ ರಸವನ್ನು ಎರಚಿದಂತಾಯಿತು. ಹೀರುತ್ತಿದ್ದ ಜೇನು ಕಹಿಯಾಯಿತು. ಸ್ವರ್ಗಾನಂದದ ಮಧುಪಾತ್ರೆ ಸಿಡಿದು ಚೂರಯಿತು! ಅದ್ಭುತವಾಗಿದ್ದ ನಿಸರ್ಗವು ಕ್ಷಣಮಾತ್ರದಲ್ಲಿ ಎದ್ದ ಬಿರುಗಾಳಿಯಿಂದ ಬೀಭತ್ಸವಾಯಿತು. ಆವರಿಸಿದ್ದ ಮಾಯೆಯ ತೆರೆ ಸರಿದು ನಮ್ಮ ನಯನಗಳು ಶುಭ್ರವಾದವು. ನಮ್ಮ ಅಪರಾಧದ ಅರಿವಾಗಿ, ವಿಶ್ವಾಮಿತ್ರರ ಕಾಲುಗಳ ಮೇಲೆರಗಿ ನಮ್ಮ ಕಣ್ಣುಗಳಿಂದ ಹರಿದ ಅಶ್ರುರಸಧಾರೆಯಿಂದ ಅವರ ಪಾದಗಳನ್ನು ತೋಯಿಸಿದೆವು.
ನಮ್ಮ ತಪ್ಪನ್ನು ಮನ್ನಿಸಿದ ವಿಶ್ವಾಮಿತ್ರರು ’ಮುಂದೆ ದ್ವಾಪರಯುಗದಲ್ಲಿ ಪಾಂಚಾಲ ನರೇಶನಾದ ದ್ರುಪದನಿಗೆ ಯಜ್ಞಕುಂಡದಿಂದ ಪುತ್ರಿಯೊಬ್ಬಳು ಜನಿಸುತ್ತಾಳೆ. ಅವಳು ಚಂದ್ರವಂಶದ ಪಾಂಡುಮಹಾರಾಜನ ಐವರು ಪುತ್ರರನ್ನು ವರಿಸುತ್ತಾಳೆ. ಅವಳ ಶ್ರೀಮುಡಿ ನಿಮ್ಮನ್ನು ಸ್ಪರ್ಶಿಸಿದ ದಿನ ನೀವು ಶಾಪ ವಿಮೋಚನೆ ಹೊಂದಿ ಮೊದಲಿನ ರೂಪವನ್ನು ಪಡೆಯುತ್ತೀರಿ. ನೀವು ಜಡವಾಗಿದ್ದರೂ ನೀವು ಸಂಪಾದಿಸಿರುವ ತಪಃಶಕ್ತಿ ಚೈತನ್ಯವಾಗಿ ನಿಮ್ಮೊಂದಿಗಿರುತ್ತದೆ’ ಎಂದು ಉಃಶಾಪವನ್ನು ನೀಡಿ ಹೊರಟುಹೋದರು. ಅಂದಿನಿಂದ ಈ ಕ್ಷಣಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದೆವು. ಸಿಂಹಾಸನದ ಶಿರೋಭಾಗದಲ್ಲಿರುವ ನಮ್ಮನ್ನು ದ್ರೌಪದಿಯ ಶ್ರೀಮುಡಿ ಸ್ಪರ್ಶಿಸಬೇಕೆಂದರೆ ಅವಳು ಸಿಂಹಾಸನವನ್ನೇರುವುದು ಅನಿವಾರ್ಯವಾಗಿತ್ತು. ಅದಕ್ಕೆಂತೆಲೇ ಈ ನಾಟಕವನ್ನು ಸೃಷ್ಠಿಸಿದೆವು. ಪಾಂಡವರು ಧರ್ಮಾತ್ಮರು. ಯುಧಿಷ್ಠಿರನಷ್ಟು ಯೋಗ್ಯ ವ್ಯಕ್ತಿ ಈ ಸಿಂಹಾಸನವನ್ನೇರಲು ಈ ಭರತವರ್ಷದಲ್ಲಿಯೇ ಮತ್ತಾರೂ ಇಲ್ಲ. ಆತನ ನಡೆ, ನುಡಿ, ತೀರ್ಮಾನಗಳು ಪ್ರಶ್ನಾತೀತವಾದದ್ದು. ಆತನಲ್ಲಿ ದೋಶವು ಲವಲೇಶದಷ್ಟೂ ಇಲ್ಲ. ನಮ್ಮ ಅನುಚಿತವಾದ ವರ್ತನೆಯನ್ನು ಪಾಂಡವರು ಕ್ಷಮಿಸಬೇಕು. ಯುಧಿಷ್ಠಿರನ ರಾಜ್ಯಾಭಿಷೇಕವನ್ನು ವೈಭವದಿಂದ ನೆರವೇರಿಸಿ. ನಿಮಗೆಲ್ಲಾ ಮಂಗಳವಾಗಿಲಿ’ ಎಂದು ಆ ತಪಸ್ವಿಯು ಹರಸಿ ಅಲ್ಲಿಂದ ಪತ್ನೀಸಮೇತನಾಗಿ ನಿರ್ಗಮಿಸಿದನು.
ಆತಂಕದ ಕಾರ್ಮೋಡಗಳು ಸರಿದು ಸಂತಸ ಮನೆಮಾಡಿತು. ಯುಧಿಷ್ಠಿರನ ಮುಖದಲ್ಲಿ ಮೂಡಿದ್ದ ಚಿಂತೆಯ ನಿರಿಗೆಗಳು ಕರಗಿಹೋಗಿ ಮತ್ತೆ ರಾಜಕಳೆ ತುಂಬಿತು. ವೇದವ್ಯಾಸರು ’ನಾನು ಮೊದಲೇ ಹೇಳಿರಲಿಲ್ಲವೇ ಯುಧಿಷ್ಠಿರನೆಂದರೆ ಧರ್ಮದ ಮೂರ್ತರೂಪವೆಂದು’ ಎಂದು ನನ್ನೆಡೆಗೆ ನೋಡಿ ಅಭಿಮಾನದಿಂದ ಹೇಳಿದರು. ಪ್ರಜಾಸ್ತೋಮದ ಜಯ ಜಯ ಘೋಷಗಳ ನಡುವೆ, ಮುನಿಸ್ತೋಮದ ಮಂತ್ರಘೋಷಗಳ ನಡುವೆ ಯುಧಿಷ್ಠಿರನು ಚಂದ್ರವಂಶದ ಸಿಂಹಾಸನವನ್ನು ಏರಿ ಧರ್ಮ, ಬದ್ಧತೆಗಳಿಂದ ಆಡಳಿತ ನಡೆಸುವ ಪ್ರತಿಜ್ಞಾವಿಧಿ ಸ್ವೀಕರಿಸಿ ಅಂತೆಯೇ ಹಲವಾರು ವರ್ಷಗಳ ಕಾಲ ದಕ್ಷತೆಯಿಂದ ರಾಜ್ಯಭಾರ ನಡೆಸಿದನು ಎನ್ನುವಲ್ಲಿಗೆ ಈ ಕಥೆಯನ್ನು ಪರಿಸಮಾಪ್ತಿಗೊಳಿಸುತ್ತಿದ್ದೇನೆ. ಮುಂದೆ ಕಲಿಯುಗದಲ್ಲಿ ಈ ಕಥೆಯನ್ನು ಓದುವವರಿಗೂ, ಹೇಳುವವರಿಗೂ, ಕೇಳುವವರಿಗೂ, ಕೇಳಿ ಅರ್ಥೈಸಿಕೊಳ್ಳುವವರಿಗೂ, ಅರ್ಥೈಸಿ ಆಚರಿಸುವವರಿಗೂ ಅಪರಿಮಿತವಾದ ಪುಣ್ಯ ಲಭಿಸಲಿ. ಮಂಗಳವುಂಟಾಗಲಿ ಸರ್ವರಿಗೆ. ಸರ್ವೇ ಜನಾಃ ಸುಖಿನೋ ಭವಂತು.
 

‍ಲೇಖಕರು G

19 July, 2015

5 Comments

  1. .ಮಹೇಶ್ವರಿ.ಯು

    ನಮ್ಮ ಮಹಾಕಾವ್ಯಗಳ ಸತ್ವವೇ ಅಂತಹದು. ಅವುಗಳ ಬಗ್ಗೆ ಎಷ್ಟೆಷ್ಟು ಬಗೆಯಲ್ಲಿ ವ್ಯಾಖ್ಯಾನಿಸಬಹುದು! ಅವುಗಳನ್ನು ಎಷ್ಟೆಷ್ಟು ಬಗೆಯಲ್ಲಿ ಓದಬಹುದು!ಅಬ್ಬಾ!ನಿಮ್ಮ ನೀಳ್ಗತೆಯ ನಿರೂಪಣೆ ಚೆನ್ನಾಗಿದೆ.ವಂದನೆಗಳು.

  2. Vijaya lakshmi S.P.

    ಬಹಳ ಸುಂದರವಾದ ಕಥೆ. ಆಳ ಅಗೆದಷ್ಟೂ ಅಗಣಿತ ಕಥೆಗಳು ದೊರೆಯುತ್ತವೆ ಈ ಮಹಾಭಾರತ ಎಂಬ ಗಣಿಯೊಳಗೆ . ಈ ಕಥೆ ಗೊತ್ತಿರಲಿಲ್ಲ . ನೀವು ಈ ಕಥೆಯನ್ನು ಬಹಳ ವಿಶಿಷ್ಟವಾಗಿ ಹೆಣೆದಿದ್ದೀರಿ . ಪುರಾಣಕ್ಕೆ ತಕ್ಕ ಭಾಷೆ , ಸೌಂದರ್ಯ , ಓಘ ಬಳಸಿದ್ದೀರಿ . ಬಹಳ ಅಭಿನಂದನೆಗಳು , ಧನ್ಯವಾದಗಳು .

  3. Vijaya lakshmi S.P.

    ಬಹಳ ಸುಂದರವಾದ ಕಥೆ. ಆಳ ಅಗೆದಷ್ಟೂ ಅಗಣಿತ ಕಥೆಗಳು ದೊರೆಯುತ್ತವೆ ಈ ಮಹಾಭಾರತ ಎಂಬ ಗಣಿಯೊಳಗೆ . ಈ ಕಥೆ ಗೊತ್ತಿರಲಿಲ್ಲ . ನೀವು ಈ ಕಥೆಯನ್ನು ಬಹಳ ವಿಶಿಷ್ಟವಾಗಿ ಹೆಣೆದಿದ್ದೀರಿ . ಪುರಾಣಕ್ಕೆ ತಕ್ಕ ಭಾಷೆ , ಸೌಂದರ್ಯ , ಓಘ ಬಳಸಿದ್ದೀರಿ . ಬಹಳ ಅಭಿನಂದನೆಗಳು , ಧನ್ಯವಾದಗಳು .

  4. ಅಕ್ಕಿಮಂಗಲ ಮಂಜುನಾಥ

    ತುಂಬಾ ಚೆನ್ನಾಗಿದೆ.

  5. shrinivas

    ramya kathe.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading