ಬ್ಯಾಂಕಿಂಗ್ ಪರೀಕ್ಷೆಗೆ ಕನ್ನಡ ಸಾಕೇ?

ಡಿ.ಎಸ್. ರಾಮಸ್ವಾಮಿ

ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯುವ ಅವಕಾಶಕ್ಕಾಗಿ ನಡೆದ ಆಂದೋಲನ ಯಶಸ್ವಿಯಾಗಿದೆ. ಕೇಂದ್ರ ಅರ್ಥ ಸಚಿವರು ಸಮ್ಮತಿಸಿದ್ದಾರೆ ಎನ್ನುವ ಸುದ್ದಿ ಇವತ್ತಿನ ಮಟ್ಟಿಗೆ ಬ್ರೇಕಿಂಗ್ ನ್ಯೂಸ್ ಆಗಿದೆ.

ಆದರೆ ಈ ಇಂಥ ಆಂದೋಲನಗಳಿಂದ ಕನ್ನಡಿಗರಿಗೆ ಉದ್ಯೋಗದ ಖಾತರಿ ಇದೆಯೇ ಎಂದು ದಯಯಿಟ್ಟು ಆಲೋಚಿಸಿ. ಎಲ್ಲಿಯವರೆಗೆ ಬ್ಯಾಂಕಿಂಗ್ ಪರೀಕ್ಷೆಗಳನ್ನು ಬಿ.ಎಸ್.ಆರ್.ಬಿ ನಿರ್ವಹಿಸುತ್ತಿತ್ತೋ ಅಲ್ಲಿಯವರೆಗೂ ಆಯಾ ಪ್ರದೇಶದ ಭಾಷೆಗಳನ್ನು ಬಲ್ಲವರಿಗೇ ಉದ್ಯೋಗಕ್ಕೆ ಅರ್ಜಿ ಹಾಕುವ ಮೊದಲ ಅರ್ಹತೆ ಆಗಿತ್ತು‌. ಬಿ.ಎಸ್.ಆರ್.ಬಿ ಅಂದರೆ ಬ್ಯಾಂಕಿಂಗ್ ಸರ್ವಿಸ್ ರೆಕ್ರೂಟ್ಮೆಂಟ್ ಬೋರ್ಡ್. ಈ ಮಂಡಳಿ ತನ್ನ ಆಡಳಿತ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿರುವ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಸಿಬ್ಬಂದಿಯನ್ನು ಲಿಖಿತ ಪರೀಕ್ಷೆ ಮತ್ತು ಮುಂದಿನ ಹಂತದ ಸಂದರ್ಶನದ ಮೂಲಕ ಆಯ್ಕೆ ಮಾಡುತ್ತಿತ್ತು.

ಸರಿಸುಮಾರು ವರ್ಷಕ್ಕೊಮ್ಮೆಯಾದರೂ ಈ ಪರೀಕ್ಷೆಗಳು ತೊಂಭತ್ತರ ದಶಕದ ಮೊದಲವರೆಗೂ ನಡೆಯುತ್ತಿತ್ತು ಮತ್ತು ಆ ಕಾರಣದಿಂದಲೇ ಸೇವಕ ಮತ್ತು ಗುಮಾಸ್ತ ದರ್ಜೆಯ ಹುದ್ದೆಗಳಿಗೆ ಆಯಾ ಭಾಷೆಯ ಪ್ರದೇಶದಲ್ಲಿರುವ ಬ್ಯಾಂಕ್ ಶಾಖೆಗಳಿಗೆ ಆಯಾ ಭಾಷೆ ಬಲ್ಲವರನ್ನೇ ಆಯ್ಕೆ ಮಾಡಲಾಗುತ್ತಿತ್ತು. ಬಿ.ಎಸ್.ಆರ್.ಬಿ ಗೂ ಪೂರ್ವದಲ್ಲಿ ಸ್ಟೇಟ್ ಬ್ಯಾಂಕ್ ಗುಂಪು ತನ್ನದೇ ಆದ ಆಯ್ಕೆ ಮಂಡಲಿ ಹೊಂದಿತ್ತು. ಆದರೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು ಮುಂಬಯಿಯ ಸಂಸ್ಥೆಯೊಂದರ ಮೂಲಕ ಇಂಥದೇ ಪರೀಕ್ಷೆಗಳನ್ನು ನಡೆಸಿ ತಮ್ಮ ಸಿಬ್ಬಂದಿಯನ್ನು ನೇಮಕ ಮಾಡುತ್ತಿದ್ದವು.

