ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾನುವಾರದ ಕಥೆ – ’ಒಂದು ಹುಂಚಿ ಮರದ ಕಥೆ’

-ತಿರುಪತಿ ಭಂಗಿ

ಆಕಾಶದಾಗ ಇದ್ದ ಸೂರ್ಯಾ ಆಗತಾನೆ ಮರೆಯಾಗಿದ್ದ. ಸೂರ್ಯ ಮರೆಯಾದ ಸಾಕ್ಷಿಗೆ ಎಂಬಂತೆ ಆಗ ಮುಗಿಲು ಕೆಂಪೇರಿತ್ತು. ಹಕ್ಕಿಗಳು ಹಿಂಡು ಹಿಂಡಾಗಿ ತಮ್ಮ ತಮ್ಮ ಗೂಡೂ ಸೇರುವ ಕಾತುರದಲ್ಲಿ ಜೋರಾಗಿ ರೆಕ್ಕೆ ಬಡೆಯುತ್ತ ಸ್ಪಧರ್ೆಯೊಳಗೆ ಓಡುವ ತುಂಟರಂತೆ ನಾ ಮುಂದೆ ತಾ ಮುಂದೆ ಅನ್ನು ಹಾಗೆ ಹೋಗುತಿದ್ದವು. ಹೋಲ ಗದ್ದೆಗಳಿಂದ ಮಂದಿ ದನಾಕರಾ ಹೊಡಕೊಂಡ, ಕೂಸು ಕುನ್ನಿ ಹೊತಗೊಂಡ, ಮನಿಕಡೆ ಬರ್ತಿದ್ದರು. ಕುರಿ ಮಂದಿ ಹಿರೇಗುಡ್ಡದಿಂದ ಸಾಲು ಸಾಲು ಕುರಿಗಳ ದಂಡುಗಳ ಹಿಂದ ಸಿಳ್ಳೆ ಹಾಕುತ್ತಾ, ಪದಾ ಹಾಡತ್ತಾ, ಕೈಯಾಗಿರೋ ಚೈನಾ ಮೊಬೈಲ್ದೋಳಗಿಂದ ಒಂದ ಚಲೋ ಜನಪದಾ ಹಾಡ ಹಚಗೊಂಡ , ಆ ಹಾಡಿಗಿ ತಾವೂ ದನಿಗೂಡಿಸಿ ಹಾಡಕೊಂತ ಕುರಿದಡ್ಡಿಕಡೆ ಚುಮುಚಮು ಬೆಳಕಿರುವಾಗ್ಲೆ ಕುರಿ ಹೊಡಕೊಂಡ ಬಂದ್ರು. ಕತ್ತಲು ಆವರಿಸಿತು. ಒಬ್ಬರ ಮಖಾ ಒಬ್ಬರಿಗೆ ಕಾಣದಷ್ಟು ಕತ್ತಲು. ನಾಕಾರು ಹೆಂಗಸರು ಬೈಲಕಡೆಗಂತ ಕೈಯಾಗ ಚರಗಿ ತಗೊಂಡ ಅದೇ ಕತ್ತಲದಲ್ಲಿ ಹೊರಟಿದ್ದರು. ಹೆಂಗಸರೆಂದ ಮೇಲೆ ಮಾತಿಗೆ ಬರಾ ಇಲ್ಲಾ. ಹೆಂತ ವಿಷಯವೂ ಅವರ ಬಾಯ್ಗೆ ಸಿಕ್ಕರೆ ಅದು ಇತಿಹಸವಾಗುತ್ತದೆ. ಹೆಚ್ಚು ಮಾತಾಡುವುದು ಹೆಂಗಸರ ಆದ್ಯ ಗುಣವೇ ಇರಬೇಕು. ಇದಕ್ಕೆ ಸಾಕ್ಷಿ ಅನ್ನುಹಾಗೆ ನಾಕು ಜನ ಅಲ್ಲಿ ಮಾತಿನಲ್ಲಿ ಮುಳಗಿದ್ದರು.
ನಮ್ಮುರಲ್ಲಿ ಹೆಣ್ಣು ಮಕ್ಕಳು ಬಹಿರ್ದಸೆ ಮಾಡುವ ಜಾಗ ಅಂದರೆ ಅದು ಪೂಜಾರ ಹುಂಚಿ ಗಿಡದ ಹತ್ತಿರ ಇರುವ ವನಾ ಬಯಲು, ಆ ಬಯಲಲ್ಲಿ ಜಾಲಿ ಮರಗಳು ಬೇಳದಿದ್ದವು. ಗಂಡಸರ ಸುಳಿದಾಟ ಇಲ್ಲಿ ಕಡಿಮೆ, ಗಂಡಸರು ಕೆರಿಕಡೆ ಹೋಗುತಿದ್ದರು. ಸಕರ್ಾರದಿಂದ ಮಂಜೂರಾದ ಪೈಕಾಣೆಗಳಲ್ಲಿ ಹೋಗಲು ಹೆಂಗಸರಿಗೆ ಏಕೋ ಮುಜುಗುರ, ಯಾರೂ ಹೋಗುತ್ತಿರಲಿಲ್ಲ. ಹೀಗಾಗಿ ಅಲ್ಲಿ ಜಾಲಿ ಕಂಟಿ ಬೆಳೆದು ಹಾಳಗಿ ಹೋಗಿದ್ದವು. ಕೆಲವರು ಸೌದೆಗಾಗಿ ಜಾಲಿ ಕಟ್ಟಿಗಿ ಕಡಿದು ಬದುಕು ದೂಡುತಿದ್ದರು.
ಅಂದು ಕತ್ತಲ ಹೊತ್ತಿನಲ್ಲಿ ನನ್ನ ತಂಗಿ ದ್ರುವಿನೂ ತನ್ನ ವಾರಿಗೆ ಗೆಳತಿಯರೊಂದಿಗೆ ತಂಬಗಿ ತುಂಬಿಕೊಂಡು ಹೋಗಿದ್ದಳು. ಶಾಲಾ ಕಾಲೇಜನಲ್ಲಿ ನಡಿದ ಸಿಹಿಕಹಿ ನೆನಪು, ಮನ್ನೆ ಮನ್ನೆ ಕರಿದಿಸಿದ ಹೊಸಾ ಬಟ್ಟೆಬರೆಯ ಸಂಗತಿ, ತಾವು ಮರಳು ಮಾಡಿ ತಲೆ ಕೆಡಿಸಿದ ಪಡ್ಡೆ ಹುಡುಗರ ಗ್ಯಾಂಗು, ಮುಂದಿನ ಬಾವಿ ಜೀವನದಲ್ಲಿ ಗಂಡನಾಗಿ ಬರುವ ಪ್ರಾಣಿ ಹೇಗಿರತ್ತಾನೋ ಅನ್ನುವ ಅಳಕು ಅಂದಿನ ಅವರ ಮಾತಿನ ಚಚರ್ಾ ವಸ್ತುಗಳು. ಅಂತಾ ಕತ್ತಲಲ್ಲೂ ಮಾತಾಡುತ್ತ ಮಾತಾಡುತ್ತ ಎಲ್ಲರೂ ಹುಂಚಿ ಮರದ ಹತ್ತಿರವೇ ಬಂದು ಕುಳಿತುಕೊಂಡಿದ್ದರು.
ಹುಂಚಿ ಮರವೆಂದರೆ ಎಲ್ಲರಿಗೂ ಭಯ,ಹೆದರಿಕೆ. ಆ ಮರದಲ್ಲಿ ದೆವ್ವಾ ಇದೆ ಎಂಬ ಗುಮಾನಿ ಸುದ್ದಿ ಊರ ಮಂದಿ ಬಾಯಿಗೆ ಸಿಕ್ಕು ಬೇರೆ ಬೇರೆ ತಿರುವು ಪಡದಿತ್ತು. ಇತ್ತಿಚೆಗಷ್ಟೆ ನೇನು ಹಾಕಿ ಕೊಂಡದ್ದ ಜಾನವ್ವ ದೆವ್ವಾಗಿ ಹುಂಚಿಗಿಡಾ ಸೇರ್ಯಾಳ ಅನ್ನು ಹೋಸಾ ಸುದ್ದಿ ಊರ ಮಂದಿ ಬಾಯಿ ತುಂಬಾ ನಲಿದಾಡುತಿತ್ತು.
ಗೊತ್ತಿದ್ದು ಮಾತಿನ ಗುಂಗಿನಲ್ಲಿ ವಾರಿಗೆ ಗೆಳತಿಯರೆಲ್ಲರೂ ಅದೆ ಹುಂಚಿ ಮರದ ಸನಿಹಕ್ಕೆ ಹೋಗಿದ್ದರು. ಹಗಲಿನಲ್ಲೇ ಯಾರ ಸೂಳಿವೂ ಇಲ್ಲದ ಆ ಜಾಗದಲ್ಲಿ ರಾತ್ರಿಯಂತೂ ಯಾರೂ ಆ ಕಡೆ ಮುಖಮಾಡಿ ಕೂಡಾ ನೋಡಿತ್ತಿರಲಿಲ್ಲ. ಹುಂಚಿ ಮರದ ಕೆಳಗೆ ನಿಧಿ ಇದೆ ಎಂಬ ಗುಮಾನಿ ಸುದ್ದಿಯೂ ಊರತುಂಬೆಲ್ಲ ಹರಿದಾಡುತಿತ್ತು. ಮನ್ನೆ ಸತ್ತ ಜಾನವ್ವನ ನೆನಪು ಒಮ್ಮೆಲೆ ನಮ್ಮ ದ್ರುವಿ ಗಮನಕ್ಕೆ ಬಂದು. ರಾತ್ರಿ ಹೊತ್ತು ಇಷ್ಟು ದೂರಾ ಬರಬಾರದಿತ್ತು ಅಂತ ಅಂದುಕೊಂಡಳು. ಎದೆಯಲ್ಲಿ ನಡುಕ ಹುಟ್ಟಿತು. ಧೈರ್ಯ ತಗೆದು ಕೊಂಡಳು. ಆ ಧೈರ್ಯ ಸಾಲದಕ್ಕೆ ಎಲ್ಲರಕಿಂತ ಬೆಗನೆ ಎದ್ದು ನಿಂತು ಬೇಗಾ ಬರ್ರೇ ನಂಗ್ಯಾಕೋ ಭಯಾ ಆಗ್ತಿದೆ ಗೆಳತಿಯರನ್ನು ಕೂಗುವಷ್ಟರಲ್ಲಿಯೇ ತಣ್ಣಗೆ ಗಾಳಿ ಬೀಸತೊಡಗಿತು, ಗೆಳತಿಯರು ಇವಳ ಮಾತಿನ ಕಡೆ ಲಕ್ಷ ವಹಿಸದೆ ಮಾತು ಮುಂದು ವರಸಿದ್ದರು. ನಿದಾನಕ್ಕೆ ಗೊನು ಹೊಳಸಿ ಹುಂಚಿ ಮರದ ಕಡೆ ನೊಡಿದಳು. ಹಂತ ಕತ್ತಲಲ್ಲೂ ಹುಂಚಿ ಮರಾ ಅವಳ ಕಣ್ಣಿಗೆ ಹಿಮಾಲಯ ಪರ್ವತದಷ್ಟು ಎತ್ತರವಾಗಿ ಕಂಡಿತು. ಆಗ ನಾನವ್ವನ ನೆನಪು ಎದೆ ತುಂಬಾ ತುಂಬಿ ಮೈ ನಡುಗಿತು, ಕಾಲು ಕಂಪಿಸಿದವು, ತುಟಿ ವನಗಿದವು,ಗೆಳತಿಯರು ಸಕಲಕಾರ್ಯ ಮುಗಿದ ಮೇಲೆ ಒಬ್ಬೊರೇ ಮೇಲೆದ್ದರು. ಎಲ್ಲ ಮಾತಿನ ಮಲ್ಲೆಯರೂ ಮನೆಗೆ ಹಿಂದಿರುಗುವ ಹೊತ್ತಲ್ಲಿಯೇ ಅವರ ಬೆನ್ನ ಹಿಂದೆ ಯಾರೋ ಜೋರಾಗಿ ಕಿರಿಚಿದ ದನಿ ಅವರೆಲ್ಲರ ಕಿವಿ ಹೊಕ್ಕಿತು. ಎಲ್ಲರೆದೆಯಲ್ಲಿ ನಡುಕ ಹುಟ್ಟಿತು, ಆ ದನಿ ಹುಂಚಿ ಗಿಡದಾಗಿಂದ ಕೇಳಿ ಬಂದಾಗಾತು ಎಂದು ಅರಿತವಳು ನನ್ನ ತಂಗಿ ದ್ರುವಿ. ಮನ್ನೆ ಸತ್ತ ಜಾನವ್ವನ ಕಿರಚಿರಬೇಕು, ಆಕೀನ ಇದ ಮರದ ಹಂತ್ಯಾಕ ಮಣ್ಣ ಮಾಡ್ಯಾರ ಅಂತ ಊರ ಜನಾ ಮಾತಾಡಿದ ಆ ಮಾತು, ಅಕೀನ ಸಂಸ್ಕಾರ ಮಾಡುವಾಗ ಒಂದ ಕಾಗಿನೂ ಬರಲಿಲ್ಲ ಎಂಬ ಸುದ್ದಿ, ಆಸೆ ಇಟ್ಟಾಳ ಅಂದ್ರ ಅಕೀ ದೆವ್ವ ಆಗುದ ಕಚಿತಾನೇ ಎಂದು ಹೇಳಿದ ನಮ್ಮಜ್ಜಿಯ ಮಾತು, ಎಲ್ಲವೂ ಮನನ ಮಾಡಿಕೊಂಡಾಗ ದ್ರುವಿ ಹೊಯ್ಕೊಂತ ಓಡಿ ಮನಿಗೆ ಬರುವಷ್ಟರಲ್ಲಿ ಅವಳಿಗೆ ಚಳಿಜ್ವರ ಬಂದಿತ್ತು.

ನಾವು ಚಿಕ್ಕವರಿರುವಾಗ ಎಲ್ಲ ಮಕ್ಕಳು ಹಟಾ ಮಾಡುಮಂತೆ ನಾವೂ ತುಂಬಾ ಹಟಾ ಮಾಡುತಿದ್ದೆವು. ನಮ್ಮ ಹಟಮಾರಿತನಕ್ಕೆ ಬೆಸತ್ತ ನಮ್ಮ ಅಜ್ಜಿ ಕತ್ತಲ ಕಡೆ ಕೈ ಮಾಡಿ ಅಗೋ ಅಲ್ಲಿ ನೋಡಲ್ಲಿ ಕತ್ತಲದಾಗ ದೊಡ್ಡ ದೆವ್ವ ಕುಂತೈತಿ, ನೀ ಸುಮ್ನ ಇರದಿದ್ರ, ಅದು ಬಂದ ಹೊತಗೊಂದ ಹೊಕ್ಕೈತಿ ಅಂತ ಅಂದಾಗ ನಾವೆಲ್ಲ ಹೆದರಿ ಅವಳ ತೋಳತೆಕ್ಕೆಯಲ್ಲಿ ಅಡಗಿ ಕುರತಿದ್ದೆವು. ನಾವು ಸಮಾಧನಾ ಆದದ್ದು ಅಜ್ಜಿಗೆ ಕಚಿತವಾದಮೇಲನೇ ದೆವ್ವ ಹೋತು ಅಂತ ಅನ್ನುತಿದ್ದಳು. ಅವಳ ಗುಬ್ಬಿ ಗಾತ್ರದ, ಕುಗ್ಗಿದ, ದೇಹದಿಂದ ನಾವು ಚೆಂಗನೇ ಜಿಗಿಯುತ್ತ, ಮತ್ತೆ ಅದೆ ತುಂಟತನದಲ್ಲಿ ತೊಡಗುತಿದ್ದೆವು. ನಮ್ಮ ತುಂಟಾಟ , ಹಟಮಾರಿತನ, ಎಲ್ಲವನ್ನು ಸಹಿಸಿಕೊಂಡು ಬೆಸರವಾದಗಷ್ಟೇ ದೆವ್ವಿನ ಉಪಾಯ ಹುಡುಕಿ ನಮ್ಮನ್ನ ಹೆದರಿಸಿ ಸುಮ್ಮನಿರಿಸುತ್ತಿದ್ದಳು ನಮ್ಮಜ್ಜಿ.
ದೆವ್ವನ್ನೆ ಕೆಂದ್ರಬಿಂದುವಾಗಿಟ್ಟುಕೊಂಡು ನಮ್ಮ ತುಂಟತನವನ್ನು ಹತ್ತಿಕ್ಕಿದ ಅನೇಕ ಸಂಗತಿಗಳು ಈಗ ನಮ್ಮ ನೆನಪಿಗೆ ಬರುತ್ತವೆ.
ಆದ್ರೆ ನನ್ನ ತಂಗಿ ದ್ರುವಿ ತುಂಬಾ ಸೂಕ್ಷ್ಮ ಸಭಾವದ ಹುಡುಗಿ, ಓದು ಬರಹದಲ್ಲಿ ನನಗಿಂತಲೂ ಒಂದು ಹೆಜ್ಜೆ ಮುಂದೆ, ಹಟಮಾರಿತನದಲ್ಲೂ ಅಷ್ಟೆ, ಬೇಕೆಂದದ್ದು ಸಿಗೂವ ತನಕ ಅವಳ ಉಪವಾಸ ಸತ್ಯಾಗ್ರಹ.., ಮನೆಯಲ್ಲಿ ಅಜ್ಜಿಯ ಮುದ್ದಿನ ಮೊಮ್ಮಗಳು, ಅಪ್ಪನಿಗೆ ಮುದ್ದಿನ ಮಗಳು, ಅವ್ವನಿಗಂತು ಅವಳೊಂದು ತಲೆ ನೋವು. ನನಗೆ ಅವಳು ತಲೆ ಹರಟೆ, ದೆವ್ವ ಎಂಬ ಎರಡುವರೆ ಅಕ್ಷರ ಕೇಳಿದರೆ ನಿಂತಲ್ಲೆ ನಡಗಿ, ಉಚ್ಚಿ ಹೋದುಬಿಡುವಳು.
ಗೆಳತಿಯರೊಂದಿಗೆ ಹುಂಚಿ ಮರದ ಸನಿಹಕ್ಕೆ ಹೋದಾಗಿನಿಂದಲೂ ಒಂದುವಾರ ಚಳಿ ಜ್ವರಾ ಅವಳನ್ನು ಬಿಟ್ಟು ತೊಲಗಲಿಲ್ಲ. ಅಂದಿನಿಂದ ದ್ರುವಿಯ ನಡಾವಳಿ ಬದಲಾಗಿವೆ ಅನಿಸಿತು. ತಾನೊಬ್ಬಳೆ ಮಾತಾಡಿತಿದ್ದಳು, ಅವ್ವನನ್ನು ಕಾಡಿಸುತ್ತಿರಲಿಲ್ಲ,ಅಜ್ಜಿಯ ಸನಿಹಕ್ಕೆ ಸುಳಿಯುತ್ತಿರಲಿಲ್ಲ, ಅಪ್ಪನ ಬುಜಕ್ಕೆ ತಲೆಕೊಟ್ಟ ಮಾತು ಹೇಳುವುದು ನಿಲ್ಲಿಸಿದ್ದಳು, ನನ್ನ ಜೋತೆ ತಲೆಹರಟೆಗೆ ಪುಲ್ಲಸ್ಟಾಪ್ ಹಾಕಿಬಿಟ್ಟಿದ್ದಳು. ತಾನೊಬ್ಬಳೆ ಕುಡುವುದು, ತಾನೊಬ್ಬಳೆ ಮಾತಡುವುದು, ಪುಸ್ತಕ ಕೈಯಲ್ಲಿ ಹಿಡಿದು ಸುಮ್ಮನೆ ಪುಟ ತಿರುವಿ ಹಾಕುವುದು ಮಾಡುವುದು ಕಂಡು ನಮ್ಮಜ್ಜಿ ಸೂಕ್ಷ್ಮವಾಗಿ ಅವಳನ್ನು ಅವಲೋಕಿಸಿ ‘ಇಕೀಗೆ ದೆವ್ವ ಬಡಕೊಂದೈತಿ’ ದೌಡ ಸ್ಯಾನ್ಯಾರ ಹಂತೆಕ ಕರಕೊಂಡ ಹೋಗಿ ಒಂದ ತೈತಾ ಕಟ್ಟಸಕೊಂಡ ಬರಬೇಕು ಅಂತ ಶಕುನ ನುಡಿದಳು.
ಅಜ್ಜಿ ಅಂದ ಮಾತು ಅಪ್ಪನಲ್ಲಿ ಆತಂಕ ಮುಡಿಸಿತು,ಅವ್ವನಲ್ಲಿ ಭಯ ಹುಟ್ಟಿತು,ನನಗೆ ಅದೊಂದು ಕುತುಹಲ.
ಬೋಳಿ ಸಾವುದ ಸತ್ತಳ, ನೆಗದ ಬಿದ್ದ ಹೋಗ್ಯಾಳ, ದೆವ್ವ ಆಗಿ ಲೌಡಿ ನನ್ನ ಮಗಳ್ನ ನುಂಗ ಬೇಕಂತ ಮಾಡ್ಯಾಳ, ಇವಳ ಕಣ್ಣಿಗೆ ನನ್ ಮಗಳಷ್ಟ ಕಂಡಳಾ, ಬ್ಯಾರೆ ಯಾರೂ ಕಣಲಿಲ್ಲಾ, ಬಿದ್ದಾಡಿಗೆ ಅಂತ ಅವ್ವ ಹೊಟ್ಟಿ ಉರದು ಸತ್ತು ಹೋದ ಜಾನವ್ವನನ್ನು ಬಾಯಿಗ ಬಂದಾಂಗ ಬೈದಳು. ಹಂಗೆಲ್ಲಾ ಬೈಯ್ ಬ್ಯಾಡ ಇಕಿ ನಮ್ಮ ದ್ರುವಿ ದೇಹದಾಗ ಇರ್ತಾಳ ನೀ ಅಂದದ್ದ ಎಲ್ಲಾ ಕೇಳಸ್ಕೊಂಡ ನನ್ನ ಮೊಮ್ಮಗಳ ಜೀವಾ ತಿಂತಾಳ. ನೀ ಸುಮ್ಕ ಇರ ಅಂತ ನಮ್ಮ ಅಜ್ಜಿ ನಮ್ಮ ಅವ್ವಗ ತಾಕೀತ ಮಾಡುತಿದ್ದಳು. ಇವರು ಮಾತಾಡಿದ ಮಾತು ಕೇಳಿಸಿಕೊಂಡ ದ್ರುವಿ ಒಂದು ಕಟ್ಟಿಗೆ ಚುರು ಕೈಯಲ್ಲಿ ಹಿಡಿದುಕೊಂಡು ನೆಲದ ಮೇಲೆ ಗೆರೆ ಹಾಕುತಿದ್ದಳು. ಒಬ್ಬಳೆ ಜೋರಾಗಿ ಕಿರುಚಿ ಸುಮ್ಮನಿರುತಿದ್ದಳು. ಅದನ್ನು ನೋಡಿದ ನನ್ನ ಅಪ್ಪನ ಕಣ್ಣಲ್ಲಿ ಜಿಟಿ ಜಿಟಿ ಕಣ್ಣಿರು. ನನಗೆ ಮತ್ತಷ್ಟು ಕುತೂಹಲ.
ನಮ್ಮ ತಂಗಿಗೆ ದೆವ್ವ ಬಡಕೊಂಡ ಸುದ್ದಿ ಊರತುಂಬೆಲ್ಲ ಹಬ್ಬಿ ಮತ್ತಷ್ಟ ಗಾಬರಿ ಹುಟ್ಟಿಸಿತು. ಜನರು ತಲೆಗೊಬ್ಬರು ಮಾತಾಡಿದರು. ಕೆಲವರು ಸುದ್ದಿ ತಿಳದ ನಮ್ಮ ಮನಿತನಾ ಬಂದು ನಿಮ್ಮ ಮಗಳಿಗೆ ಹಿಂಗ ಆಗಬಾರದಿತ್ತ ಅಂತ ನಮ್ಮ ಅವ್ವಗ ಸಾಂತ್ವನ ಹೇಳಿ ಹೊಕ್ಕಿದ್ದರು. ಕೆಲವರಂತು ಭಯಾ ಹುಟ್ಟುವಂಗ ಮಾತಾಡ್ತಿದ್ದರು. ಜಾನವ್ವ ಹಂಗ ಸತ್ತಿಲ್ಲ ಸಾವುವಾಗ ನರಳಿ ನರಳಿ ಸತ್ತಾಳ, ಅದರಾಗ ಅತ್ತಿ ಕಾಟ, ಗಂಡನ ನಿಗ್ಗರಾ, ಕಿತ್ತ ತಿನ್ನು ಬಡತನಾ, ಹಿಂತದರ ಮದ್ಯಾ ಜೀವ ಸಾಕಾಗಿ ಉರ್ಲ ಹಕ್ಕೊಂಡಾಳ, ಅವ್ರ ಅತ್ತೀನ, ಗಂಡನ ಬಲಿ ತಗೊಳ್ಳಾರ್ದ ಅಕೀ ಹೋಗುದ ನನಗ ಯಾಕೋ ಡೌಟ ಅಂತ ಒಬ್ಬಾಕಿ ಅಂತು ನಮ್ಮ ಮನ್ಯಾನ ಮಂದಿಗೆ ನಡಗ ಹುಟ್ಟುವಂಗ ಭಾಷಣಾ ಬಿಗದಳು. ಅವಳ ಮಾತಿಗೆ ನಾನೂ ಕೂಡಾ ಸ್ವಲ್ಪ ಹೆದರಿದ್ದೆ.
ಊರಂದ ಮ್ಯಾಲ ನಾಕಾರ ಜನಾ ನಾಕಾರ ಮಾತ ಹೇಳವರ ನೀನೇನ ತಲಿ ಕೆಡಸ್ಕೊಬ್ಯಾಡ, ದ್ರುವಿನ ಲಗೂನ ಸ್ಯಾನ್ಯಾರ ಕಡೆ ಕರಕೊಂಡ ಹೋಗಿ ಅಕೀ ವಳಗ ಇರೋ ಗಾಳಿ ಹೊರಗ ಅಟ್ಟರಿ ಅಂತ ನಮ್ಮ ಅಜ್ಜಿ ಅಪ್ಪನಿಗೆ ಉಪಾಯ ಹೇಳ್ತಿದ್ದಳು. ನಾಳೆ ನಾಡದ ಹೋದರಾತು ಅಂತ ಅಪ್ಪ ಹಿಂದಕ್ಕ ಹಾಕುದ ಗೊತ್ತಾಗಿ ಅಜ್ಜಿ ಲೋ ಮುಟ್ಟಾಳಾ ಎರಡ ದಿಂದಾಗ ಅಮವಾಸಿ ಐತಿ. ಅಮವಾಸಿ ಬಂದ್ರ ಸಾಕ ದೆವ್ವಿಗೆ ಚಲ್ಲಾಟ.ನನ್ನ ಮೊಮ್ಮಗಳಿಗೆ ಪ್ರಾಣ ಸಂಕಟ ಅಂತ ತಿಳಿಸಿ ಹೇಳಿದಾಗ ಅಪ್ಪ ಅನಿವಾರ್ಯಿಲ್ಲದ ಅಜ್ಜಿ ಮಾತಿಗೆ ‘ಹೂಂ’ಗೂಡಿದ.
ಅಪ್ಪ ಯಾರಿಗೋ ಒಬ್ಬರಿಗೆ ಪೋನ ಮಾಡಿ ಏನೇನೋ ಮಾತಾಡಿದ. ಅವರು ನಾಳೆ ಬರುದಕ್ಕೆ ಏನು ಅಬ್ಯಂತರಿಲ್ಲ ಬನ್ನಿ ಎಂದಾಗ ಅಪ್ಪ ಖುಷಿಯಾದ, ಆ ಖುಷಿ ಅಪ್ಪನ ಮುಖದಲ್ಲಿ ಬಾಳ ಹೋತ್ತು ಉಳಿಲಿಲ್ಲ. ಒಂದ ಕಾಲಿ ಪೇಪರ ಮ್ಯಾಲ ಡಾ. ವಿನೋದ ಊರು ಕಾಡಕೊಪ್ಪಿ ಪೋನ್ ನಂಬರ್ 9845004 ಅಂತ ಬರೆದುಕೊಂಡು ಆ ಚಿಟಿಯನ್ನು ಮಡಚಿ ಕಿಸೆಯೊಳಗೆ ತುರಕಿಕೊಂಡ. ಮತ್ತೆನೆನೋ ಮಾತಾಡಿ ಪೋನಿಟ್ಟ. ಪೋನ್ ಇಟ್ಟ ಮೇಲೆ ಅಪ್ಪನ ಮುಕ ಅರಳಿಕೊಂಡಿತ್ತು. ನಾಳೆನೇ ಸ್ಯಾನ್ಯಾರ ಕಡೆ ಹೋಗುದ ಪಿಕ್ಷ ಆತು.
ಅದೇ ಹೊತ್ತಿಗೆ ದ್ರುವಿ ರಣಗುದಲ ಹರವಿಕೊಂಡು ಕೆಂಗಣ್ಣಿನಿಂದ ಅಪ್ಪನನ್ನು ಕಿತ್ತು ತಿನ್ನುವ ಹಾಗೆ ನೋಡುತಿದ್ದಳು. ಹಲ್ಲು ಕಿಸಿದು ನಗುತಿದ್ದಳು, ನೆಲದ ಮೇಲೆ ಉಳ್ಳಾಡುತಿದ್ದಳು. ಜೋರಾಗಿ ಆಕಾಸದಾಚೆ, ಪಾತಾಳದ ಕೆಳಗೂ ಕೇಳುವ ಹಾಗೆ ಚಿರುತಿದ್ದಳು. ಮರುಕ್ಷನ ಮೌನವಾಗಿ ನಿದ್ದೆ ಹೋದವರ ಹಾಗೆ ಮಲಗುತಿದ್ದಳು, ಅದನ್ನು ನೋಡಿ ಅವ್ವ ಕಣ್ಣೀರು ಸುರಿಸಿತಿದ್ದಳು, ಗುಡಿಯಲ್ಲಿರುವ ಹನಮಪ್ಪನ ನೆನೆನೆನೆದು ಏನೆನೋ ಬೇೆಡಿಕೊಳ್ಳುತಿದ್ದಳು. ದ್ರುವಿ ಇಡಿರಾತ್ರಿ ಕಿರಚಿದಳು, ಕೂಗಿದಳು, ಅತ್ತಳು. ಅವಳೊಂದಿಗೆ ನಾವೂ ಎಚ್ಚರಿದ್ದೆವು. ಅಕ್ಕ ಪಕ್ಕದ ಮನೆಯವರೂ ಆಗಾಗ ಬಂದು ದ್ರುವಿ ಮಾಡುವ ಆಟವನ್ನು ಪುಗಸಟ್ಟೆ ನೋಡಿ ಮಜಾ ತಗಿದುಕೊಳ್ಳುತಿದ್ದರು.
ಅಪ್ಪ ಒಂದು ಬಾಡಗಿ ಕಾರು ಮಾಡಿ ಕೊಂಡು ಬಂದ. ಅವ್ವ ದ್ರುವಿಯ ಬಟ್ಟೆ ಬದಲಿಸಿ, ಬೊಗಸೆಯಲ್ಲಿ ತಣ್ಣೀರು ಹಾಕಿಕೊಂಡು ದ್ರುವಿಯ ಮುಖದ ಮೇಲೆ ಚಿಮುಕಿಸಿ ಎಚ್ಚರ ಗೊಳಿಸುತ್ತಿದ್ದಳು. ರಾತ್ರಿಯಲ್ಲ ಕಿರುಚಾಡಿ, ಚಿರಾಡಿ, ಅತ್ತು ಅತ್ತು ಸುಸ್ತಾದ ದ್ರುವಿಗೆ ಇನ್ನು ನಿದ್ರೆಯ ಮಂಪರು ಹೋಗಿರಲಿಲ್ಲ. ನಿದಾನಕ್ಕೆ ನೆಡಿಸಿಕೊಂಡು ಹೋಗುವಾಗ ನನ್ನ ತಂಗಿಯ ತುಂಟಾಟ ನೆನಪಾಗಿ ನನ್ನ ಕಣ್ಣುಗಳು ವದ್ದೆಯಾದವು. ಗಂಟಲು ಬಿಗಿದು ಬಾರವಾಯಿತು. ನನಗೆ ಗೊತ್ತಿಲ್ಲದೆ ಎರಡು ಹನಿ ಕಣ್ಣೀರು ಭೂಮಿಯನ್ನು ಅಪ್ಪಿಕೊಂಡಿದ್ದವು.
ಕಾರು ‘ಬರ್’ ಎಂದು ಶಬ್ಧ ಮಾಡುತ್ತ ಹೊರಟಿತು. ಅದು ಹೋಗುವುದನ್ನು ಸುತ್ತಮುತ್ತಲಿನ ಜನರು ಕಳ್ಳಗಣ್ಣಿನಿಂದ ನೋಡುತಿದ್ದರು, ಚಿಕ್ಕ ಮಕ್ಕಳು ಹೆದರಿ ಮನೆ ಸೇರಿದ್ದರು, ದ್ರುವಿಯ ವಾರಿಗೆ ಗೆಳತಿಯರು ಅವರ ಮನೆಯ ಕಿಡಕಿಯಲ್ಲಿ ಮೋತಿ ನೆಟ್ಟು ಇನುಕಿ ನೋಡುತಿದ್ದರು. ನಮ್ಮ ಅಜ್ಜಿ ಕಾರು ಮರೆಯಾಗುವವರೆಗೂ ಹನೆಯ ಮೇಲೆ ಕೈ ಇಟ್ಟುಕೊಂಡು ನೋಡುತಿದ್ದಳು. ಕ್ಷನಾರ್ಧದಲ್ಲಿಯೆ ಕಾರು ಮರೆಯಾಯಿತು.
ಊರಮಂದಿ ಗುಜುಗುಜು ಮಾತಾಡಿದರು. ಸತ್ತ ಜಾನವ್ವನ ನೆನಸಿಕೊಂಡು ಕೆಲವರು ಭಯಬಿದ್ದರು. ಅಕೀ ಸುದ್ದಿ ಮಾತಾಡಿದ್ರ ನಮಗೂ ಬಡಕೊಂಡಗಿಡಕೊಂಡಾಳಂತ ಹೆದರಿ ಮನಿಸೆರಿದರು. ನಮ್ಮಜ್ಜಿ ತನ್ನ ಎಲೆ ಚೀಲಲ್ಲಿ ಕೈ ಹಾಕಿ ಒಂದು ಅಂಬಾಡಿ ಎಲೆಯಲ್ಲಿ ಒಂದು ಹೊಳು ಮಾಡಿ, ಅದಕ್ಕೆ ಮೇಲೆ ಸುಣ್ಣ ಸವರಿ ನಾಕಾರು ಅಡಕೆ ಚೂರು ಹಾಕಿ, ನಿದಾನವಾಗಿ ತಂಬಾಕು ಅಂಗೈಲ್ಲಿ ಹಾಕಿ ದೂಸು, ಕಸಾ ಕಡ್ಡಿ ತಗೆದು ಬಾಯಿಗೆ ಸುರಿದುಕೊಂಡು ತನ್ನ ಮುದಿ ತೆಲೆಯಲ್ಲಿ ಯಾವುದೋ ಹೊಸಾಲೆಕ್ಕಾಚಾರಾ ನೆಡಸಿದ್ದಳು.
ಕಾಡುಗುಪ್ಪಿಗೆ ಹೋದ ಕಾರು ಹೋದಷ್ಟೆ ವೇಗದಲ್ಲಿ ಮರಳಿ ಬಂದಿತ್ತು. ಅಪ್ಪ ಅವ್ವನ ಮೊಕದಲ್ಲಿ ನಗುವಿನ ಗುರುತು ಕಾಣುತಿದ್ದವು. ದ್ರುವಿ ಇದ್ದ ಸ್ಥಿತಿಯಲ್ಲಿಯೇ ಇದ್ದಳು. ಹೋದ ಕೆಲಸಾ ಏನಾತು ಅಂತ ಅಜ್ಜಿ ಕೇಳಿದಾಗ ಅಪ್ಪ ಪ್ರಾಥಮಿಕ ಶಾಲೆ ಮೆಷ್ಟ್ರಂತೆ ಅಜ್ಜಿಗೆ ಹೇಳುತಿದ್ದ.
ದ್ರುವಿ ಹೆದರಿಕೊಂಡಾಳಂತ ಅದಕ ಗೂಳಗಿ ಔಷಧ ಕೊಟ್ಟಾರ . ದೆವ್ವಾ ಬೂತಾ ಯಾವುದೂ ಇಲ್ಲ ಅಕೀಗೆ ಮನಸಿನ ಮ್ಯಾಲ ಬಾಳ ಒತ್ತಡಾ ಆಗಿ ಹಿಂಗ ಆಗೆತಿ ತಿಂಗಳ ಒಪ್ಪತ್ನ್ಯಾಗ ಆರಾಮ ಅಕ್ಕಾಳ ಅಂತ ಹೆಳಿದ್ರು. ಮಗನ ವಿವರಣೆ ಕೇಳುತಿದ್ದಂತೆ . ಅಜ್ಜಿಯ ಕೋಪ ನೆತ್ತಿಗೇರಿರಬೇಕು. ನೀ ಹೆಂತಾ ಸ್ಯಾನ್ಯಾ ಲೇ ಮೈಯ್ಯಾಗೀನ ದೆವ್ವಾ ಬಿಡಸೂದ ಬಿಟ್ಟ ಡಾಕ್ಟರ ಕಡೆ ತೋರಸಾಕ ಹೋಗಿಯನ, ಡಾಕ್ಟರ ಕಡೆ ಹೊಕ್ಕಿನಂದಿದ್ರ ಮೊದಲ ಕಳಸ್ತಿದ್ದಿಲ್ಲ. ಅಕೀಗ ದೆವ್ವ ಬಡಕೊಂಡೈತಿ, ದೆವ್ವ ಬಡಕೊಂಡ್ರ ನಗುದು,ಚಿರುದು,ಕಿರಚುದು ಅಳುದು ಮಾಡತಾರ. ನಾನು ಸನ್ಯಾಕಿದ್ದಾಗ ನನಗೂ ಒಂದ ದೆವ್ವ ಬಡಕೊಂದಿತ್ತಂತ ನಮ್ಮ ಅವ್ವ ಹೇಳಿದ್ದಳು. ದೆವ್ವಾ ಬಿಡಸುವ ಕ್ಯಾತರ ಬಸ್ಯಾ ನಮ್ಮ ಮನಿಮಟಾ ಬಂದ ನನ್ನ ಮೈಯಾಗ ಅಡಗಿ ಕುಂತಿದ್ದ ದೆವ್ವಾ ಬೆವಿನ ಜಬರ ತಗೊಂಡ ಸೆವ್ ಸೆವ್ ಬಡದ, ನೆತ್ತಿಮ್ಯಾಲಿನ ಕೂದಲಾ ಹಿಡಿದು, ಕಣ್ಣಾಗ ನಿಂಬಿ ರಸಾ ಹಿಂಡಿದಾಗ ಸಂಕಟಾ ತಾಳಲಾರದ ದೆವ್ವ ಅಂಜಿ ಹೊಕ್ಕಿನಿ ಬಿಡ್ರೋ ಯಪ್ಪಾ ಅಂತಿತ್ತಂತ. ಹೋಗುವಾಗ ದೆವ್ವಾ ಕಬರಗೆಟ್ಟ ಇನ್ನೊಮ್ಮೆ ಹೊಳ್ಳಿ ಬರುದಿಲ್ಲ ಅಂತ ಹೋಕೋತ ಓಡಿ ಹೋತಂತ.
ಹೆಗ್ಗನಾ ವಳಗ ಇಟಗೊಂದ ಗುದ್ದ ಬಡಿಬ್ಯಾಡ. ನೀವು ಸಾಲಿ ಕಲತ ಜನಾ ನಿಮಗ ನಮ್ಮಂತಾವ್ರ ಏನಾರ ಹೇಳಿದ್ರ ಹುಡಗಾಟ ಅಂತ ತಿಳಿತೀರಿ. ಮೂಡನಂಬಕಿ, ಮಾನಸಿಕ ಕಾಯಿಲೆ ಅಂತ ಹೇಳಿ ನಮ್ಮ ಬಾಯ್ ಗಪ್ಪ ಮಾಡಾಕ ನೋಡ್ತೀರಿ, ನೆಗಡಿ ಕೆಮ್ಮಾ , ಜ್ವರಾ ಬಂದ್ರ ಅಷ್ಟ ಡಾಕ್ಟರ್ ಕಡೆ ಹೋಗ ಬೇಕ ದೆವ್ವಾ ಗಾಳಿ ಆದ್ರ ಡಾಕ್ಟರ ಕಡೆ ಹೊಕ್ಕಾರನ ನೀವ ಓದಿದ ಸಾಲಿಗೆ ಬೆಂಕಿ ಹಚ್ಚಲಿ ಅಂತ ನಮ್ಮ ಅಜ್ಜಿ ನಮ್ಮಪ್ಪನ ತರಾಟೆಗೆ ತಗೊಂಡಳು. ಅಪ್ಪನಿಗೆ ಇದು ಉಬಯ ಸಂಕಟವಾಯಿತು. ಏನು ಮಾಡಬೆಕು ಎಂಬುದು ತಿಳಿಲಿಲ್ಲ. ವೈದ್ಯರ ಮಾತು ನಂಬ ಬೇಕೋ, ನಮ್ಮ ಅಜ್ಜಿ ಮಾತ ಕೇಳಬೆಕೋ ತಿಳಿಯದೆ ಮೂಕನಾಗಿ ಕುಳಿತ.
ನಮ್ಮ ಅವ್ವನ ತಮ್ಮ ಮಾದೇವ ಅಚಾನಕ್ಕ ನಮ್ಮೂರಿಗೆ ಬಂದಿದ್ದ. ಎತ್ತರವಾದ ಆಳು ,ಎತ್ತರಕ್ಕೆ ತಕ್ಕ ಹಾಗೆ ಮೈಕಟ್ಟು, ಬಣ್ಣ ತುಸು ಕಪ್ಪಗಿದ್ದರೂ ನೋಡಲು ಚಲುವ. ಮೂಖದ ಮೇಲಿನ ಗೇನೂದ್ದ ಮೀಸೆ ನೋಡುಗರಿಗೆ ಭಯ ಹುಟ್ಟಿಸುತಿದ್ದವು. ನಮ್ಮ ಮನೆಯಲ್ಲಿ ನಡೆದ ದ್ರುವಿಯ ಸಂಗತಿಯನ್ನು ನಮ್ಮ ಅಜ್ಜಿ ಎಲೆ ಅಡಿಕೆ ತಿನ್ನುತ್ತ ಆಗಾಗ ಪಿಚಕ್ ಪಿಚಕ್ ಉಗಳುತ್ತಾ ಎಳೆಎಳೆಯಾಗಿ ವಿವರಿಸಿ ಮಾದೇವನಿಗೆ ಹೇಳಿದಳು. ಅವಳ ಮಾತು ಕೇಳುತ್ತ ತುಸು ಆಲೋಚಿಸುತ್ತ ಹೂಂ ಗುಡುತಿದ್ದ. ಅಜ್ಜಿ ಮಾತು ಮುಗಿಸುವಷ್ಟರಲ್ಲಿಯೇ ಮಾದೇವನ ತಲೆಯಲ್ಲಿ ಮಂತ್ರದ ಸಿದ್ದಪ್ಪನ ಹೆಸರು ಪದೆ ಪದೆ ಬಂದು ಹೋಯಿತು. ಹಿಂತಾ ವಿಷ್ಯಾದಾಗ ಇಂವ ಎತ್ತಿದ ಕೈ.. ಅಂತ ತಕರ್ಾ ಮಾಡಿಕೊಂಡ. ದೆವ್ವಾ, ಗಾಳಿ ಬೆಸಾಕ ನಂಬರ ವನ್ ಅದಾನ ಅಂತ ತಮ್ಮೂರಲ್ಲಿ ಮಾತಾಡಿದ ಮಂದಿ ಮಾತು ಈಗ ಉಪಯೋಗಕ್ಕ ಬಂತು ಅಂದುಕೊಂಡ.
ಹಿಂತಾ ಕೆಲಸಕ್ಕ ಹಿಂದೇಟ ಹಾಕ ಬಾರ್ದು, ಅಜ್ಜಿ ಹೇಳುದ ಕರೆ ಐತಿ. ಅದರಾಗ ಹೆಣ್ಣ ದೆವ್ವ ಗಂಟ ಬಿದ್ದರ ಬಾಳ ಕಷ್ಟ ಅಂತ ಮಾದೇವ ಮತ್ತೊಂದ ಹೊಸಾ ಗುಳಗಿ ಅಪ್ಪನ ಮುಂದ ವಗದ. ಅಪ್ಪನಿಗೆ ತನ್ನ ಗೆಳೆಯಾ ವಿನೋದ ಹೇಳಿದ್ದು ಮತ್ತೆ ಅರಿವಿಗೆ ಬಂತು. ಅವಳು ಹೆದರಿದ್ದಾಳೆ, ಹೀಗಾಗಿ ಮಾನಸಿಕವಾಗಿ ಅಸ್ಥವ್ಯಸ್ಥ ಆಗ್ಯಾಳ,ತಿಂಗಳ ಒಪ್ಪತ್ತದಾಗ ಆರಾಮ ಅಕ್ಕಾಳ. ನೀ ಹಳಹಳಿ ಹಚಕೊಬ್ಯಾಡ, ಮನಸಿನ ಮ್ಯಾಲ ಘಾಡವಾದ ಯಾವುದಾದರೂ ಪ್ರಭಾವ ಬಿದ್ರ ಹುಚ್ಚರ ತರಾ ವರ್ತನೆ ಮಾಡತಾರ, ದಿನಾ ಕಳಿದಂಗ ಮನಸಿನ್ಯಾಗಿರೋ ಜಿಡ್ಡು ಬಿಟ್ಟಾಂಗ ಸುಧಾರಣೆ ಅಕ್ಕರ. ದೆವ್ವಾ ಭೂತಾ ಅಂತಾ ಹಳೆಮಂದಿ ಹೇಳ್ತಿರ್ತಾರ ಅದಕೆಲ್ಲ ಕಿವಿ ಗೊಡಬಾರ್ದು ಅಂದ ಮಾತು ಅಪ್ಪನ ತಲೆಯಲ್ಲಿ ಮತ್ತೊಮ್ಮೆ ಹರದಾಡಿತು. ಆದ್ರ ದ್ರುವಿ ಮಾಡುವ ಗಲಾಟಿ, ಚಿರಾಟ, ಹುಚ್ಚಾಟ ನೆನದು ಅಪ್ಪ ಅಜ್ಜಿಯ ಮಾತಿನಲ್ಲೂ ಒಂದು ಸತ್ಯ ಇರಬಹುದು ಎಂದು ವಿಚಾರಿಸಿ. ತನ್ನ ಗೆಳೆಯಾ ಡಾ. ವಿನೋದನ ಹೇಳಿಕೆಯನ್ನು ಆಗಷ್ಟೆ ಕಡೆಗನಿಸಿದ. ಕೊನೆಗೆ ಮಂತ್ರದ ಸಿದ್ದಪ್ಪನ ಹತ್ತಿರ ಹೋಗಲು ಒಪ್ಪಿಕೊಂಡ.
ಮಾದೇವನ ಹಿರೆತನದಲ್ಲಿ ನಾವೆಲ್ಲರೂ ಮತ್ತೆ ಬಾಡಗಿ ಕಾರು ಮಾಡಿಕೊಂಡು ಮಂತ್ರದ ಸಿದ್ದಪ್ಪ ಇರುವ ಐನಳ್ಳಿಗೆ ಹೊರಟೆವು. ನನಗೆ ಮಂತ್ರದ ಸಿದ್ದಪ್ಪನ ನೋಡುವ ಕುತುಹಲ, ಅವ್ವ ಯಾಕೋ ಮಂಕಾಗಿದ್ದಳು, ಅಪ್ಪ ಕಾರಿನ ಕಿಡಕಿ ಗಾಜು ಕೆಳಗಿಳಿಸಿ ನೋಟವೆಲ್ಲ ಹೊರಗೆ ಹರಿಬಿಟ್ಟಿದ್ದ. ಅವ್ವನ ತೊಡೆಯ ಮೇಲೆ ಗುಬ್ಬಿ ಹಾಗೆ ಮುದಡಿಕೊಂಡು ದ್ರುವಿ ಮಲಗಿದ್ದಳು. ಕಾರು ನಡೆಸುವ ಡ್ರೈವರ್ ಬಾಯಿತುಂಬಾ ಗುಟಕಾ ಹಾಕಿಕೊಂಡು ಅಗೆಯುತ್ತಿದ್ದ, ಅಗೆದು ಅಗೆದು ಬಾಯಿ ತುಂಬಿಕೊಂಡ ರಸವೆಲ್ಲವನ್ನು ಕಿಡಕಿಯಲ್ಲಿ ಮೊತಿ ತುರಕಿ ಪಿಚಕ್ ಅಂತ ಉಗಳುತಿದ್ದ. ಮಾದೇವ ಆಗಾಗ ಕಾಲು ಮಡೆಯಲು ಗಾಡಿ ನಿಲ್ಲಿಸಿ.ರಸ್ತೆಯ ಸಾಲು ಮರದ ಬುಡಕ್ಕೆ ಮರೆಯಾಗಿ ನಿಂತು ಮುಗಿಸಿ ಬರುತಿದ್ದ. ಇನ್ನೂ ಎಷ್ಟ ದೂರ ಇದೆ ಎಂದು ಡ್ರೈವರ್ ಆಗಾಗ ಮಾದೇವನನ್ನು ಪಿಡಿಸುತಿದ್ದ. ಇಲ್ಲಿ ಇದೆ ಬಂತು ಇನ್ನು ಇಪ್ಪತ್ತ ಕಿ. ಮಿ. ಅಂತ ಹೇಳುತ್ತ ಹೇಳುತ್ತ ನೂರು ಕಿ.ಮಿ ಹೋದರೂ ಮಂತ್ರದ ಸಿದ್ದಪ್ಪ ಇರುವ ಸ್ಥಳ ಬರಲಿಲ್ಲ. ದಾರಿ ತಪ್ಪಿ ಬಂದೆವೆನೋ ಎಂದು ಭಯಗೊಂಡು ಮಾದೇವ ದಾರಿ ಹೋಕರನ್ನು ನಿಲ್ಲಿಸಿ, ಐನಳ್ಳಿ ಯಾಕಡೆ ಅಂತ ಕೇಳ್ತಿದ್ದ. ಕೈ ತೋರಿ ಮುಂದೆ ಹೋಗರಿ ಅಂತ ದಾರಿ ಹೊಕರು ಹೇಳ್ತಿದ್ದರು. ಕೊನೆಗೂ ಐನಳ್ಳಿ ತಲುಪಿದೆವು. ಆಗ ಸೂರ್ಯಾ ನಮ್ಮ ತೆತ್ತಿಯ ಮ್ಯಾಲ ನಿಂತಕೊಂಡಿದ್ದ. ಬೆಂಕಿಯಂತ ಬ್ಯಾಸಗಿ ಬಿಸಲಿಗೆ ಕಾರಲ್ಲಿರು ಎಲ್ಲರೂ ಚೂರುಪಾರು ಬೆವತಿದ್ದೆವು.
ಮಾದೇವ ಐನಳ್ಳಿಯಲ್ಲಿ ಮಂತ್ರದ ಸಿದ್ದಪ್ಪನ ಮನಿ ಎಲ್ಲಿದೆ ಎಂದು ಊರ ಮಂದಿಯಿಂದ ತಿಳಕೊಂಡ. ಐನಳ್ಳಿ ಬಿಟ್ಟ ಒಂದ ಕಿ.ಮಿ ದೂರದಲ್ಲಿ ತೋಟದಲ್ಲಿರೋ ಮನೆಯಲ್ಲಿ ಇರುದನ್ನ ಕಾತ್ರಿ ಮಾಡಕೊಂಡ. ಕಾರು ಸಿದ್ದಪ್ಪನ ತೋಟದ ಕಡೆ ಮುಕಮಾಡಿ ಓಡತೋಡಗಿತು. ಆಗ ಅವ್ವನ ತೊಡೆಯ ಮೇಲೆ ಮಲಗಿದ್ದ ದ್ರುವಿ ಎಚ್ಚರಾಗಿ ಮತ್ತೆ ಮೊದಲಿನಂತೆ ಹುಚ್ಚರಂತೆ ಮಾಡತೊಡಗಿದಳು. ದ್ರುವಿಯ ಮಾಡುವ ವರ್ತನೆಯನ್ನು ಕಂಡು ಡ್ರೈವರ್ ಹೆದರಿ ಗಾಡಿಯ ಸ್ಟೆರಿಂಗ ಎತ್ತೆತ್ತಲೋ ಹೊಳಸುತಿದ್ದ.
ಮಂತ್ರದ ಸಿದ್ದಪ್ಪ ತೋಟದ ತನ್ನ ಮನೆಯ ಮುಂದಿರುವ ಕಟ್ಟೆಯ ಮೇಲೆ ಕೂಳಿತುಕೊಂಡಿದ್ದ. ಕುಳ್ಳು ದೇಹ, ಮೈ ಬಣ್ಣ ಕಪ್ಪು, ಕಣ್ಣುಗಳು ಕೆಂಪೇರಿದ್ದವು. ಅವನೇ ಒಂದು ದೆವ್ವ ಅನ್ನು ಹಾಗೆ ಕೈ ಮೈಗೆ ವಿಭೂತಿ, ಬೂದಿ ಬಡೆದುಕೊಂಡು ಮೇಕಪ್ಪ ಮಾಡಿಕೊಂಡಿದ್ದ. ತೆಲೆಯಲ್ಲಿ ಮಳವುದ್ದ ಕೂದಲು ಅವನ ಬೆನ್ನ ಮೇಲೆ ನಯವಾಗಿ ಹರಡಿಕೊಂಡಿದ್ದವು. ಅವನ ಸಹಾಹಕ್ಕೆ ಇಬ್ಬರು ಇಪ್ಪತ್ತರ ಆಚೆ ವಯಸ್ಸಿನ ಹುಡಗಿಯರಿದ್ದರು. ಆ ಹುಡುಗಿಯರೂ ಆತನು ಹೇಳಿದಂತೆ ಎಲ್ಲ ಕೆಲಸದಲ್ಲಿ ಸಹಾಯಕ್ಕೆ ನಿಲ್ಲುತಿದ್ದರು. ಅವನ ಸುತ್ತ ಮುತ್ತ ಅನೇಕರು ನೆರದಿದ್ದರು. ಬಹುದೂರದಿಂದ ಬಂದವರೂ ಇದ್ದರು. ನಮ್ಮನ್ನು ನೋಡಿ ಅಲ್ಲೆ ಕುಳಿತು ಕೊಳ್ಳಿ ಎಂದು ಕಣ್ಣು ಸನ್ನೆ ಮಾಡಿದ.ಅಷ್ಟೊತ್ತಿಗೆ ನಮ್ಮ ದ್ರುವಿ ಚಳಿ ಹಿಡಿದವರಂತೆ ನಡಗುತಿದ್ದಳು. ಸುತ್ತಮುತ್ತಲಿದ್ದ ಜನರ ಚಿತ್ತ ದ್ರುವಿಯ ಕಡೆ ನಿದಾನಕ್ಕೆ ವಾಲಿತು. ಮಂತ್ರದ ಸಿದ್ದಪ್ಪ ಹೆಚ್ಚು ಮಾತಾಡುತಿರಲಿಲ್ಲ. ಅವನ ಕಣ್ಣೆ ವಿಚಿತ್ರವಾಗಿದ್ದವು. ಏನನ್ನೋ ಕಳೆದು ಹೋದದ ಅಮೂಲ್ಯವಾದ ವಸ್ತುವನ್ನು ಹುಡಕುವಂತೆ ಯಾವಾಗಲೂ ತವಕಿಸುತಿದ್ದವು.
ನಮ್ಮ ದ್ರುವಿಯ ಪಾಳೆ ಬಂದೇ ಬಿಟ್ಟಿತು. ಆಗ ನನಗಂತು ಥೆಟರಿಗೆ ಹೊಸದಾಗಿ ರಿಲೇಸ್ ಆದ ಸಿನೇಮಾ ನೋಡುವಾಗ ಇರುವಷ್ಟು ಕುತುಹಲ. ದ್ರುವಿಯನ್ನು ಸಹಾಯಕ್ಕೆ ಇರುವ ಇಬ್ಬರು ಹುಡುಗಿಯರು ಬಲವಾಗಿ ರಟ್ಟೆ ಹಿಡಿದು ತಂದು ಮಂತ್ರದ ಸಿದ್ದಪ್ಪನ ಮುಂದೆ ತಂದು ಕುಡಿಸಿದರು. ಆಗ ದ್ರುವಿ ಮಂತ್ರದ ಸಿದ್ದಪ್ಪನ ಆಕಾರ ನೋಡಿಯೋ, ಅವಳಿಗಿರುವ ಕಾಯಿಲೆಯಿಂದಲೋ, ಅವಳಲ್ಲಿರು ದೆವ್ವವೋ ಅಳಲು ಪ್ರಾರಂಬಿಸಿದಳು. ಆಗ ನಾನು ಬೆಚ್ಚಿ ಬಿದ್ದೆ. ಅಮ್ಮ ದೂರದಲ್ಲಿ ತನ್ನ ಸೀರೆ ಸೆರಗು ಬಾಯಿಗೆ ಇಟ್ಟು ಬಿಕ್ಕುತಿದ್ದಳು ತುದಿ ಗಣ್ಣಲ್ಲಿ ಕಣ್ಣೀರು ಹನಿ ಮೂಡಿದ್ದವು. ಅಪ್ಪ ಬದುಕೇ ಸಾಕು ಎನ್ನುವ ರೀತಿಯಲ್ಲಿ ನೋಡುತಿದ್ದ. ಮಾದೇವ ಕೆಕ್ಕರಿಸಿಕೊಂಡು ಮಂತ್ರದ ಸಿದ್ದಪ್ಪನ ಮಹಿಮೆಯನ್ನು ಬೆರಗುಗೊಂಡು ನೋಡುತ್ತಿದ್ದ.
ಮಂತ್ರದ ಸಿದ್ದಪ್ಪ ತನ್ನ ಸಿದ್ದಿ ಬುದ್ದಿಯಿಂದ ದ್ರುವಿಯನ್ನು ಮಾತಾಡಿಸಲು ಯತ್ನಿಸಿದ.ಆದ್ರೆ ದ್ರುವಿ ಮಾತಾಡದೆ ಹಾಗೆ ಅಳುತಿದ್ದಳು. ‘ಚಪ್ಪ’ ಎಂದು ಕಪಾಳಕ್ಕೆ ಜೋರಾಗಿ ದ್ರುವಿಯ ಕನ್ನೆಗೆ ಸಿದ್ದಪ್ಪ ಬಾರಿಸಿದಾಗ ನನ್ನ ಕರಳು ಕಿತ್ತು ಬಂದಂತಾಯಿತು.
ಹೂಂ, ಯಾರ ನೀ ಮಾತಾಡೂ ಎಂದು ಮತ್ತೊಂದು ಏಟು ಚಟಾರನೇ ದ್ರುವಿಯ ಮೃದುವಾದ ಕೆನ್ನಗೆ ಬಾರಿಸಿದಾಗ ಕನ್ನೆ ಕೆಂಪೆರಿತು. ಆಗ ದ್ರುವಿ ಮತ್ತಷ್ಟು ಜೋರಾಗಿ ಅಳಲು ಸುರು ಮಾಡಿದಳು. ಇಬ್ಬರು ಹುಡಗಿಯರು ದ್ರುವಿಯ ಕೂದಲನ್ನು ಗಟ್ಟಿಯಾಗಿ ಹಿಡಿದು ನೋವಾಗುವ ಹಾಗೆ ಜಗ್ಗಿದರೂ, ಅಯ್ಯೋ ಅಯ್ಯೋ ನನ್ನ ಬಿಡ್ರಿ ಅನ್ನುತ್ತ ದ್ರುವಿ ನೆಲದ ಮೇಲೆ ಉಳ್ಳಾಡತೊಡಗಿದಳು. ಕಣ್ಣಲ್ಲಿ ನಿಂಬೆ ರಸಾ ಹಿಂಡಿ, ಮತ್ತಷ್ಟು ಹಿಂಸೆ ಕೊಟ್ಟರು, ಅತ್ತು ಅತ್ತು ಸಾಕಾಗು ಹೊತ್ತಿಗೆ ಯಾವುದೋ ಮಂತ್ರ ಪಠಣ ಮಾಡುತ್ತ ಅವಳ ಬಾಯಿಗೆ ನೀರು ಹಾಕಿದರು. ದ್ರುವಿ ಒಮ್ಮಿಗಿಲೆ ಅಳೋದನ್ನಿ ನಿಲ್ಲಿಸಿ ಸುಮ್ಮನಾದಳು. ಅಪ್ಪನನ್ನು ಹತ್ತಿರಕ್ಕೆ ಕರೆದು ಮಂತ್ರದ ಸಿದ್ದಪ್ಪ ನಾಕು ನಿಂಬೆ ಹಣ್ಣು, ಒಂದು ಮಂತ್ರದ ತೈತ, ಕೊಟ್ಟು ದಿನಾ ಸೂರ್ಯಾ ಹುಟ್ಟುಕಿಂತ ಮೋದಲೆದ್ದು ಊರ ಹನಮಪ್ಪಗ ಹದಿನೈದ ದಿನಾ ಹೋಗುದಾಗಿ ಹೇಳಿದ. ಅಪ್ಪ ಅವನ ಮಾತಿಗೆ ತಲೆದೂಗುತ್ತ ಕಿಸೆಯಿಂದ ಐದು ನೂರರ ನಾಕು ನೋಟು ಅವನ ಮುಂದೆ ಇಟ್ಟು ಮಂತ್ರದ ಸಿದ್ದಪ್ಪನಿಗೆ ನಮಗೊಂದು ದೊಡ್ಡ ಉಪಕಾರ ಮಾಡಿದ್ರಿ ಅನ್ನು ಹಾಗೆ ಕೈಮುಗಿದ. ನಂದೇನೈತಿ ಯಲ್ಲಾ ಸಿದ್ದಿಯ ಮಹಿಮೆ ಅನ್ನೋ ರೀತಿಯಲ್ಲಿ ಅಪ್ಪನನ್ನು ನೋಡಿ ಮುಗಳ್ನಕ್ಕ.
*****
ದಿನದಿಂದ ದಿನಕ್ಕೆ ದ್ರುವಿ ಗುಣ ವಾಗುತ್ತಿರುವುದು ನಮ್ಮ ಗಮಣಕ್ಕೆ ಬರತೊಡಗಿತು. ಡಾಕ್ಟರ್ ಕೈಗುಣವೋ, ಮಂತ್ರದ ಸಿದ್ದಪ್ಪನ ಮಂತ್ರದ ಮಹಿಮೆಯೋ, ಊರ ಹನಮಪ್ಪನ ಆಶಿವರ್ಾದವೋ ನಮ್ಮ ದ್ರುವಿ ಒಂದು ತಿಂಗಳಲ್ಲಿ ಗುಣವಾದಳು. ಮತ್ತೆ ಮೊದಲಿನಂತೆ ತುಂಟಾಟ, ಚೆಷ್ಟೆ, ಅಮ್ಮನನ್ನು ಪೀಡಿಸುವುದು, ಅಪ್ಪನ್ನು ಮುದ್ದಿಸುವುದು, ಅಜ್ಜಿ ತೊಡೆಯ ಮೇಲೆ ಮಲಗಿ ಕಥೆ ಕೇಳುವುದು ಮಾಡುತ್ತಿದದ್ದು ನನಗಂತು ಹೋದ ಜೀವಾ ಮರಳಿ ಬಂದಂತಾಯಿತು.
ಊರ ಜನರು ಮಂತ್ರದ ಸಿದ್ದಪ್ಪನ ಮಂತ್ರ ಶಕ್ತಿಗೆ ಬೆರಗಾದರು. ಅಪ್ಪನೂ ಕೂಡಾ ತನ್ನ ಗೆಳೆಯ ಡಾ. ವಿನೋದನಕಿಂತ ತುಸು ಮಂತ್ರದ ಸಿದ್ದಪ್ಪನ ಮಂತ್ರ ಸಿದ್ದಿಗೆ ಮಾರುಹೋದ.
ನಮ್ಮ ದ್ರುವಿಯ ಈ ಘಟಣೆ ನೆಡದ ಕೆಲುವು ದಿನಗಳಲ್ಲಿ ಮತ್ತೊಬ್ಬಳು ಅದೇ ಹುಂಚಿ ಮರದ ಸನಿಹಕ್ಕೆ ಹೋಗಿ ವಿಚಿತ್ರವಾಗಿ ವರ್ತನೆ ಮಾಡುತ್ತಿರುವುದು ಗೊತ್ತಾಗುವುದೇ ತಡಾ ಜಾನವ್ವ ಇವಳ್ನ ಬಿಟ್ಟ ಅವಳ್ನ ಹಿಡದಳ ಅಂತ ಮತ್ತೆ ಊರೆಲ್ಲ ಮಾತಾಡತೋಡಗಿತು.
ಊರ ಮುಖಂಡರು, ಹಿರಿಯರು, ಗೌಡರು ಎಲ್ಲರೂ ಕೂಡಿ ಚಚರ್ೆ ಮಾಡಿ ಹುಂಚಿ ಮರಾ ಕಡೆಯುವ ನಿದರ್ಾರಕ್ಕೆ ಬಂದರು. ಪೂಜಾರ ಭೀಮಣ್ಣ ಮೊದಲಿಗೆ ಮರಾ ಕಡೆಯಲು ಒಪ್ಪಿಗೆ ಕೊಡದೆ ಕಡಾ ಕಂಡಿತವಾಗಿ ಸಾದ್ಯವಿಲ್ಲ ಅಂದಿದ್ದ. ಆದ್ರೆ ಪರಮಪೂಜ್ಯ ಶಿವಯ್ಯನವರೂ ಅವನಿಗೆ ವಿನಂತಿ ಮಾಡಿಕೊಂಡಾಗ ನಿರ್ವ ಇಲ್ಲದೆ ಒಪ್ಪಿಕೊಂಡ.
ಮರ ಕಡೆಯಲೆನೋ ಒಪ್ಪಿಗೆ ಸಿಕ್ಕಿತು ಆದ್ರೆ ಮರಾ ಕಡೆಯೋ ಬಂಟಾ ನಮ್ಮೂರಲ್ಲಿ ಯಾವನೂ ಧೈರ್ಯಮಾಡಿ ಮುಂದೆ ಬರಲಿಲ್ಲ. ಮರಾ ಕಡ್ಯಾಕ ಹ್ವಾದ್ರ ಜಾನವ್ವ ನಮನ್ನ ಸುಮ್ನ ಬಿಡುದಿಲ್ಲ ಎಂಬ ಭಯ ಊರಮಂದಿಯಲ್ಲಿ ನಡುಕ ಹುಟ್ಟಿಸಿತ್ತು. ಹೀಗಾಗಿ ಊರಲ್ಲಿ ಇದೊಂದು ದೊಡ್ಡ ಸಮಸ್ಯೆಯಾಯಿತು. ಮರಾ ಕಡಿದವರಿಗೆ ಐದುಸಾವಿರ ರೂಪಾಯಿ ಬಹುಮಾನ ಹಾಗೂ ಅವರಿಗೆ ಒಂದು ಜೋಡಿ ಬಟ್ಟೆ ಕೊಡುವುದಾಗಿ ಊರ ಎಲ್ಲ ಮುಖಂಡರು ಸೇರಿ ಸಮಕ್ಷಮ ಮಾತಾಡಿ ಊರ ತುಂಬ ಡಂಗರಾ ಹಾಕಿದರು.
ಆಗ ಕುಡಕ ಶೇಶಪ್ಪಾ ಐದಸಾವಿರಾ? ಎಂದು ಬೆರಗಾಗಿ ಡಂಗರಾ ಸಾರುವವನ ಮತ್ತೊಮ್ಮೆ ತಡೆದು ನಿಲ್ಲಿಸಿ ಕಾತ್ರಿ ಮಾಡಕೊಂಡ. ಚುನಾವಣೆ ನಾಮಪತ್ರ ಸಲ್ಲಿಸುವ ರೀತಿಯಲ್ಲಿ ಶೇಶಪ್ಪಾ ತನ್ನ ಹೆಸರು ಕೊಟ್ಟ. ಇವನ ವಿರುದ್ಧವಾಗಿ ಯಾರೂ ಹೆಸರು ಕೊಡಲಿಲ್ಲ.
ಶೇಸಪ್ಪ ಹರಿತವಾದ ಕೊಡ್ಡಲಿ ಹಿಡಿದು ಮರಾ ಕಡಿಯಲು ಹೊರಟ. ಹೋಗುವಾಗ ಅವರ ಮನೆಯ ಗೊಡೆ ಮೇಲಿರುವ ದಕ್ಷಿಣ ದಿಕ್ಕಿನಲ್ಲಿ ಹಲ್ಲಿಯೊಂದು ಲೊಚಗುಟ್ಟಿತು. ಮನೆ ಅಂಗಳದಲ್ಲಿರುವ ಮೇಕೆ ಮರಿ ಪಟಾ ಪಟಾ ಒಂದು ಸಾರಿ ಕಿವಿ ಜಾಡಿಸಿತು. ಶೇಶಪ್ಪನ ಹೆಂಡತಿಗೆ ಬಿಕ್ಕಳಿಕೆ ಹತ್ತಿತು. ಯಾಕೋ ಅಪಶಕುಣ ಆದಂಗ ಅನಸಾಕ ಸೂಚನೆ ಕಾಣಸಾಕತ್ಯಾವ ಮರಾ ಕಡ್ಯಾಕ ಹೋಗ ಬ್ಯಾಡ್ರಿ ಅಂತ ಶೇಶಪ್ಪನ ಹೆಂಡತಿ ದೈನಾಸ ಬಿಟ್ಟ ಕೇಳಿದಳು. ಆದ್ರ ಶೇಶಪ್ಪ ಹೆಂಡತಿಯ ಮಾತಿನತ್ತ ಚಿತ್ತ ಹರಿಸದೇ ಐದುಸಾವಿರ ರೂಪಾಯಿ ತಗೊಂಡ ಬೇಕಾದಂಗ ಸೇರೆ ಕುಡಿಬಹುದು ಅಂತ ಲೆಕ್ಕಾ ಹಾಕೊಂತ ಹುನಸಿ ಮರದ ಕಡೆ ನಡೆದ. ಅವನ ಹಿಂದೆ ಅನೇಕರು ಅಂವ ಮರಾ ಕಡೆಯೊದನ್ನು ನೋಡಲು ಹೋಗಿದ್ದರು. ಕೆಲವರು ಯಪ್ಪಾ ಇದೆಲ್ಲಿ ತಗಲ ಅಂತ ಮನೆಯಲ್ಲಿ ಕುಂತಿದ್ದರು.
ತನ್ನ ಟವಲದಲ್ಲಿ ತಂದಿದ್ದ ಎರಡ ಪಾಕೀಟ ಸರಾಯಿಯನ್ನು ಗಟಗಟನೇ ಕುಡಿದು.ಹನಮಪ್ಪನ ಗುಡಿಕಡೆಗೊಮ್ಮೆ ಕೈ ಎತ್ತಿ ನಮಸ್ಕಾರ ಮಾಡಿ ಶೇಸಪ್ಪ ಕೋಡಲಿಯಿಂದ ಮರಕ್ಕೆ ಒಂದು ಕಚ್ಚು ಹಾಕಿದ. ಮರದಲ್ಲಿರು ಹಕ್ಕಿಗಳು ಚಿಂವ್ ಚಿಂವ್ ಅಂತ ರಾಗ ಬದ್ದವಾಗಿ ಕಿರಚತೊಡಗಿದವು. ಕೆಲವು ಪಕ್ಷಿಗಳು ಈ ಮರದ ಋಣಾ ಇಂದಿಗೆ ಮುಗಿಯಿತೆಂದು ನಿರಾಸೆಗೊಂಡವು. ತಮ್ಮ ಚಿಕ್ಕ ಪುಟ್ಟ ಮಕ್ಕಳ ಸ್ಥಿತಿ ಕಂಡು ಕೆಲವು ಪಕ್ಷಿಗಳು ಕಣ್ಣೀರಿಟ್ಟವು. ಪಕ್ಷಿಗಳ ಬದುಕಿನ ಬಗ್ಗೆ ಯಾರೂ ಚಿಂತಿಸಲಿಲ್ಲ, ಮರುಗಲಿಲ್ಲ. ಶೇಶಪ್ಪನ ಕೊಡಲಿ ಪೆಟ್ಟು ತಿಂದ ಹುಂಚಿ ಮರಾ ಸಂಜೆ ಹೊತ್ತಿಗೆ ನೆಲವನ್ನಪ್ಪಿತ್ತು. ಅದರ ಜೋತೆ ಶೆಶಪ್ಪನೂ ಕಣ್ಣುಮುಚ್ಚಿದ್ದ. ನಿಶೆಯಲ್ಲಿ ಮರ ಕಡಿದ ಕಾರಣಕ್ಕೋ, ಪಕ್ಷಿಗಳ ಬದುಕನ್ನು ನಾಶ ಮಾಡಿದ ಶಾಪವೋ, ಅದರಲ್ಲಿರುವ ಭೂತದ ಪ್ರಭಾವವೋ ಗೊತ್ತಾಗಲಿಲ್ಲ. ಕುಡುಕ ಶೇಶಪ್ಪ ಮರದಡಿಯ್ಲಿ ಶವವಾಗಿ ಮಲಗಿದ್ದ. ಆಗ ಊರಿಗೂರೇ ಮತ್ತಷ್ಟು ಹೆದರಿತು. ಎಂಬತ್ತು ವಯಸ್ಸಿನ ಹುಂಚಿ ಮರಾ ಬುಡಮೇಲಾಗಿ ಬಿದ್ದದು, ಶೇಶಪ್ಪ ಅದೇ ಮರದಡಿಯಲ್ಲಿ ಮಣ್ಣುಗೂಡಿದ್ದ ನೆನಪು ನನ್ನ ಮನದ ಮೂಲೆಯಲ್ಲಿ ಈಗಲೂ ಹಸಿರಾಗಿಯೇ ಇದೆ.

******

‍ಲೇಖಕರು G

1 June, 2014

1 Comment

  1. ashwini rao.k.n.

    very nice saar..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading