ಮೂಲ – ಗೈ ಡಿ ಮೊಫಸಾ
ಕನ್ನಡಕ್ಕೆ – ಜೆ ವಿ ಕಾರ್ಲೊ
ಭಯ (The Terror)
ನಿನಗಿದು ಏನೂ ಅರ್ಥವಾಗುತ್ತಿಲ್ಲವೆಂದು ಹೇಳುತ್ತಿದ್ದೀಯ. ಅದನ್ನು ನಾನು ನಂಬುತ್ತೇನೆ. ನಾನು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದೇನೆ ಎಂದು ಭಾವಿಸುತ್ತಿದ್ದೀಯಾ? ಇರಲೂಬಹುದು ಗೆಳೆಯ. ಆದರೆ, ನೀನು ಭಾವಿಸಿಕೊಂಡಿರುವ ಕಾರಣಕ್ಕಾಗಿಯಂತೂ ಅಲ್ಲ, ಅದಕ್ಕೆ ಬೇರೆ ಕಾರಣಗಳಿರಬಹುದು.
ಹೌದು, ನಾನು ಮದುವೆಯಾಗಲು ಹೊರಟಿದ್ದೇನೆ. ಈ ಹೆಜ್ಜೆಯನ್ನೇಕೆ ಇಡುತ್ತಿದ್ದೇನೆ ಎಂದು ನಿನಗೆ ತಿಳಿಸುತ್ತೇನೆ. ಇದರ ಜೊತೆಗೆ ಮತ್ತೊಂದು ವಿಚಾರವನ್ನೂ ಸೇರಿಸಲು ಬಯಸುತ್ತೇನೆ: ನಾನು ನಾಳೆ ಮದುವೆಯಾಗಲು ಹೊರಟಿರುವ ಹುಡುಗಿಯ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಅವಳನ್ನು ನಾನು ನಾಲಕ್ಕೋ ಐದು ಭಾರಿ ನೋಡಿರಬಹುದು ಅಷ್ಟೇ. ಅವಳು ನೋಡಲು ಅಷ್ಟೊಂದು ಕೆಟ್ಟದಾಗಿಲ್ಲ. ನನ್ನ ಮಟ್ಟಿಗೆ ಅಷ್ಟಿದ್ದರೆ ಸಾಕು. ಸ್ವಲ್ಪ ಕುಳ್ಳಗೆ, ಬೆಳ್ಳಗೆ ಸ್ವಲ್ಪ ದಪ್ಪಗಿದ್ದಾಳೆ; ನಾಡಿದ್ದು ನಾನು ತೆಳ್ಳಗೆ, ಎತ್ತರ ಮತ್ತು ಅಷ್ಟೊಂದು ಬೆಳ್ಳಗೆ ಇರದಿರುವ ಹುಡುಗಿ ಸಿಕ್ಕಿದ್ದರೆ ಒಳ್ಳೆಯದಿತ್ತು ಎಂದು ಬಯಸಿದರೂ ಬಯಸಬಹುದು.
ಅವಳು ಶ್ರೀಮಂತ ಮನೆತನದವಳಲ್ಲ, ಮಧ್ಯಮ ವರ್ಗದ ಕುಟುಂಬದವಳು. ಅಂತಹ ಹುಡುಗಿಯರನ್ನು ನೀನು ಬೇಕಾದಷ್ಟು ನೋಡಿರಬಹುದು. ಹೇಳಿಕೊಳ್ಳುವಂತ ಲೋಪವೂ ಇರದ, ಹಾಗೆಯೇ, ಮೇಲೆದ್ದು ಕಾಣುವಂತ ಗುಣಗಳೂ ಇರದ ಸಾಮಾನ್ಯ ಹುಡುಗಿಯರ ಮಧ್ಯದವಳು. ಜನರು ಅವಳ ಬಗ್ಗೆ:
“ಕುಮಾರಿ ಲಾಜೋಲ್, ತುಂಬಾ ಒಳ್ಳೆಯ ಹುಡುಗಿ,” ಎನ್ನುತ್ತಾರೆ. ನಾಡಿದ್ದು ಕೇಳಿದರೆ, “ಮೇಡಂ ರೇಮೊನ್ ತುಂಬಾ ಒಳ್ಳೆಯವಳು.” ಎನ್ನುತ್ತಾರೆ. ಅಂದರೆ ನಾನು ಮದುವೆಯಾಗಲಿರುವ ಹುಡುಗಿ, ಇವಳಿಗಿಂತ ಬೇರೆ ಹೆಣ್ಣಾಗಿದ್ದಿದ್ದರೆ ಒಳಿತಿತ್ತು ಎಂದು ಬಯಸುವವರೆಗೆ, ಎಲ್ಲಾ ಹುಡುಗರು ಹೆಂಡತಿಯಾಗಲು ಬಯಸುವಂತ ಸಾವಿರಾರು ಹುಡುಗಿಯರಲ್ಲಿ ಒಬ್ಬಳಾಗಿದ್ದಳು.
ನನಗೆ ಗೊತ್ತು. ನಿಶ್ಚಯವಾಗಿಯೂ ನೀನು, “ನಿನಗೆ ಮದುವೆ ಏಕೆ ಬೇಕಿತ್ತು?” ಎಂದು ಕೇಳೇ ಕೇಳುತ್ತೀಯ ಎಂದು.
ಏಕೆ ಇಂತಾ ಮೂರ್ಖತನದ ಕೆಲಸ ಮಾಡಲು ಹೊರಟಿದ್ದೇನೆ ಎಂಬ ಕಾರಣ ಹೇಳಲು ಹೊರಟರೆ ನೀನು ಏನು ಹೇಳುತ್ತೀಯೋ ಗೊತ್ತಿಲ್ಲ. ಕಾರಣ ತುಂಬಾ ಸರಳ. ಏನೆಂದರೆ ನನಗೆ ಒಬ್ಬನಿಗೇ ಇರಲು ಭಯವಾಗುತ್ತದೆ. ಅದಕ್ಕಾಗಿ!
ನಿನಗೆ ಹೇಗೆ ಅರ್ಥ ಮಾಡಿಸುವುದು ಎಂದು ನನಗೆ ಗೊತ್ತಾಗುತ್ತಿಲ್ಲ. ಆದರೆ, ನನ್ನ ತಲೆ ಎಷ್ಟೊಂದು ಕೆಟ್ಟು ಹೋಗಿದೆ ಎಂದರೆ ನೀನು ನನ್ನ ಬಗ್ಗೆ ಕನಿಕರನೂ, ಜೊತೆಗೆ ಹೇಸಿಗೆಯನ್ನೂ ಪಡುತ್ತೀಯ.
ನನಗೆ ಒಬ್ಬನಿಗೇ ಈ ರಾತ್ರಿಗಳನ್ನು ಕಳೆಯುವುದು ಸಾಧ್ಯನೇ ಇಲ್ಲ. ನನ್ನ ಪಕ್ಕದಲ್ಲಿ ಯಾರಾದರೊಬ್ಬರು ನನ್ನ ಬಳಿ ಏನಾದರೂ ಆಗಲಿ ಮಾತನಾಡುತ್ತಾ, ನನ್ನನ್ನು ಮುಟ್ಟುತ್ತಾ ಇರಬೇಕೆಂದೆನಿಸುತ್ತದೆ.
-2-
ನಾನು ಬೆಳಿಗ್ಗೆ ಎಚ್ಚರಗೊಂಡಾಗ ಯಾರಾದರೂ ನನ್ನ ಸನಿಹದಲ್ಲಿದ್ದು ನಾನು ಕೇಳುವ, ಅದು ಎಷ್ಟೇ ಅಸಂಬದ್ಧ ಪ್ರಶ್ನೆ ಆಗಿರಲಿ, ಉತ್ತರಿಸಿ, ನನ್ನ ಪಕ್ಕದಲೇ ಒಂದು ಮನಷ್ಯ ಜೀವಿ ಇದೆ ಮತ್ತು ನಾನು ಬತ್ತಿ ಉರಿಸಿದಾಗ, ಮಾನವ ಮುಖವೊಂದು ಕಾಣಿಸಿದಾಗ ನನಗೆ ನೆಮ್ಮದಿಯಾಗುತ್ತದೆ. ನನಗೆ ಹೇಳಲು ಮುಜುಗರವಾಗುತ್ತಿದೆ. ನನಗೆ ಒಂಟಿತನ ಎಂದರೆ ತುಂಬಾ ತುಂಬಾ ಭಯ.
ನಿನಗೆ ಇನ್ನೂ ಅರ್ಥವಾದಂತೆ ಕಾಣಿಸುತ್ತಿಲ್ಲ.
ನನಗೆ ಬೇರೆ ಯಾವುದೇ ಥರದ ಅಪಾಯದ ಬಗ್ಗೆ ಹೆದರಿಕೆ ಇಲ್ಲ. ಯಾರೋ ದುರುಳನೊಬ್ಬ ನನ್ನ ಕೋಣೆಗೆ ನುಗ್ಗಿದರೆ ಅವನನ್ನು ಎದುರಿಸಿ ಸಾಯಿಸುವಷ್ಟು ಧೈರ್ಯ ನನ್ನಲ್ಲಿದೆ. ನನಗೆ ದೆವ್ವ, ಪಿಶಾಚಿಗಳ ಬಗ್ಗೆ ಕಿಂಚಿತ್ತೂ ಹೆದರಿಕೆ ಇಲ್ಲ. ಸತ್ತವರ ಬಗ್ಗೆಯಂತೂ ಹೆದರಿಕೆಯೇ ಇಲ್ಲ. ಈ ಜಗತ್ತಿನಲ್ಲಿ ಎಲ್ಲರೂ ಸಾಯುತ್ತಾರೆಂದು ನನಗೆ ಗೊತ್ತು ಯಾವುದೂ ಉಳಿಯುವುದಿಲ್ಲ.
ಹೌದು. ಇದನ್ನು ಹೇಳಲೇಬೇಕು. ನನಗೆ ನನ್ನ ಬಗ್ಗೆಯೇ ಭಯವಾಗುತ್ತಿದೆ. ಅರ್ಥವಾಗದ ಆ ಭಯದ ಬಗ್ಗೆ ಹೆದರಿಕೆಯಾಗುತ್ತದೆ.
ನೀನು ನಗಬಹುದು. ಆದರೆ, ಇದು ಭಯಾನಕ. ನನ್ನಿಂದ ಅದನ್ನು ತೊಡೆಯಲಾಗುತ್ತಿಲ್ಲ. ನನಗೆ ಗೋಡೆಗಳ, ಪೀಠೋಪಕರಣಗಳ ಮತ್ತು ಎಲ್ಲಾ ವಸ್ತುಗಳ ಬಗ್ಗೆ ಭಯ. ಅವಕ್ಕೂ ಜೀವ, ಪ್ರಾಣಿಗಳ ಜೀವದಂತೆ ಇದೆ ಎಂದು ನನ್ನ ಭಾವನೆ. ಎಲ್ಲದಕ್ಕಿಂತ ಮಿಗಿಲಾಗಿ ನನಗೆ ನನ್ನ ಭಯಾನಕ ಆಲೋಚನೆಗಳ, ತರ್ಕದ ಬಗ್ಗೆ ಭಯ. ನನ್ನೊಳಗಿನ ಯಾವುದೋ ಅಗೋಚರ, ರಹಸ್ಯಾತ್ಮಕ ನೋವು ಅವುಗಳನ್ನು ಹೊರಗೆ ಅಟ್ಟುತ್ತಿದೆ ಎಂದು ನನಗನಿಸುತ್ತಿರುತ್ತದೆ.
ಮೊದಲು ಮನಸ್ಸಿನಲ್ಲಿ ಏನೋ ಒಂದು ಥರ ಕಸಿವಿಸಿಯಾಗಲು ಶುರುವಾಗಿ ಚಳಿಯಿಂದ ಮೈಯೆಲ್ಲಾ ನಡುಗಲು ಶುರುವಾಗುತ್ತದೆ. ಏನಾದರೂ ಕಾಣಲು ಸಿಗುತ್ತದೆಯೇ ಎಂದು ಸುತ್ತಲೂ ನೋಡುತ್ತೇನೆ. ಅಲ್ಲಿ ಏನೂ ಇರುವುದಿಲ್ಲ. ಅದು ಏನೇ ಆಗಿರಲಿ, ಕಣ್ಣಿಗೆ ಕಾಣುವಂತಾದ್ದು ಏನಾದರೂ ಇರಬೇಕಿತ್ತು ಎನಿಸುತ್ತದೆ. ನನಗೆ ಹೆದರಿಕೆ ಉಂಟಾಗುತ್ತದೆ. ಏಕೆಂದರೆ ನನಗೆ ನನ್ನ ಭಯದ ಕುರಿತು ಅರ್ಥವೇ ಆಗುತ್ತಿಲ್ಲ.
ನಾನು ಮಾತನಾಡಿದರೆ ನನಗೆ ನನ್ನ ಧ್ವನಿಯ ಬಗ್ಗೆಯೇ ಹೆದರಿಕೆ ಉಂಟಾಗುತ್ತದೆ. ನಾನು ನಡೆಯಲು ಹೊರಟರೆ, ಬಾಗಿಲುಗಳ ಹಿಂದೆ, ಕರ್ಟನುಗಳ ಹಿಂದೆ, ಕಪಾಟಿನೊಳಗೆ, ಮಂಚದ ಕೆಳಗೆ ಏನು ಅಡಗಿರಬಹುದೆಂದು ಹೆದರಿಕೆ ಶುರುವಾಗುತ್ತದೆ. ನನಗೆ ಗೊತ್ತು ಅಲ್ಲಿ ಏನೂ ಇರುವುದಿಲ್ಲವೆಂದು. ಅದರೂ ಮನಸ್ಸಿನೊಳಗೆ ಏನೋ ಕ್ಷೋಭೆ ನನ್ನ ಭಯ ಮತ್ತಷ್ಟು ಹೆಚ್ಚಾಗುತ್ತದೆ ಮತ್ತು ನನ್ನ ರೂಮಿಗೆ ಓಡಿ ಹೋಗುತ್ತೇನೆ.
-3-
ನನ್ನ ರೂಮಿನ ಚಿಲಕ ಹಾಕಿ ಹೊದಿಕೆಯೊಳಗೆ ಮುದ್ದೆಯಾಗಿ ಸೇರಿಕೊಂಡು ನಡುಗುತ್ತಾ ಗಟ್ಟಿಯಾಗಿ ಕಣ್ಣುಗಳನ್ನು ಮುಚ್ಚುತ್ತೇನೆ. ಎಷ್ಟು ಹೊತ್ತು ಸರಿಯಿತೋ ಗೊತ್ತಿಲ್ಲ. ನನ್ನ ಮೇಣದ ಬತ್ತಿ ಮೇಜಿನ ಮೇಲೆ ಉರಿಯುತ್ತಿದೆ. ಅದನ್ನು ನಂದಿಸಬೇಕೆಂದು ಮನಸ್ಸು ಹೇಳುತ್ತಿದೆ. ಆದರೂ, ನನಗೆ ಆಗುತ್ತಿಲ್ಲ.
ಇಂತಹ ಭೀಕರ ಭಯದ ಬಗ್ಗೆ ಏನು ಹೇಳುತ್ತೀಯ?
ಈ ಮೊದಲು ನನಗೆ ಈ ರೀತಿ ಎಂದೂ ಆಗಿರಲಿಲ್ಲ. ಮನೆಗೆ ಶಾಂತವಾಗಿ ಬಂದು ನನ್ನ ಕೆಲಸ ಕಾರ್ಯಗಳನ್ನು ಮನಃಶ್ಶಾಂತಿಯನ್ನು ಕೆಡಿಸಿಕೊಳ್ಳದೆ ನೆಮ್ಮದಿಯಾಗಿ ಮಾಡಿಕೊಂಡು ಹೋಗುತ್ತಿದ್ದೆ. ಇಂತಹ ಒಂದು ಕಾಯಿಲೆಯ ಬಗ್ಗೆ- ಇದೊಂದು ಕಾಯಿಲೆಯಲ್ಲದೆ ಮತ್ತೇನೂ?- ಈ ಮೊದಲು ಯಾರಾದರೂ ಹೇಳಿದ್ದಿದ್ದರೆ ನಾನು ನಗಾಡುತ್ತಿದ್ದೆ. ಎಂತಹ ಭಯಾನಕ ರಾತ್ರಿಗಳಲ್ಲೂ ನಾನು ಬಾಗಿಲು ತೆರೆಯುವುದಕ್ಕೆ ಹೆದರುತ್ತಿರಲಿಲ್ಲ. ನನ್ನ ಮಲಗುವ ಕೋಣೆಯನ್ನು ಎಂದೂ ಭದ್ರ ಮಾಡಿಕೊಂಡವನಲ್ಲ. ನನ್ನ ಮನಸ್ಸಿಗೆ ಬಂದಾಗ ಮಲಗಲು ಮಂಚ ಹತ್ತುತ್ತಿದ್ದೆ. ನಡುವೆ, ಎಂದೂ, ಎಲ್ಲವೂ ಭದ್ರವಾಗಿದೆಯೋ ಇಲ್ಲವೋ ಎಂದು ಮತ್ತೊಮ್ಮೆ ಪರೀಕ್ಷಿಸಲು ಏಳುತ್ತಿರಲಿಲ್ಲ.
ಇದೆಲ್ಲಾ ಹಿಂದಿನ ಶರತ್ಕಾಲದ ಸಂಜೆಯಲ್ಲಿ ವಿಚಿತ್ರವಾಗಿ ಪ್ರಾರಂಭವಾಯಿತು. ನಾನು ರಾತ್ರಿ ಊಟ ಮುಗಿಸಿದ ನಂತರ ನನ್ನ ಕೆಲಸದಾಳು ಹೊರಟು ಹೋದ ನಂತರ ಏನು ಮಾಡುವುದೆಂದು ಯೋಚಿಸತೊಡಗಿದೆ. ನಾನು ನನ್ನ ಕೋಣೆಯಲ್ಲೇ ಅಡ್ಡಾಡತೊಡಗಿದೆ. ಅಕಾರಣವಾಗಿ ಸುಸ್ತಾಗತೊಡಗಿತು. ಏನೂ ಕೆಲಸ ಮಾಡಲೂ ಮನಸ್ಸಾಗಲಿಲ್ಲ. ಓದಲು ಕೂಡ ಮನಸ್ಸಾಗಲಿಲ್ಲ. ಹೊರಗೆ ಮಳೆ ಸುರಿಯುತ್ತಿತ್ತು. ನಾನು ಅಸಂತುಷ್ಟನಾಗಿದ್ದೆ, ಏನೋ ನಿರುತ್ಸಾಹ, ಕೊರಗು. ಅದರಿಂದ ಹೊರಬರಲು ಅಳಬೇಕೆನಿಸುತ್ತದೆಅಥವಾ ಯಾರಾದರೂ ಸರಿ ಏನಾದರೂ ಸರಿ ವಟ ವಟ ಮಾತನಾಡಬೇಕೆನಿಸುತ್ತದೆ.
ನಾನು ಈ ಜಗತ್ತಿನಲ್ಲಿ ಒಬ್ಬಂಟಿಗನೆನಿಸತೊಡಗಿತು. ನನ್ನ ಮನೆ ಎಲ್ಲಾ ಖಾಲಿ ಖಾಲಿ ಎನಿಸತೊಡಗಿತು. ಏನು ಮಾಡಲಿ? ಕುಳಿತುಕೊಂಡೆ. ಕಾಲುಗಳಿಗೆ ಜೋಮು ಹಿಡಿದಂತಾಗಿ ಎದ್ದು ಮತ್ತೆ ನಡೆಯತೊಡಗಿದೆ. ಜ್ವರ ಬಂದಿರುವಂತೆ ಭಾಸವಾಗತೊಡಗಿತು. ನಾನು ಮೆಲ್ಲಗೆ ನಡೆಯುವಾಗ ಹಿಂದಕ್ಕೆ ಕೈ ಕಟ್ಟುವುದು ಅಭ್ಯಾಸ. ಕೈಗಳು ಬಿಸಿ ಬಿಸಿಯಾಗಿ ಉರಿಯತೊಡಗಿದವು. ಒಮ್ಮೆಲೆ ಶೀತಲ ಗಾಳಿ ನನ್ನ ಬೆನ್ನು ಮೂಳೆಯೊಳಗೆ ಹರಿದು ನಾನು ಕಂಪಿಸಿದೆ. ಬೆಂಕಿಗೂಡಿಗೆ ಉರಿ ಹಾಕಿ ಮೈ ಕಾಯಿಸುತ್ತಾ ಬೆಂಕಿಯ ಜ್ವಾಲೆಗಳನ್ನು ನೋಡುತ್ತಾ ಸಮ್ಮೋಹನಕ್ಕೊಳಗಾದವನಂತೆ ಕುಳಿತುಕೊಂಡೆ. ಸ್ವಲ್ಪ ಹೊತ್ತಿನಲ್ಲೇ ಮತ್ತೆ ಕಸಿವಿಸಿಯಾಗತೊಡಗಿತು. ಎದ್ದು ಹೊರಗೆ ಹೋಗಿ ಯಾರಾದರೂ ಸ್ನೇಹಿತರೊಂದಿಗೆ ಸೇರಿಕೊಳ್ಳಬೇಕೆನಿಸಿತು. ದುರಾದೃಷ್ಟಕ್ಕೆ ನನಗೆ ಯಾರೂ ಸಿಗಲಿಲ್ಲ. ನಡೆಯುತ್ತಾ ರಾಜ ರಸ್ತೆಗೆ ಹೋದೆ. ಅಲ್ಲಿ ಯಾರಾದರೂ ಪರಿಚಯಸ್ಥರು ಎದುರಾಗಬಹುದೆಂಬ ಭರವಸೆ ಇತ್ತು.
-4-
ಮಳೆ ಬಂದು ನಿಂತಿತ್ತು. ಗ್ಯಾಸ್ ಲೈಟಿನ ಬೆಳಕಿಗೆ, ತೊಯ್ದಿದ್ದ ರಸ್ತೆ ಫಳ ಫಳ ಹೊಳೆಯುತ್ತಿತ್ತು. ಮಳೆ ಬಂದು ಹೋದ ಕಾರಣ ಹವೆಯಲ್ಲಿ ಅಸಾಧ್ಯ ಧಗೆ ಇದ್ದು, ಹಬೆ ಗ್ಯಾಸ್ ಲೈಟುಗಳಿಗೆ ಮುಸುಕು ಹಾಕಿದಂತಾಗಿತ್ತು.
ನಾನು ನಿಧಾನವಾಗಿ ನಡೆಯತೊಡಗಿದೆ. “ಇಲ್ಲೂ ಕೂಡ ಮಾತನಾಡಿಸಲು ಒಂದು ನರಪಿಳ್ಳೆಯೂ ಸಿಗುವ ಹಾಗೆ ಕಾಣಿಸುತ್ತಿಲ್ಲ,” ನನ್ನಷ್ಟಕ್ಕೆ ಹೇಳಿಕೊಂಡೆ. ರಸ್ತೆ ಉದ್ದಕ್ಕೂ ಸಿಗುವ ಕೆಫೆಗಳಲ್ಲಿ ಇಣುಕಿದೆ. ಬಹಳಷ್ಟು ಗ್ರಾಹಕರು ನಿರುತ್ಸಾಹದ ಮುಖಗಳನ್ನು ಹೊತ್ತು ಕುಳಿತಿದ್ದರು. ಅವರ ಮುಂದಿದ್ದ ಉಪಹಾರವನ್ನು ತಿನ್ನುವಷ್ಟೂ ಶಕ್ತಿ ಅವರಿಗಿದ್ದಂತೆ ಕಾಣಿಸುತ್ತಿರಲಿಲ್ಲ.
ತುಂಬಾ ಹೊತ್ತು ರಸ್ತೆಯ ಮೇಲೆ ಗೊತ್ತು ಗುರಿ ಇಲ್ಲದೆ ಅಡ್ಡಾಡಿ, ಮಧ್ಯರಾತ್ರಿಯ ಹೊತ್ತಿಗೆ ನಾನು ರೂಮಿಗೆ ಹಿಂದಿರುಗಿದೆ. ನನಗೆ ತುಂಬಾ ಆಯಾಸವಾಗಿತ್ತಾದರೂ ಶಾಂತಚಿತ್ತನಾಗಿದ್ದೆ. ಎಂದೂ ಬಾಗಿಲು ತೆರೆಯದ ಕಾವಲುಗಾರ ಇಂದು ಯಾಕೋ ನನಗಾಗಿ ಬಾಗಿಲು ತೆರೆದ. ಯಾರೋ ಹೊಸಬನೊಬ್ಬ ಈಗಷ್ಟೇ ಬಾಡಿಗೆಗೆ ಬಂದಿರಬೇಕೆಂದು ಎನಿಸಿತು.
ನಾನು ಹೊರಗೆ ಹೋಗುವಾಗ ಯಾವಾಗಲೂ ಬಾಗಿಲನ್ನು ಡಬಲ್ ಲಾಕ್ ಮಾಡಿರುತ್ತೇನೆ. ಆದರೆ, ಈಗ ಅದು ಸುಮ್ಮನೆ ಎಳೆದು ಹೋಗಿರುವಂತೆ ಕಾಣಿಸಿದಾಗ ನನಗೆ ಆಶ್ಚರ್ಯವಾಯಿತು. ಆದರೆ, ನನಗಾಗಿ ಯಾರೋ ಕೆಲವು ಪತ್ರಗಳನ್ನು ತಂದು ಹಾಕಿರುವಂತಿತ್ತು.
ನಾನು ಒಳಗೆ ಹೋದೆ. ಬೆಂಕಿಗೂಡಿನಲ್ಲಿ ಕಟ್ಟಿಗೆಗಳು ಇನ್ನೂ ಉರಿಯುತ್ತಲಿದ್ದವು. ಅದರ ಬೆಳಕೂ ಇದ್ದಿದ್ದರಿಂದ ನಾನು ಒಂದೇ ಕ್ಯಾಂಡಲನ್ನು ಹಚ್ಚಿದೆ. ಕ್ಯಾಂಡಲ್ ಸರಿಯಾಗಿ ಉರಿಯಲಾರಂಭಿಸಿದಾಗ, ನನ್ನ ತೋಳು ಕುರ್ಚಿಯಲ್ಲಿ ಯಾರೋ ನನಗೆ ಬೆನ್ನು ಮಾಡಿ, ಕಾಲುಗಳನ್ನು ಬೆಂಕಿಗೂಡಿನ ಕಡೆಗೆ ಎತ್ತಿಕೊಂಡು ಬೆಂಕಿ ಕಾಯಿಸುತ್ತಾ ಕುಳಿತಿರುವುದು ಕಾಣಿಸಿತು.
ನನಗೆ ಸ್ವಲ್ಪವೂ ಹೆದರಿಕೆಯಾಗಲಿಲ್ಲ. ಯಾರೋ ನನ್ನ ಸ್ನೇಹಿತ ನನ್ನನ್ನು ಕಾಣಲು ಬಂದಿರಬೇಕು ಎಂದು ಭಾವಿಸಿದೆ. ನಾನು ಕಾವಲುಗಾರನಿಗೆ ಹೊರಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿದ್ದೆ. ಅದ್ದರಿಂದ ಅವನು ನನ್ನ ಗೆಳೆಯನಿಗೆ ಒಳಗೆ ಬರಲು ತನ್ನ ಕೀಯನ್ನೇ ಕೊಟ್ಟಿರಬೇಕು.
ನನಗೆ ಕುರ್ಚಿಯಲ್ಲಿ ನನ್ನ ಸ್ನೇಹಿತನ ತಲೆ ಹಿಂಭಾಗ ಮಾತ್ರ ಕಾಣಿಸುತ್ತಿತ್ತು. ಬಹುಶಃ ನನ್ನನ್ನು ಕಾಯುತ್ತಾ, ಕಾಯುತ್ತಾ ಅವನು ನಿದ್ದೆ ಹೋಗಿರಬೇಕೆಂದೆನಿಸಿ ಅವನನ್ನು ಎಬ್ಬಿಸಲು ಹೋದೆ. ಅವನ ಒಂದು ತೋಳು ಕುರ್ಚಿಯಿಂದ ನೆಲದವರೆಗೆ ಇಳಿ ಬಿದ್ದಿತ್ತು ಮತ್ತು ಅವನು ಕಾಲ ಮೇಲೆ ಕಾಲು ಹಾಕಿ ಕುಳಿತಿದ್ದ. ಅವನ ತಲೆ ಎಡಕ್ಕೆ ವಾಲಿತ್ತಾದ್ದರಿಂದ ಅವನು ನಿದ್ದೆ ಹೋಗಿರುವುದರಲ್ಲೇನೂ ಆಶ್ಚರ್ಯವೆನಿಸಲಿಲ್ಲ.
-5-
“ಯಾರಿರಬಹುದು?” ನಾನು ನನ್ನನ್ನೇ ಕೇಳಿಕೊಂಡೆ. ಯಾಕೆಂದರೆ ಕೋಣೆಯಲ್ಲಿ ಕತ್ತಲಿದ್ದರಿಂದ ಅವನು ಸರಿಯಾಗಿ ಕಾಣಿಸುತ್ತಿರಲಿಲ್ಲ. ನಾನು ಅವನ ಭುಜದ ಮೇಲೆ ಕೈ ಇಡಲು ಹೋದೆ.ಆದರೆ, ಅದು ಕುರ್ಚಿಯ ಹಿಂಭಾಗದ ಕಟ್ಟಿಗೆಗೆ ತಾಕಿತು. ನಾನು ಸರಿಯಾಗಿ ನೋಡಿದೆ. ಕುರ್ಚಿಯಲ್ಲಿ ಯಾರೂ ಇರಲಿಲ್ಲ. ಕುರ್ಚಿ ಖಾಲಿ ಇತ್ತು!!
ನಾನು ಒಮ್ಮಲೇ ಹೌಹಾರಿದೆ. ಅಪಾಯದಿಂದ ಪಾರಾಗುವಂತೆ ಹಿಂದಕ್ಕೆ ಜಿಗಿದೆ. ನನಗೆ ಏನು ಮಾಡುವುದೆಂದು ತೋಚಲಿಲ್ಲ. ಹೆದರಿಕೆಯಿಂದ ಕಂಪಿಸತೊಡಗಿದೆ. ನೆಟ್ಟಗೆ ಏನೂ ಯೋಚಿಸಲಾಗಲಿಲ್ಲ. ತಲೆ ತಿರುಗಿ ಬೀಳುವಂತಾಯಿತು.
ನಾನು ಕ್ರಮೇಣವಾಗಿ ಮಾಮೂಲಿ ಸ್ಥಿತಿಗೆ ಬಂದೆ. ಸಾಮಾನ್ಯವಾಗಿ ನಾನು ಅಷ್ಟು ಬೇಗ ಉದ್ವಿಘ್ನಗೊಳ್ಳುವವನಲ್ಲ. “ಇದು ನನ್ನ ಭ್ರಾಂತಿಯಷ್ಟೇ ಮತ್ತೇನೂ ಅಲ್ಲ!” ಎಂದು ಆ ಕುರಿತು ಯೋಚಿಸತೊಡಗಿದೆ.
ನಾನು ಭ್ರಾಂತಿಗೆ ಒಳಗಾಗಿದ್ದೆ, ಬೇರೇನೂ ಅಲ್ಲ. ಅದು ಸತ್ಯ. ನನ್ನ ಮಿದುಳು ಸರಿಯಾಗಿಯೇ ಇದೆ. ಅಲ್ಲಿ ಯಾವ ತೊಂದರೆಗಳೂ ಇಲ್ಲ. ನನ್ನ ಕಣ್ಣುಗಳಷ್ಟೇ ಮೋಸ ಹೋಗಿವೆ. ಅವು ದರ್ಶನ ಪಡೆದಿವೆ. ಇದನ್ನು ಜನ ಸಾಮಾನ್ಯರು ಪವಾಡವೆನ್ನುತ್ತಾರೆ. ಕಣ್ಣುಗಳ ನರಗಳಲ್ಲಿ ಏನೋ ಏರುಪೇರಾಗಿದೆ ಅಷ್ಟೇ ಅಲ್ಲದೆ ಬೇರೇನೂ ಅಲ್ಲ. ಕಣ್ಣುಗಳ ಮೇಲೆ ಅಧಿಕ ಒತ್ತಡ ಬಿದ್ದಿರಬೇಕು.
ಆರಿ ಹೋದ ಕ್ಯಾಂಡಲನ್ನು ನಾನು ಮತ್ತೆ ಉರಿಸಿ, ಬೆಂಕಿಗೂಡಿಗೆ ಬಗ್ಗಿದಾಗ ನಾನು ನಡುಗುತ್ತಿರುವುದನ್ನು ನೋಡಿ ನಾನು ಒಮ್ಮೆಲೇ, ಯಾರೋ ನನ್ನನ್ನು ಹಿಂದಿನಿಂದ ಸ್ಪರ್ಶಿಸಿದಂತೆ, ನೆಟ್ಟಗೆ ನಿಂತುಕೊಂಡೆ.
ಈಗ ಖಂಡಿತವಾಗಿಯೂ ನನ್ನ ನೆಮ್ಮದಿ ಕದಡಿತ್ತು.
ನಾನು ಯಾವುದೋ ಹಾಡನ್ನು ಗುನುಗುತ್ತಾ ನಡೆದಾಡತೊಡಗಿದೆ. ಬಾಗಿಲನ್ನು ಡಬಲ್ ಲಾಕ್ ಮಾಡಿದೆ. ನೆಮ್ಮದಿಯಾಯಿತು. ಈಗಂತೂ ಯಾರೂ ಒಳಗೆ ಬರಲು ಸಾಧ್ಯವಿರಲಿಲ್ಲ.
ನಾನು ಕುಳಿತುಕೊಂಡು ಬಹಳ ಹೊತ್ತು ಈ ಘಟನೆಯ ಬಗ್ಗೆ ಹೋಚಿಸಿದೆ. ನಂತರ ಮಂಚ ಹತ್ತಿ ಕ್ಯಾಂಡಲನ್ನು ನಂದಿಸಿದೆ.
ನಾನು ನನ್ನ ಬೆನ್ನ ಮೇಲೆ ಮಲಗಿದ್ದೆ. ಸ್ವಲ್ಪ ಹೊತ್ತು ಹಾಗೇಯೇ ಬಿದ್ದುಕೊಂಡಿದ್ದೆ. ಯಾಕೋ ರೂಮಿನ ಸುತ್ತ ನೋಡಬೇಕೆಂಬ ಪ್ರಬಲ ಅಪೇಕ್ಷೆ ಕಾಡತೊಡಗಿತು. ನಾನು ಮಗ್ಗಲು ತಿರುಗಿದೆ.
ಬೆಂಕಿಗೂಡಿನಲ್ಲಿ ಬೆಂಕಿ ಹೆಚ್ಚು ಕಮ್ಮಿ ನಂದಿ ಹೋಗುತ್ತಲಿತ್ತು. ಕೆಲವು ಕೆಂಡಗಳಷ್ಟೇ ಮಿನುಗುತ್ತಾ ಕುರ್ಚಿಯ ಬುಡದಲ್ಲಿ ಅಸ್ಪಷ್ಟ ಬೆಳಕು ಚೆಲ್ಲಿದ್ದವು. ಕುರ್ಚಿಯ ಮೇಲೆ ಯಾರೋ ಕುಳಿತಿರುವಂತೆ ನನಗೆ ಭಾಸವಾಯಿತು.
-6-
ನಾನು ತಕ್ಷಣ ಬೆಂಕಿ ಕಡ್ಡಿ ಗೀರಿದೆ. ನಾನು ಮೋಸ ಹೋಗಿದ್ದೆ. ಅಲ್ಲಿ ಯಾರೂ ಇರಲಿಲ್ಲ. ಆದರೂ, ನಾನು ಎದ್ದೆ. ಕುರ್ಚಿಯನ್ನು ಅಲ್ಲಿಂದ ತೆಗೆದು ನನ್ನ ಮಂಚದ ಹಿಂಭಾಗದಲ್ಲಿ ಅಡಗಿಸಿ ನಿದ್ದೆ ಮಾಡಲು ಪ್ರಯತ್ನಿಸಿದೆ. ಆದರೆ, ನನ್ನ ಕನಸಿನಲ್ಲಿ ಅದೇ ದೃಶ್ಯ ಪುನರಾವರ್ತನೆಯಾಗತೊಡಗಿತು. ನಾನು ಒಮ್ಮೆಲೇ ಎದ್ದು ಕುಳಿತುಕೊಂಡು ಕ್ಯಾಂಡಲನ್ನು ಹಚ್ಚಿದೆ. ಮತ್ತೆ ನಿದ್ದೆ ಹೋಗುವ ಆಲೋಚನೆಯನ್ನು ಬಿಟ್ಟು ಬಿಟ್ಟೆ.
ಆದರೂ, ಎರಡು ಭಾರಿ ನನಗೆ ನಿದ್ದೆ ಹತ್ತಿತು. ಎರಡು ಭಾರಿಯೂ ಮತ್ತೆ ಅದೇ ದೃಶ್ಯ. ನಾನು ಖಂಡಿತವಾಗಿಯೂ ಹುಚ್ಚನಾಗುತ್ತಿದ್ದೇನೆಂದು ಭಾಸವಾಗತೊಡಗಿತು. ರಾತ್ರಿ ಸರಿದು ಹಗಲಾದಾಗ ನನ್ನ ವ್ಯಾಧಿ ಗುಣವಾಯಿತೆಂದೆನಿಸಿ ನಡು ಮಧ್ಯಾಹ್ನದವರೆಗೆ ನಿದ್ದೆ ಹೋದೆ.
ಇದೆಲ್ಲಾ ಮುಗಿದು ಹೋದ ಅಧ್ಯಾಯ. ರಾತ್ರಿ ಜ್ವರ ಕಾಣಿಸಿಕೊಂಡಿದ್ದರಿಂದಾಗಿ ಈ ರೀತಿಯ ದುಃಸಪ್ನ ಬಿದ್ದಿರಬೇಕು ಅಂದುಕೊಂಡೆ. ಆದರೂ, ನಾನೊಬ್ಬ ಶತಮೂರ್ಖನೆಂದೆನಿಸಿತು.
ಆ ದಿನ ಸಂಜೆಯ ಹೊತ್ತು ತುಂಬಾ ಸಂತೋಷದಿಂದ ಕಳೆದೆ. ಹೋಟೆಲಿನಲ್ಲಿ ಉಂಡು, ರಂಗಮಂದಿರಕ್ಕೆ ಹೋಗಿ ಮನೆಗೆ ಹಿಂದಿರುಗಿದೆ. ಮನೆಗೆ ಹತ್ತಿರ ಹತ್ತಿರವಾಗುತ್ತಿದ್ದಂತೆ ಒಂದು ವಿಚಿತ್ರ ನಮೂನೆಯ ಆತಂಕಕ್ಕೆ ಒಳಗಾದೆ. ಮತ್ತೆ ಅವನನ್ನು ಕಾಣುವ ಭಯವಾಗತೊಡಗಿತು. ನನಗೆ ಅವನ, ಅವನ ಇರುವಿಕೆಯ ಬಗ್ಗೆಯಾಗಲೀ ಸ್ವಲ್ಪವೂ ಹೆದರಿಕೆ ಇರಲಿಲ್ಲ. ಅವನ ಇರುವಿನ ಬಗ್ಗೆ ನನಗೆ ಕಿಂಚಿತ್ತೂ ನಂಬಿಕೆ ಇರಲಿಲ್ಲವಾದರೂ ಮತ್ತೆ ಮೋಸ ಹೋಗುತ್ತೇನೋ ಎನ್ನುವ ಹೆದರಿಕೆ ಇತ್ತು. ಮತ್ತೆ ಹೊಸ ಭ್ರಾಂತಿಗೆ ಒಳಗಾಗಿ ನನ್ನನ್ನು ಭಯ ಆವರಿಸಿಕೊಳ್ಳುವ ಹೆದರಿಕೆ ಕಾಡುತ್ತಿತ್ತು.
ಒಂದು ತಾಸಿಗೂ ಮೇಲ್ಪಟ್ಟು ನಾನು ರಸ್ತೆಯಲ್ಲಿ ಅಡ್ಡಾಡಿದೆ. ನಂತರ ನಾನೊಬ್ಬ ಮೂರ್ಖನೆಂದೆನಿಸಿತು. ನನ್ನ ರೂಮಿನ ಕಡೆಗೆ ಹೆಜ್ಜೆ ಹಾಕಿದೆ. ನಾನು ಎಷ್ಟು ದೀರ್ಘವಾಗಿ ಉಸಿರಾಡುತ್ತಿದ್ದೆನೆಂದರೆ ನನಗೆ ಮೆಟ್ಟಿಲುಗಳನ್ನು ಹತ್ತುವುದೇ ಕಷ್ಟವಾಗತೊಡಗಿತು. ಸುಧಾರಿಸಿಕೊಳ್ಳುತ್ತಾ ಬಾಗಿಲ ಬಳಿ ಹತ್ತು ನಿಮಿಷ ಸುಮ್ಮನೇ ನಿಂತೆ. ನಂತರ ಎಲ್ಲಿಂದಲೋ ನನಗೆ ಒಮ್ಮೆಲೇ ಧೈರ್ಯ ಬಂದು ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಬಾಗಿಲನ್ನು ತೆರೆದು ಕೈಯಲ್ಲಿದ್ದ ಕ್ಯಾಂಡಲನ್ನು ಉರಿಸಿ ಒಳಗೆ ಹೋದೆ. ಅರೆ ತೆರೆದಿದ್ದ ನನ್ನ ಬೆಡ್ರೂಮಿನ ಬಾಗಿಲನ್ನು ಕಾಲಿನಿಂದ ತಳ್ಳಿ ಹೆದರಿಕೆಯಿಂದಲೇ ಬೆಂಕಿಗೂಡಿನ ಕಡೆಗೆ ನೋಡಿದೆ. ಅಲ್ಲಿ ಯಾರೂ ಇರಲಿಲ್ಲ. ನನಗೆ ಬಹಳ ನೆಮ್ಮದಿ ಮತ್ತು ಖುಷಿಯಾಯಿತು. ರೂಮಿನಲ್ಲಿ ನಿಶ್ಚಿಂತೆಯಿಂದ ಓಡಾಡಿದೆನಾದರೂ ಕಿವಿಗಳು ಕಣ್ಣುಗಳು ಮಾತ್ರ ಎಚ್ಚರವಾಗಿದ್ದವು. ಸಂದು ಮೂಲೆಗಳಲ್ಲಿನ ಕತ್ತಲೆ ನನಗೆ ಗಾಬರಿಯನ್ನುಂಟು ಮಾಡಿತ್ತು.
ಅಂದು ರಾತ್ರಿ ನಾನು ಸರಿಯಾಗಿ ನಿದ್ದೆ ಮಾಡಲಿಲ್ಲ. ಸಣ್ಣ ಪುಟ್ಟ ಸದ್ದುಗಳಿಗೂ ಬೆಚ್ಚಿ ಬಿದ್ದು ಎಚ್ಚರಗೊಳ್ಳುತ್ತಿದ್ದೆ. ಆದರೂ, ಅವನು ಕಾಣಿಸಲಿಲ್ಲ. ಪಿಶಾಚಿ ತೊಲಗಿರಬೇಕು.
-7-
ಅಂದಿನಿಂದ ರಾತ್ರಿ ಹೊತ್ತು ನಾನೊಬ್ಬನೇ ಇರಲು ಹೆದರಿಕೆಯುಂಟಾಗಿದೆ. ನನ್ನ ರೂಮಿನಲ್ಲಿ, ನನ್ನ ಸನಿಹದಲ್ಲೇ, ನನ್ನ ಸುತ್ತ ದೆವ್ವವಿರುವುದು ನನಗೆ ಮನದಟ್ಟಾಗಿದೆ. ಆದರೆ, ಅದು ನನಗೆ ಮತ್ತೆ ಕಾಣಿಸಿಕೊಂಡಿಲ್ಲ.
ಒಂದು ವೇಳೆ ಕಾಣಸಿಕ್ಕಿದರೂ, ನಾನು ದೆವ್ವ ಪಿಶಾಚಿಗಳ ಬಗ್ಗೆ ನಂಬದಿರುವುದರಿಂದ ನನಗೇನೂ ಅನಿಸುತ್ತಿಲ್ಲ.
ಆದರೂ, ಅದರ ಕುರಿತೇ ಯೋಚಿಸುತ್ತಿರುವುದರಿಂದ ನನಗೆ ಚಿಂತೆಯಾಗುತ್ತಿದೆ. ಅವನ ಬಲಗೈ ಕುರ್ಚಿಯ ತೋಳಿನಿಂದ ಕೆಳಗೆ ನೇತಾಡುತ್ತಿರುವ, ಅವನ ತಲೆ ಎಡಗಡೆಗೆ ವಾಲಿಕೊಂಡು ನಿದ್ದೆ ಮಾಡುತ್ತಿರುವಂತ ದೃಶ್ಯ—ಆ ಕುರಿತು ನನಗೆ ಯೋಚಿಸುವುದೂ ಬೇಡವೆನಿಸಿದೆ! ಆದರೂ, ನನಗೆ ಈ ಕುರಿತು ಯಾಕಿಷ್ಟು ಗೀಳು? ಅವನ ಕಾಲುಗಳು ಬೆಂಕಿಗೆ ಎಷ್ಟೊಂದು ಹತ್ತಿರವಾಗಿದ್ದವು!
ಅವನು ನನಗೆ ಬಹಳಷ್ಟು ಕಾಡುತ್ತಿದ್ದಾನೆ. ಯಾರವನು? ನನ್ನ ಪುಕ್ಕಲು ಕಲ್ಪನಾವಿಲಾಸದಲ್ಲಿ, ನನ್ನ ಭಯದಲ್ಲಿ, ನನ್ನ ಸಂಕಟದಲ್ಲಿ ಬಿಟ್ಟರೆ ವಾಸ್ತವವಾಗಿ ಅವನಿಲ್ಲವೆಂದು ನನಗೆ ಗೊತ್ತು. ಹೇಗೆ ತರ್ಕ ಮಾಡಿದರೂ, ಮನಸ್ಸು ಗಟ್ಟಿ ಮಾಡಿಕೊಂಡರೂ ನನಗೆ ಮನೆಯಲ್ಲಿ ಇರುವುದಕ್ಕಾಗುತ್ತಿಲ್ಲ. ಏಕೆಂದರೆ ಅವನಲ್ಲಿದ್ದಾನೆಂದು ನನಗೆ ಗೊತ್ತು. ಅವನು ನನಗೆ ಮತ್ತೆ ಕಾಣಿಸುವುದಿಲ್ಲವೆಂದು ಗೊತ್ತು, ಅವನು ಮತ್ತೆ ಕಾಣಿಸಿಕೊಳ್ಳುವುದಿಲ್ಲ. ಅದು ಮುಗಿದು ಹೋದ ಕತೆ. ಆದರೂ, ಅವನು ನನ್ನ ಆಲೋಚನೆಗಳಲ್ಲಿ ಇದ್ದಾನೆ. ಅವನು ಅದೃಶ್ಯನಾಗಿದ್ದರೂ, ಅವನ ಇರುವನ್ನು ಅಲ್ಲಗಳೆಯಲಾಗದು. ಅವನು ಬಾಗಿಲುಗಳ ಹಿಂದೆ, ಕಪಾಟಿನೊಳಗೆ, ಮಂಚದ ಕೆಳಗೆ, ಎಲ್ಲಾ ಕತ್ತಲ ಜಾಗಗಳಲ್ಲಿ ಇದ್ದಾನೆ. ಕ್ಯಾಂಡಲನ್ನು ಹಚ್ಚಿ ಕಪಾಟಿನ ಬಾಗಿಲನ್ನು ತೆರೆದರೆ, ಮಂಚದ ಕೆಳಗೆ ನೋಡಿದರೆ, ಕತ್ತಲ ಜಾಗಗಳಲ್ಲಿ ನೋಡಿದರೆ ಅವನು ಕಾಣಸಿಗುವುದಿಲ್ಲ. ಆದರೆ, ಅವನು ನನ್ನ ಹಿಂದೆಯೇ ಇದ್ದಾನೆಂದು ಭಾಸವಾಗುತ್ತದೆ. ಅವನು ಎಂದಿಗೂ ನೋಡಲು ಸಿಗುವುದಿಲ್ಲವೆಂದು ಗೊತ್ತಿದ್ದೂ ನಾನು ಹುಡುಕುತ್ತಿರುತ್ತೇನೆ. ಆದರೆ, ಅವನು ನನ್ನ ಹಿಂದೆಯೇ ಇರುತ್ತಾನೆ!
ಇದು ಅತ್ಯಂತ ಭೀಕರವಾಧ ದಡ್ಡತನ. ಆದರೆ, ನಾನು ಏನು ಮಾಡಲಿ? ಆದರೆ, ನನ್ನ ಜೊತೆ ಇನ್ನೊಬ್ಬರಿದ್ದರೆ ಅವನು ಖಂಡಿತ ನನ್ನನ್ನು ಬಿಟ್ಟು ಹೋಗುತ್ತಾನೆ. ನಾನು ಏಕಾಂಗಿಯಾಗಿದ್ದೇನೆನ್ನುವ ಒಂದೇ ಕಾರಣಕ್ಕೆ ಅವನು ನನ್ನ ಜೊತೆಯಲ್ಲಿದ್ದಾನೆ!






0 Comments