ಆದರೆ, ಯಾವಾಗ ಐ.ಬಿ.ಪಿ.ಎಸ್. ಎನ್ನುವ ಮಂಡಲಿ ಜನ್ಮ ತಾಳಿತೋ ಆಗಿನಿಂದ ಪ್ರಾದೇಶಿಕ ಅಸ್ಮಿತೆಯನ್ನು ಕಸಿದು ಆ ಜಾಗದಲ್ಲಿ ಅರ್ಹತೆ ಅನ್ನುವ ಮಾನದಂಡ ತರಲಾಯಿತು. ಈ ಮಂಡಲಿ ನಡೆಸುವ ಪರೀಕ್ಷೆಗಳು ಅಖಿಲ ಭಾರತದ ಮಟ್ಟದಲ್ಲಿ ನಡೆಯುವುದರಿಂದ ಹುದ್ದೆಗೆ ತಕ್ಕ ವಿದ್ಯಾರ್ಹತೆ ಇದ್ದವರೆಲ್ಲ ಅರ್ಜಿ ಹಾಕಬಹುದು.

ಮತ್ತು ಇಂಥ ಪರೀಕ್ಷೆಗಳಿಗೆ ತರಬೇತಿ ಕೊಡುವ ಸಂಸ್ಥೆಗಳ ಸಂಖ್ಯೆ ನಮ್ಮ ರಾಜ್ಯದಲ್ಲಿ ಕಡಿಮೆ ಇರುವುದರಿಂದಾಗಿ ಹೊರ ರಾಜ್ಯದ ಮತ್ತು ಕನಿಷ್ಠ ವಿದ್ಯಾರ್ಹತೆ ಇದ್ದ ಮತ್ತು ಪರೀಕ್ಷೆಗಳಲ್ಲಿ ಉನ್ನತವಾಗಿ ಅಂಕ ಗಳಿಸಿದ ಹೊರರಾಜ್ಯಗಳಲ್ಲಿ ತರಬೇತಿ ಪಡೆದವರು ಆಯ್ಕೆಯಾಗಿ ನಮ್ಮ ಹಳ್ಳಿಗಳ ಬ್ಯಾಂಕ್ ಶಾಖೆಗಳಿಗೂ ಒಕ್ಕರಿಸಿದರು.

ಇದೆಲ್ಲ ಒಂದೆರಡು ದಿನಗಳಲ್ಲಿ ನಡೆದ ಬೆಳವಣಿಗೆ ಏನಲ್ಲ. ಮೊದಲು ರಾಷ್ಟ್ರೀಕೃತ ಬ್ಯಾಂಕು ಆಮೇಲೆ ಸ್ಟೇಟ್‍‍‍‍‍ಬ್ಯಾಂಕ್ ಸಮೂಹ ಆಮೇಲೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೂ ಇದೇ ಐ.ಬಿ.ಪಿ.ಎಸ್. ಪರೀಕ್ಷೆ ನಡೆಸಿ ಸಿಬ್ಬಂದಿ ಆಯ್ಕೆ ಮಾಡುತ್ತಿದೆ.

ಇನ್ನೂ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಒಂದಿದೆ. ಅದೆಂದರೆ ಈ ಬ್ಯಾಂಕಿಂಗ್, ವಿಮೆ, ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಎಲ್.ಡಿ.ಸಿ ಮತ್ತು ಯು.ಡಿ.ಸಿ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆ ಯಾವ ಭಾಷೆಯಲ್ಲಿದ್ದರೂ ಉತ್ತರಿಸುವವರಿಗೆ ಮುಖ್ಯವಾಗಿ ಅತಿ ಜರೂರಾಗಿ ಉತ್ತರಿಸುವ ಸಾಮರ್ಥ್ಯ ಇರಲಿಕ್ಕೇ ಬೇಕು. ಗಣಿತ ( ನ್ಯೂಮರಿಕಲ್ ಎಬಿಲಿಟಿ) ಸಾಮಾನ್ಯ ಜ್ಞಾನ, ( ಟೆಸ್ಟ್ ಆಫ್ ರೀಸನಿಂಗ್) ಮತ್ತು ವೇಗ ನಿಷ್ಕರ್ಷ ( ಆಪ್ಟಿಟ್ಯೂಡ್ ಟೆಸ್ಟ್) ಗಳೆಂದು ಮೂರು ವಿಭಾಗಗಳಲ್ಲಿ ತಲಾ ಅಂಕಗಳನ್ನು ನಿಗದಿತ ಸಮಯದೊಳಗೇ ಉತ್ತರಿಸಿ ಕಡೆಯ ಸಾಮಾನ್ಯ ಇಂಗ್ಲಿಷ್ ಪರೀಕ್ಷೆಯಲ್ಲೂ ಕನಿಷ್ಠ ಅಂಕ ಪಡೆಯಬೇಕಾಗುತ್ತದೆ.

ಅಂದರೆ ಇಂಗ್ಲಿಷ್ ಗೊತ್ತಿದ್ದರೆ ಸಾಕು ಮತ್ತು ಉಳಿದ ಅವಕಾಶಗಳನ್ನು ‘ಬಾಚಿಕೊಳ್ಳುವ ಚಾಕಚಕ್ಯತೆ’ ಅತಿ ಮುಖ್ಯ. ಕಳೆದ ವರ್ಷದಿಂದ ಸಂದರ್ಶನ ಕೂಡ ರದ್ದಾಗಿರುವುದರಿಂದ ಕನಿಷ್ಠ ವಿದ್ಯಾರ್ಹತೆ ಇರುವ ಯಾರೂ ಕೂಡ ಭಾರತದ ಯಾವ ಮೂಲೆಗಾದರೂ ಅರ್ಜಿ ಹಾಕಿ ಆಯ್ಕೆ ಆಗಬಹುದು.

ಈಗ ದಯವಿಟ್ಟು ಅರ್ಥ ಮಾಡಿಕೊಳ್ಳಿ. ಈ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಬಹುದು ಅಂದರೆ ಪ್ರಶ್ನೆ ಪತ್ರಿಕೆ ಇಂಗ್ಲೀಷ್, ಹಿಂದಿಯ ಹಾಗೆ ಇತರ ಪ್ರಾದೇಶಿಕ ಭಾಷೆಗಳಲ್ಲೂ ಮುದ್ರಣವಾಗಿತ್ತದೆ. ಅದರರ್ಥ ಸಾಮಾನ್ಯ ಜ್ಞಾನ ಮತ್ತು ಗಣಿತದ ಸಮಾಸ ಚಿಹ್ನೆ ಇತ್ಯಾದಿಯೆಲ್ಲ ಕನ್ನಡದಲ್ಲಿ ಅರ್ಥ ಮಾಡಿಕೊಂಡು ಉತ್ತರ ಬರೆಯುತ್ತಾರೆ ಎನ್ನುವುದೇ ಚೋದ್ಯದ ಸಂಗತಿ. ದಯವಿಟ್ಟು ಗಮನಿಸಿ; ಇಂಥ ಪರೀಕ್ಷೆಗಳಿಗೆ ಉತ್ತರಿಸಲು ನಮ್ಮ ಕನಿಷ್ಠ ವಿದ್ಯಾರ್ಹತೆಯ ಜೊತೆಗೇ ಸಾಕಷ್ಟು ಮಾದರಿ ಪರೀಕ್ಷೆಗಳನ್ನು ಎದುರಿಸಿ ತಯಾರಾಗಿರಬೇಕಾಗುತ್ತದೆ.

ಮುಂಬಯಿ, ಆಂಧ್ರ, ಬಿಹಾರ ಮತ್ತು ದೆಹಲಿಯಲ್ಲಿ ಇಂಥ ಪರೀಕ್ಷೆಗಳಿಗೆ ತರಬೇತಿ ಕೊಡುವ ಮಾದರಿ ಪರೀಕ್ಷೆ ಮತ್ತು ಪ್ರಶ್ನೆಪತ್ರಿಕೆ ಒದಗಿಸಿ ತಯಾರು ಮಾಡಲು ಸಾಕಷ್ಟು ಸಂಸ್ಥೆಗಳಿವೆ. ಈಗ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲೂ ಕೆಲವು ತರಬೇತಿ ಶಾಲೆಗಳು ತಲೆ ಎತ್ತಿವೆ.

ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿದ್ದು ಗೆಲುವಲ್ಲ. ಅದು ತರಬೇತಿ ಇರದ ಮತ್ತು ಅವಕಾಶವೂ ಇರದ ಅಭ್ಯರ್ಥಿಗಳಿಗೆ ಮತ್ತಷ್ಟು ತೊಂದರೆ ಮಾಡಲಿದೆ. ಕನ್ನಡಕ್ಕೆ ತರ್ಜುಮೆಯಾದ ಮೂಲ ಇಂಗ್ಲೀಷ್ ಪ್ರಶ್ನೆ ಅರ್ಥ ಮಾಡಿಕೊಳ್ಳುವುದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಅಪಾಯ ಇದೆ. ಏಕೆಂದರೆ ಈಗ ಬಹುತೇಕರು ಅನುವಾದಕ್ಕಾಗಿ ಗೂಗಲಿನ ಮೊರೆ ಹೋಗುತ್ತಾರಾದ್ದರಿಂದ ಆಗುವ ಎಡವಟ್ಟುಗಳೇ ಅಧಿಕ.

ನಿಜಕ್ಕೂ ಆಗಬೇಕಾದದ್ದು ಮತ್ತು ಅಗತ್ಯ ಇರುವುದು ಏನೆಂದರೆ ಕಛೇರಿಗಳಲ್ಲಿ ಅದು ಬ್ಯಾಂಕು, ವಿಮೆ, ಅಂಚೆ, ರೇಲ್ವೆ, ಮುಂತಾದ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳ ಕೆಳ ಹಂತದ ಹುದ್ದೆಗಳನ್ನು ಆಯಾ ಭಾಷಾ ಪ್ರದೇಶದವರಿಗೇ ಮೀಸಲಿರಿಸುವುದು. ಆಗ ಮಾತ್ರ ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ಇಲ್ಲವಾದರೆ ಶಾರ್ಪ್ ಇರುವ ಮತ್ತು ಬುದ್ಧಿವಂತ ತನದ ಜೊತೆಗೇ ಜಾಣನಾಗಿರುವ ವ್ಯಕ್ತಿ ಕೆಲಸ ಪಡೆಯುತ್ತಾನೆ. ಸ್ಥಳೀಯವಾಗಿ ಬುದ್ಧಿವಂತ ಅಂತಾ ಕರೆದುಕೊಂಡ ಜಾಣ ಅಲ್ಲದವನು ಮತ್ತೆ ಆಂದೋಲನಗಳ ಮೂಲಕ ನಡೆಸುವ ಸಂದರ್ಶನದ ಬಲಿ ಪಶು ಆಗುತ್ತಾನೆ, ಅಷ್ಟೇ!!.

‍ಲೇಖಕರು avadhi

September 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: