ಮೂಲ – ಆಂಡ್ರ್ಯೂ ವಿಯರ್ ರ್ (ಸಣ್ಣ ಕಥೆ ‘ಮೊಟ್ಟೆ’ಯ ಭಾವಾನುವಾದ)
ಕನ್ನಡಕ್ಕೆ – ಪಾಲಹಳ್ಳಿ ವಿಶ್ವನಾಥ್
“ನೀನು ಕೆಲಸದಿಂದ ಮನೆಗೆ ಹೋಗುತ್ತಿದ್ದಾಗ ಸತ್ತುಹೋದೆ. ಕಾರಿನ ಅಪಘಾತ. ಅಂತಹ ವಿಶೇಷವೇನು ಇಲ್ಲ ಹೌದು, ಆದರೂ ಹೋಗಿಬಿಟ್ಟೆ ಅಂತಹ ನೋವೇನೂ ಇರಲಿಲ್ಲ. ವೈದ್ಯರು ನಿನ್ನನ್ನು ಉಳಿಸಲು ನೋಡಿದರು. ಆಗಲಿಲ್ಲ. ನಿನ್ನ ದೇಹ ಚೂರು ಚೂರಾಗಿತ್ತು. ನನ್ನನ್ನು ನಂಬು, ನೀನು ಹೋಗಿದ್ದೇ ಒಳ್ಳೆಯದಾಯಿತು. ಆಮೇಲೆ ನಿನಗೆ ನಾನು ಕಂಡುಬಂದೆ“
“ನಾನು ಎಲ್ಲಿದ್ದೇನೆ?”
“ಹೇಳಿದೆನಲ್ಲ, ನೀನು ಸತ್ತುಹೋಗಿದ್ದೀಯ. ಅಷ್ಟೇ“
“ಎದುರಿಗೆ ಒಂದು ಲಾರಿ ಬಂದಿತು. ನನ್ನ ಕಾರನ್ನು ಹೊಡೆಯಿತು. ಆಗ ನಾನು ಸತ್ತೆ, ಅಲ್ಲವೇ?“
“ಹೌದು. ಆದರೆ ಅಷ್ಟು ಬೇಸರ ಮಾಡಿಕೋಬೇಡ. ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು”
ನೀನು ಎಲ್ಲಾ ಕಡೆ ನೋಡ್ತಾ ಇದ್ದೀಯ ಎಲ್ಲೂ ಏನೂ ಇಲ್ಲ. ನಾನು ನೀನು ಇಬ್ಬರೇ
“ಈ ಜಾಗ ಯಾವುದು.. ಇದು ಪರಲೋಕವೇ ”
“ಹಾಗೇ ಅಂದುಕೊ”
“ನೀವು ಅವನಾ ?.. ದೇವರಾ?”
“ಹಾಗೇ ಅಂದುಕೊ:”
“ನನ್ನ ಹಂಡತಿ, ಮಕ್ಕಳು.. ಸರಿಯಾಗಿರ್ತಾರಾ?”
“ನೀನು ಈಗ ತಾನೇ ಸತ್ತಿದೀಯ. ಆದರೂ ನಿಮ್ಮವರ ಬಗ್ಗೆಯೇ ಯೋಚಿಸ್ತಾ ಇದೀಯ. ಒಳ್ಳೆಯ ಆಲೋಚನೆಗಳು. ನನಗೆ ಇಷ್ಟ ಆಗ್ತಿದೆ. ಯೋಚನೆ ಮಾಡ್ಬೇಡ, ನಿನ್ನ ಮನೆಯವರೆಲ್ಲಾ ಚೆನ್ನಾಗಿರ್ತಾರೆ ನಿನ್ನನ್ನು ಮಕ್ಕಳು ನೆನೆಸಿಕೊಳ್ತಾ ಇರ್ತಾರೆ. ನಿನ್ನ ಜೀವನ ಸರಿಯಾಗಿ ಗೊತ್ತಿಲ್ಲ ದಿರುವುದರಿಂದ ನೀನು ಅವರಿಗೆ ಪರಿಪೂರ್ಣರಾಗಿ ಕಾಣುತ್ತೀಯ ನಿನ್ನ ಹೆಂಡತಿ ಹೊರಗೆ ಬಹಳ ದು:ಖ ತೋರಿಸ್ತಾ ಇದಾರೆ. ಆದರೆ ಒಳಗೊಳಗೆ ಅವರು ನಿರಾಳ ಆಗಿದ್ದಾರೆ ನಿನಗೇ ಗೊತ್ತಿರುವ ಹಾಗೆ ನಿಮ ದಾಂಪತ್ಯ ಜೀವನದಲ್ಲಿ ಒಡುಕು ಇತ್ತು. ಆದರೂ ಪಶ್ಚಾತ್ತಾಪ ಪಡುತ್ತಿದ್ದಾರೆ.. ನೀನು ನನ್ನನ್ನು ಏನೋ ಬಹಳ ಕುತೂಹಲದಿಂದ ನೋಡುತ್ತಿದ್ದೀಯ!. ನಾನು ದೇವರ ತರಹ ಕಾಣಿಸೋದಿಲ್ಲ, ಅಲ್ವೇ? ಯಾವದೋ ಮನುಷ್ಯನ ತರಹ. ಅಥವಾ ಹೆಂಗಸಿನ ತರಹ? ಯಾವುದೋ ಅಧಿಕಾರ ಇರೋವರ ತರಹ ಕಾಣಿಸತೀನೋ ಏನೋ! ಅಥವಾ ಶಾಲಾ ಮೇಷ್ಟ್ರ ತರಹ ಇದ್ದೀನೋ ಏನೋ !”
“ಈಗ ಏನಾಗುತ್ತೆ? ನಾನು ನರಕಕ್ಕೋ ಅಥವಾ ಸ್ವರ್ಗಕ್ಕೋ ಹೋಗಬೇಕಲ್ಲವೇ ?”
“ಎರಡೂ ಇಲ್ಲ ! ನೀನು ಪುನರ್ಜನ್ಮ ತಾಳಬೇಕಾಗುತ್ತದೆ !’
“ಅಂದರೆ ಹಿಂದೂಗಳ ನಂಬಿಕೆ ಸರಿಯಾಗಿತ್ತು ಅನ್ನಿ‘
“ಎಲ್ಲ ಧರ್ಮಗಳಲ್ಲೂ ಸರಿಯಾಗಿರುವುದು ಯಾವುದಾದರೂ ಇದ್ದೇ ಇರುತ್ತೆ .. ಬಾ, ನಡೆಯೋಣ.. ಏನಿಲ್ಲ, ಹಾಗೆಯೇ ನಡೆಯೋಣ, ಚೆನ್ನಾಗಿರುತ್ತೆ. ನಡೀತಾ ಮಾತಾಡ್ತಿರೋಣ“
“ಇದಕ್ಕೆಲ್ಲಾ ಏನು ಅರ್ಥ? ಮತ್ತೆ ಹುಟ್ಟಿದಾಗ ಎಲ್ಲ ಮೊದಲಿಂದ ಶುರುಮಾಡಬೇಕು. ನಾನು ಈ ಜೀವನದಲ್ಲಿ ಮಾಡಿದ್ದು ಏನೂ ನನ್ನ ಜೊತೆ ಇರೋದಿಲ್ಲ“
“ಆ ತರಹ ಇಲ್ಲ. ನಿನ್ನ ಎಲ್ಲ ಹಳೆಯ ಜೀವಗಳ ಅನುಭವಗಳೆಲ್ಲ ನಿನ್ನಲ್ಲಿ ಇವೆ. ನಿನಗೆ ಜ್ಞಾಪಕ ಬರ್ತಾ ಇಲ್ಲ ಅಷ್ಟೇ.. ನಿನ್ನ ಆತ್ಮ ನೀನು ಕಲ್ಪಿಸಕೊಳ್ಳುವುದಕ್ಕಿಂತ ಅದ್ಭುತವಾಗಿದೆ. ನೀನು ಬದುಕಿದ್ದ 48 ವರ್ಷಗಳಲ್ಲಿ ಇದೆಲ್ಲಾ ತಿಳಿಯಲು ಆಗಿಲ್ಲ. ನನ್ನ ಜೊತೆ ಹೀಗೆಯೇ ಇದ್ದರೆ ನೀನು ಎಲ್ಲವನ್ನೂ ಜ್ಯಾಪಿಸಿಕೊಳ್ಳುತ್ತೀಯ, ಆದರೆ ಪ್ರತಿಜನ್ಮದ ಮಧ್ಯೆಯೂ ಇದಕ್ಕೆಲ್ಲ ಅರ್ಥವಿಲ್ಲ
“ ನಾನು ಎಷ್ಟು ಬಾರಿ ಜನ್ಮ ತಾಳಿದ್ದೇನೆ?”
“ ಅನೇಕ ಬಾರಿ. ಬಹಳ ಬಾರಿ. ಬೇರೆ ಬೇರೆ ಜೀವನಗಳನ್ನು ಕಂಡಿದ್ದೀಯ. ಈಬಾರಿ ನೀನು ಕ್ರಿ ಶ 540 ರಲ್ಲಿ ಚೈನಾ ದೇಶದಲ್ಲಿ ಒಂದು ರೈತ ಹುಡುಗಿಯಾಗಿ ಜನ್ಮ ತಾಳುತ್ತೀಯ”
“ಅಂದರೆ.. ತಾಳಿ ಯಾವುದೋ ಹಿಂದಿನ ಕಾಲಕ್ಕೆ ನನ್ನನ್ನು ಕಳಿಸುತ್ತಿದ್ದೀರಾ?“
“ಇರಬಹುದು. ಆದರೂ ಕಾಲ ಎನ್ನುವುದು ನಿನ್ನ ಪ್ರಪಂಚದಲ್ಲಿ ಮಾತ್ರ. ನಮ್ಮಲ್ಲಿ ಅದು ಬೇರೆ.”
“ನಿಮ್ಮಲ್ಲಿ?”
“ನಾನು ಎಲ್ಲಿಂದಲೋ ಬಂದವನು. ಅಲ್ಲಿ ಹೇಗಿದೆ ಎಂದು ಕೇಳುತ್ತಿದ್ದೀಯ ! ಹೇಳಿದರೆ ಅದು ನಿನಗೆ ಅರ್ಥವಾಗುವುದಿಲ್ಲ“
“ಸರಿ, ತಾಳಿ! ನಾನು ಬೇರೆಯ ಕಾಲಗಳಲ್ಲಿ ಜನ್ಮ ತಾಳುವುದಾದರೆ ಎಲ್ಲೋ ಒಂದೊಂದು ಸತಿ ನಾನು ನನ್ನನ್ನೇ ನೋಡಿರುತ್ತೇನೆ ಅಲ್ಲವೇ”
“ಹೌದ ! ಅದು ಆಗುತ್ತಲೇ ಇರುತ್ತೆ ! ಆದರೆ ಇಬ್ಬರಿಗೂ ಗೊತ್ತಾಗೋಲ್ಲ ಅಷ್ಟೇ “
“ಸರಿ, ಇದಕ್ಕೆಲ್ಲಾ ಏನಾರ್ಥ?”
“ನಿಜವಾಗಿಯೂ? ನೀನು ಜೀವನದ ಅರ್ಥ ಕೇಳ್ತಾ ಇದ್ದೀರಾ? ಬಹಳ ಜನ ಕೇಳುವ ಪ್ರಶ್ನೆ!
“ಆದರೂ ಪ್ರಶ್ನೆ ಮುಖ್ಯ ಅಲ್ಲವೇ “
ನಾನು ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಿದೆ “ಜೀವನದ ಅರ್ಥ ! ನಾನು ಈ ವಿಶ್ವ ವೆಲ್ಲ ಸೃಷ್ಟಿ ಸಿರುವುದು ನೀನು ಪಕ್ವವಾಗಲು! ನಿನಗೆ ಪ್ರಬುದ್ಧತೆ ಬರಲು“
“ಅಂದರೆ ಮನುಕುಲ? ನಾವೆಲ್ಲಾ ಪ್ರಬುದ್ಧರಾಗಬೇಕು?”
“ಇಲ್ಲ, ನೀನು ಮಾತ್ರ ! ನಿನಗೋಸ್ಕರ ನಾನು ಈ ವಿಶ್ವವನ್ನು ಸೃಷ್ಟಿಸಿದ್ದೇನೆ. ಪ್ರತಿಯೊಂದು ಜನ್ಮ ದಿಂದಲೂ ನೀನು ಬೆಳೆಯುತ್ತಿದ್ದೀಯ, ಪ್ರಬುದ್ಧತೆ ಬರುತ್ತಿದೆ“
“ನಾನು ಮಾತ್ರ? ಬೇರೆಯವರಿಗೆ ಏನಾಗುತ್ತದೆ?”
“ಬೇರೆ ಯಾರೂ ಇಲ್ಲ ! ಈ ವಿಶ್ವದಲ್ಲಿ ಇರುವರು ನೀನು ಮತ್ತು ನಾನು, ಅಷ್ಟೇ!”
ಅರ್ಥವಾಗದ ಹಾಗೆ ನೀನು ಕೇಳಿದೆ “ಭೂಮಿಯಲ್ಲಿ ಇರುವ ಅಷ್ಟು ಜನ?”
“ಎಲ್ಲಾ ನೀನೇ ! ಬೇರೆ ಬೇರೆ ಜನ್ಮಗಳು ಅಷ್ಟೇ‘
“ತಾಳಿ,.. ಅಂದರೆ ಪ್ರತಿಯೊಬ್ಬ ವ್ಯಕ್ತಿಯೂ ನಾನೇ !?”
“ಈಗ ಅರ್ಥ ಆಗ್ತಿರೋ ಹಾಗಿದೆ” ನಿನ್ನ ಬೆನ್ನನ್ನು ತಟ್ಟಿದೆ.
“ಬದುಕಿದ್ದ ಪ್ರತಿಯೊಂದು ವ್ಯಕ್ತಿಯೂ ನಾನೇ”
“ಹೌದು, ಅದಲ್ಲದೆ ಮುಂದೆ ಬದುಕುವ ಎಲ್ಲರೂ ನೀನೇ !”
“ನಾನು ಅಬ್ರಹಾಂ ಲಿಂಕನ್ “
“ಹೌದು ಮತ್ತು ಅವನ ಕೊಲೆಗಾರ ಜಾನ್ ವಿಲ್ಕ್ಸ್ ಬೂತ್ ಕೂಡ“
“ನಾನು ಹಿಟ್ಲರ್ “
“ಹೌದು ಮತ್ತು ಅವನು ಕೊಲೆ ಮಾಡಿದ ಲಕ್ಷ ಗಟ್ಟಲೆ ಜನ ಕೂಡ”
“ನಾನು ಏಸು ಕ್ರಿಸ್ತ“
“ಹೌದು ಮತ್ತು ಅವನ ಅನುಯಾಯಿಗಳು ಕೂಡ“
ನೀನು ಮೌನವಾದೆ.
“ನೀನು ಯಾರನ್ನಾದರೂ ಬಲಿಪಶುವನ್ನಾಗಿ ಮಾಡಿದಾಗಲೆಲ್ಲಾ, ನಿನ್ನನ್ನೇ ಬಲಿಪಶುವನ್ನಾಗಿ ಮಾಡಿಕೊಳ್ಳುತ್ತಿದ್ದೀಯ ! ನೀನು ಯಾರಿಗಾದರೂ ದಯೆ ತೋರಿಸಿದರೆ ಅದು ನಿನಗೇ ತೋರಿಸಿಕೊಂಡ ದಯೆ. ಯಾವುದೇ ಮನುಷ್ಯ ಅನುಭವಿಸಿದ ಪ್ರತಿಯೊಂದು ಸಂತೋಷ ಮತ್ತು ದುಃಖದ ಕ್ಷಣವನ್ನು ನೀನು ಅನುಭವಿಸಿದ್ದೀಯ , ಅಥವಾ ಅನುಭವಿಸುವೆ.”
ನೀನು ಮತ್ತೆ ಮೌನವಾದೆ. ಬಹಳ ಸಮಯ ಯೋಚಿಸಿ ನಂತರ
“ಏಕೆ? ಇದನ್ನೆಲ್ಲಾ ಏಕೆ ಮಾಡುತ್ತಿದ್ದೀರಿ ?”
“ಏಕೆಂದರೆ ಒಂದು ದಿನ ನೀನು ನನ್ನಂತೆಯೇ ಆಗುತ್ತೀಯ… ನೀನು ನನ್ನ ಮಗು.”
“ಓಹ್,” ನೀನು ನಂಬಲಾಗದೆ ಹೇಳಿದೆ. “ನಾನು ದೇವರು ಅಂತ ನೀವು ಹೇಳ್ತಾ ಇದ್ದೀರಾ ?”“
”ಇಲ್ಲ. ನೀನು ಇನ್ನೂ ಹುಟ್ಟಿಲ್ಲ. ಇನ್ನೂ ನೀನು ಭ್ರೂಣ. ನೀನು ಇನ್ನೂ ಬೆಳೆಯಬೇಕು ನೀನು ಪ್ರತಿಯೊಂದು ಮಾನವ ಜೀವನವನ್ನು ನಡೆಸಬೇಕು, ಅನುಭವಿಸಬೇಕು. ಅದೆಲ್ಲಾ ಆದ ನಂತರ, ನೀನು ಹುಟ್ಟುತ್ತೀಯ ಎಂದು ಹೇಳಬಹುದು “
“ಆದ್ದರಿಂದ ಇಡೀ ವಿಶ್ವ, ಒಂದು ಕೇವಲ…”
“ ಹೌದು. ಒಂದು ಮೊಟ್ಟೆ ,ಒಂದು ಅಂಡ ! ಈಗ ಸಮಯ ಬಂದಿದೆ. ನಾನು ಈಗ ನಿನ್ನನ್ನು ನಿನ್ನ ಮುಂದಿನ ಜನ್ಮಕ್ಕೆ ಕಳಿಸುತ್ತಿದ್ದೇನೆ. ಹೋಗು“
(ಆಂಡ್ರ್ಯೂ ವಿಯರ್(Andrew Wier )( 1972- )ಒಬ್ಬ ಅಮೇರಿಕನ್ ವೈಜ್ಞಾನಿಕ ಕಾದಂಬರಿ ಲೇಖಕರು. ಅವರ 2011 ರ ಕಾದಂಬರಿ ’ದಿ ಮಾರ್ಷಿಯನ್’ ಅನ್ನು 2015ರ ಚಲನಚಿತ್ರವನ್ನಾಗಿ ಮಾಡಲಾಗಿತ್ತು . ಇದು ಅವರ ಅತ್ಯಂತ ಜನಪ್ರಿಯ ಸಣ್ಣಕಥೆಯಾಗಿದ್ದು, 30 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿದೆ. 40 ನಿಮಿಷಗಳಲ್ಲಿ ಅವರು ಈ ಕಥೆ ಬರೆದಿದ್ದು‘ ಇಷ್ಟು ಜನಪ್ರಿಯ ವಾಗುತ್ತೆ ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಎಲ್ಲಾ ಮಾನವರ ಪರಸ್ಪರ ಸಂಬಂಧವನ್ನು ಅನ್ವೇಷಿಸುವ ಒಂದು ಚಿಂತನಶೀಲ ಸಣ್ಣ ಕಥೆ ಎಂದು ವ್ಯಾಖ್ಯಾನಿಸಿದ್ದಾರೆ.)






0 Comments