ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿ೦ಗ್ ನ್ಯೂಸ್ : ಶ್ರೀ ಬಿ ವಿ ಕಕ್ಕಿಲ್ಲಾಯ ಇನ್ನಿಲ್ಲ

ಶ್ರೀ ಬಿ ವಿ ಕಕ್ಕಿಲ್ಲಾಯ ಇನ್ನಿಲ್ಲ

ಬಿ ವಿ ಕಕ್ಕಿಲ್ಲಾಯ

ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರೂ, ಭಾರತ ಕಮ್ಯೂನಿಸ್ಟ್ ಪಕ್ಷ (ಸಿ.ಪಿ.ಐ) ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಗಳ ಹಿರಿಯ ನಾಯಕರೂ, ರಾಜ್ಯ ಸಭೆ ಹಾಗೂ ಕರ್ನಾಟಕ ವಿಧಾನ ಸಭೆಗಳ ಮಾಜಿ ಸದಸ್ಯರೂ, ಕರ್ನಾಟಕ ಭೂಸುಧಾರಣಾ ಮಸೂದೆಯ ರೂವಾರಿಗಳೂ, ಪ್ರಶಸ್ತಿ ವಿಜೇತ ಲೇಖಕರೂ, ಚಿಂತಕರೂ ಆದ ಶ್ರೀ ಬಿ.ವಿ. ಕಕ್ಕಿಲ್ಲಾಯರು ಜೂನ್ 4ರಂದು ಬೆಳಗ್ಗೆ 2 ಗಂಟೆಗೆ ಮಂಗಳೂರಿನಲ್ಲಿ ನಿಧನರಾದರು. ಕಕ್ಕಿಲ್ಲಾಯರು ಮೇ 23ರಂದು ಬೆಳಗ್ಗೆ ಮಿದುಳಿನ ರಕ್ತಸ್ರಾವಕ್ಕೆ ತುತ್ತಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ರೈತ ಕಾರ್ಮಿಕರ ಹಕ್ಕುಗಳೇನೆಂಬುದೇ ತಿಳಿಯದಿದ್ದ 1940ರ ದಶಕದಲ್ಲಿ ದಕ ಜಿಲ್ಲೆಯ ರೈತ ಕಾರ್ಮಿಕರನ್ನು ಸಂಘಟಿಸಿ, ಎಲ್ಲಾ ದಬ್ಬಾಳಿಕೆಗಳನ್ನೂ ಎದುರಿಸಿ, ಅವರ ಮೂಲಭೂತ ಹಕ್ಕುಗಳಿಗಾಗಿ ಅನೇಕ ಹೋರಾಟಗಳನ್ನು ಸಂಘಟಿಸುವ ಮೂಲಕ ದಕ ಜಿಲ್ಲೆಯಲ್ಲೂ, ಕರ್ನಾಟಕದ ಹಲವೆಡೆಗಳಲ್ಲೂ ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಗಳನ್ನು ಪ್ರಬಲವಾಗಿ ಬೆಳೆಸಿದ ಶ್ರೇಯ ಕಕ್ಕಿಲ್ಲಾಯರಿಗೂ, ಅವರ ಸಂಗಾತಿಗಳಿಗೂ ಸೇರುತ್ತದೆ. ಅದೇ ಸಮಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯೂ ಸೇರಿದಂತೆ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹಲವು ಹೋರಾಟಗಳಲ್ಲಿಯೂ ಅತ್ಯಂತ ಸಕ್ರಿಯವಾಗಿ ತೊಡಗಿಕೊಂಡಿದ್ದ ಕಕ್ಕಿಲ್ಲಾಯರು ಅದಕ್ಕಾಗಿ ಸೆರೆವಾಸವನ್ನೂ ಅನುಭವಿಸಿದ್ದರು. ಸ್ವಾತಂತ್ರ್ಯಾನಂತರದ ದಿನಗಳಲ್ಲೂ ರೈತಕಾರ್ಮಿಕರ ಮೇಲೆ ಮುಂದುವರೆದಿದ್ದ ದಬ್ಬಾಳಿಕೆಗಳನ್ನೂ, ತೀವ್ರ ಶೋಷಣೆಯನ್ನೂ ಎದುರಿಸಿ ಅವರನ್ನು ಸಂಘಟಿತ ಹೋರಾಟಗಳಿಗೆ ಅಣಿನೆರೆಸುವ ಕಾರ್ಯವನ್ನು ಕಕ್ಕಿಲ್ಲಾಯರೂ, ಅವರ ಸಂಗಾತಿಗಳೂ ಮುಂದುವರೆಸಿದ್ದರು. ಮೊತ್ತ ಮೊದಲ ರಾಜ್ಯಸಭೆಗೆ 1952-1954ರವರೆಗೆ ಮದ್ರಾಸ್ ಅಸೆಂಬ್ಲಿಯಿಂದ ಆಯ್ಕೆಗೊಂಡಿದ್ದ ಕಕ್ಕಿಲ್ಲಾಯರು ಅಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಕಕ್ಕಿಲ್ಲಾಯರು ಮಹತ್ವದ ಪಾತ್ರವನ್ನು ವಹಿಸಿದ್ದರು. ಬಂಟ್ವಾಳ ಹಾಗೂ ವಿಟ್ಲ ಕ್ಷೇತ್ರಗಳಿಂದ 1972 ಹಾಗೂ 1978ರಲ್ಲಿ ಕರ್ನಾಟಕ ವಿಧಾನಸಭೆಗೆ ಭಾರೀ ಮತಗಳಿಂದ ಆಯ್ಕೆಯಾಗಿದ್ದ ಕಕ್ಕಿಲ್ಲಾಯರು ಅತ್ಯಂತ ಸಮರ್ಥ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಭೂಸುಧಾರಣಾ ಮಸೂದೆಯ ರಚನೆಯಲ್ಲಿ ಅವರು ವಹಿಸಿದ್ದ ಪಾತ್ರವು ಮಹತ್ತರವಾದುದು. ತಮ್ಮ ತೀಕ್ಷ್ಣ ಬುದ್ದಿಮತ್ತೆ, ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುವ ಭಾಷಣ ಶೈಲಿ, ಅಗಾಧವಾದ ಓದು ಮತ್ತು ಪಾಂಡಿತ್ಯ, ಸರಳತೆ, ಸಚ್ಛಾರಿತ್ರ್ಯ ಹಾಗೂ ಸಜ್ಜನಿಕೆಗಳಿಗೆ ಹೆಸರಾಗಿದ್ದ ಕಕ್ಕಿಲ್ಲಾಯರು, ಜಾತ್ಯಾತೀತವಾದ, ಕೋಮು ನಿರಪೇಕ್ಷವಾದ, ಸರ್ವರಿಗೂ ಸಮಬಾಳನ್ನು ನೀಡಬಲ್ಲ ಪ್ರಗತಿಪರ, ಸಮಾಜವಾದಿ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು, ಕೊನೆ ತನಕ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಹೋರಾಟವನ್ನು ಮುಂದುವರೆಸಿದ್ದರು.  ]]>

‍ಲೇಖಕರು G

4 June, 2012

ನಿಮಗೆ ಇವೂ ಇಷ್ಟವಾಗಬಹುದು…

7 Comments

  1. ಅಶೋಕವರ್ಧನ ಜಿ.ಎನ್

    ಇದೇ ಜನವರಿ ಸುಮಾರಿಗೆ ನಾನು ನವಕರ್ನಾಟಕದ ಉಡುಪರ ಬಳಿ ‘ಅತ್ರಿಯನ್ನು ನವಕರ್ನಾಟಕ ತೆಗೆದುಕೊಂಡರೆ ಸಂತೋಷ’ ಪ್ರಸ್ತಾಪ ಇಟ್ಟಿದ್ದೆ. ಅರ್ಧ ಗಂಟೆ ಕಳೆದು ಬಿವಿ ಕಕ್ಕಿಲ್ಲಾಯರಿಂದ ದೂರವಾಣಿ ಕರೆ. ಅವರ ಸಾಮಾಜಿಕ ಸೇವೆಯ ಒಂದಂಗವಾಗಿ ಕಟ್ಟಿದ ನವಕರ್ನಾಟಕದ ಮೇಲೆ ನಾನಿಟ್ಟ ವಿಶ್ವಾಸಕ್ಕೆ ಧಾರಾಳ ಕೃತಜ್ಞತೆಗಳನ್ನು ಹೇಳಿದರು. ಅತ್ರಿಯನ್ನು ಔಪಚಾರಿಕವಾಗಿ ನವಕರ್ನಾಟಕ ವಹಿಸಿಕೊಳ್ಳುವ ದಿನ ಅಪಾರ ದೈಹಿಕ ನಿಶ್ಶಕ್ತಿಯೊಡನೆಯೂ ಹಠಹಿಡಿದು ಬಂದಿದ್ದರು. ದೀಪ ಹಚ್ಚುವ ಸಾಂಕೇತಿಕತೆ ಇದ್ದದ್ದೇ. ಇನ್ನೂ ಮುಖವಾಗಿ ಪತ್ರಕರ್ತರ ಬಳಿ ಸವಿವರವಾಗಿ ನವಕರ್ನಾಟಕದ ಹುಟ್ಟು ಬೆಳವಣಿಗೆಯನ್ನು ಔಚಿತ್ಯ ಮೀರದಂತೆ (ಮುದಿ ಮರಳು ಎನ್ನಲಾಗದಂತೆ) ಸಂಭಾಷಿಸಿದರು. ನಾನು ಇದೇ ಅವರ ಸಾರ್ವಜನಿಕ ಭೇಟಿ ಕೊನೆಯದಿರಬಹುದೇ ಎಂದು ಶಂಕಿಸಿದ್ದೆ. ಇಲ್ಲ, ಮೊನ್ನೆ ಮೊನ್ನೆ ವಿಠಲ ಮಲೆಕುಡಿಯನ ಬಂಧನ ವಿರೋಧಿಸುವ ಸಭೆಯಲ್ಲಿ ಇವರಿದ್ದರು. ಮೂಲಗೇಣಿಯ ರದ್ಧತಿಗಾಗಿ ಸ್ವಯಂಸೇವೆ ನಡೆಸುತ್ತಿರುವ ನನ್ನ ಮಾವ, ವಕೀಲ – ಎ.ಪಿ. ಗೌರೀಶಂಕರ್, ತೀರಾ ಈಚೆಗೆ, ಇನ್ನೊಂದೇ ಸಂದರ್ಭದಲ್ಲಿ ಇವರೊಡನೆ ಮಾತಿಗಿಳಿದಿದ್ದರು. ಅಲ್ಲೂ ಕಕ್ಕಿಲ್ಲಾಯರ ದುಡಿಮೆ, ನೆನಪು ಮತ್ತು ಸೂಕ್ತ ಸಲಹೆ, ಸಹಾಯ ಕಂಡು ಮಾವನಿಗೆ ಬೆರಗೊಂದೇ ಉಳಿದಿತ್ತು. ಮಹಾತ್ಮ.
    ಅಶೋಕವರ್ಧನ

  2. T.N.Seetharam

    Raajakeeyada ghanateya koneya kondigalu maayavaaguttive..ondu kshanakkoo aathmavannu otthe ittavaralla..nanna nechhina HERO galalli obbaru..
    avarige nanna kadeya NAMANA..

  3. Basavaraja Halli

    Sad message

  4. ushakattemane

    ನಾನು ಅವರನ್ನು ನಾಲ್ಕು ಕಾಸರಗೋಡಿನ ಅವರ ಮನೆಯಲ್ಲೇ ಬೇಟಿಯಾಗಿದ್ದೆ. ಮುಳಿಹುಲ್ಲಿನ ಅವರ ಮನೆಯಲ್ಲಿ ಕುಳಿತು ನಾನವರ ಸಂದರ್ಶನ ತೆಗೆದುಕೊಂಡಿದ್ದೆ. ನನಗೆ ಬೇಕಾಗಿದ್ದು ಐದು ನಿಮಿಷದ ಒಂದು ಬೈಟ್-ಅದೂ ಕೂಡಾ ಅವರ ತೋಟದ ಬದಿಯಲ್ಲಿ ಕಾವೇರಿ ಸಂಕ್ರಮಣದಂದು ಕುಂಡಿಕೆಯಲ್ಲಿ ಕಾವೇರಿ ತೀರ್ಥ ಉದ್ಬವವಗುವ ಬಗ್ಗೆ. ಆದರೆ ಆ ಅಜ್ಜನ ಸರಳತೆ, ಸಹೃದಯತೆ,ಮುಗ್ದತೆಗಳಿಗೆ ಮನಸೋತು, ಕಟ್ಟಾ ಕಮ್ಯೂನಿಸ್ಟ್ ನಾಯಕರೊಬ್ಬರ ಧಾರ್ಮಿಕ ಮನೋವೈಶಾಲ್ಯಕ್ಕೆ ಮನಸೋತಂತೆ ಒಂದು ಘಂಟೆಯ ವಿಡಿಯೊ ಚಿತ್ರಿಕರಣ ಮಾಡಿಕೊಂಡು ಬಂದಿದ್ದೆ. ಅದೀಗಲೂ ನನ್ನ ಬಳಿ ಇದೆ. ಇಂತಹ ನಾಯಕನೊಬ್ಬನ ಸಾವಿನ ಬಗ್ಗೆ ನಮ್ಮ ದೃಶ್ಯ ಮಾಧ್ಯಮಗಳು ಸರಿಯಾಗಿ ಸುಇದ್ದಿಯನ್ನೂ ಬಿತ್ತರಿಸಲಿಲ್ಲ ಎಂಬುದು ನಿಜಕ್ಕೂ ವಿಷಾಧದ ಸಂಗತಿ

    • ಅರುಣ್ ಕಾಸರಗುಪ್ಪೆ

      ಉಷಾ ಕಟ್ಟೆಮನೆಯವರಲ್ಲಿ ನನ್ನದೊಂದು ವಿನಂತಿ. ನಿಮ್ಮಲ್ಲಿರುವ ಆ ವೀಡಿಯೊವನ್ನು ಅವಧಿಯೊಂದಿಗೆ ಹಂಚಿಕೊಳ್ಳಿ. ಆ ಹಿರಿಯ ಚೇತನದ ಮಾತುಗಳನ್ನು ಕೇಳುವ ಸೌಭಾಗ್ಯ ನಮ್ಮದಾಗಲಿ.

      • D.RAVI VARMA

        yes,i join my voice with arun kasaragoppe. aa hiriyara maatu ,chintane avadhi odugarigu muttali.
        madam, kindly do it
        d.ravi varma hosapete

  5. D.RAVI VARMA

    ಆ ಹಿರಿಯ ಮಹಾಮಾನವತಾವಾದಿ ,ಅವರ ಬದ್ದತೆ,ಜೀವನ ಪ್ರೀತಿ, ಸಮಾಜವನ್ನು ಗ್ರಹಿಸಿದ ರೀತಿ ಹಾಗು ಅದಕ್ಕೊಂದು ಮಾನವೀಯ ಪ್ರತಿಸ್ಪಂದನ ,ಅವರ ಚಿಂತನೆಬರಹಗಳು ನನ್ನನ್ನು ಕಾಡುತ್ತಿವೆ . ಉಷಾ ಕಟ್ಟೆಮನೆಯವರು ಹೇಳಿದ ಹಾಗೆ ಈ ಮಾದ್ಯಮಗಳು ತಮ್ಮ ರೇಟಿಂಗ್ ಬರದಲ್ಲಿ ಮುಳುಗಿ ಇಂಥಹ ಪ್ರಾಮಾಣಿಕ ಜೀವಿಯ ಸಾವು ಸರಿಯಾಗಿ ಸುದ್ದಿಯಾಗದೆ ಇರುವುದು ಒಂದು ದೊಡ್ಡ ದುರಂತವಲ್ಲದೆ ಏನು . ಆ ಹಿರಿಯ ಜೀವಿಗೊಂದು ನನ್ನ ನಮಸ್ಕಾರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading