ಅಲ್ಲಾಭಕ್ಷನ ಚಿರಕೀಗಾಣ
-ಡಾ.ಎಸ್.ಬಿ.ಜೋಗುರ
ಗೌರೀ ಹುಣ್ಣವಿ ಜಾತ್ರಿ ಮುಂದಿನ ಥಂಡಿ ಅಂದ್ರ, ಅನಗಾಡ ಥಂಡಿ. ಆ ಥಂಡಿಗಿ ಕೈ-ಕಾಲು, ಮುಖಾ ಅನ್ನೂದು ಹಣ್ಣ ಆಗಿರೋ ಪುಟ್ಟೀಕಾಯಿ ಸೀಳದಂಗ ಸೀಳಿರತಿದ್ವು. ಗದಗದ.. ಅಂತ ನಡಕ್ಕೊಂತೇ ಮಾತಾಡಬೇಕಿತ್ತು. ಬಾಯಿ ತಗದರ ಸಾಕು, ಕದ್ದು ಬೀಡಿ ಸೇದಿದವನಂಗ ಬಾಯಿಯೊಳಗಿಂದ ಬುಶ್..! ಅಂತ ಹೊಗಿ ಬರತಿತ್ತು. ಓಣ್ಯಾಗಿನ ಚುಕ್ಕೋಳು ತಮ್ಮ ತೆಕ್ಕೀಯೊಳಗ ನೀಗೂವಷ್ಟು ನೆಲ್ಲ ಹುಲ್ಲ ತಗೊಂಡು ಬಂದು ಪುಟು ಕಾಯ್ಸುಗೋತಿದ್ದರು. ಕ್ಯಾವ ಮಾರಿ ತೊಳೀಲಾರದೇ ಸೂರ್ಯಾ ಬಯುಲಾಗಿ ಕಡಕ್ ಆಗೂಮಟ ಆ ಬೆಂಕೀ ಕೆಂಡದ ಸುತ್ತಾ ಕಾಲ ಕಿಸಗೊಂಡು ಗುಂಡಕ ಕುತಗೊಂಡು ಹಂಗೇ ಕಾಯ್ಸುಕೊಳೂದು ನಡದಿರತಿತ್ತು. ಕೆಲ ಬೆರಕೀ ಪೋರಗಳು ದೊಡ್ಡವರೆಲ್ಲಾ ಎದ್ದು ಹೋದ ಮ್ಯಾಲ ಕಿಡಿ ಇರೋ ಮೊಂಡ ನೆಲ್ಲ ಹುಲ್ಲಿನ ಕಡ್ಡಿ ಬಾಯಾಗ ಹಿಡದು ಬೀಡಿ ಜಗ್ಗದಂಗ ಜಗ್ಗಿ ಕುಹುಕ್..ಕುಹುಕ್..ಅಂತ ಕೆಮ್ಮತಿದ್ದರು. ಬಯಲಕಡಿಗಿ ಹೋದ ಮಂದಿ ನೀರ ಮುಟ್ಟಿದ್ದೇ ಕೈ ಬೆರಳು ಅನ್ನೂದು ಲಕ್ವಾ ಹೊಡದಂಗ ಆಗಿ, ಮನಿಗಿ ಬರೂಮಟ ಹಿಟ್ಟ ನಾದವರಂಗ ಕೈ ಮುಟಗಿ ಮಾಡಿ, ಹಿಚಕತಾ ಬರತಿದ್ದರು. ಗೌರೀ ಹುಣ್ಣವಿ ಜಾತ್ರಿ ಕಳದು ತಿಂಗಳೊಪ್ಪತ್ತಿನ ಮಟ ಈ ಥಂಡಿ ಹಂಗೇ ಇಡೀ ಊರನ್ನ ಹಿಡಕೊಂಡಿರತಿತ್ತು. ಸಿಂದಗಿ ಅನ್ನೋ ಊರಿನ ಗ್ರಾಮದೇವರು ನೀಲಗಂಗಮ್ಮ ಅಕಿ ಹೆಸರಲೆ ದರಾವರ್ಷ ಈ ಗೌರೀ ಹುಣ್ಣವಿ ಜಾತ್ರಿ ಅನ್ನೂದು ನಡೀತೈತಿ. ತಾಲೂಕಿನೊಳಗಿರೋ ಗೋಲಗೇರಿ ಗೊಲ್ಲಾಳ, ಯುಂಕಂಚಿ ದಾವಲಮಲಿಕ್ ನಷ್ಟೇ ದೊಡ್ಡ ಜಾತ್ರಿ ಇದು. ಸುತ್ತ ಮುತ್ತಲ್ಲಿನ ಹಳ್ಳಿ ಮಂದಿ ಜಾತ್ರಿ ಸಲಾಗೇ ಅಂತ ತಮ್ಮ ಎತ್ತಗಳಿಗೆ ಹಿಂಡೀ ಗಿಂಡೀ ಹಚ್ಚಿ ಜಬರದಸ್ತ ಮೇಯ್ಸಿ, ಗಾಡೀ ಮೋಕ, ನೊಗ, ಲೊಗ್ಗಾಣಿ ಹೊಸಾದು ತಗೊಂಡು ಹುರೀ ಹೊಡದು,ಮೋಕ ಬಿಗದು ಗಾಡಿ ಕೀಲಿಗಿ ಎಣ್ಣಿ ಸುರದು ಸಜ್ಜ ಮಾಡಿ ಇಡತಿದ್ದರು. ದೂರಾವರಿ ದಾರಿ ಅಂತ ಹೇಳಿ ಗಾಡಿಗಿ ಜೂಲಾ ಕಟ್ಟಿ ಬಿಸಲ ಬಡಿಲಾರದಂಗ, ಒಳಗಿನವರು ಬಾಡಲಾರದಂಗ ಚಾಟ ಮಾಡತಿದ್ದರು. ಈ ಕಡೆ ಗೋಲಗೇರಿ ನಾಕಾದಿಂದ ಆ ಕಡೆ ಮೋರಟಗಿ ನಾಕಾಮಟ ಒಂದರ ಬೆನ್ನಿಲೆ ಒಂದು ಎಲ್ಲೆಂದರಲ್ಲಿ ಈ ಗಾಡಿಗೋಳು ಸಾಲಾಗಿ ನಿಂತಿರತಿದ್ವು. ಎಳ್ಳ ಹಚ್ಚಿದ ಕಟಿಕಟಿ ಸಜ್ಜೀ ರೊಟ್ಟಿ, ಶೇಂಗಾ ಚಟ್ನಿ, ಅಗಸೀ ಚಟ್ನಿ, ಉಳ್ಳಾಗಡ್ಡಿ, ಬದನೀಕಾಯಿ ಎಣಗಾಯಿ, ಮೊಸರ ಕಲಸಿದ ಹುಳಬಾನ, ಶೆಂಗಾ ಹೋಳಗಿ ಎರಡು ದಿನ ಆಗೂವಷ್ಟು ಕಟಗೊಂಡೇ ಬಂದಿರತಿದ್ದರು. ಗಾಡೀ ಹಿಂದಿನ ಬದಿ ಎರಡೂ ಕಡಿ ಒಂದೊಂದು ಕಬ್ಬಿಣದ ಕೊಡಾ ಬಿಗದಿರತಿದ್ದರು. ಈ ಗೌರೀ ಹುಣ್ಣವಿ ಜಾತ್ರಿ ರಮಜ ಇಡೀ ಸಿಂದಗೀ ತಾಲೂಕಿಗೇ ಒಂಥರಾ ಇದ್ದರ, ಬಿರಾದಾರ ಸೋಮಣ್ಣನ ಮನಿ ಮಂದೀಗೇ ಒಂಥರಾ ಇತ್ತು. ಅದರಲ್ಲೂ ಸೋಮಣ್ಣನ ಮಗ ಶಿವನಿಂಗ ಮತ್ತ ಸೋಮಣ್ಣನ ತಮ್ಮನ ಮಗ ಜಗದೀಶಗ ಆ ಜಾತ್ರಿ ಅನ್ನೂದು ಒಂದು ತಿಂಗಳ ಕನಸಾಗಿರತಿತ್ತು. ಬೆಂಡು ಬತ್ತಾಸಲಿಂದ ಹಿಡದು, ಏನೇ ಆಟಗಿ ಸಾಮಾನು ತಗೋಳುದಿದ್ದರೂ, ಹೊಸಾ ಸಿನೇಮಾ ನೋಡೂದಿದ್ದರೂ ಜಾತ್ರಿ ಬರಲಿ ಅನ್ಕೋಂತ ಕಾ0ುತಿದ್ದರು. ಜಾತ್ರಿ ದಿನಾ ಸನ್ಯಾಕ ಬಂದಂಗ ಇವರು ಮತ್ತಷ್ಟು ಹುರುಪಾಗತಿದ್ದರು. ಜಾತ್ರಿ ಇನ್ನೂ ಒಂದು ವಾರ ಐತಿ ಅನ್ನೂದರೊಳಗ ಬಿಜಾಪೂರದಿಂದ ಚಿರಕೀಗಾಣದ ಅಲ್ಲಾಭಕ್ಷ, ಬಿರಾದಾರ ಸೋಮಣ್ಣನ ಮನಿ ಮುಂದಿನ ಬಯುಲು ಜಾಗದೊಳಗ ಠಿಕಾಣಿ ಹೂಡತಿದ್ದ. ಸೋಮಣ್ಣನ ಮನಿ ಮುಂದ ಟ್ರಕ್ ಬಂದು ನಿಂತಿದ್ದೇ ತಡ ಓಣ್ಯಾಗಿನ ಎಲ್ಲಾ ಚುಕ್ಕೋಳು ‘ಚಿರಕೀಗಾಣಾ ಬಂತೊ.. ಚಿರಕೀಗಾಣಾ ಬಂತೊ..’ ಅಂತ ಕುಣಕೊಂತ ಓಡತಿದ್ದರು.
ಆ ವರ್ಷ ಸಿಂದಗಿಯೊಳಗ ಪರಿಸ್ಥಿತಿ ತುಸು ನಾಜೂಕಾಗಿತ್ತು. ಅದಕ್ಕ ಕಾರಣ ಅಂದ್ರ ಸೋಮಣ್ಣನ ತಮ್ಮನ ಹಿರೀ ಮಗ ರಾಚಪ್ಪ. ಅಂವಾ ಇಕಾಡಿದಿಕಾಡಿ ಬರೀ ಮಾಟ ಮಂತ್ರ ಅನ್ಕೊಂತ ಅದ್ಯಾವದೋ ಕನ್ನೊಳ್ಳಿ ಸಿದ್ದಪ್ಪಜ್ಜನ ದೋಸ್ತಿ ಮಾಡಿ ಮನಿಗಿ ಬರೂ ಮುಂದ ತಲಿ ಡೋಗಿ, ಬಾಣಂತಿ ಕೈ ಎಲುವು, ಹೆಣದ ಬೂದಿ, ಯಾವದೋ ಹೊಗಿ ಸುತ್ತಿದ ಹಸ್ತಪ್ರತಿ ಇಂಥಾವು ಹಿಡಕೊಂಡು ರಾತ್ರೋರಾತ್ರಿ ಪರಭಾರೆ ಮನಿ ಮಾಳಗಿ ಹತ್ತಿ ತನ್ನ ರೂಮ ಸೇರಕೋತಿದ್ದ. ಇಂಥಾವೆಲ್ಲಾ ಯಾಕ ಮಾಡತಿಯೋ..? ಬರೂದಲ್ಲಾ.. ಬಾರಸೂದಲ್ಲ ಅಂತ ಅವರ ಅಪ್ಪ ಭೀಮಣ್ಣ ಎಟ್ಟು ಹೇಳದ ಮ್ಯಾಲೂ ಅಂವಾ ಕೇಳ್ತಿರಲಿಲ್ಲ. ರೂಮಿನ ಬಾಗಿಲಾ ಹಾಕೊಂಡು ಕುಂತ ಅಂದ್ರ ಮುಗೀತು.. ಅದೇನು ಮಾಡತಿದ್ದನೋ ಏನೋ.. ಊಟದ್ದೂ ಖಬರ್ ಇರ್ತಿರಲಿಲ್ಲ. ಅಮವಾಷೆ ದಿನಾಂತೂ ರೂಮ್ ಬಿಟ್ಟು ಹೊರಗೇ ಬರ್ತಿರ್ಲಿಲ್ಲ. ಬೆಳ್ಳಬೆಳತನಕ ಅದೇನೋ ಗುನಗುನಸತಿದ್ದ. ಅದ್ಯಾವ ಮಂತ್ರಾ ಹೇಳತಿದ್ದನೋ ಏನೋ..?
ಡಿಗ್ರೀ ಮಟ ಓದಿರೋ ರಾಚಪ್ಪನ ರೂಮಿನೊಳಗ ಇದ್ದಿದ್ದೆಲ್ಲಾ ಬರೀ ಬೂದಿ, ಎಲುವು, ತಾಮ್ರದ ತಗಡು, ಕುಂಕುಮ ಮೆತ್ತಿದ ತೆಂಗಿನಕಾಯಿ, ಲಿಂಗದವಸ್ತ್ರ. ಬೇವಿನ ಗಿಡದ ತಪ್ಪಲ ಇಂಥಾವು ಅಷ್ಟೇ.. ಒಂದು ಸಾರಿ ತನ್ನ ಆ ಮಾಟದ ವಿದ್ಯೆ ಪ್ರಯೋಗ ಮಾಡಲಿಕ್ಕಂತ ಮನಿ ಬಾಜೂ ಇರೋ ದಲ್ಲಾಳಿ ರುದ್ರಪ್ಪನ ಮಗಳ ಮ್ಯಾಲ ಅದೇನೋ ತಂತ್ರ ಮಾಡಿ, ಅಕಿನ್ನ ಪಟಾಯಿಸಿಕೊಂಡು ತಿಂಗಳಾನುಗಟ್ಟಲೇ ಊರೇ ಬಿಟ್ಟಿದ್ದ. ಅದು ರುದ್ರಪ್ಪಗ ಗೊತ್ತಾಗಿದ್ದೇ ಇವರ ಹೊಲದೊಳಗಿನ ಜೋಳದ ಬಣವಿಗೇ ಬೆಂಕಿ ಹಚ್ಚಿದ್ದ. ಅದು ಭೀಮಣ್ಣಗ ಬಾಜೂ ಹೊಲದವರ ಬಾಯಿಂದ ಗೊತ್ತಾಗಿ ಅವಂಗ ಹಂಗೇ ಬಿಟ್ಟರ ತಮ್ಮ ಗೌಡಕೀ ಗತ್ತೀಗಿ ಮಾರ್ಯಾದಿ ಉಳಿಯೂದಾದರೂ ಹ್ಯಾಂಗ..? ಅಂತ ಹೇಳಿ ಮಾರ್ಕಟ್ಟಿನೊಳಗಿರೋ ಅವನ ದಲ್ಲಾಳಿ ಅಂಗಡಿ ನಂಬರ್ ‘ಏಳು’ ಗೆ ತನ್ನ ಪಂಟರನ್ನ ಕರಕೊಂಡು ರಾತ್ರೋರಾತ್ರಿ ಬೆಂಕೀ ಇಡಸಿದ್ದ. ಆ ಅಂಗಡೀ ಜೋಡಿ ಆಜೂ ಬಾಜೂ ಇರೋ ಮುಸಲರ ಇಮಾಮನ ಅಂಗಡೀ ನಂ ‘ಐದು’ ಮತ್ತ ‘ಆರು’ ಕೂಡಾ ಸುಟ್ಟುಹೋಗಿದ್ವು. ಸುಟ್ಟು ಕರಕಲ ಆಗಿರೋ ತನ್ನ ಎರಡೂ ಅಂಗಡಿಗಳನ್ನ ಕಂಡು ಇಮಾಮಗ ಸಿಟ್ಟು ಎದೀಮಟ ಬಂದು, ಈ ಗೌಡಗ ಒಂದು ಪಾಠ ಕಲಸಬೇಕು ಅಂತ ರಾತ್ರೋರಾತ್ರಿ ತನ್ನ ಹುಡುಗರನ್ನ ಕರಕೊಂಡು ಭೀಮಣ್ಣನ ಮನಿ ಮುಂದ ನಿಂತಿರೋ ಎರಡೂ ಹೊಸಾ ಎತ್ತಿನ ಗಾಡೀಗಿ ಬೆಂಕಿ ಹಚ್ಚಿದ್ದ.
ರುದ್ರಪ್ಪನ ಜಗಳ ಇಮಾಮಗೂ ಅಂಟಿತ್ತು. ಇಟ್ಟರ ಮ್ಯಾಲ ಎರಡೂ ಕಡಿಯುವರು ಪಿ0ರ್ಯಾದು, ಪೋಲಿಸ ಸ್ಟೇಷನ್ ಅಂತ ಅಲೆದದ್ದೂ ಆಯಿತು. ಕಡೆಗೆ ಪೈಲ್ವಾನ್ ಕಾಸೀಮ ಮತ್ತು ಹಣ್ಣಿನ ಅಂಗಡಿ ದಸ್ತಗೀರ ಇಬ್ಬರ ಮಧ್ಯಸ್ಥಿಕೆಯಿಂದ ಆ ಜಗಳ ಬಗಿ ಹರದು ಒಂದು ತಿಂಗಳೂ ಆಗಿರಲಿಲ್ಲ. ಅಷ್ಟರೊಳಗ ಈ ಗೌರೀ ಹುಣ್ಣವಿ ಜಾತ್ರಿ. ಚಿರಕೀಗಾಣದ ಅಲ್ಲಾಭಕ್ಷ ಜಾತ್ರಿಗಿ ವರ್ಷ ಬರೂವಂಗ ಬಂದೇ ಬರ್ತಾನ ಮತ್ತ ಸೋಮಣ್ಣನ ಮನಿ ಮುಂದೇ ಠಿಕಾಣಿ ಹಾಕೇ ಹಾಕೇ ಹಾಕ್ತಾನ ಅಂತ ಒಣ್ಯಾನ ಚುಕ್ಕೊಳೆಲ್ಲಾ ಅಲ್ಲಾಭಕ್ಷ ಬರೂದೇ ಕಾದಿದ್ದರು. ಈ ಸಾರಿ ಅವನಿಗಿ ಇಲ್ಲಿ ಚಿರಕೀಗಾಣಾ ಹಾಕಲಿಕ್ಕ ಜಾಗಾ ಕೊಡಬ್ಯಾಡ ಅಂತ ಓಣ್ಯಾನ ಮಂದಿ ಮತ್ತ ಸೋಮಣ್ಣನ ತಮ್ಮ ಭೀಮಣ್ಣ ರಾಗಾ ತಗದಿದ್ದರು. ಸೋಮಣ್ಣ ಮಾತ್ರ ನಿಮ್ಮ ನಿಮ್ಮ ಒಣಾ ಲಿಗಾಡಗೋಳಿಗಿ ಪಾಪ ಅಲ್ಲಾಭಕ್ಷ ಏನು ಮಾಡ್ಯಾನ..? ಅಂತ ಅವನ ಪರವಾಗಿ ವಾದಾ ಮಾಡಿದ್ದ. ಅದೂ ಅಲ್ಲದೇ ಸಂಬಂಧಿಲ್ಲ… ಸೂತ್ರಿಲ್ಲ, ಇಮಾಮಸಾಬನ ಅಂಗಡಿಗಿ ಬೆಂಕಿ ಇಡು ಅಂತ ಹೇಳಿದ್ಯಾರು..? ಮೊದಲ ನಾವು ಸುದ್ದ ಇರಬೇಕು. ಹುಳಕ ನಮ್ಮ ಕಡಿ ಇಟಗೊಂಡು ಇನ್ನೊಬ್ಬರಿಗೆ ಅನ್ನೂದು ಸರಿ ಅಲ್ಲ. ಜಾತ್ರಿಗಿ ಚಿರಕೀಗಾಣದ ಅಲ್ಲಾಭಕ್ಷ ಬರೋದು ನಿನ್ನೆ ಮೊನ್ನೆ ಅಲ್ಲ ಅಪ್ಪನ ಕಾಲದಿಂದಲೂ ಅಂವಾ ಬರೂದೈತಿ, ಇಲ್ಲೇ ಠಿಕಾಣಿ ಹೂಡೂದೈತಿ. ನಿನ್ನ ಮತ್ತ ಇಮಾಮಸಾಬನ ಜಗಳದೊಳಗ ಅಲ್ಲಾಭಕ್ಷ ಯಾಕ ಬಡವ ಆಗಬೇಕು..? ಅದೂ ಅಲ್ಲದೇ ಇದು ನನ್ನ ಜಾಗಾ ಇಟ್ಟು ವರ್ಷದಿಂದ ನಾ ಕೊಡಕೊಂತ ಬಂದೀನಿ ಈಗ ಇಲ್ಲ ಅನ್ನೂದು ಹ್ಯಾಂಗ..? ಅಂತೆಲ್ಲಾ ಹೇಳಿ ಸಮಜಾಯಿಷಿ ನೀಡಿ ಸೋಮಣ್ಣ ತಾ ಅಲ್ಲಾಭಕ್ಷಗ ಚಿರಕೀಗಾಣಾ ಹಾಕಾಕ ಜಾಗಾ ಕೊಡವನೇ.. ಅನ್ನೂ ತೀಮರ್ಾನಕ ಬಂದಿದ್ದ. ಅದಾದ ಮರುದಿನಾನೇ ಅಲ್ಲಾಭಕ್ಷನ ಚಿರಕೀಗಾಣದ ಟ್ರಕ್ ಅಲ್ಲಿ ಬಂದು ನಿಂತಿತ್ತು. ಶಿವನಿಂಗ ಮತ್ತ ಜಗದೀಶ ಅಲ್ಲೀಸಾನ ಟ್ರಕ್ ಬಂದು ಮನಿಮುಂದ ನಿಂತಿದ್ದೇ ಅವತ್ತೊಂದು ದಿನ ತಮಗ ಸಾಲಿ ಸೂಟಿ ಅಂತ ತಾವೇ ಖುದ್ದಾಗಿ ಮನ್ಯಾಗ ಘೋಷಿಸಿಬಿಟ್ಟಿದ್ದರು. ಅವರ ಅವ್ವದೇರಂತೂ ಈ ಅಲ್ಲಾಭಕ್ಷ ಬರೂದು ಹ್ಯಾಂಗರೇ ಆಗಲಿ ನಮ್ಮ ಹುಡುಗರು ಒಂದು ವಾರ ಸಾಲೀಗೇ ಹೋಗಂಗಿಲ್ಲ ಅಂದಾಗ ಅಲ್ಲಾಭಕ್ಷ ನಕ್ಕೊಂತ ‘ಜಾತ್ರಿ ವರ್ಷಕ್ಕೊಮ್ಮೇ ಬರೂದಲ್ಲರೀ ಅವ್ವಾರ’ ಅನ್ಕೊಂತ ಅಂವಾ ಆ ಹುಡುಗರಗಿ ಪುಸಲಾಯಸತಿದ್ದ. ಟ್ರಕ್ನೊಳಗಿಂದ ಹೊಸಾ ಹೊಸಾ ಆನಿ, ಕುದರಿ, ಝಿಬ್ರಾ, ಸಿಂಹ, ಹುಲಿ ಒಂದರ ಬೆನ್ನಿಗಿ ಒಂದು ಇಳಿಯಾಕತ್ತಿದ್ದನ್ನ ನೋಡಿ ಶಿವಲಿಂಗ ‘ಅಲ್ಲೀಸಮಾಮಾ, ಈ ಸಾರಿ ಎಲ್ಲಾ ಹೊಸವು ಅದಾವಲ್ಲ.?.’ ಅಂದದ್ದೇ ಅಂವಾ ತುಸು ಸಿಟ್ಟಿನಿಂದಲೇ ‘ಹೌದು ಆದರ ಪುಗ್ಸಟ್ಟೆ ಅಲ್ಲ, ದುಡ್ಡಿಲ್ಲಾಂದ್ರ ನೀವು ಈ ಕಡಿ ಬರೇ ಬ್ಯಾಡ್ರಿ’ ಅಂದದ್ದೇ ಈ ಹುಡುಗರ ಮುಖಾ ಸಣ್ಣಾಗಿತ್ತು. ಇಲ್ಲೀಮಟ ಹಳೀ ಹುಲಿ.. ಕಿವಿ ತುಂಡಾಗಿರೋ ಸಿಂಹ.. ಬಾಲಾ ಇಲ್ಲದಿರೋ ಕುದರಿ, ಬಣ್ಣಾ ಅಳಕಿರೋ ಝಿಬ್ರಾ ಇರತಿದ್ವು. ಆ ಜಾತ್ರಿಗಿ ಅವನ್ನೆಲ್ಲಾ ರಿಪೇರಿ ಮಾಡಿಸಿ, ಬಣ್ಣಾ ಹೊಡಿಸಿ ಹೊಸಾವು ಮಾಡಿದ್ದ. ಈ ಹುಡಗರನ್ನ ಹಿಂಗೇ ಬಿಟ್ಟರ ವಾರಗಟ್ಟಲೇ ಪುಗಸಟ್ಟೆ ಆಡ್ತಾರ ಅನ್ನೂದು ಅಂವಗೂ ಗೊತ್ತಿತ್ತು. ಅದಕ್ಕೇ ಆ ಮಾತ ಹೇಳಿದ್ದ. ಛತ್ರಿಯುಂಗ ಸುತ್ತಲೂ ಚಿರಕೀಗಾಣದ ಮ್ಯಾಲ ಹೊದಿಸೋ ಬಟ್ಟೀನೂ ಈಷ್ಟಮನ್ ಕಲರದಾಗಿತ್ತು. ನಡುವ ನೆಡೊ ಕಟಗಿ ತುಂಡೂ ಹೊಸದೇ.. ಚಿರಕೀಗಾಣದ ನಡುವ ಸಿಗಸೋ ತೊಟ್ಟಲೂ ಹೊಸಾವೇ ಇದ್ವು. ಹಿಂಗಾಗಿ ಶಿವಲಿಂಗ ಮತ್ತ ಜಗದೀಶನ ಪಾಲಿಗಿ ಅಲ್ಲಾಭಕ್ಷ ಆ ಜಾತ್ರಿಗಿ ರಿಯುಲ್ ಹೀರೋ ಆಗಿದ್ದ. ಅಂವಾ ಬ್ಯಾಡ ಅಂದರೂ ಮನಿಯೊಳಗಿಂದ ಕುಡಿಯಾಕ ನೀರ ತಂದು ಕೂಡೂದು, ಅಂವಾ ಊಟಕ್ಕ ಕುಂತಾಗ ವಣಗೀ ರೊಟ್ಟಿ ತಂದು ಕೂಡೂದು, ಮನ್ಯಾಗ ಜಾತ್ರಿಗಿ ಅಂತ ಮಾಡಿಟ್ಟ ಶೇಂಗಾ ಹೋಳಿಗೆ ಎಲ್ಲಾ ಕೊಟ್ಟಂಗ ಮಾಡಿ ಅಂತೂ ಇಂತೂ ಅಲ್ಲಾಭಕ್ಷನ ದೋಸ್ತಿ ಶುರುವಾಗ್ತಿತ್ತು. ಅಲ್ಲಾಭಕ್ಷ ಗೌರೀ ಹುಣ್ಣಮಿ ಜಾತ್ರಿಗಿ ಬರೂದು ಸೋಮಣ್ಣಗೌಡ ಲಗ್ನ ಆದ ವರ್ಷದಿಂದೂ ಇತ್ತು. ಹಿಂಗಾಗಿ ಸೋಮಣ್ಣಗ ಅಂವಗ ಬಾಳ ಚುಲೋ ದೋಸ್ತಿನೂ ಆಗಿತ್ತು. ಆ ದೋಸ್ತಿಗಿ ಕಾರಣ ಅಂದ್ರ ಅವರ ಕುಡಿಯೋ ಚಟ. ಅಲ್ಲೀಸಾ ರಾತ್ರಿ ಆಗತಿದ್ದಂಗ ಚಿರಕೀಗಾಣ ಬಂದ ಮಾಡಿ, ಹುಲಿ, ಸಿಂಹ, ಕುದುರೆ ಎಲ್ಲಾ ಪ್ರಾಣಿಗಳನ್ನ ತೊಟ್ಟಲದೊಳಗ ಮಲಗಿಸಿ, ಸೋಮಣ್ಣಗ ಕಾಕಾ..ಕಾಕಾ ಅಂತ ಕೂಗತಿದ್ದ. ಇಬ್ಬರೂ ಕೂಡಿ ಹುಸೇನಸಾಬನ ದಾರೂದ ಅಂಗಡಿ ಕಡಿ ಹೋಗತಿದ್ದರು. ಅಲ್ಲೀಸಾನ ಹೆಂಡತಿ ಜೈನಾಬಿ ಸೋಮಣ್ಣನ ಹೆಂಡತಿ ಶಾರದಾಬಾಯಿ ಮುಂದ ‘ಅಕ್ಕಾರ ಇಟ್ಟು ದುಡದರೂ ಹಿಂಗೈತಿ ಅಂವಗ ಬರೀ ಕುಡೀಲಾಕೇ ಸಾಲಲ್ಲ, ಈಗ ನೋಡ್ರಿ ಅಂವಾ ಬರೂಮಟ ಕಾಯ್ಕೊಂತ ಕೂಡಬೇಕು. ಬಂದು ಮತ್ತ ಸುಮ್ಮ ಊಟ ಮಾಡಿ ಬೀಳೂದಿಲ್ಲ, ವದರ್ರ್ಕೊಂತ ಕೂಡ್ತಾನ.. ಸಾಕಾಗೈತಿ ನೋಡ್ರಿ ಯುವ್ವಾ’ ಅಂದದ್ದೇ ಶಾರದಾಬಾಯಿ ‘ನಿಮ್ಮ ಕಾಕಾ ಅರೆ ಏನು ಕಡಿಮಿ ಅದಾರಾ..? ಈಗ ನೋಡು ಒಂದು ವಾರ ಇನ್ನ ಹಿಂಗೇ ದಿನ್ನಾ ಕುಡಿಯೋದೇ ಕುಡಿಯೋದು ನನಗೂ ಸಾಕಸಾಕಾಗೈತಿ’ ಅಂತ ಮಾತಾಡೂದರೊಳಗ ಸೋಮಣ್ಣ ತೂರಾಡಕೊಂತ ಬರೂದು ನೋಡಿ ‘ಕಾಕಾ ಬಂದರು’ ಅಂತ ಜೈನಾಬಿ ತಲಿ ಮ್ಯಾಲ ಸೆರಗ ಹೊದಕೊಂಡು ನಡದು ಬಿಡತಿದ್ದಲು.
ಅಲ್ಲಾಭಕ್ಷ ತನ್ನ ಹೆಂಡತೀನ್ನ ದಿನ್ನಾ ಹೊಡಿಯುವನು. ಸೋಮಣ್ಣ ಮತ್ತ ಅವನ ಹೆಂಡತಿ ಹೋಗಿ ಬಿಡಿಸಿ ಬರವರು. ಸೋಮಣ್ಣ ಹಂಗ ಜಗಳ ಬಿಡಸಿ ಬರೂದು ನೋಡಿ, ಓಣ್ಯಾನ ಮಂದಿ ‘ಇಬ್ಬರೂ ಅವರೇ ಕೂಡ್ಯಾರ ಇದ್ದಿಲಿಗೆ ಮಸಿ ಬುದ್ದಿ ಹೇಳದಂಗ ಆಗೈತಿ’ ಅಂತಿದ್ದರು. ಸೋಮಣ್ಣ ಜಗಳಾ ಬಿಡಸದಂಗೆಲ್ಲಾ ಅಲ್ಲಾಭಕ್ಷ ಮಾತ್ರ ಸೆಟಸೆಟದು ಹಂಗೇ ಹೊಡೀಯಾಕ ಹೋಗತಿದ್ದ. ಮುಂಜಾನೆ ಎದ್ದು ಸಿಂಹ, ಹುಲಿ, ಆನೆ, ಕುದುರೆಗಳನ್ನ ದುಡಿ0ಾಕ ರೆಡಿ ಮಾಡಿಂದ ತಾನೂ ಸಜ್ಜಾಗತಿದ್ದ. ಎತ್ತರ ಆಳ, ಗಟ್ಟಿ ದೇಹ, ಗುಂಗುರು ಗೂದಲು, ಹುರಿ ಮೀಸೆ, ಯಾವಾಗ್ಲೂ ತಂಬಾಕು ಜಗಿಯೋ ಬಾಯಿ, ಕಪ್ಪು ಮೈಬಣ್ಣ ಹೀಗಿರೋ ಅಲ್ಲಾಭಕ್ಷ ಓಣ್ಯಾಗಿರೋ ಎಲ್ಲಾ ಚುಕ್ಕೋಳ ಪಾಲಿಗೆ ಅಲ್ಲೀಸಾ ಆಗಿದ್ದ. ಹಂಗೂ ಅನ್ನಲಿಕ್ಕ ಬರದಿರೋ ಹುಡುಗರು ಅಲಿ.. ಅಲಿಮಾಮಾ ಅಂತಿದ್ದರು. ಸೋಮಣ್ಣ ಅಲ್ಲಾಭಕ್ಷನ ಕಡಿಂದ ಬಾಡಿಗೆ ಅಂತ ಒಂದೇ ಒಂದು ರೂಪಾಯಿ ತಗೊತಿರಲಿಲ್ಲ. ಹಂಗಂತ ಹೇಳಿ ಅವನೂ ಬಿಡೆಕ ಬಿದ್ದು ಹಡೀಲಾರದೇ ಸತ್ತರು ಅನ್ನೂವಂಗ ಇರಲಿಲ್ಲ. ಸೋಮಣ್ಣಗ ತಾನು ಜಾತ್ರಿ ಮುಗಿಸಿ ಹೋಗೂಮಟ ಎಡಿಕ್ಕೊಮ್ಮ ಕರಕೊಂಡು ಹೋಗಿ, ಹುಸೇನಿ ಅಂಗಡಿಯೊಳಗ ದಾರೂ ಹೊಡಸತಿದ್ದ. ಈ ಬಿರಾದಾರ ಸೋಮಣ್ಣನ ಮಗ ಶಿವನಿಂಗ ಚಿರಕೀಗಾಣ ಬಂದ ಮಾಡಿ ಅವನಪ್ಪ ಮತ್ತ ಅಲ್ಲಾಭಕ್ಷ ಎಲ್ಲಿ ಹೋಗ್ತಾರ ಅಂತ ಪತ್ತೇ ಹಚ್ಚೇ ಬಿಡಬೇಕು ಅಂತ ಒಂದಿನ ಅವರ ಬೆನ್ನಿಗಿ ಬಿದ್ದಿದ್ದ. ಆಗ ಶಿವನಿಂಗಗ ಇನ್ನೂ ಹದಿನಾಲ್ಕು ವರ್ಷ. ಹಗೂರಕ ಅವರ ಹಿಂದಿಂದೇ ಹೋಗಿ ಮರಿಗಿ ನಿಂತು ನೋಡದ. ಇಬ್ಬರೂ ಕೂಡಿ ಮಾರ್ಕೆಟ್ಟ ಸಂದಿಯೊಳಗಿರೋ ಹುಸೇನಸಾಬನ ದಾರೂದಂಗಡಿಗೆ ಹೋದರು. ಹೊರಗ ಸಾರಾಯಿ ಅಂಗಡಿ ಅನ್ನೋ ಕೆಂಪು ಬೋರ್ಡ್ ಒಂದು ಜೋತಾಡತಿತ್ತು. ಅದರ ಕೆಳಗ ಅಂಗಡಿ ಲೈಸನ್ಸ್ ನಂಬರ್ ಬರದಿತ್ತು. ಸಮೀಪ ಹೋಗಿ ಅಲ್ಲೇ ಬಾಜೂ ನಿಂತ. ಒಳಗಿನಿಂದ ಒಬ್ಬಂವ ಕೆಮ್ಮಕೊಂತ ಬಾಯಿಂದ ಥೂ..ಥೂ ಅಂತ ಉಕ್ಕೋಂತ ಹೊರಗ ಬಂದ. ಅವನ ಕಣ್ಣು ಕೆಪಾಗ ಆಗಿದ್ವು. ‘ಮರೀ ಯಾರು ಬೇಕಿತ್ತು..?’ ಅಂತ ಕೇಳಿದ್ದೇ ಶಿವನಿಂಗ ಹೆದರಿ ಓಡಿದ್ದ. ಮತ್ತ ಸ್ವಲ್ಪ ಹೊತ್ತಿನ ಮ್ಯಾಲ ಅವರ ಚಿಕ್ಕಪ್ಪನ ಮಗ ಜಗದೀಶನ ಕರಕೊಂಡು ಬಂದ. ದಾರೂದ ಅಂಗಡಿ ಸನ್ಯಾಕ ಬರಾಕತ್ತಂಗ ಶಿವನಿಂಗನ ಅಪ್ಪ ಮತ್ತ ಅಲ್ಲೀಸಾ ಜೋರಾಗಿ ಮಾತಾಡೂದು ಕೇಳಸತಿತ್ತು. ಅವರಿಗಿಂತಾ ಜೋರಾಗಿ ಯಾರೋ ಒಬ್ಬಾತ ಇತಿಹಾಸವನ್ನ ಪಾಠ ಮಾಡೂವಂಗ ಇತ್ತು. ಶಿವಾಜಿ0ು ಸಾಹಸವನ್ನು ಅಂವಾ ನಾಟಕದ ಡೈಲಾಗ ರೀತಿಯುಲ್ಲಿ ಹೇಳತ್ತಿದ್ದ. ಆ ಧ್ವನಿ ಬಾಳ ಪರಿಚಿತ ಅನಿಸಿ, ಹೀಂಗ ಇಣುಕಿ ನೋಡೂದರೊಳಗ ಅಂವಾ ಪ್ಯಾಟೀ ಶರಣಪ್ಪ. ಕೈಯಾಗ ಗ್ಲಾಸ್ ಹಿಡದು ಮುಖಾ ಕಿಮುಚಿ ಗಟಗಟ ಅಂತ ಒಂದೇ ಸವನೇ ಸೆಡ್ಡತಿದ್ದ. ಹಂಗ ಸೆಡ್ಡಿ ಬಾಯಿ ಒರಸಕೊಂಡು ಹಿಸ್ಟ್ರಿ ಸುರು ಮಾಡಿ ಬಿಡತಿದ್ದ. ಆರಂಭ ಬರೊಬ್ಬರಿ ಇದ್ದರೂ ಬರ್ತಾ ಬರ್ತಾ ದಾರೀ ತಪ್ಪಿ ವಿಜಯನಗರ ಸಾಮ್ರ್ಯಾಜ್ಯದೊಳಗ ವಿಕ್ರಮಾದಿತ್ಯನನ್ನೂ ಎಳದು ತಂದು ಕುಳ್ಳರಿಸಿಬಿಡ್ತಿದ್ದ. ಅಂಥಾ ಶರಣಪ್ಪ ಅಲ್ಲಿ ಕುಡಿಲಿಕ್ಕ ಬರೋ ಮಂದಿ ನಡುವ ‘ಬಾಳ ಶ್ಯಾಣಾ, ಆದರ ಸುಳಿ ಸುಮಾರ’ ಅಂತ ಬಿರುದು ತಗೊಂಡಂವ. ಅವನಪ್ಪ ಮತ್ತ ಅಲ್ಲಾಭಕ್ಷ ಏನು ಮಾಡಾಕತ್ತಾರ ಅನ್ನೋ ಕುತೂಹಲ ಆ ಇಬ್ಬರೂ ಹುಡುಗರಿಗಿತ್ತು. ಸಾವಕಾಸವಾಗಿ ಇಣುಕಿ ನೋಡಿದರು ಅಲ್ಲಾಭಕ್ಷ ಗೋಣು ಕೆಳಗ ಹಾಕಿ ಉಪಿನಕಾಯಿ ಚೀಪತಿದ್ದ. ಸೋಮಣ್ಣ ಕೈ0ಾಗ ಗ್ಲಾಸ ಹಿಡ್ಕೊಂಡು ಆ ಇತಿಹಾಸಕಾರನ ಮಾತ ಕೇಳತಿದ್ದ. ಎದುರು ಗೋಡೆ ಮೇಲಿರೋ ಪೋಸ್ಟರ್ ಮ್ಯಾಲ ಆಕಸ್ಮಿಕವಾಗಿ ಶಿವನಿಂಗಗ ಕಣ್ಣ ಬಿತ್ತು. ಅದೊಂದು ಬಿಳಿ ಮೈನ ಎಳೀ ಸಬೂಳಾಗಿರೋ ಹೆಂಗಸು. ಮೈಮೇಲೆ ಒಂಚೂರೂ ಬಟ್ಟೆಯಿಲ್ಲ. ಎರಡೂ ಕಾಲಿನ ಸಂದಿ0ೊಳಗ ಬಾಟಲಿ ಹಿಡಕೊಂಡು ನಿಂತಿದ್ದು ನೋಡಿ, ಈ ಹುಡುಗರಿಗಿ ಎರಡು ವರ್ಷ ಅಡ್ವಾನ್ಸ್ ಪ್ರಾಯ ಬಂದಂಗ ಆಗಿತ್ತು. ಆ ಪೋಸ್ಟರ್ ನೋಡಿದ್ದೇ ಇಬ್ಬರೂ ಹುಡುಗರು ಹೆದರ್ಕೊಡು ಅಲ್ಲಿಂದ ಫರಾರಿ ಆದರು. ಅವತ್ತಿನಿಂದ ಶಿವಲಿಂಗ ಮತ್ತ ಜಗದೀಶ ಹೀಂಗ ಒಂದು ಸುತ್ತು ಆ ದಾರೂ ಅಂಗಡಿ ಕಡಿ ಹೋಗೂದು, ಒಳಗಿರೋ ಪೋಸ್ಟರ್ ನೋಡಿ ಕಿಸಕ್ ಅಂತ ನಕ್ಕು ಓಡಿ ಬರೂದು ಮಾಡತಿದ್ದರು. ಒಂದು ಸಾರಿ ಹಿಂಗೇ ಇಣುಕಿ ನೋಡೂ ಮುಂದ ಹುಸೇನಿ ಈ ಹುಡಗರನ್ನ ನೋಡಿ ‘ಏ0್ ಕುರಸಾಲ್ಯಾಗೊಳೇ ನಿಮ್ಮ ಅಪ್ಪಗ ಹೇಳ್ತೀನಿ ನೋಡು’ ಅಂದದ್ದೇ ಅವತ್ತಿನಿಂದ ಈ ಚುಕ್ಕೋಳು ಮತ್ತ ಆ ಕಡಿ ಹೈದಿರಲಿಲ್ಲ.
ಶಿವನಿಂಗ ಮತ್ತು ಜಗದೀಶ ಇಬ್ಬರೂ ಒಂದೇ ಕ್ಲಾಸಲ್ಲಿ ಓದುವವರು. ಇವರ ಜೋಡಿ ಓದೂ ಹುಡುಗರು, ಹುಡಗೇರು ಚಿರಕೀಗಾಣಾ ಆಡಾಕ ಬಂದರ ಇವರಿಬ್ಬರೂ ಥೇಟ್ ಹೀರೋಗಳ ಥರಾ ಪೋಜ್ ಕೊಡವರು. ಅವರು ಕೇಳಲಿಲ್ಲಂದರೂ ಇದೇ ನಮ್ಮನಿ ಅಂತ ಕೈ ಮಾಡಿ ತೋರಸತಿದ್ದರು. ಶಿವನಿಂಗ ಜಗದೀಶಕಿಂತಾ ತುಸು ಉಡಾಳಿದ್ದ. ಒಂದ್ಸಾರಿ ಏನಾಗಿತ್ತಂದರ ಸೋಮಣ್ಣಗ ಎಮ್ಮೀ ಚಂದ್ರಾಮ ಲಮಾಣಿಗೇರ ತಾಂಡೆದೊಳಗಿನ ಕಂಟ್ರೀ ದಾರೂ ತಂದು ಕೊಟ್ಟಿದ್ದ. ಅಲ್ಲೀಮಟ ಅಂವಾ ಮನ್ಯಾಗ ಕುಡೀತಿರಲಿಲ್ಲ. ಆ ಕಂಟ್ರಿ ದಾರೂ ಮನ್ಯಾಗೇ ಕುಂತು ಮುಗಿಸಿದ್ದ. ಆ ಬಾಟಲಿ ತಳದೊಳಗ ನಾಕು ಹನಿ ಉಳಿದಿತ್ತು. ಶಿವನಿಂಗ ಮನ್ಯಾಗ ಯಾರೂ ಇರಲಾರದ ಹೊತ್ತಿನೊಳಗ ಆ ಬಾಟ್ಲಿ ತಗೊಂಡು ಮ್ಯಾಲೆತ್ತಿ ಬಾಯಿಗಿ ಹಿಡದಿದ್ದ. ಹಂಗ ಹಿಡದ ಗಳಗೀಯೊಳಗೇ ಜಗದೀಶ ಬಂದುಬಿಟ್ಟಿದ್ದ. ಇದರ ವಾಸನೆ ನೋಡು ಹ್ಯಾಂಗೈತಿ ಅಂತ ಅವನ ಮೂಗಿಗೂ ಹಿಡದಿದ್ದ. ಹಿಂದೊಮ್ಮ ಇದೇ ಶಿವನಿಂಗ ಅಡುಗಿಮನ್ಯಾನ ಸಾಸವೀ ಡಬ್ಬಿಯೊಳಗಿನ ಐವತ್ತು ರೂಪಾಯಿ ಕದಕೊಂಡು ಹೋಗಿ ರೊಕ್ಕಾ ಆಡಿ ಎಲ್ಲಾ ಸೋತಿದ್ದ. ಅದು ಆಮ್ಯಾಲ ಮನಿಯೊಳಗ ಗೊತ್ತಾಗಿ ಸೋಮಣ್ಣ ಅವನನ್ನ ದನಕ್ಕ ಬಡದಂಗ ಬಡದ ಮ್ಯಾಲೂ ಅಂವಾ ನೆಟ್ಟಗಾಗಿರಲಿಲ್ಲ.
************************
ಜಾತ್ರಿ ಅಂದ ಮ್ಯಾಲ ಸಂಬಂಧಿಗಳು, ಆತ್ಮೀಯರು ಮಕ್ಕಳಿಗೆಲ್ಲಾ ದುಡ್ಡು ಕೊಟ್ಟೇ ಕೊಡತಿದ್ದರು. ಆವಾಗ ಒಂದು ರೂಪಾಯಿ ಅಂದ್ರ ಈಗಿನ ನೂರು ರೂಪಾಯಿಗಿ ಸಮ. ಒಂದು ಸಿನೇಮಾ ಟಿಕೆಟ್ ದರ 70 ಪೈಸೆ ಇದ್ದ ಕಾಲ ಅದು. ಜಾತ್ರಿ ದಿನ ಈ ಶಿವನಿಂಗನಂಥಾ ಚುಕ್ಕೋಳನ್ನ ಹಿಡಿಯುವರೇ ಇಲ್ಲ. ನಾಳೆ ಜಾತ್ರಿ ಐತಿ ಅಂದರ ಅದರ ಹಿಂದಿನ ರಾತ್ರಿ ಬಜಾರದೊಳಗ ಪೆಟ್ರೊಮ್ಯಾಕ್ಸ್ ಮತ್ತ ಲೈಟ್ ಬೆಳಕಿನೊಳಗ ಅಂಗಡಿ ತಯಾರಾಗತಿದ್ವು. ಪಳಾರ, ಆಟಗಿ ಸಾಮಾನು, ಬೆಂಡಬತ್ತಾಸ್, ಬಲೂನ್, ತೊಟ್ಟಿಲು, ಲಾಲವಾಲಾ, ಗದರ್ಗಮ್ಮತ್ತು ಹಿಂಗ ಇಡೀ ಬಜಾರೇ ತುಂಬಿ ತುಳುಕೂವಂಗ ಆಗಿರತಿತ್ತು. ಶಿವನಿಂಗ ಅವತ್ತ ನಸುಕಿನೊಳಗೇ ಎದ್ದು ಜಗದೀಶನ ಕರಕೊಂಡು ಜಾತ್ರಿ ಬಜಾರ ನೋಡಾಕ ಹೋಗತಿದ್ದ. ತಿಂಗಳಾನುಗಟ್ಟಲೇ ಮುಂಚಿತವಾಗಿ ‘ಜಾತ್ರೆಯ ಸಲುವಾಗಿ ಬರಲಿದೆ’ ಎಂದು ಬರೆದು ಥೇಟರ್ ಹೊರಗೆ ಅಂಟಿಸಲಾದ ತಾಯಿಗೆ ತಕ್ಕ ಮಗ ಎನ್ನುವ ಸಿನೇಮಾದ ದೊಡ್ಡ ಪೋಸ್ಟರ್ನ್ನು ಜಾತ್ರೆ ಹಿಂದಿನ ದಿನ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಗೋಡೆಯ ಬೆನ್ನ ಮೇಲೆ ಅಂಟಿಸಿದ್ದು ಕಂಡು, ಅದರಲ್ಲಿ ರಾಜಕುಮಾರ ಕೈಗೆ ಬಾಕ್ಸಿಂಗ್ ಧರಿಸಿ ನಿಂತದ್ದನ್ನು ನೋಡಿ, ಇಬ್ಬರೂ ಹಿರಿಹಿರಿ ಹಿಗ್ಗಿದ್ದರು. ಏನಾರೇ ಆಗಲಿ ಇವತ್ತೇ ಹೋಗೂದು ಅಂತ ತೀಮರ್ಾನ ಮಾಡಿದ್ದರು. ಬೆಳಕು ಹರದಂಗ ಜಾತ್ರಿಗಿ ಬಂದ ಮಂದಿ ತಂಡ ತಂಡಾಗಿ ಬ0ುಲಾಗಲಿಕ್ಕ ಸುರು ಆದರು. ನೀಲಗಂಗಮ್ಮನ ತೇರ ವ್ಯಾಳೆದೊಳಗ ಉತ್ತತ್ತಿ, ಬಾಳೆಹಣ್ಣು ಎಸೀಲಾಕಂತ ಹೆಣಮಕ್ಕಳೆಲ್ಲಾ ಹೊಸಾ ಬಟ್ಟೆ ಹಾಕೊಂಡು ಬಜಾರದೊಳಗ ರಸ್ತೆ ಆಜೂ ಬಾಜೂ ನಿಂತಗೊಂಡಿದ್ದರು. ತೇರು ಬಜಾರದೊಳಗ ಸಾಗಿ ಕೆಳಗಿರೋ ಬಸವಣ್ಣದೇವರ ಗುಡೀಮಟ ಹೋಗಿ ಮತ್ತ ಹೊರಳತಿತ್ತು. ಹಂಗ ಹೊರಳಿ ಅದು ಗುಡಿ ಮುಟ್ಟಿದ್ದೇ ಖರೆ ಖರೆ ಜಾತ್ರಿ ಸುರು ಆಗ್ತಿತ್ತು. ಆಗಂತೂ ಬಜಾರಕ್ಕ ಒಂದು ಫ಼ೋರ್ಸ್ ಬಂದಂಗ ಕಾಣತಿತ್ತು. ಬೆಳ್ಳ ಬೆಳತಾನ ಸೆಟ್ ಮಾಡಿರೋ ಅಂಗಡಿಗಳ ವ್ಯಾಪಾರ ಭರ್ಜರಿಯಾಗಿರತಿತ್ತು. ಶಿವನಿಂಗ ಮನಿ ಮುಂದಿನ ಕಟ್ಟೀ ಮ್ಯಾಲ ಕುಂತು ತನ್ನ ಕಿಸೆಯೊಳಗ ಕೂಡಿರೋ ಜಾತ್ರಿ ದುಡ್ಡು ಎಣಸದ. ಹದಿನಾಲ್ಕು ರೂಪಾಯಿ ಆಗಿತ್ತು. ಅದರೊಳಗ ಸಿನೇಮಕ ಒಂದು ರೂಪಾಯಿ ಇಂಟ್ರವಾಲ್ ಬಿಟ್ಟಾಗ ಮಿಸಾಳಕ ಒಂದೆಂಟಾಣೆ ತಗದರ ಇನ್ನೂ ಹನ್ನೆರಡೂವರೆ ರೂಪಾಯಿ ಉಳಿತೈತಿ ಅಂತ ಯೋಚನೆ ಮಾಡೂದರೊಳಗ ಚಾವಡಿ ಕಟ್ಟೀ ಮ್ಯಾಲ ದುಡ್ಡ ಆಡೊ ಗುಂಪಗೋಳು ನೆನಪಾಗಿ ಅಲ್ಲೇ ಹೋಗಿ ಕುಂತ. ಹಂಗ ಕೂಡೂ ಮುಂದ ಸಿನೇಮಾಗೆ ಅಂತ ಒಂದು ರೂಪಾಯಿ ತಗದು ಬ್ಯಾರೇ ಕಿಸೆಯೊಳಗ ಇಟಗೊಂಡ. ಚಿತ್ತಾ ಟಪ್ಪ ಆಟದೊಳಗ ಚಾರಾಣೆ.. ಎಂಟಾಣೆ ಆಡ್ತಾ ಹೋಗಿ, ಒಂದು ರೂಪಾಯಿಮಟ ಬಂದು ಮುಟ್ಟಿದ್ದ. ಮೊದಲ ತುಸು ಗೆದ್ದಿದ್ದ ಆಸೆಗ ಬಿದ್ದು ಮತ್ತ ಆಡಾಕ ಸುರು ಮಾಡದ. ಕಿಸೆಯೊಳಗಿನ ಎಲ್ಲಾ ದುಡ್ಡು ಖಾಲಿಯಾಯಿತು. ತಾಯಿಗೆ ತಕ್ಕ ಮಗ ಸಿನೇಮಾ ನೋಡ್ಲಾಕಂತ ಇಟಗೊಂಡಿರೋ ಆ ಒಂದು ರೂಪಾಯಿ ಸೈತ ನಿಖಾಲಿಯಾಯಿತು. ತನ್ನ ಚಿಕ್ಕಪ್ಪನ ಮಗ ಜಗದೀಶನ ಕರಕೊಂಡು ಬಂದು ನೀ ಐದು ರೂಪಾಯಿ ಕೊಟ್ಟರ ಹತ್ತು ರೂಪಾಯಿ ಅಂತ ಆಸೆ ಹಚ್ಚಿಸಿ ಅವನ ಕಿಸೆಯೊಳಗಿರೋ ಹತ್ತು ರೂಪಾಯಿನೂ ಗೊತ್ತಿಗಿ ಹಚ್ಚಿದ್ದ. ಅವನಿಗೆ ಈಗ ಏನು ಮಾಡೂದು ಅಂತ ತಿಳಿಲಾರದಂಗ ಆಯಿತು. ರೊಕ್ಕಾ ಆಡೂ ಚಟ ಬಾಳ ಕೆಟ್ಟದ್ದು ಅಂತ ಅವರಪ್ಪ ಬಾಳ ಸಾರಿ ಹೇಳಿದ್ದಿತ್ತು. ಹಿಂದೊಮ್ಮ ಐವತ್ತು ರೂಪಾಯಿ ಸೋತು ಹಿಗ್ಗಾಮುಗ್ಗಾ ಹೊಡತ ತಿಂದಿದ್ದಿತ್ತು. ಈಗ ನೋಡದರ ಮತ್ತ ಅದೇ ಖಯಾಲಿಯೊಳಗ ಇಬ್ಬರದೂ ಜಾತ್ರಿ ದುಡ್ಡ ಖಾಲಿ ಆಗಿತ್ತು. ಜಗದೀಶಗ ರೊಕ್ಕ ಆಡೂ ಚಟ ಇರಲಿಲ್ಲ. ಇರೋದೆಲ್ಲಾ ಈ ಶಿವನಿಂಗಗೇ.. ಎಟ್ಟೇ ಆಗಲಿ ತಮ್ಮ ದೊಡ್ಡಪ್ಪನ ಮಗ ಅಂತ ಅವನು ಕೇಳಿದ ಅಂತ ದುಡ್ಡು ಕೊಟ್ಟು ಮಂಗನಾಗಿದ್ದ. ಈಗ ಇಬ್ಬರಿಗೂ ಸಿನೇಮಾ ನೋಡ್ಲಿಕ್ಕೆ ಸೈತ ದುಡ್ಡಿಲ್ಲ. ಶಿವನಿಂಗಗಂತೂ ತಲೀನೇ ಕೆಟ್ಟಂತಾಯಿತು ಸೀದಾ ಮನಿಗಿ ಬಂದ. ಅಡುಗಿ ಮನಿಯೊಳಗಿನ ಸಣ್ಣ ಸಣ್ಣ ಡಬ್ಬಿಗಳನ್ನೆಲ್ಲಾ ಚೆಕ್ ಮಾಡದ. ಅವನವ್ವ ಶಾರದಾಬಾಯಿ ಏನು ಮಾಡ್ತಾ ಇದ್ದೀ ಒಳಗೆ..? ಅಂತ ಕೇಳಿದ್ದೇ ಶಿವನಿಂಗ ‘ನೀರ ಕುಡಿಯಾಕತ್ತೀನಿ’ ಅಂದ. ದುಡ್ಡೆಲ್ಲಾ ಏನು ಮಾಡ್ದಿ..? ಅಂದಾಗ ಅವನ ಬಳಿ ಉತ್ತರವಿರಲಿಲ್ಲ. ಸೀದಾ ಹೊರಗೋಡಿದ.
ಚಿರಕೀಗಾಣ ಅವತ್ತು ಹೌಸ್ ಫ಼ುಲ್! ಆಗಿತ್ತು. ರೊಕ್ಕಾ ಇಸಕೊಳ್ಳಾಕೂ ಅಲ್ಲಾಭಕ್ಷನಿಗೆ ಪುರುಸೊತ್ತಿರಲಿಲ್ಲ. ಶಿವನಿಂಗ ಹೆಂಗಾದರೂ ಮಾಡಿ ತಾಯಿಗೆ ತಕ್ಕ ಮಗ ಸಿನೆಮಾ ಇವತ್ತು ನೋಡಲೇಬೇಕು ಅಂತ ನಿರ್ಧಾರ ಮಾಡದ. ನಿಧಾನವಾಗಿ ಚಿರಕೀಗಾಣದ ಸನ್ಯಾಕ ಬಂದ. ಟೆಂಟ್ ಬಾಜೂ ಗ್ವಾಡೀ ಮ್ಯಾಲ ಪುಟ್ಟ ಮಾಡಿನೊಳಗ ಅಲ್ಲಾಭಕ್ಷನ ವಾಚು ಇರೋದು ಅವನ ಕಣ್ಣಿಗೆ ಬಿತ್ತು. ಅದು ಹೆನ್ರಿಸ್ಯಾಂಡೊ ಕಂಪನೀದು. ಜೈನಾಬಿ ಮತ್ತು ಅಲ್ಲಾಭಕ್ಷ ಇಬ್ಬರೂ ಚಿರಕೀಗಾಣದ ವ್ಯವಹಾರದಲ್ಲಿದ್ದರು. ಗೋಡೆಗೆ ಬೆನ್ನ ಹಚ್ಚಿ ನಿಂತಂಗ ಮಾಡಿ ತಟ್ಟನೇ ಆ ವಾಚನ್ನು ಕೈಗೆತ್ತಿಕೊಂಡು ಕಿಸೆಗಿಳಸದ. ‘ಶಿವನಿಂಗ ಸ್ವಲ್ಪ ಬಾರೋ ಬಾಳ ಗದ್ದಲ ಐತಿ’ ಅಂತ ಅಲ್ಲಾಭಕ್ಷ ಕೂಗೂದ್ರೂ ತನಗೆ ಕೇಳಸಲಿಲ್ಲ ಅನ್ನೂವಂಗ ಅಲ್ಲಿಂದ ಓಡದ. ಮುಖ ಕೆಳಗ ಹಾಕಿ ಸೀದಾ ರಫ಼ೀಕ್ ವಾಚಮೇಕರನ ಅಂಗಡಿಗೆ ಬಂದ. ಅಲ್ಲಿ ಪರಿಚಯದವರು ಯಾರೂ ಇಲ್ಲ ಅನ್ನೋದನ್ನ ಖಾತ್ರಿ ಮಾಡಕೊಂಡು ಅದನ್ನ ಹಗೂರಕ ಕಿಸೆಯಿಂದ ಹೊರಗತಗದ. ವಾಚಮೇಕರ್ ಅಂವಾ ತಗೊಂಡು ಬಂದ ವಾಚನ್ನ ಕಂಡು ಏನು ಎಂಬಂತೆ ಕೇಳದ.
‘ಇದನ್ನ ಕೊಡಬೇಕಿತ್ತು’
‘ಅಂದರೆ..?
‘ಮಾರಬೇಕಿತ್ತು’
‘ಯಾರದದು..?’
‘ನಮ್ಮ ತಂದೆಯವರದು’
‘ ನಡೀತಾ ಇದೆಯೋ…ಬಂದ್ ಬಿದೈತೋ?’
‘ನಡಿಯಾಕತೈತಿ’
‘ಮತ್ಯಾಕೆ ಮಾರ್ತಿ..?’
‘…………………………….’
ವಾಚ್ ಮೇಕರ್ ಅದನ್ನು ತನ್ನ ಕೈಗೆ ತೆಗೆದುಕೊಂಡು ಮೇಲೆ ಕೆಳಗೆ ಹೊರಳಿಸಿ ನೋಡಿದ. ಒಂದು ಸಲ ವಾಚನ್ನ ಇನ್ನ್ನೊಂದು ಸಲ ಆ ಹುಡುಗನ್ನ ದಿಟ್ಟಿಸಿ ನೋಡದ. ಒಂದು ಸಣ್ಣ ನಗು ನಕ್ಕು ಹುಡಗನ ಕಡಿ ನೋಡಿ,
‘ಇದರ ರೇಟ್ ನಿನಗೆ ಗೊತ್ತೈತಾ..?’
‘ಗೊತ್ತಿಲ್ಲ ನೀವೇ ನೋಡಿ ಕೊಡ್ರಿ’
‘ಎಷ್ಟು ಕೊಡಬೇಕು..?’
‘ಹತ್ತು ರೂಪಾಯಿ’
‘ಬಹಳ ಆಯಿತು. ಐದು ರೂಪಾಯಿ ಕೊಡ್ತೀನಿ’
‘ ಕಡಿಮೆ ಆಯ್ತು ಕಡಿಗಿ ಎಂಟಾದರೂ..?’
‘ಇಲ್ಲ ಅದಕ್ಕಿಂತಲೂ ಒಂದು ರೂಪಾಯಿನೂ ಹೆಚ್ಚಿಗೆ ಕೊಡಲ್ಲ’
‘ಆಯ್ತು ಕೊಡ್ರಿ’ ದುಡ್ಡು ಇಸಕೊಂಡವನೇ ಬರಬರ ಚಿರಕೀಗಾಣದ ಕಡೆಗೆ ನಡೆದ. ಅಲ್ಲಿ ತುಸು ಕೆಲಸ ಮಾಡಿದಂಗ ಮಾಡಿ, ‘ಅಲ್ಲೀಸಾ ಆಮ್ಯಾಲ ಬರ್ತಿನಿ’ ಅಂತ ಹೊರಟ. ಜಗದೀಶನ್ನ ಕರಕೊಂಡು ತಾಯಿಗೆ ತಕ್ಕ ಮಗ ಸಿನೇಮಾಗ ಹೊಂಟ. ಅಲ್ಲಿ ನೋಡದರ ಜನ ಒಂದು ಸವನ ಗುದಮುರಗಿ ಆಡಾಕತ್ತಾರ. ಒಬ್ಬರ ಮ್ಯಾಲೊಬ್ಬರು ಅಡ್ರಾಸಿ ಬಿದ್ದು ಟಿಕೆಟ್ ತಗೋತಿದ್ದರು. ಬಾಳ ಕಟಬಿಟಿ ಮಾಡದ ಮ್ಯಾಲೂ ಟಿಕೆಟ್ ಸಿಗಲಿಲ್ಲ. ಇನ್ನೊಂದು ಥೇಟರದೊಳಗ ‘ದಾರಿತಪ್ಪಿದ ಮಗ’ ಇತ್ತು. ಅಲ್ಲೂ ರಶ್ ಇತ್ತು ಕೊನೆಗೂ ತುಸು ಗದ್ಲ ಹಾಕಿಂದ ಎರಡು ಟಿಕೆಟ್ ಸಿಕ್ವು. ಕೊನೆಗೂ ಅವರು ನೋಡಿದ್ದು ‘ದಾರಿ ತಪ್ಪಿದ ಮಗ’ ಸಿನೇಮಾ. ಸಿನೇಮಾ ನೋಡಿ ಮನಿಗಿ ಬರುವಷ್ಟರಲ್ಲಿ ಅಲ್ಲಾಭಕ್ಷ ಹೆಂಡತಿ ಜೈನಾಬಿಯನ್ನ ಬಡೀತ್ತಿದ್ದ. ಸೋಮಣ್ಣ, ಅವನ ಹೆಂಡತಿ ಶಾರದಾ ಇಬ್ಬರೂ ಜಗಳ ಬಿಡಿಸಲಿಕ್ಕ ಹರಸಾಹಸ ಪಡತಿದ್ದರು. ಅಲ್ಲೀಸಾ ಆ ದಿನ ಕುಡದಿರಲಿಲ್ಲ, ಶಾರದಾಬಾಯಿ ಮನಿಯೊಳಗೆ ಬರ್ತಾ ‘ಯಾರೋ ಬದ್ಮಾಸರು ಅಲ್ಲೀಸಾನ ವಾಚ್ ಕದ್ದಾರಂತ, ಪಾಪ ತುಟ್ಟೀ ವಾಚ ಬ್ಯಾಸರಾಗಿ ಅದು ಹೆಂಡತೀನ ಹೊಡಿಯಾಕತೈತಿ..?’ ಅಂದಾಗ ಶಿವನಿಂಗ ಅಳಕುತ್ತಲೇ
‘ ಕದ್ದವರು ಯಾರಂತ’
‘ ಅಕಿ ನೋಡಿಲ್ಲಂತ ಅದ್ಕೇ ಈ ಜಗಳ’ ಶಿವನಿಂಗ ಮನಸಿನಲ್ಲಿಯೆ ಪುಣ್ಯಕ್ಕೆ ಬಚಾವಾದೆ ಅಂದುಕೊಂಡ. ಸೋಮಣ್ಣನೂ ‘ಯಾರೋ ನೋಡಿನೇ ಅದನ್ನ ಹಾರಸ್ಯಾರ ಇವತ್ತ ಜಾತ್ರಿ ಬ್ಯಾರೆ, ಈ ಪರಿ ಗದ್ದಲದೊಳಗ ಯಾರಂತ ಹ್ಯಾಂಗ ಹೇಳೂದು..?’
‘ಪಾಪ ದುಡ್ದು ತಿನ್ನೂವು ಹಿಂಗ ಆದರ ಏನು ಮಾಡೂದು.? ಅನ್ಕೊಂತೇ ಶಾರದಾ ಶಿವನಿಂಗಗ ಊಟಕ್ಕ ಬಡಸಿದ್ದಳು.
***********************
ಅಂತೂ ಇಂತೂ ಗೌರೀ ಹುಣ್ಣವಿ ಜಾತ್ರಿ ಮುಗದಿತ್ತು. ಅದು ಜಾತ್ರಿ ಮರುದಿನ. ಶಿವನಿಂಗನಿಗೆ ಆ ಹಗಲು ತುಂಬಾ ಭಾರವಾದಂಗಿತ್ತು. ಹಿಂದಿನ ದಿನ ತಾನು ಆ ವಾಚ್ ಕದ್ದು ದಾರಿ ತಪ್ಪಿದ ಮಗ ಸಿನೇಮಾ ನೋಡಬಾರದಿತ್ತು ಎಂದು ಅವನ ಮನಸು ಪರಿತಪಸತಿತ್ತು. ಆದ್ರೆ ಏನು ಮಾಡೊದು..? ಅದನ್ನ ಮಾರಿದ್ದೂ ಆಯಿತು.. ದಾರಿತಪ್ಪಿದ ಮಗ ಸಿನೇಮಾ ನೋಡಿದ್ದೂ ಆಯಿತು. ಈಗ ಅವನ ಕಿಸೆಯಲ್ಲಿರೋದು ಎರಡು ರೂಪಾಯಿ ಮಾತ್ರ. ಬೆಳಿಗ್ಗೆ ಎದ್ದವನೇ ಒಂದು ಬಾರಿ ಹೊರಗೆ ಹೋಗಿ ಚಿರಕೀಗಾಣಾ ನೋಡಿ ಬಂದು ಸಮಾಧಾನ ಪಡೊ ಶಿವನಿಂಗ ಇವತ್ತು ಇನ್ನೂ ಹೊರಗೇ ಬಿದ್ದಿಲ್ಲ ಅನ್ನೋದು ಮನಿಯವರಿಗೇನೇ ಅಚ್ಚರಿ. ಹೊರಗಿನಿಂದ ಜಗದೀಶ ಓಡ್ಕೊಂತ ಬಂದು ‘ಶಿವನಿಂಗ, ಕಾಕಾ ನಿನಗ ಕರೀಯಾಕತ್ತಾನ’ ಅಂತ ಹೇಳಿದ್ದೇ ಶಿವನಿಂಗ ಗಡಬಡಿಸಿ ಮುಖಾ ತೊಳದು ಹೊರಗ ನಡದ. ಅವನ ಎದಿ ಝಲ್ ಅಂದಂಗ ಆಯ್ತು. ಅಲ್ಲಿ ನಿನ್ನೆ ತಾನು ವಾಚ್ ಮಾರಿದ್ದನ್ನ ಖರೀದಿಸಿರೋ ರಫ಼ೀಕ ವಾಚಮೇಕರ್ ಕೈಯಾಗ ಆ ವಾಚ್ ಹಿಡಕೊಂಡು ಅಲ್ಲಾಭಕ್ಷ ಮತ್ತ ತನ್ನ ಅಪ್ಪನ ಜೋಡಿ ಮಾತಾಡತಾ ನಿಂತಿದ್ದನ್ನ ಕಂಡು ಶಿವನಿಂಗ ಅಲ್ಲೇ ನಿತ್ರಾಣನಾದ. ಬಾಯಿ ಒಣಗಿದಂಗ ಆಯ್ತು. ಸೋಮಣ್ಣನ ಮುಖದೊಳಗ ಸಿಟ್ಟು ಅಡರಿತ್ತು. ಅಲ್ಲೀಸಾನ ಮುಖದೊಳಗೂ.. ವಾಚಮೇಕರ ರಫéೀಕ್ ನಕ್ಕೊಂತ ಸೋಮಣ್ಣನ ಮುಂದ ಹೇಳತಿದ್ದ.
‘ ಗೌಡ್ರೆ, ಏನೋ ಹುಡುಗ ಬುದ್ದಿ ಅವನಿಗಿ ತಿಳದಿಲ್ಲ, ಹೊಡಿಯೋದು ಬಡಿಯೋದು ಮಾಡಬ್ಯಾಡ್ರಿ. ಈ ವಾಚ್ ನಿನ್ನೆ ಅಲ್ಲದೇ ಮೊನ್ನೆ ನಾನೇ ರಿಪೇರಿ ಮಾಡೀನಿ. ಹಿಂಗಾಗಿ ಇದು ಅಲ್ಲಾಭಕ್ಷ್ಪ್ಷಂದೇ ಅಂತ ನನಗ ಗೊತ್ತಿತ್ತು. ನೂರುಪಾಯಿ ವಾಚ್ ಐದು ರೂಪಾಯಿಗಿ ಕೊಟ್ಟಾಗಲೇ ನನಗ ಇಂವಾ ಬೆರಕೀ ಪೋರ ಕದ್ದಕೊಂಡು ಬಂದಾನಂತ ಅನಿಸಿತ್ತು.’ ಅನ್ಕೊಂತ ಶಿವನಿಂಗನ ಕಡಿ ರಫéೀಕ ವಾಚಮೇಕರ್ ಹೊಳ್ಳಿ ನೋಡಿದ್ದೇ ದೂರದೊಳಗ ಗರಬಡಿದವನಂಗ ನಿಂತು ಇದೆಲ್ಲಾ ಕೇಳತ್ತಿದ್ದ ಶಿವನಿಂಗ ಓಡಿ ಬಂದು ಅಲ್ಲಾಭಕ್ಷನ ಕಾಲು ಹಿಡಿದಿದ್ದ.. ಅಲ್ಲಾಭಕ್ಷ ಸ್ವಲ್ಪ ಹೊತ್ತ ಕಕ್ಕಾಬಿಕ್ಕಿಯಾಗಿದ್ದ. ಸೋಮಣ್ಣ ಸಿಟ್ಟಿನೊಳಗ ಅತ್ತಿತ್ತ ಏನೋ ಹುಡುಕತ್ತಿದ್ದ. ರಫéೀಕ್ ಸೋಮಣ್ಣನ ರಟ್ಟೆಯುನ್ನು ಹಿಡದು ‘ಹೋಗಲಿ ಬಿಡ್ರಿ ಕಾಕಾ, ಆಗಿದ್ದು ಆಯ್ತು ಸಣ್ಣ ಹುಡುಗ ಅಂತಿದ್ದ. ಅಲ್ಲಾಭಕ್ಷನ ಚಿರಕೀಗಾಣ ಮಾತ್ರ ಎಂದಿನಂತೆ ಗರಗರನೆ ತಿರುಗುತ್ತಲೇ ಇತ್ತು.





0 Comments