ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೆಮೆನ್‌ ನಗರದ ಸಂಗೀತಗಾರರು…

ಲತಾ ಎಚ್‌ ವಿ

ಲತಾ ಎಚ್‌.ವಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ (ಜಾನಪದ) ಪದವಿಯನ್ನು ಪಡೆದಿದ್ದಾರೆ. ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ʼಗ್ರಿಮ್‌ ಸಹೋದರರು ಸಂಗ್ರಹಿಸಿದ ಕತೆಗಳು ಮತ್ತು ಕನ್ನಡ ಜಾನಪದ ಕತೆಗಳು – ಒಂದು ತೌಲನಿಕ ಅಧ್ಯಯನʼ ಎನ್ನುವ ವಿಷಯದ ಮೇಲೆ ಪ್ರಬಂಧವನ್ನು ಮಂಡಿಸಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ.

ಜರ್ಮನ್‌ ಭಾಷೆಯಲ್ಲಿ ಆಸಕ್ತಿ ಮೂಡಿದ್ದರಿಂದ ಆ ಭಾಷೆಯನ್ನು ಕಲಿತು ಬೆಂಗಳೂರು ವಿವಿಯಿಂದ ಎಂ.ಎ ಪದವಿ ಪಡೆದರು. ಪ್ರಸ್ತುತ ಬೆಂಗಳೂರು ವಿವಿಯ ಜಾಗತಿಕ ಭಾಷೆಗಳ ವಿಭಾಗದಲ್ಲಿ ಜರ್ಮನ್‌ ಭಾಷೆಯ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.

ಈ ಸಂಚಿಕೆಯಲ್ಲಿ ಗ್ರಿಮ್‌ ಸಹೋದರರು ಸಂಪಾದಿಸಿದ ಜಾನಪದ ಕತೆಗಳ ಸಂಗ್ರಹದಿಂದ ಕತೆಯೊಂದನ್ನು ಅನುವಾದಿಸಿದ್ದಾರೆ.

ಗ್ರಿಮ್‌ ಸಹೋದರರು ಜರ್ಮನಿಯ ವಿದ್ವಾಂಸರು. ಇವರು ಸಂಗ್ರಹಿಸಿದ ಜಾನಪದ ಕತೆಗಳು ಬಹಳ ಪ್ರಸಿದ್ಧವಾಗಿವೆ.

ಒಂದಾನೊಂದು ಕಾಲದಲ್ಲಿ ಒಂದು ಊರಿತ್ತು. ಆ ಊರಲ್ಲಿ ಒಬ್ಬ ವ್ಯಕ್ತಿ. ಅವನ ಹತ್ತಿರ ಒಂದು ಕತ್ತೆ ಇತ್ತು. ಆ ಕತ್ತು ತುಂಬಾ ವರ್ಷಗಳಿಂದ ಭಾರ ಹೊತ್ತು ಹೊತ್ತು ಬಡವಾಗಿತ್ತು. ಅದಕ್ಕೆ ವಯಸ್ಸಾಗಿ ಹೋಗಿದ್ದರಿಂದ ಇನ್ನು ಅದರಿಂದ ತನಗೆ ಪ್ರಯೋಜನವಿಲ್ಲವೆಂದು ಅದರ ಒಡೆಯ ಅದನ್ನು ಕಸಾಯಿಗೆ ಮಾರಿಬಿಡಲು ನಿರ್ಧರಿಸಿದ. ಆ ವಿಷಯ ತಿಳಿದ ಕತ್ತೆ ತನ್ನ ಜೀವ ಉಳಿಸಿಕೊಳ್ಳಲು ಮನೆಬಿಟ್ಟು ಹೊರಟಿತು. ದಾರಿಯಲ್ಲಿ ಹೋಗುತ್ತಿರುವಾಗ ಅದಕ್ಕೊಂದು ಆಲೋಚನೆ ಬಂತು. ʼನಾನ್ಯಾಕೆ ಸಂಗೀತಗಾರನಾಗಬಾರದುʼ ಎಂದುಕೊಂಡು ಅದು ಬ್ರೆಮೆನ್‌ ನಗರದ ಕಡೆ ಹೊರಟಿತು.

ಹೀಗೆ ಹೋಗುತ್ತಿರುವಾಗ ರಸ್ತೆಯ ಪಕ್ಕದಲ್ಲಿ ಬೇಟೆನಾಯಿ ಊಳಿಡುತ್ತಾ ಮಲಗಿತ್ತು. ಅದನ್ನು ನೋಡಿ ಕತ್ತೆ, “ಯಾಕೆ ಹೀಗೆ ಸಂಕಟದಿಂದ ಕೂಗುತ್ತಿದ್ದೀಯಾ?” ಎಂದು ಕೇಳಿತು. “ಅಯ್ಯೋ ಏನೂಂತ ಹೇಳಲಿ. ನನಗೀಗ ವಯಸ್ಸಾಗಿ ದೇಹದಲ್ಲಿ ಶಕ್ತಿ ಕಡಿಮೆಯಾಗಿದೆ. ಮೊದಲಿನಂತೆ ಬೇಟೆ ಆಡಲಿಕ್ಕೆ ಆಗಲ್ಲ. ಅದಕ್ಕೆ ನನ್ನ ಯಜಮಾನ ನನ್ನನ್ನು ಸಾಯಿಸಿಬೇಕೆಂದುಕೊಂಡಿದ್ದ. ಆ ವಿಷಯ ತಿಳಿದು ನಾನು ಅಲ್ಲಿಂದ ಓಡಿಬಂದೆ. ಇನ್ನುಮೇಲೆ ಊಟ ಹೇಗೆ ಸಂಪಾದಿಸೋದು ಅಂತ ಯೋಚಿಸುತ್ತಾ ಇದ್ದೆ,” ಎಂದಿತು.

ಅದಕ್ಕೆ ಉತ್ತರವಾಗಿ ಕತ್ತೆ “ನಾನೀಗ ಬ್ರೆಮೆನ್‌ ನಗರದ ಕಡೆ ಹೊರಟಿದಿನಿ. ಅಲ್ಲಿ ಸಂಗೀತಗಾರನಾಗೋಣ ಅಂತ. ನೀನು ನನ್ನ ಜೊತೆ ಬಾ. ನಾವು ಯಾವುದಾದರೂ ಸಂಗೀತದ ತಂಡ ಸೇರಿಕೊಳ್ಳೋಣ. ನೀನು ತಬಲ ಬಾರಿಸು, ನಾನು ತಂತಿವಾದ್ಯ ನುಡಿಸುತ್ತೇನೆ,” ಎಂದಿತು. ಬೇಟೆನಾಯಿ ತಕ್ಷಣ ಒಪ್ಪಿತು. ಇಬ್ಬರೂ ಮುಂದೆ ಹೊರಟರು.
ಮತ್ತೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಬೆಕ್ಕೊಂದು ಸಪ್ಪಗೆ ಕೂತಿರುವುದು ಕಂಡಿತು. ಇವೆರೆಡೂ ಏನು ಸಮಸ್ಯೆ ಎಂದು ಬೆಕ್ಕನ್ನು ಕೇಳಿದಾಗ, “ಏನೂಂತ ಹೇಳಲಿ, ನನಗೆ ವಯಸ್ಸಾಯಿತು. ಹಲ್ಲುಗಳು ಅಲ್ಲಾಡುತ್ತಿವೆ. ಈಗ ಮೊದಲಿನಂತೆ ಇಲಿಗಳನ್ನು ಹಿಡಿಯಲಿಕ್ಕೆ ಆಗುತ್ತಿಲ್ಲ. ಅದರಿಂದ ನನ್ನ ಯಜಮಾನಿ ನನ್ನ ಮನೆಯಿಂದ ಹೊರಹಾಕಿದಳು,” ಎಂದಿತು.

“ನೀನು ನಮ್ಮ ಜೊತೆ ಬಾ. ನಾವು ಬ್ರೆಮೆನ್‌ ನಗರಕ್ಕೆ ಹೋಗುತ್ತಿದ್ದೇವೆ. ಅಲ್ಲಿ ಸಂಜೆ ಸಂಗೀತ ಕಾರ್ಯಕ್ರಮಗಳು ತುಂಬಾ ಪ್ರಸಿದ್ಧ. ಅಲ್ಲಿ ನಾವು ಸಂಗೀತಗಾರರಾಗೋಣ. ಏನಂತೀಯಾ?” ಎಂದು ಕತ್ತೆ ಕೇಳಿತು. ಬೆಕ್ಕು ಒಪ್ಪಿಕೊಂಡು ಇವರ ಜೊತೆ ಹೊರಟಿತು. ಮುಂದೆ ಹೋಗುತ್ತಿರುವಾಗ ಹುಂಜವೊಂದು ಗೋಳಾಡುತ್ತ ಕೂತಿತ್ತು. ಯಾಕೆಂದು ವಿಚಾರಿಸಿದಾಗ ಹುಂಜ “ಏನಪ್ಪಾ ಹೇಳಲಿ ನನ್ನ ಕತೆ. ನನ್ನ ಮನೆಯೊಡತಿ ಇವತ್ತು ಅಡುಗೆಯವನಿಗೆ ನಾಳೆ ಮನೆಗೆ ನೆಂಟರು ಬರುತ್ತಿದ್ದಾರೆ. ಈ ಹುಂಜವನ್ನು ಕತ್ತರಿಸಿ ಅಡುಗೆಮಾಡು ಅಂತ ಹೇಳಿದಳು. ಅದಕ್ಕೆ ಹೆದರಿ ಓಡಿಬಂದೆ,” ಎಂದಿತು ಹುಂಜ.

“ಸಾಯುವುದೆಲ್ಲ ಬೇಡ. ಅದಕ್ಕಿಂತ ಮಾಡಲು ಬಹಳ ಮುಖ್ಯವಾದ ಬೇರೆ ಕೆಲಸವಿದೆ. ನಿನಗೆ ಒಳ್ಳೆಯ ಕಂಠವಿದೆ. ನೀನು ಹಾಡು ಹೇಳಬಹುದು. ನಮ್ಮೊಂದಿಗೆ ಬಾ,” ಎಂದು ಹುಂಜವನ್ನು ಕರೆದುಕೊಂಡು ಎಲ್ಲರೂ ಬ್ರೆಮೆನ್‌ ನಗರದತ್ತ ಹೊರಟರು.

ಬ್ರೆಮೆನ್‌ ನಗರಕ್ಕೆ ಹೋಗಲು ಕಾಡನ್ನು ದಾಟಬೇಕಿತ್ತು. ಕಾಡಿಗೆ ಬರುವ ಹೊತ್ತಿಗೆ ಕತ್ತಲಾದ್ದರಿಂದ ನಾಲ್ವರು ರಾತ್ರಿ ಅಲ್ಲೇ ಇದ್ದು ಬೆಳಿಗ್ಗೆ ಹೊರಡೋಣ ಎಂದುಕೊಂಡವು. ರಾತ್ರಿ ಬಹಳ ಚಳಿಯಿತ್ತು. ದೂರದಲ್ಲೊಂದು ಮನೆ ಕಾಣಿಸಿತು. ನಾಲ್ವರು ಅಲ್ಲಿಗೆ ಹೋದರು. ಅಲ್ಲಿ ನೋಡಿದರೆ ನಾಕು ಮಂದಿ ಕಳ್ಳರು ಊಟದ ಮೇಜಿನಲ್ಲಿ ಕೂತು ಊಟ ಮಾಡುತ್ತಿದ್ದರು. ಘಮ ಘಮ ಅಡುಗೆಯ ವಾಸನೆ ಬರುತ್ತಿತ್ತು. ಊಟವನ್ನು ನೋಡಿ ನಾಲ್ವರಿಗೂ ಬಾಯಲ್ಲಿ ನೀರೂರಿತು. ಹೇಗೆ ಊಟ ಸಂಪಾದಿಸುವುದು ಎಂದು ಯೋಚಿಸಿ ಅದಕ್ಕೊಂದು ಉಪಾಯ ಕಂಡುಹಿಡಿದರು.

ಕಿಟಕಿಯ ಹತ್ತಿರ ಕತ್ತೆ ಕಾಲನ್ನು ಮೇಲಕ್ಕೆತ್ತಿ ನಿಂತುಕೊಂಡಿತು. ಅದರ ಮೇಲೆ ನಾಯಿ, ನಾಯಿ ಮೇಲೆ ಬೆಕ್ಕು, ಬೆಕ್ಕಿನ ಮೇಲೆ ಹುಂಜ ಹತ್ತಿನಿಂತಿತು. ಎಲ್ಲರೂ ಒಟ್ಟಿಗೆ ಹಾಡಲು ಶುರುಮಾಡಿದವು. ಕತ್ತೆ ಕಿರುಚಿತು, ನಾಯಿ ಬೊಗಳಿತು, ಬೆಕ್ಕು ಮಿಂಯಾವ್‌ ಅಂದಿತು, ಹುಂಜ ಕೂಗಿತು. ಕಳ್ಳರೆಲ್ಲ ಈ ಭಯಂಕರ ಕೂಗು ಕೇಳಿ ಗಾಬರಿಯಿಂದ ತಲೆಎತ್ತಿ ನೋಡಿದರೆ ಕಿಟಕಿಯಲ್ಲಿ ವಿಚಿತ್ರವಾದ ಆಕಾರ ಕಾಣಿಸಿತು. ಅದು ಭೂತವಿರಬೇಕೆಂದು ಕಳ್ಳರು ಹೆದರಿ ಓಡಿಹೋದರು.

ಈ ನಾಲ್ಕು ಪ್ರಾಣಿಗಳು ಮನೆಯೊಳಗೆ ಹೋಗಿ ಊಟ ಮಾಡಿದವು. ಹೊಟ್ಟೆ ತುಂಬಿತ್ತು. ಸುಸ್ತೂ ಆಗಿತ್ತು. ನಿದ್ದೆ ಬಂದಿತ್ತು. ನಾಯಿ ಬಾಗಿಲ ಹಿಂದೆ, ಕತ್ತೆ ಕಸಗೊಬ್ಬರದ ಮೇಲೆ, ಬೆಕ್ಕು ಒಲೆಯ ಬೂದಿಯಲ್ಲಿ, ಹುಂಜ ಮನೆಯ ಛಾವಣಿಯ ಮೇಲೆ ಮಲಗಿದವು.

ಮಧ್ಯರಾತ್ರಿ, ಓಡಿಹೋಗಿದ್ದ ಕಳ್ಳರು ಮತ್ತೆ ಮನೆಯ ಬಳಿಬಂದರು. ಮನೆಯಲ್ಲಿ ದೀಪದ ಬೆಳಕು ಇರಲಿಲ್ಲ. ಮನೆಯೊಳಗೆ ಯಾರಾದರೂ ಇದ್ದಾರ ಅಂತ ನೋಡಲು ಒಬ್ಬ ಕಳ್ಳ ಮನೆಯೊಳಗೆ ಹೋದ. ಒಳಗೆಲ್ಲ ನಿಶ್ಯಬ್ಧ.. ದೀಪ ಹೊತ್ತಿಸಲು ಹೋದಾಗ ಕತ್ತಲಲ್ಲಿ ಬೆಕ್ಕಿನ ಕಣ್ಣುಗಳು ಕೆಂಡದಂತೆ ಕಂಡವು. ಬೆಕ್ಕು ಅವನ ಮೇಲೆರಗಿ ಮುಖವನ್ನು ಪರಚಿತು. ಅವನು ಹೆದರಿಕೊಂಡು ಬಾಗಿಲ ಕಡೆ ಹೋದಾಗ ನಾಯಿ ಕಚ್ಚಿತು. ಅಲ್ಲಿಂದ ತಪ್ಪಿಸಿಕೊಂಡು ಹೋದವನು ಕಸದ ಗೊಬ್ಬರದ ಮೇಲೆ ಬಿದ್ದ. ಕತ್ತೆ ಅವನನ್ನು ಝಾಡಿಸಿ ಒದ್ದಿತು. ಈ ಸದ್ದುಗಳಿಂದ ಎಚ್ಚರಗೊಂಡ ಹುಂಜ ಜೋರಾಗಿ “ಕ್ಕೊಕ್ಕರೆಕೊ…” ಎಂದು ಕೂಗಿತು.

ಕಳ್ಳ ಹೆದರಿ ಹೊರಗೆ ಓಡಿಬಂದು, “ಆ ಮನೆಯಲ್ಲಿ ದೊಡ್ಡ ದೆವ್ವವಿದೆ. ಉಗುರಿನಿಂದ ಪರಚಿತು, ಕತ್ತಿಯಿಂದ ಇರಿದು, ಒದೆಯಿತು. ಮನೆಯ ಮೇಲೊಬ್ಬ ಕಾವಲುಗಾರ ಕೂತಿದ್ದಾನೆ. ನಾನಲ್ಲಿರುವುದನ್ನು ಅವನು ದೆವ್ವಕ್ಕೆ ಕೂಗಿ ಹೇಳಿದ. ಅದಕ್ಕೆ ಹೆದರಿ ಓಡಿಬಂದೆ,” ಎಂದು ಉಳಿದ ಕಳ್ಳರಿಗೆ ತಿಳಿಸಿದ.

ಮತ್ತೆಂದೂ ಆ ಕಳ್ಳರು ಆ ಮನೆಯ ಕಡೆ ತಿರಗಿ ಬರಲಿಲ್ಲ. ಆ ನಾಲ್ಕು ಪ್ರಾಣಿಗಳು ಖುಷಿಯಿಂದ, ಆರಾಮಾಗಿ ಆ ಮನೆಯಲ್ಲೇ ಇದ್ದುಬಿಟ್ಟವು.

‍ಲೇಖಕರು Admin

30 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading