ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬ್ರೆತ್ ಲೆಸ್' ಲೇಸೋ ಅಥವಾ 'ಲೆಸ್ ಬ್ರೆತ್' ಲೇಸೋ

ನಿಮ್ಮೂರಲ್ಲಿ ಕಿರಾಣಿ ಅಂಗಡಿ ಇದೆಯೇ? ಅಲ್ಲಿ ಸ್ನಾನದ ಸಾಬೂನು ಮಾರುತ್ತಾರೆಯೆ? ಆ ಅಂಗಡಿಯಲ್ಲಿ ಎಷ್ಟು ಬಗೆಯ ಸ್ನಾನದ ಸಾಬೂನು ಬ್ರಾಂಡ್ ಗಳಿವೆ?…ಗಮನಿಸಿದ್ದೀರಾ?

ಭಾರತದಲ್ಲಿ ಸಾವಿರಾರು ಸ್ನಾನದ ಸಾಬೂನು ಬ್ರಾಂಡ್ ಗಳಿವೆ. ಅವುಗಳನ್ನು ತಯಾರಿಸುವ ಅಂದಾಜು 700 ಕಂಪನಿಗಳೂ ಇವೆ. ವರ್ಷಕ್ಕೆ ಇದು ಸುಮಾರು 4500 ಕೋಟಿ ರೂಪಾಯಿಗಳ ವಹಿವಾಟು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ವಹಿವಾಟಿನಲ್ಲಿ 88% ಭಾಗ ಇರುವುದು ಕೇವಲ ಮೂರು ಕಂಪನಿಗಳ ಕೈನಲ್ಲಿ. ಆ ಕಂಪನಿಗಳೆಂದರೆ, ಹಿಂದೂಸ್ಥಾನ್ ಯುನಿಲಿವರ್ ಲಿಮಿಟೆಡ್, ಗಾಡ್ರೆಜ್ ಹಾಗೂ ನಿರ್ಮಾ.

ಹಿಂದೂಸ್ಥಾನ್ ಯುನಿಲಿವರ್  ಸಾಬೂನು ಉತ್ಪನ್ನಗಳು ಭಾರತದ ಉದ್ದಗಲಕ್ಕೂ ಇದ್ದರೂ, ಆಯಾಯ ಪ್ರಾದೇಶಿಕ ಆವಶ್ಯಕತೆಗಳಿಗನುಗುಣವಾಗಿ ಅದು ತನ್ನ ಸಾಬೂನು ಬ್ರಾಂಡ್ ಗಳನ್ನು ಬದಲಾಯಿಸಿ ಮಾರುಕಟ್ಟೆಗೆ ಬಿಡುತ್ತದೆ. ಹೆಚ್ಚಿನಂಶ ಲಕ್ಸ್ ನಂತಹ ಬೆರಳೆಣಿಕೆಯ ಬ್ರಾಂಡ್ ಗಳನ್ನು ಬಿಟ್ಟರೆ, ದೇಶವ್ಯಾಪಿ ಮಾರಾಟ ಇರುವ ಬ್ರಾಂಡ್ ಗಳು ಕಡಿಮೆ. ಒಂದು ಕಂಪನಿಗೆ ಗ್ರಾಹಕನ ಈ ಆಯ್ಕೆಯ ಬಗ್ಗೆ ಮಾಹಿತಿ ಹೇಗೆ ಸಿಗುತ್ತದೆ ಎಂದು ಯೋಚಿಸಿದ್ದೀರಾ?

ನಿಮ್ಮೂರಿನ ಕಿರಾಣಿ ಅಂಗಡಿಯಲ್ಲಿ ಎಷ್ಟು ಬ್ರಾಂಡಿನ ಸೋಪುಗಳನ್ನು ಮಾರುತ್ತಾರೆ? ಹೆಚ್ಚೆಂದರೆ 30-50. ಸಾವಿರಾರು ಬ್ರಾಂಡಿನ ಸಾಬೂನುಗಳ ನಡುವೆ ಆ ಅಂಗಡಿಯಲ್ಲಿ ಆಯ್ಕೆ 30-50ರ ನಡುವೆ ಸೀಮಿತ ಆಗುವುದು ಹೇಗೆ? ಇದು ಅಂಗಡಿಯ ಮಾಲಕನ ಆಯ್ಕೆ (ಅಂದರೆ ಸಿಗುವ ಲಾಭ, ಮಾರಾಟದ ನಿರೀಕ್ಷೆ ಇತ್ಯಾದಿ), ಆ ಬಳಿಕ ಗ್ರಾಹಕರ ಬೇಡಿಕೆಗಳನ್ನು ಆಧರಿಸಿ ನಿರ್ಧಾರ ಆಗುವುದು ಕ್ರಮ. ಅಂದರೆ, ಒಬ್ಬ ಗ್ರಾಹಕನ ಜೀವನ ವಿಧಾನವನ್ನು ನಿರ್ಧರಿಸುವಲ್ಲಿ ಅವನ ಊರಿನ ಕಿರಾಣಿ ಅಂಗಡಿ ಮಾಲಕನ ಪಾತ್ರವೂ ಇರುತ್ತದೆ. ಅಂದರೆ, ನಿಮ್ಮ ಆಯ್ಕೆಯನ್ನು ಸಾಬೂನು ತಯಾರಿಕಾ ಕಂಪನಿ ತನ್ನ ಉತ್ಪನ್ನ ಮಾರುವ ಕಿರಾಣಿ ಅಂಗಡಿಯಾತನ ಮೂಲಕ ನಿರ್ಧರಿಸುವುದು ಸಾಧ್ಯ ಇದೆ!

ಕ್ಯಾಶ್ ಲೆಸ್- ಲೆಸ್ ಕ್ಯಾಶ್

ಈಗ ಸರ್ಕಾರ ಕ್ಯಾಶ್ ಲೆಸ್ ವ್ಯವಹಾರವನ್ನು ಉತ್ಕಂಠದಿಂದ ಪ್ರೋತ್ಸಾಹಿಸುತ್ತಿದೆ. ಅದಕ್ಕಾಗಿ ಲಾಟರಿ ಯೋಜನೆಯನ್ನೂ ತೆರೆದಿದೆ. ಹಂತಹಂತವಾಗಿ ಈ ಕ್ಯಾಶ್ ಲೆಸ್ ವ್ಯವಹಾರ ಸಹಜವಾಗಿ ನಮ್ಮ ಬದುಕನ್ನು ಆವರಿಸುವುದು ಅನಿವಾರ್ಯ. ಆದರೆ, ಈವತ್ತು ಏಕಾಏಕಿ ಅದನ್ನು ನಮ್ಮ ಗಂಟಲಿನಲ್ಲಿ ತುರುಕಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಎಚ್ಚರಿಕೆಗಳು ಅತ್ಯಗತ್ಯ.

ಕ್ಯಾಶ್ ಲೆಸ್ ವ್ಯವಹಾರ ಎಂಬುದು ಕ್ಯಾಶ್ ಲೆಸ್ ಆಗಿರುವ ಹೊತ್ತಿಗೇ, ಒಂದು ಡೇಟಾ ಸಂಗ್ರಹ ಮಾರ್ಗವೂ ಹೌದು. ಈ ದೊಡ್ಡ ಡೇಟಾಗಳ ನಿರ್ವಹಣೆಗೆ, ಡೇಟಾ ಮೈನಿಂಗಿಗೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಯಾವುದೇ ಸುಸೂತ್ರ ಕಾನೂನುಗಳು ಇಲ್ಲ. ಜೊತೆಗೇ ಪೇಮೆಂಟ್ ಬ್ಯಾಂಕಿಂಗ್ ಆಪ್ಲಿಕೇಶನ್ ಗಳಲ್ಲಿ ಮತ್ತು ಕ್ರೆಡಿಟ್- ಡೆಬಿಟ್ ಕಾರ್ಡ್ ವ್ಯವಹಾರಗಳಲ್ಲಿ ಸುರಕ್ಷತೆಯ ಬಗ್ಗೆ ಸಾಕಷ್ಟು ಶಂಕೆಗಳಿವೆ, ಅದನ್ನು ಖಚಿತಪಡಿಸುವಂತೆ ಮೋಸ ವಂಚನೆಯ ಸುದ್ದಿಗಳೂ ಪ್ರತಿದಿನ ಸಿಗುತ್ತಿವೆ.

ನನ್ನ ಪರಿಚಿತರೊಬ್ಬರು ತನ್ನ ಮನೆಯ ಪ್ರತಿಯೊಂದೂ ಖರೀದಿಯನ್ನು ಕಡ್ಡಾಯವಾಗಿ ಕ್ರೆಡಿಟ್ ಕಾರ್ಡ್ ಮೂಲಕವೇ ಮಾಡುತ್ತಾರೆ, ಮತ್ತು ಬಳಿಕ ತಕ್ಷಣ ಕಾರ್ಡಿನ ಖಾತೆಗೆ ಮರುಪಾವತಿ ಮಾಡಿಬಿಡುತ್ತಾರೆ. ಯಾಕೆ ಎಂದು ಕೇಳಿದರೆ, ಅವರು ಮೇಲ್ನೋಟಕ್ಕೆ ತಮಾಷೆಯಾಗಿ ಕಾಣುವ ಸತ್ಯವನ್ನು ಹೇಳಿದರು. “ನನಗೆ ಮನೆ ಖರ್ಚು ಲೆಕ್ಕ ಬರೆದಿಡುವ ಕೆಲಸ ಇಲ್ಲ. ಅದನ್ನು ಕ್ರೆಡಿಟ್ ಕಾರ್ಡ್ ಕಂಪನಿ ತಾನೇ ಮಾಡಿ, ಶಿಸ್ತಿನಿಂದ ತಿಂಗಳ ಕೊನೆಗೆ ಸ್ಟೇಟ್ ಮೆಂಟ್ ಕಳಿಸಿಕೊಡುತ್ತದೆ. ನನ್ನ ಕೆಲಸ ಸುಲಭವಾಯಿತು.”

ಮೇಲ್ನೋಟಕ್ಕೆ ಇದು ಹೌದೆನ್ನಿಸಿದರೂ, ಆಳವಾಗಿ ನೋಡಿದರೆ, ನಿಮ್ಮ ಮನೆಯ ಎಲ್ಲ ಖರೀದಿಗಳು, ಅವುಗಳ ಪ್ರಮಾಣ, ಅವುಗಳ ಬ್ರಾಂಡ್, ನೀವು ಹೋಗುವ ಅಂಗಡಿಯ ವಿವರ ಹೀಗೆ ಎಲ್ಲ ಸಂಗತಿಗಳೂ, ಅವುಗಳ ಖಾಸಗಿತನದ ಸಹಿತ ನಿಮ್ಮ ಕ್ರೆಡಿಟ್ ಕಾರ್ಡ್ ಕಂಪನಿಯಲ್ಲಿ ಲಭ್ಯವಿರುತ್ತದೆ.

ಈ ರೀತಿಯ ಮಾಹಿತಿಗಳು ಖಾಸಗಿಯಲ್ಲಿ ಅಧಿಕೃತವಾಗಿ ಲಭ್ಯವಾದಾಗ (ನೆನಪಿಡಿ, ರಿಲಯನ್ಸ್ ನಂತಹ ದೊಡ್ಡ ಬಹು ಉದ್ದಿಮೆ ಗುಂಪುಗಳೇ ಪೇಮೆಂಟ್ ಬ್ಯಾಂಕಿಂಗ್, ಮೊಬೈಲ್ ಫೋನ್ ನಂತಹ ವ್ಯವಹಾರಗಳಲ್ಲೂ ಇರುವುದು), ಅವು ಸುಲಭವಾಗಿ ದೊಡ್ಡ ಗಾತ್ರದ ಕಂಪನಿಗಳ ಕೈಗೆ ಲಭ್ಯವಾಗಲಿವೆ ಮತ್ತು ನಮ್ಮ ಉತ್ಪನ್ನಗಳ ಬಳಕೆಯ ಮೇಲಿನ ನಿಯಂತ್ರಣವನ್ನು ಈ ಕಂಪನಿಗಳೇ ಹೊಂದಲಿವೆ. ಇದರ ನೇರ ಪೆಟ್ಟು ಬೀಳುವುದು ಸಣ್ಣ ಕೈಗಾರಿಕೆಗಳ ಮೇಲೆ. ಮಾಲ್ ಸಂಸ್ಕೃತಿ ಬಂದ ಬಳಿಕ ಕಿರಾಣಿ ಅಂಗಡಿಗಳ ಸ್ಥಿತಿ ಕಂಡವರಿಗೆ ನಾನೇನು ಹೇಳುತ್ತಿದ್ದೇನೆ ಎಂದು ಅರ್ಥವಾದೀತು.

ದೇಶದ  ನೂರಿನ್ನೂರು ಧನಿಕ ಉದ್ದಿಮೆದಾರರ “ನವ ಈಸ್ಟ್ ಇಂಡಿಯಾ ಕಂಪನಿ” ಒಕ್ಕೂಟಕ್ಕೆ ನಮ್ಮ ಜುಟ್ಟು ಕೊಟ್ಟು, ನಮ್ಮ ತಲೆಯ ಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುವ ಸ್ಥಿತಿ ಇದು. ಈ ರೀತಿ ನೀವು ಬಳಸುವ ಸೋಪು ಯಾವುದು, ನಿಮ್ಮ ಮನೆಯಲ್ಲಿ ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ಯಾವುದು, ನೀವು ಬಳಸುವ ಗರ್ಭ ನಿರೋಧಕ ವಿಧಾನ ಯಾವುದು, ನಿಮಗೆ ಏನು ಖಾಯಿಲೆ ಇದೆ- ಅದಕ್ಕೇನು ಮದ್ದು ಮಾಡುತ್ತಿದ್ದೀರಿ ಎಂಬಂತಹ ಕೌಟುಂಬಿಕ  ಖಾಸಗಿ ಮಾಹಿತಿಗಳನ್ನು ಕೂಡ ಅಧಿಕೃತವಾಗಿ ವಾಣಿಜ್ಯ ಡೇಟಾ ಮಾಡಿ ಉದ್ದಿಮೆಗಳ ಪದತಲಕ್ಕೆ  ಅರ್ಪಿಸುವ ಮೊದಲು ಈ ರೀತಿಯ ದತ್ತಾಂಶಗಳ ಗೌಪ್ಯತೆಯ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಯುವ ಹಕ್ಕು ಈ ದೇಶದ ಎಲ್ಲ ನಾಗರಿಕರಿಗೂ ಇದೆ. ಈ ಖಾಸಗಿತನ ಕಾಪಾಡುವ ಕಾನೂನು ನಮ್ಮ ರಕ್ಷಣೆಗೆ ಬಾರದೆ “ಕ್ಯಾಶ್ ಲೆಸ್” ಆಗುವುದು  ಎಂದರೆ ದೇಶದ ಪ್ರಜಾತಂತ್ರ “ಬ್ರೆತ್ ಲೆಸ್” ಆಗುವುದು ಎಂದೇ ಅರ್ಥ.

‍ಲೇಖಕರು Admin

27 December, 2016

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Guruprasad

    I am amazed at the level of Negative impacts of Demonetisation being given in this portal and learned a lot about it .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading