ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ಲಾಗ್ ಪಿಕ್ : ಐದಂಕ ಕೊಡಿಸಿದ ಅರುಂಧತಿ ರಾಯ್!

ಸಹ್ಯಾದ್ರಿ ನಾಗರಾಜ್

ಬ್ಲಾಗ್ ಪಿಕ್

ಹೌದು, ಅರುಂಧತಿ ರಾಯ್ ನನಗೊಮ್ಮೆ ಐದಕ್ಕೆ ಐದೂ ಅಂಕ ಸಿಗುವಂತೆ ಮಾಡಿದ್ದರು. ಯಾವತ್ತೂ ಯಾರಿಗೂ ಅಷ್ಟಕ್ಕೆ ಅಷ್ಟೇ ಅಂಕ ಕೊಡದ ಪೂರ್ಣಾನಂದ ಮೇಸ್ಟ್ರು 1999ರ ಔಟ್’ಲುಕ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದ ಅರುಂಧತಿಯವರ ಲೇಖನದ(The Greater comman good) ಬಗ್ಗೆ ನಾ ಬರೆದ ಬರಹಕ್ಕೆ ಮತ್ತು ತರಗತಿಯಲ್ಲಿ ನಾನದನ್ನು ಮಂಡಿಸಿದ್ದಕ್ಕೆ ಐದಕ್ಕೆ ಐದು ಮಾರ್ಕು ಕೊಟ್ಟು ದಂಗುಬಡಿಸಿದ್ದರು. ಸ್ವತಃ ಅವರೇ ಅದನ್ನು ಹೇಳಿದರೂ ಮಾರ್ಕನ್ನು ಕಣ್ಣಾರೆ ಕಾಣೋವರೆಗೂ ನಾನಂತೂ ನಂಬಿರಲಿಲ್ಲ. ಆದರೆ ಅದು ನಿಜವಾಗಿತ್ತು. ನನ್ನ ಮಾಸ್ಟರ್ ಡಿಗ್ರಿಯಲ್ಲಿ ಅಥದ್ದೊಂದು ಮರೆಯಲಾಗದ ಖುಷಿ ಕೊಟ್ಟ ಆ ಟಿಪ್ಪಣಿ ರೂಪದ ಬರಹ ಯಥಾವತ್ತಾಗಿ ಹೀಗಿದೆ…

*ಅರುಂಧತಿ ರಾಯ್ ಲೇಖನ ಆರಂಬಿಸುವುದೇ ಅಪೂರ್ವವೆಂಬಂತಿದೆ. ನೆಹರೂರವರ “ಅಭಿವೃದ್ಧಿಗಾಗಿ, ದೇಶಕ್ಕಾಗಿ ಎಲ್ಲ ಜನರೂ ತ್ಯಾಗ ಮಾಡಬೇಕು” ಎಂಬ ಹೇಳೀಕೆಯನ್ನು ಆಧರಿಸಿಯೇ ಲೇಖನ ಶುರುಮಾಡುವ ಅರುಂಧತಿ, ಎರಡನೇ ಪ್ಯಾರಾದಲ್ಲೇ “I stood on a hill and loughed out loud” ಎಂದು ಬರೆಯುತ್ತಾರೆ. ಮರು ಪ್ಯಾರಾ ಅವರು ನಗಲಿಕ್ಕಿದ್ದ ಕಾರಣವನ್ನು ವಿವರಿಸುತ್ತದೆ. ಅದೇನೆಂದರೆ, ಸರ್ದಾರ್ ಸರೋವರ ಕಾಮಗಾರಿಗೆ ತಡೆಯಾಜ್ಞೆ ನೀಡುವುದಕ್ಕೂ ಮುನ್ನ ಅಲ್ಲಿಗೆ ಭೇಟಿ ನೀಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ತಂಡ, ಸರೋವರದಿಂದ ನಿರಾಶ್ರಿತರಾದವರ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಆಡಲು ಪಾರ್ಕುಗಳಿವೆಯಾ ಎಂದು ಪರಿಶೀಲಿಸಿತ್ತಂತೆ! ಆ ಜನಗಳ ಬದುಕನ್ನು ಕಿತ್ತುಕೊಂಡು ಅವರನ್ನು ನಿರ್ವಸಗತಿರನ್ನಾಗಿಸಿದ ಸರ್ಕಾರದ ಪ್ರತಿನಿಧಿಗಳಂತೆ ಬಂದ ಅವರು ಮಕ್ಕಳಿಗೆ ಆಡಲು ಪಾರ್ಕುಗಳಿವೆಯಾ ಎಂದು ನೋಡಿದ್ದರ ಕುರಿತು ಲೇಖಕಿಗೆ ನಗು ಬಂದಿದೆ. ವಿಷಯ ನಮಗೂ ನಗು ತರಿಸುವಂತೆಯೇ ಇದೆ.

ಹೀಗೆ ಇಡೀ ಲೇಖನ ತನ್ನ ನಿರೂಪಣೆಯಿಂದ ಮತ್ತು ಭರಪೂರ ಮಾಹಿತಿಗಳಿಂದ ಕಡೆಯ ಸಾಲಿನವರೆಗೂ ಕುತೂಹಲದಿಂದಲೇ ಓದಿಸಿಕೊಳ್ಳುತ್ತದೆ. (ಈ ಲೇಖನವನ್ನು ಟೀಕಿಸಿ ಡಾ.ಬಿ.ಜಿ.ವರ್ಗೀಸ್ “The poetry was charming-The facts wrong” ಎಂದು ಅಭಿಪ್ರಾಯಪಟ್ಟಿದ್ದೂ ಉಂಟು. ಇದಕ್ಕೆ ಔಟ್’ಲುಕ್ ನಿಯತಕಾಲಿಕೆ ಮೂಲಕವೇ ಮಾರುತ್ತರ ನೀಡಿದ್ದ ಲೇಖಕಿ, ವಾಸ್ತವಗಳು ಯಾವತ್ತೂ ಸುಳ್ಳಾಗಲಾರವು ಎಂದು ಪ್ರತಿಕ್ರಿಯಿಸಿದ್ದರು. ಜೊತೆಗೆ ತಮ್ಮ ಮೂಲ ಲೇಖನದಲ್ಲಿ ಉಲ್ಲೇಖಿಸದಿರುವ ಸಾಕಷ್ಟು ಸೂಕ್ಷ್ಮ ಸಂಗತಿಗಳನ್ನು ಅಲ್ಲಿ ಕಟ್ಟಿಕೊಡುವ ಪ್ರಯತ್ನವನ್ನೂ ಮಾಡಿದ್ದರು. ಆ ಲೇಖನದ ಆಯ್ದ ಅಂಶಗಳೂ ಇಲ್ಲಿವೆ.) ಅರುಂಧತಿ ಅವರ ನಿರೂಪಣೆಯ ಧಾಟಿ ಹಾಗೂ ಅದರಲ್ಲಿನ ಸರಳತೆಗೆ ಪುಟ್ಟ ನಿದರ್ಶನ: “ನರ್ಮದಾ ಕಣಿವೆ ಕೆಲವು ಮುಖ್ಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಭೂಮಿ ಯಾರದ್ದು? ಈ ನದಿಗಳೆಲ್ಲಾ ಯಾರಿಗೆ ಸೇರಿದ್ದು? ಈ ಮೀನುಗಳು-ಈ ಕಾಡು ಯಾರದು?…ಇತ್ಯಾದಿ. ಇವು ಮುಖ್ಯವಾದ ಪ್ರಶ್ನೆಗಳು. ‘ರಾಜ್ಯ’ವು ಗಂಭೀರವಾಗಿ ಪರಿಗಣಿಸಬೇಕಾದ ಪ್ರಶ್ನೆಗಳು. ಆದರೆ ಇದಕ್ಕೆ ‘ರಾಜ್ಯ’ವು ಸುಮ್ಮನೆ ಉತ್ತರಿಸಲಿಲ್ಲ. ಸೇನೆ, ಪೊಲೀಸರು, ರಾಜಕೀಯ ದಲ್ಲಾಳಿಗಳು, ನ್ಯಾಯಾಲಯಗಳ ಮೂಲಕ ಉತ್ತರಿಸಿತು-ತೀರಾ ಒರಟು ಒರಟಾಗಿ!”

‘ನರ್ಮದಾ ಬಚಾವೋ ಆಂದೋಲನ’ ಹುಟ್ಟಿಕೊಂಡು, ಯಾವಾಗ ಸುಪ್ರೀಂ ಕೋರ್ಟ್’ಗೆ ದಾವೆ ಹೋಗಿ, ಮಾಧ್ಯಮಗಳಲ್ಲಿಯೂ ಈ ವಿಷಯ ಕಾಣಿಸಿಕೊಂಡಿತೋ ಆಗ ತಕ್ಷಣ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈ ಸಂಬಂಧದ ದಾಖಲೆಗಳೆಲ್ಲವನ್ನೂ ‘ರಹಸ್ಯವಾಗಿ’ ಇರಿಸುವ ಪ್ರಯತ್ನ ನಡೆಸಿತು ಎಂಬ ಮಹತ್ವದ ಅಂಶವನ್ನು ಲೇಖಕಿ ಉಲ್ಲೇಖಿಸಿದ್ದಾರೆ. ಇನ್ನು ಲೇಖನದಲ್ಲಿ ಹಲವರು ಮಹಾನೀಯರ ಹೇಳಿಕೆಗಳು ಯಥಾವತ್ತಾಗಿ ಉಲ್ಲೇಕವಾಗಿದ್ದು ಅವು ಆಗಿನ ಪರಿಸ್ಥಿತಿಯನ್ನು ಮತ್ತು ಆ ಸುದ್ದಿವೀರರ ಮನಸ್ಥಿತಿಗಳನ್ನು ಬಿಂಬಿಸುವಂತಿವೆ. ಅಂತಹ ಎರಡು ಉದಾಹರಣೆಗಳು ಇಲ್ಲಿವೆ…

1.”ಸರ್ದಾರ್ ಸರೋವರ ಅಣೆಕಟ್ಟು ದುಬಾರಿ ಅಂತ ಜನ ಹೇಳ್ತಿದ್ದಾರೆ. ಆದ್ರೆ ಅದು ಮಿಲಿಯನ್’ಗಳಷ್ಟು ಜನಕ್ಕೆ ಕುಡಿಯೋ ನೀರು ಕೊಡುತ್ತೆ. ಜೀವನಕ್ಕೆ ಆಧಾರವಾಗುತ್ತೆ. ಅದಕ್ಕೆ ಬೆಲೆ ಕಟ್ಟೋಕೆ ಸಾಧ್ಯಾನಾ? ನಾವು ಉಸಿರಾಡೋ ಗಾಳಿಗೆ ಬೆಲೆ ಇದೆಯಾ? ನಾವು ಬದುಕಬೇಕು-ಅದಕ್ಕಾಗಿ ನೀರು ಕುಡೀಬೇಕು. ಈ ಮೂಲಕ ನಾವು ಗುಜರಾತ್ ರಾಜ್ಯಕ್ಕೆ ವೈಭವವನ್ನು ತರ್ತಾ ಇದ್ದೇವೆ.” -(1993ರ ದಿಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ) ಊರ್ಮಿಳಾಬೆನ್ ಪಟೇಲ್, ಆಗಿನ ಗುಜರಾತ್ ಸಿಎಂ ಚಿಮನ್’ಬಾಯಿ ಪಟೇಲ್ ಪತ್ನಿ.

2.”ನಾನು ನಿಮ್ಮೆಲ್ಲರಿಗೂ ಮನವಿ ಮಾಡ್ತಿದ್ದೀನಿ, ಅಣೆಕಟ್ಟೆ ಬರೋ ಮುಂಚೆ ನಿಮ್ಮ ಮನೆಗಳನ್ನು ಬಿಟ್ಟು ಹೊರಬನ್ನಿ. ನೀವು ಹೊರಬರೋದೇ ಒಳ್ಳೇದು. ಇಲ್ದಿದ್ರೆ ನೀರನ್ನು ಹರಿಸುತ್ತೇವೆ, ಎಲ್ಲರನ್ನೂ ಮುಳುಗಿಸ್ತೇವೆ”

-(ಪೋಂಗ್ ಅಣೆಕಟ್ಟೆ ಕುರಿತ 1961ರ ಸಾರ್ವಜನಿಕ ಸಭೆಯಲ್ಲಿ) ಮೊರಾರ್ಜಿ ದೇಸಾಯಿ.

ಲೇಖನದ ಮಧ್ಯಂತರದಲ್ಲಿ ಮತ್ತೆ ನೆಹರೂರವರ ಆಧುನಿಕತೆ ಹಾಗೂ ಅಣೆಕಟ್ಟೆ ಪ್ರೀತಿಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಲೇಖಕಿ ಕೈಗೆತ್ತಿಕೊಳ್ಳುತ್ತಾರೆ. ನಿಜವಾದ ಅಭಿವೃದ್ಧಿ ನೆಹರೂಗೆ ಗೊತ್ತಿತ್ತೇ ಅಥವಾ ಗೊತ್ತಿದ್ದೂ ಪಾಲಿಸಲಿಲ್ಲವೇ/ಪಾಲಿಸಲಾಗಲಿಲ್ಲವೇ ಎಂಬ ಸಂಶಯಗಳೊಟ್ಟಿಗೇ ಕೆಲವು ಮಹತ್ವದ ವಿವರಗಳನ್ನು ಇಲ್ಲಿ ಕಾಣಬಹುದು. ನೆಹರೂ ಕಾಲದಲ್ಲಿ ಅಣೆಕಟ್ಟೆ ಕಟ್ಟೋದು ಅಂದರೆ ಅದು ದೇಶ ಕಟ್ಟೋದಕ್ಕೆ ಸಮ ಎಂಬಂತಾಗಿತ್ತು. ಆದರೆ ನೆಹರೂ ಚಿಂತನೆ ಮತ್ತು ಅಣೆಕಟ್ಟೆಗಳೆಡೆಗಿನ ವ್ಯಾಮೋಹ ಅಣೆಕಟ್ಟೆಗಳನ್ನು ಮಾತ್ರ ಕಟ್ಟಿಸಲಿಲ್ಲ; ಕೇವಲ ಹೊಸ ನೀರಾವರಿ ತರಲಿಲ್ಲ. ಬದಲಾಗಿ ಸಾವಿರಾರು ವರ್ಷಗಳಿಂದ ಗ್ರಾಮೀಣ ಸಮುದಾಯಗಳು ರೂಢಿಸಿಕೊಂಡಿದ್ದ ಸಣ್ಣ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿತು.

ಲೇಖನದುದ್ದಕ್ಕೂ ಮಾಹಿತಿಗಳನ್ನು ಆಧರಿಸಿಯೇ ವಿಶ್ಲೇಷಣೆ ಆರಂಭಿಸುವ ಲೇಖಕಿ ಕೆಲವು ಸೂಕ್ಷ್ಮವಾದ ಮಾಹಿತಿಗಳನ್ನೂ ದಾಖಲಿಸಿದ್ದಾರೆ. ಸದ್ಯ ನಮ್ಮ ದೇಶ ವಿಶ್ವದ ಅತ್ಯಧಿಕ ಅಣೆಕಟ್ಟೆಗಳಿರುವ ಮೂರನೇ ದೇಶ. ಕೇಂದ್ರ ಜಲ ಆಯೋಗದ ಪ್ರಕಾರ ನಮ್ಮಲ್ಲಿ ಸದ್ಯ ಮೂರು ಸಾವಿರದ ಆರುನೂರು ಅಣೆಕಟ್ಟೆಗಳು-ಬೃಹತ್ ಅಣೆಕಟ್ಟೆಗಳಿವೆ! ಅದರಲ್ಲಿ ಮೂರು ಸಾವಿರದ ಮುನ್ನೂರು ಅಣೆಕಟ್ಟೆಗಳು ಸ್ವಾತಂತ್ರಾನಂತರ ಕಟ್ಟಿದವು! ಜತೆಗೆ ಸದ್ಯ ಒಮದು ಸಾವಿರಕ್ಕೂ ಅಧಿಕ ಬೃಹತ್ ಅಣೆಕಟ್ಟೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಾಹಿತಿಗಳನ್ನು ಆಧರಿಸಿ ಲೇಖಕಿ ಇದಕ್ಕೆ ವ್ಯತಿರಿಕ್ತವಾದ ಇನ್ನೊಂದು ಬದಿಯ ವಾಸ್ತವವನ್ನು ನಮ್ಮ ಮುಂದಿಡುತ್ತಾರೆ; ಇಷ್ಟೆಲ್ಲಾ ಅಣೆಕಟ್ಟೆಗಳಿದ್ದಾಗ್ಯೂ, ಅಣೆಕಟ್ಟೆಗಳಿಂದ ಮೂಲಭೂತ ಸೌಕರ್ಯ ಸುಲಭಸಾಧ್ಯವೆಂದೇ ನಂಬಿದ್ದರೂ, ಅಣೆಕಟ್ಟೆಗಳಿಂದ ಸಾಕಷ್ಟು ಉಪಕಾರವಾಗುತ್ತದೆ ಎಂದೇ ಅದರ ಬಗೆಗೆ ಒಲವಿರುವವರು ಬೊಬ್ಬೆ ಹಾಕುತ್ತಾರಾದರೂ…ನಮ್ಮಲ್ಲಿ 1/5ರಷ್ಟು ಜನಕ್ಕೆ (200 ಮಿಲಿಯನ್) ಸುರಕ್ಷಿತ ಕುಡಿಯುವ ನೀರು ಸಿಗುತ್ತಿಲ್ಲ. 2/3ರಷ್ಟು ಜನಕ್ಕೆ(600 ಮಿಲಿಯನ್) ಮೂಲಭೂತ ಸೌಕರ್ಯಗಳಿಲ್ಲ!

ಲೇಖನ ಮುಂದುವರಿದು ಅಣೆಕಟ್ಟೆಗಳ ಹಿಂದಿರುವ ಹುನ್ನಾರ ಹಾಗೂ ಅಪಾಯಗಳ ಬಗೆಗೆ ಮಾತನಾಡುತ್ತದೆ. ಬೃಹತ್ ಅಣೆಕಟ್ಟೆ ಅನ್ನೋದು ಹೊರಗಿನ ಆಕರ್ಷಣೆ. ಆದರೆ ಅದು ನಿಜಕ್ಕೂ ಅಪ್ರಯೋಜಕ. ಅಷ್ಟೇ ಅಲ್ಲ, ಪ್ರಜಾಪ್ರಭುತ್ವ ವಿರೋಧಿಯೂ ಹೌದು. ಸರ್ಕಾರವು ರೈತರಿಂದ ಸ್ವಾತಂತ್ರವನ್ನು ಕಬಳಿಸಲು ಇರುವ ಪ್ರಭಾವಿ ದಾರಿ ಅದು. ನೀರು, ಭೂಮಿ ಮತ್ತು ಕೃಷಿಯನ್ನು(ನೀರಾವರಿ) ಬಡವರಿಂದ ಕಿತ್ತುಕೊಂಡು ಉಳ್ಳವರಿಗೆ ಕಾಣಿಕೆ ಕೊಡುವ ಹುನ್ನಾರ. ಅವರು ಕಟ್ಟುವ ಸರೋವರಗಳು ಬೃಹತ್ ಸಂಖ್ಯೆಯ ಜನರನ್ನು ನಿರ್ವಸತಿಗೊಳಿಸುತ್ತವೆ. ಅವರ ಭೂಮಿಯನ್ನೇ ಕಿತ್ತುಕೊಂಡು ಅವರನ್ನು ನಾಯಿಗಳು ವಾಸಿಸುವಂಥ ವಸತಿಗಳಿಗೆ ನೂಕಲಾಗುತ್ತದೆ. ಜತೆಗೆ ಭೂಮಿಯನ್ನು ನಾಶಗೊಳಿಸುವ ಪ್ರವಾಹ, ಭೂಕಂಪ, ನೀರಿನ ಅಸಮತೋಲನ ಹಂಚಿಕೆ, ಕ್ಷಾರತೆ ಹೆಚ್ಚಳ, ಸಾಂಕ್ರಾಮಿಕ ರೋಗಗಳ ಹರಡುವಿಕೆಗೂ ಕಾರಣವಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ‘ಅಣೆಕಟ್ಟು ನಿರ್ಮಿಸುವ ಕೈಗಾರಿಕೆ’ಯು ಸಮಸ್ಯಾತ್ಮಕವಾಗಿತ್ತು. ಹಾಗಾಗಿ ಆ ದೇಶಗಳು ಹಳೆಯ ಶಸ್ತ್ರಗಳು, ನಿಷೇಧಿತ ರಾಸಾಯನಿಕಗಳು ಮತ್ತು ಇನ್ನೇನು ಜೀವ ಕಳೆದುಕೊಳ್ಳಲಿದ್ದ ಯುದ್ಧ ವಿಮಾನಗಳ ಜತೆಗೆ ಅಣೆಕಟ್ಟೆಗಳನ್ನೂ ರಫ್ತು ಮಾಡಿದವು ಎಂಬ ಅಚ್ಚರಿಯ ಸತ್ಯಗಳನ್ನು ಅರುಂಧತಿ ಕಟ್ಟಿಕೊಡುತ್ತಾರೆ.

ಅಣೆಕಟ್ಟೆಗಳು ಕೇವಲ ಪರಿಸರಕ್ಕೆ, ಆ ಮೂಲಕ ಪರೋಕ್ಷವಾಗಿ ಮನುಷ್ಯರಿಗೆ ತೊಂದರೆಗಳನ್ನು ತಂದೊಡ್ಡುತ್ತವೆ ಎಂಬುದು ಪಕ್ಕಕ್ಕಿರಲಿ. ಅದರ ನೇರ ಪರಿಣಾಮವಾದ ‘ಒಕ್ಕಲೆಬ್ಬಿಸುವಿಕೆ’ ನಿಜಕ್ಕೂ ಅಮಾನವೀಯತೆಯ ಪರಮಾವಧಿ. ಹೀಗನ್ನಿಸುವುದು ಲೇಖಕಿ ನೀಡುವ ಅಂಕಿ-ಅಂಶಗಳಿಂದ. 54 ಅಣೆಕಟ್ಟೆಗಳನ್ನು ನಿರ್ಮಿಸಿದ Indian institute of public administration ಸಂಸ್ಥೆ ಪ್ರಕಾರ ಅಷ್ಟು ಅಣೆಕಟ್ಟೆಗಳಿಂದಾಗಿ ನಿರಾಶ್ರಿತರಾದವರ ಅಂದಾಜು ಸಂಖ್ಯೆ 44,182. ಹಾಗಾದರೆ ಲೆಕ್ಕ ಹಾಕಿ, 3,300 ಅಣೆಕಟ್ಟೆಗಳಿಗೆ? ಸರಾಸರಿ 10 ಸಾವಿರ ಅಂದುಕೊಂಡರೂ 3,300 ಅಣಕಟ್ಟೆಗಳಿಗೆ ಎಷ್ಟಾಯಿತು?! 33 ಮಿಲಿಯನ್ ಜನ. ಕಳೆದ ಐವತ್ತು ವರ್ಷಗಳಲ್ಲಾದ ನಿರಾಶ್ರಿತರ ಸಂಖ್ಯೆಯಿದು-ಕೇವಲ ಅಂದಾಜಿನಲ್ಲಿ. ಈ ಎಲ್ಲ ನಿರಾಶ್ರಿತರೂ ‘ಗುರುತುಗಳಿಲ್ಲದೆ ಉಳಿದ ಯುದ್ಧ ಕೈದಿಗಳಂತೆ’ ಬದುಕುತ್ತಿದ್ದಾರೆ. 1979ರಲ್ಲಿ ಸರ್ದಾರ್ ಸರೋವರದಿಂದ ಆರು ಸಾವಿರ ಜನರನ್ನು ಗುಳೆ ಎಬ್ಬಿಸಲಾಗಿತ್ತು. 1987ರಲ್ಲಿ ಆ ಸಂಖ್ಯೆ 12 ಸಾವಿರಕ್ಕೇರಿತ್ತು. 1991ರಲ್ಲಿ 27 ಸಾವಿರ, 1992ರಲ್ಲಿ 40 ಸಾವಿರ ಕುಟುಂಬಗಳಿಗೆ ತಲುಪಿತು. ಇದು ಸರ್ಕಾರಿ ಲೆಕ್ಕವಾದರೆ, ನರ್ಮದಾ ಬಚಾವೋ ಆಂದೋಲನದ ಮೂಲಗಳ ಪ್ರಕಾರ 85 ಸಾವಿರ ಕುಟುಂಬಗಳು. ನೆನಪಿರಲಿ-ಈ ಲೇಖನ ಪ್ರಕಟವಾದದ್ದು ಇಲ್ಲಿಗೆ 14 ವರ್ಷಗಳ ಹಿಂದೆ! ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತ ಎಲ್ಲ ಪ್ರಕ್ರಿಯೆಗಳೂ ಅಭಿವೃದ್ಧಿಯ ನೆಪದಲ್ಲಿ, ಸಮಾನತೆ ರೂಪಿಸುವ ಹೆಸರಿನಲ್ಲೇ ನಡೆಯುತ್ತವೆ ಎಂಬುದು ವಿಚಿತ್ರ ಸತ್ಯ. ಈ ಅಸಮಾನತೆ ಹಾಗೂ ನಮ್ಮ ಪ್ರಭುತ್ವದಲ್ಲಿರುವವರ ಅಭಿವೃದ್ಧಿ ಕಲ್ಪನೆಗೂ ಅನ್ಯೋನ್ಯ ಸಂಬಂಧವನ್ನು ನಮ್ಮ ಮುಂದಿರಿಸುವ ಲೇಖನ ಮಾತನಾಡುವುದು ಹೀಗೆ; “ಭಾರತ ಬೆಳವಣಿಗೆ ಕಂಡಿದೆ ನಿಜ. 1950ರಲ್ಲಿ 51 ಮಿಲಿಯನ್ ಟನ್’ಗಳಷ್ಟಿದ್ದ ಆಹಾರೋತ್ಪಾದನೆ ಈಗ 200 ಮಿಲಿಯನ್ ಟನ್’ಗಳು. 1995ರಲ್ಲಿ ಆಹಾರೋತ್ಪಾದನೆ ಅಧಿಕವಾಗಿ 30 ಮಿಲಯನ್ ಟನ್’ಗಳು ಖರ್ಚಾಗದೆ ಉಳಿದಿತ್ತು…..

ಅದೇ ಹೊತ್ತಿಗೆ ಇತ್ತ….

ಶೇಕಡ 40ರಷ್ಟು ಭಾರತದ ಜನರು-350 ಮಿಲಿಯನ್’ಗಿಂತಲೂ ಹೆಚ್ಚು ಜನ-ಬಡತನ ರೇಖೆಗಿಂತ ಕೆಳಗಿನವರಿದ್ದರು. ಇದು 1947ರ ಭಾರತದ ಜನಸಂಖ್ಯೆಗೆ ಸಮ!” ಇದನ್ನು ದೃಷ್ಟಾಂತವನ್ನಾಗಿಟ್ಟುಕೊಂಡ ಲೇಖಕಿ ಅದ್ಭುತವಾದ ಸತ್ಯವೊಂದನ್ನು ಒಂದೇ ಸಾಲಿನಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ… “ಭಾರತೀಯರು ಬಹಳ ಬಡವರು-ತನ್ನ ದೇಶದ ಆಹಾರವನ್ನೂ ಕೊಳ್ಳಲಾಗದಷ್ಟು”. ಹೀಗೆ ಅಭಿವೃದ್ಧಿಯ ಹುಳುಕು ಮತ್ತು ಹುನ್ನಾರಗಳನ್ನು ಹಲವು ಮುಖಗಳ ಸಮೇತ ತೆರೆದಿಡುವ ಲೇಖನ ಮಾರ್ಮಿಕ ಹಾಗೂ ಭಾವುಕವಾಗಿ ಅಂತ್ಯ ಕಾಣುತ್ತದೆ. ಕಡೆಯಲ್ಲಿ ಅರುಂಧತಿ ಬರೆಯುತ್ತಾರೆ…. “ನಮಗೆ ಗೊತ್ತಿದ್ದೋ ಗೊತ್ತಲ್ಲದೆಯೋ ನಾವೆಲ್ಲರೂ ನಂಬಿದ್ದೀವಿ, ನಮ್ಮನ್ನು ನಾವು ನಂಬಿಸಿಕೊಂಡಿದ್ದೀವಿ; ಅಭಿವೃದ್ಧಿಯ ಹೆಸರಿನಲ್ಲಿ, ರಾಷ್ಟ್ರದ ಹಿತಾಸಕ್ತಿಯ ನೆಪದಲ್ಲಿ ‘ಎಲ್ಲ ಸಾಮಾನ್ಯರ ಮಹತ್ವದ ಒಳಿತಿಗಾಗಿ’ ನಮಗೆ ಅಣೆಕಟ್ಟೆಗಳು ಬೇಕೆಂದು! ನೀವು ಅಣೆಕಟ್ಟೆಗಳನ್ನು ಪ್ರೀತಿಸಿ ಅಥವಾ ದ್ವೇಷಿಸಿ. ನಿಮಗೆ ಬೇಕಿದ್ದರೂ ಅಥವಾ ಬೇಡದಿದ್ದರೂ ಒಂದನ್ನು ಮಾತ್ರ ಅರಿತಿರಬೇಕಾಗುತ್ತದೆ-ನಿಮಗೇ ಗೊತ್ತಿಲ್ಲದೆ ನೀವದಕ್ಕೆ ಬೆಲೆ ಕಟ್ಟಲೇಬೇಕಾಗುತ್ತದೆ”.

 

‍ಲೇಖಕರು avadhi

26 April, 2013

1 Comment

  1. NA BALAKRISHNA

    ತಂಗಿ
    ಅರುಂಧತಿಯ ದೊಡ್ಡಣ್ಣ ನಾನಾದರೂ
    ಅವಳ ದಿಟ್ಟ ನಿಲುವಿನ ಮುಂದೆ
    ಪುಟ್ಟ ಮಗು ನಾನು.
    ನೋಡು ನೋಡುತ್ತಲೆ
    ನಿರ್ಭಯದ ಅಕ್ಷರಿ ಬೆಳೆ ಬೆಳೆದು
    ಕಟ್ಟುಪಾಡುಗಳ ಕಾಡಾಚೆ
    ಹೊಸಹಾದಿಗಳ ತುಳಿದು
    ಎತ್ತರದ ಭೂಮಿಕೆಯನೇರಿದ
    ಇವಳ ಪರಿಗೆ ನನ್ನ ಬೆರಗು.
    ಉತ್ತರದ ಗಡಿಬಿಡಿಯ
    ಕಾಡುಮೇಡುಗಳ ನೆರಳಲ್ಲಿ
    ಕುಡುಗೋಲು ಕೋವಿಗಳ ಹಣಾಹಣಿಯಲ್ಲಿ
    ಅಪ್ಪಳಿಸಿದ ಬೂಟುಗಳ
    ತುಳಿತಕ್ಕೆ ನಲುಗಿ ಬಿಕ್ಕಳಿಸಿದ
    ನದಿ ಕಣಿವೆ ಕಂದರ ಗಿರಿ ಗುಡ್ಡಗಳ ತಾಯಾಗಿ
    ಸುರಿವ ನೆತ್ತರು ಕಂಬನಿಯನೊರೆಸಿ
    ಸಾಂತ್ವನದ ಮೊಲೆಯೂಡಿಸಿದ್ದಕ್ಕೆ
    ಉರಿದೆದ್ದ ಉರಿಗದ್ದುಗೆಯ ಕೆಂಗಣ್ಣು.
    ಸರಹದ್ದು ಸರದಾರಿಕೆಯ
    ಸಂಕಲೆಗಳ ನಿವಾಳಿಸಿ ಒಗೆದ
    ಇವಳ ನಿಶಿತ ಬದ್ಧತೆಗೆ
    ಹದ್ದುಮೀರಿದವಳೆಂದೇ ಜರಿದು
    ಹೊರೆ ತಪ್ಪುಗಳ ಹೊರಿಸಿದ್ದು ಜನ ಸಮ್ಮತವೆ?
    ಉಕ್ಕುಕ್ಕಿ ಹರಿದು ಗುಡ್ಡಬೆಟ್ಟಗಳನೂ ಕೊಚ್ಚಿ ಕೊಂಡೊಯ್ಯುವ
    ರಕ್ಕಸ ಸುಳಿ ಸೆಳವು ಚಕ್ರ ರಭಸಕೆ ಸಿಕ್ಕು
    ಕೊಚ್ಚಿ ಹೋಗುವ ಮುನ್ನ
    ಎಚ್ಚೆತ್ತು ನಾಡವರು ತಡೆಯೊಡ್ಡಿ
    ದಡವಾಗಬಲ್ಲರೆ?
    ಧೃಡತೆಯಲಿ ಒಗ್ಗೂಡಿ
    ಘೋಷಿಸುವರೇ ಮತ್ತೆ
    “ದೇಶವೆಂದರೆ ಗದ್ದುಗೆಯಲ್ಲ ಮನುಷ್ಯರೆಂದೇ”
    -ನಾ. ಬಾಲಕೃಷ್ಣ, ಮೈಸೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading